ಪಯಣದಲ್ಲಿ ಸೀದಾ ಒಂದು ಸ್ಥಳಕ್ಕೆ ಹೋಗಿ ಸೆಲ್ಪಿ ಕ್ಲಿಕ್ಕಿಸುವುದಕ್ಕಿಂತ, ಅಲ್ಲಿಗೆ ತಲುಪುವ ಉದ್ದಾನುಉದ್ದದ ಪಯಣ ಇದೆಯಲ್ಲ ಅದೇ ಕೊನೆಯವರೆಗೂ ನೆನಪಿನಲ್ಲಿರುವ ಅದ್ಭುತ, ಅದೂ ವಿದೇಶದಲ್ಲಿ. ನೆನಪಿಸಿಕೊಳ್ಳಿ ಬೇಕಿದ್ದರೆ. ಇಂಥ ಅನುಭವಗಳೇ ಪ್ರವಾಸವನ್ನು ಹೆಚ್ಚು ಆಪ್ತವಾಗಿಸುತ್ತವೆ, ಹೊಸ ಹೊಳಹುಗಳನ್ನು ನೀಡುತ್ತವೆ.
ಬ್ರಿಟಿಷರು ಆ ಸ್ಥಳವನ್ನು ಗ್ರಿನೀಚ್ ಎನ್ನುತ್ತಾರೆ. ಈ ಗ್ರಿನೀಚ್ಗಿಂತ ಅಲ್ಲಿಗೆ ತಲುಪುವ ಮಾರ್ಗಗಳೇ ಅದ್ಭುತ. ಯಾವುದೇ ಮಾರ್ಗದಲ್ಲಿ ಲೆಕ್ಕ ಹಾಕಿದರೂ ಸೆಂಟ್ರಲ್ ಲಂಡನ್ನಿಂದ ಆರೆಂಟು ಮೈಲಿ ಮಾತ್ರ. ಆದರೆ ಅಲೆಮಾರಿತನಕ್ಕೆ ಬಿದ್ದವನು ಸೀದಾ ರಸ್ತೆ ಮೇಲೆ ಹೋಗೋದಾದರೂ ಹೇಗೆ? ಅದೂ ಒಂದು ಪಯಣವಾ? ನೆನಪಿರಲಿ, ಗ್ರಿನೀಚ್ ಹೊರಡುವ ಮೊದಲು ಲಂಡನ್ ಬ್ರಿಡ್ಜ್ ಮತ್ತು ಲಂಡನ್ ಟವರ್ ಬ್ರಿಡ್ಜ್ ಎರಡನ್ನೂ ಅಲ್ಲೇ ಪೂರೈಸಿಕೊಳ್ಳುವುದು ಆರ್ಥಿಕವಾಗಿ ತುಂಬ ಲಾಭದಾಯಕ.
ಅದಲ್ಲದೆ, ಮೊದಲೆಲ್ಲ ‘ಲಂಡನ್ ಬ್ರಿಡ್ಜ್ ಇಸ್ ಫಾಲಿಂಗ್ ಡೌನ್’ ಎಂದು ಹಾಡಿದ್ದರ ಹೊರತಾಗಿಯೂ ನನ್ನನ್ನು ಆಕರ್ಷಿಸಲು ಬಲವಾದ ಕಾರಣ ಬೇರೆ ಇತ್ತು. ಇದೇ ಹೆಸರಿನ ಸೇತುವೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ, ಕೋಣೆನಾಲಾ ಮತ್ತು ಸಮುದ್ರಕ್ಕೆ ಸೇರುವ ದಾರಿಯಲ್ಲಿದ್ದುದು, ಅನಾಮತ್ತಾಗಿ ಒಂದೂವರೆ ಶತಮಾನ ಬದುಕಿತ್ತು. ಅಂಕೋಲೆಯ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಮುಖ್ಯ ಸಂಪರ್ಕ ಸೇತುವೆ ಆಗಿತ್ತು ಕೂಡ.
ಕೇವಲ ಎರಡು-ಮೂರು ದಶಕದ ಸೇತುವೆಗಳೇ ಉರುಳುವಾಗ, ಯಾವ ಅತಿಭಾರದ ವಾಹನ ಹಾಯ್ದರೂ ಜಗ್ಗದೇ ನಿಂತ ಹೆಗ್ಗಳಿಕೆ, ಗಟ್ಟಿತನಕ್ಕೆ ಮಾನದಂಡವಾಗಿ ಕಾಡಿದ್ದೂ ಹೌದು. ಹಾಗಾಗಿ ಇಂಗ್ಲೆಂಡು ತಲುಪಿದ ಮರುದಿನವೇ ಸೆಂಟ್ರಲ್ ಲಂಡನ್ಗೆ ಹೊರಟು ನಿಂತಿದ್ದೆ. ಪ್ರವಾಸದ ಲೆಕ್ಕದಲ್ಲಾದರೆ ಖರ್ಚು ಭರಿಸಬಹುದು. ಆದರೆ ನನ್ನಂಥ ಬಡಲೇಖಕ ನೂರಾರು ಪೌಂಡು ಭರಿಸೋದಾದರೂ ಹೇಗೆ? ಓಡಾಟವೆಂದರೆ ಬರೀ ತಾಣ ತಲುಪುವುದಲ್ಲವಲ್ಲ, ವಿದೇಶವನ್ನು ನೋಡುವ ವಿಭಿನ್ನ ವಿಧಾನವೂ ಹೌದು.
ಹಾಗಾಗಿ ಗ್ರಿನೀಚ್ಗೂ ಮೊದಲು ಸೆಂಟ್ರಲ್ ಲಂಡನ್ಗೋಸ್ಕರ, ನಾನಿದ್ದ ಹಾನ್ಸ್ಲೋದಿಂದ ಬಸ್ ಮೂಲಕ ಆಸ್ಟರ್ಲೀ ಸೇರಿ, ಅಲ್ಲಿಂದ ಗ್ರೀನ್ಪಾರ್ಕ್ ಸ್ಟೇಶನ್ ತಲುಪಲು, ಪಿಕೀಡಿಲ್ಲಿ ಟ್ಯೂಬ್ನಲ್ಲಿ ಪಯಣ ಕೇವಲ ಹದಿನೈದೇ ನಿಮಿಷದ್ದು. ಅದೇ ನಿಲ್ದಾಣದಲ್ಲಿ ಅಡ್ಡಲಾಗಿ ಬರುವ ಜ್ಯೂಬಿಲಿ ಮೆಟ್ರೋ ಮೂಲಕ ಲಂಡನ್ ಬ್ರಿಡ್ಜ್ ಹೆಸರಿನದ್ದೇ ಅಂಡರ್ಗ್ರೌಂಡ್ ನಿಲ್ದಾಣ ತಲುಪಿದಾಗ ಒಟ್ಟೂ ಮುಕ್ಕಾಲು ಗಂಟೆ. ಟ್ಯಾಕ್ಸಿಗಾದರೆ ಹತ್ತಾರು ಸಾವಿರ ಬಿಲ್ ಕೇಳುವ ಇದಕ್ಕೆ ನನಗೆ ತಗುಲಿದ್ದು ಕೇವಲ ಮೂರುವರೆ ಪೌಂಡು. ಅಂದ ಹಾಗೆ ಗ್ರೇಟ್ಬ್ರಿಟನ್ ಜಾಲಾಡಲು ಹನ್ನೊಂದು ಮೆಟ್ರೊ ಲೈನ್ಗಳು ಇದ್ದು, ಸರಿಯಾಗಿ ಬಳಸಿಕೊಂಡರೆ ಮುಕ್ಕಾಲು ವೆಚ್ಚ ಉಳಿತಾಯ ಖಚಿತ.
ಅಂಡರ್ಗ್ರೌಂಡ್ನಿಂದ ಮೇಲೆ ಹತ್ತಿ ಬಂದರೆ, ಥೇಮ್್ಸ ಅಲೆಗಳ ಸವರಿ ಬರುತ್ತಿದ್ದ ರಣಚಳಿಯ ಗಾಳಿ ಥರಥರ ನಡುಗಿಸುತ್ತಿತ್ತು. ಆದರೆ ನೋಡುವ ಕಾತುರಕ್ಕೆ ಎದುರಿಗೇ ಕಾಣಿಸಿದ್ದು ನದಿಯ ಬಲಭಾಗದಲ್ಲಿ ವಿಶ್ವವಿಖ್ಯಾತ ಲಂಡನ್ ಸೇತುವೆ. ನನ್ನ ನಿರೀಕ್ಷೆ ಸುಳ್ಳಾಗಿರಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರವೇಶ ಭಾಗದಲ್ಲಿ ಬ್ರಿಟಿಷರು ಸಮುದ್ರ ಕುತ್ತಿಗೆಯಲ್ಲಿ ನಿರ್ವಿುಸಿ ಗೋವಾಕ್ಕೆ ಸಂಪರ್ಕ ಕಲ್ಪಿಸಿಕೊಂಡ ಸೇತುವೆಯ ಮಾದರಿ, ಅದರ ಕಂಬ, ಲೈಟು ಇತ್ಯಾದಿ ವ್ಯವಸ್ಥೆ ಥೇಟ್ ಇದೇ ತರಹ ಕಟ್ಟಲ್ಪಟ್ಟಿತ್ತು.
ಲಂಡನ್ ಸೇತುವೆ ಕಲ್ಲಿನ ಕಂಬಗಳ ಮೇಲೆ ನಿರ್ಮಾಣ ವರ್ಷ ಕೆತ್ತಲಾಗಿದ್ದು, ಇದು ಜಗತ್ತಿನ ಅತ್ಯಂತ ಪುರಾತನ ಸೇತುವೆಗಳ ಪೈಕಿ ಒಂದು. ಇದನ್ನು ಲಂಡನ್ನಿಗರು ತುಂಬ ಆಸ್ಥೆಯಿಂದ ಕಾಯ್ದುಕೊಂಡಿದ್ದಾರೆ. ಅದೀಗಾಗಲೇ ಶತಶತಮಾನಗಳಷ್ಟು ಹಳೆಯದಾಗಿದ್ದರೂ, ಅದರ ಮೇಲೆ ನಿಂತು, ಕೂತು ಬಂದು ಸೆಲ್ಪಿ ಜೊತೆಗೆ ವಿಹರಿಸುವವರಿಗೇನೂ ಕೊರತೆ ಇಲ್ಲ ಈಗಲೂ. ಕಾರಣ ಇಂಗ್ಲೆಂಡಿನ ಪರಂಪರೆಯ ಭಾಗವಾಗಿದೆ ಅದು.
ಅಲ್ಲೆ ಇದ್ದ ಲಂಡನ್ ಥಿಯೇಟರ್ ನೋಡಿಕೊಂಡು ಸೇತುವೆ ಮೇಲೆ ಬಂದರೆ ಜನವೋ ಜನ. ಕ್ರಿಸ್ವುಸ್ ಸಮಯ ಬೇರೆ. ಎಲ್ಲೆಲ್ಲೂ ಬಣ್ಣವೋ ಬಣ್ಣ. ಅದರಲ್ಲೂ ಬ್ರಿಟಿಷರು ಬಣ್ಣಕ್ಕೆ, ಬಟ್ಟೆಗೆ ಹೇಳಿ ಮಾಡಿಸಿದ ಜನ. ಎಂಥ ಕ್ವಾಲಿಟಿ ಇರಲಿ ಆದರೆ ಬಣ್ಣ ಮಾತ್ರ ಕಡುಕಪ್ಪಿನದ್ದೇ ಕೋಟು ಸಹಿತ ಚೆಂದ ಚೆಂದ ಕೆಂಪು ಅಂಗಿ ತೊಟ್ಟು, ನಿಲ್ಲುವ ಫರಂಗಿಗಳ ನೋಡುವುದೇ ಚೆಂದ. ಸೇತುವೆ ಮತ್ತು ಥೇಮ್ಸ್ನ ಅಬ್ಬರಕ್ಕೆ ಇಂಥದ್ದೊಂದು ಜನ ನಿಬಿಡತೆ ಇಲ್ಲದಿದ್ದರೆ ನಾವು ಹೌಹಾರುವುದು ನಿಶ್ಚಿತ. ಕಾರಣ ಅದು ನದಿಯಲ್ಲಿ ಸಮುದ್ರದಂತೆ ಭೋರ್ಗರೆಯುತ್ತದೆ. ಥೇಮ್ಸ್ನ ಈ ಪಾರಂಪರಿಕ ಸೇತುವೆಗೂ ಬಿಳಿಯರಿಗೂ ಅವಿನಾಭಾವ ಸಂಬಂಧವಿದೆ. ಸ್ಥಳೀಯರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ ಇಲ್ಲೆಲ್ಲ.
ಸೇತುವೆಯ ಮಧ್ಯದಲ್ಲಿ, ಹಳೆಯ ಕಾಮಗಾರಿಯ ದಪ್ಪದಪ್ಪ ಕಬ್ಬಿಣದ ಸರಪಳಿ ಬಿಗಿಯುವ ಕಟ್ಟೆಗಳನ್ನು ಹತ್ತಿ ನಿಂತು ನಾನೂ ಒಂದು ಕ್ಲಿಕ್ ಮಾಡಿಕೊಂಡು ಹೊರಟೆ. ಎರಡೂ ಕಡೆ ತಿರುಗಿ ದಂಡೆಯುದ್ದಕ್ಕೂ ಇರುವ ಅಪ್ರತಿಮ ಚೆಂದಚೆಂದದ ಗಗನಚುಂಬಿ ಕಟ್ಟಡಗಳ ವರ್ಣರಂಜಿತ ಪ್ರದರ್ಶನ ನೋಡುತ್ತ ದೂರಕ್ಕೆ ಕಣ್ಣು ಹಾಯಿಸಿದರೆ, ಎದುರಿಗೇ ಘನಗಾಂಭೀರ್ಯದಿಂದ ಲಂಡನ್ ಟವರ್ ಬ್ರಿಡ್ಜ್ ಕಾಣುತ್ತಿದೆ. ಅದರ ಕೆಳಗೇ ವೆರೈಟಿ ಬಣ್ಣದ ಹಡಗುಗಳು ತೇಲುತ್ತಿವೆ. ಎತ್ತರದ ಹಡಗು ಬಂದರೆ ಸೀದಾ ಬಾಗಿಲು ತೆರೆದಂತೆ ಆಕಾಶಕ್ಕೆ ಮುಖ ಮಾಡಿ ತೆರೆದುಕೊಳ್ಳುವ ಈ ಸೇತುವೆಯ ತಾಂತ್ರಕತೆಯೇ ದೊಡ್ಡ ಆಕರ್ಷಣೆ. ಇನ್ನು ಈ ಸೇತುವೆ ಮೇಲೆ ಹತ್ತಿಳಿದ ಮೇಲೆ ಆ ಟವರ್ನ ಕೆಳಗೆ ಹೋಗದಿದ್ದರೆ ಹೇಗೆ?
ಹೇಗೂ ಥೇಮ್್ಸ ನದಿ ಪಯಣ ನಿರ್ಧರಿಸಿ ಆಗಿತ್ತಲ್ಲ. ಥೇಮ್ಸ್ನ ಬಲಭಾಗದಲ್ಲಿರುವ ಕೌಂಟರ್ನಲ್ಲಿ ಗ್ರಿನೀಚ್ಗೆ ಟಿಕೆಟ್ ಪಡೆದೆ. ಬರೀ ನಾಲ್ಕೂವರೆ ಪೌಂಡು (ಅತ್ಯಂತ ಅಗ್ಗದ ಸೇವೆ ಎಂದರೆ ಇಲ್ಲಿ ಬೋಟುಗಳು ಮತ್ತು ಟ್ಯೂಬ್ ಲೈನ್ಗಳು). ಅದಕ್ಕೂ ಮೊದಲು ‘ಸಿಟಿ ಮ್ಯಾಪರ್’ನಲ್ಲಿ ಈ ನದಿಯ ಪಯಣದಲ್ಲಿ ಹೋಗಿ ಎಲ್ಲಿಳಿದರೆ ಗ್ರಿನೀಚ್ ಮುಟ್ಟುತ್ತೇನೆ? ಅಲ್ಲಿಂದ ಎಷ್ಟು ದೂರಕ್ಕೆ ನಮ್ಮ ಜಗತ್ತಿನ ಸಮಯ ನಿರ್ಧರಿಸುವ ಗ್ಯಾಲರಿ (ರಾಯಲ್ ಆಬ್ಸರ್ವೇಟರಿ) ಇದೆ ಎಲ್ಲ ಲೆಕ್ಕಿಸಿಕೊಂಡಾಗಿತ್ತು.
ಇಲ್ಲೊಂದು ಹೇಳಬೇಕು. ಲಂಡನ್ ತಿರುಗಲು ಸ್ಥಳೀಯ ಬಸ್, ಟ್ಯೂಬ್ ಮತ್ತು ಜಲಮಾರ್ಗ ಬಳಸಲೇಬೇಕು. ಇಲ್ಲದಿದ್ದರೆ ನಿಜವಾದ ಬ್ರಿಟನ್ ನೋಡಲು ಅಸಾಧ್ಯ. ಜೊತೆಗೆ ಒಂದೊಂದು ಸ್ಥಳಕ್ಕಾಗೇ ಟ್ಯಾಕ್ಸಿ ಲೆಕ್ಕಿಸಿದರೆ ಏನಿಲ್ಲ ಎಂದರೂ ನಾಲ್ಕೆ ೖದು ಪೌಂಡು ಬದಲಾಗಿ ನಾಲ್ಕೆ ೖದು ಸಾವಿರ ಕೈ ಬಿಡುತ್ತದೆ. ಹಾಗಾಗಿ ಎಲ್ಲಿ ಯಾವ ಬಸ್ಸು, ರೈಲು, ಕಾಲ್ದಾರಿ, ಮುಂದಿನ ಕನೆಕ್ಷನ್ ಹೀಗೆ ಪ್ರತಿಹಂತ ಗಮನದಲ್ಲಿದ್ದರೆ ಅದ್ಭುತ. ಇದನ್ನೆಲ್ಲ ಸ್ಥಳೀಯ ಮ್ಯಾಪರ್ ಹೇಳಿಕೊಡುತ್ತದೆ. ಇಂಥ ಲೆಕ್ಕಾಚಾರದಿಂದ ನನಗೆ ಹತ್ತಿರ ಹತ್ತಿರ ಲಕ್ಷ ರೂ. ಬಜೆಟ್ ಉಳಿತಾಯವಾಯಿತು ಎಂದರೆ ನಂಬಲೇಬೇಕು.
ಅಷ್ಟೊತ್ತಿಗೆ ಮಧ್ಯಾಹ್ನದ ಎರಡು ಗಂಟೆ. ಹೊಟ್ಟೆ ಚುರ್ರ್ ಎನ್ನುತ್ತಿತ್ತು. ಎದುರಿಗೆ ಹಲವು ಭಕ್ಷ ಭೋಜನ. ಆದರೆ ವಿಪರೀತ ಮಾಂಸಾಹಾರಿ ಆಹಾರದ ಮಧ್ಯೆ ಹುಡುಕಾಟದ ಭೋಜನ ಮುಗಿಸಿ, ಲಂಡನ್ ಸಿಟಿ ಪೈರ್(ಡೆಕ್)ನಿಂದ ಗ್ರಿನೀಚ್ಗೆ ಹೊರಟರೆ ಮೊದಲೇ ಹೇಳಿದಂತೆ, ಪಯಣದ ಅದ್ಭುತ ಅನುಭವ ನಿಮ್ಮದು. ಕಾರಣ ಈ ಥೇಮ್್ಸ ಮೇಲಿನ ವಿಹಾರದಲ್ಲಿ ಗ್ರಿನೀಚ್ ಮಾತ್ರವಲ್ಲ, ಎರಡೂ ದಂಡೆಯ ಅಪರೂಪದ ದೃಶ್ಯಾವಳಿ ಹಾಗೂ ನಾಲ್ಕಾರು ಡೆಕ್ಗಳ ನಿಲುಗಡೆ ಸಂಪರ್ಕವಾಗುವುದರಿಂದ, ಥೇಮ್ಸ್ನಲ್ಲಿ ಹಡಗು ಹತ್ತದಿದ್ದರೆ ಪಯಣ ಮುಗಿಯಲಾರದು.
ಲಂಡನ್ ಸೇತುವೆ ಹಡಗುಕಟ್ಟೆಯಿಂದ ಹೊರಟರೆ, ಅತ್ಯಂತ ಪ್ರಮುಖ ಟವರ್ ಬ್ರಿಡ್ಜ್, ನಮ್ಮ ನೆತ್ತಿಯ ಮೇಲೆ ಹಾಯ್ದುಹೋಗುವ ಅಪರೂಪದ ದೃಶ್ಯಕ್ಕೆ ಪಕ್ಕಾಗುತ್ತೇವೆ. ಇಲ್ಲಿ ಯಾವಾಗೆಲ್ಲ ಎತ್ತರದ ಹಡಗುಗಳು ಬಂದರೆ, ಸೇತುವೆ ಮಧ್ಯೆ ಎರಡು ಭಾಗವಾಗಿ ಮೇಲ್ಮುಖವಾಗಿ ತೆರೆದುಕೊಳ್ಳುವ ಹೈಡ್ರಾಲಿಕ್ ಜಾಕ್ ವ್ಯವಸ್ಥೆಯ ಅಸಾಮಾನ್ಯ ತಂತ್ರಜ್ಞಾನ ಈಗಲೂ ಜಾರಿಯಲ್ಲಿದೆ. ಈ ಟವರ್ ಬ್ರಿಡ್ಜ್ ಕೂಡ ಅತ್ಯಂತ ಜನನಿಬಿಡ ಪ್ರವಾಸಿತಾಣ. ಅದರ ಕೆಳಗಿನಿಂದ ಥೇಮ್್ಸ ನದಿಯಲ್ಲಿ ವೇಗವಾಗಿ ಚಲಿಸುತ್ತಿದ್ದರೆ ಎಡಕ್ಕೂ ಬಲಕ್ಕೂ ಇರುವ ಗ್ರೀನ್ ಲ್ಯಾಂಡ್ ಜೆಟ್ಟಿ, ಮಾಸ್ಟ್ ಹೌಸ್, ಟವರ್ ಮಿಲ್ಲೆನಿಯಂ ಪೈರ್, ಕೆನರಾ ವ್ರಾಫ್ ಹೀಗೆ ಪ್ರಮುಖವಾದ ಕೇಂದ್ರಗಳೆಲ್ಲ ಒಂದೇ ಟ್ರಿಪ್ಪಿನಲ್ಲಿ ಸಿಗುತ್ತವೆ. ಇವೆಲ್ಲ ಥೇಮ್ಸ್ನ ಎಡಬಲದಲ್ಲಿ ಪ್ರತಿ ಹತ್ತತ್ತು ನಿಮಿಷಕ್ಕೂ ಸಿಗುತ್ತಿದ್ದರೆ ಹತ್ತಿಳಿಯುವ, ವಿಪರೀತ ಶಿಸ್ತಿನ ನಗರ ದಂಡೆಗಳನ್ನು ನೋಡುತ್ತಲೆ, ನಾವು ಇಳಿಯಬೇಕಾದ ಗ್ರಿನೀಚ್ ಪೈರ್ ಕೂಡ ಬಂದಾಗಿರುತ್ತದೆ.
ಈ ಪಯಣದ ಚೆಕ್ಇನ್, ಚೆಕ್ಔಟ್ ಹೇಗಿರುತ್ತದೆಂದರೆ, ವಿಮಾನ ಪ್ರವೇಶಿಸುವ ಮುನ್ನದ ಮತ್ತು ಹೊರಬಂದ ಅನುಭವ ನೆನಪಿಸಿಕೊಳ್ಳಿ. ಇಲ್ಲಿ ನೀವು ಅರ್ಧತಾಸಿನ ರೈಡ್ ತೆಗೆದುಕೊಂಡರೂ ಅದೇ ಅನುಭವ. ಇಷ್ಟೆಲ್ಲ ಮುಗಿಸಿ ಒಂದು ಕಿ.ಮೀ. ನಡೆದು ಸುಮಾರು ಹತ್ತು ಪೌಂಡ್ ಪ್ರವೇಶಧನದ ಮೂಲಕ ಒಳಗೆ ಪ್ರವೇಶಿಸಿ, ಜಗತ್ತಿಗೇ ಸಮಯ ಲೆಕ್ಕಿಸುವುದನ್ನು ಕಲಿಸುವ ಎMಖ ಹೇಗೆ ಬಳಸುತ್ತಾರೆನ್ನುವ ಟೈಮ್ ಝೋನ್ ತೋರಿಸುವ, ಕಬ್ಬಿಣದ ಪಟ್ಟಿಯ ಮೇಲೆ ಕಾಲೂರಿ ನಿಂತರೆ ಅದರಲ್ಲಿ ಭಾರತದ ಹೆಸರೇ ಇಲ್ಲ. ಹುಡುಕಿದರೆ ಸಿಕ್ಕಿದ್ದು ಮುಂಬೈ ನಗರಿ. ಹೀಗೇಕಾಯಿತು? ವಿವರಣಾತ್ಮಕ ಕಥಾನಕ ಮುಂದಿನ ಅಂಕಣದಲ್ಲಿ.
(ಲೇಖಕರು ಕತೆ, ಕಾದಂಬರಿಕಾರರು)