ಅಂಕಣ

ಅಮೆರಿಕದ ಅಫ್ಘನ್ ವಿಪರ್ಯಾಸದ ಆದಿ ಮತ್ತು ಹಾದಿ

ಅಮೆರಿಕನ್ ಸೇನೆ ಹೊರನಡೆಯುತ್ತಿದ್ದಂತೆ ‘ಅಫ್ಘಾನಿಸ್ತಾನ ಸ್ವತಂತ್ರಗೊಂಡಿದೆ’ ಎಂದು ತಾಲಿಬಾನ್ ಘೋಷಿಸಿದೆ. ಅವರಿಗದು ಸ್ವಾತಂತ್ರ್ಯ, ಹೊರಜಗತ್ತಿನ ದೃಷ್ಟಿಯಲ್ಲದು ಧಾರ್ವಿುಕ ಮೂಲಭೂತವಾದದ ಆರಂಭ. ಆದರೆ ಅದೇ ಮೂಲಭೂತವಾದ ನೆರೆಯ ಪಾಕಿಸ್ತಾನದಲ್ಲೇ ಬೆಳೆಯುತ್ತಿದೆ.

ಅಫ್ಘಾನಿಸ್ತಾನದಲ್ಲಿ ತನ್ನ ಇಪ್ಪತ್ತು ವರ್ಷಗಳ ಸೇನಾ ಕಾರ್ಯಾಚರಣೆಯನ್ನು ಅಮೆರಿಕಾ ಅಂತ್ಯಗೊಳಿಸಿದೆ, ಅಮೆರಿಕನ್ ಸೇನಾ ಸಿಬ್ಬಂದಿಯನ್ನು ಹೊತ್ತ ಕೊನೆಯ ಸೇನಾ ವಿಮಾನ ಆಗಸ್ಟ್ 30ರ ರಾತ್ರಿ ಕಾಬುಲ್​ನ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದೆ. ಆಗಸ್ಟ್ 31ರ ಗಡುವು ಹತ್ತಿರಾಗುತ್ತಿದ್ದಂತೇ ಹಾಗೂ ಕಾಬುಲ್ ನಗರ ತಾಲಿಬಾನಿಗಳ ವಶವಾಗುತ್ತಿದ್ದಂತೇ ತೀವ್ರಗೊಂಡ ಸೇನಾ ವಾಪಸಾತಿಯ ಅಂತಿಮ ಹಂತದಲ್ಲಿ ಆಗಸ್ಟ್ 14-30ರ ಆವಧಿಯಲ್ಲಿ ಅಮೆರಿಕನ್ ವಾಯುಪಡೆ 6,500 ಅಮೆರಿಕನ್ನರೂ ಸೇರಿದಂತೆ 78,000 ಜನರನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಹೊರಸಾಗಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್​ನ ಮುಖ್ಯಸ್ಥ ಜನರಲ್ ಕೆನೆತ್ ಮೆಕೆಂಜಿ ಹೆಮ್ಮೆಯಿಂದ ಘೊಷಿಸಿದ್ದಾರೆ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ನಾಗರಿಕರು ಇನ್ನೂ ಇರುವ ಬಗೆಗೂ ಜ. ಮೆಕೆಂಜಿ ಪ್ರಸ್ತಾಪಿಸಿದ್ದಾರೆ. ಈ ವಿಪರ್ಯಾಸದ ಮುಂದುವರಿಕೆಯಾಗಿ, ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ರಾಜತಾಂತ್ರಿಕ ಚಟುವಟಿಕೆಗಳು ಮುಂದುವರಿಯುವುದಾಗಿಯೂ, ಅಮೆರಿಕನ್ ರಾಜತಂತ್ರಜ್ಞರನ್ನು ಕಾಬುಲ್​ನಿಂದ ಖತರ್​ನ ದೋಹಾಗೆ ಸ್ಥಳಾಂತರಿಸಿರುವುದಾಗಿಯೂ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಒಂದೇ ಉಸಿರಿನಲ್ಲಿ ಹೇಳಿದ್ದಾರೆ! ಈ ವಿಪರ್ಯಾಸಗಳ ಸರಣಿ ಇಲ್ಲಿಗೆ ಮುಗಿಯುತ್ತದೆಯೇ? ಮುಕ್ತಾಯದ ಬಗ್ಗೆ ಚಿಂತಿಸುವ ಮೊದಲು ಆರಂಭದತ್ತ ಒಮ್ಮೆ ಇಣುಕುನೋಟ ಹರಿಸೋಣ.

ಇಪ್ಪತ್ತು ವರ್ಷಗಳ ಹಿಂದಿನ ಆ ಮಂಗಳವಾರದ ಬೆಳಗು ಶೀತಲಸಮರದಲ್ಲಿ ಸೋವಿಯೆತ್ ಯೂನಿಯನ್ ಅನ್ನು ‘ಸೋಲಿಸಿ’ ಏಕಶೃಂಗೀ ಜಾಗತಿಕ ವ್ಯವಸ್ಥೆಯಲ್ಲಿ ‘ಎನ್ನಯ ಸರಿಸಮಾನರಾರೈ’ ಎಂದು ಬೀಗುತ್ತಿದ್ದ ಅಮೆರಿಕಾಗೆ ಬಿದ್ದ ಪೆಟ್ಟು ನ ಭೂತೋ, (ಇಂದಿನವರೆಗೆ) ನ ಭವಿಷ್ಯತಿ! ಬಲಾಢ್ಯ ಅಮೆರಿಕಾದ ಬಲಾಢ್ಯ ಅಧ್ಯಕ್ಷ ಹಲವಾರು ಗಂಟೆಗಳ ಕಾಲ ಅಣ್ವಸ್ತ್ರ-ನಿರೋಧಕ ಬಂಕರ್​ನಲ್ಲಿ ಅಡಗಿ ಕೂತ ಆ ದಿನ ಬಹುಶಃ ಹೆದರದ ಅಮೆರಿಕನ್ನನೇ ಇರಲಿಲ್ಲ. ಆ ಹೆದರಿಕೆಗೆ ಸ್ಪಷ್ಟ ಕಾರಣಗಳಿದ್ದವು. ತಮ್ಮ ದೇಶಕ್ಕೆ ಇಂತಹ ಮರ್ವಘಾತ ನೀಡಿದವರ್ಯಾರು ಎಂದು ಯಾವೊಬ್ಬ ಅಮೆರಿಕನ್ನನಿಗೂ ಅಂದು ಅರಿ ವಿರಲಿಲ್ಲ. ಜಪಾನಿನ ರೆಡ್ ಆರ್ವಿುಯಿಂದ ಹಿಡಿದು ಯುನಾ ಬಾಂಬರ್​ನಂತಹ ಮತ್ಯಾವನೋ ತಲೆಕೆಟ್ಟವನ ಬಗ್ಗೆ ಅವರ ಊಹಾಪೋಹಗಳು ಗಿರಿಗಿಟ್ಟೆ ಹಾಕುತ್ತಿದ್ದವು. ಈ ಕೃತ್ಯಗಳ ಹಿಂದಿರುವುದು ಅಲ್-ಖಯೀದಾ ಎಂದು ಅರಿವಾದಾಗ ಹೆಚ್ಚಿನ ಅಮೆರಿಕನ್ನರಿಗೆ ನಂಬಿಕೆಯೇ ಆಗಲಿಲ್ಲ.

ಹತ್ತಿರ ಹತ್ತಿರ ಎರಡು ಶತಮಾನಗಳ ಹಿಂದೆ 1812-16ರ ಯುದ್ಧದಲ್ಲಿ ಉತ್ತರದ ಕೆನಡಾದಿಂದ ದಾಳಿಯಿಟ್ಟ ಬ್ರಿಟಿಷ್ ಸೇನೆ ಅಮೆರಿಕನ್ ಸೇನೆಯನ್ನು ಬಗ್ಗುಬಡಿದು, ಅದನ್ನೂ, ಅದರ ಅಧ್ಯಕ್ಷ ಜೇಮ್್ಸ ಮ್ಯಾಡಿಸನ್​ರನ್ನೂ ರಾಜಧಾನಿ ವಾಷಿಂಗ್​ಟನ್​ನಿಂದ ಹೊರಗೋಡಿಸಿತ್ತು. ಅಧ್ಯಕ್ಷರ ನಿವಾಸದ ಮುಂದೆ ಒಗ್ಗೂಡಿದ ಬ್ರಿಟಿಷ್ ಸೇನೆಯ ನಾಯಕ ತನ್ನ ಸೈನಿಕರನ್ನುದ್ದೇಶಿಸಿ ‘ಶಲ್ ವಿ ಬರ್ನ್ ಡೌನ್ ದಿಸ್ ಯಾಂಕೀಸ್ ಕ್ಯಾಪಿಟಲ್?’ ಎಂದು ಅಟ್ಟಹಾಸಗೈದದ್ದಕ್ಕೆ ನೆರೆದಿದ್ದ ವಿಜಯೋನ್ಮತ್ತ ಬ್ರಿಟಿಷ್ ಸೈನಿಕರು ‘ಯೀಹ್ಯಾ!’ ಎಂದು ಒಕ್ಕೊರಲಿನಿಂದ ಮಾರ್ದನಿ ಕೊಟ್ಟರು. ಆಮೇಲೆ ನಡೆದದ್ದು ಇತಿಹಾಸ. ಅಧ್ಯಕ್ಷರ ನಿವಾಸ ಬೆಂಕಿಗಾಹುತಿಯಾಗಿ ಅದರ ಕೆಂಪುಮೈ ಕಪ್ಪಾಗಿಹೋಯಿತು. ಆಮೇಲೆ ಆ ಕಪ್ಪನ್ನು ಮುಚ್ಚಲು ಅಮೆರಿಕನ್ನರು ಅದಕ್ಕೆ ಬಿಳಿಯ ಬಣ್ಣ ಬಳಿದು ಶ್ವೇತಭವನವನ್ನಾಗಿಸಿದರೂ ಇತಿಹಾಸಕ್ಕೆ ಹಚ್ಚಿದ ಕಪ್ಪನ್ನೇನೂ ಹೋಗಲಾಡಿಸಲಾಗಲಿಲ್ಲ. ಆ ಕಪ್ಪಿಗೆ ಸೆಪ್ಟೆಂಬರ್ 11, 2001ರಂದು ಅಲ್-ಖಯೀದಾ ಇನ್ನಷ್ಟು ಕಪ್ಪು ಹಚ್ಚಿತು. ಇಪ್ಪತ್ತು ವರ್ಷಗಳ ನಂತರ ಅಮೆರಿಕಾ ತನ್ನ ಮುಖಕ್ಕೆ ತಾನೇ ಕಪ್ಪು ಹಚ್ಚಿಕೊಂಡಿರುವುದನ್ನು ಅರ್ಧ ಜಗತ್ತು ನಿಬ್ಬೆರಗಾಗಿ ನೋಡುತ್ತಿದ್ದರೆ ಇನ್ನರ್ಧ ಜಗತ್ತು ನಗುತ್ತಿದೆ.

ಅಲ್ ಖಯೀದಾ 1993ರಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಬೇಸ್​ವೆುಂಟ್​ನಲ್ಲಿದ್ದ ಕಾರ್ ರ್ಪಾಂಗ್​ನಲ್ಲಿ ನಡೆಸಿದ ಬಾಂಬ್ ಸ್ಪೋಟ, 1998ರ ಆಗಸ್ಟ್​ನಲ್ಲಿ ಪೂರ್ವ ಆಫ್ರಿಕಾದ ದಾರ್ ಎಸ್ ಸಲಾಂ ಮತ್ತು ನೈರೋಬಿಗಳಲ್ಲಿನ ಅಮೆರಿಕನ್ ದೂತಾವಾಸಗಳಲ್ಲಿ ನಡೆಸಿದ ಬಾಂಬ್ ಸ್ಪೋಟಗಳು, 2000ರ ಅಕ್ಟೋಬರ್​ನಲ್ಲಿ ಏಡನ್ ಬಂದರಿನಲ್ಲಿದ್ದ ಅಮೆರಿಕನ್ ನೌಕೆ ಯುಎಸ್​ಎಸ್ ಕೋಲ್ ಮೇಲೆ ನಡೆಸಿದ ದಾಳಿ- ಇವ್ಯಾವುವೂ ಆ ಭಯೋತ್ಪಾದಕ ಸಂಘಟನೆಯ ವಿಧ್ವಂಸಕ ಸಾಮರ್ಥ್ಯಳು ಈ ಮಟ್ಟಕ್ಕೆ ಏರಬಹುದೆಂದು ಸೂಚನೆ ನೀಡಿರಲಿಲ್ಲ. ಜತೆಗೇ, ಕೇವಲ ಪ್ರಯಾಣಿಕರ ವಿಮಾನಗಳನ್ನೇ ಆಯುಧಗಳಾಗಿ ಬಳಸಿ ವಿಶ್ವದ ದೊಡ್ಡಣ್ಣನ ತಲೆಯ ಮೇಲೆ ಈ ಪರಿಯಾಗಿ ಮೊಟಕಬಹುದೆಂದು ಅಮೆರಿಕದ ಒಳಗಾಗಲೀ ಹೊರಗಾಗಲೀ ಯಾರಾದರೂ ಊಹಿಸಿರಬಹುದಾದ ಸಾಧ್ಯತೆ ಬಹುಶಃ ಇರಲಿಲ್ಲ. ಈ ದಾಳಿಗಳ ಬಗ್ಗೆ ಸತತ ಎಂಬತ್ತು ಗಂಟೆಗಳವರೆಗೆ ವರದಿ, ಚರ್ಚೆಗಳನ್ನು ಪ್ರಸಾರ ಮಡಿದ ಅಮೆರಿಕನ್ ವಾರ್ತಾವಾಹಿನಿಗಳಲ್ಲಿ ಹಿಂದಿನ ಇಂತಹದೇ ದುರಂತಗಳ ಸಮೀಕ್ಷೆ ಸಹ ನಡೆಯಿತು. ತೀರಾ ಇತ್ತೀಚೆಗೆ 1994ರ ಬೇಸಿಗೆಯಲ್ಲಿ ರವಾಂಡಾದಲ್ಲಿ ಘಟಿಸಿದ ಹುಟು-ಟುಟ್ಸಿ ಜನಾಂಗೀಯ ಮಾರಣಹೋಮದಲ್ಲಿ ಒಂದೇ ದಿನದಲ್ಲಿ ಹತರಾದದ್ದು ಸುಮಾರು ಎರಡೂವರೆ ಲಕ್ಷ ಜನ. ಮಧ್ಯಯುಗದಲ್ಲಿ ಮಂಗೋಲ್ ದಾಳಿಕಾರರಾದ ಚೆಂಗೀಸ್ ಖಾನ್, ಅತ್ತಿಲ, ಹುಲಕು ಖಾನ್​ರು ಖೀವಾ, ಸಮರ್ಕಂದ್, ಬುಖಾರಾ, ಕಂದಹಾರ್, ಕಾಬುಲ್​ಗಳ ಮೇಲೆ ನಡೆಸಿದ ಪೈಶಾಚಿಕ ದಾಳಿಗಳಲ್ಲಿ ಒಂದೊಂದು ಊರಿನಲ್ಲೂ ಒಂದೊಂದೇ ದಿನದಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದರು. ಅಷ್ಟೇಕೆ, ಇದೇ ಅಮೆರಿಕನ್ನರು ಹಿರೋಷಿಮಾ ಮೇಲೆ ಹಾಕಿದ ಅಣ್ವಸ್ತ್ರದಿಂದ ಎಂಬತ್ತು ಸಾವಿರ ಜಪಾನೀಯರು ಅಸುನೀಗಿದ್ದರು. ಸಾವುನೋವಿನ ಪ್ರಮಾಣಕ್ಕೆ ಹೋಲಿಸಿದರೆ 9/11ರ ದಾಳಿಗಳು ಏನೇನೂ ಅಲ್ಲ. ಆದರೆ ಈ ದಾಳಿಗಳು ವಿಶ್ವ ಇತಿಹಾಸವನ್ನು ಬದಲಿಸಿದ ಮಟ್ಟಿಗೆ ಹಿಂದಿನ ಯಾವ ದಾಳಿಯೂ ಬದಲಾಯಿಸಿರಲಿಲ್ಲ.

ಅಲ್-ಖಯೀದಾ ಈ ಮಟ್ಟದ ವಿಧ್ವಂಸಕ ಸಂಘಟನೆಯಾಗಿ ಬೆಳೆಯುವುದಕ್ಕೆ ಅಮೆರಿಕಾವನ್ನೇ ದೂಷಿಸಲು ಶಕ್ಯವಿದೆ. 1979ರ ಡಿಸೆಂಬರ್​ನಲ್ಲಿ ಅಫ್ಘಾನಿಸ್ತಾನವನ್ನು ಪ್ರವೇಶಿಸಿದ ಸೋವಿಯೆತ್ ಸೇನೆಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಲು ಅಮೆರಿಕಾ ಬಳಸಿಕೊಂಡದ್ದು ಇಸ್ಲಾಮನ್ನು. ಧರ್ಮವೇ ಇಲ್ಲದ ಕಮ್ಯೂನಿಸ್ಟರನ್ನು ಅಫ್ಘಾನಿಸ್ತಾನದಲ್ಲಿ ಇರಗೊಟ್ಟರೆ ಅವರು ಆ ದೇಶದಲ್ಲಿ ಇಸ್ಲಾಮನ್ನೇ ನಾಶಮಾಡಿಬಿಡುತ್ತಾರೆ, ಇಸ್ಲಾಂ ಉಳಿಯಬೇಕಾದರೆ ರಶಿಯನ್ನರು ಅಫ್ಘಾನಿಸ್ತಾನದಿಂದ ಕಾಲ್ತೆಗೆಯುವಂತೆ ಮಾಡಲೇಬೇಕು ಎಂದು ಅಮೆರಿಕಾ ವಾದಿಸಿದಾಗ ಅದನ್ನು ಒಪ್ಪಿ ಇಸ್ಲಾಮನ್ನು ಉಳಿಸುತ್ತಿದ್ದೇನೆ ಎಂಬ ನಂಬಿಕೆಯಲ್ಲಿ ದೂರದೂರದ ದೇಶಗಳಿಂದ ಅಫ್ಘಾನಿಸ್ತಾನಕ್ಕೆ ಬಂದವರಲ್ಲಿ ಒಸಾಮಾ ಬಿನ್ ಲಾಡೆನ್ ಸಹ ಒಬ್ಬ. ಒಂಬತ್ತು ವರ್ಷಗಳ ನಂತರ ಸೋವಿಯೆತ್ ಸೇನೆ ಅಫ್ಘಾನಿಸ್ತಾನದಿಂದ ಕಾಲ್ತೆಗೆದಾಗ ಯುದ್ಧದಿಂದ ಜಝುರಿತವಾಗಿದ್ದ ಆ ನತದೃಷ್ಟ ದೇಶವನ್ನು ಹೇಗಿತ್ತೋ ಹಾಗೇ ಬಿಟ್ಟು ಅಮೆರಿಕನ್ನರು ಓಡಿಹೋದರು. ಅಮೆರಿಕನ್ನರಿಗೆ ಇಸ್ಲಾಮಿನ ಮೇಲೆ ಯಾವ ಪ್ರೀತಿಯೂ ಇಲ್ಲ, ಅವರು ಅಫ್ಘಾನಿಸ್ತಾನದಲ್ಲಿ ಕಾರ್ಯನಿರತರಾಗಿದ್ದದ್ದು ಇಸ್ಲಾಮನ್ನು ಉಳಿಸಲೆಂದಲ್ಲ, ಬದಲಾಗಿ ರಶಿಯನ್ನರು ಹಿಂದೂ ಮಹಾಸಾಗರದತ್ತ ಮುನ್ನುಗ್ಗದಂತೆ ತಡೆದು ತನ್ಮೂಲಕ ಈ ವಲಯದಲ್ಲಿ ತಮ್ಮ ಸೇನಾ ಪ್ರಭಾವಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವ ಸ್ವಾರ್ಥಪರ ಹುನ್ನಾರದಿಂದ ಎಂದು ಆಗ ಲಾಡೆನ್​ಗೆ ಅರಿವಾಯಿತು. ವಾಸ್ತವವಾಗಿ ಇಸ್ಲಾಮಿನ ಹೆಸರು ಹೇಳಿಕೊಂಡು ಅಮೆರಿಕಾ ತನ್ನ ಬೇಳೆ ಬೇಯಿಸಿಕೊಂಡಿತ್ತು, ಅದಕ್ಕೆ ಸಹಕರಿಸಿ ತಾನು ಮೂರ್ಖನಾದೆ ಎಂಬ ಜ್ಞಾನೋದಯವಾದದ್ದೇ ಆತ ಅಮೆರಿಕಾದ ವಿರುದ್ಧ ತಿರುಗಿಬಿದ್ದ. ರಶಿಯನ್ನರ ವಿರುದ್ಧ ಯಾವುದನ್ನು ಅಸ್ತ್ರವನ್ನಾಗಿ ಅಮೆರಿಕಾ ಬಳಸಿಕೊಂಡಿತ್ತೋ ಅದೇ ಈಗ ಅಮೆರಿಕಾವನ್ನೇ ಬಲಿ ತೆಗೆದುಕೊಳ್ಳಲು ಹೊರಡುವ ವಿಪರ್ಯಾಸಕ್ಕೆ ನಾಂದಿಯಾದದ್ದು ಆಗ.

ಒಂಬತ್ತು ವರ್ಷಗಳ ಅಂತರ್ಯುದ್ಧ ಬಳುವಳಿಯಾಗಿತ್ತ ಹಸಿವು, ಬಡತನ, ರೋಗರುಜಿನ, ನಿರುದ್ಯೋಗಗಳಲ್ಲಿ ನರಳಲು ಅಫ್ಘನ್ ಜನತೆಯನ್ನು ಬಿಟ್ಟು, ಆ ದೇಶ ಮೂಲಭೂತವಾದಕ್ಕೆ ಫಲವತ್ತಾದ ನೆಲವಾಗುವುದನ್ನು ಮುಂಗಾಣದೇ ಮುಖ ತಿರುಗಿಸಿಕೊಂಡು ಓಡಿಹೋದ ಅಮೆರಿಕಾ ಜಗತ್ತಿನ ದೊಡ್ಡಣ್ಣ ಎಂಬ ಉಪಾಧಿಗೆ ತಕ್ಕ ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಲಿಲ್ಲ ಎನ್ನುವುದು ವಿಷಾದದ ಸಂಗತಿ. ಆ ನಂತರವೂ ಈ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ, ಅವುಗಳಿಂದ ತನಗೂ, ವಿಶ್ವಕ್ಕೂ ತಟ್ಟಬಹುದಾದ ದುರಂತಗಳ ಬಗ್ಗೆ ಅಮೆರಿಕಾ ದಿವ್ಯ ನಿರ್ಲಕ್ಷ್ಯ ತೋರಿತು. ಅಫ್ಘಾನಿಸ್ತಾನದಲ್ಲಿ ಪತನಗೊಂಡ ಶಿಬ್ಗತುಲ್ಲಾ ಮುಜಾದೀದಿ ಸರ್ಕಾರ; ರಾಜಕೀಯ ಸ್ಥಿರತೆ ಸಾಧಿಸಲಾಗದ ಬಲಹೀನ ಬುರ್ಹಾನುದ್ದೀನ್ ರಬ್ಬಾನಿ ಸರ್ಕಾರ; ಪಖ್ತೂನ್ ನಾಯಕ ಗುಲ್ಬುದ್ದೀನ್ ಹೆಕ್​ವುತ್ಯಾರ್, ಉಝೆ್ಬೕಗ್ ನಾಯಕ ಜನರಲ್ ಅಬ್ದುಲ್ ರಶೀದ್ ದೋಸ್ತುಂ ಮತ್ತು ತಾಜಿಕ್ ನಾಯಕ ಅಹ್ಮದ್ ಷಾ ಮಾಸೂದ್​ರ ನಡುವೆ ಉಲ್ಬಣಗೊಂಡ ವೈಷಮ್ಯ; ಅದರಿಂದಾದ ಅರಾಜಕತೆ ಪಾಕಿಸ್ತಾನದ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟದ್ದು; ಅದು ಪ್ರತಿಗಾಮಿ ತಾಲಿಬಾನನ್ನು ಹುಟ್ಟುಹಾಕಿ ತನ್ನ ಕೈಗೊಂಬೆಯಾಗಿರಿಸಿಕೊಂಡದ್ದು; ಈ ಬೆಳವಣಿಗೆಗಳಿಂದ ಈ ವಲಯದ ರಾಜಕೀಯ ಕುದಿಯತೊಡಗಿದ್ದು- ಇದ್ಯಾವುದನ್ನೂ ಅಮೆರಿಕಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಅಲ್-ಖಯೀದಾಗೆ ಸುಡಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಿಗುತ್ತಿದ್ದ ಬೆಂಬಲವನ್ನು ಗಮನಿಸಿ ಅದನ್ನು ಹತ್ತಿಕ್ಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್ ತಮ್ಮ ಮೊದಲ ಅವಧಿಯಲ್ಲಿ ವಿದೇಶ ನೀತಿಯನ್ನು ನಿರ್ಲಕ್ಷಿಸಿ ಕೇವಲ ಆರ್ಥಿಕ ಹಿಂಜರಿತವನ್ನು ತಡೆಗಟ್ಟುವುದರಲ್ಲೇ ಮಗ್ನರಾಗಿಬಿಟ್ಟರು. ಎರಡನೇ ಅವಧಿಯಲ್ಲಿ ಅವರು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈಮೀರಿಹೋಗಿತ್ತು. ಅಲ್-ಖಯೀದಾ ಅಪಾಯಕಾರಿ ಮಟ್ಟಕ್ಕೆ ಬೆಳೆದಿತ್ತು ಮತ್ತು ಅದಕ್ಕೆ ತಾಲಿಬಾನ್ ಹಿಡಿತದ ಅಫ್ಘಾನಿಸ್ತಾನದಲ್ಲಿ ಭದ್ರ ನೆಲೆ ಸಿಕ್ಕಿತ್ತು. ಲಾಡೆನ್​ನನ್ನು ಹುಡುಕಿ ಕೊಲ್ಲುವುದರೊಂದಿಗೆ ಅಲ್-ಖಯೀದಾವನ್ನು ನಿರ್ವೀರ್ಯಗೊಳಿಸುವುದರಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕಾ ಯಶಸ್ವಿಯಾಗಿದೆಯೇನೋ ನಿಜ. ಆದರೆ ಅದಕ್ಕಾಗಿ ತೆತ್ತ 2,455 ಯುವ ಯೋಧರು, ಮೂರು ಟ್ರಿಲಿಯನ್ ಡಾಲರ್​ಗಳು ಸಣ್ಣ ಬೆಲೆಯೇನೂ ಅಲ್ಲ. ಒಂದು ತಲೆಮಾರಿನ ಬೇಜವಾಬ್ದಾರಿ ವರ್ತನೆಗೆ ಮುಂದಿನ ತಲೆಮಾರು ತೆರಬೇಕಾದ ಭೀಕರ ಬೆಲೆಗೆ ಇದೊಂದು ಉದಾಹರಣೆ.

ಮುಂದೇನು?: ಕೊನೆಯ ಅಮೆರಿಕನ್ ಸೇನಾ ವಿಮಾನ ಕಾಬುಲ್ ವಿಮಾನನಿಲ್ದಾಣದಿಂದ ಗಗನಕ್ಕೇರುತ್ತಿದ್ದಂತೇ ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ‘ಅಫ್ಘಾನಿಸ್ತಾನ ಸ್ವತಂತ್ರಗೊಂಡಿದೆ’ ಎಂದು ಘೊಷಿಸಿದ್ದಾರೆ. ಅವರಿಗದು ಸ್ವಾತಂತ್ರ್ಯ, ಹೊರಜಗತ್ತಿನ ದೃಷ್ಟಿಯಲ್ಲದು ಧಾರ್ವಿುಕ ಮೂಲಭೂತವಾದದ ಆರಂಭ. ಆದರೆ ಅಫ್ಘಾನಿಸ್ತಾನದ ಬಗ್ಗೆ ಇಷ್ಟೆಲ್ಲಾ ಚಿಂತಿಸುವ ಹೊರಜಗತ್ತಿಗೆ ಅದೇ ಮೂಲಭೂತವಾದ ನೆರೆಯ ಪಾಕಿಸ್ತಾನದಲ್ಲೇ ಒಂದೂವರೆ ದಶಕದಿಂದಲೂ ತಣ್ಣಗೆ ಬೆಳೆಯುತ್ತಿದೆ ಎನ್ನುವುದರ ಅರಿವೇ ಇಲ್ಲವೆನ್ನುವುದು ಈ ದಿನಗಳ ಅತಿದೊಡ್ಡ ವಿಪರ್ಯಾಸ.

ಸರ್ಕಾರೀ ಧನಸಹಾಯದಿಂದಲೇ ನಡೆಯುವ ಇಸ್ಲಾಮಾಬಾದಿನ ಲಾಲ್ ಮಸ್​ಜಿದ್ ಕಳೆದ ಒಂದೂವರೆ ದಶಕದಿಂದಲೂ ತಾಲಿಬಾನಿಗಳ ಆಡಂಬೋಲ. ಪಾಕಿಸ್ತಾನದಲ್ಲೂ ತಾಲಿಬಾನ್ ಮಾದರಿಯ ಮೂಲಭೂತವಾದಿ ವ್ಯವಸ್ಥೆಯನ್ನು ಸ್ಥಾಪಿಸುವ ತಮ್ಮ ಗುರಿಯನ್ನು ಕೆಂಪು ಮಸೀದಿಯ ಮುಖ್ಯ ಮೌಲ್ವಿಗಳಾದ ಮೌಲಾನಾ ಅಬ್ದುಲ್ ಅಜೀಜ್ ಹಾಗೂ ಮೌಲಾನಾ ಅಬ್ದುರ್ ರಶೀದ್ ಘಾಜಿ ಎಂಬ ಸಹೋದರರು 2007ರಲ್ಲೇ ಘೊಷಿಸಿದರು. ‘ರಾಷ್ಟ್ರದ ಎಲ್ಲ ರಂಗಗಳಲ್ಲೂ ಇಸ್ಲಾಮಿಕ್ ಕಾನೂನುಗಳನ್ನು ಸರ್ಕಾರ ಜಾರಿಗೆ ತರಬೇಕು... ಅದಕ್ಕಾಗಿ ನಾವು ಹೋರಾಡುತ್ತೇವೆ... ದೇಶದ ಮೂಲೆಮೂಲೆಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನೆಸಗಲು ನಾವು ತಯಾರಾಗಿದ್ದೇವೆ. ನಮ್ಮಲ್ಲಿ ಆಯುಧಗಳಿವೆ, ಗ್ರೆನೇಡ್​ಗಳಿವೆ, ಬಾಂಬ್ ತಯಾರಿಕೆಯಲ್ಲಿ ನಮಗೆ ಪರಿಣಿತಿಯಿದೆ. ಸಾವಿಗೆ ನಾವು ಹೆದರುವುದಿಲ್ಲ’ ಎಂದೂ ತಮ್ಮ ಎಫ್​ಎಂ ರೇಡಿಯೋದಲ್ಲೇ ಸಾರಿದ ನಂತರದ ಈ ಹದಿನಾಲ್ಕು ವರ್ಷಗಳಲ್ಲಿ, ಇಸ್ಲಾಮಿಕ್ ಮೂಲಭೂತವಾದ ರಾಜಧಾನಿಯೂ ಸೇರಿದಂತೆ ಪಂಜಾಬ್ ಪ್ರಾಂತ್ಯವಿಡೀ ಬಲಗೊಳ್ಳುತ್ತಾ ಸಾಗಿದೆ, ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯವಂತೂ ಅಧಿಕೃತವಾಗಿಯೇ ತಾಲಿಬಾನೀಕರಣಗೊಂಡಿದೆ. ಈಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೊಮ್ಮೆ ಅಧಿಕಾರಗ್ರಹಣ ಮಾಡಿರುವುದು ಪಾಕಿಸ್ತಾನದ ತಾಲಿಬಾನೀಕರಣವನ್ನು ತೀವ್ರಗೊಳಿಸುತ್ತದೆ. ಇದರ ಬಿಸಿ ಅಂತಿಮವಾಗಿ ತಟ್ಟುವುದು ಭಾರತಕ್ಕೆ. ಈ ಎಲ್ಲಾ ಬೆಳವಣಿಗೆಗಳ ವಿಶ್ಲೇಷಣೆ ಮುಂದಿನವಾರ, ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)