ಅಂಕಣ

ಯುದ್ಧಕಾರ್ಮೋಡ ಕತ್ತಲಿನಲ್ಲಿ ನಿನ್ನೆಯ ಪಾಠಗಳ ಬೆಳಕು

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಭಾರತೀಯ ಉಪಖಂಡದಲ್ಲಿ ಯುದ್ಧದ ಕಾರ್ವೇಡಗಳು ದಟ್ಟೈಸುತ್ತಿವೆ. ಕಾಲು ಶತಮಾನದ ಹಿಂದಿನ ಸಂಗತಿ ಇದು. ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತು ಹೇಗಿರಬಹುದೆಂಬ ಬಗ್ಗೆ ಕುತೂಹಲ ತಳೆದಿದ್ದ ಅಮೆರಿಕಾದ ರಕ್ಷಣಾ ಇಲಾಖೆ, ದಕ್ಷಿಣ ಏಷ್ಯಾ ಅರ್ಥಾತ್ ಭಾರತೀಯ ಉಪಖಂಡ ಯಾವ ರೂಪು ತಳೆಯಬಹುದೆಂಬ ಕುರಿತಾಗಿ ಅಧ್ಯಯನ ನಡೆಸುವಂತೆ ರಕ್ಷಣಾ ಹಾಗೂ ಭೂ-ರಾಜಕೀಯ ತಜ್ಞರ ತಂಡವೊಂದನ್ನು ಕೇಳಿಕೊಂಡಿತು. ಆ ತಂಡದ ವರದಿಯ ಮುಖ್ಯಾಂಶ ಹೀಗಿತ್ತು: ‘ಕಾಶ್ಮೀರದ ಕುರಿತಾಗಿ ಪಾಕಿಸ್ತಾನ 2011-12ರಲ್ಲಿ ಭಾರತದೊಂದಿಗೆ ತನ್ನ ನಾಲ್ಕನೆಯ ಹಾಗೂ ಅಂತಿಮ ಯುದ್ಧವನ್ನು ನಡೆಸುತ್ತದೆ, ಸೋತುಹೋಗುತ್ತದೆ ಮತ್ತು ಭಾರತದೊಂದಿಗೆ ವಿಲೀನಗೊಳ್ಳುತ್ತದೆ’.

2011-12 ಬಂತು, ಹೋಯಿತು. ಯಾವ ಯುದ್ಧವೂ ಆಗಲಿಲ್ಲ. ಯುದ್ಧಕ್ಕೆ ಪ್ರಚೋದನೆ ನೀಡುವಂತಹ ಘಟನೆಗಳು ಘಟಿಸುತ್ತಿರಲಿಲ್ಲ ಎಂದಲ್ಲ. ಅವಂತೂ ಅಡಿಗಡಿಗೆ ನಡೆಯುತ್ತಲೇ ಇದ್ದವು. ದೇಶದ ಎಲ್ಲೆಡೆ ಪಾಕಿಸ್ತಾನ ತನ್ನ ಹಸ್ತಕರ ಮೂಲಕ ಭಯೋತ್ಪಾದಕ ಕೃತ್ಯಗಳನ್ನು ನಿರಂತರವಾಗಿ ಸಾಗಿಸುತ್ತಲೇ ಇತ್ತು. ಹಾಗಾಗಿ 2010ರಲ್ಲಿ ಭಯೋತ್ಪಾದನಾಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಜಾಗತಿಕವಾಗಿ ಮೂರನೆಯ ಸ್ಥಾನವಿತ್ತು. ಆದರೆ 26/11 ಮುಂಬೈ ದಾಳಿಯಂತಹ ಘೊರ ಭಯೋತ್ಪಾದಕ ಹತ್ಯಾಕಾಂಡಗಳನ್ನು ಪಾಕಿಸ್ತಾನ ಎಸಗಿದಾಗಲೂ ಆ ದುರುಳ ದೇಶವನ್ನು ಶಿಕ್ಷಿಸುವ ರಾಜಕೀಯ ಇಚ್ಛಾಶಕ್ತಿ ಆಗಿನ ಭಾರತ ಸರ್ಕಾರಕ್ಕಿರಲಿಲ್ಲ. ಅದೆಲ್ಲವೂ ಬದಲಾದದ್ದು ದಶಕದ ಹಿಂದೆ. 2018ರ ಸೆಪ್ಟೆಂಬರ್ 18ರ ಉರಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕಾಶ್ಮೀರದಲ್ಲಿನ ಹತೋಟಿ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಭಯೋತ್ಪಾದಕ ತರಬೇತಿ ಶಿಬಿರವೊಂದನ್ನು ನಾಶಗೊಳಿಸಿತು, ಹಲವಾರು ಭಯೋತ್ಪಾದಕರನ್ನು ಕೊಂದಿತು.

ಅಭೂತಪೂರ್ವವೆನ್ನಿಸಿದ ಈ ನಡೆಗೆ ಪ್ರೇರಕವಾದದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಘರ್ ಮೆ ಘುಸ್​ಕೆ ಮಾರೇಂಗೆ’ ಎನ್ನುವ ನೀತಿ. ಅವರ ನಿರ್ಧಾರದ ದೃಢತೆಯನ್ನು ಮತ್ತೊಮ್ಮೆ ಪರೀಕ್ಷಿಸುವ ಉದ್ದೇಶದಿಂದ ಪಾಕಿಸ್ತಾನ 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಘಾತಕ ಭಯೋತ್ಪಾದಕ ದಾಳಿಯನ್ನು ಪ್ರಾಯೋಜಿಸಿತು. ಈ ಬಾರಿ ಇನ್ನೊಂದು ಹೆಜ್ಜೆ ಮುಂದಿಟ್ಟ ಭಾರತವು ಪಾಕ್ ವಾಯುಪ್ರದೇಶವನ್ನು ಉಲ್ಲಂಘಿಸಿ ಖುದ್ದು ಪಾಕಿಸ್ತಾನಿ ನೆಲವಾದ ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದ ಬಾಲಾಕೋಟ್​ನಲ್ಲಿದ್ದ ಭಯೋತ್ಪಾದನಾ ಶಿಬಿರದ ಮೇಲೆ ದಾಳಿಯೆಸಗಿ ಮುನ್ನೂರಕ್ಕೂ ಹೆಚ್ಚಿನ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರನ್ನು ಕೊಂದಿತು. ಭಾರತೀಯ ವಾಯುಸೇನೆ ಪಾಕಿಸ್ತಾನಿ ವಾಯುಪ್ರದೇಶವನ್ನು ಪ್ರವೇಶಿಸಿ ಕಾರ್ಯಾಚರಣೆ ನಡೆಸಿದ್ದು 1971ರ ಯುದ್ಧದ ನಂತರ ಇದೇ ಮೊದಲ ಬಾರಿ.

ಇಂದು ಪಹಲ್ಗಾಮ್ ಸೈತಾನಿ ಭಯೋತ್ಪಾದಕ ಹತ್ಯಾಕಾಂಡದಿಂದ ರೊಚ್ಚಿಗೆದ್ದ ಭಾರತ ಹಿಂದಿನ ಎಲ್ಲ ಸಂಯಮಗಳನ್ನೂ ಬದಿಗಿಟ್ಟು ಪಾಕಿಸ್ತಾನಕ್ಕೆ ಸೂಕ್ತ, ಪ್ರಧಾನಿ ನರೇಂದ್ರ ಮೋದಿಯವರ ಮಾತಿನಲ್ಲಿ ‘ಕಲ್ಪನೆಗೂ ಮೀರಿದ’ ಪಾಠ ಕಲಿಸುವ ದೃಢಸಂಕಲ್ಪ ಮಾಡಿದೆ. ಅಮೆರಿಕಾದ ರಕ್ಷಣಾತಜ್ಞರು ಹೇಳಿದ್ದ ಮಾತು ಇಂದು ಸರಿಸುಮಾರು ನಿಜವಾಗುವ ಸಾಧ್ಯತೆ ಕಂಡುಬರುತ್ತಿದೆ. ಮೊದಲಿಗೆ ಪಾಕಿಸ್ತಾನವನ್ನು ಜೀವಂತವಾಗಿಟ್ಟಿರುವ ಸಿಂಧು ಜಲ ಒಪ್ಪಂದವನ್ನು ಅಮಾನತ್ತಿನಲ್ಲಿಟ್ಟ ಭಾರತ ಅದರೊಂದಿಗೆ ಯುದ್ಧಾಭ್ಯಾಸವನ್ನೂ ಆರಂಭಿಸಿದೆ. ಭಾರತೀಯ ವಾಯುಸೇನೆ ‘ಆಪರೇಷನ್ ಆಕ್ರಮಣ’ ಕಸರತ್ತು ನಡೆಸಿದೆ, ನೌಕಾಸೇನೆ ಅರಬ್ಬಿ ಸಮುದ್ರದಲ್ಲಿ ಯಾವುದೇ ಕಾರ್ಯಾಚರಣೆಗೆ ಸಜ್ಜಾಗಿ ನಿಂತಿದೆ, ಭೂಸೇನೆ ಕಾಶ್ಮೀರದಲ್ಲಿನ ಅತಿ ಉತ್ತರದ ಬಾರಾಮುಲ್ಲಾದಿಂದ ಅತಿ ದಕ್ಷಿಣದ ಅಝು್ನೂರ್​ವರೆಗಿನ ಕದನವಿರಾಮ ರೇಖೆಯುದ್ದಕ್ಕೂ ಪ್ರತಿರಾತ್ರಿ ಪಾಕ್ ಸೇನೆಯ ಅಪ್ರಚೋದಿತ ಗುಂಡು ಹಾರಿಸುವಿಕೆಗೆ ತಕ್ಕ ಉತ್ತರ ನೀಡುತ್ತಿದೆ.

ಅಷ್ಟೇ ಅಲ್ಲ, ಪಂಜಾಬ್ ವಲಯದಲ್ಲಿ ಮುಳ್ಳುತಂತಿ ಬೇಲಿ ಮತ್ತು ಅಂತಾರಾಷ್ಟ್ರೀಯ ಗಡಿಯ ನಡುವಿರುವ ಜಮೀನುಗಳಲ್ಲಿ ಸ್ಥಳೀಯ ರೈತರು ತಮ್ಮೆಲ್ಲ ಕೃಷಿಕೆಲಸಗಳನ್ನು ಏಪ್ರಿಲ್ 29ರ ಸಂಜೆಯೊಳಗೆ ಪೂರ್ಣಗೊಳಿಸಬೇಕೆಂಬ ಸೂಚನೆ ನೀಡಿತ್ತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈತರು ತಮ್ಮ ಕೆಲಸಗಳನ್ನು ಯುದ್ಧಸ್ತರದಲ್ಲಿ ಪೂರ್ಣಗೊಳಿಸಿ ಇಡೀ ಗಡಿಯನ್ನು ಸೇನೆಗೆ ಬಿಟ್ಟುಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಶತ್ರುವಿನ ವಿರುದ್ಧ ಎಲ್ಲಿ, ಯಾವಾಗ ಮತ್ತು ಹೇಗೆ ಕಾರ್ಯಾಚರಣೆ ನಡೆಸಬೇಕೆನ್ನುವುದರ ಬಗ್ಗೆ ರಕ್ಷಣಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ಘೊಷಿಸಿದ್ದಾರೆ. ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ಪ್ರಧಾನಿಗಳ ಈ ಘೊಷಣೆ ಅರ್ಥಪೂರ್ಣ ಹಾಗೂ ಮಹತ್ವಪೂರ್ಣ.

1947ರ ಅಕ್ಟೋಬರ್​ನಲ್ಲಿ ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣವೆಸಗಲು ಬಳಸಿದ್ದು ಮುಖ್ಯವಾಗಿ ಎರಡು ಸೇತುವೆಗಳು, ಝೀಲಂ ನದಿಯ ಮೇಲಿದ್ದ ಸೇತುವೆ ಮತ್ತು ಕಿಶನ್ ಗಂಗಾ ನದಿಯ ಮೇಲಿದ್ದ ಸೇತುವೆ. ಝೀಲಂ ಸೇತುವೆಯೇನೋ ಅಕ್ಟೋಬರ್ 22ರ ರಾತ್ರಿಯೇ ಅಂದರೆ ಭಾರತೀಯ ಸೇನೆ ಯುದ್ಧರಂಗಕ್ಕೆ ಧುಮುಕುವುದಕ್ಕೆ ಐದು ದಿನ ಮೊದಲೇ ಪಾಕಿಗಳ ವಶವಾಗಿ ಅವರು ಮುಝಾಫರಾಬಾದ್ ಜತೆಗೆ ಬಾರಾಮುಲ್ಲಾವನ್ನೂ ಆಕ್ರಮಿಸಿಕೊಂಡು ಶ್ರೀನಗರಕ್ಕೆ ಮೂವತ್ತು ಕಿಲೋಮೀಟರ್​ಗಳಷ್ಟು ಹತ್ತಿರ ಬಂದಾಗಿತ್ತು. ಆದರೆ ಕಿಶನ್ ಗಂಗಾ ನದಿಯ ಮೇಲಿನ ಸೇತುವೆ ಇನ್ನೂ ಮುಕ್ತವಾಗಿಯೇ ಇತ್ತು. ನಂತರ ಅವರು ಅದನ್ನೂ ಆಕ್ರಮಿಸಿಕೊಂಡು ಸ್ಕಾರ್ದು ಮತ್ತು ಕಾರ್ಗಿಲ್ ಕಡೆಗೆ ನುಗ್ಗತೊಡಗಿದಾಗ ಅದನ್ನು ತಡೆಯಲು ಆ ಸೇತುವೆಯನ್ನೇ ನಾಶಗೊಳಿಸುವುದು ಸೂಕ್ತಮಾರ್ಗ ಎಂದು ನಮ್ಮ ಸೇನೆ ತೀರ್ವನಿಸಿದಾಗ ಅಡ್ಡಗಾಲಿಟ್ಟದ್ದು ಪ್ರಧಾನಿ ಜವಾಹರ್​ಲಾಲ್ ನೆಹರು. ಕಿಶನ್ ಗಂಗಾ ಸೇತುವೆಯನ್ನು ನಾಶಮಾಡಕೂಡದೆಂದು ಅವರು ತಾಕೀತು ಮಾಡಿದ್ದರಿಂದ ನಮ್ಮ ಸೇನೆ ಪಾಕಿಗಳ ಮುಂಬರಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲಾಗಲಿಲ್ಲ.

ರಿಣಾಮವಾಗಿ ಪಾಕಿಗಳು ಪಾರ್ವತಿ ಬೆಟ್ಟಸಾಲು, ಸ್ಕಾರ್ದು ಪಟ್ಟಣ, ಪುರಾತನ ಸರಸ್ವತಿ ಮಂದಿರ, ಕಾರ್ಗಿಲ್ ಪಟ್ಟಣದ ಉತ್ತರದ ಉನ್ನತ ಪ್ರದೇಶಗಳನ್ನು ಸುಲಭವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು. ಅವರನ್ನು ಅಲ್ಲಿಂದ ಕಾಲ್ತೆಗೆಸಲು ನಮ್ಮ ಸೇನೆಗೆ ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಅದಕ್ಕೂ ಅವಕಾಶವಿಲ್ಲದಂತೆ ನೆಹರು ವಿಶ್ವಸಂಸ್ಥೆಯ ಕದನವಿರಾಮ ನಿರ್ಣಯವನ್ನು ಒಪ್ಪಿಕೊಂಡು ಯುದ್ಧ ನಿಲಿಸಿಬಿಟ್ಟರು, ಆ ಮೂಲಕ ಕಾಶ್ಮೀರ ಪಶ್ಚಿಮ ಮತ್ತು ವಾಯವ್ಯದ ವಿಶಾಲ ನೆಲವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು. ಒಂದುವೇಳೆ ಸೇನೆಯ ಲೆಕ್ಕಾಚಾರಕ್ಕೆ ನೆಹರು ತಡೆ ಒಡ್ಡಿರದೇಹೋಗಿದ್ದರೆ ಪ್ರಥಮ ಕಾಶ್ಮೀರ ಯುದ್ಧದ ಗತಿಯೇ ಬದಲಾಗಿರುತ್ತಿತ್ತು ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಇನ್ನೂ ಚಿಕ್ಕದಾಗಿರುತ್ತಿತ್ತು ಅಥವಾ ಪೂರ್ಣವಾಗಿ ಇರುತ್ತಿರಲೇ ಇಲ್ಲ.

ಹಾಗೆಯೇ 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆಯ ಶಸ್ತ್ರಸಜ್ಜಿತ ಕಳ್ಳನುಸುಳುಕೋರರನ್ನು ಸದೆಬಡಿಯುವಾಗ ಹತೋಟಿ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಬಾರದೆಂಬ ನಿಬಂಧನೆಯನ್ನು ವಾಜಪೇಯಿ ಸರ್ಕಾರ ನಮ್ಮ ಭೂಸೇನೆ ಮತ್ತು ವಾಯುಸೇನೆಯ ಮೇಲೆ ಹೇರಿದ್ದರಿಂದ ಯುದ್ಧ ಎರಡೂವರೆ ತಿಂಗಳುಗಳ ಕಾಲ ಮುಂದುವರಿಯುವಂತಾಯಿತು ಮತ್ತು ನಮ್ಮ ಕಡೆ ಸಾವುನೋವುಗಳೂ ಅಧಿಕವಾದವು. ಆದರೆ 1971ರಲ್ಲಿ ನಡೆದದ್ದೇ ಬೇರೆ. ತಮ್ಮ ಮಾತನ್ನು ಸೇನೆಯ ಮೇಲೆ ಹೇರುವುದರ ಬದಲಿಗೆ ಪ್ರಧಾನಿ ಇಂದಿರಾ ಗಾಂಧಿ ಸೇನೆಯ ಮಾತಿಗೆ ಪ್ರಾಶಸ್ಱ ನೀಡಿ ಅದನ್ನು ಒಪ್ಪಿಕೊಂಡರು. ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಲು ಜೂನ್ ತಿಂಗಳಲ್ಲೇ ಸೇನಾಕಾರ್ಯಾಚರಣೆ ಆರಂಭಿಸಬೇಕೆನ್ನುವುದು ಇಂದಿರಾರ ಮೊದಲ ಯೋಜನೆಯಾಗಿತ್ತು. ಆದರೆ ಸೇನಾ ದಂಡನಾಯಕ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಅದನ್ನು ಒಪ್ಪಲಿಲ್ಲ. ಸದ್ಯದಲ್ಲೇ ಮಾನ್ಸೂನ್ ಆರಂಭವಾಗುತ್ತಿದ್ದುದರಿಂದಾಗಿ ನೂರೊಂದು ನದಿಕವಲುಗಳಿಂದ ಆವೃತವಾಗಿರುವ ಪೂರ್ವ ಪಾಕಿಸ್ತಾನ ಅರ್ಥಾತ್ ಬಾಂಗ್ಲಾದೇಶದಲ್ಲಿ ಯುದ್ಧ ಟ್ಯಾಂಕ್​ಗಳ ಚಲನೆಗೆ ತೊಡಕಾಗುತ್ತದೆ, ಅದರಿಂದಾಗಿ ಯುದ್ಧ ದೀರ್ಘಕಾಲ ಎಳೆಯಲ್ಪಡುತ್ತದೆ, ಆಗ ಪಾಕಿಸ್ತಾನದ ಪರವಾಗಿ ನಿಂತು ನಮ್ಮ ವಿರುದ್ಧ ತಂಟೆ ಹೂಡಲು ಇತರ ದೇಶಗಳಿಗೆ ಸಮಯಾವಕಾಶ ದೊರೆಯುತ್ತದೆ ಎಂದು ಮಾಣೆಕ್ ಷಾ ವಾದಿಸಿದಾಗ ಅವರ ಮಾತಿನಲ್ಲಿದ್ದ ಸತ್ಯವನ್ನು ಜಾಣೆ ಇಂದಿರಾ ಗ್ರಹಿಸಿದರು.

ಮಾಣೆಕ್ ಷಾ ಮಾತಿನಂತೆ ಸೇನಾ ಕಾರ್ಯಾಚರಣೆಯನ್ನು ಚಳಿಗಾಲಕ್ಕೆ ಮುಂದೂಡಿ, ಅದರ ಸೂಕ್ತ ತಯಾರಿಗೆ ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿ ತಾವು ಭಾರತದ ಪರವಾಗಿ ಜಾಗತಿಕ ಅರಿವು ಮೂಡಿಸಲು ರಾಜತಾಂತ್ರಿಕ ಕಾರ್ಯಕ್ರಮಗಳನ್ನು ರೂಪಿಸಿ ಪಶ್ಚಿಮದ ಪ್ರಮುಖ ರಾಜಧಾನಿಗಳಿಗೆ ಹೋಗಿಬಂದರು. ಎಲ್ಲವೂ ಅನುಕೂಲಕರವಾಗಿದೆ ಎನಿಸಿದಾಗ ನವೆಂಬರ್ 23ರಂದು ಪೂರ್ವ ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆ ಆರಂಭಿಸುವ ಸೇನೆಯ ತೀರ್ಮಾನಕ್ಕೆ ಹಸಿರು ನಿಶಾನೆ ತೋರಿದರು, ದಿಕ್ಕೆಟ್ಟ ಪಾಕಿಸ್ತಾನ ದಾರಿಗಾಣದೆ ಡಿಸೆಂಬರ್ 3ರಂದು ನಮ್ಮ ಹನ್ನೆರಡು ವಾಯುನೆಲಗಳ ಮೇಲೆ ದಾಳಿಯೆಸಗಿದ್ದನ್ನು ನೆಪವಾಗಿಸಿಕೊಂಡು ಯುದ್ಧವನ್ನು ಮುಕ್ತವಾಗಿ ಘೊಷಿಸಿಬಿಟ್ಟರು. ಆಮೇಲೇನಾಯಿತು ಎನ್ನುವುದು ಜಗತ್ತಿಗೇ ಗೊತ್ತಿದೆ! ಭಾರತ ನಡೆಸಿದ ಅತಿ ಕಡಿಮೆ ಅವಧಿಯ ಯುದ್ಧ ಅದು, ಭಾರತ ಸಾಧಿಸಿದ ಅತಿ ದೊಡ್ಡ ವಿಜಯವೂ ಅದೇ. ಶತ್ರುವಿನಿಂದ ಶರಣಾಗತಿ ಪತ್ರವನ್ನು ಲಿಖಿತವಾಗಿ ನಾವು ಪಡೆದುಕೊಂಡ ಏಕೈಕ ಯುದ್ಧ ಅದು!

ಇಂದಿರಾ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಕಾಲವೇ ಬೇರೆ, ಈ ಕಾಲವೇ ಬೇರೆ. ಆಗಿನ ಭಾರತದ ಆಂತರಿಕ ಸ್ಥಿತಿಗತಿಗಳು ಹಾಗೂ ಜಾಗತಿಕ ಭೂ-ರಾಜಕೀಯ ವಾಸ್ತವಗಳು ಇಂದಿನ ತಲೆಮಾರಿನ ಗ್ರಹಿಕೆಗೆ ನಿಲುಕುವುದು ಕಷ್ಟ. ಆ ದಿನವನ್ನು ಈ ದಿನಕ್ಕೆ ಹೋಲಿಸುವುದೇ ಅಸಾಧ್ಯ. ಆದಾಗ್ಯೂ, ಇಂದಿರಾ ಅವರಿಗಿಂತಲೂ ಜಾಣ, ಚಾಣಾಕ್ಷ್ಯ ಹಾಗೂ ವಸ್ತುನಿಷ್ಠ ಪ್ರಧಾನಿ ಇಂದು ಈ ದೇಶಕ್ಕೆ ದೊರೆತಿದ್ದಾರೆ ಎಂದು ಹೇಳಲು ಅವಕಾಶವಿದೆ. ಮೇಲಿನ ಈ ಎಲ್ಲ ವಾಸ್ತವಗಳ ಹಿನ್ನೆಲೆಯಲ್ಲಿ ಇಂದು ನಮ್ಮ ರಕ್ಷಣಾಪಡೆಗಳಿಗೆ ಕಾರ್ಯಾಚರಣೆಯ ವಿವಿಧ ಆಯಾಮಗಳ ಪೂರ್ಣ ಸ್ವಾತಂತ್ರ್ಯವನ್ನು ಪ್ರಧಾನಿ ಮೋದಿ ನೀಡಿರುವುದು ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ಜತೆಗೆ, ‘ನೀವು ಏನು ಬಯಸುತ್ತಿದ್ದೀರೋ ಅದು ನಿಮಗೆ ಸದ್ಯದಲ್ಲೇ ಸಿಗಲಿದೆ’ ಎಂದು ರಕ್ಷಾಮಂತ್ರಿ ರಾಜನಾಥ್ ಸಿಂಗ್ ಭಾರತೀಯರಿಗೆ ಆಶ್ವಾಸನೆ ನೀಡಿರುವುದನ್ನೂ ಸೇರಿಸಿಕೊಂಡರೆ ಇಂದು ಪಾಕಿಸ್ತಾನ ಮತ್ತದರ ದುರುಳತನದ ಕುರಿತಾಗಿ ಮೋದಿ ಸರ್ಕಾರದ ನಿಲುವು ಏನಿದೆಯೆನ್ನುವುದರ ಒಂದು ಚಿತ್ರ ನಮಗೆ ಸಿಗುತ್ತದೆ.

ಆ ಪ್ರಕಾರ 1947-48ರಲ್ಲಿ ನಾವು ಕಳೆದುಕೊಂಡ ಕಾಶ್ಮೀರದ ಒಂದು ದೊಡ್ಡ ಭಾಗ ನಮಗೆ ಮರಳಿ ಸಿಗುತ್ತದೆ, ಪಾಕಿಸ್ತಾನ ಇನ್ನು ಮುಂದೆ ನಮಗೆ ಯಾವ ಬಗೆಯಲ್ಲೂ ತೊಂದರೆ ನೀಡಲಾಗದಷ್ಟು ಬಲಹೀನವಾಗುತ್ತದೆ, ಅದರ ಗಡಿಗಳು ಬದಲಾಗುತ್ತವೆ, ಗಾತ್ರ ಕುಗ್ಗುತ್ತದೆ, ನಮ್ಮ ಪಶ್ಚಿಮದಲ್ಲಿ ನಮ್ಮ ಸುರಕ್ಷಾಸ್ಥಿತಿ ಅಗಾಧವಾಗಿ ಬಲಗೊಳ್ಳುತ್ತದೆ ಎಂದು ನಿರೀಕ್ಷಿಸಬಹುದು. ಆದರೆ ಈ ದಾರಿಯಲ್ಲಿ ನಾವು ಅತಿ ಎಚ್ಚರಿಕೆಯಿಂದ ಸಾಗಬೇಕು ಎನ್ನುವುದರ ಅರಿವೂ ನಮಗಿರಬೇಕು. ಅದರ ಸೂಚನೆಗಳನ್ನು ನಮ್ಮ ಸರ್ಕಾರ ನಮಗೆ ನೀಡುತ್ತಲೇ ಇದೆ. ಅವುಗಳಲ್ಲಿ ಮುಖ್ಯವಾದುದು ಇಂದು (ಮೇ 7) ದೇಶದ 244 ಜಿಲ್ಲೆಗಳಲ್ಲಿ ನಡೆಸಲಾಗುವ ನಾಗರಿಕ ಸುರಕ್ಷೆ ಕುರಿತಾಗಿನ ಅಣಕು ಕವಾಯಿತು. ಇಂತಹ ಕವಾಯಿತು ಪಂಜಾಬ್​ನ ಫಿರೋಜ್​ಪುರ್ ಜಿಲ್ಲೆಯಲ್ಲಿ ಕಳೆದ ಭಾನುವಾರ, ಮೇ 4ರಂದು ನಡೆದಿದೆ. ಶತ್ರುವಿನ ವಾಯುದಾಳಿಯ ಸಮಯದಲ್ಲಿ ನಾಗರಿಕರು ತಮ್ಮ ರಕ್ಷಣೆಗಾಗಿ ಏನೇನು ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕು ಎಂಬ ಕಸರತ್ತು ಅಂದು ನಡೆಯಿತು.

ಜತೆಗೆ ಶತ್ರುವಿನ ಯುದ್ಧವಿಮಾನಕ್ಕೆ ರಾತ್ರಿಯ ವೇಳೆ ನಮ್ಮ ನಗರ/ಪಟ್ಟಣಗಳ ಸುಳಿವು ಹತ್ತದಂತೆ ಹೇಗೆ ಕತ್ತಲುಗೊಳಿಸಬೇಕೆಂಬ ಕಸರತ್ತೂ ರಾತ್ರಿ ಒಂಬತ್ತರಿಂದ ಒಂಬತ್ತೂವರೆಯವರೆಗೆ ನಡೆಯಿತು. ಫಿರೋಜ್​ಪುರ್ ಜಿಲ್ಲೆಯಲ್ಲೇ ಮೊದಲು ಏಕೆ ನಡೆಯಿತೆನ್ನುವುದಕ್ಕೆ ಅರ್ಥವಿದೆ. ಹಿಂದಿನ ಪ್ರತಿಯೊಂದು ಯುದ್ಧದಲ್ಲೂ ಆ ಗಡಿ ಪಾಕಿಸ್ತಾನದ ಆಕ್ರಮಣಕ್ಕೆ ತುತ್ತಾಗಿತ್ತು. ಥಾರ್ ಮರುಭೂಮಿಯ ಉತ್ತರ ಭಾಗವಾದ ಬಿಕಾನೇರ್ ಸೇರಿದಂತೆ ಆ ವಲಯದಕ್ಕೆ ನೀರುಣಿಸುವ ಕಾಲುವೆಗಳ ನಿಯಂತ್ರಣ ಕೇಂದ್ರ ಅಲ್ಲಿರುವುದರಿಂದ ಫಿರೋಜ್​ಪುರ್ ಮೇಲೆ ಪಾಕಿಗಳ ಕಾಕದೃಷ್ಟಿ ಮತ್ತು ಅದಕ್ಕೆ ವಿರುದ್ಧವಾಗಿ ನಮ್ಮ ಹದ್ದಿನ ಕಣ್ಣು. ಹೀಗಾಗಿ ಯುದ್ಧದ ಸನ್ನಿವೇಶ ಉಂಟಾಗುತ್ತಿದ್ದಂತೇ ಆ ಜಿಲ್ಲೆಯಲ್ಲಿ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. 2004ರ ಡಿಸೆಂಬರ್​ನಲ್ಲಿ ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿಯಾದ ನಂತರ ಹತ್ತು ತಿಂಗಳುಗಳ ಕಾಲ ಭಾರತ ಮತ್ತು ಪಾಕಿಸ್ತಾನಗಳ ಸೇನೆಗಳು ಗಡಿಯಲ್ಲಿ ಕಣ್ಣಿಗೆ ಕಣ್ಣು ಹೂಡಿ ನಿಂತಾಗಲೂ ಇದೇ ಕವಾಯತನ್ನು ನಡೆಸಲಾಗಿತ್ತು. ಫಿರೋಜ್​ಪುರ್​ನಲ್ಲಿ ನಡೆದದ್ದು ಮೇ 7ರಂದು ದೇಶದ ದೊಡ್ಡ ಭಾಗದಲ್ಲಿ ನಡೆಯಲಿದೆ.

ಇದೆಲ್ಲದರ ಅರ್ಥ ಪಾಕಿಸ್ತಾನದ ಮೇಲೆ ದಾಳಿಗೆ ಅಥವಾ ನಮ್ಮ ದೇಶದ ಮೇಲೆ ಆ ದೇಶ ಎಸಗಬಹುದಾದ ದಾಳಿಗೆ ಸೂಕ್ತ ತಯಾರಿಗಳನ್ನು ನಮ್ಮ ಸರ್ಕಾರ ಮಾಡಿಕೊಳ್ಳುತ್ತಿದೆ ಎನ್ನುವ ಸೂಚನೆ ನಮ್ಮ ನಾಗರಿಕರಿಗೆ ಸಿಕ್ಕಿದಂತೆ. ಮಾಹಿತಿಗಳ ಪ್ರಕಾರ ನಮಗೆ ದೊಡ್ಡ ಪ್ರಮಾಣದಲ್ಲಿ ಹಾನಿಯೆಸಗುವ ಸಾಮರ್ಥ್ಯ ಇಂದಿನ ಪಾಕಿಸ್ತಾನಕ್ಕೆ ಇಲ್ಲ. ಈ ಕುರಿತಾಗಿ ಹೇಳಲು ಪ್ರತ್ಯೇಕ ಲೇಖನವೇ ಅಗತ್ಯವಾಗುತ್ತದೆ. ಅದನ್ನು ಮುಂದಿನ ವಾರ ವಿಶ್ಲೇಷಣೆಗೆತ್ತಿಕೊಳ್ಳೋಣ. ಅಷ್ಟರವರೆಗೆ ಈ ಸೂಕ್ಷ್ಮ ಸನ್ನಿವೇಶದಲ್ಲಿ ನಮ್ಮ ನಾಯಕತ್ವದ ಮೇಲೆ ಭರವಸೆಯಿಟ್ಟು ಅದರ ಎಲ್ಲ ಸುರಕ್ಷಾ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ನಮ್ಮೆಲ್ಲರ ಜವಾಬ್ದಾರಿ. ರಾಷ್ಟ್ರದ ಹಾಗೂ ನಮ್ಮ ಹಿತದ ದೃಷ್ಟಿಯಿಂದ ಇದು ಅತ್ಯಗತ್ಯ.