ಅಂಕಣ

ದೇವಸ್ಥಾನಗಳು ಪ್ರಬಲವಾದ ಶಕ್ತಿಯ ಕೇಂದ್ರಗಳು

ಮಣಿಕಂಠ ಪಾ ಹಿರೇಮಠ
ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ
(mantanavijayavani@gmail.com)
ಭೌತಿಕ ಜಗತ್ತಿನಲ್ಲಿ ಪ್ರತಿಯೊಂದು ವ್ಯವಹಾರವೂ ಹೀಗಿರುತ್ತದೆ: ‘ನನ್ನ ಲಾಭವೇ ನಿಮ್ಮ ನಷ್ಟ, ನನ್ನ ನಷ್ಟವೇ ನಿಮ್ಮ ಲಾಭ’. ನೀವು ನಿರ್ದಿಷ್ಟ ರೀತಿಯಲ್ಲಿ ಇಲ್ಲದಿದ್ದರೆ, ನಿಮ್ಮ ಜೀವನದ ಪ್ರತಿಯೊಂದು ವ್ಯವಹಾರದಲ್ಲೂ ಘರ್ಷಣೆಯ ಸಾಧ್ಯತೆ ಇರುತ್ತದೆ. ನೀವು ಹೇಳುವ ಪ್ರತಿಯೊಂದು ಮಾತಿಗೂ ಮತ್ತು ನೀವು ಎಲ್ಲಿಯಾದರೂ ವಿನಿಮಯ ಮಾಡಿಕೊಳ್ಳುವ ಪ್ರತಿಯೊಂದು ಸಣ್ಣ ವಿಷಯಕ್ಕೂ, ನೀವು ಯಾರೊಂದಿಗಾದರೂ ಜಗಳವಾಡಬಹುದು. ಏಕೆಂದರೆ ಎಲ್ಲದರಲ್ಲೂ, ಯಾರಾದರೂ ಏನನ್ನಾದರೂ ಪಡೆಯಬೇಕು ಮತ್ತು ಬೇರೆಯವರು ಏನನ್ನಾದರೂ ಕಳೆದುಕೊಳ್ಳಬೇಕು. ಇದೇ ಭೌತಿಕ ಅಸ್ತಿತ್ವದ ಸ್ವಭಾವ. ನಿಮ್ಮೊಳಗೆ ಏನಾದರೂ ಅಮೂಲ್ಯವಾದುದನ್ನು ನೀವು ಕಂಡುಕೊಳ್ಳದ ಹೊರತು, ನೀವು ಪ್ರತಿಯೊಂದು ಹಂತದಲ್ಲೂ ಜಗಳವಾಡುತ್ತೀರಿ. ಉದಾಹರಣೆಗೆ, ರಸ್ತೆಗಳಲ್ಲಿ ವಾಹನ ಚಲಾಯಿಸುವ ಜನರೆಲ್ಲರೂ ಒತ್ತಡದಲ್ಲಿರುತ್ತಾರೆ. ಅವರು ಒಬ್ಬರ ಮೇಲೆ ಒಬ್ಬರು ಬೀಳಲು ಸಿದ್ಧರಾಗಿರುತ್ತಾರೆ. ನೀವು ರಸ್ತೆಯ ಮಾಲೀಕರಲ್ಲ, ಆದರೆ ಅವರು ನಿಮ್ಮ ಬದಿಗೆ ಬಂದರೆ ಅಥವಾ ನೀವು ಅವರ ಬದಿಗೆ ಹೋದರೆ, ಏನಾದರೂ ಆಗುತ್ತದೆ. ಜನರು ಸಂಪೂರ್ಣವಾಗಿ ತಾಳ್ಮೆ ಕಳೆದುಕೊಳ್ಳುವುದನ್ನು ನಾನು ನೋಡಿದ್ದೇನೆ.

ಪ್ರತಿಯೊಂದು ವ್ಯವಹಾರವೂ ಒಂದು ಘರ್ಷಣೆ. ಆದ್ದರಿಂದ ನಿಮ್ಮೊಳಗೆ ನೀವು ನಿರ್ದಿಷ್ಟ ರೀತಿಯಲ್ಲಿ ಇರಬೇಕು. ಇದಕ್ಕಾಗಿಯೇ ಭಾರತದಲ್ಲಿ, ಪರಂಪರೆಯ ಪ್ರಕಾರ ಪ್ರತಿದಿನ ಬೆಳಿಗ್ಗೆ ನೀವು ಕೆಲಸಕ್ಕೆ ಅಥವಾ ಬೇರೆಲ್ಲಿಗಾದರೂ ಹೋಗುವ ಮುಂಚೆ, ಮೊದಲು ಸ್ನಾನ ಮಾಡಿ, ದೇವಸ್ಥಾನದಲ್ಲಿ ಸ್ವಲ್ಪ ಸಮಯ ಕುಳಿತು ನಂತರವಷ್ಟೇ ಹೊರಗಿನ ಜಗತ್ತಿಗೆ ಕಾಲಿಡಬೇಕಿತ್ತು. ಏಕೆಂದರೆ ದೇವಸ್ಥಾನವು ‘ಸಾರ್ವಜನಿಕ ಬ್ಯಾಟರಿ ಚಾರ್ಜಿಂಗ್’ ಸ್ಥಳವಿದ್ದಂತೆ. ನೀವು ಪ್ರತಿದಿನ ದೇವಸ್ಥಾನಕ್ಕೆ ಹೋಗಿ, ನಿಮ್ಮ ಬ್ಯಾಟರಿಗಳನ್ನು ಚಾರ್ಜ್ ಮಾಡುವುದರಿಂದ ದಿನವಿಡೀ ಸುಗಮವಾಗಿ ಸಾಗುವ ಮೂಲಕ ಹಿಂತಿರುಗುತ್ತೀರಿ. ಭಾರತದಲ್ಲಿನ ದೇವಸ್ಥಾನಗಳು ಎಂದಿಗೂ ಪೂಜೆ ಅಥವಾ ಪ್ರಾರ್ಥನೆಯ ಸ್ಥಳವಾಗಿರಲಿಲ್ಲ. ಆದರೂ ನಿಧಾನವಾಗಿ, ಜನರು ಬೇರೇನು ಮಾಡಬೇಕೆಂದು ತಿಳಿಯದೆ ದೇವಸ್ಥಾನಕ್ಕೆ ಹೋಗಿ ಪೂಜೆ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ. ದೇವಸ್ಥಾನವು ಪ್ರಬಲ ಶಕ್ತಿ ಕೇಂದ್ರವಾಗಿರುವುದರಿಂದ ನೀವು ಅಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಬೇಕೆಂದು ಪಾರಂಪರಿಕವಾಗಿ ಹೇಳಲಾಗುತ್ತಿತ್ತು.

ಆಗಮ ಶಾಸ್ತ್ರವು ದೇವಸ್ಥಾನ ನಿರ್ವಣದ ಸಂಪೂರ್ಣ ವಿಜ್ಞಾನ. ಐದು ಮೂಲ ಅಂಶಗಳಾದ ವಿಗ್ರಹದ ಆಕಾರ ಮತ್ತು ಗಾತ್ರ, ವಿಗ್ರಹವು ಧರಿಸುವ ಮುದ್ರೆಗಳು, ಇದನ್ನು ಪ್ರತಿಷ್ಠಾಪಿಸಲು ನೀವು ಬಳಸುವ ಮಂತ್ರಗಳು, ಗರ್ಭಗುಡಿಯ ಪರಿಮಾಣ ಮತ್ತು ಆಕಾರ ಹಾಗೂ ಹೊರಗಿನ ಪರಿಕ್ರಮಗಳನ್ನು ಸರಿಯಾಗಿ ಹೊಂದಿಸಿದರೆ, ಅದು ಶಕ್ತಿಯ ಅತ್ಯಂತ ಪ್ರಬಲ ವಲಯವಾಗುತ್ತದೆ. ಜನರು ಇಂದು ದೇವಸ್ಥಾನಗಳನ್ನು ಶಾಪಿಂಗ್ ಕಾಂಪ್ಲೆಕ್ಸ್​ಗಳಂತೆ ನಿರ್ವಿುಸುತ್ತಿದ್ದಾರೆ ಮತ್ತು ಅದೇ ಉದ್ದೇಶಕ್ಕಾಗಿ ಇದ್ದರೂ ಇರಬಹುದು. ದೇವಸ್ಥಾನಗಳು ಕ್ಲಬ್ ಅಥವಾ ಸಾಮಾಜಿಕ ಸ್ಥಳದಂತೆ ಆಗಿವೆ. ನಾನು ದೇವಸ್ಥಾನಗಳ ಬಗ್ಗೆ ಮಾತನಾಡುವಾಗ, ಪ್ರಾಚೀನ ದೇವಸ್ಥಾನಗಳನ್ನು ಹೇಗೆ ನಿರ್ವಿುಸಲಾಗಿತ್ತು ಎಂಬುದರ ಬಗ್ಗೆ ಮಾತನಾಡುತ್ತಿದ್ದೇನೆ. ತನ್ನ ಮೂಲ ಸ್ವರೂಪದಲ್ಲಿ ದೇವಸ್ಥಾನವು ಅತ್ಯಂತ ಪ್ರಬಲ ಶಕ್ತಿ ಕೇಂದ್ರವಾಗಿದ್ದು ಜನರಿಗೆ ಜೀವನದ ಸಂಪೂರ್ಣ ವಿಭಿನ್ನ ಆಯಾಮಕ್ಕೆ ಬೃಹತ್ ಪ್ರವೇಶದಂತಿದೆ.

ಭಾರತ ದೇಶದಲ್ಲಿ, ಪ್ರಾಚೀನ ಕಾಲದಲ್ಲಿ, ಇನ್ನಿತರ ಯಾರಿಗೂ ಅಲ್ಲದೆ ಕೇವಲ ಶಿವನಿಗೆ ಮಾತ್ರ ದೇವಸ್ಥಾನಗಳನ್ನು ನಿರ್ವಿುಸಲಾಗುತ್ತಿತ್ತು. ತ್ವರಿತ ಯೋಗಕ್ಷೇಮದತ್ತ ಜನರು ಗಮನ ಹರಿಸಲು ಪ್ರಾರಂಭಿಸಿದ ನಂತರವಷ್ಟೇ ಇತರ ದೇವಸ್ಥಾನಗಳು ನಿರ್ಮಾಣಗೊಂಡವು. ದೇವಸ್ಥಾನ ನಿರ್ವಣದ ವಿಜ್ಞಾನವನ್ನು ಬಳಸಿ, ಜನರು ಆರೋಗ್ಯ, ಸಂಪತ್ತು, ಯೋಗಕ್ಷೇಮ ಮುಂತಾದ ಅನೇಕ ಆಯಾಮಗಳಲ್ಲಿ ತಮ್ಮ ಪ್ರಯೋಜನಕ್ಕಾಗಿ ಬಳಸಬಹುದಾದ ಇತರ ವಿವಿಧ ರೂಪಗಳನ್ನು ಸೃಷ್ಟಿಸಲು ಪ್ರಾರಂಭಿಸಿದರು. ನಿಮಗೆ ಹಣ ಬೇಕಾದರೆ, ನೀವು ನಿರ್ದಿಷ್ಟ ರೀತಿಯ ಆಯಾಮದಲ್ಲಿ ಸಹಾಯ ಮಾಡುವ ಒಂದು ವಿಧದ ರೂಪವನ್ನು ಸೃಷ್ಟಿಸುತ್ತೀರಿ; ಅಥವಾ ನೀವು ಭಯದಿಂದ ಕೂಡಿದ್ದರೆ, ಮತ್ತೊಂದು ವಿಧದ ರೂಪವನ್ನು ಸೃಷ್ಟಿಸುತ್ತೀರಿ. ಜನರು ವಿಭಿನ್ನ ರೀತಿಯ ಶಕ್ತಿಗಳನ್ನು ಮತ್ತು ವಿಭಿನ್ನ ರೀತಿಯ ದೇವತೆಗಳನ್ನು ಸೃಷ್ಟಿಸಿದರು. ದುರದೃಷ್ಟವಶಾತ್, ಇಂದು ನಾವು ಅನೇಕ ಪ್ರಾಚೀನ ದೇವಸ್ಥಾನಗಳನ್ನು ಹೇಗೆ ನಿರ್ವಹಿಸಬೇಕೆಂದು ಅರಿಯದೆ ನಾಶಪಡಿಸಿದ್ದೇವೆ. ಇದು ನಶಿಸದಂತೆ ಜಗತ್ತಿನಲ್ಲಿ ಲಭ್ಯವಿರುವುದು ಬಹಳ ಮುಖ್ಯ.

ಮಾನವ ಗ್ರಹಿಕೆಯ ಮೂಲ ಸ್ವಭಾವ ಹೇಗಿದೆಯೆಂದರೆ, ಜನರು ಪ್ರಸ್ತುತ ಯಾವುದರಲ್ಲಿ ತೊಡಗಿಸಿಕೊಂಡಿರುತ್ತಾರೋ, ಅವರ ಅನುಭವದಲ್ಲಿ ಅದಷ್ಟೇ ಸತ್ಯವಾಗಿರುತ್ತದೆ. ಹೆಚ್ಚಿನ ಜನರು ಇದೀಗ ಪಂಚೇಂದ್ರಿಯಗಳೊಂದಿಗೆ ತೊಡಗಿಸಿಕೊಂಡಿದ್ದಾರೆ, ಹಾಗಾಗಿ ಬೇರೇನೂ ಅಲ್ಲದಂತೆ, ಅದು ಮಾತ್ರ ಸತ್ಯವೆಂಬಂತೆ ತೋರುತ್ತದೆ. ಇಂದ್ರಿಯಗಳು ಭೌತಿಕವಾದುದನ್ನು ಮಾತ್ರ ಗ್ರಹಿಸಬಲ್ಲವು, ಮತ್ತು ನಿಮ್ಮ ಗ್ರಹಿಕೆಯು ಪಂಚೇಂದ್ರಿಯಗಳಿಗೆ ಸೀಮಿತವಾಗಿರುವುದರಿಂದ, ನೀವು ಜೀವನವೆಂದು ತಿಳಿದಿರುವುದೆಲ್ಲವೂ ಕೇವಲ ಭೌತಿಕತೆ, ಅಂದರೆ ನಿಮ್ಮ ದೇಹ, ನಿಮ್ಮ ಮನಸ್ಸು, ನಿಮ್ಮ ಭಾವನೆ ಮತ್ತು ನಿಮ್ಮ ಜೀವ ಶಕ್ತಿಗಳು ಭೌತಿಕ. ನೀವು ಭೌತಿಕ ಅಸ್ತಿತ್ವವನ್ನು ಒಂದು ವಸ್ತ್ರದಂತೆ, ಬಟ್ಟೆಯ ತುಂಡಿನಂತೆ ನೋಡಿದರೆ- ನೀವು ಭೌತಿಕ ವಸ್ತ್ರದ ಮೇಲೆ ಜೀವಿಸುತ್ತಿರುವುದಾಗಿ ಭಾವಿಸೋಣ. ನೀವು ಈ ವಸ್ತ್ರದ ಮೇಲೆ ನಡೆಯುತ್ತಿದ್ದೀರಿ, ಮತ್ತು ನೀವು ಯಾವುದರ ಮೇಲೆ ನಡೆಯುತ್ತಿದ್ದೀರೋ ಅದೆಲ್ಲವೂ ಸತ್ಯ. ಆದರೆ ನೀವು ಮೇಲೆ ನೋಡಿದಾಗ, ಮೇಲೆ ವಿಶಾಲವಾದ ಶೂನ್ಯ ಇರುವಂತೆ ತೋರುತ್ತದೆ, ಮತ್ತು ಅಲ್ಲಿಯೂ ಸಹ ನೀವು ಕೇವಲ ಭೌತಿಕವಾದುದನ್ನು ಮಾತ್ರ ಗುರುತಿಸುತ್ತೀರಿ. ನೀವು ನಕ್ಷತ್ರ ಅಥವಾ ಸೂರ್ಯ ಅಥವಾ ಚಂದ್ರನನ್ನು ನೋಡುತ್ತೀರಿ- ಇದೆಲ್ಲವೂ ಭೌತಿಕ. ಭೌತಿಕವಲ್ಲದ್ದನ್ನು ನೀವು ಗ್ರಹಿಸುವುದಿಲ್ಲ.

ನೀವು ದೇವಸ್ಥಾನ ಎಂದು ಕರೆಯುವುದು ವಸ್ತ್ರದಲ್ಲಿ ರಂಧ್ರವನ್ನು ಮಾಡಿದಂತೆ, ಭೌತಿಕವಾದುದು ತೆಳುವಾಗುತ್ತ ಭೌತಿಕವನ್ನು ಮೀರಿದುದೇನೋ ನಿಮಗೆ ಗೋಚರವಾಗುವ ಆಯಾಮವನ್ನು ಸೃಷ್ಟಿಸುವಂತಿದೆ. ಭೌತಿಕ ಆಯಾಮದ ಅಭಿವ್ಯಕ್ತಿಯನ್ನು ಕ್ಷೀಣಗೊಳಿಸುವ ವಿಜ್ಞಾನವೇ ಪ್ರತಿಷ್ಠಾಪನೆಯ ವಿಜ್ಞಾನ, ನೀವು ಮನಃಪೂರ್ವಕರಾಗಿದ್ದರೆ ಇದರಿಂದ ಭೌತಿಕವನ್ನು ಮೀರಿದ ಆಯಾಮವು ನಿಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ಸಾದೃಶ್ಯವನ್ನು ಮುಂದುವರಿಸುವುದಾದರೆ, ದೇವಸ್ಥಾನವು ಭೌತಿಕ ವಸ್ತ್ರದಲ್ಲಿನ ರಂಧ್ರದಂತಿದ್ದು ಅಲ್ಲಿ ನೀವು ಸುಲಭವಾಗಿ ಪ್ರವೇಶಿಸಿ ಅದನ್ನು ಮೀರಿ ಹೋಗಬಹುದು.