ಅಂಕಣ

ಸಾಹಿತ್ಯ ಸಂಗೀತದಲ್ಲಿ ಸ್ತ್ರೀಶಕ್ತಿ

ಮಹಿಳೆಯರ ಸಾಧನೆಯ ಪರಿಚಯವೆಂದರೆ ಸಂಬಂಧಿತ ಕ್ಷೇತ್ರದ ಚರಿತ್ರೆಯ ಪರಿಚಯವೇ. ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯನ್ನು ಹತ್ತು ಜನ ಬರೆದರೆ, ಬರವಣಿಗೆಯ ಶೈಲಿ ಮತ್ತು ವಿಧಾನಗಳಲ್ಲಿ ವ್ಯತ್ಯಾಸವಾಗಬಹುದೇ ವಿನಾ ಸಂಗತಿಗಳಲ್ಲಿ, ನಡೆದ ಘಟನೆಗಳಲ್ಲಿ ಯಾವುದೇ ವ್ಯತ್ಯಾಸ ಕಾಣಲಾಗದು. ಹಾಗೆಯೇ ಸಾಧಕಿಯರ ಚರಿತ್ರೆಯಲ್ಲೂ ಅಂಥದೊಂದು ಪುರಾವೆ ಇಲ್ಲದೇ ಯಾವುದೇ ವ್ಯತ್ಯಾಸಗಳನ್ನು ಮಾಡಲಾಗದು. ಬಿಡಲಾಗದ ಬಿಡಬಾರದ ಅದೇ ಮೈಲುಗಲ್ಲು ಸ್ಥಾಪಿಸಿದ ಹೆಸರುಗಳು, ಅದೇ ಸಂಗತಿಗಳು, ಅದೇ ಕ್ರಮ. ವ್ಯತ್ಯಾಸ ಕಂಡರೆ ಕೆಲವು ಅಂಶಗಳಲ್ಲಿ ಮಾತ್ರ. ಒಂದೋ ಎರಡೋ ಕೃತಿ ರಚನೆಗಳೇ ದೊಡ್ಡ ಸಾಧನೆಯಾಗಿದ್ದ ಕಾಲದಿಂದಲೇ ಮಹಿಳೆಯರೂ ತಂತಮ್ಮ ಉತ್ತಮ ಕೃತಿ ರಚನೆಗಳಿಂದ ಸಾಧಕಿಯರ ಪಟ್ಟಿಯಲ್ಲಿ ಸೇರಿರುವುದನ್ನು ಬಾದಾಮಿ ಚಾಲುಕ್ಯರ ಕಾಲದಿಂದಲೇ ಕಾಣಬಹುದು. ಸಂಸ್ಕೃತ ಪಂಡಿತೆಯಾಗಿದ್ದ ಚಂದ್ರಾದಿತ್ಯನ ಪತ್ನಿ ವಿಜಯ ಭಟ್ಟಾರಿಕೆ (ವಿಜ್ಜಿಕಾ) ಬರೆದ ಕೌಮುದೀ ಮಹೋತ್ಸವ ಎಂಬ ಸಂಸ್ಕೃತದ ನಾಟಕವೇ ಮಹಿಳಾ ರಚಿತ ಪ್ರಥಮ ಕೃತಿ ಎನಿಸುತ್ತದೆ. ಇದು ಚಾಲುಕ್ಯರ ಕಾಲದ ಒಂದು ಉತ್ತಮ ಕೃತಿ ಎಂದು ಪರಿಗಣಿತವಾಗಿತ್ತೆಂದರೆ ಅದು ಮಹತ್ಸಾಧನೆಯೇ ಸರಿ. ದ್ವಾರ ಸಮುದ್ರದ ಬಲ್ಲಾಳರಾಯನ ಸಭೆಯಲ್ಲಿ ಪಂಡಿತೆಯಾಗಿದ್ದ ಕಂತಿಯು ಹನ್ನೊಂದನೆಯ ಶತಮಾನದಲ್ಲಿ (1010) ಕಾಣಬರುವ ಕನ್ನಡದ ಮೊದಲ ಕವಯತ್ರಿ. ತಿರುಪು ಪದ ಬಳಕೆ, ದತ್ತಪಾದಿ ಪದ್ಯ ರಚನೆ, ನಿರೋಷ್ಠ್ಯ (ತುಟಿ ಸೇರದ) ಪದಗಳಿಂದ ಪದರಚನೆ ಮಾಡುತ್ತಿದ್ದ ಕಂತಿಯು ಅವಧಾನ ಕಲೆಯ ಸಾಹಿತ್ಯ ರಚಿಸಿದ ಮೊದಲ ಮಹಿಳೆಯೂ ಹೌದು.

ಮೇರುಪ್ರತಿಭೆ ಅಕ್ಕಮಹಾದೇವಿ

ನಂತರ ಸಮಾಜ ಸುಧಾರಣೆ, ಅಧ್ಯಾತ್ಮದ ಮಾರ್ಗ, ಅಧರ್ಮದ ಟೀಕೆ, ವೈರಾಗ್ಯ, ಅಸಮಾನತೆ, ಸ್ತ್ರೀಯರು ಅಂದು ಅನುಭವಿಸುತ್ತಿದ್ದ ಸಮಸ್ಯೆಗಳು ಇತ್ಯಾದಿಗಳೆಲ್ಲದರ ಕಡೆ ತಮ್ಮ ಚಿಂತನೆಗಳನ್ನು ಹರಿಸಿ, ವಚನಗಳ ಮೂಲಕ ಜನರನ್ನು ಎಚ್ಚರಿಸಿ, ಅವರ ಮನೋಭಾವವನ್ನು ಬದಲಿಸುವ ಕಾರ್ಯಕ್ಕೆ ಇಳಿದವರು ಹನ್ನೆರಡನೇ ಶತಮಾನದ ವಚನಕಾರ್ತಿಯರು. ಸಮಾಜದ ಎಲ್ಲ ವೃತ್ತಿಗಳಿಂದ, ಎಲ್ಲ ವರ್ಗ, ಜಾತಿಗಳಿಂದ ಬಂದು ಒಟ್ಟಾಗಿ ಸೇರಿ, ಒಂದು ಸಾಮೂಹಿಕ ಚಳವಳಿಯನ್ನೇ ನಡೆಸಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮರೆಯಲಾಗದ ದಾಖಲೆಯನ್ನು ನಿರ್ವಿುಸಿದವರು ಅಕ್ಕನಾಗಮ್ಮ, ಗೊಗ್ಗವ್ವೆ, ಕಾಳವ್ವೆ, ಗಂಗಾಂಬಿಕೆ, ನೀಲಾಂಬಿಕೆ, ವರದಾನಿ ಗುಡ್ಡವ್ವೆ ಮುಂತಾದ ವಚನಕಾರ್ತಿಯರು. ಸರಳ ಹಾಗೂ ಅಚ್ಚ ಕನ್ನಡದಲ್ಲಿ ವಚನಗಳನ್ನು ರಚಿಸಿ ಸಮಾಜದ ಬದಲಾವಣೆಯನ್ನು ಸಾಧಿಸಿದವರು. ಈ ಮಹಿಳೆಯರೆಲ್ಲರ ಶಿಖಾಮಣಿಯಂತೆ ಮೆರೆದ ಮೇರು ಪ್ರತಿಭೆಯೆಂದರೆ, ಶಿವಶರಣೆ ಅಕ್ಕಮಹಾದೇವಿ. ದೈವಭಕ್ತೆ, ವಿರಾಗಿ, ಚಿಂತಕಿ ಎಲ್ಲವೂ ಆದ ಮಹಾನ್ ಸ್ತ್ರೀಶಕ್ತಿ. ಮದುವೆ, ಸಂಸಾರ, ಬಾಳಬಂಧನಗಳ ಸಂಕೋಲೆಗಳನ್ನು ಕಡಿದೊಗೆದು, ಅಗೋಚರ ಚೆನ್ನಮಲ್ಲಿಕಾರ್ಜುನನ್ನು ಪತಿಯಾಗಿ ವರಿಸಿ, ತನ್ನ ವಚನಗಳ ದೀವಿಗೆ ಹಿಡಿದು ಆತನಿಗಾಗಿ ನಡೆಸಿದ ಹುಡುಕಾಟ, ಆ ಆಂತರಿಕ ಹೋರಾಟ, ಇನ್ನಾರಲೂ್ಲ ಕಾಣಲಾಗದ ಒಂದು ಉಗ್ರ ಸಾಧನೆಯೇ ಸರಿ. ಭಕ್ತಿ ಭಂಡಾರಿ ಬಸವಣ್ಣನವರ ನಾಯಕತ್ವದಲ್ಲಿ ವಚನ ಚಳವಳಿ ನಡೆದಂತೆ, ಪುರಂದರ ದಾಸರ ನಾಯಕತ್ವದಲ್ಲಿ ಮುಂದುವರೆದದ್ದು ದಾಸ ಸಾಹಿತ್ಯ ಚಳವಳಿ. ಈ ಕಾಲದಲ್ಲಿ ಜನರ ಮನಸ್ಸನ್ನು ಆಕರ್ಷಿಸಿದ್ದು ಭಕ್ತಿಯ ಸಾಧನೆ. ಸರಳ ಮಾರ್ಗದ ಮೂಲಕ ಲಭ್ಯವಾಗುವ ಹರಿಸ್ಮರಣೆಯ ಸೌಲಭ್ಯ, ಹೃದಯದಲ್ಲೇ ಅಡಗಿರುವ ಹರಿಯ ಉಪಾಸನೆ. ಪುರಂದರ ದಾಸರ ಸಾಹಿತ್ಯರಚನೆಯ ಆಸಕ್ತಿಯನ್ನು ತಮ್ಮೊಳಗಿಟ್ಟುಕೊಂಡು ಮುಂದುವರೆಸಿದ ದಾಸ ಕವಯತ್ರಿಯರ ಸಾಹಿತ್ಯವನ್ನು ಅವರ ನಂತರದ ಶತಮಾನಗಳಲ್ಲೂ ಕಾಣಬಹುದು. ರಾಣೆಬೆನ್ನೂರಿನಲ್ಲಿ ಜನಿಸಿದ ಹೆಳವನಕಟ್ಟೆ ಗಿರಿಯಮ್ಮ, ಬಿಜಾಪುರದ ಗಲಗಲಿ ಅವ್ವ, ಪ್ರಯಾಗಬಾಯಿ, 16-17ನೇ ಶತಮಾನದ ದಾಸ ಮಹಿಳೆಯರು. ಅಂಬಾಬಾಯಿ 20ನೇ ಶತಮಾನದಾಕೆ.

ಅವ್ವಂದಿರ ಸಾಹಸಯಾತ್ರೆ

‘ಮಡಿಹೆಂಗಸು ಅಥವಾ ವಿಧವೆ ಎಂದರೆ ಅಪಶಕುನ, ಇವರು ಮುಟ್ಟಿದ್ದು, ನೋಡಿದ್ದು ಹಾಳು’ ಎಂಬ ನಂಬಿಕೆಯಿಂದ, ಇಂಥವರ ಜೀವನವನ್ನು ಅಡುಗೆಮನೆಗೇ ಸೀಮಿತಗೊಳಿಸುತ್ತಿದ್ದ ಕಾಲದಲ್ಲಿ, ತಮ್ಮ ವೈಧವ್ಯವನ್ನು ಸಾಹಿತ್ಯ ರಚನೆಯಿಂದ ಮತ್ತು ಸಮಾಜ ಸೇವೆಯಿಂದ ಸಾರ್ಥಕಪಡಿಸಿಕೊಂಡವರು, ಚರಿತ್ರೆಯ ಉದ್ದಕ್ಕೂ ಕಾಣಸಿಗುತ್ತಾರೆ. ಹನ್ನೆರಡು ವರ್ಷದ ಕನ್ಯೆ ಗಲಗಲಿ ಅವ್ವ ತೊಂಬತ್ತೈದರ ಮುದುಕ ವಿದ್ವಾಂಸರನ್ನು ಮದುವೆಯಾದ ಎಂಟನೆ ದಿನವೇ ವಿಧವೆಯಾದವಳು. ನಂತರ ಮನೆಯವರಿಂದಲೇ ಓದು ಕಲಿತು ಕೃತಿ ರಚಿಸಿದವರು. ದೇವರಾಯನ ದುರ್ಗದ ಪರಮಪ್ರಿಯ ಸುಬ್ಬರಾಯದಾಸರ ಶಿಷ್ಯೆಯಾಗಿ ಅಂಕಿತ ಪಡೆದ ಅಂಬಾಬಾಯಿ ಅವರ ಸಾಧನೆ ಅನುಪಮ. 1902ರಲ್ಲಿ ಹುಟ್ಟಿ ದಾಸ ಸಾಹಿತ್ಯವನ್ನು ಅಪ್ಪಿಕೊಂಡು, ಜೀವ ಸವೆಸಿದ ದಾಸ ಕವಯತ್ರಿ. ನಾಲ್ನೂರು ದೇವರನಾಮಗಳನ್ನೂ, ಸುದೀರ್ಘ ಪದಗಳನ್ನೂ ಅಲ್ಲದೆ, 1935ರಲ್ಲಿಯೇ ‘ಶ್ರೀರಾಮ ಕಥಾಮೃತ ಸಾರ’ ಎಂಬ ರಾಮಾಯಣ ಮಹಾಕಾವ್ಯವನ್ನು ಬರೆದ ಪ್ರಥಮ ಮಹಿಳೆ. ಅಕ್ಷರಶಃ ದಾಸಿಯಾಗಿ ಭುಜಕ್ಕೆ ಜೋಳಿಗೆ ಜೋತಾಡಿಸಿ, ತಂಬೂರಿ ಹಿಡಿದು, ಏಕಾಂಗಿಯಾಗಿ ಊರೂರು ಅಲೆದು ದಾಸವಾಣಿಯನ್ನು ಪ್ರಸಾರ ಮಾಡಿದ ಒಂಟಿ ವಿಧವೆ.

ಸಾಹಿತ್ಯದ ಕೋಟೆ ಕಟ್ಟಿದವರು

ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲು ಕಾಣಿಸುವ ಹೆಸರಾದ ನಂಜನಗೂಡು ತಿರುಮಲಾಂಬಾ ಹದಿನಾಲ್ಕನೇ ವಯಸ್ಸಿನಲ್ಲಿ ವಿಧವೆಯಾದರೆ, ಆರ್. ಕಲ್ಯಾಣಮ್ಮನವರೂ ಸಂಸಾರ ಶಬ್ದದ ಅರ್ಥ ತಿಳಿಯುವ ಮೊದಲೇ ವೈಧವ್ಯದ ಕ್ರೂರ ನಿಯಮಗಳಿಗೆ ತುತ್ತಾದವರು. ಈ ಇಬ್ಬರೂ ತಮ್ಮ ಬದುಕನ್ನು ಸಹನೀಯಗೊಳಿಸಲು ಆರಿಸಿಕೊಂಡಿದ್ದು ಸಾಹಿತ್ಯಸೇವೆಯ ಮಾರ್ಗವನ್ನು. ‘ಸತಿ ಹಿತೈಷಿಣಿ ಗ್ರಂಥಮಾಲೆ’ಯನ್ನು ಪುಸ್ತಕ ಪ್ರಕಾಶನಕ್ಕಾಗಿಯೂ, ‘ಕರ್ನಾಟಕ ನಂದಿನಿ’ ಎಂಬ ಮಾಸಪತ್ರಿಕೆಯನ್ನು ಹೆಣ್ಣುಮಕ್ಕಳಿಗಾಗಿಯೂ, ‘ಸನ್ಮಾರ್ಗ ದರ್ಶಿನಿ’ ಎಂಬ ಪತ್ರಿಕೆಯನ್ನು ಮಕ್ಕಳಿಗಾಗಿಯೂ ತಿರುಮಲಾಂಬಾ ಅವರು ಕೆಲಕಾಲ ನಡೆಸಿದರೆ; ಆರ್. ಕಲ್ಯಾಣಮ್ಮನವರು ‘ಮಕ್ಕಳ ಕೂಟ’ವನ್ನು ‘ಶಾರದಾ ಸ್ತ್ರೀ ಸಮಾಜ’ವನ್ನು ಕ್ರಮವಾಗಿ ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಸ್ಥಾಪಿಸಿ ನಿರ್ವಹಿಸಿದರು. ‘ಸರಸ್ವತಿ’ ಎಂಬ ಪತ್ರಿಕೆಯನ್ನು 43 ವರ್ಷಗಳ ಕಾಲ ನಡೆಸಿದ್ದಂತೂ ದಾಖಲಾರ್ಹ ಸಂಗತಿ. ಈ ಇಬ್ಬರೂ ತಮ್ಮ ಪತ್ರಿಕೆಗಳು, ತಮ್ಮ ಕಥೆ, ಕಾದಂಬರಿ ಮತ್ತು ನಾಟಕ ಕೃತಿಗಳ ಮೂಲಕ ಸ್ತ್ರೀ ಶಿಕ್ಷಣದ ಅಗತ್ಯ, ಮೂಢ ಸಂಪ್ರದಾಯಗಳ ನಿಮೂಲನೆ, ಮಕ್ಕಳ ಬೆಳವಣಿಗೆ, ಶಿಶು ಪ್ರಾಮುಖ್ಯತೆ, ಜಾತಿ ಮತ್ತು ಲಿಂಗಸಮಾನತೆ - ಇವೇ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದು, ಸಮಾಜದ ಸುಧಾರಣೆಗೆ ಕಾಯಾ ವಾಚಾ ಮನಸಾ ಶ್ರಮಿಸಿದ್ದು ಸದಾ ಸ್ಮರಿಸಬೇಕಾದ ವಿಚಾರ. ನಂತರದ ಬರಹಗಾರ್ತಿಯರಿಗೆ ಓದು, ವಿದ್ಯೆಗಾಗಲೀ ಕೃತಿರಚನೆಗಾಗಲೀ ದಾರಿ ಸುಗಮವಾಗಿತ್ತು. ಶಾಂತಾಬಾಯಿ ನೀಲಗಾರ ಅವರು ಕನ್ನಡದ ಮೊದಲ ಕಾದಂಬರಿಗಾರ್ತಿ. ಇವರ ಸದ್ಗುಣಿ ಕೃಷ್ಣಾಬಾಯಿ (1908) ಕಾದಂಬರಿಯಲ್ಲಿ ಹೆಣ್ಣೆಗೆ ವಿದ್ಯೆ ಅತ್ಯಗತ್ಯ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅನುಭವಾಧಾರಿತ ಕೃತಿರಚನೆಗೆ ಎಂ.ಕೆ. ಇಂದಿರಾ, ಕನ್ನಡದ ಉಳಿಕೆಗಾಗಿ ‘ಕನ್ನಡ ಕೋಟೆ’ ಕಟ್ಟಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಜಯದೇವಿತಾಯಿ ಲಿಗಾಡೆ, ಅರವತ್ತೆಂಟನೇ ಸಮ್ಮೇಳನಾಧ್ಯಕ್ಷರಾದ ಶಾಂತಾದೇವಿ ಮಾಳವಾಡ ಮುಂತಾಗಿ, ಬರೆವಣಿಗೆ ಮುಂದುವರೆಸಿದ ಅನೇಕ ಲೇಖಕಿಯರ ಸುದೀರ್ಘ ಪಟ್ಟಿಯೇ ಇದೆ.

ಬೆಕ್ಕಿನ ಕಣ್ಣು, ಬೆಳ್ಳಿಮೋಡದಂತಹ ಕಾದಂಬರಿಗಳಲ್ಲಿ, ವಸ್ತು, ನಿರೂಪಣೆ ಮತ್ತು ಹೊಸ ವಿಚಾರಗಳಿಂದಾಗಿ, ಮೈಲಿಗಲ್ಲು ನೆಟ್ಟ ತ್ರಿವೇಣಿಯವರ ಹೆಸರಿಲ್ಲದೇ ಕನ್ನಡ ಸಾಹಿತ್ಯ ಚರಿತ್ರೆ ಪೂರ್ಣಗೊಳ್ಳುವುದಿಲ್ಲ. ರಾಜ್ಯದ ಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸಿದ ಕೀರ್ತಿಗೆ ಭಾಜನರಾದವರು ಈಕೆ. ಅಶ್ವಿನಿ, ಆರ್ಯಾಂಬ ಪಟ್ಟಾಭಿ, ಜಯಲಕ್ಷ್ಮಿ, ಈಚನೂರು ಶಾಂತ, ಜಯಲಕ್ಷ್ಮಿ, ಟಿ. ಸುನಂದಮ್ಮ, ವಾಣಿ, ನೀಳಾದೇವಿ, ಅನುಪಮಾ ನಿರಂಜನ, ಮುಂತಾದವರು ಜನಮೆಚ್ಚುಗೆ ಸಾಧಿಸಿದ ಲೇಖಕಿಯರು.

1975ರಿಂದ ‘ಸ್ತ್ರೀವಾದ ಚಳವಳಿ’ ಆರಂಭಗೊಂಡ ಆಸುಪಾಸಿನಲ್ಲಿ, ಲಿಂಗ ಸಮಾನತೆಯ ವಾದವನ್ನನ್ವಯಿಸಿ ಕೃತಿಗಳನ್ನು ರಚಿಸತೊಡಗಿದ ಅನೇಕ ಮಹಿಳೆಯರ ಕೃತಿಗಳು; ವಿಷಯದ ಆಯ್ಕೆ, ನಿರೂಪಣೆಯ ವಿಧಾನ ಮತ್ತು ಗಟ್ಟಿತನದಿಂದಾಗಿ ಲೇಖಕಿಯರ ಕುರಿತಾಗಿದ್ದ ಅಸಡ್ಡೆಯ ಅಭಿಪ್ರಾಯವನ್ನು ಸಂಪೂರ್ಣ ಮಗುಚಿ ಹಾಕಿದವು. ಮಹಿಳೆಯರ ಕೃತಿಗಳಲ್ಲಿನ ಆಳ ಮತ್ತು ಪ್ರಭಾವಿಸುವ ಶಕ್ತಿಗೆ ಮಣಿಯದವರೇ ಇಲ್ಲ. ಎಚ್.ಎಸ್. ಪಾರ್ವತಿ, ವಿಜಯಾ ದಬ್ಬೆ, ಡಾ. ವೀಣಾ ಶಾಂತೇಶ್ವರ, ಬಿ.ಎನ್. ಸುಮಿತ್ರಾಬಾಯಿ, ಎನ್. ಗಾಯತ್ರಿ, ನೇಮಿಚಂದ್ರ, ಪ್ರತಿಭಾ ನಂದಕುಮಾರ್, ಡಾ. ವಿಜಯಾ, ಚಿ.ನ. ಮಂಗಳ, ವೈದೇಹಿ, ಸಾರಾ ಅಬೂಬಕರ್ ಮುಂತಾದವರ ಸಾಧನೆ ಹಾಗೂ ಕೃತಿಗಳು ಈ ವಾದಕ್ಕೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿದ್ದವು. ಗೀತಾ ರಾಮಾನುಜಂ, ಮಾಲತಿ, ಬಿ. ಜಯಶ್ರೀ ಮುಂತಾದವರು ನಾಟಕ ಪ್ರಕಾರದಲ್ಲಿ ಸಾಧನೆ ಮಾಡಿದ ಸ್ತ್ರೀಯರು. ಅಲ್ಲಿಂದ ಈವರೆಗೆ ನೂರಾರು ಲೇಖಕಿಯರು ಸಾಹಿತ್ಯ ರಚನೆಗೆ ಇಳಿದಿದ್ದಾರಾದರೂ ಕೆಲವರ ರಚನೆಯಷ್ಟೇ ಶಕ್ತಿಯುತವೆನ್ನಬಹುದು.

ಸಂಗೀತ ಸಾಧನೆ

ಓದುಬರಹ ಕಲಿಯಲೂ ಅವಕಾಶವಿಲ್ಲದ ಸಮಾಜದಲ್ಲಿ ಅದನ್ನು ವಿರೋಧಿಸಿ, ಓದು ಕಲಿತು ಸಾಹಿತ್ಯ ಸೃಷ್ಟಿಸುವ ಸಮಸ್ಯೆ ಇದ್ದಂತೆ ಸಂಗೀತ ಕಲಿಯಲು, ಹೆಣ್ಣಿಗೆ ಸಮಾಜದ ವಿರೋಧವಿರಲಿಲ್ಲ. ಹೊಲಿಗೆ, ಕಸೂತಿ, ಅಡುಗೆಗಳಂತೆ ಸಂಗೀತವೂ ಕುಟುಂಬದ ಆನಂದವರ್ಧನೆಗೆ ಪೂರಕವಾಗಿತ್ತು. ಆದರೆ ಬಹಿರಂಗದಲ್ಲಿ ಸಂಗೀತ ಕಛೇರಿ ನಡೆಸಲು ಅನುಮತಿ ಇರಲಿಲ್ಲ. ಕೆಲವು ಭಾಗಗಳಲ್ಲಿ ಸಂಗೀತ ಕಲಿಕೆ ಮದುವೆಯಾಗಲಿರುವ ಹೆಣ್ಣಿಗೆ ವಿಶೇಷ ಅರ್ಹತೆಯೇ ಆಗಿತ್ತು. ಆದರೂ ಸ್ವಆಸಕ್ತಿಯಿಂದ ಹಾಗೂ ಸ್ವಪ್ರಯತ್ನದಿಂದ ಸಾಧಿಸಿದವರ ಮತ್ತು ಹೊಸ ದಾಖಲೆಗಳನ್ನು ಸೃಷ್ಟಿಸಿದ ಕೆಲವರನ್ನು ಮಾತ್ರ ಇಲ್ಲಿ ಉಲ್ಲೇಖಿಸಲು ಸಾಧ್ಯ.

ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಜೊತೆಯಾಗಿಸಿ, ಉಳಿಸಿದ ನರ್ತಕಿಯರ ಪಂಗಡದಲ್ಲಿ ಮೂಗೂರು ಜೇಜಮ್ಮ, ಬೆಂಗಳೂರು ನಾಗರತ್ನಮ್ಮ, ಕೋಲಾರ ನಾಗರತ್ನಮ್ಮ ಮತ್ತು ಮೂಗೂರು ಪುಟ್ಟದೇವಮ್ಮ ಇವರ ಹೆಸರು ಖ್ಯಾತಿಯಲ್ಲಿತ್ತು. ಗಂಗೂಬಾಯಿಯವರ ತಾಯಿ ಅಂಬಾಬಾಯಿ ಹಾನಗಲ್ ಅವರೂ ನರ್ತಕಿ ಹಾಗೂ ಕರ್ನಾಟಕ ಸಂಗೀತ ಕಲಾವಿದೆ.

ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಅದ್ಭುತ ಸಾಧನೆಗೈದು ಶಿಖರದೆತ್ತರಕ್ಕೇರಿದ ಗಂಗೂಬಾಯಿ ಹಾನಗಲ್ ಅವರದು ವೈಶಿಷ್ಟ್ಯಪೂರ್ಣ ಗಡಸುಧ್ವನಿ. ಗಂಟಲಿನಲ್ಲಿ ಬೆಳೆದು ತೃಣ ಉಳಿದ ದುರ್ವಂಸದಿಂದಾಗಿ, ಅವರ ಮಧುರಧ್ವನಿಯು ಗಡುಸಾಗಿ ಪರಿವರ್ತಿತಗೊಂಡಿತ್ತು. ಆದರೂ ಧೃತಿಗೆಡದೆ ಸಾಧನೆಯಿಂದ ಮಣಿಸಿ ಸಂಗೀತದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು ಈಕೆ. ಅನೇಕಾನೇಕ ಗಮನಾರ್ಹ ಪ್ರಶಸ್ತಿಗಳಲ್ಲದೆ, ಆರು ಡಾಕ್ಟರೇಟ್​ಗಳನ್ನು, ತಾನ್​ಸೇನ್ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ ಫೆಲೋಶಿಪ್, ಪದ್ಮಭೂಷಣ/ವಿಭೂಷಣ ಪ್ರಶಸ್ತಿಗಳನ್ನು ಪಡೆದವರು.

ಮಧುರ ಕಂಠ

ಹಾಡಲು ಅವಕಾಶ ಮಾಡಿಕೊಡುತ್ತಿದ್ದ, ತೆರೆಮರೆಯ ಆಕಾಶವಾಣಿಯಲ್ಲಿ ಹಾಡುವ ಮೂಲಕ ಬೆಳಕಿಗೆ ಬಂದವರು ಅನೇಕರು. ನೀಲಮ್ಮಕಡಾಂಬಿ, ಚೊಕ್ಕಮ್ಮ, ಪಾಪಾ ಚೂಡಾಮಣಿ, 50-60ರ ದಶಕದಲ್ಲಿ ಹೀಗೆ ಮಿಂಚಿದ ಮೊದಲಿಗರು. ಸೀತಾ ಮುಲ್ಕಿ, ತಾರಾಬಾಯಿ ಗದಗಕರ್, ಗುಲಾಬಿಬಾಯಿ ಬಿಜಾಪುರಕರ್ ಮರಾಠಿ ಭಾವಗೀತೆಗಳ ಮಟ್ಟುಗಳಲ್ಲೆ ಕನ್ನಡದ ಭಾವಗೀತೆಗಳನ್ನು, ಮುಂಬಯಿ ಆಕಾಶವಾಣಿಯಿಂದ ಹಾಡಿದ ಮೊದಲಿಗರಲ್ಲಿ ಕೆಲವರು. 1952ರಲ್ಲಿ ಕೆ.ಎಸ್.ನ. ಅವರ ಕವಿತೆಗಳನ್ನು ಮೊದಲ ಧ್ವನಿಮುದ್ರಿಕೆಯಾಗಿಸಿದವರು ಜಯವಂತಿದೇವಿ ಹಿರೇಬೆಟ್​ರವರು. ಅಗಣಿತ ಗೀತೆಗಳನ್ನು ಹಾಡಿರುವ ಅನುರಾಧಾ ಧಾರೇಶ್ವರ್ ಮತ್ತು ಉಷಾ ಖಾಡಿಲ್​ಕರ್ ಕನ್ನಡಿಗರ ಮನಗೆದ್ದವರು. ಶ್ಯಾಮಲಾ ಭಾವೆ, ಲಲಿತಾ ಉದಯಶಂಕರ್, ಗಂಗೂಬಾಯಿ ಮತ್ತು ಕೃಷ್ಣಾ ಹಾನಗಲ್ ಅವರು ಕರ್ನಾಟಕ ಸಂಗೀತದೊಂದಿಗೆ, ಹಿಂದೂಸ್ಥಾನಿ ಪದ್ಧತಿಯನ್ನು ಸೇರಿಸಿ ಇಲ್ಲಿಯ ಕ್ಷೇತ್ರವನ್ನು ಸಮೃದ್ಧಗೊಳಿಸಿದವರು. ಅಮೀರ್​ಬಾಯಿ ಕರ್ನಾಟಕಿ ಅನೇಕ ಸಿನಿಮಾಗಳಲ್ಲಿ ಹಾಡಿ ಹೆಸರಾದ ಮಧುರ ಗಾಯಕಿ. ‘ಉಡುಗಣವೇಷ್ಠಿತ’ ಹಾಡಿನಿಂದ ಕನ್ನಡ ಮನಗಳಲ್ಲಿ ನೆಲೆಸಿರುವ, ಎಚ್.ಆರ್. ಲೀಲಾವತಿ ಸುಗಮ ಸಂಗೀತದ ಮಹಿಳಾ ಹರಿಕಾರರು, ಸಂಗೀತ-ಸಂಯೋಜಕಿ, ಕ್ಯಾಸೆಟ್, ಸಿ.ಡಿ. ಸಿನಿಮಾಗಳ ಹಿನ್ನೆಲೆ ಗಾಯಕಿ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ನಿಸ್ವಾರ್ಥದಿಂದ ದುಡಿದವರು. ಈಗಲೂ ಸದ್ದಿಲ್ಲದೇ ಸಂಗೀತ-ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೇರು ಸಾಧಕಿ. ಇವರ ಈ ಹಾಡು ಮಾಸ್ಕೋ ರೇಡಿಯೋದಿಂದ ಪ್ರಸಾರಗೊಂಡಿರುವುದು ಉಲ್ಲೇಖನೀಯ.

ಮನೆಮಾತಾದ ಗಾಯಕಿಯರು

ಎಂ.ಎಸ್. ಶೀಲಾ, ಎಂ.ಎನ್. ರತ್ನ, ನಾಗವಲ್ಲಿ ನಾಗರಾಜ್, ಟಿ.ಎಸ್. ಸತ್ಯವತಿ, ಟಿ.ಎಸ್. ವಸಂತಮಾಧವಿ, ನಾಗಮಣಿ ಶ್ರೀನಾಥ್, ಶಾಸ್ತ್ರೀಯ ಸಂಗೀತ-ಕಲಾವಿದೆಯರು. ಶ್ಯಾಮಲಾ ಜಾಗೀರ್​ದಾರ್, ಸಿ.ಕೆ. ತಾರಾ, ಎಸ್.ಕೆ. ವಸುಮತಿ ಸಂಗೀತದಲ್ಲಿ ಹೆಸರು ಮಾಡಿದ ಗಾಯಕಿಯರು. ಎಂಬತ್ತರ ದಶಕದಲ್ಲಿ ಮನೆಮಾತಾದ ಗಾಯಕಿಯರೆಂದರೆ ರತ್ನಮಾಲಾ ಪ್ರಕಾಶ್, ಮಾಲತಿ ಶರ್ವ, ಬಿ.ಆರ್. ಛಾಯಾ, ಕಸ್ತೂರಿ ಶಂಕರ್, ಮಂಜುಳಾ ಗುರುರಾಜ್, ಬಿ.ಕೆ. ಸುಮಿತ್ರಾ ಮುಂತಾದವರು. ಈಗಿನ ಗಾಯಕಿಯರಲ್ಲಿ ಎಂ.ಡಿ. ಪಲ್ಲವಿ, ಸಂಗೀತಾ ಕಟ್ಟಿ ಕುಲಕರ್ಣಿ ಹೆಸರಾಂತರು. ‘ನಾದವೇ ತಾನಾಗಬೇಕು’ ಎಂಬ ಆಶಯದಲ್ಲಿ ಹಾಡುತ್ತಿರುವ ಸಂಗೀತಾ ಕಟ್ಟಿಯವರು, ತಮ್ಮ ಸ್ವರಮಾಧುರ್ಯವನ್ನು ಕೇಳುಗರ ಹೃದಯದಲ್ಲಿಳಿಸುವ ಶಕ್ತಿಯುಳ್ಳ ಸಂಗೀತ-ತಪಸ್ವಿ. ಅರ್ಚನಾ ಉಡುಪ, ಸುನೀತಾ, ಜಯಶ್ರೀ ಅರವಿಂದ್, ಇಂದು ವಿಶ್ವನಾಥ್ ಅವರ ಸಾಧನೆಯೂ ಕಡಿಮೆಯದಲ್ಲ. ಸಿ.ಡಿ.ಗಳಲ್ಲಿ ಕ್ಯಾಸೆಟ್​ಗಳಲ್ಲಿ ಹಾಡದವರೇ ಇಲ್ಲ. ಈಗ ದೂರದರ್ಶನ ಚಾನಲ್​ಗಳ ಸ್ಪರ್ಧೆಯಲ್ಲಿ ಗೆದ್ದು ವಿಖ್ಯಾತರಾಗುತ್ತಿರುವವರ ಸಂಖ್ಯೆ ದೀರ್ಘ ಪಟ್ಟಿಯಾಗುವಷ್ಟು ಇದೆ. ಅದರಲ್ಲಿ ಸಂಗೀತ ಸಾಧನೆಗಿಳಿದ ಹದಿಹರೆಯದ ಬಾಲಕಿಯರೂ, ಮಕ್ಕಳೂ ಇದ್ದಾರೆ. ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯರಾಗಿರುವ ಅನನ್ಯಾ ಭಟ್, ಶಮಿತಾ ಮಲ್ನಾಡ್, ಅನುರಾಧಾ ಭಟ್ ಮುಂತಾಗಿ ಅನೇಕ ಸಿರಿಕಂಠದ ಗಾಯಕಿಯರಿದ್ದಾರೆ.

ಸಂಶೋಧನೆಗೂ ಸೈ

ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಒಂದು ವಿಷಯವಾದ ಮೇಲೆ ಅನೇಕಾನೇಕರು ಸಂಶೋಧನೆಗೂ ತೊಡಗಿದರು. ಇವರಲ್ಲಿ ಪದ್ಮಾಮೂರ್ತಿ, ಜಯಶ್ರೀ, ಸುಶೀಲಾ, ಸುಮಾ ಸುಧೀಂದ್ರ, ಟಿ.ಎಸ್. ಸತ್ಯವತಿ, ಸುಕನ್ಯಾ ಪ್ರಭಾಕರ್ ಇವರುಗಳ ಹೆಸರು ಮೇಲ್ಪಂಕ್ತಿಯಲ್ಲಿದೆ. ಟಿ.ಎಸ್. ಸತ್ಯವತಿಯವರು ಉತ್ತಮ ವಿಮರ್ಶಕಿ, ವಾಗ್ಮಿ ಮತ್ತು ಶಿಕ್ಷಕಿಯೂ ಆಗಿ ಖ್ಯಾತರು. ಜಿ. ಚನ್ನಮ್ಮನವರು ವಿಶ್ವವಿದ್ಯಾಲಯದಲ್ಲಿ ಉತ್ತಮ ಸಂಗೀತ-ಬೋಧಕಿಯಾಗಿ ಪ್ರಸಿದ್ಧರಾಗಿದ್ದ ಹಳೆಯ ತಲೆಮಾರಿನ ಗಾಯಕಿ. ಶಾಸ್ತ್ರೀಯ, ಸುಗಮ ಸಂಗೀತ, ಫ್ಯೂಶನ್ ಮ್ಯೂಸಿಕ್, ಜಾನಪದ, ಯಕ್ಷಗಾನ, ಸಂಶೋಧನೆ, ಪತ್ರಿಕಾ-ವಿಮರ್ಶೆ, ಸಂಗೀತ-ಶಿಕ್ಷಣ, ದೂರದರ್ಶನ, ಧ್ವನಿ-ಮುದ್ರಿಕೆ, ಗಮಕ, ಕಥಾ-ಕೀರ್ತನ, ಇತ್ಯಾದಿ ಸಂಗೀತದ ಸರ್ವಮಾರ್ಗಗಳಲ್ಲಿಯೂ ಅನೇಕ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು, ಸಂಗೀತಕ್ಷೇತ್ರದ ವ್ಯಾಪ್ತಿಯನ್ನು ಹಿಗ್ಗಿಸುತ್ತಿರುವುದು ಗಮನಾರ್ಹ ಸಂಗತಿ. ಸಾಹಿತ್ಯ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಹಾಗೂ ಸಂಗೀತ ಕ್ಷೇತ್ರದ ಹಲವು ವಿಭಾಗಗಳಲ್ಲಿ ವಿವಿಧ ರೀತಿಯಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡಿರುವವರನ್ನು ಗಮನಿಸಿದರೆ, ಮಹಿಳೆಯರ ಸಾಧನೆ ಹಾಗೂ ಕೊಡುಗೆ ಅಪಾರವಾಗಿದೆ, ಮೌಲ್ಯಯುತವಾಗಿದೆ.

ವಿಜಯಲಕ್ಷ್ಮಿ ಕೆ.ಎಂ. (ಲೇಖಕರು ಕನ್ನಡದ ಕಥೆಗಾರ್ತಿ)