ಅಂಕಣ

ಶಾಲೆ ಆರಂಭಕ್ಕೆ ಸೂಕ್ತ ನಿರ್ಣಯ ಕೈಗೊಳ್ಳಿ: ಜನಮತ

Webdesk - Ravikanth

ಕೋವಿಡ್ ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಗ್ರಾಮೀಣ ಪ್ರದೇಶಗಳ ಲಕ್ಷಗಟ್ಟಲೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ. ಹತ್ತು ಹಲವು ಸಮಸ್ಯೆಗಳ ಬಲೆಯಲ್ಲಿ ಸಿಲುಕಿ ಹಳ್ಳಿಗಾಡಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತ ಬಂದಿದ್ದಾರೆ. ಈ ಕರೊನಾ ಮಹಾಮಾರಿ ಸಮಾಜದ ಹಲವು ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೂ ಶಿಕ್ಷಣ ಕ್ಷೇತ್ರದ ಮೇಲೆ ಪ್ರತಿನಿತ್ಯ ಬೀರುತ್ತಿರುವ ಪರಿಣಾಮ ಮಾತ್ರ ಅಪಾರ. ಶಿಕ್ಷಣದ ಮೂಲ ಉದ್ದೇಶ ಸಾಮಾಜೀಕರಣ. ಅಂದರೆ ಮಕ್ಕಳೆಲ್ಲರೂ ಒಟ್ಟಿಗೆ ಕುಳಿತು ಆಟ-ಪಾಠಗಳಲ್ಲಿ ತೊಡಗಿಸಿಕೊಂಡು ಗುರು-ಶಿಷ್ಯರೆಲ್ಲರೂ ಮುಖಾಮುಖಿಯಾಗಿ ಕಲಿಕೆಯಲ್ಲಿ ಸಂತೋಷದಾಯಕವಾಗಿ ತೊಡಗಿಸಿಕೊಂಡಾಗ ಆ ಕಲಿಕೆ ಹೆಚ್ಚು ಮನದಟ್ಟು ಹಾಗೂ ಸದೃಢವಾಗುತ್ತದೆ.

ಆದರೆ ಕಳೆದ ಒಂದೂವರೆ ವರ್ಷದಿಂದ ನಮ್ಮ ಶಾಲಾ ಮಕ್ಕಳು ಭೌತಿಕ ತರಗತಿಗಳಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ನಗರ ಪ್ರದೇಶದಲ್ಲಿನ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಆನ್​ಲೈನ್ ಶಿಕ್ಷಣ ನಡೆಯುತ್ತಿದ್ದು, ಇದರಿಂದ ಆ ಮಕ್ಕಳು ಶಿಕ್ಷಣದ ಕಡೆಗೆ ಕೊಂಚ ಮುಖ ಮಾಡಿದ್ದರೂ ಎಲ್ಲ ಮಕ್ಕಳು ಸತ್ವಪೂರ್ಣ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ಭೌತಿಕ ಹಾಗೂ ಆನ್​ಲೈನ್ ಕಲಿಕೆಯಿಂದ ದೂರವಿರುವುದರಿಂದ ಕಲಿಕೆ ಕುಂಠಿತವಾಗಿದೆ. ಹೀಗಾಗಿ ಸರ್ಕಾರ ಕರೊನಾ ಕಡಿಮೆ ಹಾಗೂ ಕರೊನಾ ಇಲ್ಲದಿರುವ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭೌತಿಕ ತರಗತಿಗಳನ್ನು ಆರಂಭಿಸಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.

| ಹರಳಹಳ್ಳಿ ಪುಟ್ಟರಾಜು ಪಾಂಡವಪುರ