| ಅರವಿಂದ ಅಕ್ಲಾಪುರ ಶಿವಮೊಗ್ಗ
ಎಲೆಚುಕ್ಕೆ ರೋಗ, ಫಸಲು ಕುಸಿತದಿಂದ ಕಂಗೆಟ್ಟಿರುವ ಅಡಕೆ ಬೆಳೆಗಾರರಿಗೆ ಈಗ ಸಮಾಧಾನಪಡುವ ಸನ್ನಿವೇಶ ಸೃಷ್ಟಿಯಾಗಿದೆ. ಅಡಕೆ ದರ ಗಗನಮುಖಿಯಾಗಿದೆ. ಬೇಡಿಕೆ ಹೆಚ್ಚಿರುವ ಕಾರಣ ದಿನೇದಿನೆ ಬೆಲೆಯೂ ಏರುತ್ತಿದೆ. ಸರಕು (ಹಸ) ಲಕ್ಷ ರೂ. ಸನಿಹಕ್ಕೆ ತಲುಪಿದೆ.
ಮಲೆನಾಡಿನಲ್ಲಿ ಕಳೆದ ವರ್ಷದ ಅಡಕೆ ಸಂಸ್ಕರಣೆ ಪ್ರಕ್ರಿಯೆ ಆರಂಭದಿಂದಲೂ 45-50 ಸಾವಿರ ರೂ. ನಡುವೆ ಹೊಯ್ದಾಡುತ್ತಿದ್ದ ರಾಶಿ ಇಡಿ ಬೆಲೆ ಈಗ 60 ಸಾವಿರದ ಗಡಿ ದಾಟಿದೆ. ಈ ವರ್ಷ ಮಲೆನಾಡಿನಲ್ಲಿ ಫಸಲು ತೀವ್ರ ಕುಸಿದಿದ್ದು, ಬೇಡಿಕೆ ಹೆಚ್ಚಿದೆ. 2021ರಲ್ಲಿ ರಾಶಿ ಅಡಕೆ ಕ್ವಿಂಟಾಲ್ಗೆ 60 ಸಾವಿರ ರೂ. ದಾಟಿತ್ತು. 2014ರಲ್ಲಿ 80 ಸಾವಿರ ರೂ.ಗೆ ತಲುಪಿತ್ತು. 4 ವರ್ಷದ ಹಿಂದಿನ ಧಾರಣೆ ಈಗ ಮರುಕಳಿಸಬಹುದೇ ಎಂಬ ನಿರೀಕ್ಷೆ ರೈತರದು. ಆದರೆ ಧಾರಣೆ ಗಗನಮುಖಿ ಆಗಿರುವುದು ಅನೇಕ ಸಮಸ್ಯೆಗಳಿಗೂ ಕಾರಣವಾಗುವ ಆತಂಕವಿದೆ. ಆಮದು ಅಡಕೆ ಹಾವಳಿ ಶುರುವಾಗುವ ಅಪಾಯವಿದೆ.
ಈ ಪರಿಯಾಗಿ ಅಡಕೆ ಬೆಲೆ ಹೆಚ್ಚಿದ್ದಕ್ಕೆ ನಿಖರ ಕಾರಣ ಹೇಳಲಾಗದು. ಆದರೆ ಕೇಂದ್ರ ಸರ್ಕಾರ ಅಡಕೆ ಆಮದು ಸುಂಕ ಹೆಚ್ಚಿಸಿದ್ದು ಕೂಡ ಬೆಲೆ ಹೆಚ್ಚಳಕ್ಕೆ ಪ್ರೇರಣೆ ಆಯಿತೆಂಬುದು ನಿಜ. ನೆರೆಯ ದೇಶಗಳಿಂದ ಅಡಕೆ ಆಮದು ಮಾಡಿಕೊಳ್ಳುತ್ತಿದ್ದ ಉದ್ಯಮಿಗಳು ಸುಂಕ ಏರಿಕೆ ಪರಿಣಾಮ ಸ್ಥಳೀಯ ಅಡಕೆ ಬಳಕೆಗೆ ಮುಂದಾದರು. ಆದರೆ ಈಗ ದೇಶದ ಅಡಕೆ ದುಬಾರಿಯಾದ್ದರಿಂದ ಉದ್ಯಮಿಗಳು ಮತ್ತೆ ನೆರೆ ದೇಶದ ಕಡಿಮೆ ಗುಣಮಟ್ಟದ ಅಡಕೆ ಬಳಕೆಗೆ ಚಿಂತನೆ ನಡೆಸುವುದು ನಿಶ್ಚಿತ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಚೀನಾ, ಥಾಯ್ಲೆಂಡ್, ಮಾಲ್ಡೀವ್ಸ್, ಬಾಂಗ್ಲಾದೇಶ, ಇಂಡೋನೇಷ್ಯಾಗಳಲ್ಲಿ ಅಡಕೆ ಅರಣ್ಯ ಬೆಳೆಯಂತಿದೆ. ಈ ದೇಶಗಳ ಅಡಕೆಯ ಗುಣಮಟ್ಟವೂ ಅಷ್ಟಕ್ಕಷ್ಟೇ. ಹಿಂದೆ ಈ ದೇಶಗಳಿಂದ ಅಧಿಕ ಪ್ರಮಾಣದಲ್ಲಿ ಅಡಕೆ ಆಮದಾಗುತ್ತಿತ್ತು. ದರ ಕಡಿಮೆ ಎನ್ನುವ ಕಾರಣಕ್ಕೆ ಗುಟ್ಖಾ ಹಾಗೂ ಪಾನ್ ಮಸಾಲಾದಲ್ಲಿ ಇದೇ ಅಡಕೆ ಕಲಬೆರಕೆಯಾಗುತ್ತಿತ್ತು.
ಅಡಕೆ ಆಮದು-ಬೇಡಿಕೆ: 2010-11ರವರೆಗೆ ಭಾರತಕ್ಕೆ ವಿವಿಧ ದೇಶಗಳಿಂದ ಆಮದಾಗುತ್ತಿದ್ದ ಅಡಕೆ ಪ್ರಮಾಣ ಸಾಕಷ್ಟಿತ್ತು. ಒಟ್ಟು ಆಮದು ಪ್ರಮಾಣದಲ್ಲಿ ಇಂಡೋನೇಷ್ಯಾದಿಂದ ಶೇ. 54 ಮತ್ತು ಬಾಂಗ್ಲಾದೇಶದಿಂದ ಶೇ. 25ರಷ್ಟು ಅಡಕೆ ಭಾರತಕ್ಕೆ ಬರುತ್ತಿತ್ತು. ಮ್ಯಾನ್ಮಾರ್ನಿಂದ ಶೇ. 13, ಥಾಯ್ಲೆಂಡ್ನಿಂದ ಶೇ. 5 ಹಾಗೂ ಶ್ರೀಲಂಕಾದಿಂದ ಶೇ.1ರಷ್ಟು ಅಡಕೆ ಆಮದಾಗುತ್ತಿತ್ತು. ಕಳೆದ 15 ವರ್ಷಗಳ ಅವಧಿಯಲ್ಲಿ ಅಡಕೆ ಆಮದು ಹಾಗೂ ರಫ್ತಿನ ವಹಿವಾಟಿನ ಮೇಲೆ ಕಣ್ಣಾಡಿಸಿದರೆ ಅನೇಕ ಅಂಶಗಳು ಗಮನ ಸೆಳೆಯುತ್ತವೆ. 1990-94ರವರೆಗೆ ನಮ್ಮ ದೇಶಕ್ಕೆ ಅಡಕೆ ಆಮದಾಗಲಿಲ್ಲ. ನಂತರ 1995ರಲ್ಲಿ ನಮ್ಮ ದೇಶದ ಅಡಕೆ ಉತ್ಪಾದನೆ 2.89 ಸಾವಿರ ಮೆಟ್ರಿಕ್ ಟನ್ ಆಗಿದ್ದರೆ 545 ಮೆಟ್ರಿಕ್ ಟನ್ ಅಡಕೆ ಆಮದಾಯಿತು. ಆದರೆ ಒಟ್ಟು 2.80 ಸಾವಿರ ಟನ್ ಅಡಕೆ ಬೇಡಿಕೆ ಇತ್ತು.
ಈ ವರ್ಷ ಒಟ್ಟಾರೆ ಅಡಕೆ ಫಸಲು ಭಾರಿ ಪ್ರಮಾಣದಲ್ಲಿ ಕಡಿಮೆಯಿತ್ತು. ಇದರ ನಡುವೆ ಸರಕು ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಕಳೆದೊಂದು ದಶಕದಿಂದ ಅಡಕೆ ಸಂಸ್ಕರಣೆಯಲ್ಲಿ ಯಾಂತ್ರೀಕರಣ ಹೆಚ್ಚಿದ ಬಳಿಕ ನಿಧಾನವಾಗಿ ಸರಕು ಉತ್ಪಾದನೆಯತ್ತ ಬೆಳೆಗಾರರ ಆಸಕ್ತಿ ಕಡಿಮೆಯಾಯಿತು. ಆದರೆ ಸಣ್ಣ ಹಿಡುವಳಿದಾರರು ಸರಕು ಉತ್ಪಾದನೆಯಿಂದ ವಿಮುಖರಾಗಲಿಲ್ಲ. ಈಗಲೂ ಸರಕು ಅಡಕೆಯ ಪೂರೈಕೆದಾರರು ಸಣ್ಣ ಹಿಡುವಳಿದಾ ರರೇ ಹೊರತು ದೊಡ್ಡ ಪ್ರಮಾಣದ ಅಡಕೆ ಬೆಳೆಗಾರರಲ್ಲ. ಸರಕು ಹಾಗೂ ಬೆಟ್ಟೆಗೆ ಉತ್ತಮ ಧಾರಣೆ ಸಿಕ್ಕರೆ ಅದರಲ್ಲಿ ಸಿಂಹ ಪಾಲು ಅನುಕೂಲ ಆಗುವುದು ಸಣ್ಣ ಹಿಡುವಳಿದಾರರರಿಗೆ.
2023 ಸರಕು: 78,996 ರೂ., ರಾಶಿ ಇಡಿ: 48,699 ರೂ.
2024 ಸರಕು: 84,116 ರೂ., ರಾಶಿ ಇಡಿ: 49,799 ರೂ.
2025 ಸರಕು: 96,340 ರೂ., ರಾಶಿ ಇಡಿ: 60,589 ರೂ.
ತ್ರಿಪುರಾ ಕಡೆಯಿಂದ ಭಾರತದೊಳಕ್ಕೆ ಬರುತ್ತಿದ್ದ ಅಡಕೆಗೆ ನಿರ್ಬಂಧ ಹೇರಿದ್ದರಿಂದ ಅಸ್ಸಾಂ ಭಾಗದಲ್ಲಿ ಫಸಲು ಕಡಿಮೆಯಾಯಿತು. ಈ ಬೆಳವಣಿಗೆ ಇಲ್ಲಿನ ಧಾರಣೆ ಹೆಚ್ಚಳಕ್ಕೆ ಮುಖ್ಯ ಕಾರಣ. ಸರಕು ಬೆಲೆ ಹೆಚ್ಚಿರುವುದರಿಂದ ಸಣ್ಣ ಹಿಡುವಳಿದಾರರಿಗೆ ಲಾಭವಾಗುತ್ತದೆ. ಸದ್ಯದ ಸ್ಥಿತಿ ಗಮನಿಸಿದರೆ ಬಹಳ ಏರಿಳಿತವಾಗುವ ಸಾಧ್ಯತೆಗಳಿಲ್ಲ. | ಎಚ್.ಎಸ್. ಮಹೇಶ್ ಹುಲ್ಕುಳಿ ಮ್ಯಾಮ್ಕೋಸ್ ಉಪಾಧ್ಯಕ್ಷ