ಅಂಕಣ

ಹಕ್ಕಿಯಾದ್ರೂ ಹಾರದ ಪುಟ್ಟ ರೈಲ್

kumarvrl

ಹಾರದ ಹಕ್ಕಿಗಳ ಹೆಸರು ಹೇಳಿ ಎಂದರೆ ನಿಮಗೆಲ್ಲಾ ಮೊದಲು ನೆನಪಿಗೆ ಬರುವುದು ಕೋಳಿ, ಎಮು, ಕಿವಿ, ಆಸ್ಟ್ರಿಚ್ ಇತ್ಯಾದಿ. ಇವುಗಳಿಗೆಲ್ಲಾ ರೆಕ್ಕೆ ಇದ್ದರೂ ಮೇಲಕ್ಕೆ ಹಾರುವುದಿಲ್ಲ ಎಂದು ನೀವು ಪುಸ್ತಕಗಳಲ್ಲಿ ಓದಿರುತ್ತೀರಿ.

ಆದರೆ ಈ ಹಾರದ ಹಕ್ಕಿಗಳಲ್ಲಿ ಅತ್ಯಂತ ಪುಟ್ಟ ಹಕ್ಕಿ ಯಾವುದು ಎಂಬುದು ನಿಮಗೆ ಗೊತ್ತೆ? ಅದರ ಹೆಸರು ರೈಲ್. ಈ ಪಕ್ಷಿ ಕೇವಲ 15 ಸೆಂ.ಮೀ. ಉದ್ದ ಹಾಗೂ 40 ಗ್ರಾಂ. ತೂಕವುಳ್ಳದ್ದಾಗಿದೆ.

ರೈಲ್​ನ ವೈಜ್ಞಾನಿಕ ಹೆಸರು ಅಟ್ಲಾಂಟಿಸಿಯಾ ರೊಗರ್ಸಿ. ಇವುಗಳ ಗರಿಗಳು ಕಂದು ಬಣ್ಣದಿದ್ದು, ಕಣ್ಣುಗಳು ಕೆಂಪು ಮತ್ತು ಕೇಸರಿ ವರ್ಣದಿಂದ ಕೂಡಿರುತ್ತದೆ. ಕೊಕ್ಕು ಮತ್ತು ಕಾಲು ಕಪ್ಪಾಗಿರುತ್ತವೆ.

1920ರ ದಶಕದಲ್ಲಿ ಬ್ರಿಟನ್​ನ ಪಕ್ಷಿತಜ್ಞ ಪೆರ್ಸಿ ಲೋವ್ ಎಂಬಾತ ಈ ಪಕ್ಷಿ ಪ್ರಭೇದವನ್ನು ಗುರುತಿಸಿದ್ದರು. ದಕ್ಷಿಣ ಅಟ್ಲಾಂಟಿಕದಲ್ಲಿರುವ ಸೇಂಟ್ ಹೆಲೆನಾ ದ್ವೀಪದ ಬಳಿ ಇವು ಕಾಣಿಸಿಕೊಂಡಿದ್ದವು. ಟ್ರಿಸ್ಟಾನ್ ಡಿ ಕುನ್ಹ ದ್ವೀಪದ ಹುಲ್ಲುಗಾವಲು, ಬಯಲು ಮತ್ತು ಕರಾವಳಿ ತೀರಗಳಲ್ಲಿ ಕಂಡುಬಂದಿತ್ತು. ಆದರೆ ಕಾಲ ಕ್ರಮೇಣ ಎಂದರೆ 1970ರ ದಶಕದ ಹೊತ್ತಿಗೆ ಇದು ಸಂಪೂರ್ಣ ನಾಶವಾಯಿತೆಂದೇ ತಿಳಿಯಲಾಗಿತ್ತು. ‘ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಸಮಿತಿ’ ಕೂಡ ಇವುಗಳು ವಿನಾಶ ಹೊಂದಿವೆ ಎಂದೇ ಘೊಷಿಸಿತ್ತು.

ಆದರೆ ದಿಢೀರ್ ಎಂದು 40 ವರ್ಷಗಳ ನಂತರ ಇವುಗಳು ಪೆಸಿಫಿಕ್​ನ ರೋಟಾ ದ್ವೀಪದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದವು. ಈ ದ್ವೀಪದಲ್ಲಿ ಸದ್ಯ ಸುಮಾರು ಮುನ್ನೂರರಷ್ಟು ಈ ಹಕ್ಕಿಗಳು ಇರುವುದಾಗಿ ಲೆಕ್ಕ ಹಾಕಲಾಗಿದೆ.

ಇವುಗಳು ಮಿಶ್ರಾಹಾರಿಗಳು. ಎಂದರೆ ಈ ಹಕ್ಕಿ ಹುಳು ಹುಪ್ಪಡಿಗಳನ್ನೂ ತಿನ್ನುತ್ತವೆ, ಅತ್ತ ಕಾಳು ಕಡಿಗಳನ್ನೂ ಮೆಲ್ಲುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಸಂಜೆಯಾಗುತ್ತಿದ್ದಂತೆಯೇ ಗೂಡು ಸೇರುತ್ತವೆ. ಆದರೆ ರೈಲ್​ಗೆ ರಾತ್ರಿಯೆಂದರೆ ಬಹಳ ಖುಷಿ. ಆಗ ಓಡಾಟ ನಡೆಸುವುದು ಎಂದರೆ ಇದಕ್ಕೆ ಎಲ್ಲಿಲ್ಲದ ಪ್ರೀತಿ. ರಾತ್ರಿಯಾಗುತ್ತಲೇ ಇದು ಹೆಚ್ಚು ಚುರುಕಾಗುತ್ತದೆ.

ಇವುಗಳ ಗೂಡುಗಳು ಕೂಡ ಸುಂದರ ವಿನ್ಯಾಸವನ್ನು ಹೊಂದಿರುತ್ತವೆ. ಹುಲ್ಲು ಮತ್ತು ಕಟ್ಟಿಗೆಗಳನ್ನು ಬಳಸಿಕೊಂಡು ಗೂಡು ಕಟ್ಟುತ್ತವೆ. ಅಕ್ಟೋಬರ್​ನಿಂದ ಜನವರಿ ತಿಂಗಳು ಸಂತಾನೋತ್ಪತ್ತಿಯ ಸಮಯ. ಈ ಅವಧಿಯಲ್ಲಿ ಹೆಣ್ಣು ರೈಲ್ ಒಂದು ಬಾರಿಗೆ ಎರಡು ಮೊಟ್ಟೆಗಳನ್ನು ಇಡುತ್ತದೆ. ರೆಕ್ಕೆ ಬಲಿಯುವವರೆಗೆ ಪುಟ್ಟ ರೈಲ್​ಗೆ ಅಮ್ಮನೇ ಆಸರೆ. ನಂತರ ಪುರ್ ಎಂದು ಹಾರಿ ಹೋಗುತ್ತದೆ.