ಎಚ್.ಎಸ್. ವೆಂಕಟೇಶಮೂರ್ತಿ ಗ್ರಾಮೀಣ ಭಾಗದಿಂದ ಬಂದು ಸಾರಸ್ವತ ಪ್ರಪಂಚದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದವರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ 1944ರ ಜೂನ್ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡು, ಕಡುಬಡತನದಲ್ಲೇ ಬೆಳೆದರು. ಬಾಲ್ಯದ ಹೆಸರು ಶ್ರೀನಿವಾಸ. ತಾಯಿ ನಾಗರತ್ನಮ್ಮ ಶಿಕ್ಷಕಿಯಾಗಿದ್ದರು. ಹೊದಿಗೆರೆಯ ಹಳ್ಳಿಯ ಪರಿಸರ ಇವರ ವ್ಯಕ್ತಿತ್ವವನ್ನು ರೂಪಿಸಿತಲ್ಲದೆ, ಸೃಜನಶೀಲತೆಯ ಮೇಲೆ ಗಾಢ ಪ್ರಭಾವ ಬೀರಿತು. ಹೊದಿಗೆರೆಯ ಕೆರೆ, ಕೋಡಿ, ಅದರಾಚೆಯ ಈಚಲುವನ ಬಾಲ್ಯದ ನೆನಪುಗಳಲ್ಲಿ ಭದ್ರವಾಗಿ ಉಳಿದಿದ್ದವು.
ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆತಿದ್ದು, ಸಾಹಿತ್ಯಾಸಕ್ತಿ ಮೂಡಿಸಿತು. ತಾಯಿಯ ತವರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಎಚ್ಚೆಸ್ವಿ ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರಿ, ಕವನ ಬರೆಯಲು ಪ್ರೇರಣೆ ಆಯಿತು. ಪ್ರಾಥಮಿಕ ಶಿಕ್ಷಣವನ್ನು ಹೊದಿಗೆರೆ ಮತ್ತು ಹೊಳಲ್ಕೆರೆಗಳಲ್ಲಿ ಪೂರ್ಣಗೊಳಿಸಿದರು. ಚಿತ್ರದುರ್ಗ ದಲ್ಲಿ ಕಾಲೇಜ್ ವ್ಯಾಸಂಗ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿ ಮಲ್ಲಾಡಿಹಳ್ಳಿ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್ ಆಗಿ ವೃತ್ತಿ ಆರಂಭಿಸಿದರು. ನಂತರ, ಕರ್ನಾಟಕ ವಿವಿಯಲ್ಲಿ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಮಾಡಿದರು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಎಚ್ಚೆಸ್ವಿಯವರ ಕಾವ್ಯವ್ಯಕ್ತಿತ್ವವನ್ನು ನಿರ್ವಿುಸಲು ಕಾರಣವಾದವು.
ವೃತ್ತಿಜೀವನ: ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ 1973ರಲ್ಲಿ ಕನ್ನಡ ಉಪನ್ಯಾಸಕರಾದರು. ಮುಂದೆ, ಪಿಎಚ್.ಡಿ ಪಡೆದು (ಕನ್ನಡದಲ್ಲಿ ಕಥನ ಕವನಗಳು) ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, 2000ದಲ್ಲಿ ನಿವೃತ್ತಿ ಹೊಂದಿದರು. ಬಳಿಕ ಅಧ್ಯಯನ, ಬರವಣಿಗೆಗೆ ಹೆಚ್ಚಿನ ಸಮಯ ಮೀಸಲಿಟ್ಟರು. ಬೆಂಗಳೂರಿನ ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯಲ್ಲಿ ಸ್ವಂತ ಮನೆ ಕಟ್ಟಿಸಿ, ಅದಕ್ಕೆ ‘ಸಂಕಲ್ಪ’ ಎಂಬ ಹೆಸರು ಇರಿಸಿದರು. ಡಾ. ಕೆ.ಎಸ್. ನಿಸಾರ್ ಅಹಮದ್ ಅವರನ್ನು ತಮ್ಮ ಮೊದಲ ‘ಕಾವ್ಯ ಗುರು’ ಎಂದು ಗೌರವಿಸಿದರು. ಪು.ತಿ.ನರಸಿಂಹಾಚಾರ್ರ ಒಡನಾಟದಿಂದ ಪ್ರಭಾವಿತರಾದರು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರಿಂದ ಪ್ರೇರಣೆ ಪಡೆದರು. ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ಮಕ್ಕಳ ಸಾಹಿತ್ಯ, ಗೀತರಚನೆ ಹೀಗೆ ವಿವಿಧ ಪ್ರಕಾರಗಳಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. 2020ರಲ್ಲಿ ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷತೆ ವಹಿಸಿದ್ದರು. 2020ರಲ್ಲಿ ಎಚ್ಚೆಸ್ವಿ ಸಾಹಿತ್ಯಾಭಿನಂದನೆ ಗ್ರಂಥ ‘ಅಕ್ಕರೆ’ ಎಸ್. ಉಮೇಶ್ ಸಂಪಾದಕತ್ವದಲ್ಲಿ ಲೋಕಾರ್ಪಣೆಗೊಂಡಿತ್ತು.
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯ್ಗೆ ಬೆಣ್ಣೆ ಮೆತ್ತಿದರಮ್ಮ ||
ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೆ ತೆಗೆಯಲೆ ಅಮ್ಮ ನನ್ನ ಪುಟ್ಟ ಕೈಗಳಲಿ ||
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತವೇನು ನಾವು ನಮ್ಮ ಅಂತರಾಳವ?
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?