ಅಂಕಣ

ಸೌಥಾಂಪ್ಟನ್ ನಿರಾಸೆ ಕಲಿಸಿದ ಪಾಠ: ಸವ್ಯಸಾಚಿ ಅಂಕಣ

Webdesk - Ravikanth

ಭಾರತೀಯ ಕ್ರಿಕೆಟಿಗರ ಬಹುದೊಡ್ಡ ಕನಸೊಂದು ಇಂಗ್ಲಿಷ್ ಮಳೆಗಾಲದಲ್ಲಿ ಕೊಚ್ಚಿಹೋಗಿ ಬಂದರುನಗರಿ ಸೌಥಾಂಪ್ಟನ್ ಸಮುದ್ರದ ತಳ ಸೇರಿತು. ಇನ್ನೊಂದೆಡೆ ನ್ಯೂಜಿಲೆಂಡ್ ಕ್ರಿಕೆಟಿಗರು ಎರಡು ವರ್ಷದ ಕೆಳಗೆ ಇಂಗ್ಲೆಂಡ್​ನಲ್ಲೇ ಕಳೆದುಕೊಂಡಿದ್ದನ್ನು ಅದೇ ನೆಲದಲ್ಲಿ ಗೆದ್ದು ಬೀಗಿದರು. 2019ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಐಸಿಸಿಯ ವಿಚಿತ್ರ ನಿಯಮದಿಂದ ಟ್ರೋಫಿ ವಂಚಿತವಾಗಿದ್ದ ಕಿವೀಸ್, ಈ ಬಾರಿ ಭಾರತವನ್ನು ಅಧಿಕಾರಯುತವಾಗಿ ಸೋಲಿಸುವ ಮೂಲಕ ಚೊಚ್ಚಲ ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು.

ವಿರಾಟ್ ಕೊಹ್ಲಿ ಬಳಗದ ಮೇಲೆ ಅಪಾರ ನಿರೀಕ್ಷೆ ಇತ್ತು. ಗೆದ್ದೇಗೆಲ್ಲುವ ಭರವಸೆ ಇತ್ತು. ಆದರೆ, ಮಳೆ ಮತ್ತು ಮಂದ ಬೆಳಕಿನ ಕಣ್ಣಾಮುಚ್ಚಾಲೆಯಾಟದ ನಡುವೆ, ಆರು ದಿನಗಳ ಪಂದ್ಯದಲ್ಲಿ ಸಾಧ್ಯವಾದ ಮೂರು ದಿನಗಳ ನಾಟಕೀಯ ಆಟದಲ್ಲಿ ಕಂಡಿದ್ದ ಕನಸುಗಳೆಲ್ಲ ನುಚ್ಚುನೂರಾದವು. ಯಶಸ್ಸನ್ನಾಗಲೀ, ವೈಫಲ್ಯವನ್ನಾಗಲಿ ಒಂದು ಫಲಿತಾಂಶದ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. ಆಕಸ್ಮಿಕವೆನ್ನುವುದೊಂದು ಇರುತ್ತದೆ. ಆದರೆ, ಅಕಸ್ಮಾತ್ ಎಂದುಕೊಂಡ ಹಿನ್ನಡೆಗಳಲ್ಲಿ ನಿರಂತರತೆ ಕಂಡುಬಂದಾಗ ಅದು ಆತಂಕಕಾರಿ. ಗೆದ್ದಾಗ ಮೈಮರೆಯಬಾರದು, ಸೋತಾಗ ನೆಪಗಳ ಬಾಲ ಹಿಡಿಯಬಾರದು. ಅಂಥ ವಸ್ತುನಿಷ್ಠ ಪರಾಮರ್ಶೆಯ ಅವಶ್ಯಕತೆ ಈಗಿದೆ.

ಭಾರತ ತಂಡ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲೂ ಪಾರಮ್ಯ ಮೆರೆದಿತ್ತು. ಇದು ಸರ್ವರೀತಿಯಲ್ಲಿ ಸಂಭ್ರಮ ಪಡುವ ವಿಚಾರವೇ. ಆದರೆ, ಆ ಎರಡೂ ದಿಗ್ವಿಜಯಗಳ ನಡುವೆ ಒಂದು ಸಾಮ್ಯವಿತ್ತು. ಅದೇನೆಂದರೆ, ಆ ಎರಡೂ ಯಶಸ್ಸು ಬೌಲರ್​ಗಳು ಮತ್ತು ಕೆಳಕ್ರಮಾಂಕದ ಬ್ಯಾಟ್ಸ್​ಮನ್​ಗಳ ಸಾಹಸದಿಂದ ಒಲಿದಿತ್ತು. ಹಾಗೆ ನೋಡಿದರೆ, ಕಳೆದ 19 ತಿಂಗಳ ಅವಧಿಯಲ್ಲಿ ಆಡಿರುವ 9 ಟೆಸ್ಟ್​ಗಳ ಪೈಕಿ ಭಾರತ ಅಗ್ರಮಾನ್ಯ ಬ್ಯಾಟ್ಸ್ ಮನ್​ಗಳ ಪ್ರದರ್ಶನ ಬಲದಿಂದ ಗೆದ್ದಿರುವುದು 2 ಟೆಸ್ಟ್ ಮಾತ್ರ. ಆಸೀಸ್ ವಿರುದ್ಧ ಪರ್ತ್​ನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಶತಕ ಹಾಗೂ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮ ಶತಕಗಳು ತಂಡಕ್ಕೆ ಗೆಲುವು ತಂದುಕೊಟ್ಟಿದ್ದವು. ಚೆನ್ನೈ ಪಂದ್ಯದಲ್ಲಿ ಅಶ್ವಿನ್ ಸಹ ಶತಕ ಬಾರಿಸಿದ್ದರು. ಉಳಿದಂತೆ ಆಸ್ಟ್ರೇಲಿಯಾ ಪ್ರವಾಸದ 3 ಮತ್ತು 4ನೇ ಟೆಸ್ಟ್​ನಲ್ಲಿ ಭಾರತದ ಮೇರು ಯಶಸ್ಸಿನ ರೂವಾರಿಗಳು ಹನುಮ ವಿಹಾರಿ, ರವೀಂದ್ರ ಜಡೇಜಾ, ರಿಷಬ್ ಪಂತ್, ಅಶ್ವಿನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕುರ್ ಮುಂತಾದವರು. ಇಂಗ್ಲೆಂಡ್ ವಿರುದ್ಧದ ತವರಿನ 3ನೇ ಟೆಸ್ಟ್​ನಲ್ಲಿ ಭಾರತವನ್ನು ಗೆಲ್ಲಿಸಿದ್ದು ಬೌಲರ್​ಗಳಾದರೆ, 4ನೇ ಟೆಸ್ಟ್​ನಲ್ಲಿ ಪಂತ್ ಶತಕ ಮತ್ತು ಸುಂದರ್ 96 ರನ್​ಗಳ ಆಟ ಭಾರತಕ್ಕೆ ಜಯ ತಂದುಕೊಟ್ಟಿತು.

ಅಂದರೆ, ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿರುವ ಭಾರತ ತುರ್ತಾಗಿ ಅಗ್ರಕ್ರಮಾಂಕದ ಬ್ಯಾಟ್ಸ್ ಮನ್​ಗಳ ಅಸ್ಥಿರ ನಿರ್ವಹಣೆಯ ಬಗ್ಗೆ ಗಮನ ಹರಿಸಬೇಕಿದೆ. ರೋಹಿತ್ ಶರ್ಮ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ದೊಡ್ಡ ಮೊತ್ತ ಗಳಿಸಲು ವಿಫಲವಾಗುತ್ತಿರುವುದು ಭಾರತಕ್ಕೆ ಹಿನ್ನಡೆ ಉಂಟುಮಾಡುತ್ತಿದೆ. ಇತ್ತೀಚಿನ 9 ಟೆಸ್ಟ್ ಗಳಲ್ಲಿ ಭಾರತ ಒಮ್ಮೆಯೂ 400 ರನ್ ಗಡಿ ತಲುಪಿಲ್ಲ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ನಲ್ಲಿ 365 ರನ್ ಗಳಿಸಿದ್ದೇ ಗರಿಷ್ಠ ಮೊತ್ತ. ಆಸ್ಟ್ರೇಲಿಯಾ ಪ್ರವಾಸದ ಮೊದಲ 2 ಟೆಸ್ ಗೆ ರೋಹಿತ್ ಅಲಭ್ಯರಾಗಿದ್ದರೆ, ಕೊನೆಯ 3 ಟೆಸ್ಟ್​ಗೆ ನಾಯಕ ಕೊಹ್ಲಿ ಲಭ್ಯರಿರಲಿಲ್ಲ. ಉಳಿದಂತೆ ಆಡಿದ ಪಂದ್ಯಗಳಲ್ಲಿ ರೋಹಿತ್ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್​ನಲ್ಲಿ 166 ರನ್ ಗಳಿಸಿದ್ದರು. ಜೊತೆಗೆ 2 ಅರ್ಧ ಶತಕ (66, 52) ಬಾರಿಸಿದ್ದಾರೆ. ಆದರೆ, ಇತರ 7 ಇನಿಂಗ್ಸ್​ಗಳಲ್ಲಿ 25 ರಿಂದ 49 ರನ್​ಗಳ ನಡುವೆ ವಿಕೆಟ್ ಚೆಲ್ಲಿದ್ದಾರೆ. ವಿರಾಟ್ ಕೊಹ್ಲಿ ಸಹ ಅಷ್ಟೇ. ಕಳೆದ 19 ತಿಂಗಳಲ್ಲಿ ಆಡಿರುವ 6 ಟೆಸ್ಟ್​ನ 10 ಇನಿಂಗ್ಸ್​ಗಳಲ್ಲಿ ಇಂಗ್ಲೆಂಡ್ ವಿರುದ್ಧ 2 ಬಾರಿ, ಆಸೀಸ್ ವಿರುದ್ಧ ಒಮ್ಮೆ ಅರ್ಧ ಶತಕ (62, 72, 74) ಬಾರಿಸಿ, ಇನ್ನೇನು ಶತಕ ಗ್ಯಾರಂಟಿ ಎಂಬ ಭರವಸೆ ಮೂಡುವ ಹೊತ್ತಿನಲ್ಲಿ ನಿರ್ಗಮಿಸಿದ್ದಾರೆ. ಅದರಲ್ಲೂ 2019 ನವೆಂಬರ್​ನಲ್ಲಿ ಬಾಂಗ್ಲಾ ವಿರುದ್ಧ 27ನೇ ಟೆಸ್ಟ್ ಶತಕ ಬಾರಿಸಿದ ಬಳಿಕ ವಿರಾಟ್ ಇತ್ತೀಚಿನ 46 (ಟೆಸ್ಟ್, ಏಕದಿನ, ಟಿ20 ಸಹಿತ) ಇನಿಂಗ್ಸ್​ಗಳಲ್ಲಿ ಶತಕದ ಸವಿ ಕಂಡಿಲ್ಲ. ಮೊನ್ನೆ ನ್ಯೂಜಿಲೆಂಡ್ ವಿರುದ್ಧ ಪಂದ್ಯದ ಮೊದಲ ಇನಿಂಗ್ಸ್​ನಲ್ಲೂ ಅಷ್ಟೇ. ರೋಹಿತ್ ಮತ್ತು ವಿರಾಟ್ ಕ್ರೀಸಿನಲ್ಲಿರುವಷ್ಟು ಹೊತ್ತು ಶತಕ ಗ್ಯಾರಂಟಿ ಎಂಬ ಭರವಸೆ ಇತ್ತಾದರೂ, ಇದ್ದಕ್ಕಿದ್ದಂತೆ ವಿಕೆಟ್ ಕೈಚೆಲ್ಲಿದರು. ಅತ್ಯಂತ ವೇಗವಾಗಿ 70 ಅಂತಾರಾಷ್ಟ್ರೀಯ ಶತಕ ಬಾರಿಸಿದ ಬಳಿಕ ಮತ್ತೊಂದು ಶತಕಕ್ಕಾಗಿ ಪರದಾಡುತ್ತಿರುವ ವಿರಾಟ್ ಮತ್ತು 2019ರ ವಿಶ್ವಕಪ್ ನಂತರ ಹಳೆಯ ರೌದ್ರಾವತಾರ ಮರೆತು ಮೆದುವಾಗಿರುವ ರೋಹಿತ್ ದೊಡ್ಡ ಇನಿಂಗ್ಸ್ ಆಡಲು ವಿಫಲರಾಗುತ್ತಿರುವುದು ತಂಡಕ್ಕೆ ದುಬಾರಿಯಾಗುತ್ತಿದೆ.

ಸಾಲದೆಂಬಂತೆ ಸೂಕ್ತ ಆರಂಭಿಕ ಜೋಡಿಯೊಂದನ್ನು ಕಂಡುಕೊಳ್ಳಲು ತಂಡ ವಿಫಲವಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ದೊರೆತ ಬೆರಳೆಣಿಕೆಯ ಅವಕಾಶಗಳಲ್ಲಿ ಮಯಾಂಕ್ ಅಗರ್​ವಾಲ್ ವಿಫಲರಾದ ಮೇಲೆ, ಶುಭಮಾನ್ ಗಿಲ್ ಅಗ್ರ ಕ್ರಮಾಂಕದಲ್ಲಿ ರೋಹಿತ್ ಜತೆ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಈ ರೀತಿ ಅವಕಾಶ ಪಡೆದ 8 ಟೆಸ್ಟ್​ಗಳ 15 ಇನಿಂಗ್ಸ್​ಗಳಲ್ಲಿ ಅವರು 3 ಅರ್ಧ ಶತಕ ಬಾರಿಸಿದ್ದಾರೆ. ಆಸೀಸ್ ವಿರುದ್ಧ 4ನೇ ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ ಗಳಿಸಿದ 91 ರನ್ ಮ್ಯಾಚ್​ವಿನ್ನಿಂಗ್ ಇನಿಂಗ್ಸ್ ಆಗಿತ್ತು. ಅಷ್ಟಾಗಿಯೂ ಟೆಸ್ಟ್ ಕ್ರಿಕೆಟ್​ನಲ್ಲಿ ತಂಡದ ಅದೃಷ್ಟ ಬದಲಾಯಿಸುವಂಥ ದೊಡ್ಡ ಇನಿಂಗ್ಸ್ ಆಡಲು ವಿಫಲರಾಗುತ್ತಿದ್ದಾರೆ. ಕೆ.ಎಲ್. ರಾಹುಲ್, ಶಿಖರ್ ಧವನ್​ರಂಥ ಅನುಭವಿಗಳ ಸ್ಥಾನ ಆಕ್ರಮಿಸಿರುವ ಗಿಲ್ ಶೀಘ್ರ ತಮ್ಮ ಜವಾಬ್ದಾರಿ ಅರಿಯಬೇಕಿದೆ.

ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡದ ಬೆನ್ನೆಲುಬು. ದಿಗ್ಗಜ ಬ್ಯಾಟ್ಸ್​ಮನ್​ಗಳಾದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಶೋಭೆ ತಂದಿದ್ದ ಕ್ರಮಾಂಕಗಳಲ್ಲಿ ಆಡುತ್ತಿರುವ ಪೂಜಾರ, ರಹಾನೆ ತಂಡದಲ್ಲಿ ತಮ್ಮ ಮೇಲಿರುವ ನಿರೀಕ್ಷೆಗೆ ತಕ್ಕ ನ್ಯಾಯ ಒದಗಿಸುತ್ತಿಲ್ಲವೆಂಬ ಅಭಿಪ್ರಾಯವೂ ಮೂಡುತ್ತಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೂಜಾರ ಹೆಚ್ಚು ರನ್ ಗಳಿಸದಿದ್ದರೂ, ಹೆಬ್ಬಂಡೆಯಂತೆ ನಿಲ್ಲುವ ಮೂಲಕ ಆಸೀಸ್ ಬೌಲರ್​ಗಳನ್ನು ಕಾಡಿದ್ದರು, ತನ್ಮೂಲಕ ಕೆಳಕ್ರಮಾಂಕದ ಬ್ಯಾಟ್ಸ್​ಮನ್​ಗಳು ಸಾಹಸಿಕ ಪ್ರದರ್ಶನ ಮೆರೆಯುವುದಕ್ಕೆ ಸ್ಪೂರ್ತಿಯಾಗಿದ್ದರು. ಇನ್ನು ಅಜಿಂಕ್ಯ ರಹಾನೆ ಕೂಡ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಸ್ಮರಣಾರ್ಹ ಟೆಸ್ಟ್ ಸರಣಿ ಗೆಲುವು ಕೊಡಿಸಿದ್ದರು. 2ನೇ ಟೆಸ್ಟ್​ನಲ್ಲಿ ಶತಕ ಬಾರಿಸುವ ಮೂಲಕ ಈ ಸಾಧನೆಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದರು. ಅದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಅವರಿಂದ ನಿರೀಕ್ಷಿಸಲಾಗುತ್ತಿರುವ ಇನಿಂಗ್ಸ್ ಕಟ್ಟುವ ಆಟ ದಾಖಲಾಗುತ್ತಿಲ್ಲ ಎನ್ನುವುದು ಬೇಸರ. ಪೂಜಾರ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ 75 ರನ್ ಬಾರಿಸಿದ ಬಳಿಕ ಸತತವಾಗಿ ವಿಫಲರಾಗುತ್ತಿದ್ದಾರೆ. ರಹಾನೆ ಕೂಡ ಪರ್ತ್ ಶತಕದ ಬಳಿಕ ಮಂಕಾಗಿದ್ದಾರೆ. ಇವರಿಬ್ಬರ ಶತಕದ ಬರದಿಂದಾಗಿ ಭಾರತ ದೊಡ್ಡ ಮೊತ್ತ ಪೇರಿಸಲು ವಿಫಲವಾಗುತ್ತಿದೆ. ಮೊನ್ನೆ ನ್ಯೂಜಿಲೆಂಡ್ ವಿರುದ್ಧವೂ ಪೂಜಾರ, ರಹಾನೆ ವಿಫಲರಾದರು. ಅಗ್ರ ಮತ್ತು ಮಧ್ಯಮ ಕ್ರಮಾಂಕಗಳಲ್ಲಿ ಸ್ಥಿರತೆ ಇಲ್ಲದಿರುವಾಗ ಪ್ರತೀ ಬಾರಿ ಬಾಲಂಗೋಚಿಗಳು ಸಾಹಸ ಮೆರೆಯಲಿ ಎಂದು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ

ಇಂಗ್ಲೆಂಡ್ ತಂಡ ರೊಟೇಷನ್ ಪದ್ಧತಿ ಅನುಸರಿಸುತ್ತಿರುವಂತೆ ಭಾರತ ಸಹ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್​ರಂಥ ಆಟಗಾರರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಯೋಚಿಸುವುದೊಳಿತು.

ಇಷ್ಟೆಲ್ಲದರ ನಡುವೆಯೂ ಭಾರತ ತುಂಬ ಚಿಂತೆ ಪಟ್ಟುಕೊಂಡು ದೊಡ್ಡ ಬದಲಾವಣೆಗೆ ಕೈಹಾಕುವ ಅಗತ್ಯವೇನೂ ಇಲ್ಲ. ಏಕೆಂದರೆ, ತಂಡ ಸೋತಿದ್ದು ವಿಶ್ವ ಚಾಂಪಿಯನ್​ಷಿಪ್​ನ ಫೈನಲ್​ನಲ್ಲಿ. ಒಂದು ಸೋಲು ಹಲವು ಯಶಸ್ಸುಗಳನ್ನು ಮರೆಮಾಚಲು ಸಾಧ್ಯವಿಲ್ಲ. ಕಳೆದೊಂದು ವರ್ಷದಿಂದ ಕರೊನಾ ಬಯೊಬಬಲ್​ನಲ್ಲಿ ಭಾರತ ತಂಡ ಕಳೆದಷ್ಟು ಅವಧಿಯನ್ನು ಬಹುಶಃ ಬೇರಾವುದೇ ತಂಡ ಕಳೆದಿಲ್ಲ. ಸಾಲದೆಂಬಂತೆ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್​ನಲ್ಲೇ ಎರಡು ಟೆಸ್ಟ್ ಆಡಿ ಮ್ಯಾಚ್​ಪ್ರಾಕ್ಟೀಸ್ ಪಡೆದಿತ್ತು. ಇತ್ತ ಐಪಿಎಲ್ ವಿಶ್ರಾಂತಿ ಬಳಿಕ ಎರಡು ಹಂತದ ಕ್ವಾರಂಟೈನ್​ನಲ್ಲಿದ್ದ ಭಾರತೀಯರಿಗೆ ಆ ಅವಕಾಶ ಇರಲಿಲ್ಲ. ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಇದ್ದಿದ್ದೇ. ಆದರೆ, ಸೋಲಿನಿಂದಲೂ, ಗೆಲುವಿನಿಂದಲೂ ಪಾಠ ಕಲಿಯುವುದು ಮುಖ್ಯ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)