ಕೆಲವು ವರ್ಷಗಳ ಹಿಂದೆ ಅಕ್ರಮವಾಗಿ ವನ್ಯಮೃಗಗಳ ಬೇಟೆಯಾಡಿದ ಉತ್ಪನ್ನಗಳನ್ನು ಗೃಹೋಪಯೋಗಿ ವಸ್ತು ಮತ್ತು ಆಭರಣಗಳನ್ನಾಗಿ ಬಳಸುತ್ತಿದ್ದ ಕಾರಣ ಕರ್ನಾಟಕದ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಭಾರಿ ಸದ್ದು ಮಾಡಿತ್ತು. ನಟರು, ರಾಜಕಾರಣಿಗಳು, ಧಾರ್ವಿುಕ ಗುರುಗಳು ಹೀಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರುಗಳು ಇಂಥವರ ಪಟ್ಟಿಯಲ್ಲಿ ಸೇರಿಕೊಂಡು ಮಾಧ್ಯಮಗಳಿಗೆ ಹಲವು ದಿನಗಳ ಕಾಲ ಒಳ್ಳೆಯ ಗ್ರಾಸವನ್ನೊದಗಿಸಿತ್ತು.
ಈ ಕಾರ್ಯಾಚರಣೆಯ ಕುರಿತು ಹಲವು ಉಪಕತೆಗಳು ಆಮೇಲೆ ಹುಟ್ಟಿಕೊಂಡರೂ ಅದರ ಹಿಂದಿದ್ದ ಮೂಲ ಉದ್ದೇಶವನ್ನು ಯಾರೂ ತಿರಸ್ಕರಿಸುವ ಹಾಗಿರಲಿಲ್ಲ. ಜಾಗತಿಕ ಅಂಕಿಅಂಶಗಳ ಪ್ರಕಾರ, ವನ್ಯಮೃಗಗಳ ಉತ್ಪನ್ನಗಳ ಕಳ್ಳಸಾಗಾಣಿಕೆ ಅಜಮಾಸು 16 ಸಾವಿರ ಕೋಟಿ ರೂ. ಮೌಲ್ಯದ ದಂಧೆಯಾಗಿದ್ದು ವಿಶ್ವಾದ್ಯಂತ ಎಲ್ಲ ಕಾನೂನು ಪಾಲಕರಿಗೆ ಮಂಡೆಬಿಸಿಯ ವಿಷಯವಾಗಿದೆ.
ಬಹುಶಃ ಈ ಅಕ್ರಮ ಬೇಟೆಗೆ ಕಾಡಿನಷ್ಟೇ ವಯಸ್ಸಾಗಿರಬಹುದೇನೊ. ಕೆಲ ದಿನಗಳ ಹಿಂದೆ ವಿಜ್ಞಾನಿಗಳು ಚಿಪ್ಪುಹಂದಿಯ ಹೊಸದೊಂದು ತಳಿಯನ್ನು ಪತ್ತೆ ಹಚ್ಚಿದರು. ಮಜವೆಂದರೆ ಚಿಪ್ಪು ಹಂದಿಯ ಹತ್ತನೇ ಜಾತಿ ಎಂದು ಹೇಳಲಾಗುವ ಈ ತಳಿಯ ಕುರುಹು ಸಿಕ್ಕಿದ್ದು ಈಶಾನ್ಯ ಭಾರತದಲ್ಲಿ ಕಾಡುಗಳ್ಳರಿಂದ ವಶಪಡಿಸಿಕೊಂಡ ಗೋಣಿಚೀಲದಲ್ಲಿ. ಪತ್ತೆಯಾಗುವಷ್ಟರಲ್ಲಿ ಅಳಿವಿನಂಚಿಗೆ ತಲುಪಿರುವ ವಿಶಿಷ್ಟ ದಾಖಲೆ ಈ ಚಿಪ್ಪುಹಂದಿಯದ್ದು.
ರವಿ ಕಾಣದ್ದನ್ನು ಕವಿ ಕಂಡ ಅಂತಾರಲ್ಲ ಹಾಗೆ ಯಾವ ಸಂಶೋಧಕನೂ ಕಾಣದ್ದನ್ನು ಈ ಕಾಡುಗಳ್ಳರು ಯಾವತ್ತೋ ಕಂಡುಹಿಡಿದಿದ್ದರು. ಅವರ ಜಾಲ ಎಷ್ಟು ವಿಸ್ತಾರವಾಗಿದೆ ಎಂದು ಊಹಿಸಲು ಈ ಒಂದು ಉದಾಹರಣೆಯೇ ಸಾಕು. ವಿಶ್ವದ ಅತಿ ಹೆಚ್ಚು ವಹಿವಾಟಿನ ಅಪರಾಧಗಳಲ್ಲಿ ಒಂದೆನ್ನುವ ಕುಖ್ಯಾತಿಯ ಈ ವ್ಯವಹಾರವು ಪರಿಸರ, ಅರಣ್ಯಜೀವಿಗಳಿಗಷ್ಟೇ ಮಾರಕವಲ್ಲ, ಅರಣ್ಯಪಾಲಕರ ಜೀವಕ್ಕೂ ಕುತ್ತು ತರುತ್ತಿದೆ. ಆಧುನಿಕ ತಂತ್ರಜ್ಞಾನದ ಜೊತೆಗೆ ಎಲ್ಲ ಬಗೆಯ ಶಸ್ತ್ರಾಸ್ತ್ರಗಳನ್ನೂ ಹೊಂದಿರುವ ಈ ವ್ಯವಸ್ಥಿತ ಜಾಲದ ಸುಳಿಗೆ ವಾರ್ಷಿಕ ಸರಾಸರಿಯಾಗಿ ವಿಶ್ವಾದ್ಯಂತ ಒಂದು ನೂರು ಜನ ಅರಣ್ಯಪಾಲಕರು ಬಲಿಯಾಗುತ್ತಿದ್ದಾರೆ.
ಆನೆದಂತವನ್ನು ಚಾಕಲೇಟ್ ದ್ರಾವಣದಲ್ಲಿ ಅದ್ದಿ ಅದನ್ನು ಅದೇ ಮಾದರಿಯಲ್ಲಿ ಪ್ಯಾಕ್ ಮಾಡಿ ಸಾಗಿಸುವುದಾಗಲಿ, ಚಿಪ್ಪುಹಂದಿಯ ಚಿಪ್ಪನ್ನು ಗೋಡಂಬಿಯ ಜೊತೆಗೆ ಸೇರಿಸಿ ಪ್ಯಾಕ್ ಮಾಡುವುದೇ ಇರಲಿ, ಈ ನಿಷೇಧಿತ ವಸ್ತುಗಳನ್ನು ಅಗರಬತ್ತಿಯಂತಹ ಗಾಢ ವಾಸನೆಯ ವಸ್ತುಗಳ ಜೊತೆಯಲ್ಲಿ ಪತ್ತೆನಾಯಿಗಳ ಮೂಗಿಗೂ ಮಂಕುಬೂದಿ ಎಸೆಯುವಂತಹ ಹತ್ತು ಹಲವು ಹೊಸ ಹೊಸ ಟ್ರಿಕ್ಗಳನ್ನು ಕಳ್ಳಸಾಗಾಣಿಕೆದಾರರು ಬಳಸುತ್ತಿದ್ದಾರೆ. ಕಾಳಸಂತೆಕೋರರ ಇಂತಹ ಹರ್ಕತ್ತುಗಳಿಗೆ ಪ್ರತಿಯಾಗಿ ಪೊಲೀಸರೂ ರಂಗೋಲಿ ಕೆಳಗೆ ಇಳಿಯುವುದಕ್ಕಾಗಿ ನೂತನ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಥೇಟು ಒಂಥರಾ ಟಾಮ್ ಮತ್ತು ಜೆರ್ರಿಯ ಆಟದ ತರಹ ನಡೆಯುವ ಈ ಕಳ್ಳ-ಪೊಲೀಸ್ ಆಟಕ್ಕೆ ಇದೀಗ ಅಕ್ಷರಶಃ ಜೆರ್ರಿಯ ಆಗಮನವಾಗಿದೆ.
ಆಫ್ರಿಕಾ ಮೂಲದ ದೊಡ್ಡ ಚೀಲದ ಇಲಿಗಳು (African giant pouched rat) ಇಲಿಗಳ ಕುಟುಂಬದಲ್ಲೇ ಅತಿ ದೊಡ್ಡಗಾತ್ರದವುಗಳಲ್ಲಿ ಒಂದಾಗಿವೆ. ಒಂದೂವರೆ ಅಡಿ ಉದ್ದದ ದೇಹಕ್ಕೆ ಅಷ್ಟೇ ಉದ್ದದ ಬಾಲವನ್ನು ಹೊಂದಿರುವ ಈ ಇಲಿಗಳು ಕೆನ್ನೆಗೆ ಹೊಂದಿಕೊಂಡಿರುವ ಚೀಲಗಳಲ್ಲಿ ತಮ್ಮ ಆಹಾರವನ್ನು ಕೂಡಿಟ್ಟುಕೊಂಡು ಪುರುಸೊತ್ತಿನಲ್ಲಿ ತಿನ್ನುತ್ತವೆ. ಆ ಕಾರಣಕ್ಕೇನೆ ತಮ್ಮ ಹೆಸರನ್ನು ಪಡೆದುಕೊಂಡಿವೆ. ಬೆಕ್ಕಿನ ಮರಿಯ ಗಾತ್ರವಿದ್ದು ಒಂದೂವರೆ ಕೆಜಿ ತೂಗುವ ಈ ಇಲಿಗಳಿಗೆ ದೃಷ್ಟಿ ಮಂದ. ಮೂಗು ಮತ್ತು ಕಿವಿ ಅಷ್ಟೇ ಚುರುಕು. ಆಹಾರವನ್ನು ಅರಸಲು ಮತ್ತು ಶತ್ರುವಿನಿಂದ ಬಚಾವಾಗಲು ತಮ್ಮ ಈ ಶಕ್ತಿಯನ್ನು ಅವು ಬಳಸುತ್ತವೆ. ಅವುಗಳ ಆ ಶಕ್ತಿಯನ್ನು ಅಪರಾಧ ಪತ್ತೆಗೆ ಬಳಸುವ ಯೋಚನೆ ವಿಜ್ಞಾನಿಗಳಿಗೆ ಹೊಳೆದದ್ದೇ ತಡ ಅವುಗಳಿಗೊಂದು ತರಬೇತಿ ಕೇಂದ್ರವೂ ಎದ್ದು ನಿಂತಿತು.
ಇದೀಗ ಈ ತರಬೇತಿ ಕೇಂದ್ರದಿಂದ ಉತ್ತೀರ್ಣವಾಗಿ ಹೊರಬಂದ ಮೂಷಿಕಗಳ ತಂಡವು ನಿಷೇಧಿತ ಬೇಟೆಯ ವಸ್ತುಗಳ ಕಳ್ಳಸಾಗಾಣಿಕೆಯನ್ನು ಪತ್ತೆ ಹಚ್ಚಲು ಮೀಸೆ ತಿರುವಿ ನಿಂತಿದೆ. ವಿಜ್ಞಾನಿಗಳಿಗೆ ಈ ಆಲೋಚನೆ ಹೊಳೆಯಲು ಕಾರಣವೂ ಇದೆ. ಹಿಂದೆ ಈ ಮಹಾಮೂಷಿಕಗಳಿಗೆ ತಾಂಜಾನಿಯಾದ ಕೇಂದ್ರವೊಂದರಲ್ಲಿ ತರಬೇತಿ ನೀಡಿ ಭೂಕುಸಿತ ಮತ್ತು ಭೂಕಂಪವಾದ ಸ್ಥಳಗಳ ಅವಶೇಷಗಳಡಿ ಸಿಲುಕಿದ ಜನರನ್ನು ಗುರುತಿಸಿ ಹೊರತೆಗೆಯುವ ಕಾರ್ಯದಲ್ಲಿ ಬಳಸಲಾಗಿತ್ತು. ಇದರ ಜೊತೆಗೆ ಇದೇ ಇಲಿಗಳಿಗೆ ವಿಶೇಷ ತರಬೇತಿ ನೀಡಿ, ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲೂ ಬಳಸಿ ಯಶಸ್ಸು ಕಾಣಲಾಗಿತ್ತು. ಈ ಎರಡು ಕಾರ್ಯಾಚರಣೆಗಳ ಯಶಸ್ಸೇ ವಿಜ್ಞಾನಿಗಳಿಗೆ ಮಹಾಮೂಷಿಕಗಳ ಮೇಲೆ ಭರವಸೆ ಮೂಡಿಸಲು ಕಾರಣವಾಯಿತು.
ನಿಷೇಧಿತ ವನ್ಯಮೃಗಗಳ ಉತ್ಪನ್ನಗಳನ್ನು ಪತ್ತೆ ಹಚ್ಚಲು ತರಬೇತಿ ಪಡೆದು ಹೊರಬಂದಿರುವ ಮೊದಲ ತಂಡದಲ್ಲಿ ಒಟ್ಟು 11 ಇಲಿಗಳಿದ್ದು ಅವುಗಳಿಗೆ ಸಮವಸ್ತ್ರದ ಮಾದರಿಯಲ್ಲಿ ಜಾಕೆಟ್ ತೊಡಿಸಲಾಗುತ್ತದೆ. ಅದರ ಜೊತೆಗೆ ಕತ್ತಿಗೊಂದು ಪುಟ್ಟ ಗಂಟೆ. ತರಬೇತಿ ಸಮಯದಲ್ಲಿ ಈ ಮೂಷಿಕಗಳಿಗೆ ಅವು ಪತ್ತೆ ಹಚ್ಚಬೇಕಾಗಿರುವ ಐದು ಪ್ರಮುಖ ವಸ್ತುಗಳಾದ ಆನೆ ದಂತ, ಚಿಪ್ಪುಹಂದಿಯ ಚಿಪ್ಪು, ಘೕಂಡಾಮೃಗಗಳ ಕೊಂಬು ಮತ್ತು ವಾದ್ಯಗಳ ತಯಾರಿಕೆಯಲ್ಲಿ ಬಳಸಲ್ಪಡುವ ಆಫ್ರಿಕಾದ ಕಪ್ಪುಮರಗಳ ವಾಸನೆಯ ಜೊತೆಯಲ್ಲಿ ಈ ವಸ್ತುಗಳನ್ನು ಪತ್ತೆ ಹಚ್ಚದಂತೆ ದಾರಿ ತಪ್ಪಿಸಲು ಬಳಸುವ ಕಾಫಿ, ಚಾಕಲೇಟ್, ಗಂಧದಂತಹ ಒಟ್ಟೂ 146 ಉತ್ಪನ್ನಗಳ ವಾಸನೆಯನ್ನು ಸಹ ಗುರುತು ಹಿಡಿಯುವ ತರಬೇತಿ ನೀಡಲಾಗಿದೆ.
ಜಾಕೆಟ್ ತೊಟ್ಟು ಥೇಟು ನಮ್ಮ ಬಾಲವಾಡಿಯ ಮಕ್ಕಳಂತೆ ಕಾಣುವ ಈ ಇಲಿಗಳು ಅದೆಲ್ಲೋ ಅಡಗಿಸಿಟ್ಟಿರುವ, ತಾವು ಗುರುತಿಸಬೇಕಾದ ವಸ್ತುಗಳನ್ನು ಕಂಡುಹಿಡಿದ ತಕ್ಷಣವೇ ತಮ್ಮ ಮುಂಗೈಯಿಂದ ಕತ್ತಿಗೆ ಕಟ್ಟಿರುವ ಗಂಟೆಯನ್ನು ಅಲ್ಲಾಡಿಸುತ್ತವೆ. ಹೀಗೆ ಪ್ರತಿಯೊಂದು ಯಶಸ್ವಿ ಹುಡುಕಾಟಕ್ಕೆ ತರಬೇತುದಾರನ ಕಡೆಯಿಂದ ಆ ಇಲಿಗೊಂದು ಮಿಠಾಯಿಯ ಇನಾಮು ದೊರೆಯುತ್ತದೆ. ತರಬೇತಿಯ ನಂತರ ಇಲಿಗಳ ಕ್ಷಮತೆಯನ್ನು ಅಳೆಯಲು ಕೆಲ ಕುಖ್ಯಾತ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಅವುಗಳನ್ನು ಬಳಸಿದ ಪ್ರಯೋಗ ಫಲ ಕಂಡಿದ್ದು ತರಬೇತಿ ನೀಡಿದ ಆರು ತಿಂಗಳ ನಂತರವೂ ಈ ಮೂಷಿಕಗಳು ನಿಷೇಧಿತ ಬೇಟೆಯ ವಸ್ತುಗಳ ವಾಸನೆಯನ್ನು ನೆನಪಿಟ್ಟುಕೊಂಡಿವೆ.
ವನ್ಯಮೃಗಗಳ ಉತ್ಪನ್ನ ಮತ್ತು ನಿಷೇಧಿತ ವಸ್ತುಗಳನ್ನು ಪತ್ತೆ ಹಚ್ಚಲು ಶ್ವಾನದಳವನ್ನು ಈಗಾಗಲೇ ಎಲ್ಲೆಡೆ ಬಳಸಲಾಗುತ್ತಿದೆ. ಶ್ವಾನಗಳಿಗೆ ಹೋಲಿಸಿದರೆ ಮೂಷಿಕಗಳ ತರಬೇತಿಯ ವೆಚ್ಚ ಕಡಿಮೆ. ಅದಲ್ಲದೆ ಶ್ವಾನಗಳು ಹೋಗಲಾರದ ಸಂದಿಮೂಲೆಗಳಲ್ಲೆಲ್ಲ ಮೂಷಿಕಗಳು ಆರಾಮಾಗಿ ಓಡಾಡಬಲ್ಲವು. ಆದರೆ ಆಯಸ್ಸಿನ ವಿಚಾರಕ್ಕೆ ಬಂದಾಗ ಶ್ವಾನಗಳು ಇಲಿಗಳಿಗಿಂತ ದೀರ್ಘಾಯುಷಿಗಳು. ಹೀಗಾಗಿ ಈ ಇಲಿಗಳನ್ನು ಶ್ವಾನಗಳ ಉತ್ತರಾಧಿಕಾರಿ ಎನ್ನುವುದಕ್ಕಿಂತ ಶ್ವಾನದಳದ ಜೊತೆಯಲ್ಲಿ ಪೂರಕವಾಗಿ ಬಳಸಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದೆಂಬ ಯೋಚನೆ ವಿಜ್ಞಾನಿಗಳದ್ದು. ಮುಂದಿನ ಬಾರಿ ಯಾವುದೋ ಏರ್ಪೋರ್ಟ್ನಲ್ಲಿ ಇಲಿಗಳು ಓಡಾಡುತ್ತಿರುವುದು ಕಂಡುಬಂದರೆ ಹೌಹಾರುವ ಮೊದಲು ಕತ್ತಿನಲ್ಲಿ ಗಂಟೆ ಇದೆಯೇ ಎಂದೊಮ್ಮೆ ಪರೀಕ್ಷಿಸಿ.
ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ವಿಟ್ವಾಟರ್ಸ್ ರ್ಯಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಲ್ಲಿನ ಕಾಡುಮೇಡುಗಳಲ್ಲಿ ಅಲೆಯುತ್ತ ಘೕಂಡಾಮೃಗಗಳನ್ನು ಹಿಡಿದು ಅವುಗಳಿಗೆ ಚುಚ್ಚುಮದ್ದನ್ನು ನೀಡುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಕಂಡುಬಂದಿದ್ದವು. ವಿಶ್ವದ ಅತಿ ಹೆಚ್ಚು ಘೕಂಡಾಮೃಗಗಳನ್ನು ಹೊಂದಿರುವ ದೇಶವೆನ್ನುವ ಹೆಗ್ಗಳಿಕೆಯ ದಕ್ಷಿಣ ಆಫ್ರಿಕಾ ಇದೀಗ ಆ ಪಟ್ಟವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
20ನೇ ಶತಮಾನದ ಆರಂಭದಲ್ಲಿ ವಿಶ್ವದಲ್ಲಿದ್ದ ಘೕಂಡಾಮೃಗಗಳ ಸಂಖ್ಯೆ 5 ಲಕ್ಷ. ಅದು ಇಂದಿಗೆ 27 ಸಾವಿರಕ್ಕೆ ಬಂದು ನಿಂತಿದೆ. ಸಂಖ್ಯೆಯಲ್ಲಿ ಅತಿ ಹೆಚ್ಚು ಘೕಂಡಾಗಳನ್ನು ಹೊಂದಿದ್ದರೂ ಅವುಗಳನ್ನು ಕೊಲ್ಲುವಲ್ಲೂ ಮೊದಲನೇ ಸ್ಥಾನವನ್ನು ದಕ್ಷಿಣ ಆಫ್ರಿಕಾ ಅಲಂಕರಿಸಿದೆ. ವಾರ್ಷಿಕವಾಗಿ ಅಲ್ಲಿ 500 ಘೕಂಡಾಗಳನ್ನು ಕೊಲ್ಲಲಾಗುತ್ತಿದ್ದು ಅವುಗಳ ಕೊಂಬಿಗೆ ಕಾಳಸಂತೆಯಲ್ಲಿರುವ ಡಿಮ್ಯಾಂಡೇ ಅದಕ್ಕೆ ಮುಖ್ಯ ಕಾರಣವಾಗಿದೆ. ಘೕಂಡಾಗಳ ಕೊಂಬಿನ ಕುರಿತು ಹಲವು ಮೂಢನಂಬಿಕೆಗಳು ಜನರಲ್ಲಿವೆ. ಕಾಳಸಂತೆಯಲ್ಲಿ ಅವುಗಳ ಅತಿ ದೊಡ್ಡ ಗ್ರಾಹನಾಗಿರುವ ವಿಯೆಟ್ನಾಂನಲ್ಲಿ ಅದೊಂದು ಸ್ಟೇಟಸ್ ಸಿಂಬಲ್. ಅಲ್ಲಿಯ ಜನ ಘೕಂಡಾಗಳ ಕೊಂಬುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಮೃದ್ಧಿ ಬರುವುದೆಂದೂ, ಅದನ್ನೊಂದು ಶ್ರೀಮಂತಿಕೆಯ ಲಕ್ಷಣವೆಂದೂ ತಿಳಿದಿದ್ದಾರೆ.
ಅಲ್ಲದೆ ಅವುಗಳನ್ನು ಉಡುಗೊರೆಯನ್ನಾಗಿ ಕೊಡುವುದರ ಮೂಲಕ ಸಂಬಂಧಗಳನ್ನು ಬೆಳೆಸಲು ರಾಜತಾಂತ್ರಿಕವಾಗಿಯೂ ಬಳಸುತ್ತಾರೆ. ಇದರ ಜೊತೆಗೆ ಹಲವಾರು ದೇಶಗಳಲ್ಲಿ ಈ ಕೊಂಬುಗಳಲ್ಲಿ ಔಷಧೀಯ ಗುಣಗಳಿವೆಯೆಂದು ನಂಬುವ ಕಾರಣ ಅವುಗಳಿಗೆ ಕಾಳಸಂತೆಯಲ್ಲಿ ಖಂಡಾಪಟ್ಟೆ ಬೇಡಿಕೆಯಿದೆ. ಈ ಕುರಿತು ನಡೆದಿರುವ ಸಂಶೋಧನೆಗಳೆಲ್ಲ ಅದೊಂದು ತಪ್ಪು ಕಲ್ಪನೆಯೆಂಬುದನ್ನು ಸಾಬೀತುಪಡಿಸಿದರೂ ಅದನ್ಯಾರೂ ಕ್ಯಾರೇ ಅನ್ನುತ್ತಿಲ್ಲ ಎಂಬುದು ಬೇರೆ ಮಾತು. ಈ ಎಲ್ಲ ಕಾರಣಗಳಿಂದ ಜಗತ್ತಿನ ಅತಿ ಹೆಚ್ಚು ಬೇಟೆಯಾಡಲ್ಪಡುವ ಪ್ರಾಣಿಗಳ ಪಟ್ಟಿಯಲ್ಲಿ ಘೕಂಡಾಮೃಗಗಳು ಮುಂಚೂಣಿಯಲ್ಲಿವೆ. ಆದರೆ ಈ ಅಪರಾಧಿಗಳನ್ನು ಹಿಡಿಯ ಹೊರಟ ಪೊಲೀಸರಿಗೆ ಪ್ರತಿ ಸಾರಿಯೂ ಈ ಕೊಂಬುಗಳಿಗೆ ಹೊಸ ವೇಷ ತೊಡಿಸಿ ಕಣ್ಣಿಗೆ ಮಣ್ಣೆರೆಚುವ ಚಾಣಾಕ್ಷರ ಕೈಚಳಕದ ಕಾರಣ ಅವುಗಳನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಾರಿ ನೂತನ ಪ್ರಾಯೋಗಿಕ ಯೋಜನೆಯೊಂದಿಗೆ ಬಂದಿದ್ದಾರೆ. ಅದರ ಮೊದಲ ಹಂತದಲ್ಲಿ ಅಲ್ಲಿನ ಒಂದು ಪ್ರದೇಶದ ಘೕಂಡಾಗಳನ್ನು ಆಯ್ಕೆ ಮಾಡಿ ಕಾಡಿನಲ್ಲೇ ಅವುಗಳಿಗೆ ಅರಿವಳಿಕೆ ನೀಡಿ ಕೊಂಬಿನಲ್ಲಿ ಪುಟ್ಟ ವಿಕಿರಣಯುಕ್ತ ವಸ್ತುವನ್ನು ಚುಚ್ಚಲಾಗಿದೆ. ಅದರ ವಿಕಿರಣದ ಪ್ರಮಾಣವನ್ನು ಘೕಂಡಾಮೃಗದ ಪೂರ್ತಿ ಆಯಸ್ಸಿನವರೆಗೂ ಅಲ್ಲಿದ್ದರೂ ಅವುಗಳಿಗೆ ಏನೂ ಹಾನಿ ಮಾಡದಿರುವಂತೆ ಆಯ್ಕೆ ಮಾಡಲಾಗಿದ್ದು ಇಂತಹ ಘೕಂಡಾಗಳ ಕೊಂಬನ್ನು ದುಷ್ಕರ್ವಿುಗಳು ಕಡಿದು ಬೇರೆಡೆ ಸಾಗಿಸಲು ಪ್ರಯತ್ನಿಸಿದರೂ ಎಲ್ಲೆಡೆ ಅಳವಡಿಸಿರುವ ವಿಕಿರಣ ಮಾಪಕಗಳು ಅದನ್ನು ಕಂಡು ಹಿಡಿಯುವುದರಿಂದ ಕಳ್ಳರನ್ನು ಪತ್ತೆ ಹಚ್ಚಬಹುದೆಂಬ ದೂರಾಲೋಚನೆ ವಿಜ್ಞಾನಿಗಳದ್ದು. ಈ ಯೋಜನೆಯ ಕುರಿತು ಪರ ವಿರೋಧ ಚರ್ಚೆಗಳು ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಶುರುವಾಗಿದ್ದರೂ ಘೕಂಡಾಮೃಗಗಳನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂಬ ವಿಷಯದ ಕುರಿತು ಸಹಮತ ಎಲ್ಲರದ್ದೂ ಇದೆ.
ವನ್ಯಜೀವಿ ಉತ್ಪನ್ನಗಳಿಗಾಗಿ ಅವುಗಳ ಹತ್ಯೆಯ ಮೂಲಕಾರಣವನ್ನು ಹುಡುಕಹೊರಟರೆ ಅಲ್ಲಿ ನಮ್ಮ ಮೂಢನಂಬಿಕೆಯೇ ಎದ್ದು ಕಾಣುತ್ತದೆ. ಅದನ್ನು ಮೂಲದಲ್ಲಿಯೇ ರಿಪೇರಿ ಮಾಡಿದ್ದಲ್ಲಿ ಇಲಿಗೆ ಗಂಟೆ ಕಟ್ಟುವ ಮತ್ತು ಘೕಂಡಾದ ಮೂಗಿಗೆ ವಿಕಿರಣದ ಮೂಗುತಿ ಚುಚ್ಚುವ ಪ್ರಮೇಯವೇ ಬರುತ್ತಿರಲಿಲ್ಲ, ಅಲ್ಲವೇ?
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)