ಅರುಣಾಚಲ ಪ್ರದೇಶದ ಪ್ರಮುಖ ಬುಡಕಟ್ಟುಗಳಾದ ನ್ಯಾಯಿಶಿ, ಗಾಲೋ ಮತ್ತು ಪೊರೋಕಿಗಳು ಆವರಿಸಿಕೊಂಡಿರುವ ಪಕ್ಕೆ, ಪಪ್ಪು ಮತ್ತು ಪಾಸ್ಸಾ ಎಂಬ ಮೂರು ಕಣಿವೆಗಳ ಸ್ಥಳಕ್ಕೆ ಹವ್ಯಾಸಿ ಮತ್ತು ಆಫ್ಬೀಟ್ ಪ್ರವಾಸಿಗಳ ಹೊರತಾಗಿ ಬಂದವರೂ ಕಡಿಮೆ. ಆದರೆ ಯಾವಾಗ ಸಾಮಾಜಿಕ ಜಾಲತಾಣಕ್ಕೆ ಇದು ತೆರೆದುಕೊಂಡಿತೋ ಆಗ ಮೂರು ಕಣಿವೆಗಳ ಚೆಂದದ ಸ್ಥಳ ಅನಾವರಣಗೊಂಡಿತು.
ಇದರ ಹೊರತಾಗಿ ಈ ಕಣಿವೆ ಮೂಲೆಯಿಂದ ಹೊರಗೆ ಹೋಗುವುದು ಮತ್ತು ವಾಪಸ್ಸು ಬರುವುದು ಹೇಗೆ, ಇದಕ್ಕೇನಾದರೂ ಸುಲಭದ ರಸ್ತೆ ಅಥವಾ ಸೌಲಭ್ಯ ಇದೆಯಾ ಎಂದು ಕೇಳಿ ನೋಡಿ, ತಲೆಗೊಂದರಂತೆ ಕಾರಣ ಹೇಳಿ ಹೊರಟು ಬಿಡುತ್ತಾರೆ ಈ ಜನ. ಕಾರಣ ಮೂರು ಕಣಿವೆಗಳ ಮೂರು ಮೂಲೆಗಳನ್ನು ತಲುಪಲು ಮಾಡುವ ಸಾಹಸ ಇದೆಯಲ್ಲ ಅದು ಹೇಳಿ ಪೂರೈಸುವ ಕತೆಯಲ್ಲ ಎಂದು ಅವರಿಗೂ ಗೊತ್ತಿರುತ್ತೆ. ‘ಇದಕ್ಕೆ ಬೇರೆ ದಾರಿ ಇಲ್ವಾ?’ ಎಂದು ಕೇಳುವ ನಿಮಗೂ ಆಗಲೇ ಆ ದಾರಿಯ ಮೊದಲ ಹಂತದ ಅನುಭವವೂ ಆಗಿರುತ್ತದಲ್ಲ. ಮುಂದಿನ ಎರಡು ದೂರದ ದಾರಿ ಒಲ್ಲೆ ಎಂದುಬಿಟ್ಟರೆ? ಅದಕ್ಕೆ ಮರು ಮಾತನಾಡದೆ ‘ಈಗ ಚಹಾ ಕುಡಿಯುವಾ ಬನ್ನಿ’ ಎನ್ನುತ್ತ ಎದ್ದು ಬಿಡುತ್ತಾರೆ. ಅಂಥ ದೂರವೇನೂ ಅಲ್ಲದಿದ್ದರೂ ಪರ್ವತದ ಕಣಿವೆ ಪ್ರದೇಶದ ಪ್ರವಾಸದಲ್ಲಿ ಎಲ್ಲವೂ ದೂರ, ಎಲ್ಲವೂ ನಿಧಾನವೇ. ನೆಟ್ವರ್ಕ್ ಇತ್ಯಾದಿ ಎಲ್ಲ ನಿಮ್ಮ ನಿಮ್ಮ ಅದೃಷ್ಟ.
ಅರುಣಾಚಲ ಪ್ರದೇಶದ ಮೇಲ್ಮುಖದ ಏರುದಿಕ್ಕಿನ ಮೂಲೆಯಲ್ಲಿರುವ ಮೂರು ಕಣಿವೆಗಳ ಸ್ವರ್ಗಕ್ಕೆ ನಾನು ಕಾಲಿಟ್ಟದ್ದು ಅಕಸ್ಮಿಕವಾಗಿಯೇ. ರಸ್ತೆಯ ತುದಿಯಲ್ಲಿ ನಿಂತು ಒಂದೊಂದು ಕಣಿವೆಗೂ ಕತ್ತು ಬಗ್ಗಿಸಿ ಕಣ್ತುಂಬಿಕೊಳ್ಳುವ ಸೌಂದರ್ಯಕ್ಕೆ ಈ ಪೂರ್ವ ಕೆಸಾಂಗ್ ಜಿಲ್ಲೆಯೇ ಸಾಕ್ಷಿ. ಮಣಿಪುರದಲ್ಲಿ ಮೂರ್ನಾಲ್ಕು ವಾರದ ಯೋಜನೆಯ ಮೇರೆಗೆ ಸೇನಾಪತಿ ಮತ್ತು ವಿಷ್ಣುಪುರ ಜಿಲ್ಲೆಯ ತಿರುಗಾಟದಲ್ಲಿ ಇದ್ದಾಗ, ಅಲ್ಲಿನ ಕೇಂದ್ರ ಕಾರಾಗೃಕ್ಕೆ ಹೋಗುವ ಭೇಟಿಯ ಮುದ್ದತ್ತು ಮುಂದಕ್ಕೆ ಬೀಳುವುದರೊಂದಿಗೆ, ಮೂರು ದಿನಗಳ ಬಿಡುವು ದೊರಕಿತ್ತು.
ಹಾಗಾಗಿ ಮರುಯೋಚನೆ ಮಾಡದೆ ಕಣಿವೆಗಳ ರಾಜ್ಯ ಮತ್ತು ಬೆಳಗಿನ ಸೂರ್ಯೂೕದಯದ ಮೊದಲ ನಗರಿ ಎಂದೇ ಹೆಸರು ಮಾಡಿರುವ ಅರುಣಾಚಲಕ್ಕೆ ಕಾಲಿಟ್ಟಿದ್ದೆ, ಒಂದು ದಿನದ ಪಯಣ ಬೇಡುವ ರಸ್ತೆಗುಂಟ ಅಲ್ಲದೆ ಬೇರೆ ದಾರಿಯೇ ಇಲ್ಲದ ಅನಿವಾರ್ಯ ಚಲನೆ ಅದು. ಏನೇ ವಿಮಾನ ಹಾರಿ ಬಂದರೂ ಹತ್ತಿರದ ತೇಜಪುರ್ ಅಥವಾ ಇಟಾನಗರ ವಿಮಾನ ನಿಲ್ದಾಣ ಹೊರತು ಪಡಿಸಿದರೆ ಬೇರೆ ದಾರಿ ಇಲ್ಲ. ಅಲ್ಲಿಂದ ರಸ್ತೆ ಪಯಣ ಎಂದರೆ ಈ ಪ್ರವಾಸಕ್ಕೆ ಕೊಂಚ ಸಮಯ ಬೀಡು ಬೀಸಾಗಿದ್ದರೆ ಮಾತ್ರ ಸಾಧ್ಯ.
ಕಣಿವೆ ಪ್ರದೇಶದ ಟಿಪಿಕಲ್ ರಸ್ತೆಗಳು, ಅಸಾಧ್ಯ ಹೊರಳು ಮತ್ತು ಕಂದಕದ ಅಂಚಿನ ಅಪಾಯಕಾರಿ ತಿರುವುಗಳ ನಂತರ ಸಿಕ್ಕುವುದೇ ಪೂರ್ವ ಕೆಸಾಂಗ್ ಜಿಲ್ಲೆ. ಅರುಣಾಚಲದ ಕೆಸಾಂಗ್ ಮೊದಲಿನಿಂದಲೂ ನೈಸರ್ಗಿಕ ಸೌಂದರ್ಯ ಮತ್ತು ಪರ್ವತ ಕಣಿವೆಗಳ ತಿರುವುಗಳಿಗೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಜಾಗ. ಆದ್ದರಿಂದಲೇ ಪ್ರವಾಸೋದ್ಯಮಕ್ಕೂ ತೆರೆದುಕೊಂಡಿರುವ ಅಪೂರ್ವ ಕಣಿವೆಯ ಜಿಲ್ಲೆ ಇದು. ಆಕರ್ಷಕ ಆದರೆ ಅಷ್ಟೆ ವಿಚಿತ್ರ ಹೆಸರಿನ ಕಣಿವೆಗಳಿಂದ ಸೆಳೆಯುತ್ತಿರುವ ಕೆಸಾಂಗ್ನಲ್ಲಿ ಯಾರನ್ನೂ ಕೇಳಿದರೂ ಸಿರೀಸ್ ಆಗಿ ‘ಪಕ್ಕೆ, ಪಪ್ಪು ಮತ್ತು ಪಾಸ್ಸಾ’ ಎಂದುಬಿಡುತ್ತಾರೆ. ಏನಿದು ಎಂದು ಕೇಳಿ- ದೂರದ ರಸ್ತೆಯ ತುದಿಗೆ ಒಯ್ದು ನಿಲ್ಲಿಸುತ್ತಾರೆ, ಇಲ್ಲವೇ ‘ಅಲ್ಲಿಗೆ ಹೋಗಿ’ ಎಂದು ದಾರಿ ತೋರಿಸುತ್ತಾರೆ, ಅಷ್ಟೆ ನೀವು ಮತ್ತೆ ಸಂಜೆಯವರೆಗೂ ಹಿಂದಿರುಗಲಾರಿರಿ. ಅದೇ ಮೂರು ಕಣಿವೆಗಳ ಸ್ವರ್ಗದ ತುದಿ ನಿಮ್ಮ ಕಾಲು ಮತ್ತು ಕಣ್ಣಡಿಗೆ ಕದಲುತ್ತಿರುತ್ತದೆ. ಗುಂಡಿಗೆ ಮತ್ತು ಕೈ ಕಾಲು ಗಟ್ಟಿ, ಹಿಡಿತ ಎರಡೂ ಇದ್ದರೆ ಸ್ವಲ್ಪ ಕೆಳಕ್ಕೆ ಇಳಿಯಬಹುದು. ಆಮೇಲೆ ಅಕ್ಕಪಕ್ಕದ ನದಿಯ ಎರಡೂ ತೀರದಲ್ಲೂ ಕಾಲ್ದಾರಿಗುಂಟ ನಡೆಯಲು ಪ್ರಯತ್ನಿಸಬಹುದು. ಆದರೆ ಕೊರಕಲ ಏರಿಳಿತ ಒಮ್ಮೆ ಯೋಚಿಸುವಂತೆ ಮಾಡುವುದು ಸುಳ್ಳಲ್ಲ.
ಮೂಲತಃ ಅರುಣಾಚಲ ಪ್ರದೇಶದ ಪ್ರಮುಖ ಬುಡಕಟ್ಟುಗಳಾದ ನ್ಯಾಯಿಶಿ, ಗಾಲೋ ಮತ್ತು ಪೊರೋಕಿಗಳು ಆವರಿಸಿಕೊಂಡಿರುವ ಈ ಮೂರು ಕಣಿವೆಗಳ ಸ್ಥಳ ಸುಮಾರು ಇತ್ತೀಚಿನವರೆಗೂ ತೆರೆದುಕೊಂಡಿದ್ದೇ ಕಡಿಮೆ. ಅದರಲ್ಲೂ ಹವ್ಯಾಸಿ ಮತ್ತು ಆಫ್ಬೀಟ್ ಪ್ರವಾಸಿಗಳ ಹೊರತಾಗಿ ಈ ಮೂರು ಕಣಿವೆಯ ನೆತ್ತಿಗೆ ನಿಲ್ಲುವ ರಸ್ತೆ ಹುಡುಕಿ ಬಂದವರೂ ಕಡಿಮೆ. ಕಾರಣ ಬುಡಕಟ್ಟುಗಳ ನೀತಿ ಮತ್ತು ಸ್ಥಳೀಯ ಆಡಳಿತ ಅಷ್ಟಾಗಿ ಈ ಕಡೆಗೆ ಗಮನ ಹರಿಸದ್ದರಿಂದ ಪ್ರವಾಸೋದ್ಯಮದಲ್ಲೂ ಗುರುತಿಸಿಕೊಳ್ಳದ ತಾಣವಾಗಿತ್ತು. ಆದರೆ ಯಾವಾಗ ಸಾಮಾಜಿಕ ಜಾಲತಾಣಕ್ಕೆ ಇದು ತೆರೆದುಕೊಂಡಿತೋ ಇದ್ದಕ್ಕಿಂದ್ದಂತೆ, ಪಕ್ಕೆ, ಪಪ್ಪು ಮತ್ತು ಪಾಸ್ಸಾ ಎಂಬ ಮೂರು ಕಣಿವೆಗಳ ಚೆಂದದ ಸ್ಥಳ ಅನಾವರಣಗೊಂಡಿತು. ಆಗ ಕಾಲಿಡತೊಡಗಿದ ಪ್ರವಾಸಿಗರು ಕ್ರಮೇಣ ಸ್ಥಳೀಯರ ವಿಶ್ವಾಸ ಸಂಪಾದಿಸಿದರೆ, ಸ್ಥಳೀಯ ಆಡಳಿತ ಕೂಡ ಇದು ಆದಿವಾಸಿಗಳ ಆದಾಯಕ್ಕೂ ಅನುಕೂಲ ಎಂದು ಕೂಡಲೇ ಪ್ರವಾಸಿಸ್ನೇಹಿ ಪ್ರದೇಶವನ್ನಾಗಿಸತೊಡಗಿತು.
ಇದ್ದುದರಲ್ಲೇ ಊಟೋಪಚಾರ ಒದಗಿಸುವ ಹೋಮ್್ಟೆಗಳ ಮಾದರಿಗಳು ತಲೆ ಎತ್ತತೊಡಗಿದರೆ, ಸ್ಥಳೀಯರು ರಸ್ತೆ ಮತ್ತು ಪ್ರವಾಸದ ಅನುಕೂಲಕ್ಕೆ ತಕ್ಕ ಜೀಪು, ಕಾರುಗಳ ಪೂರೈಕೆಗೆ ತೊಡಗಿದರು. ಚಹಾ, ಕಾಫಿ ಮತ್ತು ಅದರಲ್ಲೂ ಈಶಾನ್ಯದ ಕಡುಕಪ್ಪು ಚಹಾದ ಅಂಗಡಿಗೆ ಇನ್ನಿಲ್ಲದ ಬೇಡಿಕೆ ಕುದುರತೊಡಗಿತು. ಅದಕ್ಕೆ ಸರಿಯಾಗಿ ವಾರಕ್ಕೊಮ್ಮೆ ಬರುತ್ತಿದ್ದ ಸಾಮಾನು ಪೂರೈಸುವ ಟ್ರಕ್ಕು ಈಗ ದಿನಕ್ಕೊಮ್ಮೆಯಾದರೂ ಮೇಲೇರಿ ಬರತೊಡಗಿತು. ಅಲ್ಲಿಗೆ ಪಕ್ಕೆ ಮತ್ತು ಪಪ್ಪುಗಳ ಅದೃಷ್ಟ ಖುಲಾಯಿಸಿತು. ಮೂರು ಕಣಿವೆಗಳ ಆರಂಭದ ಪಾಯಿಂಟು, ವ್ಯೂ ಪಾಯಿಂಟ್ ಆಗಿ ತೆರೆದುಕೊಂಡಿತು.
ತಿಳಿನೀರ ನದಿಯ ಕಣಿವೆಯ ಸಂದಿಗೆ ಇಳಿದು ಮಾಡಿದ ಭತ್ತದ ಗದ್ದೆಗಳ ಬದುಗಳನ್ನು ಆವರಿಸಿ ದೂರದ ಆಳಕ್ಕೆ ಚಾಚಿಕೊಂಡಿರುವ ಕಣಿವೆ ಸೌಂದರ್ಯ ನೋಡಲು ಎರಡೂ ಹೊತ್ತನ್ನು ಆಯ್ಕೆ ಮಾಡಿಕೊಳ್ಳಬೇಕು. ಕಾರಣ ಬೆಳಗಿನ ಸೂರ್ಯಕಿರಣದ ಮೂಲಕ ಬೆಳಕು ಪ್ರವೇಶಿಸುವಾಗ ಒಂದು ರೀತಿಯಲ್ಲಿ ದೃಶ್ಯಾವಳಿ ಆವರಿಸಿಕೊಂಡಿದ್ದರೆ, ಸಂಜೆಯ ಪ್ರಖರ ಕೆಂಪಿನಲ್ಲಿ ಕ್ರಮೇಣ ಕತ್ತಲಿಗೆ ಜಾರುವ ಕಣಿವೆಯ ಚೆಂದವೇ ಬೇರೆ. ಹಾಗಾಗಿ ಸಮಯದ ಮಿತಿ ಇರಿಸಿಕೊಳ್ಳದ ಮತ್ತು ಹಠಾತ್ತಾಗಿ ಬಂದು ಹೋಗುತ್ತೇನೆ ಎನ್ನುವ ಪ್ರವಾಸಿಗರಿಗಲ್ಲವೇ ಅಲ್ಲ ಇದು. ಅದರಲ್ಲೂ ಲುಮ್ಡಾಂಗ್ನ ಪಸ್ಸಾ ವ್ಯಾಲಿ ಹಲವು ಚಿತ್ರ, ವಿಚಿತ್ರದ ಹಕ್ಕಿಗಳಿಗೆ ಆಶ್ರಯತಾಣವಾಗಿದ್ದು, ವಲಸೆ ಬರುವ ಪ್ರಸಿದ್ಧ ಹಕ್ಕಿತಾಣವೂ ಹೌದು. ಹೆಚ್ಚಿನ ಮಾನವ ಪ್ರವೇಶ ಇಲ್ಲದ ನೀರಿನ ಆಶ್ರಯದ ಪಸ್ಸಾ ವ್ಯಾಲಿ ಅಪ್ಪಟ ಹಸಿರಿನ ತಾಣ. ಹಾಗಾಗಿ ಇಲ್ಲಿ ಕಣಿವೆ ಮಾತ್ರವಲ್ಲ ಹವ್ಯಾಸಿ ಹಕ್ಕಿ ವೀಕ್ಷಕರ ಸ್ವರ್ಗವೂ ಹೌದು.
ಗುವಾಹಾಟಿ ಏರ್ಪೋರ್ಟ್ನಿಂದ ಶೇಪ್ಪಾವರೆಗೆ ಜೀಪು ರಸ್ತೆ ಮತ್ತು ನಿಧಾನ ಪಯಣ ಅನಿವಾರ್ಯತೆ ಇದ್ದರೂ ಈಗೀಗ ಗಾಡಿಗಳು ಸುಲಭಕ್ಕೆ ಲಭ್ಯವಾಗತೊಡಗಿವೆ. ಇಲ್ಲ ಪೂರ್ತಿ ರಸ್ತೆ ಮೂಲಕ ಬರುವುದಾದರೆ ಇಟಾನಗರದಿಂದ ಶೇಪ್ಪಾ ತಲುಪುವುದು. ಒಮ್ಮೆ ಶೇಪ್ಪಾ ತಲುಪಿದರೆ, ಅಲ್ಲಿಂದ ಇನ್ನೂ ಇಪ್ಪತ್ತು ಕಿ.ಮೀ. ರಸ್ತೆ ಪಪ್ಪು ವ್ಯಾಲಿಯ ತುದಿಗೆ ನಿಲ್ಲಿಸಬಲ್ಲದು. ಅಲ್ಲಿಂದ ಮುಂದಕ್ಕೆ ಪಕ್ಕೆ-ಕೆಸಾಂಗ್ನ ದಾರಿ ಹಿಡಿದರೆ ಉಳಿದೆರಡು ಕಣಿವೆ ಪ್ರದೇಶಕ್ಕೆ ಸಾಗುವ ಎತ್ತರದ ಹಾದಿ ಸುಲಭ. ಬಾಕಿ ಎಲ್ಲ ವ್ಯವಸ್ಥೆಗೆ ಇದ್ದುದರಲ್ಲಿ ದೊಡ್ಡ ಊರಾದ ಶೆಪ್ಪಾ ಎಲ್ಲರ ಅಗತ್ಯ ಪೂರೈಸುತ್ತಿದೆ. ಪಸ್ಸಾ ವ್ಯಾಲಿ (ರಿಲ್ಲೋ ಬ್ಲಾಕ್) ಕೊನೆಯ ತಿರುವಿನಲ್ಲಿದ್ದರೆ, ಮೊದಲಿನ ಪಪ್ಪು ವ್ಯಾಲಿ ಅಗಲ ಉದ್ದ ಎರಡರಲ್ಲೂ ದೊಡ್ಡದು.
ಹೀಗೆ ಹೇಳಿದರೆ ಇವೆಲ್ಲ ಅಕ್ಕಪಕ್ಕ ಇದ್ದಾವೇನೋ ಎನ್ನಿಸಿ ಬಿಡುತ್ತದೆ. ಆದರೆ ಅದೆಷ್ಟು ಅಗಾಧ ಕಣಿವೆ ಎಂದರೆ ತಿರುವು ಆರಂಭಿಸಿ ಹೊರಟರೆ, ಪಪ್ಪು ವ್ಯಾಲಿ (ಲುಂಬ್ಡಾಂಗ್) ಶೆಪ್ಪಾ ಬ್ಲಾಕ್ನ ವಿಳಾಸದಲ್ಲಿದ್ದರೆ, ಅಲ್ಲಿಂದ ಪಕ್ಕೆ-ಕೆಸಾಂಗ್ ಬ್ಲಾಕ್ ಉಳಿದೆರಡಕ್ಕೆ ದಾರಿ. ಅದರಲ್ಲಿ ಮೊದಲನೆಯ ಪಪ್ಪು ಈಗಾಗಲೇ ಕ್ರಮಿಸಿರುವ ಶೆಪ್ಪಾದಿಂದ ಇಪ್ಪತ್ತು ಕಿ.ಮೀ. ಇದ್ದರೆ, ಪಸ್ಸಾ (ರಿಲ್ಲೋ ಬ್ಲಾಕ್) ಎಪ್ಪತ್ತೆಂಟು ಕಿ.ಮೀ. ಅದೇ ಕೊನೆಯ ಪಕ್ಕೆ (ಕೆಸಾಂಗ್) ನೂರ ನಲವತ್ತು ಕಿ.ಮೀ. ದೂರ ದಾರಿ. ಅದಕ್ಕೆ ಊರಿನವರು ಏನು ಬೇಕಿದ್ದರೂ ಕೇಳಿ ‘ಹೂಂ...’ ಎಂದುಬಿಡುತ್ತಾರೆ. ಹೇಗೆ ಹೋಗುವುದೆನ್ನುವ ಮಾತು ಬಂದಾಗ ಮಾತ್ರ ಕಣ್ಣು ತಪ್ಪಿಸುತ್ತಾರೆ. ಆದಾಗ್ಯೂ ಇಂಥದ್ದೊಂದು ಹೊರಳು ದಾರಿಯ ಪ್ರವಾಸ ಕೈಗೊಂಡಿದ್ದೇ ಆದರೆ ಉಳಿದ ತಾಣ ಮರೆಯಬಹುದು, ಈ ಪ್ರವಾಸದ ದಾರಿಯೇ ಉಳಿದೆಲ್ಲ ನೆನಪಿಸುತ್ತದೆ.
(ಲೇಖಕರು ಕತೆಗಾರರು