ಅಂಕಣ

ದೇಹದ ಮೂರು ಆಯಾಮಗಳ ಮಹತ್ವ

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ಮನುಷ್ಯನನ್ನು ಮೂರು ಮೂಲಭೂತ ದೇಹಗಳು ಆಳುತ್ತವೆ- ಮೊದಲನೆಯದು ಸ್ಥೂಲ ಶರೀರ ಅಥವಾ ಸ್ಥೂಲ ದೇಹ. ಇದು ಕೇವಲ ಈ ಭೂಮಿಯ ವಿಸ್ತರಣೆಯಾಗಿದೆ; ಆರಂಭದಲ್ಲಿ ತಾಯಿಯ ಎದೆಯಿಂದ ಪೋಷಿತವಾಗಿ, ಈಗ ಮಾತೃಭೂಮಿಯ ಎದೆಯಿಂದ ಪೋಷಿತವಾಗುತ್ತಿದೆ. ಇದರ ಜೀವನಾಧಾರ ಮುಖ್ಯವಾಗಿ ಭೂಮಿ, ಇದರ ಗುಣ ಭೂಮಿ, ಇದರ ಮೂಲ ಭೂಮಿ ಮತ್ತು ಇದರ ಗಮ್ಯಸ್ಥಾನವೂ ಭೂಮಿ. ಎರಡನೇ ದೇಹವನ್ನು ಯೋಗ ಸಂಸ್ಕೃತಿಯಲ್ಲಿ ಲಿಂಗ ಶರೀರ ಎಂದು ಕರೆಯಲಾಗುತ್ತದೆ. ಇದು ಲೈಂಗಿಕ ದೇಹ, ಎರಡು ವಂಶಾವಳಿಗಳ ಜನರ ಸಂಯುಕ್ತ ಅಭಿವ್ಯಕ್ತಿ. ಪುರುಷ ಮತ್ತು ಮಹಿಳೆಯ ಮಿಲನದಿಂದ ಮಗು ಜನಿಸುತ್ತದೆ ಮತ್ತು ಕೇವಲ ಆ ಇಬ್ಬರ ಗುಣಗಳನ್ನು ಮಾತ್ರವಲ್ಲದೆ ಅವರ ಪೂರ್ಣ ವಂಶಾವಳಿಯ ಗುಣಗಳನ್ನು ಲೈಂಗಿಕ ದೇಹದಲ್ಲಿ ಹೊತ್ತೊಯ್ಯಲಾಗುತ್ತದೆ.

ಲಿಂಗ ಶರೀರವನ್ನು ಆನುವಂಶಿಕ ದೇಹವೆಂದೂ ಕರೆಯಬಹುದು. ಈ ಆನುವಂಶಿಕ ದೇಹವು ನಿಮ್ಮನ್ನು ಅನೇಕ ವಿಭಿನ್ನ ರೀತಿಗಳಲ್ಲಿ ಆಳುತ್ತದೆ. ಹಲವರು ತಮ್ಮ ಜೀವನವನ್ನು ಭೂಮಿಯ ದೇಹ ಮತ್ತು ಆನುವಂಶಿಕ ದೇಹ ಈ ಎರಡರ ಚಟುವಟಿಕೆಯ ಮೂಲಕ ಮಾತ್ರ ಅನುಭವಿಸುತ್ತಾರೆ. ದೇಹದ ಮೂರನೇ ಆಯಾಮವನ್ನು ಸೂಕ್ಷ್ಮ ಶರೀರ ಅಥವಾ ಆಕಾಶಿಕ್ ಎಂದು ಕರೆಯಲಾಗುತ್ತದೆ- ಇದು ಪ್ರಜ್ಞಾಪೂರ್ವಕ ಶಕ್ತಿ. ಮನುಷ್ಯ ತನ್ನದೇ ಜೀವನದಲ್ಲಿ ಒಂದೇ ಸಮಯದಲ್ಲಿ ನಟ ಮತ್ತು ಪ್ರೇಕ್ಷಕ ಎರಡೂ ಆಗಿರುವ ಅನುಭವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಬೇರೆ ಬೇರೆ ಸ್ತರಗಳಲ್ಲಿರುತ್ತದೆ. ದೇಹದ ಮೂರನೇ ಆಯಾಮವು ಈ ಸಾಧ್ಯತೆಯನ್ನು ನೀಡುತ್ತದೆ; ನಾವು ಇದನ್ನು ಪ್ರಜ್ಞಾಪೂರ್ವಕ ದೇಹ ಎಂದು ಕರೆಯಬಹುದು.

ಈಗ, ಒಬ್ಬ ವ್ಯಕ್ತಿಯ ಮೂರು ಮೂಲಭೂತ ದೇಹಗಳಲ್ಲಿ ಯಾವುದು ಹೆಚ್ಚು ಪ್ರಬಲವಾಗಿದೆ ಅನ್ನುವುದರ ಮೇಲೆ ಅವನು ಯಾವ ದಿಕ್ಕಿನಲ್ಲಿ ಚಲಿಸುತ್ತಿದ್ದಾನೆ ಎಂಬುದು ನಿರ್ಧಾರವಾಗುತ್ತದೆ. ಅವನು ತನ್ನ ಭೂಮಿಯ ದೇಹದ ಮೂಲಕ ಸುತ್ತುಗಳಲ್ಲಿ ಚಲಿಸುತ್ತಿದ್ದಾನೆಯೇ, ಅವನು ತನ್ನ ಆನುವಂಶಿಕ ದೇಹದ ಮೂಲಕ ಹಿಂದಕ್ಕೆ ಚಲಿಸುತ್ತಿದ್ದಾನೆಯೇ, ಅಥವಾ ಅವನು ತನ್ನ ಪ್ರಜ್ಞಾಪೂರ್ವಕ ದೇಹದ ಮೂಲಕ ಎಲ್ಲವನ್ನೂ ಮೀರಿ ಮುಕ್ತಿಯತ್ತ ಚಲಿಸುತ್ತಿದ್ದಾನೆಯೇ? ಯಾವುದು ಅವನಲ್ಲಿ ಈಗ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅವನು ನೋಡಬೇಕಾಗಿದೆ. ನೀವು ಈಗ ‘ನಾನು’ ಎಂದು ಕರೆಯುವ ಮೂರು ದೇಹಗಳು ಎಲ್ಲವನ್ನೂ ಉಂಟುಮಾಡುತ್ತವೆ. ಭೂಮಿಯ ದೇಹವು ಗ್ರಹದ ಮೇಲಿನ ಯಾವುದೇ ಒಂದು ರೂಪದಂತೆ. ಇದು ಒಂದು ಗೊಂಬೆ, ಒಂದು ಆಟಿಕೆ. ಇತರ ಎರಡು ದೇಹಗಳು, ಲೈಂಗಿಕ ಅಥವಾ ಆನುವಂಶಿಕ ದೇಹ ಮತ್ತು ಸೂಕ್ಷ್ಮ ಅಥವಾ ಆಕಾಶಿಕ್ ದೇಹದೊಂದಿಗೆ ಸಂಯೋಜಿತವಾಗಿ ಮತ್ತು ಹೊಂದಿಕೊಂಡಾಗ ಮಾತ್ರ ಭೂಮಿಯ ದೇಹವು ತಾನು ನಿಜವಾಗಿದೆ ಎಂದು ನಟಿಸಲು ಆರಂಭಿಸಬಹುದು.

ಆಟಿಕೆಯ ಬ್ಯಾಟರಿ ಮುಗಿದುಹೋದರೆ ಬ್ಯಾಟರಿಯಿಲ್ಲದೆ, ಆ ಆಟಿಕೆಯು ಕೇವಲ ಭೂಮಿಯ ತುಂಡು. ಇದೇ ಮರಣದ ಸೌಂದರ್ಯ. ಈ ಭೂಮಿಯ ಉತ್ಪನ್ನವು, ಕನಸು ಕಂಡರೆ, ಅದು ಕೇವಲ ಭೂಮಿಯ ಸಾರಗಳಾದ ಆಹಾರ ಮತ್ತು ಲೈಂಗಿಕತೆಯ ಕನಸನ್ನು ಕಾಣುತ್ತದೆ. ತಿಳಿಯದೆಯೇ, ಅದು ಮರಣವನ್ನು ಹುಡುಕುತ್ತಿದೆ ಏಕೆಂದರೆ ಅದರ ಸ್ವಭಾವವು ಅಪ್ರಜ್ಞಾಪೂರ್ವಕ ಮತ್ತು ಚಕ್ರೀಯ. ನೀವು ನಿಮ್ಮನ್ನು ಅನೇಕ ಹುಚ್ಚು ಆಕಾಂಕ್ಷೆಗಳು ಮತ್ತು ಆಸೆಗಳಿಂದ ತುಂಬಿಸದಿದ್ದರೆ, ದೇಹದ ಮೂಲಭೂತ ಸ್ವಭಾವದ ಪ್ರಕಾರ ಹೋದರೆ, ದೇಹ ಮಾಡಲು ಬಯಸುವ ಏಕೈಕ ವಿಷಯವೆಂದರೆ ಚೆನ್ನಾಗಿ ತಿನ್ನುವುದು, ಸಂತಾನೋತ್ಪತ್ತಿ ಮಾಡುವುದು ಮತ್ತು ನಿದ್ರಿಸುವುದು. ಏಕೆಂದರೆ ಅದು ಅದರ ಸ್ವಭಾವ- ಅದು ಭೂಮಿಗೆ ಹಿಂತಿರುಗಲು ಬಯಸುತ್ತದೆ. ಇಲ್ಲಿರುವ ಪ್ರಶ್ನೆಯೆಂದರೆ ಅದು ಅಲ್ಲಿಗೆ ತಲುಪುವ ವೇಗದ ಬಗ್ಗೆ ಮಾತ್ರ.

ಎರಡನೇ ಆಯಾಮವಾದ ಲೈಂಗಿಕ ದೇಹ ಅಥವಾ ಲಿಂಗ ಶರೀರವು ನಿಮಗೆ ಹಲವಾರು ಅಂಶಗಳನ್ನು ಸೃಷ್ಟಿಸುತ್ತದೆ. ನೀವು ಅದನ್ನು ನೀವೇ ಎಂದು ಭಾವಿಸುತ್ತೀರಿ ಆದರೆ ಅದು ಕೇವಲ ಭೂತಕಾಲದ ಎಲ್ಲ ಸತ್ತ ಪೂರ್ವಜರು ನಿಮ್ಮ ಮೂಲಕ ಬದುಕುತ್ತಿರುವುದು. ಲಿಂಗ ಶರೀರವು ವರ್ಗಾವಣೆಯೋಗ್ಯವಾಗಿದೆ. ಒಬ್ಬ ಮನುಷ್ಯನು ಮಗುವನ್ನು ಪಡೆಯಲು ಬಯಸುವ ಕಾರಣವೆಂದರೆ, ಅವನು ಸತ್ತ ನಂತರವೂ ವ್ಯಕ್ತವಾಗಲು ಅಥವಾ ಬದುಕಲು ಬಯಸುತ್ತಾನೆ. ಬೇರೆ ಯಾವುದೇ ಕಾರಣವಿಲ್ಲ. ನೀವು ಹೋದ ನಂತರವೂ ನಿಮ್ಮದು ಯಾವುದೋ ಅಂಶ ಇರಬೇಕು. ಲಿಂಗ ಶರೀರವು ಕನಸು ಕಂಡಾಗ, ಅದು ಜೀವನಕ್ಕೆ ಅಪ್ರಸ್ತುತವಾದ ಎಲ್ಲ ರೀತಿಯ ವಿಷಯಗಳ ಕನಸನ್ನು ಕಾಣುತ್ತದೆ. ಲೈಂಗಿಕ ದೇಹ ಅಥವಾ ಆನುವಂಶಿಕ ದೇಹವು ಬಹಳ ಸಂಕೀರ್ಣವಾಗಿದೆ ಮತ್ತು ಹೆಚ್ಚಿನ ಕನಸುಗಳು ಅದರಿಂದಾಗಿ ಸಂಭವಿಸುತ್ತವೆ.

ಜೀವನದಲ್ಲಿ ಆಹಾರ ಮತ್ತು ಲೈಂಗಿಕತೆಯ ಕನಸನ್ನು ಕಂಡಿದ್ದರೆ, ಸ್ವಲ್ಪ ಯೋಗದೊಂದಿಗೆ- ಕೇವಲ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಒಂದು ಅಥವಾ ಎರಡು ಗಂಟೆಗಳ ಸಾಧನೆ ಮಾಡುವುದರಿಂದ, ಇದ್ದಕ್ಕಿದ್ದಂತೆ ಈ ಕನಸುಗಳು ಹೋಗಿಬಿಡುತ್ತವೆ. ಏಕೆಂದರೆ ಭೌತಿಕ ಅಥವಾ ಭೂಮಿಯ ದೇಹವನ್ನು ಬಹಳ ಸುಲಭವಾಗಿ ಸರಿಪಡಿಸಬಹುದು ಮತ್ತು ತರಬೇತಿಗೊಳಿಸಬಹುದು. ಆದರೆ ನಿಮ್ಮ ಎಲ್ಲ ಪೂರ್ವಜರದು ಬೇರೆನೇ ವಿಷಯ; ಈ ಗ್ರಹದಲ್ಲಿ 125000 ಮಾನವ ಪೀಳಿಗೆಗಳಿವೆ ಎಂದು ಹೇಳಲಾಗುತ್ತದೆ ಮತ್ತು ಅವರೆಲ್ಲರೂ ನಿಮ್ಮ ಮೂಲಕ ಬದುಕಲು ಬಯಸುತ್ತಾರೆ. ನಿಮ್ಮ ಆಕಾಶಿಕ್ ದೇಹವು ಕನಸು ಕಂಡರೆ- ಹಲವರು ಇದನ್ನು ಎಂದಿಗೂ ಅನುಭವಿಸುವುದಿಲ್ಲ- ಆದರೆ ಹಾಗೆ ಸಂಭವಿಸಿದರೆ ಅದು ಹೊಸ ಸೃಷ್ಟಿಯನ್ನು ರಚಿಸುವಷ್ಟು ಉತ್ತಮವಾಗಿದೆ; ಅದು ಖಂಡಿತವಾಗಿಯೂ ವ್ಯಕ್ತವಾಗುತ್ತದೆ. ಆಕಾಶಿಕ್ ದೇಹವು ಕನಸು ಕಂಡರೆ, ಅದು ಇತರರು ನೋಡಲಾಗದ್ದನ್ನು ನೋಡುತ್ತದೆ- ಸೃಷ್ಟಿಯ ಸೂಕ್ಷ್ಮ ಪ್ರಕ್ರಿಯೆ ಆರಂಭವಾಗುತ್ತದೆ. ಮತ್ತು ಅದು ನೋಡಿದಾಗ, ಅದು ಖಂಡಿತವಾಗಿಯೂ ನಿಜವಾಗುತ್ತದೆ ಏಕೆಂದರೆ ಅದು ಈಗಾಗಲೇ ನಿರ್ಮಾಣದಲ್ಲಿದೆ.

80ರ ದಶಕದಲ್ಲಿ, ಯುನೈಟೆಡ್ ಕಿಂಗ್ಡಮ್ ಪ್ರಯೋಗಾಲಯವು ಒಂದು ಪ್ರಯೋಗ ಮಾಡುತ್ತಿತ್ತು ಮತ್ತು ಅವರು ಅಪಾರ ಸಂವೇದನಾಶೀಲತೆಯುಳ್ಳ ಫೋಟೋಫಿಲ್ಮ್ ಅನ್ನು ತಯಾರಿಸಿದರು. ಅವರು ಅದನ್ನು ಪರೀಕ್ಷಿಸಲು ಬಯಸಿದಾಗ, ಅವರು ಏನನ್ನಾದರೂ ಚಿತ್ರೀಕರಿಸಲು ತೋಟಕ್ಕೆ ಹೋದರು. ಅವರು ಒಂದು ಗುಲಾಬಿ ಮೊಗ್ಗನ್ನು ನೋಡಿ ಅದನ್ನು ಚಿತ್ರೀಕರಿಸಿದರು ಮತ್ತು ಅವರು ಚಿತ್ರವನ್ನು ಡೆವಲಪ್ ಮಾಡಿ ಮುದ್ರಿಸಿದಾಗ, ಅಲ್ಲಿ ಗುಲಾಬಿ ಮೊಗ್ಗು ಇರಲಿಲ್ಲ, ಆದರೆ ಪೂರ್ಣ ಅರಳಿದ ಹೂವು ಇತ್ತು. ಅವರಿಗೆ ನಂಬಲಾಗಲಿಲ್ಲ! ಆದ್ದರಿಂದ ಅವರು ಹೋಗಿ ಅದನ್ನು ಮತ್ತೆ ಮತ್ತೆ ಚಿತ್ರೀಕರಿಸಿದರು. ಪ್ರತಿ ಬಾರಿ ಅವರು ಗುಲಾಬಿ ಮೊಗ್ಗನ್ನು ಚಿತ್ರೀಕರಿಸಿದಾಗ, ಅವರಿಗೆ ಚಿತ್ರದಲ್ಲಿ ಪೂರ್ಣ ಅರಳಿದ ಹೂವು ಸಿಕ್ಕಿತು ಮತ್ತು ಎರಡು ಅಥವಾ ಮೂರು ದಿನಗಳ ನಂತರ, ಹೂವು ಅರಳಿದಾಗ, ಅದು ಅವರು ಈಗಾಗಲೇ ಹೊಂದಿದ್ದ ಚಿತ್ರದಂತೆಯೇ ಇತ್ತು.

ನೀವು ಈ ಎರಡು ಕಣ್ಣುಗಳನ್ನು ಕ್ಯಾಮೆರಾದಂತೆ ಬಳಸಿದರೆ, ನೀವು ಅಲ್ಲಿರುವ ಬಹಳಷ್ಟು ವಿಷಯಗಳನ್ನು ಕಳೆದುಕೊಳ್ಳುತ್ತೀರಿ. ಇತ್ತೀಚೆಗೆ ಒಬ್ಬ ವಿಜ್ಞಾನಿಯು ಒಂದು ಪುಸ್ತಕವನ್ನು ಪ್ರಕಟಿಸಿದ್ದಾರೆ, ಅದರಲ್ಲಿ ಅವರು ಮಾನವನ ಕಣ್ಣಿಗೆ ಎಷ್ಟು ಭೌತಿಕ ಅಸ್ತಿತ್ವವು ಗೋಚರವಾಗುತ್ತದೆ ಎಂಬುದರ ಬಗ್ಗೆ ಮಾತನಾಡುತ್ತಾರೆ. ಅವರು ಹೇಳುತ್ತಾರೆ ಅದು 0.00001- ಅಷ್ಟು ಶೇಕಡವಾರು ಮಾತ್ರ ಮಾನವ ಕಣ್ಣು ಭೌತಿಕ ಅಸ್ತಿತ್ವದಲ್ಲಿ ನೋಡುತ್ತದೆ. ಕೇವಲ ಇಷ್ಟರಲ್ಲೇ ನಾವು ಜೀವನ ಮತ್ತು ಸೃಷ್ಟಿಯ ಬಗ್ಗೆ ಎಲ್ಲ ರೀತಿಯ ಅದ್ಭುತ ತೀರ್ಮಾನಗಳನ್ನು ಮಾಡಿದ್ದೇವೆ ಮತ್ತು ತಮ್ಮ ಬಗ್ಗೆಯೇ ತುಂಬ ತುಂಬಿಕೊಂಡಿರುವ ಜನರಿಗೆ, ನೀವು ಇನ್ನೂ ಎಂಟು ಸೊನ್ನೆಗಳನ್ನು ಸೇರಿಸಬೇಕು ಎಂದು ನಾನು ಖಚಿತವಾಗಿ ಹೇಳುತ್ತೇನೆ. ಏಕೆಂದರೆ ಅವರು ಎಲ್ಲರೂ ನೋಡಬಹುದಾದದ್ದನ್ನೂ ನೋಡುತ್ತಿಲ್ಲ. ಆದ್ದರಿಂದ ನೀವು ಈ ಎರಡು ಕಣ್ಣುಗಳಿಂದ ಫೋಟೋಗ್ರಾಫ್ ಮಾಡಿದರೆ, ನೀವು ವ್ಯಕ್ತವಾಗಿರುವುದನ್ನು ನೋಡುತ್ತೀರಿ. ನೀವು ಮೂರನೇ ಕಣ್ಣಿನಿಂದ ಫೋಟೋಗ್ರಾಫ್ ಮಾಡಿದರೆ, ನೀವು ಇನ್ನೂ ವ್ಯಕ್ತವಾಗದಿರುವುದನ್ನು, ವ್ಯಕ್ತವಾಗಬಹುದಾದುದನ್ನು ನೋಡುತ್ತೀರಿ. ನೀವು ಬೀಜವನ್ನು ಮರ, ಹೂವು ಮತ್ತು ಹಣ್ಣಿನಂತೆ ನೋಡುತ್ತೀರಿ.