ಅಂಕಣ

ರಾಷ್ಟ್ರವಾದಿಗಳ ಸಂಖ್ಯೆ ದೊಡ್ಡದಿದೆ, ಮೋಸ ಮಾಡೋದು ಸುಲಭವಲ್ಲ!

ಚೀನಾ ಕೈಯಲ್ಲಿ ಚಾಟಿ ಹಿಡಿದು ಸಾಲ ತೀರಿಸಿರೆಂದು ಬೆದರಿಸುತ್ತ ರಾಷ್ಟ್ರ-ರಾಷ್ಟ್ರಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದರೆ ಭಾರತ ಸಾಫ್ಟ್​ಪವರ್ ಬಳಸುವ ಮೂಲಕ ಜಗತ್ತಿನ ಆತ್ಮೀಯತೆಯನ್ನು ಗಳಿಸಿಕೊಂಡುಬಿಟ್ಟಿತು. ಇದು ಭಾರತೀಯ ಪರಂಪರೆ ಮತ್ತು ಘನತೆಗೆ ತಕ್ಕುದಾದುದೇ ಆಗಿತ್ತು. ಭಾರತವನ್ನು ಜಗತ್ತು ಗೌರವದ ಕಂಗಳಿಂದ ನೋಡುತ್ತಿದ್ದುದು ಈ ಕಾರಣಕ್ಕೇ.

ಕರೊನಾ ನೆಪವಾಗಿಟ್ಟುಕೊಂಡು ರಾಷ್ಟ್ರದ ಘನತೆಗೆ ಚ್ಯುತಿ ತರುವಂಥ ಪ್ರಯತ್ನಗಳು ನಡೆಯುತ್ತಲೇ ಇವೆ. ಕಾಂಗ್ರೆಸ್​ನ ಟೂಲ್ಕಿಟ್ ಆಸ್ಪೋಟನೆಯ ಬಳಿಕ ದೇಶದಲ್ಲಿ ಪ್ರತಿಯೊಬ್ಬರೂ ಗಾಬರಿಯಾಗುವಂತಾಗಿದೆ. ಕಾಂಗ್ರೆಸ್ಸಿನಿಂದ ಇದಕ್ಕಿಂತಲೂ ಒಳಿತನ್ನು ನಿರೀಕ್ಷಿಸುವುದು ಅಸಾಧ್ಯವೇ ಆಗಿತ್ತು. ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಪಕ್ಷವೆಂದು ಅದು ಹೇಳಿಕೊಂಡು ತಿರುಗಾಡುತ್ತಿತ್ತು. ಇಂದು ಅದೇ ದೇಶದ ಘನತೆ-ಗೌರವಗಳನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಲು ನಿಂತಿರುವುದು ದುರದೃಷ್ಟವೇ ಸರಿ.

ಕರೊನಾ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ಹೀಗೆ ಜನ ಸಾಯುವುದನ್ನು ತಮ್ಮ ಲಾಭಕ್ಕಾಗಿ ಕೆಲವರು ಬಳಸಿಕೊಳ್ಳುತ್ತಿರುವುದನ್ನು ಕಂಡಾಗ ನಿಜಕ್ಕೂ ದುಃಖವೆನಿಸುತ್ತದೆ. ಪುರೂರವನಿಗೆ ದ್ರೋಹ ಬಗೆದ ಅಂಭಿ, ಪೃಥ್ವಿರಾಜನ ಬೆನ್ನಿಗೆ ಚೂರಿ ಇರಿದ ಜಯಚಂದ, ಕಿತ್ತೂರಿನ ಚೆನ್ನಮ್ಮನಿಗೆ ಮೋಸ ಮಾಡಿದ ಮಲ್ಲಪ್ಪಶೆಟ್ಟಿ-ವೆಂಕಟರಾಯರು, ಚಂದ್ರಶೇಖರ್ ಆಜಾದನ ಇರುವನ್ನು ಪೊಲೀಸರಿಗೆ ತಿಳಿಸಿದ ವೀರಭದ್ರ ತಿವಾರಿ ಇವರೆಲ್ಲರನ್ನೂ ಎಲ್ಲೋ ಹುಡುಕಿಕೊಂಡು ಹೋಗಬೇಕಿಲ್ಲ. ಸುತ್ತಮುತ್ತಲೂ ಧಾರಾಳವಾಗಿ ಹರಿದು ಹಂಚಿ ಹೋಗಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮಾಡಿದ ಸಾಧನೆಯನ್ನೆಲ್ಲ ಮಣ್ಣುಗೂಡಿಸುವ ಪ್ರಯತ್ನ ಇವರದ್ದು!

ಹಾಗೆ ಸುಮ್ಮನೆ ಘಟನಾವಳಿಗಳನ್ನು ಅವಲೋಕಿಸಿ. ಕರೊನಾದ ಮೊದಲನೇ ಅಲೆ ಭಾರತವನ್ನು ಆವರಿಸಿದಾಗ ನಮ್ಮಲ್ಲಿ ಕರೊನಾ ಎದುರಿಸುವ ಔಷಧ ಇರಲಿ ಅದನ್ನು ಸಂಭಾಳಿಸಲು ಬೇಕಾದ ಪಿಪಿಇ ಕಿಟ್​ಗಳೂ ಇರಲಿಲ್ಲ. ಅದು ಸಾಂಕ್ರಾಮಿಕವೊಂದು ಅಳತೆ ಮೀರಿ ಹಬ್ಬಿದಾಗ ಆಗುವ ಸಹಜ ಸಮಸ್ಯೆಗಳಂತೆಯೇ. ಭಾರತ ಹಠಕ್ಕೆ ಬಿದ್ದು ಪಿಪಿಇ ಕಿಟ್​ಗಳ ನಿರ್ವಣಕ್ಕೆ ತೊಡಗಿತು. ಕೇಂದ್ರ ಸರ್ಕಾರದ ಜವಳಿ ಇಲಾಖೆ ಬೇಕಾದ ಎಲ್ಲ ಸಹಾಯವನ್ನೂ ನೀಡಿದರ ಪರಿಣಾಮ ಕೊನೆಗೂ ನಾವು ಪಿಪಿಇ ಕಿಟ್​ಗಳಲ್ಲಿ ಆತ್ಮನಿರ್ಭರವಾದದ್ದಲ್ಲದೆ ಅದನ್ನು ಜಗತ್ತಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ಬೆಳೆದುಬಿಟ್ಟೆವು. ನಮಗೆದುರಾದ ಸವಾಲನ್ನು ಸ್ವೀಕರಿಸಿ ಅದನ್ನು ಪೂರಕವಾಗುವಂತೆ ಮಾರ್ಪಡಿಸಿಕೊಳ್ಳುವಲ್ಲಿ ನಮ್ಮ ಸಾಮರ್ಥ್ಯ ಅದಮ್ಯವಾದದ್ದು. ಅದರಲ್ಲೂ ಮೋದಿಯವರಂತೂ ಎಸೆದ ಕಲ್ಲುಗಳನ್ನೇ ಮನೆಯಾಗಿಸಿಕೊಳ್ಳಬಲ್ಲವರು. ಅಂಥದ್ದರಲ್ಲಿ ಈ ಬಗೆಯ ಸವಾಲನ್ನು ಬಿಡುವರೇನು? ಸರಿಯಾದ ಸಮಯಕ್ಕೆ ಸರಿಯಾದ ಉತ್ತರವನ್ನು ಕೊಡುವ ಗುಣವಿರುವ ಮೋದಿ ಇವೆಲ್ಲಕ್ಕೂ ಕಾರಣವಾದ ಚೀನಾಕ್ಕೆ ಸರಿಯಾದ ಹೊಡೆತವನ್ನೇ ಕೊಟ್ಟರು. ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನೀ ಸೈನಿಕರ ಮೇಲೆ ಮಾಡಿದ ದಾಳಿಯ ಪರಿ ಇಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ಚೀನಾ ಆರಂಭದಲ್ಲಿ ತನ್ನವರ್ಯಾರೂ ಸತ್ತಿಲ್ಲವೆಂದು ಸಾಧಿಸಿತಾದರೂ ಮುಂದಿನ ಕೆಲವು ತಿಂಗಳುಗಳ ನಂತರ ‘ನಾಲ್ಕು ಜನ ಮಾತ್ರ ಸತ್ತರು’ ಎಂದು ಹೇಳಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿತು.

1962ರಲ್ಲಿ ಭಾರತವನ್ನು ಸೋಲಿಸಿದ ಕಥೆಯನ್ನೇ ಹೇಳಿಕೊಂಡು ತಿರುಗಾಡುತ್ತಿದ್ದ ಈ ರಾಷ್ಟ್ರಕ್ಕೆ ಈ ಹೊಡೆತ ಜೀರ್ಣಿಸಿಕೊಳ್ಳಲಾರದ್ದಾಗಿತ್ತು. ನಮ್ಮ ನೆರೆಯ ರಾಷ್ಟ್ರಗಳಲ್ಲಿ ಭಾರತದ ಕುರಿತಂತೆ ಗೌರವವನ್ನು ಹುಟ್ಟಿಸಲು ಇದು ಬೆಟ್ಟದಷ್ಟಾಗಿತ್ತು. ಚೀನಾದ ನಿಜವಾದ ಕೊರತೆ ಗಲ್ವಾನ್​ನಲ್ಲಿಯೇ ಬೆಳಕಿಗೆ ಬಂದಿತ್ತು. ಬಹುಶಃ ಇದರ ಪರಿಣಾಮವಿದ್ದಿರಲೂ ಸಾಕು. ಇತ್ತೀಚೆಗೆ ಬಾಂಗ್ಲಾದೇಶ ಅಮೆರಿಕದೊಂದಿಗೆ ಹೊಂದುತ್ತಿರುವ ಸುಮಧುರ ಬಾಂಧವ್ಯದ ಕುರಿತಂತೆ ಚೀನಾ ತಗಾದೆ ಎತ್ತಿದಾಗ ಬಾಂಗ್ಲಾ ‘ನಮ್ಮ ವಿದೇಶಾಂಗ ನೀತಿ ನಮಗೆ ಸೇರಿದ್ದು; ನೀವು ತಲೆ ಹಾಕುವ ಅಗತ್ಯವಿಲ್ಲ’ ಎಂದು ಖಡಕ್ಕಾಗಿಯೇ ಉತ್ತರಿಸಿತು. ಇಂಡೋ-ಪೆಸಿಫಿಕ್ ಭಾಗದಲ್ಲಿ ಹೆಸರೂ ಕೇಳಿರದಿದ್ದ ಸಣ್ಣ-ಪುಟ್ಟ ರಾಷ್ಟ್ರಗಳು ಈಗ ಚೀನಾಕ್ಕೆ ಸೆಡ್ಡು ಹೊಡೆಯುತ್ತಿವೆ. ಈ ವಾತಾವರಣ ರೂಪಿಸುವಲ್ಲಿ ಭಾರತದ ಪಾತ್ರ ಬಲುದೊಡ್ಡದ್ದು. ಆಸ್ಟ್ರೇಲಿಯಾ, ಜಪಾನ್​ಗಳೊಂದಿಗೆ ಸೇರಿಕೊಂಡು ಭಾರತ ರೂಪಿಸುತ್ತಿರುವ ವ್ಯೂಹ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಸ್ವಲ್ಪ ಆಸಕ್ತಿ ಇದ್ದವನಿಗೂ ಎದ್ದು ಕಾಣುವಂಥದ್ದೇ. ಯುರೋಪಿನ ಬಹುತೇಕ ರಾಷ್ಟ್ರಗಳು, ಆಫ್ರಿಕಾಗಳು ಈ ವ್ಯೂಹದ ಭಾಗೀದಾರರೆಂಬ ಅನುಮಾನ ಇಂದು ಎಲ್ಲರಿಗೂ ಬಂದಿದೆ. ಮೋದಿ ಆತ್ಮನಿರ್ಭರದ ನೆಪದಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಿದಾಗ, ಹುವೈಯನ್ನು ಭಾರತದ ವಹಿವಾಟಿನಿಂದ ದೂರವಿಟ್ಟಾಗ ಜಗತ್ತಿಗೆಲ್ಲ ಅಚ್ಚರಿಯಾಗಿತ್ತು. ಆದರೆ ಭಾರತ ತೆಗೆದುಕೊಂಡ ಈ ನಿರ್ಣಯದಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಚೀನಾದ ವಿರುದ್ಧ ಮಾತನಾಡುವ ಧೈರ್ಯ ಬಂದಿದ್ದಂತೂ ನಿಜ. ಚೀನಾದ ಮೇಲೆ ಆಕ್ರೋಶಗೊಂಡಿದ್ದ ರಾಷ್ಟ್ರಗಳಿಗೆ ಭಾರತ ಕೊಡುಗೈ ದಾನಿಯಾಗಿ ವ್ಯಾಕ್ಸಿನ್ ಮೈತ್ರಿಯ ಮೂಲಕ ಕಂಡುಬಂತು. ಜಗತ್ತಿನ 90ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತ ವ್ಯಾಕ್ಸಿನ್ ತಲುಪಿಸುವ ಮೂಲಕ ವಿಕ್ರಮವನ್ನು ಮೆರೆಯಿತು. ಇದು ಬರೀ ವ್ಯಾಕ್ಸಿನ್ ನೀಡಿಕೆಯಷ್ಟೇ ಆಗಿರಲಿಲ್ಲ. ಜಗತ್ತಿಗೆ ಬೇಕಾಗುವಷ್ಟು ಔಷಧ ಉತ್ಪಾದಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂದು ಅಂತಾರಾಷ್ಟ್ರೀಯ ವಲಯಕ್ಕೆ ತೋರಿಸುವ ಪ್ರಕ್ರಿಯೆ.

ಪಿಪಿಇ ಕಿಟ್​ಗಳಲ್ಲಿ, ವೆಂಟಿಲೇಟರ್​ಗಳ ನಿರ್ವಣದಲ್ಲಿ ತನ್ನ ಸಾಮರ್ಥ್ಯ ತೋರಿದ್ದ ಭಾರತ ಈಗ ವ್ಯಾಕ್ಸಿನ್ ಪೂರೈಕೆಯಲ್ಲೂ ಅಗ್ರಣಿಯಾಗಿತ್ತು. ಚೀನಾ ಕೈಯಲ್ಲಿ ಚಾಟಿ ಹಿಡಿದು ಸಾಲ ತೀರಿಸಿರೆಂದು ಬೆದರಿಸುತ್ತ ರಾಷ್ಟ್ರ-ರಾಷ್ಟ್ರಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದರೆ ಭಾರತ ಸಾಫ್ಟ್​ಪವರ್ ಬಳಸುವ ಮೂಲಕ ಜಗತ್ತಿನ ಆತ್ಮೀಯತೆಯನ್ನು ಗಳಿಸಿಕೊಂಡುಬಿಟ್ಟಿತು. ಇದು ಭಾರತೀಯ ಪರಂಪರೆ ಮತ್ತು ಘನತೆಗೆ ತಕ್ಕುದಾದುದೇ ಆಗಿತ್ತು. ಭಾರತವನ್ನು ಜಗತ್ತು ಗೌರವದ ಕಂಗಳಿಂದ ನೋಡುತ್ತಿದ್ದುದು ಈ ಕಾರಣಕ್ಕೇ. ಏಕೆಂದರೆ ಆ ವೇಳೆಗಾಗಲೇ ಅಮೆರಿಕ, ಯುರೋಪುಗಳು ತಮಗೆ ವ್ಯಾಕ್ಸಿನ್ ಬೇಕು ಎಂದು ಜಗತ್ತಿನಿಂದ ಖರೀದಿಸುತ್ತಿದ್ದವು. ಭಾರತ ತನಗೂ ಉಳಿಸಿಕೊಂಡು ಇತರರಿಗೂ ಹಂಚುವ ರಾಷ್ಟ್ರವಾಗಿ ಬೆಳೆದಿತ್ತು. ಆನಂತರವೇ ನಮ್ಮ ಮೇಲೆ ಅಮರಿಕೊಂಡಿದ್ದು ಕರೊನಾದ ಎರಡನೇ ಅಲೆ.

ತೀರಾ ಇತ್ತೀಚೆಗೆ ಹಿರಿಯ ವಿಜ್ಞಾನಿ ಶಹೀದ್ ಜಮೀಲ್ ಕೋವಿಡ್​ನ ವಿಶೇಷ ವೈಜ್ಞಾನಿಕ ಸಮಿತಿಯ ಅಧ್ಯಕ್ಷಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದರಲ್ಲ, ಅವರು ಕೂಡ ಎರಡನೇ ಅಲೆ ಭಾರತವನ್ನು ಬಾಧಿಸುವುದಿಲ್ಲ ಎಂದೇ ಹೇಳಿದ್ದರು. ಅಂದರೆ, ಪ್ರಧಾನಮಂತ್ರಿ ಯಾರ ಸಲಹೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಬೇಕೋ ಅವರೆಲ್ಲರೂ ಎರಡನೇ ಅಲೆಯ ಬಗ್ಗೆ ಬೇರೆಯದ್ದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆಗೆಲ್ಲ ರೈತರ ಹೆಸರಿನಲ್ಲಿ ಒಂದಿಷ್ಟು ಜನರು ದೊಡ್ಡ ಸಮೂಹದ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವಿವರವನ್ನೇ ಮರೆತುಹೋಗಿದ್ದರು. ಏಕೆಂದರೆ ಇಂದು ಬರುತ್ತಿರುವ ಎಲ್ಲ ವರದಿಗಳ ಆಧಾರದ ಮೇಲೆ ಹೇಳುವುದಾದರೆ ಭಾರತವನ್ನು ಆಕ್ರಮಿಸಿಕೊಂಡಿರುವ ಈ ಎರಡನೇ ಅಲೆ ಉಗಮಗೊಂಡಿದ್ದು ಈ ರೈತರ ಹೋರಾಟದ ಸ್ಥಳದಲ್ಲಿಯೇ. ಎಲ್ಲಿಂದ ಬಂದರೇನು ಕರೊನಾ ಮುಲಾಜಿಲ್ಲದೇ ಹಬ್ಬಿತು, ಏಕಾಕಿ ಜನರನ್ನು ಬಲಿ ತೆಗೆದುಕೊಳ್ಳಲಾರಂಭಿಸಿತು.

ಅಚ್ಚರಿಯೇನು ಗೊತ್ತೇ? ಈಗ ಇಷ್ಟೆಲ್ಲ ಆಕ್ರೋಶ ಪ್ರದರ್ಶಿಸುತ್ತಿರುವ ವಿರೋಧ ಪಕ್ಷಗಳಲ್ಲಿ ಒಂದಾದರೂ ಎರಡನೇ ಅಲೆಯ ಕುರಿತಂತೆ ಮಾತೇ ಆಡಿರಲಿಲ್ಲ. ಎರಡನೇ ಅಲೆಯ ವೇಳೆಗೆ ಆಕ್ಸಿಜನ್ ಹೆಚ್ಚಾಗಿ ಬೇಕಾಗಬಹುದೆಂಬ ಕಲ್ಪನೆ ವಿರೋಧ ಪಕ್ಷದವರಿಗೆ ಬಿಡಿ, ಸ್ವತಃ ವೈದ್ಯ ವಿಜ್ಞಾನಿಗಳಿಗೂ ಇರಲಿಲ್ಲ. ಆದರೆ ಭಾರತ ಬಲುಬೇಗ ತನ್ನ ತಾನು ಸಂಭಾಳಿಸಿಕೊಂಡಿತು. ಜಾಗೃತವಾಗಿ ಸಾವರಿಸಿಕೊಂಡು ಎದ್ದುನಿಂತಿತು. ಮುಂದಿನ 20-25 ದಿನಗಳೊಳಗೆ ದೇಶದ ಸಮರ್ಥ ಅಧಿಕಾರಿಗಳು, ಆಡಳಿತಗಾರರು ಸೇರಿಕೊಂಡು ಬದಲಾವಣೆಯ ಬಲುದೊಡ್ಡ ಪರ್ವಕ್ಕೆ ನಾಂದಿ ಹಾಡಿದರು. ಆರಂಭಿಕ ಹೊಡೆತದ ಕಾರಣದಿಂದಾಗಿ ಉಂಟಾದ ಸಾವು-ನೋವನ್ನು ತಪ್ಪಿಸಲಾಗಲಿಲ್ಲ ನಿಜ, ಆದರೆ ಭಾರತ ಬಲುಬೇಗ ಸಾವರಿಸಿಕೊಂಡು ನಿಂತಿತು. ಜಗತ್ತಿನ ಮುಂದುವರಿದ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ಅನೇಕ ರಾಷ್ಟ್ರಗಳು ಇಂದು ಬಲವಾಗಿ ನಿಲ್ಲಲು ನಡುಗುತ್ತಿದ್ದರೆ ಭಾರತ ಅದಾಗಲೇ ಮತ್ತೊಮ್ಮೆ ಎದ್ದುನಿಲ್ಲುವ ಶಕ್ತಿಯನ್ನು ತೋರಿಸುತ್ತಿದೆ. ಆದರೆ ಈ ಹೊತ್ತಿನಲ್ಲಿ ವಿರೋಧ ಪಕ್ಷಗಳು ನಡೆದುಕೊಂಡ ರೀತಿ ಮಾತ್ರ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗುತ್ತದೆ. ಇಸ್ರೇಲ್​ನಲ್ಲಿ ಆಡಳಿತ ಮತ್ತು ವಿರೋಧಪಕ್ಷದ ನಡುವೆ ಸಾಕಷ್ಟು ತಿಕ್ಕಾಟವಿದೆ. ನೆತನ್ಯಾಹು ಸರ್ಕಾರ ಅಲ್ಪಮತದ ಜೀವಜಲದ ಮೇಲೇ ಬದುಕಿರೋದು. ಈ ಬಾರಿ ನೆತನ್ಯಾಹು ಚುನಾವಣೆಗೆ ಹೋದರೆ ಗೆಲ್ಲುವುದು ಕಷ್ಟ ಎಂದೂ ಹೇಳುತ್ತಾರೆ. ಆದರೆ ಅವರು ಗಾಜಾ ಮೇಲೆ ದಾಳಿ ನಡೆಸಿದಾಗ ಅಲ್ಲಿನ ವಿರೋಧಪಕ್ಷದವರು ಏನಂದರು ಗೊತ್ತೇ? ‘ಎಡ-ಬಲ, ಆಡಳಿತ-ಪ್ರತಿಪಕ್ಷ ಎಲ್ಲವೂ ಪಕ್ಕಕ್ಕಿರಲಿ. ರಾಷ್ಟ್ರದ ಹಿತವಷ್ಟೇ ನಮಗೆ ಮುಖ್ಯ. ಇಸ್ರೇಲಿ ಪ್ರಜೆಗಳ ರಕ್ಷಣೆಗೆ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳನ್ನೂ ಪ್ರತಿಪಕ್ಷ ಬೆಂಬಲಿಸುತ್ತದೆ’ ಅಂತ. ನಮ್ಮಲ್ಲಿ ಜನರ ಸಾವಿನ ಮೇಲೂ ಕಾಂಗ್ರೆಸ್ಸು ರಾಜಕೀಯ ಮಾಡಿತು. ಎರಡನೇ ಅಲೆಗೆ ಕುಂಭಮೇಳವೇ ಕಾರಣ ಎಂಬ ಸುಳ್ಳು ಹಬ್ಬಿಸುವ ಮೂಲಕ ಹಿಂದೂಗಳನ್ನು ಅವಮಾನಿತಗೊಳಿಸುವ ಪ್ರಯತ್ನ ಮಾಡಲಾಯ್ತು. ಇದೇ ಕಾಂಗ್ರೆಸ್ಸು ಮೊದಲನೆಯ ಅಲೆಯ ವೇಳೆಗೆ ಊರೂರಲ್ಲೂ ಸಾಮೂಹಿಕ ನಮಾಜ್ ಮಾಡಹೊರಟಿದ್ದ ತಬ್ಲೀಘಿಗಳ ಪರವಾಗಿ ನಿಂತಿತ್ತು ಎಂಬುದನ್ನು ನೆನಪಿಟ್ಟುಕೊಳ್ಳಿ!

ತುಂಬ ಹೀನವಾದ ಸಂಗತಿ ಏನು ಗೊತ್ತೇ? ಇಡಿಯ ವೈರಸ್ಸು ಹುಟ್ಟಿದ್ದೇ ಚೀನಾದಲ್ಲಿ. ಇದನ್ನು ವಾಸ್ತವವಾಗಿ ಕರೊನಾ ಎನ್ನುವುದಕ್ಕಿಂತ ಚೀನಾ ವೈರಸ್ಸು ಎಂದೇ ಕರೆಯಬೇಕು. ಆದರೆ ಅದಕ್ಕೆ ಧೈರ್ಯ ಸಾಲದೇ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೂ ಇದಕ್ಕೆ ‘ಕರೊನಾ’ ಎಂದು ನಾಮಕರಣ ಮಾಡಿತು. ಇದೇ ವೇಳೆ ಇಂಗ್ಲೆಂಡಿನಿಂದ ಭಾರತಕ್ಕೆ ಬಂದ ಇದರ ಒಂದು ಎಳೆಯನ್ನು ಭಾರತದ ಎಳೆ ಎಂದು ಬಿಂಬಿಸುವ ಪ್ರಯತ್ನವನ್ನು ಕಾಂಗ್ರೆಸ್ಸು ನಿರಂತರವಾಗಿ ಮಾಡಿತು. ಎಲ್ಲಿಯವರೆಗೂ ಎಂದರೆ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ‘ಈ ಎಳೆಗೂ ಭಾರತಕ್ಕೂ ಸಂಬಂಧವಿಲ್ಲ. ಇದನ್ನು ಭಾರತದ ಎಳೆ ಎಂದು ಕರೆಯಬೇಡಿ’ ಎಂದು ಹೇಳುವವರೆಗೆ.

ದ್ವೇಷ ಮೋದಿಯ ಮೇಲಿರಲಿ, ದೇಶದ ಮೇಲಲ್ಲ. ದೆಹಲಿ ಮುಖ್ಯಮಂತ್ರಿ ಅವಿಂದ ಕೇಜ್ರಿವಾಲರಂತೂ, ‘ಸಿಂಗಾಪುರದ ರೂಪಾಂತರಿ ವೈರೆಸ್ ಮೂರನೇ ಅಲೆಯ ವೇಳೆಗೆ ಮಕ್ಕಳಿಗೆ ತೊಂದರೆ ಕೊಡಲಿದೆ’ ಎಂದು ಹೇಳುವ ಮೂಲಕ ಭಾರತ ಮತ್ತು ಸಿಂಗಾಪುರದ ಬಾಂಧವ್ಯವನ್ನೇ ಹಾಳುಗೆಡವುವ ಪ್ರಯತ್ನ ಮಾಡಿದರು. ಸಾಮಾಜಿಕ ಜಾಲತಾಣಗಳ ಮೂಲಕ ಮೋದಿಯನ್ನು,

ಸರ್ಕಾರವನ್ನು ಹೀಗಳೆಯುವ ಭರದಲ್ಲಿ ಈ ದೇಶವನ್ನೇ ಅವಮಾನಿತಗೊಳಿಸಲು ಯತ್ನಿಸಿದ್ದ ಈ ಎಲ್ಲ ಮಂದಿ ಇತಿಹಾಸದ ಕಟಕಟೆಯಲ್ಲಿ ಪ್ರಶ್ನೆಗಂತೂ ಒಳಗಾಗುತ್ತಾರೆ. ಆದರೇನು? ಇಡಿಯ ರಾಷ್ಟ್ರವನ್ನು ಒಂದು ಪಕ್ಷ, ಒಂದು ಕುಟುಂಬಕ್ಕೆ ಸೀಮಿತಗೊಳಿಸುವ ಧಾವಂತದಲ್ಲಿರುವ ಈ ಮಂದಿಗೆ ರಾಷ್ಟ್ರಕ್ಕಿಂತಲೂ ಸ್ವಾರ್ಥವೇ ದೊಡ್ಡದ್ದಾಗಿದೆ!

ವಿಚಾರ ಮೋದಿಯದ್ದೋ ಒಂದು ಪಕ್ಷದ್ದೋ ಅಲ್ಲ. ರಾಷ್ಟ್ರದ ಸಾರ್ವಭೌಮತೆಯದ್ದು, ಅಖಂಡತೆಯದ್ದು. ತೃಣಮೂಲ ಕಾಂಗ್ರೆಸ್ ಬಂಗಾಳದ ಚುನಾವಣೆಯನ್ನು ಗೆಲ್ಲುವುದರೊಂದಿಗೆ ಕೆಟ್ಟದ್ದೊಂದು ಪರಂಪರೆ ಬಲಗೊಂಡಿದೆ. ಮುಸಲ್ಮಾನರು ಪ್ರತ್ಯೇಕತಾವಾದಿಗಳಾಗಿರಲಿ, ಬಾಂಗ್ಲಾದೇಶಿಗರೇ ಆಗಿರಲಿ, ಮತಗಳು ಸಿಗುವುದೆಂದರೆ ಅವರನ್ನು ಓಲೈಸಲು ಸದಾಸಿದ್ಧ ಎಂಬ ರಾಜಕೀಯ ಪಕ್ಷಗಳ ಆಲೋಚನೆಗೆ ಶಕ್ತಿ ಬಂದುಬಿಟ್ಟಿದೆ. ಹೀಗೆ ಹೇಳಲು ಕಾರಣವಿಲ್ಲದಿಲ್ಲ. ಅಲ್ಲಿನ ಮುದಾಬಾದ್ ಜಿಲ್ಲೆಯ ಹಳ್ಳಿಯೊಂದರ ಪಂಚಾಯಿತಿಯ ಉಪಪ್ರಧಾನ ತೃಣಮೂಲ ಕಾಂಗ್ರೆಸ್ಸಿನ ಶಂಶೂಲ್ ಅರ್ಫೀನ್ ಬಾಂಗ್ಲಾದೇಶದಲ್ಲಿರುವ 13 ಮಂದಿಯ ಹೆಸರಿನಲ್ಲಿ ನರೇಗಾ ಜಾಬ್​ಕಾರ್ಡ್​ಗಳನ್ನು ಮಾಡಿಸಿ ಬೇರೆ-ಬೇರೆ ಕೆಲಸವನ್ನು ಕೊಟ್ಟಂತೆ ಮಾಡಿ ಏಳು ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾನೆ. ಅಂದರೆ ಭಾರತದ ಹಣವನ್ನು ನೇರವಾಗಿಯೇ ಪಕ್ಕದ ರಾಷ್ಟ್ರಕ್ಕೆ ಕಳಿಸುವ ಅಯೋಗ್ಯ ಜನ ಇವರೆಲ್ಲ. ಇಂಥವರು ‘ನಮ್ಮ ಮಕ್ಕಳ ವ್ಯಾಕ್ಸಿನ್ ಅನ್ನು ವಿದೇಶಕ್ಕೇಕೆ ಕಳಿಸಿದಿರಿ?’ ಎಂದು ಮೋದಿಯನ್ನು ಪ್ರಶ್ನಿಸುತ್ತಾರೆ.

ಇವರಿಗೆಲ್ಲ ಇರುವುದು ಒಂದೇ ಗುರಿ. ಈ ಬಗೆಯ ಕಿರಿಕಿರಿಗಳ ಮೂಲಕ ಹೇಗೆ ಟ್ರಂಪನ್ನು ಕೆಳಗಿಳಿಸಿದರೋ ಹಾಗೆಯೇ ಮೋದಿಯವರನ್ನು ಕೆಳಗಿಳಿಸಬೇಕು ಅಂತ. ಭಾರತ ಅಮೆರಿಕ ಅಲ್ಲ ಎಂಬುದೊಂದು ನೆನಪಿದ್ದರೆ ಸಾಕು ಅಷ್ಟೇ. ಇಂದಿರಾ ಗಾಂಧಿ ಕಾಲಕ್ಕಿಂತಲೂ ಹೆಚ್ಚು ಜನ ಈಗ ಪ್ರಖರ ರಾಷ್ಟ್ರವಾದಿಗಳಿದ್ದಾರೆ. ಮೋಸಗೊಳಿಸುವುದು ಆಗಿನಷ್ಟು ಸುಲಭವಲ್ಲ. ರಾಷ್ಟ್ರರಕ್ಷಣೆಗಾಗಿ ಹಿಂದೆಂದಿಗಿಂತಲೂ ಜೋರಾದ ಕದನ ನಡೆಯಲಿದೆ. ಜೊತೆಗಿರೋಣ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)