ಅಂಕಣ

ಅರಣ್ಯದಲ್ಲಿ ಕಾರ್​ನಿಂದ ಇಳಿದವರನ್ನು ಅಟ್ಟಾಡಿಸಿದ ಕಾಡಾನೆ: ಬೆಚ್ಚಿಬೀಳಿಸುವ ದೃಶ್ಯದ ವಿಡಿಯೋ ವೈರಲ್‌..

#Bandipur #Tiger #Reserve Forest #Viral Video

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಕಾಡಾನೆ ಅಟ್ಟಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಜನವರಿ 31 ರಂದು ಕೇರಳದ ಮುತ್ತಂಗಾ ಸಮೀಪ ನಡೆದಿದೆ. ಅದೃಷ್ಟವಶಾತ್, ಆನೆ ದಾಳಿಗೆ ಮುಂದಾಗಿದ್ದರೂ, ಇಬ್ಬರೂ ಓಡಿ ಹೋಗಿ ಬಚಾವ್‌ ಆಗಿದ್ದಾರೆ. ಈ ಭಯಾನಕ ದೃಶ್ಯವನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳವರೂ ನೋಡಿದ್ದಾರೆ. ಅವರಲ್ಲಿ ಒಂದು ಕಾರಿನಲ್ಲಿದ್ದವರು ವಿಡಿಯೋ ಚಿತ್ರೀಕರಿಸಿದ್ದಾರೆ. ಅವರ ಕಾರು ಹಿಮ್ಮುಖ ಚಲನೆಯಲ್ಲಿತ್ತು ಎಂಬುದು ವಿಡಿಯೋ ಗಮನಿಸಿದರೆ ಗೊತ್ತಾಗುತ್ತದೆ.

ವಿಡಿಯೋ ತುಣುಕು 20 ಸೆಕೆಂಡ್‌ ಇದ್ದು, ಕಾಡಾನೆ ಅಟ್ಟಿಸಿಕೊಂಡು ಬರುತ್ತಿದ್ದು, ಇಬ್ಬರು ಅದರ ಮುಂದೆ ಕಿರುಚುತ್ತ ಓಡುತ್ತಿದ್ದಾರೆ. ಇವರಲ್ಲಿ ಹಿಂದೆ ಇದ್ದ ವ್ಯಕ್ತಿ ನೆಲಕ್ಕೆ ಬಿದ್ದಿದ್ದು, ಆನೆ ಆತನನ್ನು ಸೊಂಡಿಲಿನಿಂದ ಹೊಡೆದು, ಕಾಲಿನಿಂದ ಹೊಸಕಿಹಾಕಲು ಮುಂದಾಗಿದೆ. ಆದರೆ ಆತ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ. ಬಳಿಕ ಆತ ಮರಗಳ ನಡುವೆ ತೆವಳಿಕೊಂಡು ಮರೆಯಾಗಿದ್ದಾನೆ. ಆನೆ ಹೋದ ಬಳಿಕ ಅವರು ಅಲ್ಲಿಂದ ಎದ್ದು ಕಾರಿನ ಕಡೆಗೆ ಓಡುತ್ತಿರುವಲ್ಲಿಗೆ ದೃಶ್ಯಕೊನೆಯಾಗಿದೆ.

ಈ ವಿಡಿಯೋ ಇನ್‌ಸ್ಟಾಗ್ರಾಂ ಸೇರಿ ವಿವಿಧ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಲವು ಖಾತೆಗಳ ಮೂಲಕ ಅಪ್ಲೋಡ್ ಆಗಿದ್ದು, ವೈರಲ್ ಆಗಿದೆ. ಅನೇಕರು ಈ ವಿಡಿಯೋ ನೋಡಿ ದಿಗ್ಭ್ರಾಂತರಾಗಿದ್ದಾರೆ.

ಅಭಯಾರಾಣ್ಯ ಪ್ರದೇಶದಲ್ಲಿ ವಾಹನಗಳನ್ನು ಪಾರ್ಕ್‌ ಮಾಡುವುದು, ಇಳಿಯುವುದು, ಹಾರ್ನ್​ ಮಾಡುವುದು, ವೇಗವಾಗಿ ಸಂಚರಿಸುವುದು, ವನ್ಯಜೀವಿಗಳಿಗೆ ತೊಂದರೆಯಾಗುವಂತೆ ಡೆದುಕೊಳ್ಳುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಇದಕ್ಕೆ ಸಂಬಂಧಿಸಿದ ಸೈನ್‌ ಬೋರ್ಡ್‌ಗಳನ್ನೂ ಹೆದ್ದಾರಿಯ ಉದ್ದಕ್ಕೂ ಹಾಕಲಾಗಿದೆ. ಆದರೆ ಈ ಎಲ್ಲ ಎಚ್ಚರಿಕೆಗಳನ್ನು ಕೆಲವರು ನಿರ್ಲಕ್ಷಿಸುತ್ತಿರುವುದು ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ. ಅದರಲ್ಲಿ ಇದೂ ಒಂದು ಎನ್ನಬಹುದು. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರ ಚರ್ಚೆಗೆ ಒಳಗಾಗಿದ್ದು, ನೆಟ್ಟಿಗರು ಕಾರ್​ನಲ್ಲಿ ಪ್ರಯಾಣಿಸುತ್ತಿದ್ದವರ ಬೇಜವಾಬ್ದಾರಿ ವರ್ತಜೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.