ಕನ್ನಡಿಗರು ದೈನಂದಿನ ಸಂಭಾಷಣೆಯಲ್ಲಿ, ಅನೌಪಚಾರಿಕ ಬರವಣಿಗೆಯಲ್ಲಿ, ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ತುರುಕುವುದಕ್ಕಿಂತ ಕನ್ನಡದ್ದೇ ಪದಗಳನ್ನು ಬಳಸಿದರೆ ಅಲ್ಲೊಂದು ಸಹಜ ಸೌಂದರ್ಯ ಕಣ್ಣುಗಳಿಗೆ ಗೋಚರಿಸುತ್ತದೆ. ಮಾತನಾಡಿದ/ಬರೆದ ವಿಷಯ ಏನೇ ಇದ್ದರೂ ಕನ್ನಡ ಮಣ್ಣಿನ ವಾಸನೆ ಮೂಗಿಗಡರುತ್ತದೆ. ಕಿವಿಗಳಲ್ಲಿ ಕನ್ನಡದಲೆಗಳು ಮೊಳಗುತ್ತವೆ.
‘ಕನ್ನಡ ಶಬ್ದಮೆನಗೋಂಕಾರಮೀಯೆನ್ನ| ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ| ಮಿನ್ನಾವುದೈಪೆರೆತು ಕನ್ನಡದ ಸೇವೆಯಿಂದಧಿಕಮೀಜಗದೊಳೆನಗೆ?’ ಎಂದ ಕನ್ನಡಕವಿ ಸಾಲಿ ರಾಮಚಂದ್ರರಾಯರಿಗಾದಷ್ಟು ಉತ್ಕಟವಾಗಿ ಅಲ್ಲದಿದ್ದರೂ ಅಲ್ಪಸ್ವಲ್ಪ ನಮಗೂ ಅನುಭವಕ್ಕೆ ಬರುತ್ತದೆ.
ಒಂದು ಚಿಕ್ಕ ನಿದರ್ಶನ ಇಲ್ಲಿದೆ. ‘ಅಕ್ಕರೆಯನ್ನು ನನ್ನ ಬಾಯಿಗೆ ಸುರಿಯುತ್ತಿದ್ದ ಗುಳಂಬದ ಆಯಿ’ ಎಂಬ ಶೀರ್ಷಿಕೆಯ ಚಂದದ್ದೊಂದು ಲೇಖನ. ಬರೆದವರು ವಸಂತ ಕುಲಕರ್ಣಿ. ದಶಕಗಳ ಕಾಲ ಸಿಂಗಾಪುರದಲ್ಲಿ ವೃತ್ತಿಜೀವನ ನಡೆಸಿ, ಈಗ ಚೆನ್ನೈ ನಿವಾಸಿ. ಸಾಲಿ ರಾಮಚಂದ್ರರಾಯರಂತೆಯೇ ಮೂಲತಃ ಬೆಳಗಾವಿ ಜಿಲ್ಲೆಯವರು. ಇದನ್ನವರು ಬರೆದಿದ್ದು ಆರೇಳು ವರ್ಷಗಳ ಹಿಂದೆ ಅಂತರಜಾಲ ಪತ್ರಿಕೆಯೊಂದರಲ್ಲಿ, ಬಾಲ್ಯದ ನೆನಪುಗಳ ಭಾವಲಹರಿಯಾಗಿ. ಆದರೆ ಇಂದಿನ ನಮ್ಮ ಪದವಿಶ್ಲೇಷಣೆಗೆ ಪೂರಕವಾಗಿದೆಯೆಂಬ ಕಾರಣಕ್ಕೆ ಚಿಕ್ಕ ಭಾಗವೊಂದನ್ನು ಇಲ್ಲಿ ಆಯ್ದುಕೊಂಡಿದ್ದೇನೆ.
‘ಗುಳಂಬ ಎಂದರೆ ಬಾಯಲ್ಲಿ ನೀರೂರುವುದು ಸಾಮಾನ್ಯ. ಗುಳಂಬವು ಜಾಮ್ ಎಂಬ ನಾಮ ಧರಿಸಿ ಹೊಸಹೊಸ ರೂಪಗಳಿಂದ ಬಣ್ಣಬಣ್ಣದ ಗಾಜಿನ ಬಾಟಲಿಗಳಲ್ಲಿ ನಿಂತು ಈಗಿನ ಬಾಲರ ಜಗತ್ತನ್ನು ಆಳುತ್ತಿದೆಯಾದರೂ, ನನಗೆ ನನ್ನ ಚಿಕ್ಕಂದಿನ ಗುಳಂಬವೇ ವಿಶೇಷ ಪ್ರೀತಿ. ಈಗಿನ ಜಾಮ್ ಬೇರೆಬೇರೆ ಸ್ವಾದಗಳಲ್ಲಿ ದೊರಕುತ್ತಿದ್ದರೂ, ಚಿಕ್ಕಂದಿನ ಬೇಸಿಗೆಕಾಲದಲ್ಲಿ ವಿಶೇಷವಾಗಿ ಮಾಡಲ್ಪಟ್ಟ ಮಾವಿನಕಾಯಿ ಗುಳಂಬ ಮನದಾಳದಲ್ಲಿ ಸ್ಥಿರವಾಗಿ ನಿಂತುಬಿಟ್ಟಿದೆ. ಇಂದು ದೇಶವಿದೇಶಗಳಲ್ಲಿ ತಿರುಗಿ ಹಲವಾರು ಜಾಮ್ಳ ರುಚಿ ನೋಡಿದ್ದೇನಾದರೂ, ಅಂದಿನ ಆ ವಿಶೇಷ ಗುಳಂಬದ ಮುಂದೆ ಎಲ್ಲವೂ ಸ್ವಾದಹೀನ. ನಾನು ಸುಮಾರು ಆರೇಳು ವರ್ಷದವನಿರಬಹುದು, ಅಂದಿನ ದಿನಗಳಲ್ಲಿ ಸಾಮಾನ್ಯವಾದ ಬಿಳಿ ಮತ್ತು ಹಳದಿ ಬಣ್ಣದ ಭರಣಿಗಳಲ್ಲಿ ನನಗಾಗಿಯೇ ಕಾದಿರಿಸಿ, ನಾನು ಅವರ ಮನೆಗೆ ಹೋದಾಗಲೊಮ್ಮೆ ಮೇಲಿನಿಂದ ಕೆಳಗಿಳಿಸಿ ಜೋಳದ ಭಕ್ಕರಿಯ ಜೊತೆಗೆ ಗುಳಂಬವನ್ನು ಪ್ರೀತಿಯಿಂದ ಬಡಿಸುವ ಜೀವ ಒಂದಿತ್ತು.
ಅಂದಿನ ಆ ಜೋಳದ ಭಕ್ಕರಿ ಮತ್ತು ಗುಳಂಬದ ರುಚಿ, ಅತ್ಯಂತ ಪ್ರೀತಿಯಿಂದ ಬಡಿಸುತ್ತಿದ್ದ ಆ ಜೀವದ ಮಮತೆ ಇಂದಿನವರೆಗೂ ನನ್ನ ಹೃದಯದಲ್ಲಿ ಜೀವಂತವಾಗಿದೆ. ಬೇರೆಯವರಿಗಿದು ಅತಿ ಭಾವುಕತೆ ಎನಿಸಬಹುದು, ಆದರೆ ನನಗಂತೂ ಪವಿತ್ರ ಸತ್ಯ. ಚಿಕ್ಕಂದಿನಲ್ಲಿ ಎಲ್ಲರೂ ತಮ್ಮತಮ್ಮ ಅಜ್ಜಿಮನೆಗೆ ಹೋಗಿ ಸ್ವಚ್ಛಂದದಿಂದ ಗದ್ದಲಗಲಾಟೆ ಮಾಡುತ್ತಾರಷ್ಟೆ. ನಾನೂ ಹೋಗುತ್ತಿದ್ದೆ. ನಾವಿರುತ್ತಿದ್ದ ವಿಜಯಪುರದ್ದೇ ಮತ್ತೊಂದು ಬಡಾವಣೆಯಲ್ಲಿ ನನ್ನ ಅಜ್ಜಿಮನೆ ಇತ್ತು. ನೆನಪಾದಾಗಲೊಮ್ಮೆ ಹೋಗುತ್ತಿದ್ದೆವು. ಅಜ್ಜನನ್ನು ಮುತ್ತಯ ಎಂದೂ, ಅಜ್ಜಿಯನ್ನು ಆಯಿ ಎಂದೂ ಕರೆಯುತ್ತಿದ್ದೆವು. ಬೇರೆಲ್ಲರಿಗೆ ತಲೆಹರಟೆ ಎನಿಸಿದ್ದ ನಾನು ಆಯಿಗೆ ಮಾತ್ರ ಅಚ್ಚುಮೆಚ್ಚು. ಆಯಿ ನನಗೆ ಹುಳಿಅನ್ನ, ಜೋಳದ ಭಕ್ಕರಿ ಮತ್ತು ಗುಳಂಬವನ್ನು ತಪ್ಪದೇ ಬಡಿಸುತ್ತಿದ್ದಳು...’
ಒಂದು ಕ್ಷಣ ಯೋಚಿಸಿ. ಕುಲಕರ್ಣಿಯವರ ಈ ಲಹರಿ ‘ಗ್ರಾ್ಯಂಡ್ವಾ ನನಗೆ ಬ್ರೆಡ್ ಟೋಸ್ಟ್ ಮಾಡಿ ಮೇಲೆ ಮ್ಯಾಂಗೊ ಜಾಮ್ ಸವರಿ ತಿನ್ನಿಸ್ತಿದ್ರು...’ ಧಾಟಿಯಲ್ಲಿರುತ್ತಿದ್ದರೆ ಹೇಗನಿಸುತ್ತಿತ್ತು? ಜೋಳದ ಭಕ್ಕರಿಯಲ್ಲಾಗಲಿ ಭರಣಿಯಿಂದ ತೆಗೆದ ಗುಳಂಬದಲ್ಲಾಗಲಿ ಗಾಢವಾಗಿರುವ ‘ಮಣ್ಣಿನ ವಾಸನೆ’ ನಮಗೆಲ್ಲಿ ಅನುಭವವಾಗುತ್ತಿತ್ತು? ಅಷ್ಟೇಅಲ್ಲ, Jam ಎಂಬ ಇಂಗ್ಲಿಷ್ ಪದಕ್ಕೆ ಸಂವಾದಿಯಾದ, ಅದಕ್ಕಿಂತಲೂ ಸವಿಯೆನಿಸುವ ‘ಗುಳಂಬ’ ಎಲ್ಲಿ ಸಿಗುತ್ತಿತ್ತು? ಹಾಗೆ ನೋಡಿದರೆ ಗುಳಂಬ ಮೂಲತಃ ಹಿಂದಿಯಿಂದ ಮರಾಠಿಯ ಮೂಲಕ ಕನ್ನಡಕ್ಕೆ ಬಂದದ್ದಿರಬಹುದು, ಆದರೆ ಈಗದು ಕನ್ನಡದ್ದೇ ಪದ. ಅ.ನ.ಕೃಷ್ಣರಾಯರಂಥ ಕಟ್ಟಾಳುಗಳೇ ಬಳಸಿದ್ದಾರೆಂದ ಮೇಲೆ (‘ಕಮಲಾಬಾಯಿ ಮಾಡಿಟ್ಟಿದ್ದ ಮಾವಿನಕಾಯಿ ಗುಳಂಬ ಅರ್ಧ ಕರಗಿಹೋಯಿತು...’ ನಟಸಾರ್ವಭೌಮ ಕಾದಂಬರಿ) ನಾವೆಲ್ಲರೂ ಬಳಸಬಹುದು. ಆದ್ದರಿಂದ Jam ಗುಳಂಬ ಪದವನ್ನೇ ಸೂಚಿಸಿದ ಡಾ.ಜಿ.ಎಸ್.ಉಮೇಶಬಾಬು, ಸುರೇಂದ್ರ ಪೈ, ಪಾರ್ವತಿ ರಾಮನ್, ವಿ.ಜಿ.ಹಿರೇಮಠ, ಅಪ್ಪು ಮುತ್ಯ, ಗಿರೀಶ ಕೆ.ಎಸ್, ಶ್ರೀಲತಾ ಮೈಸೂರು, ರಾಜೇಂದ್ರ ಕಳಸಣ್ಣವರ ಮತ್ತು ಭಾವುರಾವ್ ಕುಲಕರ್ಣಿ- ಇವರೆಲ್ಲರಿಗೂ ಅಭಿನಂದನೆಗಳು.
ಸಂಸ್ಕೃತದ್ದಾದರೆ ರಾಷ್ಟ್ರವ್ಯಾಪಿ ಬಳಕೆಗೆ ಸೂಕ್ತವಾದ್ದರಿಂದ ‘ಫಲಪಾಕ’ (ಡಿ.ಶ್ರೀಕಾಂತ್, ಆರ್.ವಿ.ಮೂರ್ತಿ, ಲೋಕೇಶ್ ಕಾಡನಹಳ್ಳಿ, ಅನಿಲ್ ಕುಮಾರ್, ಗಿರೀಶ್ ಎ.ವಿ, ದತ್ತಾತ್ರಿ ಸಾಮಗ, ಷಡಕ್ಷರಮುನಿ ಕೋಡಿಹಳ್ಳಿ, ಸಾಯಿ ರಮಾ, ಶಾಂತಾರಾಮು, ಗೀತಾ ಗುರುಸ್ವಾಮಿ, ಶ್ರೀಶಕಿರಣ್ ಪ್ರಭು, ವೀರಮ್ಮ ಎಚ್.ಎಲ್, ನಳಿನಿ ಭಟ್, ಕೃಪಾ ಗೋಖಲೆ, ಜಿ.ಎಂ.ನಾಗರಾಜ, ಶೋಭಾ ತಿಪಟೂರು, ಎಂ.ಕೆ.ಬದರಿನಾಥ್, ನಿತ್ಯಾನಂದ ಬ್ರಹ್ಮಾವರ, ಜಿ.ಟಿ.ಜಯರಾಮಪ್ಪ, ದಾಮೋದರ ಭಟ್, ಕೆ.ಎ.ಶ್ರೀಹರ್ಷ, ಸತೀಶ ಕಬೇಕೋಡಿ, ಮನೋನ್ಮಣಿ ಕೆ.ವಿ, ನರೇಂದ್ರನಾಥ್ ಎಚ್.ಎಂ, ಗಿರಿಜಾ ಲಕ್ಷ್ಮೀಕಾಂತ್), ಮತ್ತು ‘ಫಲಲೇಹ’ (ಶಾಂತಿನಿ ಮಂಜುನಾಥ್, ರಘುನಾಥ ಆಚಾರ್ಯ, ಶ್ರೀಹರಿ ಭಟ್, ಜ್ಯೋತಿ ಜಿ.ಕೃಷ್ಣ, ಅರ್ಚನಾ ಅಶೋಕ್, ಕಡ್ಡಿ ಕೊಟ್ರೇಶ, ಸೀತಾ ವ್ಯಾಸಮುದ್ರಿ, ಸುರೇಶ ಸೊಣ್ಣಪ್ಪ, ಅನುರಾಧ ಎಚ್.ಬಿ, ಮಂಜುನಾಥ ಡಿ.ಎಸ್, ವಸುಮತಿ ಮೈಸೂರು, ನರಸಿಂಹ ಹೆಬ್ಬಾರ್, ಗಿರಿಜಾ ಎಲ್, ಚೇತನ್ ಕುಮಾರ್) ಸಹ ಯೋಗ್ಯವಾಗಿವೆ.
ಕಳೆದಸಲ ಕೇಳಿದ್ದ ಇನ್ನೊಂದು ಪದ Courier. ಇಂಗ್ಲಿಷ್ಗೆ ಇದು ಹೇಗೆ ಬಂತೆಂದು ಮೊದಲು ನೋಡೋಣ. ಲ್ಯಾಟಿನ್ನಲ್ಲಿ Courierಎಂದರೆ ಓಡುವುದೆಂದರ್ಥ. ಬಾಯ್ದೆರೆ ಸಂದೇಶ ಅಥವಾ ಪತ್ರರೂಪದಲ್ಲಿ ಹೊತ್ತವನು ಮೂಲದಿಂದ ಗಮ್ಯಕ್ಕೆ ಓಡುತ್ತ ಹೋಗಿ ಸಾಧ್ಯವಾದಷ್ಟೂ ತುರ್ತಾಗಿ ತಲುಪಿಸಬೇಕು. ಕ್ರಿ.ಪೂ 4ನೆಯ ಶತಮಾನದಲ್ಲೇ ಪರ್ಷಿಯಾ ದೇಶದಲ್ಲಿ ರಾಜಕುಮಾರ ಸೈರಸ್ ತನ್ನ ಆಧಿಪತ್ಯದ ಪ್ರದೇಶಗಳಲ್ಲಿ ಸಂದೇಶ ರವಾನೆಗೆ ಓಟಗಾರರನ್ನಿಟ್ಟುಕೊಂಡಿದ್ದನಂತೆ. ಕ್ರಮೇಣ ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯಗಳಲ್ಲಿ ಕುದುರೆಸವಾರರನ್ನು ಬಳಸುವುದು ಆರಂಭವಾದರೂ, ಹತ್ತಿರದ ಸ್ಥಳಗಳಿಗೆ ಓಟಗಾರರೇ. ಗ್ರೀಸ್-ಪರ್ಷಿಯಾ ಯುದ್ಧದಲ್ಲಿ ಗ್ರೀಸ್ನ ವಿಜಯವಾರ್ತೆಯನ್ನು ಫೆಡಿಪೈಡ್ಸ್ ಎಂಬಾತ ಮ್ಯಾರಥಾನ್ ಎಂಬ ಸ್ಥಳದಿಂದ ಅಥೆನ್ಸ್ಗೆ 26 ಮೈಲು ದೂರ ಓಡಿ ತಲುಪಿಸಿದನಂತೆ. ಆ ನೆನಪಲ್ಲೇ ಇಂದಿಗೂ ಮ್ಯಾರಥಾನ್ ಓಟವೆಂದರೆ 26 ಮೈಲುಗಳದಿರುವುದು. ಅಮೆರಿಕದಲ್ಲಿ 19ನೆಯ ಶತಮಾನದಲ್ಲಿ The Pony Express ಎಂಬ ಕೊರಿಯರ್ ಸೇವೆ ಆರಂಭವಾಯಿತು. ಪೂರ್ವ-ಪಶ್ಚಿಮ ಕರಾವಳಿಗಳ ಸರಿಸುಮಾರು 2800 ಮೈಲು ದೂರವನ್ನು ಕುದುರೆಸವಾರರು 10 ದಿನಗಳಲ್ಲಿ ಕ್ರಮಿಸುತ್ತಿದ್ದರಂತೆ.
‘ಬೇಕಾಗಿದ್ದಾರೆ: ವಯಸ್ಸು 18 ದಾಟದ, ಕುದುರೆ ಸವಾರಿಯಲ್ಲಿ ನಿಪುಣರಾದ, ಕೃಶಕಾಯದ ಆರೋಗ್ಯವಂತ ತರುಣರು. ಸಾವಿನ ಅಪಾಯಕ್ಕೆ ದಿನವೂ ಒಡ್ಡಿಕೊಳ್ಳಬಲ್ಲವರು. ಅನಾಥರಿಗೆ ಪ್ರಾಶಸ್ತ್ಯ ಎಂದು ಆ ಕೊರಿಯರ್ ಸಂಸ್ಥೆಯ ಜಾಹೀರಾತು! ಈಗ ಕೊರಿಯರ್ ಸೇವೆಯೊದಗಿಸುವುದರಲ್ಲಿ ಪ್ರಪಂಚಕ್ಕೆ ಪ್ರಥಮ ಸ್ಥಾನದಲ್ಲಿರುವ United Parcel Service(UPS) ಸಂಸ್ಥೆಯ ಉದಯ 1907ರಲ್ಲಿ ಅಮೆರಿಕದ ಸಿಯಾಟಲ್ ನಗರದಲ್ಲಾಯಿತು. ಜೇಮ್ಸ್ ಕೇಸೇ ಮತ್ತು ಕ್ಲೌಡೆ ರಾಯನ್ ಎಂಬಿಬ್ಬರು ಹದಿಹರೆಯದ ಹುಡುಗರು, 100 ಡಾಲರ್ ಸಾಲ ಪಡೆದುಕೊಂಡು ಆರಂಭಿಸಿದ ಉದ್ಯಮವದು. ಅವರಿಬ್ಬರೂ ಸಂದೇಶವಾಹಕ ಓಟಗಾರರಾಗಿದ್ದವರೇ.
ಕನ್ನಡದಲ್ಲಿ Courierಗೆ ಸಮಾನಾರ್ಥಕ ಪದ ಯಾವುದು? ಕೆಲ ವರ್ಷಗಳ ಹಿಂದೆ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ನಾವಾಡುವ ನುಡಿಯೇ ಕನ್ನಡ ನುಡಿ?’ ಎಂಬ ಲೇಖನದಲ್ಲಿ ಲೇಖಕ ಎಚ್.ಆನಂದರಾಮ ಶಾಸ್ತ್ರಿಯವರು ‘ಥಟ್ಟಂಚೆ’ ಎಂಬ ಪದ ಸೂಚಿಸಿದ್ದರು. ಮಾಮೂಲಿ ಪೋಸ್ಟಲ್ ಸೇವೆಗಳಿಗೆ ಅಂಚೆ ಎನ್ನುತ್ತೇವೆ; ಇದು ಸಂಸ್ಕೃತದ ‘ಹಂಸ’ ಪದದ ತದ್ಭವ. ಪುರಾಣಕಾಲದಲ್ಲೂ ಹಂಸಗಳನ್ನು ಸಂದೇಶವಾಹಕಗಳಾಗಿ ಬಳಸುತ್ತಿದ್ದುದರಿಂದ ಅರ್ಥಪೂರ್ಣವೇ. ‘ಅಂಚೆಯ ಅಣ್ಣ ಬಂದಿಹೆ ಚಿಣ್ಣ ಅಂಚೆಯ ಹಂಚಲು ಮನೆಮನೆಗೆ...’ ಪದ್ಯ ನಿ.ರೇ.ಹಿರೇಮಠರು ಬರೆದದ್ದು, ಬಾಲ್ಯದ ಸಿಹಿನೆನಪು. ಅಂಚೆ ಎಂಬ ಪದವನ್ನೇ ಮೂಲವಾಗಿರಿಸಿ Emailಗೆ ‘ಮಿಂಚಂಚೆ’ ಪದ ಜನಪ್ರಿಯವಾಗಿದೆ. ಆ ದೃಷ್ಟಿಯಿಂದ, ಮತ್ತು ಚಂದನ ವಾಹಿನಿಯಲ್ಲಿ ಡಾ.ನಾ.ಸೋಮೇಶ್ವರ ನಡೆಸಿಕೊಡುವ ಅತಿಪ್ರಖ್ಯಾತ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಿಂದಾಗಿ ಥಟ್ ಎಂದರೆ ವೇಗಸೂಚಕ ಪದವೆಂದು ಎಲ್ಲರಿಗೂ ಗೊತ್ತಿರುವುದರಿಂದ ‘ಥಟ್ಟಂಚೆ’ಯನ್ನು ಪ್ರಸಿದ್ಧಗೊಳಿಸಬಹುದು.
ವಿಜಯವಾಣಿ ಓದುಗರ ಪೈಕಿ ಈ ಪದ ಸೂಚಿಸಿದವರು ಬೆಂಗಳೂರಿನ ವಾರುಣಿ ಅವರೊಬ್ಬರೇ! ಉಳಿದಂತೆ ಕ್ಷಿಪ್ರ ಅಂಚೆ, ಶೀಘ್ರ ಅಂಚೆ, ತ್ವರೆಯಂಚೆ, ತುರ್ತು ಅಂಚೆ, ಚುರುಕು ಅಂಚೆ, ಖಾಸಗಿ ಅಂಚೆ ಮುಂತಾದ ಪದಗಳನ್ನು ಸೂಚಿಸಿದವರಿದ್ದಾರೆ. ಡಾ.ಜಿ.ಎಸ್ ಉಮೇಶಬಾಬು ಸೂಚಿಸಿದ ‘ಓಡಂಚೆ’ಯಲ್ಲಿ ಲ್ಯಾಟಿನ್ ಮೂಲಾರ್ಥವಾದ ಓಡುವಿಕೆಯೂ ಬಂದಿದೆ. ‘ಯಾವುದೇ ಅಡೆತಡೆ, ತಡ ಇಲ್ಲದೆ ಸರ›ಂತ ಸರಂಜಾಮುಗಳನ್ನು ತಲುಪಿಸುವ ವ್ಯವಸ್ಥೆಗೆ ಸರಂಜಾಮು ಸೇವೆ ಎನ್ನಬಹುದು’- ಸುಹಾಸ್ ಮಣಿಪಾಲ ಅವರ ಪದವಿನೋದಪ್ರಜ್ಞೆ ಸಹ ಮೆಚ್ಚಬೇಕಾದ್ದೇ. ಸಂದೇಶವಾಹಕ ವ್ಯಕ್ತಿಸೂಚಕ, ಉಚ್ಚರಿಸುವುದಕ್ಕೆ ಸುಲಭವಾದ, ಸಂಸ್ಕೃತದ ಸಮ್ಮತಿಯಿರುವ ‘ವೇಗದೂತ’ ಪದವನ್ನೂ ಕೆಲವರು ಸೂಚಿಸಿದ್ದಾರೆ: ಭ.ನಿಂ.ಗೋಪಿನಾಥ್, ಅನಸೂಯಾ ರೈ, ವಾದಿರಾಜ ಕುಲಕರ್ಣಿ, ಪಿ.ಜೆ.ರಾಘವೇಂದ್ರ, ಅಂಬುಜಾ ಕುಲಕರ್ಣಿ, ದೇವೇಂದ್ರ ಕಡೂರು, ಆನಂದರಾಮ ಮಡಿ ಮತ್ತಿತರರು.
ಕೊನೆಯದಾಗಿ, Viral ಆಗುವುದಕ್ಕೆ ಕನ್ನಡ ಪದ. ಇಂಗ್ಲಿಷ್ನಲ್ಲಿ virus (ರೋಗಕಾರಕ ಸೂಕ್ಷ್ಮಜೀವಿ) ಇದರ ಮೂಲ. ರೋಗ ಸಾಂಕ್ರಾಮಿಕವಾಗಿ ಹರಡುವುದನ್ನು viralಎನ್ನುತ್ತಾರೆ. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸತ್ಯಕ್ಕಿಂತಲೂ ಸುಳ್ಳುಸುದ್ದಿಗಳು, ಚಿತ್ರತುಣುಕುಗಳು ಜಗದಗಲ ಹಬ್ಬುವುದನ್ನು ತಿಳಿಸುವುದಕ್ಕೇ ಹೆಚ್ಚು ಬಳಕೆ. ಕಾಳ್ಗಿಚ್ಚಿನಂತೆ ಹರಡುವುದರಿಂದ ‘ಸುದ್ದಿಗಿಚ್ಚು’ (ವಾರುಣಿ ಬೆಂಗಳೂರು) ಚೆನ್ನಾಗಿದೆ. ಅಚ್ಚಕನ್ನಡದ ‘ಗುಲ್ಲು’ (ಶಂಕರ್ ಎನ್.ವಿ, ಪಾರ್ವತಿ ರಾಮನ್, ವಿದ್ಯಾಶಂಕರ ಶರ್ಮ) ಸಹ ಚೆನ್ನಾಗಿದೆ. ರೋಗಕ್ಕೂ ಆಗುತ್ತದೆ ಸುದ್ದಿಗೂ ಆಗುತ್ತದೆ ‘ಸಾಂಕ್ರಾಮಿಕ’ವೇ ಇದೆಯಲ್ಲ ಎನ್ನುವವರು: ಸತ್ಯನಾರಾಯಣ ಮಗ್ಗೆ, ಸಂಧ್ಯಾ ಅಡಿಗ, ಬೊ.ನಾ.ಕೃಷ್ಣಮೂರ್ತಿ, ಪಂಪಣ್ಣ ಗೌಡ ಮತ್ತು ಅನಿಲ್ ಕುಮಾರ್. ಇವೆಲ್ಲಕ್ಕಿಂತ ಆಕರ್ಷಕ ಅರ್ಥಪೂರ್ಣ ವಿನೋದಮಯ ಪದವೆಂದರೆ ಅನಿತಾ ಭಟ್ ಸೂಚಿಸಿದ ‘ಟಾಂ ಟಾಂ’! ‘ಮಾಯಾಬಜಾರ್’ ಚಿತ್ರದ ಗೀತೆಯನ್ನು ನೆನಪಿಸಿಕೊಂಡರೆ ‘ಆಹಾ ನನ್ನ ಮದ್ವೆಯಂತೆ, ಓಹೊ ನನ್ನ ಮದ್ವೆಯಂತೆ... ನಿಮಗೂ ನನಗೂ ಏನಂತೆ ಲೋಕವೆಲ್ಲ ಗುಲ್ಲಂತೆ ಟಾಂ ಟಾಂ ಟಾಂ...’ viral ಆಗೋದಂದ್ರೆ ಲೋಕವೆಲ್ಲ ಗುಲ್ಲೆಬ್ಬಿಸುವುದೇ ತಾನೆ!
ಈಗ ಇದೆಲ್ಲವನ್ನೂ ಜೋಡಿಸುತ್ತ ಒಂದು ಕಾಲ್ಪನಿಕ ಸನ್ನಿವೇಶ. ಬಾಲ್ಯಕಾಲದಲ್ಲಿ ಆಯಿ ಬಡಿಸುತ್ತಿದ್ದ ಗುಳಂಬವನ್ನು ನೆನೆನೆನೆದು ಭಾವುಕರಾದ ವಸಂತ ಕುಲಕರ್ಣಿಯವರಿಗೆ ಆಯಿಯಂಥವರೇ ಯಾರೋ ಒಬ್ಬರು ರುಚಿಕರ ಗುಳಂಬವನ್ನು ಪುಟ್ಟ ಭರಣಿಯಲ್ಲಿಟ್ಟು ಥಟ್ಟಂಚೆಯಲ್ಲಿ ಕಳಿಸಿದರೆಂದುಕೊಳ್ಳೋಣ. ಅವರು ಅದರದೊಂದು ಚಿತ್ರವನ್ನೂ, ಬಾಲ್ಯಕಾಲ ಮರುಕಳಿಸಿದ್ದಕ್ಕೆ ಮಧುರವಾದೊಂದು ಟಿಪ್ಪಣಿಯನ್ನೂ ಸಾಮಾಜಿಕ ಜಾಲತಾಣದಲ್ಲಿ ತೇಲಿಬಿಟ್ಟರೆಂದುಕೊಳ್ಳೋಣ. ಅದು ಲೋಕಕ್ಕೆಲ್ಲ ಹರಡಿತು. ಅಂದರೆ ಏನಾಯ್ತು? ಥಟ್ಟಂಚೆಯಲ್ಲಿ ಗುಳಂಬ ಬಂದ ಸುದ್ದಿ ಟಾಂಟಾಂ ಆಯ್ತು!
1. Allergy: ಆರೋಗ್ಯ ವಿಚಾರದಲ್ಲಷ್ಟೇ ಅಲ್ಲ, ಬೇರೆ ಸಂದರ್ಭಗಳಲ್ಲೂ ಬಳಸುತ್ತೇವೆ. ಉದಾಹರಣೆಗೆ ಮೋಡ ಕವಿದ ವಾತಾವರಣವೆಂದರೆ ನನಗೆ ಎಲರ್ಜಿ. ಇದಕ್ಕೊಂದು ಕನ್ನಡ ಪದ ಬೇಕು.
2.Risk: ಅಪಾಯ ಎಂದರೆ dangerಎಂಬ ಅರ್ಥವಾಗುತ್ತದೆ. ಅಪಾಯಕ್ಕೆ ಸಿದ್ಧವಾಗಿ ಮುನ್ನುಗ್ಗುವುದನ್ನು ರಿಸ್ಕ್ ತಗೊಳ್ಳೋದು ಎನ್ನುತ್ತೇವೆ. ಕನ್ನಡದಲ್ಲಿ ಏನೆನ್ನಬಹುದು?
3. Scanning: ವೈದ್ಯಕೀಯ ಕ್ಷೇತ್ರದಲ್ಲೂ, ಸಾಮಾನ್ಯ ಜೀವನದಲ್ಲೂ ಬಳಕೆಯಾಗುತ್ತದೆ. ಸಮಾನಾರ್ಥಕ ಕನ್ನಡ ಪದ ಹುಡುಕಬೇಕಿದೆ.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ.
ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)