ಅಂಕಣ

ಸುರಗೀಶ್ವರ ಶ್ರೀಗಳ ಸಹಸ್ರ ಚಂದ್ರದರ್ಶನ ; ಶ್ರೀ ಮಂಜುನಾಥ ದೇವರ ನೂತನ ಗುರುಪಟ್ಟಾಧಿಕಾರ

ಮನುಷ್ಯನ ಆತ್ಮದರ್ಶನಕ್ಕೆ ಬೇಕಾದ ಅಂತಮುಖ ಶೋಧನೆಗಳನ್ನು ಮಾಡಲು ಬೇಕಾದ ತತ್ವಜ್ಞಾನವನ್ನು ಜಗತ್ತಿಗೆ ನೀಡಿದ ಏಕೈಕ ದೇಶ ಭಾರತ. ಈ ನಿಟ್ಟಿನಲ್ಲಿ ಹಲವು ತತ್ವ-ದರ್ಶನಗಳಿರುವ ಭಾರತದಲ್ಲಿ ವೀರಶೈವ ಸಿದ್ಧಾಂತವು ಅತ್ಯಂತ ಸನಾತನವಾದುದು. ಕರ್ನಾಟಕವನ್ನು ಹೊರತುಪಡಿಸಿ ಅತಿ ಹೆಚ್ಚು ವೀರಶೈವರಿರುವುದು ಮಹಾರಾಷ್ಟ್ರದಲ್ಲಿ. ಅಲ್ಲಿನ ಕೊಲ್ಲಾಪುರ ಜಿಲ್ಲೆಯ ವೀರಶೈವ ಮಠಗಳಲ್ಲೊಂದು ಸುಕ್ಷೇತ್ರ ನೂಲ ಶ್ರೀಸುರಗೀಶ್ವರ ಸಂಸ್ಥಾನಮಠ. ಇದಕ್ಕೆ ಸುದೀರ್ಘ ಇತಿಹಾಸವಿದೆ.

ಒಂಬನೇ ಶತಮಾನದಲ್ಲಿ ಹಿರಣ್ಯಕೇಶಿ ನದಿದಂಡೆಯಲ್ಲಿ ಮಹಾತಪಸ್ವಿ ಶ್ರೀ ಸುರಗೀಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಮಠದ ಗುರುಪರಂಪರೆಯಲ್ಲಿ ಬಂದ ಶ್ರೀ ನೂಲಿಯ ಊರ್ಧ್ವಚಂದ್ರಯ್ಯ ಸ್ವಾಮಿಗಳಿಂದಾಗಿ ಈ ಗ್ರಾಮಕ್ಕೆ ನೂಲ ಎಂಬ ಹೆಸರು ಬಂದಿದೆ. ಶ್ರೀ ರಂಭಾಪುರಿ ಪೀಠ ಪರಂಪರೆಗೆ ಸೇರಿದ ನೂಲ ಸಂಸ್ಥಾನ ಮಠಕ್ಕೆ ತಪಸ್ವಿಗಳು, ಯೋಗಿಗಳು ಸ್ವಾಮೀಜಿಗಳಾಗಿದ್ದಾರೆ. ಸದ್ಯ ಇರುವ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು 12ನೇ ಪಟ್ಟಾಧ್ಯಕ್ಷರಾಗಿದ್ದು, ಸಹಸ್ರ ಚಂದ್ರ ದರ್ಶನ ಮಾಡಿರುವ ಮಹಾತ್ಮರು.

1938ರಲ್ಲಿ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಅಪ್ಪಯ್ಯ ಲಿಂಗಯ್ಯ ಮತ್ತು ನೀಲಾಂಬಿಕೆ ದಂಪತಿಯ ಪುಣ್ಯಸಂಜಾತರಾಗಿ ಜನಿಸಿದ ಶ್ರೀಗಳು ಕೇವಲ 16ನೇ ವಯಸ್ಸಿನಲ್ಲಿ ಸುರಗೀಶ್ವರ ಮಠದ ಪಟ್ಟಾಧಿಕಾರಿಗಳಾದರು. ನಂತರ ಶ್ರೀಗಳು ಮಾಡಿರುವ ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಕೊಡುಗೆಗಳಿಗೆ ಲೆಕ್ಕವಿಲ್ಲ. ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಶ್ರೀಮಠದ ಅಭಿವೃದ್ಧಿಯ ಜೊತೆಗೆ ಗ್ರಾಮದ ಪಂಚಕ್ರೋಶಿ ದೇವಾಲಯಗಳ ಜೀಣೋದ್ಧಾರ, ಶಾಲಾ ಕಾಲೇಜುಗಳ ಸ್ಥಾಪನೆ ಹಾಗೂ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಶ್ರೀಲಕ್ಷಿ್ಮ ಸಹಕಾರಿ ಪತ್ತಿನ ಬ್ಯಾಂಕ್ ಸ್ಥಾಪಿಸಿದ್ದು ಇಂದು ಬೃಹದಾಕಾರವಾಗಿ ಬೆಳೆದಿದೆ. ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಶ್ರೀಗಳ ಕೊಡುಗೆಯನ್ನು ಗ್ರಾಮಸ್ಥರು ಅತ್ಯಂತ ಶ್ರದ್ಧೆ ಭಕ್ತಿಯಿಂದ ನೆನೆಯುತ್ತಾರೆ. ಕಳೆದ ಆರು ದಶಕಗಳಿಂದ ಶ್ರೀಗಳು ಮಾಡಿರುವ ಸೇವೆಗೆ ಪ್ರತಿಯಾಗಿ ಇದೇ ಜ. 30ರಂದು ಶ್ರೀಗಳ ಸಹಸ್ರಚಂದ್ರದರ್ಶನ ಮಹೋತ್ಸವವನ್ನು ಭಕ್ತರು ಹಮ್ಮಿಕೊಂಡಿದ್ದಾರೆ. ಜತೆಗೆ ನೂತನ ಶ್ರೀಗಳ ಗುರುಪಟ್ಟಾಧಿಕಾರ ಮಹೋತ್ಸವ ಜರುಗಲಿದೆ.

ಗುರುಪಟ್ಟಾಧಿಕಾರ ಮಹೋತ್ಸವ

ಸ್ವಾಮಿಗಳ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಶ್ರೀ ಮಂಜುನಾಥ ದೇವರು ಕಲಬುರಗಿಯ ಚಿತ್ತಾಪುರ ತಾಲೂಕಿನ ತೊನಸನಹಳ್ಳಿ ರಾಜಶೇಖರ ಸ್ವಾಮಿ ಮತ್ತು ಗೋದಾವರಿ ಅಮ್ಮನವರ ಪುಣ್ಯಗರ್ಭದಲ್ಲಿ ಜನಿಸಿದರು. ಆಧುನಿಕ ಶಿಕ್ಷಣದ ನಂತರ ಶ್ರೀಶೈಲದಲ್ಲಿ ಧಾರ್ವಿುಕ ಶಿಕ್ಷಣ ಪಡೆದಿದ್ದಾರೆ. ಶ್ರೀಶೈಲದ ಲಿಂಗೈಕ್ಯ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಮಹಾಸ್ವಾಮಿಗಳ ಹಾಗೂ ಪ್ರಸ್ತುತ ಶ್ರೀಶೈಲ ಜಗದ್ಗುರುಗಳ ಆಶೀರ್ವಾದದೊಂದಿಗೆ ಪೀಠದ ಹಲವು ಸೇವಾಕಾರ್ಯಗಳನ್ನು ಮಾಡಿದ್ದಾರೆ. ವಿವಿಧೆಡೆ ಪುರಾಣ-ಪ್ರವಚನ ಮಾಡಿದ್ದಾರೆ. ಈಗಾಗಲೇ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯಸಾನ್ನಿಧ್ಯದಲ್ಲಿ ಗುರುಪಟ್ಟಾಧಿಕಾರ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ. ಇಂದು (ಜ. 30) ಬೆಳಗ್ಗೆ ವೀರಶೈವ ವಿಧಾನದ ಪ್ರಕಾರ ಗುರುಪಟ್ಟಾಭಿಷೇಕ ನಡೆಯಲಿದ್ದು ನಂತರ ಹಿರಿಯ ಶ್ರೀಗಳಿಂದ ಷಟ್​ಸ್ಥಲ ಬ್ರಹ್ಮೋಪದೇಶ ನೀಡಿ ಪಟ್ಟಬಂಧನ ಭಸ್ಮ, ಘಟಕ, ಶಂಖ, ಪಂಚಮುದ್ರಾ, ದಂಡ, ಕಮಂಡಲ ಸಹಿತ ಸಿಂಹಾಸನಾರೋಹಣವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಎಂಬ ನೂತನ ಅಭಿದಾನವನ್ನು ನೀಡಲಾಗುತ್ತದೆ. ಪಟ್ಟಾಭಿಷೇಕದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂತನ ಶ್ರೀಗಳ ಮೆರವಣಿಗೆ ನಡೆಯಲಿದೆ. ನಂತರ ಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ಗುರುಪಟ್ಟಾಧಿಕಾರ ಮಹೋತ್ಸವದ ಧರ್ಮಸಭೆ ನಡೆಯಲಿದೆ. ಇದರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಮಠಾಧೀಶರು, ಗಣ್ಯರು ಹಾಗೂ ಸದ್ಭಕ್ತರು ಪಾಲ್ಗೊಳ್ಳುವರು.

| ಪ್ರಶಾಂತ ರಿಪ್ಪನ್​ಪೇಟೆ