ಅಂಕಣ

ಮನೆಗೆ ಅಂದ ಮನಸ್ಸಿಗೆ ಮುದ ನೀಡುವ ಅಕ್ವೇರಿಯಂ: ಮೀನುಗಳ ಬಗ್ಗೆ ಬೇಸಿಗೆಯಲ್ಲೂ ಇರಲಿ ಕಾಳಜಿ

ಮನೆಯ ಅಂದ ಹೆಚ್ಚಿಸುವ, ಮನಸ್ಸಿಗೆ ಮುದ ನೀಡುವ ಆಲಂಕಾರಿಕ ವಸ್ತುಗಳಲ್ಲಿ ಅಕ್ವೇರಿಯಂ ವಿಶೇಷ ಪಾತ್ರ ವಹಿಸುತ್ತದೆ.

ಮೀನು ಸಾಕಣೆ ಕೆಲವರಿಗೆ ಉದ್ಯೋಗವಾದರೆ, ನಗರದ ಮಂದಿಗೆ ಹವ್ಯಾಸ. ಹೀಗಾಗಿ ಮನೆಯ ಸೌಂದರ್ಯ ಹೆಚ್ಚಿಸಲು ಬಳಸಿದರೆ, ಮತ್ತೆ ಕೆಲವರು ವಾಸ್ತು ಹೆಸರಿನಲ್ಲಿ ಅಕ್ವೇರಿಯಂ ಇಡುವುದುಂಟು. ಮಕ್ಕಳು ಇಷ್ಟಪಡುತ್ತಾರೆ, ಹಠ ಮಾಡುತ್ತಾರೆ ಎಂಬ ಕಾರಣಕ್ಕೂ ಇಷ್ಟವಿಲ್ಲದಿದ್ದರೂ ತಂದಿಟ್ಟುಕೊಂಡಿರುವವರೂ ಇದ್ದಾರೆ. ಕಾರಣ ಏನೇ ಇರಲಿ ಮನೆಯ ಅಂದ ಹೆಚ್ಚಿಸುವಲ್ಲಿ ಅಕ್ವೇರಿಯಂ ತನ್ನದೇ ಆದ ಪಾತ್ರ ವಹಿಸಿದೆ.

ನಾನಾ ಜಾತಿಯ ಬಣ್ಣ ಬಣ್ಣದ ಮೀನುಗಳು ದೇಹವನ್ನು ಬಳಕಿಸುತ್ತ ಅಕ್ವೇರಿಯಂ ತುಂಬ ಓಡಾಡುತ್ತಿದ್ದರೆ ಮಕ್ಕಳು ಸೇರಿದಂತೆ ಮನೆ ಮಂದಿಯಲ್ಲ ಆಕರ್ಷಿತರಾಗುತ್ತಾರೆ. ಅಲ್ಲದೆ ತಜ್ಞರು ಹೇಳುವಂತೆ ಅಕ್ವೇರಿಯಂಗಳಲ್ಲಿ ಮೀನುಗಳನ್ನು ವೀಕ್ಷಿಸುವುದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಮನಸ್ಸಿನಲ್ಲಿ ಪ್ರಶಾಂತ ಭಾವನೆ ಮೂಡುತ್ತದೆ, ಬುದ್ದಿ ಚುರುಕಾಗುತ್ತದೆ. ಈ ಮೀನುಗಳ ಚಲನೆಯನ್ನು ವೀಕ್ಷಿಸುತ್ತಿದ್ದರೆ ರಕ್ತದೊತ್ತಡ ಸಹ ಕಡಿಮೆಯಾಗುತ್ತದಂತೆ.

ಪುಟ್ಟ ಮನೆಯಿಂದ ದೊಡ್ಡ ದೊಡ್ಡ ಬಂಗಲೆಯವರೆಗೂ ಅವರವರ ಶಕ್ತಿಗೆ ಅನುಗುಣವಾಗಿ ಅಕ್ವೇರಿಯಂ ಇಡುತ್ತಾರೆ. ದೊಡ್ಡ ದೊಡ್ಡ ಮನೆಗಳಲ್ಲಿ ಟ್ಯಾಂಕ್, ರೂಮ್ ಡಿವೈಡರ್, ವಾಲ್ ಮತ್ತು ಟೇಬಲ್ ಅಕ್ವೇರಿಯಂಗಳನ್ನು ಬಳಸಿದರೆ. ಸಣ್ಣ ಪುಟ್ಟ ಮನೆಗಳಲ್ಲಿ ಗಾಜಿನ ಬಾಟಲಿ, ಬೌಲ್​ಗಳಲ್ಲಿ ಮೀನುಗಳನ್ನು ಸಾಕುತ್ತಾರೆ. ಹೀಗಾಗಿ ಅವುಗಳಿಗೆ ವಾತಾವರಣಕ್ಕೆ ಅನುಗುಣವಾಗಿ ಅರೈಕೆಯ ಅಗತ್ಯವಿರುತ್ತದೆ.

ಬೇಸಿಗೆಯಲ್ಲಿ ರಕ್ಷಣೆ

ಮನುಷ್ಯರಂತೆ ಮೀನುಗಳಿಗೂ ಬಿಸಿಲಿನಿಂದ ರಕ್ಷಣೆಯ ಅಗತ್ಯವಿದೆ. ಸದಾ ತಂಪಾದ ನೀರಿನಲ್ಲಿ ಜೀವಿಸುವ ಮೀನುಗಳಿಗೆ ಬೇಸಿಗೆಯಲ್ಲೂ ಅದೇ ತಂಪು ವಾತಾವರಣ ಸೃಷ್ಟಿಸಬೇಕಿದೆ. ಹೀಗಾಗಿ ಬೇಸಿಗೆಯಲ್ಲಿ ಅಕ್ವೇರಿಯಂನಲ್ಲಿ ನೀರು ಸದಾ ತಂಪಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಅಕ್ವೇರಿಯಂ ಅನ್ನು ಸೂರ್ಯನ ಕಿರಣ ನೀರವಾಗಿ ಬಿಳದ ಜಾಗದಲ್ಲಿ ಇಡಬೇಕು.

ಕೆಲ ಎಚ್ಚರಿಕೆ ಕ್ರಮಗಳು

ಶೀಟ್ ಮನೆಗಳು ಹಾಗೂ ಮಹಡಿ ಮನೆಯಲ್ಲಿ ಬಿಸಿಲ ತಾಪದಿಂದ ಮನೆಯ ಒಳಗೂ ಬಿಸಿ ವಾತಾವರಣ ಸಹಜ. ಇಂತಹ ಮನೆಗಳಲ್ಲಿ ಫ್ಯಾನ್ ಹಾಕಿದರೂ ಬಿಸಿ ಗಾಳಿ ಬರುತ್ತದೆ. ಹೀಗಿರುವಲ್ಲಿ ಅಕ್ವೇರಿಯಂ ಬಗ್ಗೆ ಕೊಂಚ ಎಚ್ಚರ ವಹಿಸಬೇಕು. ಬೇಸಿಗೆಯಲ್ಲಿ ಕಾಲಕಾಲಕ್ಕೆ ನೀರು ಬದಲಿಸಬೇಕು. ತಾಪಮಾನ ಕಡಿಮೆ ಮಾಡಲು ಸಂಜೆ ಹೊತ್ತು ನೀರು ಬದಲಿಸುವುದು ಸೂಕ್ತ. ಮೀನುಗಳಿಗೆ ಸಮ ಪ್ರಮಾಣದಲ್ಲಿ ಆಹಾರ ನೀಡಬೇಕು. ಕಿಟಕಿ ಪಕ್ಕದಲ್ಲಿ ಅಕ್ವೇರಿಯಂ ಇದ್ದರೆ ಕಿಟಕಿ ಮುಚ್ಚಿ ಪರದೆ ಎಳೆದು ಬಿಸಿಲ ಶಾಖ ತಾಗದಂತೆ ನೋಡಿಕೊಳ್ಳಬೇಕು. ಅಕ್ವೇರಿಯಂನಲ್ಲಿರುವ ಬಣ್ಣ ಬಣ್ಣದ ಮೀನುಗಳು ಅಕರ್ಷಕವಾಗಿ ಕಾಣಲೆಂದು ಅದರಲ್ಲಿ ಲೈಟ್ ಅಳವಡಿಸಲಾಗಿರುತ್ತದೆ. ಇದರಿಂದ ನೀರು ಬಿಸಿ ಆಗುತ್ತದೆ. ಹೀಗಾಗಿ ರಾತ್ರಿ ಹೊತ್ತು ಲೈಟ್ ಆಫ್ ಮಾಡಿ. ಇದರಿಂದ ನೀರು ತಣ್ಣಗಿದ್ದು ಮೀನುಗಳಿಗೆ ತಂಪಾದ ವಾತಾವರಣ ನಿರ್ವಿುಸುತ್ತದೆ.

| ಪಂಕಜ ಕೆ.ಎಂ.