ಅಂಕಣ

ಡಿಜಿಟಲ್ ಸುಧರ್ಮಾ: ಆನ್​ಲೈನ್​ನಲ್ಲಿ ಓದುತ್ತಿದ್ದಾರೆ 100 ದೇಶಗಳ ಅಭಿಮಾನಿಗಳು

Webdesk - Ravikanth

| ಮಂಜುನಾಥ ಟಿ.ಭೋವಿ ಮೈಸೂರು

ಆಧುನಿಕ ಬದುಕಿನ ಬಹುತೇಕ ಎಲ್ಲ ವಸ್ತು-ವಿಷಯಗಳು ಈಗ ಡಿಜಿಟಲೀಕರಣಗೊಂಡಿವೆ. ಇದಕ್ಕೆ ಪತ್ರಿಕೋದ್ಯಮವೂ ಹೊರತಾಗಿಲ್ಲ. ಕನ್ನಡದ ಪ್ರಮುಖ ಪತ್ರಿಕೆಗಳೂ ಅಂತರ್ಜಾಲ ಪ್ರಪಂಚದಲ್ಲಿ ಮಿಂಚುತ್ತಿವೆ. ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸುಧರ್ಮಾ’ ಕೂಡ ಇದೇ ದಿಸೆಯಲ್ಲಿ ಸಾಗಿದ್ದು, ಡಿಜಿಟಲೀಕರಣಗೊಂಡು ನವ ಹುಟ್ಟು ಪಡೆದುಕೊಂಡಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಿಂದ ಪ್ರಕಟಗೊಳ್ಳುವ ಸುಧರ್ವ ಪತ್ರಿಕೆಯ ಕಂಪು ಜಗತ್ತಿನ ಹಲವು ದೇಶಗಳವರೆಗೂ ಪಸರಿಸಿದೆ. ಅಂದಾಜು 100 ದೇಶಗಳ ಅಭಿಮಾನಿಗಳು ಈ ಪತ್ರಿಕೆಯನ್ನು ಆನ್​ಲೈನ್ ಮೂಲಕ ಓದುತ್ತಿದ್ದಾರೆ. ಇದು ಈ ಪತ್ರಿಕೆಯ ಜೀವಂತಿಕೆಗೆ ಸಾಕ್ಷಿ.

21 ರಾಜ್ಯಗಳಿಗೆ ರವಾನೆ: 1970ರ ಜುಲೈ 15ರಂದು ನಗರದ ಶ್ರೀಮನ್ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಸುಧರ್ಮಾ ಸಂಸ್ಕೃತ ಪತ್ರಿಕೆ ಉದಯವಾಯಿತು. ಪತ್ರಿಕೆಯನ್ನು ಪ್ರಥಮ ದಿನದಿಂದಲೇ ಅಂಚೆ ಮೂಲಕ ಮನೆ ಮನೆಗೆ ಕಳುಹಿಸಿಕೊಡಲಾಯಿತು. ಅದು ಈಗಲೂ ನಿಂತಿಲ್ಲ. ಭಾರತದ ಮೂಲೆ ಮೂಲೆಗೂ ಈ ಪತ್ರಿಕೆ ರವಾನೆಯಾಗುತ್ತಿದೆ.

ಕೇರಳ, ತಮಿಳುನಾಡು, ಮುಂಬೈನಲ್ಲಿ ಈ ಪತ್ರಿಕೆಗೆ ಹೆಚ್ಚಿನ ಬೇಡಿಕೆ ಇದೆ. ಇದರೊಂದಿಗೆ ಅಸ್ಸಾಂ, ಪಂಜಾಬ್, ರಾಜಸ್ಥಾನ, ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ 21 ರಾಜ್ಯಗಳಿಗೂ ಪತ್ರಿಕೆಯನ್ನು ನಿತ್ಯವೂ ಕಳುಹಿಸಲಾಗುತ್ತಿದೆ. ಪಶುಪತಿ ದೇವಸ್ಥಾನ, ವೈಷ್ಣೋದೇವಿ ದೇಗುಲ ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೂ ಪತ್ರಿಕೆ ಹೋಗುತ್ತಿದೆ.

ಈ ಹಿಂದೆ ಶ್ರೀಲಂಕಾ, ನೇಪಾಳಕ್ಕೂ ಇದು ತಲುಪುತ್ತಿತ್ತು. ಆದರೆ, ಅಂಚೆ ಸಮಸ್ಯೆಯಿಂದ ಈಗ ಸಾಧ್ಯವಾಗುತ್ತಿಲ್ಲ. ಆದರೀಗ ಇ-ಪೇಪರ್ ಮೂಲಕ ಜಗತ್ತಿನ ಎಲ್ಲ ಭಾಗಗಳಲ್ಲಿರುವ ಸಂಸ್ಕೃತ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, 2 ಲಕ್ಷಕ್ಕಿಂತ ಅಧಿಕ ಜನರು ಇ-ಪೇಪರ್​ನಲ್ಲಿ ಈ ಪತ್ರಿಕೆಯನ್ನು ಓದುತ್ತಾರೆ.

ಆರಂಭದ ದಿನಗಳಲ್ಲಿ ದಿನಪತ್ರಿಕೆಯನ್ನು ಕೈಗಳಿಂದ ಮೊಳೆ ಜೋಡಿಸಿ ಮುದ್ರಿಸಲಾಗುತ್ತಿತ್ತು. ಬಳಿಕ ಪತ್ರಿಕೆ ಆಧುನೀಕರಣಗೊಂಡು ಗಣಕೀಕೃತವಾಗಿ ಇದೀಗ ಆಫ್​ಸೆಟ್​ನಲ್ಲಿ ಮುದ್ರಣವಾಗುತ್ತಿದೆ. ಇದರೊಂದಿಗೆ ಪತ್ರಿಕೆಯು ಪ್ರತ್ಯೇಕ ವೆಬ್​ಸೈಟ್ ಹೊಂದುವ ಮೂಲಕ ಸಂಪೂರ್ಣ ಡಿಜಿಟಲೀಕರಣಕ್ಕೆ ತೆರೆದುಕೊಂಡಿದ್ದು, ಹೆಚ್ಚು ಜನರನ್ನು ಸುಲಭವಾಗಿ ತಲುಪಲು ಸಾಧ್ಯವಾಗಿರುವ ಏಕಮೇವಾದ್ವಿತೀಯ ಸಂಸ್ಕೃತ ಪತ್ರಿಕೆ ಎನಿಸಿಕೊಂಡಿದೆ. ಈ ಸೌಲಭ್ಯದ ಮೂಲಕ ಪತ್ರಿಕೆಯು ಉಚಿತವಾಗಿ ನಿತ್ಯವೂ ಓದುಗರಿಗೆ ದೊರೆಯುತ್ತಿದೆ. ಅಂತರ್ಜಾಲದ ಸಂಪರ್ಕವಿಲ್ಲದವರು ಈಗಲೂ ಅಂಚೆ ಮೂಲಕವೇ ಪತ್ರಿಕೆಯನ್ನು ತರಿಸಿಕೊಂಡು ಓದುತ್ತಿದ್ದಾರೆ.

ಹೊಸ ರೂಪ ಕೊಟ್ಟ ಸಂಪತ್​ಕುಮಾರ್: ಪತ್ರಿಕೆ ಸಂಸ್ಥಾಪಕರಾದ ಪಂಡಿತ ಕೆ.ಎನ್. ವರದರಾಜ ಅಯ್ಯಂಗಾರರು ಸತತ 20 ವರ್ಷ ಈ ಪತ್ರಿಕೆಯನ್ನು ನಡೆಸಿಕೊಂಡು ಬರುವ ಮೂಲಕ ಓದುಗರ ಮೆಚ್ಚುಗೆ ಗಳಿಸಿದರು. ಅವರ ನಿಧನದ ನಂತರ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡ ಅವರ ಪುತ್ರ ಸಂಪತ್​ಕುಮಾರ್ ಪತ್ರಿಕೆಯಲ್ಲಿ ನವ ತಂತ್ರಜ್ಞಾನ ಅಳವಡಿಸಿಕೊಂಡು ಹೊಸ ರೂಪಕೊಟ್ಟರು.

ಕಡಿಮೆ ಓದುಗರ ಸಂಖ್ಯೆ ಹಾಗೂ ಆರ್ಥಿಕವಾಗಿ ಸಾಕಷ್ಟು ತೊಂದರೆಗಳಿದ್ದರೂ ಲೆಕ್ಕಿಸದೆ ಈ ಪತ್ರಿಕೆಯನ್ನು ಅವರು ತಮ್ಮ ಪತ್ನಿ ಕೆ.ಎಸ್. ಜಯಲಕ್ಷ್ಮೀ ಅವರ ಜತೆಗೂಡಿ ಹೊರತರುತ್ತಿದ್ದರು. ಈ ಕಾರ್ಯವನ್ನು ಗುರುತಿಸಿದ ಕೇಂದ್ರ ಸರ್ಕಾರ, ದಂಪತಿಗೆ ಪದ್ಮಶ್ರೀ ಪ್ರಶಸ್ತಿ ಘೊಷಿಸಿತ್ತು. ಆದರೆ, ಪ್ರಶಸ್ತಿ ಸ್ವೀಕಾರಕ್ಕೂ ಮುನ್ನವೇ ಸಂಪತ್​ಕುಮಾರ್ 2021ರ ಜೂನ್ 30ರಂದು ನಿಧನರಾದರು. ಇದೀಗ ಅವರ ಪತ್ನಿ ಪತ್ರಿಕೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

‘‘2 ಪುಟದ ಈ ಪತ್ರಿಕೆಯನ್ನು 4 ಪುಟಕ್ಕೆ ವಿಸ್ತರಣೆ ಮಾಡುವುದು ನನ್ನ ಪತಿಯ ಆಸೆಯಾಗಿತ್ತು. ದೇಶದ 130 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ ಸಂಸ್ಕೃತ ಭಾಷಿಕರು ಇರಬಹುದು. ಅವರೆಲ್ಲರಿಗೆ ಪತ್ರಿಕೆಯನ್ನು ತಲುಪಿಸುವ ಗುರಿ ಹೊಂದಿದ್ದರು. ಆದರೆ, ಅವರ ದಿಢೀರ್ ನಿರ್ಗಮನದಿಂದ ಈ ಆಸೆ ಕಮರಿದೆ. ಪತಿಯ ಅನುಪಸ್ಥಿತಿಯಲ್ಲಿ ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದೇ ಕಷ್ಟಕರವಾಗಿದೆ’’ ಎಂದು ಭಾವುಕರಾಗುತ್ತಾರೆ ಜಯಲಕ್ಷ್ಮೀ.

ನೆರವು-ಪ್ರೋತ್ಸಾಹ ಅಗತ್ಯ

ಯಾವುದೇ ಭಾಷೆಯ ಪತ್ರಿಕೆ ಉಳಿವಿಗೆ ಜಾಹೀರಾತುಗಳು ಬೇಕು. ಸುಧರ್ವಕ್ಕೆ ಜಾಹೀರಾತುಗಳ ಹರಿವು ಇಲ್ಲ. ಜತೆಗೆ, ಸರ್ಕಾರದ ಅನುದಾನ, ನೆರವು ಕೂಡ ಸಿಗುತ್ತಿಲ್ಲ. ಹೀಗಾಗಿ ಪತ್ರಿಕೆಯನ್ನು ಹೊರತರುವುದು ಕಷ್ಟವಾಗಿದೆ. ಬೆಲೆ ಏರಿಕೆ, ಮುದ್ರಣ ವೆಚ್ಚ, ಅಂಚೆ ಚೀಟಿ ವೆಚ್ಚ, ಕಾರ್ವಿುಕರ ವೇತನ... ಹೀಗೆ ಪ್ರತಿಯೊಂದರ ಬೆಲೆಯೂ ಹೆಚ್ಚುತ್ತಿರುವುದರಿಂದ ಪತ್ರಿಕೆಯ ಮುದ್ರಣ ಕಠಿಣ ಎನಿಸಿದೆ. ಪತ್ರಿಕೆಗೆ ಬೆನ್ನೆಲುಬಾಗಿ ನಿಂತಿರುವ ಅನೇಕ ವಿದ್ವಾಂಸರಿಗೆ ಗೌರವಧನ ಕೊಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ವಾರ್ಷಿಕ ಚಂದಾದಾರರೇ ನಮ್ಮ ಜೀವಾಳ. ಪತ್ರಿಕೆ ಉಳಿವಿಗೆ ಸರ್ಕಾರ ಮತ್ತಿತರ ಸಂಸ್ಥೆಗಳಿಂದ ಸಹಾಯಹಸ್ತ ಬೇಕಾಗಿದೆ. ಓದುಗರ ಬೆಂಬಲ ದೊರೆತರೆ ಸಂಸ್ಕೃತ ಭಾಷೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ದೊರೆಯಲಿದೆ ಎನ್ನುತ್ತಾರೆ ಜಯಲಕ್ಷ್ಮೀ.

ಸಂಸ್ಕೃತ ಭಾಷೆಗೆ ಪ್ರಾದೇಶಿಕತೆಯ ಗಡಿ ಇಲ್ಲ. ಇತ್ತೀಚೆಗೆ ವಿದೇಶಿಯರು ಈ ಭಾಷೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಂಸ್ಕೃತ ಭಾಷೆಯಲ್ಲಿ ಅಡಕವಾಗಿರುವ ಯೋಗ, ಭಾರತೀಯ ಅಧ್ಯಾತ್ಮವನ್ನು ಮೈಗೂಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಹೀಗಾಗಿ ಸಂಸ್ಕೃತಕ್ಕೆ ಯಾವಾಗಲೂ ಪ್ರಾಮುಖ್ಯತೆ ಇದ್ದೇ ಇದೆ.

| ಕೆ.ಎಸ್.ಜಯಲಕ್ಷ್ಮೀ ಮೈಸೂರು

ಸುಧರ್ಮಾ ಪತ್ರಿಕೆಯ ವೆಬ್​ಸೈಟ್​ಗಾಗಿ ಈ ಲಿಂಕ್​ ಕ್ಲಿಕ್ಕಿಸಿ ಪ್ರವೇಶಿಸಿ: https://sudharmasanskritdaily.in/