ಅಂಕಣ

ಸನ್ಮಾರ್ಗವನ್ನು ಪ್ರೀತಿಯಿಂದ ತಿಳಿಸುವ ಸನಾತನ ಧರ್ಮ

ಜನರು ಸನ್ಮಾರ್ಗದಲ್ಲಿ ನಡೆಯಲು, ಯೋಗ್ಯ ರೀತಿಯಲ್ಲಿ ಬಾಳಲು ಧರ್ಮ ಮಾರ್ಗದರ್ಶನ ನೀಡುತ್ತದೆ. ಶಿಸ್ತಿನ ಆವರಣದೊಳಗೆ ಧರ್ಮ ಮತ್ತು ಧರ್ಮದ ಆವರಣದೊಳಗೆ ಶಿಸ್ತು ಮಿಳಿತವಾಗಿದೆ. ಹಿಂದೂ ಧರ್ಮ ಸನಾತನ ಧರ್ಮವಾಗಿದೆ. ‘ಏಷ ಧರ್ಮಃ ಸನಾತನಃ’. ವಿಸ್ತಾರ, ವಿಕಾಸಕ್ಕೆ ಅವಕಾಶವಿರುವ ಹಿಂದೂ ಧರ್ಮದಲ್ಲಿ ಕಾಲಾಂತರದಲ್ಲಿ ವಿಶೇಷವಾಗಿ ಅನೇಕ ಪಂಗಡಗಳು, ಗುಂಪುಗಳು, ಪಂಥಗಳು ಬೆಳೆದವು. ಆಯಾ ಪಂಗಡ, ಪಂಥವನ್ನು ಅನುಸರಿಸುವವರು ಮತ್ತೊಂದು ಪಂಗಡದ ದೇವರ ಕುರಿತು ಅಷ್ಟೊಂದು ನಂಬಿಕೆ ಇರಿಸುವುದಿಲ್ಲ. ಎಲ್ಲ ಪಂಗಡಗಳ ಸಾರ ಒಂದೇ ಆದರೂ ಆ ಗುರಿಯನ್ನು ತಲುಪಲು ಅನುಸರಿಸುವ ಮಾರ್ಗ, ವಿಧಾನ, ತತ್ವ, ಸಿದ್ಧಾಂತಗಳು ವಿಭಿನ್ನವಾಗಿವೆ. ಹಾಗಾಗಿ ಹಿಂದೂ ಧರ್ಮದಲ್ಲಿ ಶಿಸ್ತಿಲ್ಲ, ನಾನಾ ಪಂಗಡಗಳಿವೆ ಎಂಬುದು ತಪ್ಪು ಕಲ್ಪನೆ. ಹಿಂದೂ ಧರ್ಮ ಶಿಸ್ತುಪ್ರಧಾನವಾದುದು.

ಇತರೆ ಧರ್ಮದವರು ಪ್ರತಿ ದಿನ ಅಥವಾ ಪ್ರತಿ ವಾರ ತಮ್ಮ ಶ್ರದ್ಧಾಕೇಂದ್ರಗಳಿಗೆ ತೆರಳುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಈ ಪರಿಪಾಠ ಪಾಲನೆಯಾಗುತ್ತಿಲ್ಲ, ನಮ್ಮಲ್ಲಿ ಶಿಸ್ತಿಲ್ಲ ಎಂಬುದು ಇದೇ ಕಾರಣಕ್ಕಾಗಿ ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ಇದನ್ನು ಇನ್ನೊಂದು ರೀತಿಯಲ್ಲಿ ವಿಶ್ಲೇಷಿಸಬಹುದು. ನಮ್ಮ ಧರ್ಮದಲ್ಲಿ ಶಿಸ್ತಿದೆ. ಅದು ಭಕ್ತರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದೆ. ಆದರೆ ಆ ಶಿಸ್ತನ್ನು ಮೀರಿದರೆ ದೇವರೇ ಅಥವಾ ಅವರ ಆತ್ಮಸಾಕ್ಷಿಯೇ ನೋಡಿಕೊಳ್ಳಬೇಕಲ್ಲದೆ ಶಿಕ್ಷೆ ನೀಡಲು ಶಿಸ್ತಿನ ದಂಡ ಹಿಡಿದುಕೊಂಡು ಯಾರೂ ಕೂತಿಲ್ಲ. ನಾವು ಯಾರನ್ನೂ ಕಾನೂನಿನಿಂದ ಅಥವಾ ದಂಡದಿಂದ ನಿಯಂತ್ರಿಸುವುದು ಸಾಧುವಲ್ಲ. ಹಾಗಾಗಿಯೇ ನಾವು ದೇವರನ್ನು ಸ್ನೇಹಿತನನ್ನಾಗಿ ಕಾಣುತ್ತೇವೆ. ದೇವರನ್ನು ಯಾವ ರೂಪದಲ್ಲಿ ಬೇಕಾದರೂ ನಾವು ಪ್ರೀತಿಸಿ ಪೂಜಿಸಬಹುದು.

ಶಂಕರಾಚಾರ್ಯರು ಒಮ್ಮೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಭಗವಂತನ ಸ್ವರೂಪದ ರಂಗೋಲಿ ಹಾಕಿದ್ದರಂತೆ. ಅವರು ಅಲ್ಲಿಯೇ ರಂಗೋಲಿಗೆ ನಮಸ್ಕರಿಸಿದರಂತೆ. ಅಲ್ಲಿದ್ದ ಒಬ್ಬ‘ಯಾಕೆ ರಸ್ತೆಗೆ ನಮಸ್ಕರಿಸುತ್ತಿದ್ದೀರಿ’ ಎಂದು ಕೇಳೀದ. ಆಗ ಶಂಕರಾಚಾರ್ಯರು ‘ರಂಗೋಲಿಯಲ್ಲಿ ಸುಂದರವಾದ ದೇವರ ಚಿತ್ರ ಬಿಡಿಸಿದ್ದಾರೆ. ನೋಡಿದಾಗ ಭಕ್ತಿಪರವಶನಾದೆ. ಹಾಗಾಗಿ ನಮಸ್ಕರಿಸಿದೆ’ ಎಂದರಂತೆ. ಅವರು ರಂಗೋಲಿಯಲ್ಲಿ ದೇವರನ್ನು ಕಂಡರು. ಈ ಅವಕಾಶ, ಸ್ವಾತಂತ್ರ್ಯ ಹಿಂದೂ ಧರ್ಮದಲ್ಲಿದೆ. ಆದರೆ ಈ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಬಳಸಿ ಅಶಿಸ್ತು ತೋರಬಾರದು. ಕೆಲವರು ಹೇಳುವುದುಂಟು- ನಾವು ಅಷ್ಟು ಬಾರಿ ಯಾತ್ರೆ ಮಾಡಿದ್ದೇವೆ. ಇಷ್ಟು ದೇವಸ್ಥಾನಗಳಿಗೆ ಹೋಗಿದ್ದೇವೆ ಎಂದು. ಸಂಖ್ಯೆಗಿಂತ ಭಕ್ತಿ ಶ್ರೇಷ್ಠತೆಯ ಮಾನದಂಡವಾಗುತ್ತದೆ. ಭಕ್ತಿ, ಶ್ರದ್ಧೆ, ಶಿಸ್ತಿಲ್ಲದೆ ನೂರಾರು ಸಲ ದೇವರಿಗೆ ಪ್ರದಕ್ಷಿಣೆ ಹಾಕಿದರೂ, ಯಾತ್ರೆ ಮಾಡಿದರೂ ಫಲವಿಲ್ಲ.

ಹಿಂದಿನ ಕಾಲದಲ್ಲಿ ಸಾತ್ವಿಕತೆಗೆ ಹೆಚ್ಚಿನ ಮಹತ್ವವಿತ್ತು. ಧರ್ಮದ ಮಹತ್ವ ಕಡಿಮೆಯಾಗುತ್ತಿರುವುದರಿಂದ ಇಂದು ಕ್ರೌರ್ಯಕ್ಕೆ ಹೆಚ್ಚಿನ ಪ್ರಾಶಸ್ಱ ಲಭ್ಯವಾಗಿದೆ. ಈಗಿನ ಸಿನಿಮಾಗಳಲ್ಲಿ ಕ್ರೌರ್ಯಕ್ಕೆ ಹೆಚ್ಚಿನ ಮಹತ್ವ. ಇದನ್ನು ಈಗಿನವರು ಇಷ್ಟಪಡುತ್ತಾರೆ. ಸೌಮ್ಯ, ಸಾತ್ವಿಕತೆಯ ಸಿನಿಮಾಗಳಿಗೆ ಮನ್ನಣೆ ಕಡಿಮೆ.

ಮಹಿಳೆಯೊಬ್ಬರು ಕ್ಷೇತ್ರಕ್ಕೆ ಬಂದು ನನ್ನಲ್ಲಿ ‘ಮಗ ಸಂನ್ಯಾಸಿ ಆಗುತ್ತಿದ್ದಾನೆ. ನೀವೇ ಬುದ್ಧಿ ಹೇಳಬೇಕು’ ಎಂದು ಕಣ್ಣೀರು ಹಾಕಿದಳು. ಆಗ ನಾನು ‘ಸಂನ್ಯಾಸಿ ಆದರೆ ಏನು ತಪ್ಪು’ ಎಂದೆ. ಆಗ ಅವಳು ‘ಮಗ ಸಂನ್ಯಾಸಿಯಾದರೆ ನನ್ನ ಸಂಸಾರದ ಗತಿ ಏನು’ಎಂದಳು. ನಾನು ‘ಅವನು ಸಂಸಾರಿಯಾದರೆ ನಿನಗೆ ಒಂದು ಮೊಮ್ಮಗು ಎತ್ತಿ ಆಡಿಸುವ ಭಾಗ್ಯವಿರುತ್ತಿತ್ತು ಅಷ್ಟೇ. ಆದರೆ ಸಂನ್ಯಾಸಿಯಾದರೆ ಲೋಕಕಲ್ಯಾಣ ಮಾಡುವ ಭಾಗ್ಯ ಅವನಿಗೆ ದೊರೆಯುತ್ತದೆ ಅಲ್ಲವೇ?’ ಎಂದು ಹೇಳಿ ಸಮಾಧಾನಪಡಿಸಿದೆ. ಒಬ್ಬ ವ್ಯಕ್ತಿ ಸಾತ್ವಿಕನಾದರೆ, ಸಂನ್ಯಾಸಿಯಾದರೆ, ಮಠಾಧಿಪತಿಯಾದರೆ ಅವನ ಬಗ್ಗೆ ಅನುಕಂಪದ ಅಲೆ ಹುಟ್ಟಿಕೊಳ್ಳುತ್ತದೆ. ಅಯ್ಯೋ ಅವನ ವಿಧಿಯೇ ಅನ್ನುತ್ತಾರೆ. ಇದು ವಿಚಿತ್ರವಲ್ಲವೇ. ಸಂನ್ಯಾಸತ್ವ ಅಥವ ದೀಕ್ಷೆ ತೆಗೆದುಕೊಂಡರೆ ಏನು ತಪ್ಪಿದೆ? ಧರ್ಮಗಳಲ್ಲಿ ದೀಕ್ಷೆ ಪಡೆಯುವುದಕ್ಕೆ ನಿಯಮ ನಡಾವಳಿಗಳಿವೆ. ದೀಕ್ಷೆಯಲ್ಲಿ ಶಿಸ್ತಿರಬೇಕು, ಬದ್ಧತೆ ಬೇಕು. ಅನೇಕ ಯುವಕರು ಯೌವ್ವನದ ಉತ್ಸಾಹದಲ್ಲಿ ದಾರಿ ತಪ್ಪುತ್ತಾರೆ. ಹಿಂಸೆ, ಕ್ರೌರ್ಯ ಅಥವಾ ಸ್ವೇಚ್ಛಾಪ್ರವೃತ್ತಿಯ ಜೀವನ ನಡೆಸುತ್ತಾರೆ. ಇದುವರೆಗೆ ಯಾರೂ ನನ್ನ ಬಳಿ ಬಂದು ಇಂತಹವರ ಬಗ್ಗೆ ಹೇಳಿಕೊಂಡಿಲ್ಲ. ಹಿಂದೂ ಧರ್ಮದಲ್ಲಿ ಎಲ್ಲದಕ್ಕೂ ನಿಯಮವಿದೆ. ಧರ್ಮಸ್ಥಳದಲ್ಲಿ ಅಂಗಿ ಬನಿಯನ್ ತೆಗೆದು ಪಂಚೆ ಧರಿಸಿ ಶುಚಿರ್ಭತರಾಗಿ ದೇವರದರ್ಶನಕ್ಕೆ ಹೋಗಬೇಕು ಇತ್ಯಾದಿ ಹಲವಾರು ನಿಯಮವಿದೆ. ಆದರೆ ಬಳಿಕ ಕಾಲ ಬದಲಾಗಿ ಪ್ಯಾಂಟ್ ಎಲ್ಲಿಡುವುದು ಎಂಬ ತೊಂದರೆ ಆರಂಭವಾಗಿ ಪ್ಯಾಂಟ್ ಹಾಕಿಕೊಂಡು ತೆರಳಬಹುದು ಎಂದು ನಿಯಮ ಸಡಿಲಿಸಲಾಯಿತು. ಎರಡಕ್ಕಿಂತ ಕಡಿಮೆ ವರ್ಷದ ಮಕ್ಕಳಿಗೆ ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎನ್ನುವ ನಿಯಮವಿತ್ತು. ಯಾಕೆಂದರೆ ಮಕ್ಕಳಿಗೆ ಪ್ರಕೃತಿಕರೆ (ಮಲ ಮೂತ್ರ ವಿಸರ್ಜನೆ) ಬಗ್ಗೆ ಅರಿವಾಗುವುದಿಲ್ಲ. ದೇವಸ್ಥಾನದ ಒಳಗೆ ಗಲೀಜಾಗಬಾರದು, ಪಾವಿತ್ರ್ಯ ಇರಬೇಕು ಎನ್ನುವ ಉದ್ದೇಶದಿಂದ ಈ ನಿಯಮವಿತ್ತು. ಆದರೆ ಮಕ್ಕಳು ದೇವರಿಗೆ ಸಮಾನವೆಂದು ಚರ್ಚೆಗಳು ನಡೆದು ಅದರಲ್ಲೂ ಹೊಂದಾಣಿಕೆಯಾಯಿತು. ಕಾಲಾನುಸಾರವಾಗಿ ಅನೇಕ ಬದಲಾವಣೆಗಳಾದರೂ ಧರ್ಮ, ದೇವಸ್ಥಾನದ ಆಚಾರ ವಿಚಾರದಲ್ಲಿ ಶಿಸ್ತನ್ನು ಪಾಲಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

ನಾನು ಕಂಡಂತೆ ಅಯ್ಯಪ್ಪನ ಭಕ್ತರಲ್ಲಿ ಕಠಿಣ ನಿಯಮವಿದೆ, ಶಿಸ್ತಿದೆ. ಅದರಲ್ಲಿ ಅವರು ರಾಜೀ ಅಥವಾ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಮ್ಮ ಐಷಾರಾಮಿ ಬದುಕಿಗಾಗಿ ಯಾವಾಗ ಶಿಸ್ತಿನ ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆಯೋ ಅಲ್ಲಿಂದ ನಮ್ಮ ದೃಢತೆಯ ಬೇರು ಸಡಿಲವಾಗುತ್ತಾ ಹೋಗುತ್ತದೆ. ನಮ್ಮ ದೇವಾಲಯಗಳ ಮತ್ತು ತೀರ್ಥಕ್ಷೇತ್ರಗಳ ಸ್ವಚ್ಛತೆಯ ಕೊರತೆಯ ಬಗ್ಗೆ ನನಗೆ ಬಹಳ ನೋವಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯ ನೀರು ಮಲಿನವಾಗುತ್ತದೆ ಎಂದು ಕಸ ಮತ್ತು ಬಟ್ಟೆಗಳನ್ನು ಹಾಕಲು ಒಂದು ತೇಲುವ ಪೆಟ್ಟಿಗೆ ಇಟ್ಟೆವು. ಕಸವನ್ನು ಆ ಪೆಟ್ಟಿಗೆಗೆ ಬಿಸಾಡಿ ಎಂದರೂ ಯಾರೂ ಹಾಕುವುದಿಲ್ಲ. ಬಟ್ಟೆಯನ್ನು ನೀರಿನಲ್ಲಿ ಬಿಡಬೇಕು ಎನ್ನುವ ಸಂಪ್ರದಾಯವನ್ನು ಹಿರಿಯರಿಂದ ಪಾಲಿಸಿಕೊಂಡು ಬಂದಿದ್ದಾಗಿ ತಿಳಿಸುತ್ತಾರೆ. ಪರಿಸರದ ಕಾಳಜಿ ಇಲ್ಲದ ಸಂಪ್ರದಾಯ ಬೇಡ.

ಒಂದು ಕಥೆ ಇದೆ. ಒಂದು ಮನೆಯಲ್ಲಿ ಮನೆಯ ಯಜಮಾನ ಪೂಜೆ ವೇಳೆ ಹಾಲನ್ನು ಸಮರ್ಪಣೆ ಮಾಡಲು ದೇವರ ಮುಂದೆ ಇಟ್ಟು ಧ್ಯಾನಸ್ಥನಾಗುತ್ತಾನೆ. ಮನೆಯ ಬೆಕ್ಕು ದೇವರಿಗೆ ಇಟ್ಟ ಹಾಲನ್ನು ಪ್ರತಿದಿನ ಕುಡಿಯುತ್ತಿತ್ತಂತೆ. ಮುಂದೆ ಆತನ ಮಗನೂ ಅದೇ ರೀತಿ ಮಾಡುತ್ತಿದ್ದನಂತೆ. ಆದರೆ ಮಗನಿಗೆ ಅದರ ನಿಜವಾದ ಕಾರಣ ಗೊತ್ತಿರಲಿಲ್ಲ. ಬೆಕ್ಕನ್ನು ಬಲವಂತವಾಗಿ ತಂದು ಅದು ಹಾಲು ಕುಡಿದಾಗಲೇ ಆತನಿಗೆ ಸಮಾಧಾನವಾಗುತ್ತಿತ್ತಂತೆ. ಸಂಪ್ರದಾಯದ ಹೆಸರಿನಲ್ಲಿ ಆಚಾರ-ವಿಚಾರ ಅರಿಯದೆ ಅನುಕರಿಸುವುದು ಮೂರ್ಖತನ. ಜನರು ತಮ್ಮ ಊರಿನ ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಸ್ವಚ್ಛ ಶ್ರದ್ಧಾಕೇಂದ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದು ಆಂದೋಲನವಾಗಿ ಬೆಳೆದಿದೆ. ವರ್ಷಕ್ಕೆ ಎರಡು ಬಾರಿ ಅಂದರೆ ಆಗಸ್ಟ್ 15 ಮತ್ತು ಜನವರಿ 14 ಮಕರ ಸಂಕ್ರಮಣದಂದು ಗ್ರಾಮೀಣಾಭಿವೃದ್ಧಿ ಸಂಘಟಕರು, ಊರವರ ಸಹಕಾರದಿಂದ ಗ್ರಾಮದ ದೇವಸ್ಥಾನ ದೈವಸ್ಥಾನ ಶ್ರದ್ಧಾಕೇಂದ್ರಗಳನ್ನು ಶುಚಿಗೊಳಿಸುತ್ತಾರೆೆ. ಈವರೆಗೆ 2.5 ಲಕ್ಷ ಶ್ರದ್ಧಾಕೇಂದ್ರಗಳನ್ನು ಸ್ವಚ್ಛಗೊಳಿಸಲಾಗಿದೆ.

ಧರ್ಮಕ್ಷೇತ್ರಗಳ ರಕ್ಷಣೆಯ ಕೆಲಸ ತುರ್ತಾಗಿ ಆಗಬೇಕು. ಏನಾಗಿದೆ ಕ್ಷೇತ್ರದ ಪಾವಿತ್ರŒತೆಗೆ? ನಿತ್ಯ ಸಾಂಗವಾಗಿ ನಿಯಮಬದ್ಧವಾಗಿ ಪೂಜೆಯಾಗುತ್ತಿದೆ, ಯಾವುದೇ ಲೋಪವಾಗುತ್ತಿಲ್ಲ ಎನ್ನುವುದು ಸರಿ. ಆದರೆ ಅದು ಕ್ಷೇತ್ರದ ಆಂತರಿಕ ಪಾವಿತ್ರ್ಯತೆಯಾಯಿತು. ಕ್ಷೇತ್ರದ ಸುತ್ತಮುತ್ತಲು ಬಾಹ್ಯ ಪಾವಿತ್ರ್ಯತೆಯ ಬಗ್ಗೆ ಗಮನ ಹರಿಸಲೇಬೇಕಾಗಿದೆ.

Cleanliness is next to godliness ಎನ್ನುವ ಸುಭಾಷಿತ ವಿಶ್ವಮಾನ್ಯವಾಗಿದೆ. ಈ ಸಂದೇಶ ಇಂದು ಹೆಚ್ಚು ಪ್ರಸ್ತುತವಾಗಿದೆ. ಕರೊನಾದಂತಹ ವ್ಯಾಧಿ ಹೇಗೆ ಆವರಿಸುತ್ತದೆ ಎಂದು ತಿಳಿಯುವುದಿಲ್ಲ. ಉಸಿರಿನಿಂದ ಮತ್ತು ಕರೊನಾಪೀಡಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ ಎಂದು ಪುರಾವೆಯಾಗಿದೆ. ನಿತ್ಯವೂ ದೇಹ ಶುದ್ಧಿ (ಸ್ನಾನ), ಸಾಂಪ್ರದಾಯಿಕ ಪೂಜೆ, ಧ್ಯಾನ ಮತ್ತು ವೈಯಕ್ತಿಕ ಸ್ವಚ್ಛತೆಗೆ ಪ್ರಾಧ್ಯಾನತೆ ಇದ್ದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದೆಂದು ಕಂಡುಬಂದಿದೆ. ಇಂದು ಶುದ್ಧಾಚಾರಗಳಲ್ಲಿ ಆಗಾಗ್ಗೆ ಬಾಯಿ ಎಂಜಲು ಮುಟ್ಟಿಕೊಳ್ಳದಿರುವುದು ರೂಢಿಯಾಗುತ್ತಿದೆ; ತರಕಾರಿ ಹಣ್ಣು ಹಂಪಲುಗಳನ್ನು ಶುದ್ಧೀಕರಿಸಿಕೊಳ್ಳಲಾಗುತ್ತಿದೆ. ಅಂದರೆ ಮತ್ತೆ ಹಳೇ ಸಾಂಪ್ರದಾಯಿಕ ಶುದ್ಧಿಗೆ ಮರಳಲು ಪ್ರಯತ್ನಿಸುತ್ತಿದ್ದೇವೆ. ಹಿಂದೆ ಮನೆಯ ಸುತ್ತಮುತ್ತಲೂ ಗೋವಿನ ಸೆಗಣಿಯಿಂದ ಸಾರಿಸುವ ಕ್ರಮವಿತ್ತು. ಧರ್ಮಸ್ಥಳದಲ್ಲಿ ಸುಮಾರು 1980ನೇ ಇಸವಿಯ ತನಕವೂ ಸೆಗಣಿಯನ್ನು ನೀರಿನೊಂದಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಕಲಸಿ ಹರಡುತ್ತಿದ್ದರು. ಗೋಮಯವನ್ನು ಸರಿಯಾಗಿ ಹರಡಿದಲ್ಲಿ ಯಾವುದೇ ರೋಗ ನಿರೋಧಕ ಬಳಸುವ (ಕೆಮಿಕಲ್) ಅಗತ್ಯವಿರಲಿಲ್ಲ. ಕಾಶಿ, ಹರಿದ್ವಾರ, ಮಥುರಾ ಹೀಗೆ ಪ್ರಸಿದ್ಧ ತೀರ್ಥ ಕ್ಷೇತ್ರಗಳ ಸುತ್ತಮುತ್ತಲು ಕಾರ್ಖಾನೆಗಳು ತಲೆ ಎತ್ತಿರುವುದು ಕಂಡು ಬರುತ್ತದೆ. ಕಾರ್ಖಾನೆ ಸಂಬಂಧಿತ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವದಿಂದ ಜನರ ಓಡಾಟ ಶುರುವಾಗಿ ಪ್ರವಾಸಿ ಕೇಂದ್ರವಾಗಿ ಗುರುತಿಸಲ್ಪಡುತ್ತದೆ. ದೇವಾಲಯದ ಸುತ್ತಲಿನ ಪ್ರದೇಶ ಪ್ರೇಕ್ಷಣೀಯ, ವೈಭವೋಪೇತದ ತಾಣವಾಗಿ ಬದಲಾಗುತ್ತಿವೆ. ಇದು ಧಾರ್ವಿುಕ ಶಿಸ್ತನ್ನು ಮೀರುವ ವ್ಯವಸ್ಥೆಯಾಗಿದೆ. ಮುಂದೆ ಇದು ನಮ್ಮ ಸನಾತನ ಧರ್ಮದ ಆಚರಣೆಗೆ ಕೊಡಲಿಏಟು ನೀಡುತ್ತದೆ.

ಕರ್ನಾಟಕದಲ್ಲಿ ಕ್ಷೇತ್ರದ ಪಾವಿತ್ರŒತೆಯ ರಕ್ಷಣೆಯ ಕಾರ್ಯವನ್ನು ಮಾಡಬೇಕಿದೆ. ದೇವಸ್ಥಾನದ ಸುತ್ತ ಆರಂಭದಲ್ಲಿ ಹೋಟೆಲ್ ಪ್ರಾರಂಭವಾಗಿ ಬಳಿಕ ಅಲ್ಲೇ ಮದ್ಯದಂಗಡಿ ಪ್ರಾರಂಭಿಸಿ ಪ್ರೇಕ್ಷಣೀಯ ಸ್ಥಳ ಎಂದು ಪರಿಗಣಿಸಿದರೆ ಉದ್ದಿಮೆ ಬಂಡವಾಳಗಾರರಿಗೆ ಸಬ್ಸಿಡಿ ದೊರೆಯುತ್ತದೆ. ಅವರು ಅಲ್ಲಿ ಉದ್ದಿಮೆ ಪ್ರಾರಂಭಿಸಿದರೆ ಮುಂದೆ ಮನುಷ್ಯನ ಸುಖ ಭೋಗಕ್ಕೆ ಸಕಲ ವ್ಯವಸ್ಥೆಯಾಗಿ ಕ್ಷೇತ್ರದ ಪಾವಿತ್ರŒತೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಕ್ಷೇತ್ರದ ಪರಿಸರದ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಇಂತಹ ವ್ಯವಸ್ಥೆಗಳಿಗೆ ಅನುವು ಮಾಡಿಕೊಡಬಾರದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ.

ಶ್ರೀಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಮೇಳ ಒಂದು ಊರಿಗೆ ಹೋಗುವಾಗ ಅಲ್ಲಿನ ಜನರು ಶ್ರೀ ಮಂಜುನಾಥ ಸ್ವಾಮಿ ತಮ್ಮೂರಿಗೆ ಬರುತ್ತಿದ್ದಾನೆ ಎಂದು ಒಂದು ವಾರಕ್ಕೆ ಮುಂಚಿತವಾಗಿ ಮದ್ಯಪಾನ, ಮಾಂಸಾಹಾರ ಬಿಟ್ಟು ಶಿಸ್ತು ಸಂಯಮದಲ್ಲಿ ಇರುತ್ತಾರೆ. ಶಬರಿಮಲೆಯ ಭಕ್ತರು 48 ದಿನ ಶಿಸ್ತು ಸಂಯಮದಿಂದ ಇದ್ದು ಕಠಿಣ ವ್ರತ ಪಾಲಿಸಿ ಮಾಲಾಧಾರಿಗಳಾಗಿ ಅಯ್ಯಪ್ಪನ ಸನ್ನಿಧಿಗೆ ತೆರಳುತ್ತಾರೆ. ಪಂಚೇಂದ್ರಿಯಗಳನ್ನು ನಾವು ಖಂಡಿತವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು. ಸಂಯಮ, ಶಿಸ್ತನ್ನು ಅಳವಡಿಸಿಕೊಳ್ಳುವ ದೃಢತೆ ನಮ್ಮಲ್ಲಿರಬೇಕಷ್ಟೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)