ಅಂಕಣ

ಭಾರತಾಂಬೆಯ ಮುಕುಟಕ್ಕೆ ನಾಲ್ಕನೇ ವಜ್ರಕಿರೀಟ

Webdesk - Mallikarjun K R

ಭಾರತ ವಿಶ್ವಕಪ್ ಗೆದ್ದಿದ್ದು ಯಾರಿಂದ? ಕೊಹ್ಲಿ ಬ್ಯಾಟಿಂಗ್​ನಿಂದಲೇ? ರೋಹಿತ್ ನಾಯಕತ್ವದಿಂದಲೇ? ಬುಮ್ರಾ, ಪಾಂಡ್ಯ, ಅರ್ಷದೀಪ್ ಬೌಲಿಂಗ್​ನಿಂದಲೇ? ಅಥವಾ ಸೂರ್ಯ ಕ್ಯಾಚ್​ನಿಂದಲೇ? ಇವಿಷ್ಟರಲ್ಲಿ ಯಾವುದೋ ಒಂದು ಅಂಶ ಕೊರತೆಯಾಗಿದ್ದರೂ ಭಾರತ ಗೆಲ್ಲುತ್ತಿರಲಿಲ್ಲ ಎನ್ನುವುದಂತೂ ಸತ್ಯ. ಅಂದರೆ, ಮಾನವ ಪ್ರಯತ್ನಕ್ಕೆ ದೈವಬಲವೂ ಸೇರಿಕೊಂಡಾಗ ಅದ್ಭುತ ಸಾಧ್ಯವಾಗುತ್ತದೆ.

ತದೇವ ಲಗ್ನಂ ಸುದಿನಂ ತದೇವ| ತಾರಾಬಲಂ ಚಂದ್ರಬಲಂ ತದೇವ| ವಿದ್ಯಾಬಲಂ ದೈವಬಲಂ ತದೇವ | ಲಕ್ಷ್ಮೀಪತೇರಂಘ್ರಿ-ಯುಗಂ ಸ್ಮರಾಮಿ ||

 ಕೆಲವೊಮ್ಮೆ ನಮ್ಮ ಪ್ರಯತ್ನದಲ್ಲಿ ಯಾವುದೇ ಕೊರತೆ ಇರದಿದ್ದರೂ, ಪ್ರತಿಫಲ ನಿರೀಕ್ಷೆಯಂತೆ ಇರುವುದಿಲ್ಲ. ಪೂರ್ವಸಿದ್ಧತೆ ಪರಿಪೂರ್ಣವಾಗಿರುತ್ತದೆ. ಯೋಜನೆ ಅಚ್ಚುಕಟ್ಟಾಗಿರುತ್ತದೆ. ಅನುಷ್ಠಾನದಲ್ಲೂ ಸಣ್ಣ ಲೋಪವೂ ಆಗಿರುವುದಿಲ್ಲ. ಆದರೂ, ಅಂತಿಮ ಫಲ ಏನು ನಿರೀಕ್ಷೆ ಪಟ್ಟಿರುತ್ತೇವೋ ಅದು ದೊರಕಿರುವುದಿಲ್ಲ. ‘ನಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡಿಯಾಯಿತು. ಆದರೆ, ಟೈಮೇ ಸರಿ ಇರಲಿಲ್ಲ’ ಎಂದು ಹೇಳುತ್ತಿರುತ್ತೇವೆ.

ಹಾಗಿದ್ದರೆ, ಟೈಮೇ ಸರಿ ಇರಲಿಲ್ಲ ಎಂದರೆ ಏನದು? ಅಥವಾ ಕಾಲ ಕೂಡಿಬರಬೇಕು ಎಂಬ ಮಾತಿನ ಅರ್ಥವೇನದು? ಹಿಡಿದ ಕೆಲಸ, ಅಂದುಕೊಂಡ ಯೋಜನೆ ನಿರ್ವಿಘ್ನವಾಗಿ, ನಾವು ಅಂದುಕೊಂಡಂತೆಯೇ ಮುಗಿಯಬೇಕಾದರೆ, ಯಾವ ಕಾಲದಲ್ಲಿ ಯಾವ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ. ಹಾಗಾದರೆ, ಯಾವ ಕಾಲ ಎನ್ನುವುದನ್ನು ನಿರ್ಧರಿಸುವುದು ಹೇಗೆ? ಮಹಾವಿಷ್ಣುವಿನ ಪಾದಗಳನ್ನು ಸ್ಮರಿಸುವ ಸಮಯವೇ ಅತ್ಯುತ್ತಮ ಸಮಯ. ದೇವರ ಸ್ಮರಣೆ ಮಾಡಿ ಕೆಲಸ ಪ್ರಾರಂಭಿಸಿದಾಗ ನಾವು ಕಲಿತ ವಿದ್ಯೆ, ಪಡೆದ ತರಬೇತಿ ಸಂದರ್ಭಕ್ಕೆ ತಕ್ಕಂತೆ ನೆರವಿಗೆ ಬರುತ್ತದೆ. ದೈವಬಲ ಕೈಹಿಡಿಯುತ್ತದೆ. ತಾರಾಬಲ (ನಕ್ಷತ್ರಗಳ ಬಲ), ಚಂದ್ರಬಲ (ಗ್ರಹಬಲ) ಒದಗಿಬರುತ್ತದೆ. ಹೀಗೆ ಎಲ್ಲ ಗ್ರಹಗತಿಗಳೂ ಕೂಡಿಬಂದಾಗ ಅಸಾಧ್ಯವೆಂಬಂತೆ ತೋರುವ ಸಾಧನೆಗಳೂ ಕೈಹಿಡಿಯುತ್ತವೆ.

ನಾವಿರುವುದು ವಿಜ್ಞಾನದ ಯುಗ, ತಂತ್ರಜ್ಞಾನದ ಯುಗ. ಇದೆಂಥ ಮೂಢನಂಬಿಕೆ ಎನ್ನುವವರೂ ಅವರ ಸ್ವಂತಮನೆಗೆ ಗೃಹಪ್ರವೇಶ ಮಾಡುವಾಗ, ಮದುವೆ ಆಗುವಾಗ ಅವರ ಜನ್ಮನಕ್ಷತ್ರಕ್ಕೆ ಹೊಂದುವ ಮುಹೂರ್ತವನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ! ಹಾಗಾಗಿ ವಿರೋಧ ಎನ್ನುವುದು ಲೋಕರೂಢಿ. ಆಚರಣೆ ವೈಯಕ್ತಿಕ.

ಹಾಗಾದರೆ, ಭಾರತ ಮೊನ್ನೆ ಟಿ20 ವಿಶ್ವಕಪ್ ಗೆದ್ದ ಅದ್ಭುತ ಸಾಧನೆಗೆ ತಾರಾಬಲ, ದೈವಬಲ ಕಾರಣ ಎಂದು ಆಟಗಾರರ ಪ್ರದರ್ಶನವನ್ನು ಗೌಣವಾಗಿಸಬೇಕೇ? ಆ ರೀತಿ ಯೋಚಿಸಬೇಕಿಲ್ಲ. ಆಟಗಾರರ ನೂರಕ್ಕೆ ನೂರು ಪರಿಶ್ರಮ ಸಾಧನೆಗೆ ಎಷ್ಟು ಕಾರಣವೋ, ನಮ್ಮ ನಿಯಂತ್ರಣದಲ್ಲಿಲ್ಲದ ಬಾಹ್ಯಸಂಗತಿಗಳ ಕೊಡುಗೆಯೂ ಸಾಧನೆಗೆ ಬೆನ್ನೆಲುಬಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಷ್ಟೇ.

ಕಳೆದ ವರ್ಷ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡದ ಆಟ ಪರಿಪೂರ್ಣವಾಗಿತ್ತು. ಆರಂಭದಿಂದ ತಂಡ ಒಂದೂ ಪಂದ್ಯ ಸೋಲಲಿಲ್ಲ. ಬ್ಯಾಟಿಂಗ್​ನಲ್ಲಿ, ಬೌಲಿಂಗ್​ನಲ್ಲಿ, ತಂತ್ರಗಾರಿಕೆಯಲ್ಲಿ ಎಲ್ಲಿಯೂ ತಂಡ ಎಡವಲಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಒಗ್ಗೂಡಿ ಒಂದು ತಂಡವಾಗಿ ಆಡಿದರೂ, ಭಾರತವನ್ನು ಸೋಲಿಸಲು ಅಸಾಧ್ಯ ಎಂಬಂಥ ಪ್ರದರ್ಶನವನ್ನು ರೋಹಿತ್ ಶರ್ಮ ನೇತೃತ್ವದ ತಂಡ ಫೈನಲ್​ವರೆಗೆ ಆಡಿತು. ಆದರೆ, ಕೊಟ್ಟಕೊನೆಯ ಫೈನಲ್​ನಲ್ಲಿ ಮಾತ್ರ ಮುಗ್ಗರಿಸಿತು. ಭಾರತದ ಸಾಮರ್ಥ್ಯದಲ್ಲಿ ಕುಂದಿರಲಿಲ್ಲ. ಪ್ರಯತ್ನದಲ್ಲಿ ಕೊರತೆ ಇರಲಿಲ್ಲ. ಮನೋಬಲ ಕಡಿಮೆ ಆಗಿರಲಿಲ್ಲ. ಆದರೆ, ಆ ದಿನ ಟ್ರಾವಿಸ್ ಹೆಡ್ ಎಂಬ ದೈತ್ಯ ಬ್ಯಾಟರ್ ಅನ್ನು ಕಟ್ಟಿ ಹಾಕುವುದು ಬುಮ್ರಾ ಶಮಿ, ಕುಲ್​ದೀಪ್​ರಿಂದ ಸಾಧ್ಯವಾಗಲೇ ಇಲ್ಲ. ಪ್ಯಾಟ್ ಕಮಿನ್ಸ್, ಸ್ಟಾರ್ಕ್ ವಿರುದ್ಧ ಆಡುವುದು ಬ್ಯಾಟರ್​ಗಳಿಗೆ ಸಾಧ್ಯವಾಗಲಿಲ್ಲ. ಕೆಲವೊಮ್ಮೆ ಪರಿಸ್ಥಿತಿ ಕಠಿಣವಾಗಿದ್ದಾಗ, ಯುದ್ಧರಂಗದಲ್ಲಿ ಕರ್ಣನಿಗೆ ಅಸ್ತ್ರಪ್ರಯೋಗದ ಮಂತ್ರ ಮರೆತುಹೋದಂತೆ, ನಮ್ಮ ಯಾವುದೇ ಅನುಭವ, ಜ್ಞಾನ, ತಂತ್ರಗಾರಿಕೆಗಳೂ ನೆರವಿಗೆ ಬರುವುದಿಲ್ಲ. ಆ ದಿನ ಆಗಿದ್ದು ಹಾಗೆಯೇ.

ಮೊನ್ನೆ ಟಿ20 ವಿಶ್ವಕಪ್ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮ ಅದನ್ನೇ ಹೇಳಿದರು. ಈ ಬಾರಿ ನಾವು ಗೆಲ್ಲುವುದು ಮೊದಲೇ ಬರೆದಿತ್ತು ಎಂದು.. ಆದರೆ, ವಿಧಿ ನಮ್ಮ ಹಣೆಯಲ್ಲಿ ಏನು ಬರೆದಿದೆ ಎನ್ನುವುದು ಮೊದಲೇ ಗೊತ್ತಿರುವುದಿಲ್ಲವಲ್ಲ. ಹೇಗೂ ನಾವೇ ಗೆಲ್ಲುತ್ತೇವೆ, ಹಣೆಬರಹದಲ್ಲಿದೆ ಎಂದು ಯಾರೂ ಕೈಕಟ್ಟಿ ಕೂರುವುದು ಸಾಧ್ಯವಿಲ್ಲ. ನಮ್ಮ ಪ್ರಯತ್ನ ಪರಿಪೂರ್ಣವಾಗಿದ್ದಾಗ ಯೋಗವೂ ಕೈಹಿಡಿಯುತ್ತದೆ ಎನ್ನುವುದಷ್ಟೇ ಅದರ ಅರ್ಥ.

ಟಿ20 ವಿಶ್ವಕಪ್ ಗೆಲ್ಲುವುದಕ್ಕೆ ಭಾರತ ಅತ್ಯಂತ ಅರ್ಹ ತಂಡವಾಗಿತ್ತು. ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಪಾಲಿಗೆ ಇದೊಂದು ಕೊನೆಯ ಅವಕಾಶವಾಗಿತ್ತು. ತಮ್ಮ ತಮ್ಮ ಜವಾಬ್ದಾರಿಯಲ್ಲಿ ಕೊಂಚವೂ ಲೋಪವಿಲ್ಲದಂತೆ ಪರಿಶ್ರಮ ಪಟ್ಟಿದ್ದ ಇವರಿಬ್ಬರು ಖಾಲಿ ಕೈಯಲ್ಲಿ ನೇಪಥ್ಯಕ್ಕೆ ಸರಿಯುವುದು ಬೇಡವೆಂಬಂತೆ ಕೊನೆಯಲ್ಲಿ ಯೋಗವೂ ಕೈಹಿಡಿಯಿತು ಎಂದೂ ಹೇಳಬಹುದು.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ರೋಹಿತ್ ಶರ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಎಡವಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಫೈನಲ್​ನಲ್ಲೂ ರೋಹಿತ್ ಶರ್ಮ ಟಾಸ್ ಗೆದ್ದಾಗ ಬ್ಯಾಟಿಂಗ್ ಅನ್ನೇ ಆಯ್ದುಕೊಂಡರು! ಏಕದಿನ ವಿಶ್ವಕಪ್​ನಂತೆ ಇಲ್ಲೂ ಟೂರ್ನಿಯುದ್ದಕ್ಕೂ ಶ್ರೇಷ್ಠ ಬ್ಯಾಟಿಂಗ್ ಮಾಡಿದ್ದ ರೋಹಿತ್ ಫೈನಲ್​ನಲ್ಲಿ ಬೇಗನೆ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ಕೂಡ ನೆರವಿಗೆ ಬರಲಿಲ್ಲ. ಆದರೆ, ವಿರಾಟ್ ಕೊಹ್ಲಿ ಒಂದು ಬದಿಯಲ್ಲಿ ಬಂಡೆಯಂತೆ ಗಟ್ಟಿಯಾಗಿ ನಿಂತರು. ಆ ದಿನ ಕೊಹ್ಲಿ ಆ ರೀತಿ ಕ್ರೀಸ್ ಕಚ್ಚಿ ಆಡುವುದು ಅನಿವಾರ್ಯವಾಗಿತ್ತು. ವೊದಲ 5 ಎಸೆತಗಳಲ್ಲಿ 14 ರನ್ ಬಾರಿಸಿದ್ದ ಕೊಹ್ಲಿ, ವಿಕೆಟ್​ಗಳು ಉರುಳುತ್ತಿದ್ದಂತೆ ತಮ್ಮ ಆಟ ಬದಲಿಸಿಕೊಂಡರು. 36 ರನ್ ಗಳಿಸುವುದಕ್ಕೆ 43 ಎಸೆತ ಖರ್ಚು ಮಾಡಿದ್ದರು. ಅರ್ಧ ಶತಕ ಬಾರಿಸುವುದಕ್ಕೆ ಅವರಿಗೆ 48 ಎಸೆತ ಬೇಕಾಯಿತು. 50ರ ಗಡಿ ದಾಟಿದ ಬಳಿಕ ಕೊನೆಯ 11 ಎಸೆತಗಳಲ್ಲಿ 26 ರನ್ ಚಚ್ಚಿ ಭಾರತ ತಂಡ 176 ರನ್​ಗಳ ಉತ್ತಮ ಗುರಿ ನಿಗದಿಪಡಿಸುವುದಕ್ಕೆ ಕಾರಣರಾದರು.

ಅಮೆರಿಕ-ವೆಸ್ಟ್ ಇಂಡೀಸ್​ನಲ್ಲಿ ಇಡೀ ಟೂರ್ನಿ ಸಾಗಿ ಬಂದ ಹಾದಿ ಗಮನಿಸಿದಾಗ ಹಾಗೂ ಟಿ20 ವಿಶ್ವಕಪ್ ಫೈನಲ್​ಗಳ ಸ್ಕೋರ್ ಅವಲೋಕಿಸಿದಾಗ ಭಾರತ ನಿಗದಿ ಪಡಿಸಿದ್ದ 177 ರನ್ ದೊಡ್ಡ ಟಾರ್ಗೆಟ್ ಆಗಿತ್ತು. ಆದರೆ, ಆಫ್ರಿಕಾ ಆಡುತ್ತಿದ್ದ ರೀತಿಗೆ ಈ ಮೊತ್ತವೂ ಸಾಲದು ಎನಿಸಿತ್ತು. ಕ್ವಿಂಟನ್ ಡಿಕಾಕ್, ನಾಯಕ ಏಡನ್ ಮಾರ್ಕ್ರಮ್ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಿಯನ್ ಸ್ಟಬ್ಸ್ ಹೀಗೆ ಪ್ರತಿಯೊಬ್ಬರೂ ಮ್ಯಾಚ್​ವಿನ್ನರ್​ಗಳೇ ಆಗಿದ್ದರು. 7.1 ಓವರ್​ಗಳಲ್ಲಿ 50 ರನ್, 10 ಓವರ್​ಗಳಲ್ಲಿ 100 ರನ್, 15.2ನೇ ಓವರ್​ನಲ್ಲಿ 150 ರನ್ ಗಡಿ ದಾಟಿದ್ದ ಆಫ್ರಿಕಾ ಗೆಲ್ಲುವುದರಲ್ಲಿ ಯಾವ ಸಂಶಯವೂ ಇರಲಿಲ್ಲ. 14 ಓವರ್ ಮುಗಿದಾಗ 4 ವಿಕೆಟ್​ಗೆ 123 ರನ್ ಗಳಿಸಿದ್ದ ಆಫ್ರಿಕಾ 15ನೇ ಓವರ್​ನಲ್ಲಿ ಅಕ್ಷರ್ ಪಟೇಲ್​ರನ್ನು ಹಿಗ್ಗಾಮುಗ್ಗ ಥಳಿಸಿ 24 ರನ್ ದೋಚಿತ್ತು. ಅಲ್ಲಿಗೆ 36 ಎಸೆತಕ್ಕೆ 54 ರನ್ ಇದ್ದ ಗುರಿ 30 ಎಸೆತಗಳಲ್ಲಿ 30 ರನ್​ಗೆ ಇಳಿದಿತ್ತು. ಈ ಹಂತ ತಲುಪಿದ ಮೇಲೆ ಯಾವುದೇ ಪವಾಡ ನಡೆಯದ ಹೊರತು ಆಫ್ರಿಕಾ ಸೋಲುವುದು ಸಾಧ್ಯವೇ ಇರಲಿಲ್ಲ. ವಿಶ್ವಕಪ್ ಫೈನಲ್​ನಲ್ಲಿ ಗುರಿಗೆ, ಟ್ರೋಫಿಗೆ ಇಷ್ಟು ಸನಿಹ ಸುಳಿದ ಮೇಲೆ ಯಾವ ತಂಡವೂ ಸೋತ ಉದಾಹರಣೆಯೂ ಇರಲಿಲ್ಲ. ಟೂರ್ನಿಯುದ್ದಕ್ಕೂ ಶ್ರೇಷ್ಠ ಬೌಲಿಂಗ್ ಮಾಡಿದ್ದ ಕುಲ್​ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಇಬ್ಬರೂ ಆ ದಿನ ವಿಫಲರಾಗಿದ್ದರು. ಏಕದಿನ ವಿಶ್ವಕಪ್ ಫೈನಲ್​ನಲ್ಲಿ ವಿಫಲರಾಗಿದ್ದ ಬುಮ್ರಾಗೆ ಈ ಫೈನಲ್​ನಲ್ಲೂ ಅದೃಷ್ಟ ಕೈಕೊಡಬಹುದಿತ್ತು. ಹಾರ್ದಿಕ್, ಅರ್ಷದೀಪ್ ಕೂಡ ಕೊನೆಯ ಓವರ್​ಗಳಲ್ಲಿ ರನ್ ಬಿಟ್ಟುಕೊಟ್ಟಿದ್ದರೆ, ಏನೂ ಮಾಡುವಂತಿರಲಿಲ್ಲ. ಆದರೆ, ಭಾರತ ಕೈಚೆಲ್ಲಿ ಕೂತಿರಲಿಲ್ಲ. ಆಫ್ರಿಕಾ ಆರಂಭಿಕ ಕ್ವಿಂಟನ್ ಡಿಕಾಕ್ ಆ ದಿನ 12 ಓವರ್ ತನಕ ಕ್ರೀಸಿನಲ್ಲಿದ್ದರೂ, ಗಳಿಸಿದ್ದು ಕೇವಲ 39 ರನ್ ಮಾತ್ರ. ಡಿಕಾಕ್ ಮತ್ತೋರ್ವ ಟ್ರಾವಿಸ್ ಹೆಡ್ ರೀತಿ ಸ್ಪೋಟಿಸಲು ಭಾರತ ಬಿಟ್ಟಿರಲಿಲ್ಲ. ಕೊನೆಯಲ್ಲೂ ಅಷ್ಟೇ. 16ನೇ ಓವರ್​ನಲ್ಲಿ ಬುಮ್ರಾ ಕೇವಲ 4 ರನ್ ಕೊಟ್ಟಾಗ ಆಫ್ರಿಕಾ ಮೇಲೆ ಸ್ವಲ್ಪ ಮಟ್ಟಿನ ಒತ್ತಡ ನಿರ್ವಣವಾಯಿತು. ಆದರೂ, ಆಫ್ರಿಕಾ ನಾಲ್ಕೇ ವಿಕೆಟ್​ಗೆ 151 ರನ್ ಗಳಿಸಿ ಚಂಡಮಾರುತದಂತೆ ಜಯದತ್ತ ಧಾವಿಸುತ್ತಿತ್ತು. ಭಾರತೀಯರು ಉಸಿರು ಹಿಡಿದುಕೊಳ್ಳುವುದಕ್ಕೆ ಏನಾದರೂ ತಂತ್ರಗಾರಿಕೆಯ ಅವಶ್ಯಕತೆ ಇತ್ತು. ಉತ್ತಮ ನಾಯಕತ್ವದ ಅವಶ್ಯಕತೆ ಬೀಳುವುದೇ ಇಲ್ಲಿ. ರೋಹಿತ್ ಶರ್ಮ ತಮ್ಮ ಅನುಭವದ ಬತ್ತಳಿಕೆಯಿಂದ ಅಸ್ತ್ರಗಳನ್ನು ಒಂದೊಂದಾಗಿ ಹೊರಸೆಳೆದರು.

ವಿಕೆಟ್ ಕೀಪರ್ ರಿಷಬ್ ಪಂತ್ ಇದ್ದಕ್ಕಿದ್ದಂತೆ ಮಂಡಿ ಹಿಡಿದುಕೊಂಡು ನೆಲಕ್ಕೆ ಉರುಳಿದರು. ವೈದ್ಯಕೀಯ ತಂಡ ಮೈದಾನಕ್ಕೆ ಬಂದು ಅವರಿಗೆ ಶುಶ್ರೂಷೆ ಮಾಡುವಷ್ಟರಲ್ಲಿ ಕೆಲವು ನಿಮಿಷ ಕಳೆಯಿತು. ಆಫ್ರಿಕನ್ನರ ಏಕಾಗ್ರತೆ ಇಲ್ಲಿ ಭಂಗವಾಗಿತ್ತು. ಅವರ ಆಟದ ಮೊಮೆಂಟಮ್ೆ ಬ್ರೇಕ್ ಬಿದ್ದಿತ್ತು. 17ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯರ ಮೊದಲ ಎಸೆತದಲ್ಲೇ ಕ್ಲಾಸೆನ್ ವಿಕೆಟ್​ನಿಂತ ದೂರ ಸಾಗುತ್ತಿದ್ದ ಚೆಂಡನ್ನು ಕವರ್ಸ್​ನತ್ತ ಬೌಂಡರಿಗಟ್ಟಲು ಯತ್ನಿಸಿ ವಿಫಲರಾದರು. 27 ಎಸೆತಗಳಲ್ಲಿ 5 ಸಿಕ್ಸರ್, 2 ಬೌಂಡರಿ, 192ರ ಸ್ಟ್ರೈಕ್ ರೇಟ್​ನಲ್ಲಿ 52 ರನ್ ಗಳಿಸಿದ್ದ ಕ್ಲಾಸೆನ್ ಬ್ಯಾಟ್​ಗೆ ಮುತ್ತಿಕ್ಕಿ ಚಿಮ್ಮಿದ ಚೆಂಡನ್ನು ಪಂತ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು. ಮಾರನೇ ಓವರ್​ನಲ್ಲಿ ಮಾಕೋ ಜಾನ್ಸನ್​ರನ್ನು ಬುಮ್ರಾರ ಮಾಂತ್ರಿಕ ಎಸೆತ ಬೌಲ್ಡ್ ಮಾಡಿತ್ತು.

19ನೇ ಓವರ್​ನಲ್ಲಿ ಮಿಲ್ಲರ್​ನಂಥ ಮಿಲ್ಲರ್​ಗೆ ರನ್ ಕೊಡದೆ ವಂಚಿಸಿ ಕೇವಲ 4 ರನ್ ಬಿಟ್ಟುಕೊಟ್ಟ ಅರ್ಷದೀಪ್ ಸಿಂಗ್ ಭಾರತವನ್ನು ಜಯದ ಹೊಸ್ತಿಲಿಗೆ ತಂದಿದ್ದರು. ಇಷ್ಟಾದರೂ, ಆಫ್ರಿಕಾ ಗೆಲ್ಲಿಸಲು ಡೇವಿಡ್ ಮಿಲ್ಲರ್ ಒಬ್ಬರೇ ಸಾಕಿತ್ತು. ಆದರೆ, 20ನೇ ಓವರ್​ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸ್ಟಂಪ್ಸ್​ನಿಂದ ದೂರದಲ್ಲಿ ಕೆಳಮಟ್ಟದಲ್ಲಿ ಎಸೆದ ಫುಲ್​ಟಾಸ್ ಮಿಲ್ಲರ್​ರನ್ನು ಕೆಣಕಿತ್ತು. ಸಿಕ್ಸರ್​ಗೆ ಗುರಿಇಟ್ಟು ಅವರು ಬ್ಯಾಟ್ ಬೀಸಿದ್ದರು. ಅದನ್ನು ಅದೃಷ್ಟದ ಆಟವೆನ್ನಿ, ಸೂರ್ಯಕುಮಾರ್ ಯಾದವ್​ರ ಚಾಕಚಕ್ಯತೆ ಎನ್ನಿ.. ಅವರ ಅದ್ಭುತ ಕ್ಯಾಚ್​ನೊಂದಿಗೆ ಮಿಲ್ಲರ್ ಮತ್ತು ಆಫ್ರಿಕಾದ ಕಥೆ ಮುಗಿದಿತ್ತು! ಹಾಗಾದರೆ, ಭಾರತ ಆ ದಿನ ಗೆದ್ದಿದ್ದು ಯಾರಿಂದ? ಕೊಹ್ಲಿ ಬ್ಯಾಟಿಂಗ್​ನಿಂದಲೇ? ರೋಹಿತ್ ನಾಯಕತ್ವದಿಂದಲೇ? ಬುಮ್ರಾ, ಪಾಂಡ್ಯ, ಅರ್ಷದೀಪ್ ಬೌಲಿಂಗ್​ನಿಂದಲೇ? ಅಥವಾ ಸೂರ್ಯ ಕ್ಯಾಚ್​ನಿಂದಲೇ? ಇವಿಷ್ಟರಲ್ಲಿ ಯಾವುದೋ ಒಂದು ಅಂಶ ಕೊರತೆಯಾಗಿದ್ದರೂ ಭಾರತ ಗೆಲ್ಲುತ್ತಿರಲಿಲ್ಲ ಎನ್ನುವುದಂತೂ ಸತ್ಯ.

ಅಂದರೆ, ಮಾನವ ಪ್ರಯತ್ನಕ್ಕೆ ದೈವಬಲವೂ ಸೇರಿಕೊಂಡಾಗ ಅದ್ಭುತ ಸಾಧ್ಯವಾಗುತ್ತದೆ. ಭಾರತ ಗೆದ್ದಿರುವುದಕ್ಕೆ ಇಷ್ಟೊಂದು ರೂವಾರಿಗಳಿದ್ದಾರೆ. ಒಂದು ವೇಳೆ ಭಾರತ ಸೋತಿದ್ದರೆ, 15ನೇ ಓವರ್​ನಲ್ಲಿ 24 ರನ್ ಚಚ್ಚಿಸಿಕೊಂಡ ಅಕ್ಷರ್ ಪಟೇಲ್ ವಿಲನ್ ಆಗಿರುತ್ತಿದ್ದರು! ನಾಯಕ ರೋಹಿತ್ ಶರ್ಮ ಒಂದೂ ಪಂದ್ಯ ಸೋಲದೆ ಟಿ20 ವಿಶ್ವಕಪ್ ಗೆದ್ದ ಮೊದಲ ನಾಯಕನೆನಿಸಿದರು. ರಾಹುಲ್ ದ್ರಾವಿಡ್ ಆಟಗಾರನಾಗಿ ಸಾಧ್ಯವಾಗದ ವಿಶ್ವಕಪ್ ಟ್ರೋಪಿಯನ್ನು ಕೋಚ್ ಆಗಿ ಗೆದ್ದ ಹೆಮ್ಮೆಯೊಂದಿಗೆ ನಿರ್ಗಮಿಸಿದರು. ಆರಂಭದಲ್ಲೇ ಪಾಕಿಸ್ತಾನವನ್ನು ಸೋಲಿಸಿದ್ದರಿಂದ ಲಭ್ಯವಾದ ಆತ್ಮವಿಶ್ವಾಸವನ್ನು ತಂಡ ಎಲ್ಲೂ ಕೆಳಕ್ಕಿಳಿಸಲಿಲ್ಲ. ಸೂಪರ್ 8ರಲ್ಲಿ ಆಸ್ಟ್ರೇಲಿಯಾವನ್ನು, ಉಪಾಂತ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನಾಯಕ ರೋಹಿತ್ ಶರ್ಮ ತಾವೇ ಮುಂದಾಗಿ ನಿಂತು ಭರ್ಜರಿ ತೋಳ್ಬಲದಿಂದ ಬಡಿದಟ್ಟಿ ಸೇಡು ತೀರಿಸಿಕೊಂಡ ಮೇಲೆ ಭಾರತ ಗೆಲುವಿಗೆ ನೂರಕ್ಕೆ ನೂರು ಫೇವರಿಟ್ ಎನಿಸಿತ್ತು. ಫೈನಲ್​ನಲ್ಲಿ ಟೀಮ್ ಎಫರ್ಟ್ ತಂಡದ ಕೈಹಿಡಿಯಿತು. ಈಗಲೂ ಸೂರ್ಯ ಕ್ಯಾಚ್​ನ ಕ್ರಮಬದ್ಧತೆ ಬಗ್ಗೆ ಅನುಮಾನಿಸುವವರಿದ್ದಾರೆ. ಆದರೆ, ಅದು ವಿಶ್ವಕಪ್​ನ ಶ್ರೇಷ್ಠ ಕ್ಯಾಚ್ ಎಂದು ಉಭಯ ತಂಡಗಳು, ಮ್ಯಾಚ್​ರೆಫ್ರಿಗಳು, ಐಸಿಸಿ ಹಾಗೂ ತಂತ್ರಜ್ಞಾನ ಒಪ್ಪಿಕೊಂಡಾಗಿದೆ. ಹಾಗಾಗಿ ವಿಘ್ನಸಂತೋಷಿಗಳ ಮಾತಿಗೆ ಬೆಲೆ ಕೊಡಬೇಕಿಲ್ಲ.

1983ರಲ್ಲಿ ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವು ವೆಸ್ಟ್ ಇಂಡೀಸ್​ನ ಸುವರ್ಣಯುಗದ ದೈತ್ಯರ ವಿರುದ್ಧ ಕಪಿಲ್ ದೇವ್ ಎಂಬ ಅಸಾಮಾನ್ಯ ನಾಯಕನ ಆತ್ಮವಿಶ್ವಾಸ ಹಾಗೂ ಟೀಮ್ ಎಫರ್ಟ್​ನಿಂದ ಸಾಧ್ಯವಾಗಿತ್ತು. 2007ರ ಏಕದಿನ ವಿಶ್ವಕಪ್​ನಲ್ಲಿ ಮೊದಲ ಸುತ್ತಿನಲ್ಲೇ ಭಾರತ ನಿರ್ಗಮಿಸಿದ ಮೇಲೆ ಬಿಸಿಸಿಐ ತೆಗೆದುಕೊಂಡ ಕ್ರಾಂತಿಕಾರಕ ನಿರ್ಧಾರದಿಂದ, ಎಂಎಸ್ ಧೋನಿ ಎಂಬ ಯುವ ನಾಯಕನ ಮುಂದಾಳತ್ವದಲ್ಲಿ ಮತ್ತೆ ಟೀಮ್ ಎಫರ್ಟ್​ನಿಂದ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು. 2011ರಲ್ಲಿ ಧೋನಿಯ ಪ್ರಬುಧ್ಧ ನಾಯಕತ್ವದ ಜತೆಗೆ ತೆಂಡುಲ್ಕರ್​ಗೆ ವಿದಾಯದ ಗಿಫ್ಟ್ ಕೊಡುವ ಹಂಬಲ, ಮತ್ತೊಮ್ಮೆ ಟೀಮ್ ಎಫರ್ಟ್​ನಿಂದ ಟ್ರೋಫಿ ಒಲಿದಿತ್ತು. ಈ ಬಾರಿ ಕೋಚ್ ದ್ರಾವಿಡ್, ನಾಯಕ ರೋಹಿತ್, ಕಿಂಗ್ ಕೊಹ್ಲಿಗೆ ವಿದಾಯದ ಟಿ20 ಟೂರ್ನಿಯಲ್ಲಿ ಮತ್ತೊಂದು ಅಮೋಘ ಟೀಮ್ ಎಫರ್ಟ್ ಚಾಂಪಿಯನ್ ಪಟ್ಟದ ಮೇಲೆ ಕುಳ್ಳಿರಿಸಿದೆ. ಈ ನಾಲ್ಕೂ ವಜ್ರಕಿರೀಟಗಳು ಒಂದಕ್ಕಿಂತ ಒಂದು ಮಿಗಿಲು. ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆ ಅಲ್ಲ. ಭಾರತೀಯ ಕ್ರಿಕೆಟ್​ನ ಸುವರ್ಣಪುಟಗಳಲ್ಲಿ ಈ ನಾಲ್ಕೂ ಕಿರೀಟಗಳಿಗೆ ಅಪಾರ ಮೌಲ್ಯವಿದೆ. ಮುಂದಿನ ಪೀಳಿಗೆಗಳನ್ನು ಪ್ರಭಾವಿಸುವ ಶಕ್ತಿ ಇದೆ.

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)