ಅಂಕಣ

ಲಾಕ್​ಡೌನ್ ಬಗ್ಗೆ ಮುಂಚಿತವಾಗಿ ತಿಳಿಸಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ರಾಜ್ಯದಲ್ಲಿ ಕರೊನಾ ಸೋಂಕು ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಆತಂಕವನ್ನು ಸೃಷ್ಟಿಸುತ್ತಿದೆ. ಸೋಂಕು ಹತೋಟಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದೆ. ಸೋಂಕಿನ ನಿಯಂತ್ರಣಕ್ಕಾಗಿ ಅನಿವಾರ್ಯವಾಗಿ ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಂತರ ಮತ್ತೊಮ್ಮೆ ಲಾಕ್​ಡೌನ್ ಘೊಷಿಸಬಹುದು ಎಂಬ ಗುಮಾನಿ ಹುಟ್ಟಿದೆ. ಇದಕ್ಕೆ ಪೂರಕವಾಗಿ ಸರ್ಕಾರದ ಕೆಲ ಸಚಿವರು ಕೂಡ ಹಾಗೆಯೇ ಹೇಳಿಕೆ ನೀಡುತ್ತಿದ್ದಾರೆ.

ಸರ್ಕಾರ ಮತ್ತೊಮ್ಮೆ ಲಾಕ್​ಡೌನ್ ಮಾಡುವುದೇ ನಿಶ್ಚಿತ ಎಂಬುದಿದ್ದರೆ ದಯಮಾಡಿ ರಾಜ್ಯದ ಜನತೆಗೆ ಎರಡು-ಮೂರು ದಿನ ಮುಂಚಿತವಾಗಿಯೇ ತಿಳಿಸುವುದು ಒಳಿತು. ಯಾಕೆಂದರೆ ಕೇಂದ್ರ ಸರ್ಕಾರ ಮಾರ್ಚ್ 25ರಿಂದ ಏಕಾಏಕಿ ಲಾಕ್​ಡೌನ್ 1.0 ಘೊಷಣೆ ಮಾಡಿದ್ದರ ಪರಿಣಾಮವಾಗಿ ಕೋಟ್ಯಂತರ ಜನರು ಬೀದಿಗೆ ಬಿದ್ದು ಅವರ ಬದುಕು ಮೇಲೇಳಲಾರದಂಥ ಸ್ಥಿತಿಗೆ ತಲುಪಿತು. ಇವತ್ತಿಗೂ ಜನಸಾಮಾನ್ಯರು ಚೇತರಿಸಿಕೊಳ್ಳಲಾಗುತ್ತಿಲ್ಲ.

ರಾಜ್ಯ ಸರ್ಕಾರ ಏಕಾಏಕಿ ಮತ್ತೊಮ್ಮೆ ಲಾಕ್​ಡೌನ್ ಘೊಷಿಸಿದರೆ ಜನಸಾಮಾನ್ಯರು ಕಂಗಾಲಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಮತ್ತೊಮ್ಮೆ ಲಾಕ್​ಡೌನ್ ಮಾಡುವುದಿದ್ದರೆ ಸರ್ಕಾರ ಜನತೆಗೆ ಮುಂಚಿತವಾಗಿ ತಿಳಿಸಬೇಕು.

| ಮುರುಗೇಶ ಡಿ ದಾವಣಗೆರೆ