ಅಂಕಣ

ಹಣ್ಣಿನ ರಾಜನಿಗೆ ಸಿಗದ ಬೆಲೆ

ಮಾವು ಇತ್ತೀಚಿನ ವರ್ಷಗಳಲ್ಲಿ ರೈತನಿಗೆ ಸಿಹಿ ನೀಡುವುದಕ್ಕಿಂತ ತುಸು ಹೆಚ್ಚೇ ಎಂಬಂತೆ ಹುಳಿ ಎನಿಸತೊಡಗಿದೆ. ಹೌದು. ಬರದ ನಾಡಿನಲ್ಲಿ ರೈತರ ಜೀವನಾಡಿ ಎನಿಸಿದ ಹಣ್ಣುಗಳ ರಾಜ ಮಾವು ರಾಜ್ಯದ ಇತರೆಡೆಯೂ ಪ್ರಮುಖ ಬೆಳೆಯಾಗಿದೆ. ಅಂತೆಯೇ, ವರ್ಷಂಪ್ರತಿ ಫಸಲು ಹಾಗೂ ಬೆಲೆಯಲ್ಲಿ ಏರಿಳಿತ ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಬೇಡಿಕೆಯೇ ಇಲ್ಲವಾಗಿದ್ದು, ರೈತರನ್ನು ಕಂಗೆಡಿಸಿದೆ.

| ಕಿರುವಾರ ಎಸ್​​.ಸುದರ್ಶನ್​​ ಕೋಲಾರ

ಕೋಲಾರ ಜಿಲ್ಲೆಯಲ್ಲಿ 44,717 ಹೆಕ್ಟೇರ್ ಪ್ರದೇಶದಲ್ಲಿ ಮಾವು ಆವರಿಸಿಕೊಂಡಿದ್ದು, 31,300 ಹೆಕ್ಟೇರ್​ನಲ್ಲಿ ತೋತಾಪುರಿ, 13,417 ಹೆಕ್ಟೇರ್​ನಲ್ಲಿ ಇತರ ತಳಿ ಬೆಳೆಯಲಾಗುತ್ತಿದೆ. ಒಟ್ಟಾರೆ 2,70,853 ಟನ್ ಇಳುವರಿ ಬರುವ ಅಂದಾಜಿದ್ದು, ಮಾವಿಗೆ ಬೇಡಿಕೆ ಕುಸಿದಿರುವುದು ರೈತರು, ವ್ಯಾಪಾರಸ್ಥರನ್ನು ಗೊಂದಲಕ್ಕೆ ಸಿಲುಕಿಸಿದೆ.

ಪ್ರಮುಖವಾಗಿ ಜ್ಯೂಸ್​ಗೆ ಹೋಗುವ ತೋತಾಪುರಿ ಕಳೆದ ವರ್ಷ ಕೆಜಿಗೆ 23 ರೂ. ನಿಂದ 48 ರೂ.ವರೆಗೆ ಮಾರಾಟವಾಗಿತ್ತು.ಈಗ 4.5 ರಿಂದ 5 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಶೇ.60 ಇಳುವರಿ ಬಂದಿದ್ದರೆ, ಈ ಸಾಲಿನಲ್ಲಿ ಶೇ.40 ಇಳುವರಿ ಬಂದಿದೆ. ಕಳೆದ ಬಾರಿಗಿಂತ ಫಸಲು ಕಡಿಮೆಯಾಗಿದ್ದರೂ ಬೇಡಿಕೆ ಚೇತರಿಕೆ ಕಾಣದಿರುವುದು ಖರ್ಚನ್ನೂ ಸರಿದೂರಿಗಿಸಿಕೊಳ್ಳಲು ಪರದಾಡುವ ಸನ್ನಿವೇಶ ಸೃಷ್ಟಿಸಿದೆ.

ಆಂಧ್ರದಿಂದ ಹೊಡೆತ?: ಮಾವಿಗೆ ಬೇಡಿಕೆ ಕುಸಿಯಲು ಆಂಧ್ರದಿಂದ ರಾಜ್ಯದ ಮಾವು ಹೊತ್ತೊಯ್ಯುವ ಲಾರಿಗಳಿಗೆ ತಡೆಯೊಡ್ಡಿರುವುದೇ ಪ್ರಮುಖ ಕಾರಣ. ಚಿತ್ತೂರು ಜಿಲ್ಲೆಯಲ್ಲಿ ಈ ಬಾರಿ ಮಾವು ಒಂದೇ ಬಾರಿ ಕೊಯ್ಲಿಗೆ ಬಂದಿದ್ದು, ಅಲ್ಲೂ ಮಾರುಕಟ್ಟೆಗಳು ಶುರುವಾಗಿವೆ. ಆರಂಭದಲ್ಲೇ ಬೇಡಿಕೆ ಕುಸಿದಿರುವುದನ್ನು ಅರಿತ ಅಲ್ಲಿನ ಸರ್ಕಾರ, ಫ್ಯಾಕ್ಟರಿ ಮಾಲೀಕರಿಂದ 8 ರೂ. ಹಾಗೂ ಸರ್ಕಾರದಿಂದ 4 ರೂ. ಸೇರಿ ಕೆಜಿಗೆ 12 ರೂ. ನಿಗದಿಪಡಿಸಿ ಆದೇಶಿಸಿದೆ. ಜತೆಗೆ ಹೊರ ರಾಜ್ಯಗಳಿಂದ ಬರುವ ಮಾವು ಲಾರಿಗಳನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಮಾವು ಸುಗ್ಗಿ ಮುಗಿದ ನಂತರ ಆಂಧ್ರದಲ್ಲಿ ಮಾವು ಮಾರುಕಟ್ಟೆ ಪ್ರಾರಂಭವಾಗುತ್ತಿತ್ತು, ಆದರೆ ಈ ಬಾರಿ ಎರಡೂ ಕಡೆ ಒಂದೇ ಬಾರಿ ಕೊಯ್ಲಿಗೆ ಬಂದಿದ್ದು, ಬೇಡಿಕೆ ಕುಸಿಯಲು ಕಾರಣವಾಗಿದೆ.

ಸುಧಾರಣೆ ಕಾರಣದ ಮಾರುಕಟ್ಟೆ ವ್ಯವಸ್ಥೆ: ಮಾವು ಕೃಷಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವಲ್ಲಿ ನಿರ್ಲಕ್ಷಿಸಲಾಗಿದೆ. ಶ್ರೀನಿವಾಸಪುರ ಹಾಗೂ ಕೋಲಾರದಲ್ಲಿ 3 ಖಾಸಗಿ ಪಲ್ಪ್ ಫ್ಯಾಕ್ಟರಿ ಹೊರತುಪಡಿಸಿದರೆ, ಮಾವು ಉತ್ಪನ್ನ ಹಾಗೂ ಉಪ ಉತ್ಪನ್ನ ತಯಾರಿಸುವ ಸರ್ಕಾರಿ ಸ್ವಾಮ್ಯದ ಯಾವುದೇ ಫ್ಯಾಕ್ಟರಿ ಇಲ್ಲ. ರಾಜ್ಯದಲ್ಲಿ ಮಾವು ಆಧಾರಿತ ಉತ್ಪನ್ನ ತಯಾರಿಸುವ ಸುಸಜ್ಜಿತ ಕಾರ್ಖಾನೆಗಳು ಇಲ್ಲದ ಕಾರಣ ಹೊರರಾಜ್ಯವನ್ನೇ ಅವಲಂಬಿಸುವ ಅನಿವಾರ್ಯತೆ ಇದೆ. ಆಂಧ್ರಪ್ರದೇಶದ ಚಿತ್ತೂರಲ್ಲಿ 44 ಫ್ಯಾಕ್ಟರಿ ಹಾಗೂ ಕೃಷ್ಣಗಿರಿ ಜಿಲ್ಲೆಯಲ್ಲಿ 31 ಫ್ಯಾಕ್ಟರಿ ಇವೆ. ಆದರೆ, ಈ ಫ್ಯಾಕ್ಟರಿಗಳಲ್ಲಿ ಕಳೆದ ವರ್ಷ ತಯಾರಿಸಿದ ಉತ್ಪನ್ನಗಳೇ ಮಾರುಕಟ್ಟೆಯಲ್ಲಿ ಬಿಕರಿಯಾಗದ ಕಾರಣ ಹೊಸ ಉತ್ಪನ್ನ ತಯಾರಿಗೆ ಹೊಡೆತ ಬಿದ್ದಿದೆ. ಜತೆಗೆ ಉತ್ಪನ್ನ ಶೇಖರಣೆಗೆ ಸಂಸ್ಕರಣ ಘಟಕಗಳ ಕೊರತೆ ಇರುವುದರಿಂದ ರಾಜ್ಯದ ರೈತರು ಮಾವು ಮಾರಾಟ ಮಾಡಲು ಪರದಾಡುವ ಸ್ಥಿತಿ ನಿರ್ವಣವಾಗಿದೆ.

ದರ ಕುಸಿತಕ್ಕೆ ಕಾರಣವೇನು...?

ಜೂನ್, ಜುಲೈ ನಂತರ ಬರಬೇಕಿದ್ದ ಮಳೆ ಮಾರ್ಚ್, ಏಪ್ರಿಲ್​ನಲ್ಲೇ ಸುರಿದಿದ್ದರಿಂದ ಗುಣಮಟ್ಟ ಕಡಿಮೆಯಾಗಿದೆ. ಮಾವು ಕೊಯ್ಲಿಗೆ ಬರುವ ವೇಳೆಗೆ ಒಣ ವಾತಾವರಣ ಇರಬೇಕು. ಮಳೆ ಆಗಿದ್ದರಿಂದ ತೋತಾಪುರಿ ಸೇರಿ ಮಿಕ್ಕ ತಳಿಗಳಲ್ಲೂ ನೀರಿನಾಂಶ ಹೆಚ್ಚಳ. ಮಳೆ ನಂತರ ಜನ ಮಾವು ಸೇವನೆ ಮಾಡುವುದು ಸಹಜವಾಗಿಯೇ ಕಡಿಮೆ. ತೋತಾಪುರಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಪಲ್ಪ್ ಫ್ಯಾಕ್ಟರಿ ಮಾಲೀಕರು ಖರೀದಿಗೆ ಹಿಂದೇಟು. ಗುಣಮಟ್ಟ ಕಡಿಮೆಯಾದರೆ ಮಾವಿನಲ್ಲಿ ಸಿಹಿ ಕಡಿಮೆಯಾಗುತ್ತದೆ, ಇದರಿಂದ ಉತ್ಪಾದನಾ ವೆಚ್ಚವು ಫ್ಯಾಕ್ಟರಿಗಳಿಗೆ ಜಾಸ್ತಿ.

ತೇವಾಂಶದಿಂದ ರುಚಿಸದ ಹಣ್ಣು

ಜೂನ್, ಜುಲೈ ನಂತರ ಬರಬೇಕಿದ್ದ ಮಳೆ ಮಾರ್ಚ್, ಏಪ್ರಿಲ್​ನಲ್ಲೇ ಸುರಿದ ಕಾರಣ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಮಾವು ಗುಣಮಟ್ಟ ಕಡಿಮೆಯಾಗಿದೆ. ಇದು ಕೂಡ ಬೇಡಿಕೆ ಕುಸಿಯಲು ಕಾರಣವಾಗಿದೆ. ಮರಗಳಲ್ಲೆ ಕಾಯಿಗಳಿಗೆ ಮಚ್ಚೆ ರೋಗ ಹರಡುತ್ತಿದೆ. ಇದೂ ಕೂಡ ಬೇಡಿಕೆ ಇಲ್ಲವಾಗಿಸಿದೆ ಎನ್ನುತ್ತಾರೆ ವಿಜ್ಞಾನಿ ಡಾ.ಶಿವಾನಂದ ಹೊನಗಲ್.

ಮಾವು ಬೆಳೆ ವಿವರ

ಜಿಲ್ಲೆಯಲ್ಲಿ ಮಾವು ಪ್ರದೇಶ ಒಟ್ಟು 44,717 ಹೆಕ್ಟೇರ್ ಪ್ರದೇಶ.

ತೋತಾಪುರ ತಳಿ ಬೆಳೆದಿರುವ ಪ್ರದೇಶ 31,300 ಹೆಕ್ಟೇರ್.

ಇತರ ತಳಿ ಬೆಳೆದಿರುವ ಪ್ರದೇಶ 13,417 ಹೆಕ್ಟೇರ್.

ಜಿಲ್ಲೆಯಲ್ಲಿರುವುದು 4 ಸಂಸ್ಕರಣ ಘಟಕಗಳು.

30 ದಿನಕ್ಕೆ 27,000 ಟನ್ ಸಂಸ್ಕರಣೆ.

ಒಟ್ಟು ಇಳುವರಿಯಲ್ಲಿ ತೋತಾಪುರಿ ತಳಿಯು 1,65,000 ಟನ್ ಅಂದಾಜಿಸಲಾಗಿದೆ.

ಕೆಜಿ ಉತ್ಪಾದನೆಗೆ 8.55 ರೂ. ತಗಲುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ತೋತಾಪುರಿ ಕೆಜಿ 4.5 ರಿಂದ 5 ರೂ.ಗೆ ಮಾರಾಟ.

ಮಾವಿನ ಮೇಲೆ ಯುದ್ಧದ ಕರಿನೆರಳು

ಬೇಡಿಕೆ ಹೆಚ್ಚಿದ್ದಾಗ ಜಿಲ್ಲೆಯಿಂದಲೂ ಸುಮಾರು 60 ಟನ್​ಗೂ ಅಧಿಕ ಮಾವು ಆಂಧ್ರ ಫ್ಯಾಕ್ಟರಿಗಳಿಗೆ ಸರಬರಾಜು ಆಗುತ್ತಿತ್ತು. ಅಲ್ಲದೆ ಗುಜರಾತ್, ನಾಸಿಕ್, ದೆಹಲಿ, ಕೋಲ್ಕತ್ತ, ತಮಿಳುನಾಡು ಹೀಗೆ ಹಲವು ರಾಜ್ಯ ಸೇರಿ ವಿದೇಶಕ್ಕೂ ಹೋಗುತ್ತಿತ್ತು. ಯುಕ್ರೇನ್, ಇಸ್ರೇಲ್, ಯುರೋಪ್, ಜಪಾನ್​ನಲ್ಲಿ ಉಂಟಾದ ಯುದ್ಧ ವಾತಾವರಣವೂ ಫ್ಯಾಕ್ಟರಿಗಳಲ್ಲಿನ ಪಲ್ಪ್ ಸರಬರಾಜಿನ ಮೇಲೆ ಪರಿಣಾಮ ಬೀರಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ಕೆಜಿಗೆ 8 ರೂ. ನಿಗದಿಗೆ ಪ್ರಸ್ತಾವ

ಜಿಲ್ಲೆಯಲ್ಲಿ 4 ಸಂಸ್ಕರಣ ಘಟಕಗಳಿದ್ದು, ಪ್ರತಿ ದಿನ 900 ಟನ್ ಸಂಸ್ಕರಿಸಿದರೆ, 30 ದಿನಗಳಿಗೆ 27,000 ಟನ್ ಸಂಸ್ಕರಣೆ ಮಾಡಬಹುದು. ಒಟ್ಟು ಇಳುವರಿಯಲ್ಲಿ ತೋತಾಪುರಿ 1,65,000 ಟನ್ ಅಂದಾಜಿಸಲಾಗಿದೆ. ಕೆಜಿ ಉತ್ಪಾದನೆಗೆ 8.55 ರೂ. ತಗಲುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ತೋತಾಪುರಿ ಕೆಜಿ 5 ರಿಂದ 6 ರೂ.ಗೆ ಮಾರಾಟವಾಗುತ್ತಿದ್ದು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಠ ಕೆಜಿಗೆ 8 ರೂ. ನಿಗದಿಪಡಿಸಿ ಆದೇಶಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತೋಟಗಾರಿಕೆ ಇಲಾಖೆ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಕೇಂದ್ರ ಮಧ್ಯಪ್ರವೇಶಕ್ಕೆ ಸಿಎಂ ಮನವಿ

ಬೆಂಗಳೂರು: ಮಾವು ಗುಣಮಟ್ಟ, ಇಳುವರಿ ಉತ್ತಮವಾಗಿದೆ ಎಂದು ಖುಷಿಪಟ್ಟಿದ್ದ ಬೆಳೆಗಾರರಿಗೆ ಆಘಾತವಾಗಿದೆ. ಫಸಲು ಮಾರಾಟಕ್ಕೆ ತರುವ ಹೊತ್ತಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಹಠಾತ್ ದರ ಕುಸಿದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಂಡು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದ ಪತ್ರದಲ್ಲಿ ಮಾರುಕಟ್ಟೆಯಲ್ಲಿ ದರ ಇಳಿಕೆ, ಮಾವು ಬೆಳೆಗಾರರ ಬದುಕು-ಬವಣೆಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ.

ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಯೋಜನೆಯಡಿ ದರ ಕೊರತೆ ಪಾವತಿ ಕಾರ್ಯಕ್ರಮವನ್ನು ತುರ್ತಾಗಿ ಅನುಷ್ಠಾನಗೊಳಿಸಿ, ಕೇಂದ್ರದ ಸಂಸ್ಥೆಗಳಾದ ನಾಫೆಡ್ ಮತ್ತು ಎನ್​ಸಿಸಿಎಫ್​ಗೆ ಖರೀದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಸೂಕ್ತ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೂಲಕ ರೈತರು ಹೂಡಿದ ಬಂಡವಾಳ, ದುಡಿಮೆ ಕೂಲಿಯಾದರೂ ಅವರ ಕೈಗೆ ಸೇರುವಂತಾದರೆ, ಬಹುದೊಡ್ಡ ನಷ್ಟದ ಹೊರೆಯಿಂದ ಪಾರು ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಆವಕ ಹೆಚ್ಚಳ, ಬೆಲೆ ಇಳಿಕೆ: ಬೆಂಗಳೂರು ನಗರ, ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ತೋಟಗಾರಿಕೆ ಬೆಳೆಗಳಲ್ಲಿ ಮಾವು ಮುಖ್ಯ ಬೆಳೆಯಾಗಿದೆ. ಅಂದಾಜು 1.39 ಲಕ್ಷ ಹೆಕ್ಟೇರ್​ನಲ್ಲಿ ಬೆಳೆದಿದ್ದು, ಮುಂಗಾರು ಹಂಗಾಮಿಗೆ 8-10 ಲಕ್ಷ ಟನ್ ಉತ್ಪಾದನೆಯಾಗಲಿದೆ.

ಮಾವು ಕೊಯ್ಲು ಮೇ-ಜುಲೈವರೆಗೆ ಗರಿಷ್ಠಮಟ್ಟಕ್ಕೆ ತಲುಪುತ್ತದೆ. ಆವಕ ಏರಿಕೆಯಾಗುತ್ತಿದ್ದಂತೆ ಬೆಲೆ ಇಳಿಯಲಾರಂಭಿಸಿದೆ. ಕ್ವಿಂಟಾಲ್​ಗೆ 12 ಸಾವಿರ ರೂ.ಗಳಿದ್ದದ್ದು ಮೂರು ಸಾವಿರ ರೂ.ಗೆ ಇಳಿದಿದೆ. ಕೃಷಿ ಬೆಲೆ ಆಯೋಗದ ಶಿಫಾರಸಿನ ಪ್ರಕಾರ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್​ಗೆ 5,466 ರೂ.ಗಳಾಗಲಿದೆ. ದಿಢೀರ್ ಬೆಲೆ ಕುಸಿತದಿಂದ ಕಂಗೆಟ್ಟಿರುವ ಸಾವಿರಾರು ಸಣ್ಣ ಹಾಗೂ ಅತಿಸಣ್ಣ ರೈತರು ಬೆಂಬಲ ಬೆಲೆಗೆ ಒತ್ತಾಯಿಸಿ ಬೀದಿಗೆ ಇಳಿದಿದ್ದಾರೆ. ಬಿಕ್ಕಟ್ಟು ಬಗೆಹರಿಯದಿದ್ದರೆ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಪತ್ರದಲ್ಲಿ ಸಿಎಂ ಗಮನಸೆಳೆದಿದ್ದಾರೆ.