ಬಂಡಾಯದ ಕಾವು ತೀವ್ರವಾಗಿದ್ದ 1970-80ರ ದಶಕದಲ್ಲಿ ಹಾಸನದ ಬಾನು ಮುಷ್ತಾಕ್ ಅವರು ದಿಟ್ಟ ಬರವಣಿಗೆಯ ಮೂಲಕ ಮುಸ್ಲಿಂ ಲೇಖಕಿಯಾಗಿ ಗುರುತಿಸಿಕೊಂಡವರು. ಅದರಲ್ಲೂ ಬಾನು ಮುಷ್ತಾಕ್ ಬಂಡಾಯ ಧ್ವನಿ ಗಮನಾರ್ಹವಾದುದು. ಬಾನು ಮುಷ್ತಾಕ್ ಅವರು ತಾವು ಕಂಡಿದ್ದನ್ನು, ಅನುಭವಿಸಿದ್ದನ್ನು ಪ್ರಕಟಿಸುವ, ವ್ಯಕ್ತಪಡಿಸುವ, ಆತ್ಮಸಾಕ್ಷಿಗೆ ವಿರುದ್ಧವಾಗಿ ರಾಜಿಯಾಗದ ಗಟ್ಟಿ ನಿಲುವಿನ ವ್ಯಕ್ತಿತ್ವದವರು. ಮನುಷ್ಯ ಸಂಬಂಧಗಳು, ಮಾನವೀಯತೆ, ಪ್ರೀತಿ, ಮಹಿಳಾ ಬದುಕಿನ ಧಾವಂತಗಳನ್ನು ತಮ್ಮ ಪ್ರಖರ ಬರವಣಿಗೆಯ ಮೂಲಕ ಅನಾವರಣಗೊಳಿಸುತ್ತ ಬಂದಿದ್ದಾರೆ.
ಬದುಕಿನ ಹಾದಿ: ಬಾನು ಮುಷ್ತಾಕ್ ಅವರು 1948ರ ಏಪ್ರಿಲ್ 3ರಂದು ಹಾಸನ ನಗರದ ಎಸ್.ಎ.ರೆಹಮಾನ್ ಹಾಗೂ ಅಖ್ತರ್ಬಾನು ದಂಪತಿ ಪುತ್ರಿಯಾಗಿ ಜನಿಸಿದರು. ಇವರ ತಂದೆ ಸರ್ಕಾರಿ ನೌಕರಿಯಲ್ಲಿ ಇದ್ದುದ್ದರಿಂದ ವರ್ಗಾವಣೆ ಸಾಮಾನ್ಯವಾಗಿತ್ತು. ಹೀಗಾಗಿ ಬಾನು ಅವರ ಶಿಕ್ಷಣ ಹಾಸನ, ಶಿವಮೊಗ್ಗ, ಕೃಷ್ಣರಾಜಸಾಗರ, ಚಾಮರಾಜನಗರ ಮುಂತಾದೆಡೆಗಳಲ್ಲಿ ನಡೆಯಿತು. ಬಿಎಸ್ಸಿ ಪದವಿಯನ್ನು ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರು ನಂತರ ಎಲ್ಎಲ್ಬಿ ಶಿಕ್ಷಣವನ್ನು ಪೂರೈಸಿದರು.
1981-1990ರವರೆಗೆ ಲಂಕೇಶ್ ಪತ್ರಿಕೆಯ ಹಾಸನ ಜಿಲ್ಲಾ ವರದಿಗಾರ್ತಿಯಾಗಿ ಪತ್ರಿಕಾ ಕ್ಷೇತ್ರದಲ್ಲಿ ದಿಟ್ಟ ವರದಿಗಳ ಮೂಲಕ ಕನ್ನಡಿಗರ ಜನಮಾನಸದಲ್ಲಿ ನೆಲೆಯೂರಿದರು. ಈ ಒಂದು ತಿರುವು ಇವರು ಗಟ್ಟಿ ಬರಹಗಾರ್ತಿಯಾಗಲು ಕಾರಣವಾಯಿತು. ಬದುಕು ಮತ್ತು ಮಾತು ಎರಡಕ್ಕೂ ಬರಹಗಳ ಮೂಲಕ ವಿಶಿಷ್ಟ ರೂಪು ನೀಡಿದರು. 1990ರಿಂದ ಪ್ರಸ್ತುತದವರೆಗೂ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಇವರು ಶೋಷಣೆಗೆ ಒಳಗಾದ, ಕಷ್ಟದಲ್ಲಿರುವ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.
‘ನನ್ನ ಸುಂದರ ಭಾಷೆಗೆ ಇದು ಎಂಥ ಸುಂದರ ಗೆಲುವು’ ಎಂದು ಅನುವಾದಕಿ ದೀಪಾ ಭಾಸ್ತಿ ಸಂತೋಷ ವ್ಯಕ್ತಪಡಿಸಿದ್ದಾರೆ. ‘ಜೇನಿನ ಹೊಳೆಯೋ, ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿನುಡಿಯೋ..’ ಎಂಬ ಕನ್ನಡ ಚಿತ್ರಗೀತೆಯ ಸಾಲನ್ನು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಉಲ್ಲೇಖಿಸಿದ ದೀಪಾ, ಕನ್ನಡದ ಹಿರಿಮೆಯನ್ನು ಬಣ್ಣಿಸಿರುವುದು ಗಮನ ಸೆಳೆದಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ವೈಚಾರಿಕ ತಳಹದಿಯಲ್ಲಿ ಬೆಳೆದು ಬಂದಿರುವ ಬಾನು ಮುಷ್ತಾಕ್ ಅವರು ಮುಸ್ಲಿಂ ಸಮುದಾಯದಲ್ಲಿ ಜನಿಸಿದರೂ ಎಂದಿಗೂ ಬುರ್ಖಾ ಧರಿಸಿದವರಲ್ಲ. ಹಾಸನದಲ್ಲಿ ಬುರ್ಖಾ ತೊಡದ ಇವರನ್ನು ಸಮುದಾಯದಿಂದ ಉಚ್ಚಾಟನೆ ಮಾಡಲು ಮುಖಂಡರು ತೀರ್ವನಿಸಿದ್ದರು. ಇದು ದೊಡ್ಡ ಮಟ್ಟದ ಸುದ್ದಿ ಆಗಿತ್ತು. ನಂತರ ಎಷ್ಟೋ ರಾಜಿ ಪಂಚಾಯಿತಿಗಳು ನಡೆದರೂ ಬಾನು ಅವರು ಬುರ್ಖಾವನ್ನು ಧರಿಸಿಲ್ಲ. ಉಡುಗೆ, ತೊಡುಗೆ, ಆಹಾರ ಆಯ್ಕೆ ಅದು ಆ ವ್ಯಕ್ತಿಯ ಹಕ್ಕು. ಅದನ್ನು ಯಾರೂ ಪ್ರಶ್ನೆ ಮಾಡಬಾರದು ಎಂಬುದೇ ಬಾನು ಮುಷ್ತಾಕ್ ಅವರ ಅಚಲ ನಿಲುವಾಗಿದೆ.
ಬಾನು ಮುಷ್ತಾಕ್ ಅವರು ಸ್ಥಳೀಯ ರಾಜಕೀಯಕ್ಕೆ ಧುಮುಕುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ಹಾಸನ ನಗರಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಹಾಸನದ ಜಿಲ್ಲಾ ಶ್ರೀಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿ, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ, ಹಾಸನ ನಗರ ಗ್ರಂಥಾಲಯದ ಸಮಿತಿ ಸದಸ್ಯೆಯಾಗಿ, ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.
ಹೆಜ್ಜೆ ಮೂಡಿದ ಹಾದಿ (1990), ಬೆಂಕಿ ಮಳೆ (1999), ಎದೆಯ ಹಣತೆ (2004), ಸಫೀರಾ (2006), ಬಡವರ ಮಗಳು ಹೆಣ್ಣಲ್ಲ (2012) ಎಂಬ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ‘ಕುಬ್ರ’ ಕಾದಂಬರಿ, ‘ಇಬ್ಬನಿಯ ಕಾವು’ ಎಂಬ ಲೇಖನ ಸಂಗ್ರಹ, ‘ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ’ ಎಂಬ ಕಾನೂನು ಗ್ರಂಥ ಬರೆದಿದ್ದಾರೆ. ಬಾನು ಮುಷ್ತಾಕ್ ಅವರ ಕತೆಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ‘ಪರಕೀಯ’ ಕಥೆ ಹಿಂದಿ ಭಾಷೆಗೆ ಅನುವಾದಗೊಂಡಿದ್ದು, ಉತ್ತರ ಪ್ರದೇಶದ ಹಿಂದಿ ಅಕಾಡೆಮಿಯ ಪ್ರಕಟಣೆಯಾದ ಇಂದ್ರಪ್ರಸ್ಥ ಭಾರತಿಯಲ್ಲಿ ಪ್ರಕಟವಾಗಿದೆ. ‘ಬೆಂಕಿಮಳೆ’ ಕಥಾ ಸಂಕಲನದ ಕಥೆಗಳು ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ‘ದೇಶಭಿಮಾನಿ’ ಹಾಗೂ ‘ಸ್ತ್ರೀ ಸಬ್ದಮ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಕಥಾ ಸಂಕಲನ ಮಲಯಾಳಂನಲ್ಲಿ ಪ್ರಕಟವಾಗಿದೆ.
ಉರ್ದು, ಪಂಜಾಬಿ, ಇಂಗ್ಲಿಷ್ ಭಾಷೆಗೂ ಕಥೆಗಳು ಅನುವಾದಗೊಂಡು ಪ್ರಕಟವಾಗಿವೆ. ಜತೆಗೆ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದವರು ಆದಿಲ್ಶಾಹಿ ಚರಿತ್ರೆಯಾದ ತಾರೀಕ್-ಎ-ಫರಿಷ್ತಾ ಗ್ರಂಥವನ್ನು ಕನ್ನಡಕ್ಕೆ ಭಾಷಾಂತರಿಸುವ ಕಾರ್ಯವನ್ನು ಕೈಗೊಂಡ ಸಂದರ್ಭದಲ್ಲಿ 250 ಪುಟಗಳ ಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾನು ಮುಷ್ತಾಕ್ ಅವರ ‘ಕರಿ ನಾಗರಗಳು’ ಎಂಬ ಸಣ್ಣಕಥೆ ‘ಹಸೀನಾ’ ಎಂಬ ಹೆಸರಿನ ಚಲನಚಿತ್ರವಾಗಿದ್ದು, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿರುವ ಈ ಚಲನಚಿತ್ರಕ್ಕೆ ತಾರಾ ನಿರ್ವಪಕಿಯಾಗುವುದರ ಜತೆಗೆ ನಟಿಸಿದ್ದಾರೆ. ಈ ಚಿತ್ರಕ್ಕೆ ಮೂರು ರಾಷ್ಟ್ರಪ್ರಶಸ್ತಿಗಳು ಸಂದಿವೆ.
1995ರಿಂದ 98ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯೆಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯೆಯಾಗಿ, ಕನ್ನಡ ಚಲನಚಿತ್ರಗಳ ಸಬ್ಸಿಡಿ ಸಮಿತಿಗೆ ಸದಸ್ಯೆಯಾಗಿ, 2008ರಲ್ಲಿ ನಡೆದ ಹಾಸನ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ 2006ರ ಪದವಿ ತರಗತಿಯ ಪಠ್ಯಪುಸ್ತಕವಾದ ಕೊಡಚಾದ್ರಿಯಲ್ಲಿ ಇವರ ಕಥೆ ‘ನಮ್ಮೊಳಗಿನ ಜರೀನಾ’ ಸೇರ್ಪಡೆಯಾಗಿದೆ. ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕ ಕಥಾ ಸಂಗಮದಲ್ಲಿ ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಪದವಿ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿದೆ. ಬಾನು ಮುಷ್ತಾಕ್ ಅವರ ಸಾಹಿತ್ಯದ ಮೇಲೆ ಪಿಎಚ್.ಡಿ. ಸಂಶೋಧನೆಗಳು ಸಹ ನಡೆದಿವೆ.
ಕಥಾ ಸಂಕಲನ ‘ಬೆಂಕಿಮಳೆ’ ಕೃತಿಗೆ 2000ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಸಂದಿದೆ. 2002ನೇ ಸಾಲಿನಲ್ಲಿ ಇವರ ಸಮಗ್ರ ಸಾಹಿತ್ಯ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ಬೆಂಕಿಮಳೆ’ ಕಥಾ ಸಂಕಲನಕ್ಕೆ 2002ನೇ ಸಾಲಿನ ಕಥಾ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಯೆಂದು ಸುಧಾಮೂರ್ತಿ ಪ್ರಶಸ್ತಿ, 2004ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಾಪ್ತವಾಗಿದೆ. ಶಾಶ್ವತಿ ಸಂಸ್ಥೆಯ ವತಿಯಿಂದ 2004ನೇ ಸಾಲಿನ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, 2006ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ನಡೆದ ಅಖಿಲ ಭಾರತೀಯ ಜೈನ ಮಹಿಳಾ ಸಮ್ಮೇಳನದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶತಮಾನೋತ್ಸವ ಗೌರವ ಪ್ರಶಸ್ತಿ ಸಂದಿದೆ.
ಕಥಾಸಂಕಲನವೊಂದಕ್ಕೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಸಿಗುತ್ತಿರುವುದು ಇದೇ ಮೊದಲು. ಅದರಲ್ಲೂ ಕನ್ನಡ ಸಾರಸ್ವತ ಲೋಕಕ್ಕೆ ಸಿಕ್ಕಿರುವುದೂ ಇದೇ ಪ್ರಥಮ.
ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯನ್ನು ಈ ಮೊದಲು 2022ರಲ್ಲಿ ಉತ್ತರಪ್ರದೇಶದ ಗೀತಾಂಜಲಿ ಶ್ರೀ ಮತ್ತು ಅನುವಾದಕಿ ಡೈಸಿ ರಾಕ್ವೆಲ್ ಪಡೆದಿದ್ದರು. ಗೀತಾಂಜಲಿ ಅವರ ಹಿಂದಿ ಕಾದಂಬರಿಯನ್ನು ಡೈಸಿ ರಾಕ್ವೆಲ್ ‘ಟೋಂಬ್ ಆಫ್ ಸ್ಯಾಂಡ್’ ಹೆಸರಿನಲ್ಲಿ ಅನುವಾದಿಸಿದ್ದರು. ಇನ್ನೊಮ್ಮೆ 2023ರಲ್ಲಿ, ಅನಿರುದ್ಧ ವಾಸುದೇವನ್ ‘ಪೈರ್’ ಹೆಸರಿನಲ್ಲಿ ಇಂಗ್ಲಿಷ್ಗೆ ಅನುವಾದಿಸಿದ್ದ ಪೆರುಮಾಳ್ ಮುರುಗನ್ ಅವರ ತಮಿಳು ಕಾದಂಬರಿ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯ ಆರಂಭಿಕ ಸುತ್ತಿನಲ್ಲಿತ್ತು. ಆದರೆ ಪ್ರಶಸ್ತಿ ಗೆದ್ದಿರಲಿಲ್ಲ.
ಇದರಲ್ಲಿ ಬುಕರ್ ಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಎಂದು ಎರಡು ವಿಧಗಳಿವೆ. ಮೂಲ ಇಂಗ್ಲಿಷ್ ಕೃತಿಗಳಿಗೆ ಬುಕರ್ ಪ್ರಶಸ್ತಿ ನೀಡಲಾಗುತ್ತದೆ. ಜಗತ್ತಿನ ಬೇರೆ ಭಾಷೆಗಳಿಂದ ಇಂಗ್ಲಿಷ್ಗೆ ಅನುವಾದಗೊಂಡ ಕೃತಿಗಳಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ನೀಡಲಾಗುತ್ತದೆ. ಎರಡೂ 50 ಸಾವಿರ ಪೌಂಡ್ ಪ್ರಶಸ್ತಿ ಮೊತ್ತ ಹೊಂದಿವೆ. ಆದರೆ ಬುಕರ್ ಪ್ರಶಸ್ತಿ ಪಡೆದವರು ಪೂರ್ಣ ಮೊತ್ತವನ್ನು ಒಬ್ಬರೇ ತಮ್ಮದಾಗಿಸಿಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯ ಮೊತ್ತವನ್ನು ಮೂಲ ಲೇಖಕರು ಮತ್ತು ಅನುವಾದಕರಿಗೆ ಸಮನಾಗಿ ಹಂಚಲಾಗುತ್ತದೆ.
ಇಂಗ್ಲಿಷ್ ಓದುಗರಿಗೆ ಈ ಕೃತಿ ನಿಜಕ್ಕೂ ಹೊಸ ಅನುಭವ ನೀಡುತ್ತದೆ. ಅನುವಾದದ ಬಗ್ಗೆ ನಮಗಿರುವ ತಿಳಿವಳಿಕೆಯನ್ನೇ ಇದು ಬುಡಮೇಲು ಮಾಡುತ್ತದೆ. ಆರಂಭದಿಂದಲೂ ಎಲ್ಲ ತೀರ್ಪಗಾರರಿಗೆ ಈ ಕೃತಿ ಇಷ್ಟವಾಯಿತು ಎಂದು ತೀರ್ಪಗಾರರ ಸಮಿತಿ ಅಧ್ಯಕ್ಷ ಮ್ಯಾಕ್ಸ್ ಪೋರ್ಟರ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿ ಮಹಿಳೆಯರು ಪ್ರತಿನಿತ್ಯ ಅನುಭವಿಸುವ ಸುಖ-ದುಃಖಗಳು ಈ ಕೃತಿಯಲ್ಲಿ ಅಡಕವಾಗಿವೆ. ಸಮುದಾಯ ಮತ್ತು ಕುಟುಂಬಗಳಲ್ಲಿನ ಉದ್ವಿಗ್ನತೆಯನ್ನು ಹೃದಯರ್ಸ³ಯಾಗಿ ಕಟ್ಟಿಕೊಡಲಾಗಿದೆ. ಬಾನು ಮುಷ್ತಾಕ್ 30 ವರ್ಷಗಳ ಅವಧಿಯಲ್ಲಿ (1990ರಿಂದ 2023ರವರೆಗೆ) ಬರೆದಿರುವ ಕಥೆಗಳ ಪೈಕಿ ಆಯ್ದ ಕೆಲವು ಕಥೆಗಳು ಈ ಕೃತಿಯಲ್ಲಿವೆ.
ಬಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ದೊರೆತಿರುವುದು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಸಾಹಿತ್ಯ ಲೋಕಕ್ಕೆ ಐತಿಹಾಸಿಕ ಕ್ಷಣ. ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಕಥೆಗಳನ್ನು ಪ್ರಾಮಾಣಿಕವಾಗಿ ಹೇಳಿದಾಗ ಅವು ಜಗತ್ತನ್ನೇ ಅಲುಗಾಡಿಸಬಲ್ಲವು. ಇಂತಹ ಕಥೆಗಳನ್ನು ಬರೆದ ಬಾನು ಮುಷ್ತಾಕ್ ಅವರಿಗೆ ಮತ್ತು ಇವುಗಳನ್ನು ತಮ್ಮ ಅನುವಾದದ ಮೂಲಕ ಜಗತ್ತಿಗೆ ಪರಿಚಯಿಸಿದ ದೀಪಾ ಭಾಸ್ತಿ ಅವರಿಗೆ ಅಭಿನಂದನೆಗಳು. | ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ ಈ ನೆಲದ ಸೌಹಾರ್ದ, ಜಾತ್ಯತೀತತೆ, ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿ ಬರೆಯುತ್ತಿರುವ ಬಾನು ಮುಷ್ತಾಕ್ ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸಲಿ. | ಸಿದ್ದರಾಮಯ್ಯ ಮುಖ್ಯಮಂತ್ರಿ ಸಮಸ್ತ ಕನ್ನಡಿಗರಿಗೆ ಇದು ಹೆಮ್ಮೆಯ ಕ್ಷಣ. ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತ, ಅವರಿಂದ ಇದೇ ರೀತಿಯಲ್ಲಿ ಇನ್ನಷ್ಟು ಉತ್ತಮ ಕೃತಿಗಳು ಬರಲಿ. ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತವಾಗಲಿ ಹಾಗೂ ಜಗತ್ತಿನ ಉದ್ದಗಲಕ್ಕೂ ಕನ್ನಡದ ಕಂಪು ಹರಡಲಿ. | ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಬಾನು ಮುಷ್ತಾಕ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ತಮ್ಮ ‘ಎದೆಯ ಹಣತೆ’ ಕಥಾ ಸಂಕಲನಕ್ಕೆ ಪ್ರಥಮ ಬುಕರ್ ಪ್ರಶಸ್ತಿ ತಂದು ಕೊಡುವ ಮೂಲಕ ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ಕನ್ನಡಿಗರಿಗೆ ಹೆಮ್ಮೆ ತರುವ ವಿಷಯವಾಗಿದೆ. ಆಂಗ್ಲ ಭಾಷೆಗೆ ಭಾಷಾಂತರಿಸಿರುವ ಲೇಖಕಿ ದೀಪಾ ಭಾಸ್ತಿ ಅವರಿಗೂ ಅಭಿನಂದನೆಗಳು. | ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಕನ್ನಡ ಭಾಷೆ, ಸಾಹಿತ್ಯದ ಕಂಪನ್ನು ವಿಶ್ವದೆದುರು ಪಸರಿಸಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿರುವ ಬಾನು ಮುಷ್ತಾಕ್ ಅವರಿಗೆ ಅಭಿನಂದಿಸುತ್ತ, ಮತ್ತಷ್ಟು ಗೌರವ, ಹಿರಿಮೆ ತಮ್ಮ ಮಡಿಲು ತುಂಬಲಿ, ಆ ಮೂಲಕ ಕನ್ನಡ ಸಾಹಿತ್ಯ ಲೋಕ ವಿಶ್ವಮಟ್ಟದಲ್ಲಿ ವಿಜೃಂಭಿಸಲಿ ಎಂದು ಹಾರೈಸುವೆ. ಲೇಖಕಿ ದೀಪಾ ಭಾಸ್ತಿ ಅವರಿಗೂ ಅಭಿನಂದನೆಗಳು. | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಸಣ್ಣ ಕಥೆಗಳ ಸಂಕಲನಕ್ಕೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಸಂದಿರುವುದು ಶ್ಲಾಘನೀಯ ಮತ್ತು ಸಂತಸದಾಯಕ. ಕನ್ನಡದ ಶ್ರೇಷ್ಠತೆಯನ್ನು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಎತ್ತಿಹಿಡಿದ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. | ಜಿ.ಪರಮೇಶ್ವರ ಗೃಹ ಸಚಿವ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕಥಾ ಸಂಕಲನದ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ ಬುಕರ್ ಪ್ರಶಸ್ತಿಗೆ ಭಾಜನವಾಗಿರುವುದು ಖುಷಿಯ ಸಂಗತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಹಿರಿಮೆಯನ್ನು ಸಾರಿರುವ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಹಾರ್ದಿಕ ಅಭಿನಂದನೆಗಳು. | ಎಚ್.ಕೆ.ಪಾಟೀಲ ಕಾನೂನು ಸಚಿವ ಕರ್ನಾಟಕವು ಉತ್ತಮ ಸಾಹಿತ್ಯದೊಂದಿಗೆ, ಉತ್ಕೃಷ್ಟ ಚಿಂತನೆಗಳ ಮೂಲಕವೂ ಜಗತ್ತನ್ನು ಬೆರಗುಗೊಳಿಸುತ್ತಿದೆ. ಮೌಲ್ಯಯುತ ಬರಹಗಳಿಂದ ಕನ್ನಡ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟ ಬಾನು ಮುಷ್ತಾಕ್ ಸಾಹಿತ್ಯ ಸೇವೆಯು ಇನ್ನಷ್ಟು ಎತ್ತರಕ್ಕೆ ಏರಲೆಂದು ಹಾರೈಸುವೆ. ಲೇಖಕಿ ದೀಪಾ ಭಾಸ್ತಿ ಅವರಿಗೂ ಅಭಿನಂದನೆಗಳು. | ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವ