| ಶಿವಾನಂದ ತಗಡೂರು
ಇಸ್ರೇಲ್: ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಶಾಂತಿ ಒಪ್ಪಂದದ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಹಮಾಸ್ ಬೆಂಬಲಿತ ಉಗ್ರರು ಜೆರುಸಲೇಂನಲ್ಲಿ ನಡೆಸಿದ ಗುಂಡಿನ ದಾಳಿಗೆ ಆರು ಜನರು ಬಲಿಯಾಗಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಪ್ಯಾಲೆಸ್ತೀನ್ ಪರವಾಗಿರುವ ಉಗ್ರರಿಬ್ಬರು ಜೆರುಸಲೇಂನ ರಮೋದ್ ಜಂಕ್ಷನ್ನಲ್ಲಿ ಎರಡು ಬಸ್ಗಳ ಮೇಲೆ ಗುಂಡಿನ ಮಳೆಗರೆದಿದ್ದರಿಂದ ಈ ಸಾವು-ನೋವು ಸಂಭವಿಸಿದೆ. ಬಸ್ನಲ್ಲಿದ್ದ ಪ್ರಯಾಣಿಕರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವಿಗೀಡಾದರು. ತೀವ್ರವಾಗಿ ಗಾಯಗೊಂಡಿರುವ 21 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿಯೇ ಉಗ್ರರನ್ನು ಸುತ್ತುವರಿದ ಇಸ್ರೇಲ್ ಮಿಲಿಟರಿ ಪಡೆ ಸ್ಥಳದಲ್ಲಿಯೇ ಹೊಡೆದುರುಳಿಸಿದೆ ಎಂದು ಇಸ್ರೇಲ್ ರಾಯಭಾರಿ ಕಚೇರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಬ್ಬರೂ ಉಗ್ರರು ಪ್ಯಾಲೆಸ್ತೀನ್ ಪರವಾಗಿ ಬಲವಾದ ನಿಲುವು ಹೊಂದಿದವರಾಗಿದ್ದು, ಇಸ್ರೇಲ್ನಲ್ಲಿಯೇ ನೆಲೆಸಿದ್ದವರು ಎಂದು ಮೂಲಗಳು ತಿಳಿಸಿವೆ.
ಇರಾನ್ಗೆ ಇಸ್ರೇಲ್ ಎಚ್ಚರಿಕೆ: ಈ ಘಟನೆಯನ್ನು ಕಟುವಾಗಿ ಖಂಡಿಸಿರುವ ಇಸ್ರೇಲ್ ಸರ್ಕಾರ, ಭಯೋತ್ಪಾದಕರ ಹುಟ್ಟಡಗಿಸುವ ತನಕ ವಿರಮಿಸುವುದಿಲ್ಲ ಎಂದು ಗುಡುಗಿದೆ. ಈ ದುಷ್ಕೃತ್ಯಗಳ ಹಿಂದೆ ಇರಾನ್ ಅಡಗಿ ಕುಳಿತಿದೆ. ಇಂದಿನ ಘಟನೆಯ ಹಿಂದೆಯೂ ಹಮಾಸ್ಗೆ ಕುಮ್ಮಕ್ಕು ನೀಡಿರುವುದರಲ್ಲಿ ಇರಾನ್ ಕರಿನೆರಳು ಇದೆ ಎಂದು ಇಸ್ರೇಲ್ ಆಪಾದಿಸಿದೆ.
ತಕ್ಕ ಉತ್ತರ ಕೊಡುವ ಕಾಲ ಸನ್ನಿಹಿತ: ಇಸ್ರೇಲ್ ಎಂದೂ ಏಕಪಕ್ಷೀಯವಾಗಿ ಯುದ್ಧವನ್ನು ಬಯಸುವುದಿಲ್ಲ. ಅದರೆ ನಮ್ಮ ತಂಟೆಗೆ ಬಂದಾಗ ನಾವು ಸುಮ್ಮನಿರಲು ಸಾಧ್ಯವೇ ಇಲ್ಲ. ಇತ್ತೀಚಿನ ಘಟನೆಗಳ ಬಗ್ಗೆ ಪ್ಯಾಲಿಸ್ತೀನ್ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದೆ. 60 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ ಎಂದು ಬಿಂಬಿಸಿದೆ. ಆದರೆ ವಾಸ್ತವ ಸಂಗತಿ ಬೇರೆಯೇ ಇದೆ. 15 ಸಾವಿರದಷ್ಟು ಸಾವುಗಳಾಗಿದೆ ಎನ್ನುವುದು ಅಧಿಕೃತ ಮಾಹಿತಿ. ಪರಸ್ಪರ ಮಾತುಕತೆ ಮೂಲಕ ಶಾಂತಿ ಮರುಸ್ಥಾಪನೆ ಪ್ರಯತ್ನಕ್ಕೆ ಇಸ್ರೇಲ್ ಮುಂದಾಗಿದ್ದರೂ ಇರಾನ್ ಇದಕ್ಕೆ ಅಡ್ಡಿಯಾಗಿದೆ. ಪ್ಯಾಲಿಸ್ತೀನ್ನ ಮುಂದಿಟ್ಟುಕೊಂಡು ಹಮಾಸ್ ಉಗ್ರರ ಎತ್ತಿಕಟ್ಟುತ್ತಿದೆ. ಇದನ್ನು ಇಸ್ರೇಲ್ ಸಹಿಸುವುದಿಲ್ಲ, ಇದಕ್ಕೆ ತಕ್ಕ ಉತ್ತರ ಕೊಡುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಇಸ್ರೇಲ್ ವಿದೇಶಾಂಗ ಕಾರ್ಯದರ್ಶಿ ಈಡನ್ ಬಾರ್ಟಾಲ್ ತಿಳಿಸಿದ್ದಾರೆ.