ಅಂಕಣ

ಸನಾತನ ಧರ್ಮದಲ್ಲಿ ದಶಸಂಖ್ಯಾ ಸೂತ್ರಗಳ ಮಹತ್ವ

ಪರಮಾತ್ಮನ ಲೀಲೆಗಳನ್ನು ಇತರರಿಂದ ಕೇಳಿದಾಗ ನಮಗೂ ಆತನ ಲೀಲೆಗಳನ್ನು ಹಾಡಬೇಕೇನಿಸುತ್ತದೆ; ಹಾಡುವುದರಿಂದಾಗಿ ನಾವು ಸದಾ ಕಾಲ ಆ ಪರಮಾತ್ಮನನ್ನು ನೆನಪಿಸಿಕೊಳ್ಳುತ್ತ, ಆತನ ಪಾದಸೇವೆ ಮಾಡಲು ಮನಸ್ಸು ಹಾತೊರೆಯುವಂತಾಗಿ, ಎಲ್ಲರನ್ನೂ ದಿವ್ಯತ್ವವೇ ಎಂಬ ಭಾವದಿಂದ ಪೂಜಿಸಿ ಸೇವಿಸುವಂತಾಗಿಸುತ್ತದೆ.

ಸನಾತನ ಧರ್ಮದಲ್ಲಿ ದಶಸಂಖ್ಯಾ ಸಂಕೇತಸೂತ್ರಗಳ ಪೈಕಿ ಐದನ್ನು ಕಳೆದ ಅಂಕಣದಲ್ಲಿ ರ್ಚಚಿಸಿದ್ದೇವೆ. ಉಳಿದ ಐದು ಸೂತ್ರಗಳ ಕುರಿತಾಗಿ ಈಗ ನೋಡೋಣ.

6: ಷಟ್ ಸಂಪತ್ತಿ- ಆರು ಆಧ್ಯಾತ್ಮಿಕ ಸಂಪತ್ತುಗಳು

ಶ್ರೀಆದಿಶಂಕರಾಚಾರ್ಯರು ‘ವಿವೇಕಚೂಡಾಮಣಿ’ ಗ್ರಂಥದಲ್ಲಿ ಸಾಧಕನು ಈ ಕೆಳಗಿನ ನಾಲ್ಕು ಅರ್ಹತೆಗಳನ್ನು ಹೊಂದಿರಬೇಕೆಂದು ಹೇಳುತ್ತಾರೆ. ಇವುಗಳನ್ನು ಸಾಧನಾ ಚತುಷ್ಟವೆಂದು ಕರೆಯುತ್ತಾರೆ.

ವಿವೇಕ- ನಿತ್ಯಾನಿತ್ಯ ವಸ್ತು ವಿವೇಚನೆ ವೈರಾಗ್ಯ- ಪ್ರಾಪಂಚಿಕ ಭೋಗಾಸಕ್ತಿಗಳ ಬಗ್ಗೆ ವಿವೇಕದಿಂದ ಉದಯಿಸುವ ಅನಾಸಕ್ತಿ ಮುಮುಕ್ಷತ್ವ- ಆತ್ಮಸಾಕ್ಷಾತ್ಕಾರಕ್ಕಾಗಿ ತೀವ್ರ ವ್ಯಾಕುಲತೆ ಷಟ್-ಸಂಪತ್ತಿ- ಆರು ರೀತಿಯ ಆಧ್ಯಾತ್ಮಿಕ ಸಂಪತ್ತುಗಳು

ಈ ಆರು ಸಂಪತ್ತುಗಳೆಂದರೆ ಶಮ- ಮನೋನಿಗ್ರಹ ಶಕ್ತಿ; ದಮ- ಇಂದ್ರಿಯನಿಗ್ರಹ ಶಕ್ತಿ; ಉಪರತಿ- ಆಧ್ಯಾತ್ಮಿಕ ಪ್ರಗತಿಗೆ ತೊಡಕಾಗುವ ಪ್ರಾಪಂಚಿಕ ವಿಷಯಗಳಿಂದ ಮನಸ್ಸನ್ನು ಹಿಂತೆಗೆದುಕೊಳ್ಳುವ ಶಕ್ತಿ; ತಿತೀಕ್ಷಾ- ಆಧ್ಯಾತ್ಮಿಕ ಪಥದಲ್ಲಿನ ಏರುಪೇರುಗಳನ್ನು ಸಮವಾಗಿ ಸ್ವೀಕರಿಸುವ ಶಕ್ತಿ; ಶ್ರದ್ಧಾ- ಗುರುವಾಕ್ಯ ಹಾಗೂ ಶಾಸ್ತ್ರವಾಕ್ಯಗಳಲ್ಲಿ ಪೂರ್ಣ ವಿಶ್ವಾಸ; ಕೊನೆಯದು, ಸಮಾಧಾನ- ಜೀವನದ ಏರಿಳಿತಗಳಿಂದ ವಿಚಲಿತನಾಗದೆ ನಿಲ್ಲುವ ಸಮತ್ವ. ಇವುಗಳ ಕುರಿತಾಗಿ ನಾವು ಈಗಾಗಲೇ ‘ಮಾನವನ ಅಂತರಂಗದಲ್ಲಿರುವ ಆಜ್ಞಾನದ ಕಗ್ಗಂಟು- ಹೃದಯಗ್ರಂಥಿ’ ಎಂಬ ಲೇಖನದಲ್ಲಿ ವಿವರವಾಗಿ ತಿಳಿದುಕೊಂಡಿದ್ದೇವೆ. ಈ ಆರು ಆಧ್ಯಾತ್ಮಿಕ ಮೌಲ್ಯಗಳು ನಮ್ಮ ಪ್ರಗತಿಗೆ ಕಾರಣವಾದರೆ, ನಮ್ಮ ಅವನತಿಗೆ ಕಾರಣವಾಗುವ ಆರು ಅಂತರಂಗದ ಶತ್ರುಗಳಾದ ಅರಿಷಡ್ವರ್ಗಗಳ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?

7: ಸಪ್ತ ಚಕ್ರಾಃ - ವ್ಯಕ್ತಿತ್ವದಲ್ಲಿನ ಏಳು ಶಕ್ತಿಕೇಂದ್ರಗಳು

ಸನಾತನ ಧರ್ಮದಲ್ಲಿ ‘ಏಳು’ ಪವಿತ್ರ ಸಂಖ್ಯೆ. ಒಂದುವಾರದಲ್ಲಿ ಏಳು ದಿನಗಳು, ಏಳು ಮಂದಿ ಮಹರ್ಷಿಗಳು, ಸಂಗೀತದ ಏಳು ಸ್ವರಗಳು- ಹೀಗೆ ಅನೇಕಬಾರಿ ನಮಗೆ ಈ ಸಂಖ್ಯೆ ಎದುರಾಗುತ್ತದೆ. ಈಗ ನಮ್ಮ ವ್ಯಕ್ತಿತ್ವದಲ್ಲಿನ ಏಳು ಚಕ್ರಗಳು ಅಥವಾ ಶಕ್ತಿಕೇಂದ್ರಗಳ ಬಗ್ಗೆ ತಿಳಿದುಕೊಳ್ಳೋಣ. ಸೃಷ್ಟಿಯಲ್ಲಿ ಅನೇಕ ರೀತಿಯ ವಸ್ತುಗಳು ಕಂಡುಬಂದರೂ, ಅವುಗಳೆಲ್ಲವೂ ಶಕ್ತಿಯ ವಿವಿಧ ರೂಪಗಳೆಂದು ನಮಗೆ ತಿಳಿದಿದೆ (ಉ = ಞ್ಚ2). ಈ ಮೂಲಶಕ್ತಿ ಅಥವಾ ಚೈತನ್ಯವನ್ನು ಅದರ ಪರಮಶುದ್ಧ ಅವ್ಯಕ್ತ ರೂಪದಲ್ಲಿ ಬ್ರಹ್ಮವೆಂದು ಕರೆಯುತ್ತೇವೆ. ಅದುವೇ ಸೂಕ್ಷ್ಮ ಅಥವಾ ಭೌತಿಕ ರೂಪದಲ್ಲಿ ವ್ಯಕ್ತವಾದಾಗ ಈ ಜಗತ್ತಾಗಿ ಕಾಣುತ್ತದೆ. ನಮ್ಮ ಶಾಸ್ತ್ರಗಳಲ್ಲಿ ‘ಬ್ರಹ್ಮ ಸತ್ಯ ಜಗನ್ಮಿಥ್ಯಾ’ ಎಂದು ಹೇಳಿದ್ದಾರೆ. ಇದರ ಅರ್ಥವೇನೆಂದರೆ ಅವು ಎರಡಲ್ಲ, ಒಂದೇ. ಬ್ರಹ್ಮವೇ ಮಾಯೆಯಿಂದಾಗಿ ಜಗತ್ತಾಗಿ ತೋರುತ್ತದೆ. ನಮ್ಮ ಶರೀರದಲ್ಲಿ ಏಳು ಶಕ್ತಿಕೇಂದ್ರಗಳಿವೆ. ಇವುಗಳನ್ನು ನಾವು ವಿದ್ಯುತ್ ಶಕ್ತಿಯ ಸಂವಹನಾ ಜಾಲದಲ್ಲಿನ ಏಳು ನಗರಗಳಿಗೆ ವಿದ್ಯುತ್​ನ್ನು ಒದಗಿಸುವ ಏಳು ಉಪನಿಲ್ದಾಣಗಳಿಗೆ ಹೋಲಿಸಬಹುದು. ದೇಹದಲ್ಲಿರುವ ‘ಕುಂಡಲಿನೀ’ ಶಕ್ತಿಯನ್ನು ವಿದ್ಯುತ್ ಶಕ್ತಿಗೆ ಹೋಲಿಸಿದರೆ, ಅದರ ಸಂವಹನೆಯ ಈ ಏಳು ಉಪನಿಲ್ದಾಣಗಳೇ ಈ ಏಳು ಚಕ್ರಗಳು. ಒಂದೊಂದು ಚಕ್ರ ಅಥವಾ ಶಕ್ತಿಕೇಂದ್ರವು ತಂತಿಗಳನ್ನು ಹೋಲುವ ನಾಡಿಗಳ ಮೂಲಕ ದೇಹದ ವಿವಿಧ ಕ್ರಿಯೆಗಳಿಗೆ ಶಕ್ತಿಯನ್ನು ಒದಗಿಸುತ್ತವೆ.

ಅತ್ಯಂತ ಕೆಳಗಿನ ಚಕ್ರವೆಂದರೆ ಮೂಲಾಧಾರಚಕ್ರ; ಇದರ ಸ್ಥಾನವು ದೇಹದಲ್ಲಿ ಗುದದ್ವಾರ ಹಾಗೂ ಜನನೇಂದ್ರಿಯಗಳ ಮಧ್ಯದ ಸ್ಥಾನ. ಇದರ ಮೇಲೆ ಬರುವುದು ಸ್ವಾಧಿಷ್ಠಾನಚಕ್ರ; ಇದು ನಾಭಿಯ ಕೆಳಗೆ ಇದ್ದು, ಮಾನವನ ಸಂತಾನೋತ್ಪತ್ತಿಕ್ರಿಯೆಗೆ ಶಕ್ತಿಯನ್ನು ನೀಡುತ್ತದೆ. ಮೂರನೆಯದು ಮಣಿಪೂರಚಕ್ರ; ಇದರ ಸ್ಥಾನವು ನಾಭಿಯಲ್ಲಿದ್ದು ಜೀರ್ಣಕ್ರಿಯೆ ಹಾಗೂ ಆಹಾರದ ಶಕ್ತಿಯನ್ನು ದೇಹದ ಎಲ್ಲ ಭಾಗಗಳಿಗೆ ಪಸರಿಸಿ ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುವ ಮತ್ತು ದೇಹದೊಳಗಿನ ಚಲನೆಗಳಿಗೆ ಅಗತ್ಯವಾದ ಶಕ್ತಿ ಒದಗಿಸುತ್ತದೆ. ನಾಲ್ಕನೆಯದಾದ ಅನಾಹತಚಕ್ರವು ಹೃದಯಭಾಗದಲ್ಲಿ ಇದ್ದು ಶ್ವಾಸೋಚ್ಛಾ್ವಸ ಹಾಗೂ ರಕ್ತಪರಿಚಲನಾಕ್ರಿಯೆಗೆ ಶಕ್ತಿಯನ್ನು ಒದಗಿಸುವುದಲ್ಲದೆ, ಅದು ಮಾನವನ ಭಾವನೆಗಳನ್ನೂ ನಿಯಂತ್ರಿಸುತ್ತದೆ. ಐದನೆಯದಾದ ವಿಶುದ್ಧಿಚಕ್ರದ ಸ್ಥಾನವು ಗಂಟಲಿನ ಭಾಗದಲ್ಲಿದ್ದು ನಮ್ಮ ಯೋಚನೆ-ಭಾವನೆಗಳನ್ನು ವ್ಯಕ್ತಪಡಿಸುವ ಮಾತುಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಆರನೆಯ ಚಕ್ರವಾದ ಆಜ್ಞಾಚಕ್ರವು ಭ್ರೂಮಧ್ಯದಲ್ಲಿದ್ದು, ಮಾನವನ ಬಾಹ್ಯದೃಷ್ಟಿ ಹಾಗೂ ಅಂತರಂಗದೃಷ್ಟಿಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಏಳನೆಯದು ಪರಮೋನ್ನತವಾದ ಸಹಸ್ರಾರಚಕ್ರ; ಇದರ ಸ್ಥಾನವು ನೆತ್ತಿಯ ಮೇಲಿನ ಬ್ರಹ್ಮರಂಧ್ರದಲ್ಲಿರುತ್ತದೆ. ಕುಂಡಲಿನೀಶಕ್ತಿಯು ಸಹಸ್ರಾರಚಕ್ರವನ್ನು ಪ್ರವೇಶಿಸಿದಾಗ ಮಾನವನಿಗೆ ಮನೋದೇಹಗಳಿಗೆ ಅತೀತವಾದ ಆತ್ಮನ ಅನುಭವವಾಗಿ ಪರಮಾನಂದ ಲಭ್ಯವಾಗುತ್ತದೆ. ಆದ್ದರಿಂದ ಸಾಧಕರು ಸಾಧನೆಯ ಪಥದಲ್ಲಿ ತಮ್ಮ ಎಲ್ಲ ಶಕ್ತಿಗಳನ್ನು ದುರ್ವ್ಯಯವಿಲ್ಲದೆ ಕೇಂದ್ರೀಕರಿಸಿ ಸಹಸ್ರಾರ ಚಕ್ರದೆಡೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ. ಈ ಸಾಕ್ಷಾತ್ಕಾರದ ಪಥವನ್ನು ‘ಹಠಯೋಗ’ವೆಂದು ಕರೆಯುತ್ತಾರೆ.

8 ಅಷ್ಟಾಂಗ ಯೋಗಃ - ಯೋಗದ ಎಂಟು ಅಂಗಗಳು

ಸನಾತನ ಧರ್ಮದಲ್ಲಿ ‘ಎಂಟ’ನೇ ಸಂಖ್ಯೆಗೂ ಪ್ರಾಶಸ್ತ್ಯವಿದೆ. ಉದಾಹರಣೆಗೆ ಅಷ್ಟ ದಿಕ್ಕುಗಳು, ಅಷ್ಟ ದಿಕ್ಪಾಲಕರು, ಅಷ್ಟ ಸಿದ್ಧಿಗಳು, ಅಷ್ಟ ಲಕ್ಷ್ಮಿಯರು ಇತ್ಯಾದಿ. ಅಷ್ಟಾಂಗ ಯೋಗದ ಬಗ್ಗೆ ಪತಂಜಲಿ ಮಹರ್ಷಿಯ ‘ಯೋಗಸೂತ್ರಾಃ’ ಗ್ರಂಥದಿಂದ ತಿಳಿದುಕೊಳ್ಳಬಹುದು. ಯೋಗವೆಂದರೆ ಮನಸ್ಸನ್ನು ಅಂತಮುಖ ಮಾಡಿ ದಿವ್ಯಾತ್ಮನಲ್ಲಿ ಐಕ್ಯಗೊಳಿಸುವುದು. ಪತಂಜಲಿಯು ಹೇಳಿರುವಂತೆ ಯೋಗದ ಎಂಟು ಅಂಗಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ.

ಯಮ ಎಂದರೆ ಸಮಾಜದಲ್ಲಿ ಮಾನವನ ಬಾಹ್ಯ ನಡವಳಿಕೆಗೆ ಸಂಬಂಧಿಸಿದ ಐದು ನೈತಿಕ ಮೌಲ್ಯಗಳು- ಸತ್ಯ, ಅಹಿಂಸೆ, ಅಸ್ತೇಯ (ಇತರರಿಗೆ ಸೇರಿದ ವಸ್ತು ಅಥವಾ ಸಂಪತ್ತನ್ನು ಅಪಹರಿಸದೇ ಇರುವುದು), ಬ್ರಹ್ಮಚರ್ಯ ಮತ್ತು ಅಪರಿಗ್ರಹ (ಲೋಭಪ್ರೇರಿತನಾಗಿ ಇತರರಿಂದ ಯಾವುದೇ ಉಡುಗೊರೆಗಳನ್ನು ಬಯಸದೇ ಇರುವುದು). ನಿಯಮವೆಂದರೆ, ವೈಯಕ್ತಿಕ ನಡವಳಿಕೆಗೆ ಸಂಬಂಧಿಸಿದ ಐದು ಮೌಲ್ಯಗಳು- ಶೌಚ (ಅಂತರಂಗ ಬಹಿರಂಗಗಳಲ್ಲಿ ಪರಿಶುದ್ಧತೆ), ಸಂತೋಷ ಅಥವಾ ಸಂತೃಪ್ತಿ, ತಪಸ್ಸು, ಸ್ವಾಧ್ಯಾಯ (ಆಧ್ಯಾತ್ಮಿಕ ಗ್ರಂಥಗಳ ಅಧ್ಯಯನ). ಆಸನವೆಂದರೆ ದೇಹವನ್ನು ಆರೋಗ್ಯಕರ ಹಾಗೂ ಶಕ್ತಿಯುತವಾಗಿ ಇರಿಸಿಕೊಂಡು ಯೋಗವನ್ನು ಅಭ್ಯಸಿಸಲು ಅನುಸರಿಸುವ ಶರೀರದ ವಿವಿಧ ಭಂಗಿಗಳು. ಪ್ರಾಣಾಯಾಮವೆಂದರೆ ಮನೋನಿಯಂತ್ರಣ ಮಾಡಲು ಸಹಾಯಕವಾಗುವ ಶ್ವಾಸೋಚ್ಛಾ ್ವ ಪ್ರಕ್ರಿಯೆಗಳು. ಪ್ರತ್ಯಾಹಾರವೆಂದರೆ ಬಹಿಮುಖವಾದ ಮನಸ್ಸು-ಇಂದ್ರಿಯಗಳನ್ನು ಅಂತಮುಖ ಮಾಡುವುದು. ಧಾರಣ ಎಂದರೆ ಮನಸ್ಸನ್ನು ಒಂದೇ ಯೋಚನೆ ಮೇಲೆ ಕೇಂದ್ರೀಕರಿಸುವುದು, ಧ್ಯಾನವೆಂದರೆ ಮನಸ್ಸನ್ನು ಒಂದೇ ಯೋಚನೆಯಲ್ಲಿ ಲೀನವಾಗಿಸುವುದು. ಅಂತಿಮವಾಗಿ ಸಮಾಧಿಯೆಂದರೆ ಮನಸ್ಸು, ದೇಹವನ್ನು ಮರೆತು ಅಂತರಂಗದ ದಿವ್ಯಾತ್ಮನಲ್ಲಿ ಸಂಪೂರ್ಣವಾಗಿ ಮಗ್ನನಾಗುವುದು. ಅಷ್ಟಾಂಗಯೋಗವನ್ನು ರಾಜಯೋಗವೆಂದೂ ಕರೆಯುತ್ತಾರೆ. ಕ್ರಮಬದ್ಧ ಅಭ್ಯಾಸದಿಂದ ಮೇಲಿನ ಎಂಟು ಅಂಗಗಳ ಮೂಲಕ ಮನಸ್ಸನ್ನು ಆತ್ಮಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುವ ವಿಧಾನವೇ ರಾಜಯೋಗ.

9: ನವವಿಧ ಭಕ್ತಿ- ಭಕ್ತಿಯ ಒಂಬತ್ತು ರೀತಿಗಳು

1) ಶ್ರವಣಂ- ಭಗವಂತನ ನಾಮ ಹಾಗೂ ವೈಭವಗಳನ್ನು ಕೇಳುವುದು.

2) ಕೀರ್ತನಂ- ಭಗವಂತನ ಲೀಲೆಗಳನ್ನು ಹಾಡುವುದು.

3) ಸ್ಮರಣಂ- ಭಗವಂತನ ನಿರಂತರ ಸ್ಮರಣೆ ಮಾಡುವುದು.

4) ಪಾದ ಸೇವನಂ- ಭಗವಂತನ, ಸಾಧು-ಸಂತರ ಪಾದಸೇವೆ ಮಾಡುವುದು.

5) ಅರ್ಚನಂ- ಭಗವಂತನನ್ನು ಪೂಜಿಸುವುದು.

6) ವಂದನಂ- ಭಗವಂತನಿಗೆ ಹಾಗೂ ಭಗವಂತನ ಸ್ವರೂಪಿಗಳಾದ ಎಲ್ಲ ಜೀವಿಗಳಿಗೆ ನಮಸ್ಕರಿಸುವುದು.

7) ದಾಸ್ಯಂ- ಭಗವಂತನ ದಾಸನಾಗಿ ಆತನ ಹಾಗೂ ಸರ್ವಜೀವಿಗಳ ಸೇವೆಯನ್ನು ಮಾಡುವುದು

8) ಸಖ್ಯಂ- ಭಗವಂತನೊಂದಿಗೆ ಹಾಗೂ ಎಲ್ಲ ಜೀವಿಗಳೊಡನೆ ಸ್ನೇಹದಿಂದ ನಡೆದುಕೊಳ್ಳುವುದು.

9) ಆತ್ಮನಿವೇದನಂ- ಭಗವಂತನಿಗೆ ಸಂಪೂರ್ಣವಾಗಿ ಶರಣಾಗುವುದು.

ಇವುಗಳನ್ನು ನಾವು ಭಕ್ತಿಯ ಒಂಬತ್ತು ಸೋಪಾನ ಗಳೆಂದು ಕರೆಯಬಹುದು. ಪ್ರತಿಯೊಂದು ಮೆಟ್ಟಿಲು ಇನ್ನೊಂದು ಮೆಟ್ಟಿಲನ್ನು ಹತ್ತಲು ಸಹಾಯ ಮಾಡುತ್ತದೆ. ಪರಮಾತ್ಮನ ಲೀಲೆಗಳನ್ನು ಇತರರಿಂದ ಕೇಳಿದಾಗ ನಮಗೂ ಆತನ ಲೀಲೆಗಳನ್ನು ಹಾಡಬೇಕೆನಿಸುತ್ತದೆ; ಹಾಡುವುದರಿಂದಾಗಿ ಸದಾ ಕಾಲ ಆ ಪರಮಾತ್ಮನನ್ನು ನೆನಪಿಸಿಕೊಳ್ಳುತ್ತ, ಆತನ ಪಾದಸೇವೆ ಮಾಡಲು ಮನಸ್ಸು ಹಾತೊರೆಯುವಂತಾಗಿ, ಎಲ್ಲರನ್ನೂ ದಿವ್ಯತ್ವವೇ ಎಂಬ ಭಾವದಿಂದ ಪೂಜಿಸಿ ಸೇವಿಸುವಂತಾಗಿಸುತ್ತದೆ. ಈ ಭಾವನೆಯಲ್ಲಿ ನಮ್ಮನ್ನು ನಾವು ಹೆಚ್ಚೆಚ್ಚು ತೊಡಗಿಸಿಕೊಂಡಷ್ಟೂ, ಪರಮಾತ್ಮನ ಸೇವಕರಾಗಿ ನಂತರ ಆತನೊಂದಿಗೆ ಸ್ನೇಹಭಾವ ಬೆಳೆಸಿಕೊಳ್ಳುತ್ತೇವೆ. ಹೀಗೆ ಸದಾಕಾಲ ಆ ಪರಮಾತ್ಮನನ್ನು ಸ್ಮರಿಸುವುದರಿಂದಾಗಿ ಅವನಲ್ಲಿ ಶರಣಾಗಿ ನಮ್ಮ ಬಹಿರಂಗ-ಅಂತರಂಗಗಳಲ್ಲಿ ದಿವ್ಯತ್ವವನ್ನು ಅನುಭವಿಸಿ ಸಾಕ್ಷಾತ್ಕಾರ ಪಡೆಯಲು ಸಾಧ್ಯವಾಗುತ್ತದೆ.

10: ದಶೋಪನಿಷದಃ - ಹತ್ತು ಪ್ರಮುಖ ಉಪನಿಷತ್ತುಗಳು

ಸನಾತನ ಧರ್ಮದ ಪರಮೋಚ್ಚ ಜ್ಞಾನವನ್ನು ಬೋಧಿಸುವ ಗ್ರಂಥಗಳೆಂದರೆ ಉಪನಿಷತ್ತುಗಳು. ನಾವು ಈ ಗ್ರಂಥಗಳಲ್ಲಿ ದಿವ್ಯಾತ್ಮನಲ್ಲಿ ಸಂಪೂರ್ಣ ಮಗ್ನರಾಗಿ ಸತ್ಯದರ್ಶನ ಮಾಡಿದ ಮಹರ್ಷಿಗಳು ಘೊಷಿಸಿದ ಸತ್ಯದ ವರ್ಣನೆಯನ್ನು ಕಾಣಬಹುದು. ‘ಉಪನಿಷತ್’ ಎಂಬ ಪದವನ್ನು ‘ಉಪ’ (ಹತ್ತಿರ), ‘ನಿ’ (ಕೆಳಗೆ), ‘ಷದ್’ (ಕುಳಿತುಕೊಳ್ಳುವುದು) ಎಂದು ವಿಭಜಿಸಲಾಗಿದೆ. ಅಂದರೆ ಶಿಷ್ಯನು ಜ್ಞಾನಲಾಭಕ್ಕಾಗಿ ತನ್ನ ಗುರುವಿನ ಪದತಲದಲ್ಲಿ ಕುಳಿತು ಪರಮೋಚ್ಚ ಸತ್ಯದ ಜ್ಞಾನವನ್ನು ಪಡೆಯುವುದಾಗಿದೆ. ಶ್ರೀಆದಿಶಂಕರಾಚಾರ್ಯರು ಉಪನಿಷತ್ ಪದದ ಅರ್ಥವನ್ನು ‘ಆತ್ಮವಿದ್ಯೆ’ ಎಂದು ತಿಳಿಸಿದ್ದಾರೆ. 108 ಉಪನಿಷತ್ತುಗಳು ಲಭ್ಯವಾಗಿದ್ದರೂ, ಶ್ರೀಆದಿಶಂಕರರು ಅವುಗಳ ತುಲನಾತ್ಮಕ ಅಧ್ಯಯನ ಮಾಡಿ, ಅವುಗಳ ಪೈಕಿ ಹತ್ತನ್ನು ಆರಿಸಿಕೊಂಡು ಭಾಷ್ಯ ಬರೆದು ಜನಪ್ರಿಯಗೊಳಿಸಿದ್ದಾರೆ. ಈ ಹತ್ತು ಉಪನಿಷತ್ತುಗಳನ್ನು ‘ಮುಖ್ಯೋಪನಿಷತ್ತು’ಗಳೆಂದು ಕರೆಯಲಾಗಿದೆ. ಕೆಳಗಿನ ಶ್ಲೋಕದಲ್ಲಿ ಹೇಳಿರುವಂತೆ,

ಈಶ ಕೇನ ಕಠ ಪ್ರಶ್ನ ಮುಂಡಕ ಮಾಂಡೂಕ್ಯ ತಿತ್ತರಃ |

ಐತರೇಯಂ ಚ ಛಾಂದೋಗ್ಯಂ ಬೃಹದಾರಣ್ಯಕಂ ತಥಾ ||

ಈ ಪ್ರಮುಖ ಉಪನಿಷತ್ತುಗಳನ್ನು ನಾಲ್ಕೂ ವೇದಗಳಿಂದ ಆರಿಸಿಕೊಳ್ಳಲಾಗಿದೆ. ಅವುಗಳೆಂದರೆ ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ ಹಾಗೂ ಬೃಹದಾರಣ್ಯಕ ಉಪನಿಷತ್ತುಗಳಾಗಿವೆ. ಶ್ರೀಆದಿಶಂಕರರು ಜೀವಿ ಹಾಗೂ ಬ್ರಹ್ಮನ ಮಧ್ಯೆ ಇರುವ ಸಂಬಂಧವನ್ನು ಸ್ಥಾಪಿಸಲು ಉಪಯೋಗಿಸಿರುವ ನಾಲ್ಕು ಮಹಾವಾಕ್ಯಗಳನ್ನು ಈ ಉಪನಿಷತ್ತುಗಳಿಂದ ತೆಗೆದುಕೊಳ್ಳಲಾಗಿದೆ.

1. ‘ಪ್ರಜ್ಞಾನಂ ಬ್ರಹ್ಮ- ಪರಿಪೂರ್ಣ ಪರಮ ಪ್ರಜ್ಞೆಯೇ ಬ್ರಹ್ಮ’ (ಐತರೇಯ ಉಪನಿಷತ್- ಋಗ್ವೇದ) 2. ‘ಅಹಂ ಬ್ರಹ್ಮಾಸಿ- ‘ನಾನು’ ಎಂಬುದೇ ‘ಬ್ರಹ್ಮ’ (ಬೃಹದಾರಣ್ಯಕ ಉಪನಿಷತ್- ಯಜುರ್ವೆದ) 3. ‘ತತ್ ತ್ವಂ ಅಸಿ- ‘ನೀನು’ ಅದೇ ಆಗಿದ್ದೀಯ’ (ಛಾಂದೋಗ್ಯ ಉಪನಿಷತ್- ಸಾಮವೇದ) 4. ‘ಅಯಮಾತ್ಮಾ ಬ್ರಹ್ಮ- ಈ ಆತ್ಮನೇ ಬ್ರಹ್ಮನು’ (ಮಾಂಡೂಕ್ಯ ಉಪನಿಷತ್- ಅಥರ್ವಣವೇದ)

ಈ ದಶಸಂಖ್ಯಾ ಸಂಕೇತಸೂತ್ರಗಳಿಂದ ಸನಾತನ ಧರ್ಮದ ಪ್ರಧಾನ ತತ್ತ್ವಗಳನ್ನು ನಾವು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದಲ್ಲವೇ?

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)