ಅಂಕಣ

ಆ ಕ್ಷಣ...| ಇಂದಿಗೂ ಸಿಗದ ಕೊಲೆಗಾರ: ಭಾಗ-2

ಅಪರಿಚಿತ ವ್ಯಕ್ತಿಯ ಕೊಲೆಯಲ್ಲಿ ಶಾಮೀಲಾಗಿರುವ ಬಗ್ಗೆ ತನ್ನ ಹೇಳಿಕೆಯನ್ನು ಸಾಹು ಹೀಗೆ ಮುಂದುವರಿಸಿದ: ‘ಸುಕುಮಾರನ್, ಸರಸಮ್ಮ ಮತ್ತು ನಾನು ಮೂವರೂ ಸೇರಿ ಸುಕುಮಾರನ್ ಸತ್ತನೆಂದು ಹೇಗೆ ಬಿಂಬಿಸುವುದೆಂದು ಅಬುದಾಭಿಯಲ್ಲಿಯೇ ರ್ಚಚಿಸಿ ಯೋಜನೆ ರೂಪಿಸಿದೆವು. ನಂತರ ನಾವಿಬ್ಬರೂ 1984ರ ಜನವರಿ 1ರಂದು ಕೇರಳಕ್ಕೆ ಬಂದೆವು. ನನ್ನ ಮನೆಯಲ್ಲಿ ಕೆಲಕಾಲ ಕಳೆದ ನಂತರ ನಾನು ಚೆರಿಯನಾಡುವಿನಲ್ಲಿದ್ದ ಸುಕುಮಾರನ್​ನ ಹೆಂಡತಿಯ ಮನೆಗೆ ಬಂದೆ. ಅಲ್ಲಿ ಸುಕುಮಾರನ್, ಅವನ ಷಡ್ಡಕ ಭಾಸ್ಕರ್ ಪಿಳ್ಳೈ, ಪಿಳ್ಳೈನ ಚಾಲಕ ಪೊನ್ನಪ್ಪನ್ ಇದ್ದರು. ನಾವೆಲ್ಲರೂ ಯೋಜನೆಯ ಬಗ್ಗೆ ಇನ್ನಷ್ಟು ರ್ಚಚಿಸಿದೆವು. ಸುಕುಮಾರನ್​ನ ಎತ್ತರ ಹಾಗೂ ಗಾತ್ರವನ್ನು ಹೋಲುವ ಶವವನ್ನು ತಂದು ಕಾರಲ್ಲಿಟ್ಟು, ಆ ಕಾರು ಅಪಘಾತದಲ್ಲಿ ಸುಟ್ಟಿತೆಂದು ಪೊಲೀಸ್ ಠಾಣೆಯಲ್ಲಿ ದೂರಿತ್ತು ದೂರಿನ ಪ್ರತಿಯನ್ನು ಅಬುದಾಭಿ ವಿಮಾ ಕಂಪನಿಗೆ ಸಲ್ಲಿಸಿ ಹಣ ಪಡೆಯಬೇಕೆಂದು ತೀರ್ವನವಾಯಿತು. ಇದರಂತೆ ಪಿಳ್ಳೈ ಹಳೆಯ ಕಾರನ್ನು ಖರೀದಿಸಿದ.

ಸುಕುಮಾರನ್ ಅಲಪ್ಪುಳ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಂಬಂಧಿಕನೊಬ್ಬನಿಂದ ಅನಾಥ ಶವವೊಂದನ್ನು ಪಡೆಯಲು ಹೋದ. ಆದರೆ ಆಗ ಕಾಲೇಜಿನಲ್ಲಿ ಶವಗಳ ಕೊರತೆಯಿದ್ದ ಕಾರಣ ಸಿಗಲಿಲ್ಲ. ಮುಂದೇನು ಮಾಡುವುದೆಂದು ರ್ಚಚಿಸಿದಾಗ ಸುಕುಮಾರನ್​ನನ್ನು ಹೋಲುವ ಯಾವುದಾದರೂ ವ್ಯಕ್ತಿಯನ್ನು ಹುಡುಕಿ ಅವನನ್ನೇ ಕೊಲ್ಲೋಣವೆಂದು ಪಿಳ್ಳೈ ಸಲಹೆಯಿತ್ತ. ಇದನ್ನು ನಾವೆಲ್ಲರೂ ಒಪ್ಪಿ ಜನವರಿ 21ರ ರಾತ್ರಿ ಕೊಲೆ ಮಾಡಬೇಕೆಂದೂ, 24ರಂದು ಅಬುಧಾಬಿಗೆ ಮರಳಬೇಕೆಂದೂ ತೀರ್ವನಿಸಿದೆವು. ಸುಕುಮಾರನ್ ಈಥರ್ ಎನ್ನುವ ವಿಷದ್ರಾವಣವನ್ನು ವೈದ್ಯಕೀಯ ಕಾಲೇಜಿನಿಂದ ತಂದು ಅದನ್ನು ಬ್ರಾಂದಿ ಬಾಟಲಿಗೆ ಬೆರೆಸಿ ಪಿಳ್ಳೈಗೆ ಕೊಟ್ಟ. ಆತ ಕ್ಯಾನಿನಲ್ಲಿ 10 ಲೀಟರ್ ಪೆಟ್ರೋಲ್ ಖರೀದಿಸಿ ತನ್ನ ಕಾರಿನಲ್ಲಿಟ್ಟುಕೊಂಡ. ಇದಲ್ಲದೇ ಕೈಗವಸುಗಳನ್ನು ಖರೀದಿಸಿಟ್ಟಿದ್ದ.

ಆ ರಾತ್ರಿ ನಾವು ಎರಡು ಬೇರೆ ಬೇರೆ ಕಾರುಗಳಲ್ಲಿ ಪ್ರಯಾಣಿಸುತ್ತಾ ರಸ್ತೆಯಲ್ಲಿ ಸುಕುಮಾರನ್​ನನ್ನು ಹೋಲುವ ಯಾರಾದರೂ ಸಿಗುತ್ತಾರೆಯೇ ಎಂದು ಹುಡುಕಲಾರಂಭಿಸಿದೆವು. ಯಾರೂ ಸಿಗದಿದ್ದಾಗ ಬೇಸರದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕರುವಟ್ಟಾ ಎನ್ನುವ ಊರಿನ ಹರಿ ಸಿನಿಮಾ ಮಂದಿರದ ಮುಂದೆ ಒಬ್ಬ ವ್ಯಕ್ತಿ ರಸ್ತೆಯಲ್ಲಿ ನಿಂತು ನಮ್ಮ ಕಾರನ್ನು ನಿಲ್ಲಿಸಲು ಕೈಸನ್ನೆ ಮಾಡಿದ. ಪಿಳ್ಳೈ ಕಾರು ನಿಲ್ಲಿಸಿ ಎಲ್ಲಿಗೆ ಹೋಗಬೇಕೆಂದು ಕೇಳಿದಾಗ ಆತ ಅಲೆಪ್ಪೆಗೆ ಡ್ರಾಪ್ ಕೇಳಿದ. ಅವನು ಎತ್ತರ ಮತ್ತು ಗಾತ್ರದಲ್ಲಿ ಸುಕುಮಾರನ್​ನನ್ನೇ ಹೋಲುತ್ತಿದ್ದರಿಂದ ಖುಷಿಯಾದ ಪಿಳ್ಳೈ ಅವನನ್ನು ಕಾರಿನ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡ. ಪೊನ್ನಪ್ಪನ್ ಕಾರನ್ನು ನಡೆಸುತ್ತಿದ್ದ.

ಸ್ವಲ್ಪ ದೂರ ಕ್ರಮಿಸಿದ ನಂತರ ಪಿಳ್ಳೈ ಆಗಂತುಕನಿಗೆ ಮದ್ಯಪಾನ ಮಾಡಲು ಹೇಳಿ ವಿಷ ಬೆರೆಸಿದ್ದ ಬ್ರಾಂದಿಯನ್ನು ಕುಡಿಯಲು ಕೊಟ್ಟ. ಆತ ಹಿಂಜರಿದಾಗ ಪಿಳ್ಳೈ ಬಲವಂತ ಮಾಡಿ ಕುಡಿಸಿದ. ಕೆಲವೇ ನಿಮಿಷಗಳಲ್ಲಿ ಆತ ತೂರಾಡತೊಡಗಿದ. ತಕ್ಷಣವೇ ಪಿಳ್ಳೈ ಟವಲನ್ನು ಅವನ ಕುತ್ತಿಗೆಗೆ ಬಿಗಿದು ಜೋರಾಗಿ ಹಿಂದಕ್ಕೆಳೆದ. ಎರಡೇ ನಿಮಿಷದಲ್ಲಿ ಆತ ಮೃತಪಟ್ಟ. ಆಗ ನಾವು ಕಾರನ್ನು ನಿಲ್ಲಿಸಿ ನಮ್ಮ ಕಾರನ್ನು ಹಿಂಬಾಲಿಸುತ್ತಿದ್ದ ಸುಕುಮಾರನ್​ಗೆ ವಿಷಯ ತಿಳಿಸಿದೆವು. ಆತ ಚೆರಿಯನಾಡುವಿನ ತನ್ನ ಮನೆಗೆ ಬರಲು ತಿಳಿಸಿದ. ಅವನ ಮನೆಗೆ ಮೃತವ್ಯಕ್ತಿಯ ದೇಹವನ್ನು ತೆಗೆದುಕೊಂಡು ಹೋಗಿ ಬಟ್ಟೆಗಳನ್ನು ಕಳಚಿ, ಅದಕ್ಕೆ ಸುಕುಮಾರನ್​ನ ಬಟ್ಟೆಗಳನ್ನು ತೊಡಿಸಿದೆವು. ಮೃತನ ವಾಚು, ಪರ್ಸ, ಮತ್ತು ಉಂಗುರವನ್ನು ಪಿಳ್ಳೈ ಇಟ್ಟುಕೊಂಡ. ನಮ್ಮ ಬೆರಳಚ್ಚುಗಳ ಗುರುತು ಸಿಗಬಾರದೆಂದು ಗ್ಲೌಸ್ ತೊಟ್ಟಿದ್ದೆವು. ಆನಂತರ ಮೃತದೇಹವನ್ನು ಸುಕುಮಾರನ್​ನ ಕಾರಿನ ಡಿಕ್ಕಿಯಲ್ಲಿ ಇಟ್ಟೆವು. ನಂತರ ಎರಡೂ ಕಾರುಗಳನ್ನು ಭತ್ತದ ಗದ್ದೆಯ ಪಕ್ಕದಲ್ಲಿದ್ದ ನಿರ್ಜನ ರಸ್ತೆಯಲ್ಲಿ ನಿಲ್ಲಿಸಿದೆವು.

ಶವವನ್ನು ಸುಕುಮಾರನ್​ನ ಕಾರಿನ ಡಿಕ್ಕಿಯಿಂದ ಹೊರತೆಗೆದು ಅದನ್ನು ಪಿಳ್ಳೈ ಕಾರಿನ ಚಾಲಕನ ಸ್ಥಾನದಲ್ಲಿ ಕೂರಿಸಿದೆವು. ನಂತರ ಮೃತನ ತಲೆಗೆ ಮತ್ತು ಮುಖಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಲ್ಲರೂ ಸೇರಿ ಆ ಕಾರನ್ನು ಭತ್ತದ ಗದ್ದೆಗೆ ನೂಕಿದೆವು. ಕಾರು ಧಗಧಗ ಉರಿಯತೊಡಗಿತು. ಓಡಿ ಬರುವಾಗ ನಮ್ಮಲ್ಲಿ ಕೆಲವರಿಗೆ ಸುಟ್ಟ ಗಾಯಗಳಾದವು. ನಂತರ ಸುಕುಮಾರನ್​ನ ಕಾರಿನಲ್ಲಿ ಅವನ ಮನೆಗೆ ವಾಪಸ್ ಬಂದೆವು. ಅಲ್ಲಿಂದ ನಾನು ನನ್ನೂರಿಗೆ ಹೋದೆ. ಸುಕುಮಾರನ್ ಎಲ್ಲಿಗೋ ಹೊರಟುಹೋದ.’ ಸಾಹುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವನ ಹಣೆ ಮತ್ತು ಮುಂಗೈಗಳ ಮೇಲೆ ಸಾಧಾರಣ ಸುಟ್ಟ ಗಾಯಗಳಿದ್ದುದು ತಿಳಿಯಿತು. ನಂತರ ಪೊನ್ನಪ್ಪನ್​ನನ್ನು ಬಂಧಿಸಲಾಯಿತು. ಅವನಿಗೂ ಸುಟ್ಟಗಾಯಗಳಾಗಿದ್ದವು. ಸಾಹು ತನ್ನ ಗ್ಲೌಸುಗಳನ್ನು ಮತ್ತು ಖಾಲಿಯಾದ ಬ್ರಾಂದಿ ಬಾಟಲನ್ನು ಎಸೆದಿದ್ದ ಸ್ಥಳವನ್ನು ತೋರಿಸಿದಾಗ ಅವನ್ನು ವಶಪಡಿಸಿಕೊಳ್ಳಲಾಯಿತು. ಪಿಳ್ಳೈ ತನ್ನ ಮನೆಯಲ್ಲಿ ಅಡಗಿಸಿಟ್ಟಿದ್ದ ಖಾಲಿ ಪೆಟ್ರೋಲ್ ಕ್ಯಾನ್ ಮತ್ತು ಮೃತನ ಬಟ್ಟೆ, ಪರ್ಸ್, ವಾಚು ಮತ್ತು ಉಂಗುರವನ್ನು ಜಪ್ತು ಮಾಡಲಾಯಿತು. ಕೊಲೆಯಾದ ಮಾರನೆಯ ದಿನವೇ ಸುಕುಮಾರನ್ ಅಲ್ವೇಯಿಯ ಹೋಟೆಲ್ ಒಂದರಲ್ಲಿ ವೇಣುಗೋಪಾಲ್ ಎನ್ನುವ ಹೆಸರಿನಲ್ಲಿ ರೂಂ ಬಾಡಿಗೆಗೆ ಪಡೆದಿದ್ದ ಎಂದು ತಿಳಿದು ಅಲ್ಲಿಗೆ ಪೊಲೀಸರು ಹೋದಾಗ ಆತ ಪರಾರಿಯಾಗಿದ್ದ. ಆತನನ್ನು ಹುಡುಕಲು ಪೊಲೀಸ್ ತಂಡಗಳನ್ನು ಕಳಿಸಲಾಯಿತು. ತನಿಖಾಧಿಕಾರಿಯ ಮುಂದಿದ್ದ ಪ್ರಶ್ನೆಯೆಂದರೆ ಮೃತವ್ಯಕ್ತಿ ಯಾರೆಂಬುದನ್ನು ಪತ್ತೆ ಮಾಡುವುದಾಗಿತ್ತು. ಅಲಪ್ಪುಳ ನಗರ ಪೊಲೀಸ್ ಠಾಣೆಗೆ ಶಾಂತಮ್ಮ ಎನ್ನುವವಳು 33 ವರ್ಷ ವಯಸ್ಸಿನ ತನ್ನ ಪತಿ ಚಾಕೋ ಮೂರು ದಿನಗಳಿಂದ ಕಾಣೆಯಾಗಿದ್ದಾನೆ ಎಂದು ಅದೇ ದಿನ ದೂರಿತ್ತಿದ್ದಳು. ಚಾಕೋ ಅಲಪ್ಪುಳದಲ್ಲಿ ಸಿನಿಮಾ ವಿತರಕನೊಬ್ಬನ ಏಜೆಂಟ್ ಆಗಿದ್ದು, ಆತ ಸಿನಿಮಾ ಮಂದಿರಗಳ ಆ ದಿನದ ಪ್ರದರ್ಶನಗಳ ಕಲೆಕ್ಷನ್ ಬಗ್ಗೆ ತಿಳಿದುಕೊಂಡು ಬರುವ ಕೆಲಸ ಮಾಡುತ್ತಿದ್ದ ಎಂದು ಆಕೆ ತಿಳಿಸಿದ್ದಳು.

ತಮ್ಮ ಮದುವೆಯಾಗಿ 2 ವರ್ಷಗಳಾಗಿದ್ದು ತಾನು ಗರ್ಭಿಣಿಯೆಂದು ಶಾಂತಮ್ಮ ತನಿಖಾಧಿಕಾರಿಗೆ ತಿಳಿಸಿದಳು. ಆಕೆಗೆ ಪಿಳ್ಳೈನಿಂದ ವಶಪಡಿಸಿಕೊಂಡಿದ್ದ ಮೃತವ್ಯಕ್ತಿಯ ವಸ್ತುಗಳನ್ನು ತೋರಿಸಿದಾಗ ಅವು ತನ್ನ ಗಂಡನದೇ ಎಂದು ಗುರುತಿಸಿದಳು. ಮೃತನ ದೇಹವನ್ನು ಗುರುತಿಸಲಾಗದಿದ್ದರೂ ಮೃತದೇಹದ ಮೇಲಿದ್ದ ಅರೆಬರೆ ಸುಟ್ಟ ಒಳಉಡುಪನ್ನು ಗಂಡನದೇ ಎಂದು ಗುರುತಿಸಿದಳು. ಏತನ್ಮಧ್ಯೆ ಮೃತನ ಹೊಟ್ಟೆಯ ವಿಸೆರಾ ದ್ರವದ ಪರೀಕ್ಷೆ ಮಾಡಿದ್ದ ವಿಧಿವಿಜ್ಞಾನ ಲ್ಯಾಬೋರೇಟರಿ ಹೊಟ್ಟೆಯಲ್ಲಿ ಈಥೈಲ್ ಆಲ್ಕೋಹಾಲ್ ವಿಷವಿತ್ತು ಎಂದು ವರದಿ ನೀಡಿತು. ಪೊಲೀಸರ ಮುಂದಿದ್ದ ಸವಾಲೆಂದರೆ ಮೃತವ್ಯಕ್ತಿಯು ಚಾಕೋನೇ ಎಂದು ದೃಢೀಕರಿಸುವುದಾಗಿತ್ತು. ಹೂತಿದ್ದ ಮೃತದೇಹವನ್ನು ಹೊರತೆಗೆಯಲಾಯಿತು. ಡಾ.ಉಮಾದಾತನ್ ಚಾಕೋವಿನ ಫೋಟೋವನ್ನು ಮೃತವ್ಯಕ್ತಿಯ ತಲೆಬುರುಡೆಯ ಜೊತೆ ಸೂಪರ್ ಇಂಪೋಸಿಷನ್ ತಂತ್ರದಿಂದ ಹೋಲಿಕೆ ಮಾಡಿ ಅದು ಅವನದೇ ಎಂದು ತೀರ್ವನಿಸಿದರು. ಇದಲ್ಲದೆ ಮೃತನ ಮನೆಯಲ್ಲಿದ್ದ ಬಾಚಣಿಗೆಗೆ ಅಂಟಿದ್ದ ಕೂದಲುಗಳನ್ನು ಶವದ ಮರ್ವಂಗದ ಮೇಲಿದ್ದ ಕೂದಲುಗಳ ಜತೆ ಹೋಲಿಕೆ ಮಾಡಿ ಶವವು ಚಾಕೋನದೇ ಎಂದು ನಿರ್ದಿಷ್ಟ ಅಭಿಪ್ರಾಯ ನೀಡಿದರು. (ಆ ಸಮಯದಲ್ಲಿ ಡಿಎನ್​ಎ ತಂತ್ರಜ್ಞಾನ ಇನ್ನೂ ಬಂದಿರಲಿಲ್ಲ). ಹರಿ ಸಿನಿಮಾ ಮಂದಿರದ ಮುಂದಿದ್ದ ಬೀಡಿ ಅಂಗಡಿಯವ ಚಾಕೋ ಆ ರಾತ್ರಿ ಕರಿಯ ಅಂಬಾಸಿಡರ್ ಕಾರಿನಲ್ಲಿ ಹೋದದ್ದನ್ನು ತಾನು ನೋಡಿದೆ ಎಂದ. ಎಷ್ಟೇ ಹುಡುಕಿದರೂ ಸುಕುಮಾರನ್ ಪತ್ತೆಯಾಗಲಿಲ್ಲ. ಆತನನ್ನು ಪರಾರಿಯೆಂದು ತೋರಿಸಿ, ಭಾಸ್ಕರ್ ಪಿಳ್ಳೈ, ಪೊನ್ನಪ್ಪನ್, ಸಾಹು ಮತ್ತು ಸುಕುಮಾರನ್ ಪತ್ನಿ ಸರಸಮ್ಮ ಇವರ ಮೇಲೆ ಒಳಸಂಚು, ಅಪಹರಣ, ಕೊಲೆ, ಕಳವು ಮತ್ತು ಸಾಕ್ಷ್ಯನಾಶದ ಆರೋಪದ ಮೇರೆಗೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಈ ಕೊಲೆಗೆ ಯಾರೂ ಪ್ರತ್ಯಕ್ಷದರ್ಶಿಗಳಿರದಿದ್ದ ಕಾರಣ ಸಾಹುನನ್ನು ಮಾಫಿ ಸಾಕ್ಷಿದಾರ (ಅಪೂ›ವರ್) ಎಂದು ಪರಿಗಣಿಸಿ ಅವನ ತಪ್ಪೊಪ್ಪಿಗೆ ಹೇಳಿಕೆಯನ್ನು ಪರಿಗಣಿಸಲಾಯಿತು. ನ್ಯಾಯಾಧೀಶರು ಪಿಳ್ಳೈ ಮತ್ತು ಪೊನ್ನಪ್ಪನ್​ಗೆ ಜೀವಾವಧಿ ಶಿಕ್ಷೆ ನೀಡಿ ಉಳಿದವರನ್ನು ಬಿಡುಗಡೆ ಮಾಡಿದರು. ಕೇರಳ ಉಚ್ಚ ನ್ಯಾಯಾಲಯದಲ್ಲಿ ಆರೋಪಿತರ ಮೇಲ್ಮನವಿ ತಿರಸ್ಕೃತಗೊಂಡಿತು.

ಶಿಕ್ಷೆಯ ಅವಧಿ ಪೂರೈಸಿದ ಪಿಳ್ಳೈ 2018 ರಲ್ಲಿ ಜೈಲಿನಿಂದ ಬಿಡುಗಡೆಗೊಂಡ. ಆಗ ಅವನನ್ನು ಭೇಟಿ ಮಾಡಿದ ಚಾಕೋನ ಪತ್ನಿ ಶಾಂತಮ್ಮ‘ನಿನ್ನನ್ನು ನಾನು ಕ್ಷಮಿಸಿದ್ದೇನೆ’ ಎಂದಾಗ ಪಿಳ್ಳೈ ಗಳಗಳನೆ ಅತ್ತು ‘ನನ್ನ ಎದೆಯ ಭಾರ ಇಂದು ಕಡಿಮೆಯಾಯಿತು’ ಎಂದ. ಇಲ್ಲಿಯವರೆವಿಗೂ ಸುಕುಮಾರನ್ ಪೊಲೀಸರ ಕೈಗೆ ಸಿಕ್ಕಿಲ್ಲ. 2010 ರಲ್ಲಿ ತನ್ನ ಮಗನ ಲಗ್ನಕ್ಕೆ ಆತ ಬರುತ್ತಾನೆಂದು ಪೊಲೀಸರು ಬಲೆ ಬೀಸಿದ್ದರು. ಆತ ಬರಲಿಲ್ಲ. ಆತ ಕೊಲ್ಲಿ ರಾಷ್ಟ್ರದಲ್ಲೆಲ್ಲೋ ತಲೆಮರೆಸಿಕೊಂಡಿದ್ದಾನೆಂಬುದು ಪೊಲೀಸರ ನಂಬಿಕೆ. ಒಂದು ವೇಳೆ ಜೀವಂತವಿದ್ದರೆ ಈಗ ಅವನಿಗೆ ಸುಮಾರು 71 ವರ್ಷಗಳಾಗಿರಬಹುದು. 37 ವರ್ಷಗಳಿಂದ ಪರಾರಿಯಾಗಿರುವ ಸುಕುಮಾರನ್ ಬಗ್ಗೆ ಎರಡು ಮಲೆಯಾಳಿ ಸಿನಿಮಾಗಳು ಬಿಡುಗಡೆಯಾಗಿದ್ದು ಇಂದಿಗೂ ಆತ ಕೇರಳಿಯರ ಮನದಲ್ಲಿ ಆಸಕ್ತಿ ಕೆರಳಿಸುತ್ತಿದ್ದಾನೆ.

‘ಎಲ್ಲ ರೀತಿಯ ನೀಚಕೃತ್ಯಗಳನ್ನು ಮಾಡುವ ಸಾಮರ್ಥ್ಯ ಹೊಂದಿರುವವರು ಮಾನವರೇ’ ಎಂದಿದ್ದಾನೆ ಕಾದಂಬರಿಕಾರ ಜೋಸೆಫ್ ಕಾನ್ರಾಡ್. ಅಮಾಯಕನೊಬ್ಬನನ್ನು ವೃಥಾ ಕೊಂದು ಇನ್ನೂ ಸಿಕ್ಕಿಬೀಳದಿರುವ ಸುಕುಮಾರನ್ ಇದಕ್ಕೊಂದು ಉತ್ತಮ ಉದಾಹರಣೆಯಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)