ನವರಾತ್ರಿ ಆಚರಣೆಗೆ ಪುರಾಣಗಳಲ್ಲಿ ಹಲವು ಕತೆಗಳಿವೆ. ದುರ್ಗಾದೇವಿಯು ಮಹಿಷಾಸುರ ಮರ್ದಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನವನ್ನು ವಿಜಯದಶಮಿಯನ್ನಾಗಿ ಆಚರಿಸಲಾಗುತ್ತದೆ. ತ್ರೇತಾಯುಗದಲ್ಲಿ ವಿಜಯದಶಮಿಯ ದಿನ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ ಎಂಬ ನಂಬಿಕೆಯಿದೆ. ದ್ವಾಪರಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಬನ್ನಿ ಮರದಿಂದ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯ ಸಾಧಿಸಿದರು. ಅರ್ಜುನನು ಶಮೀ ವೃಕ್ಷದ ಬುಡದಲ್ಲಿ ಆಯುಧಗಳನ್ನು ಪ್ರಕಟಿಸಿ ದುರ್ಗಾದೇವಿಯ ಸ್ತೋತ್ರ ಪಠಿಸಿ ಪ್ರಯೋಗಿಸಿದ್ದರಿಂದ ಜಯಶಾಲಿಯಾದ ಎಂಬ ಉಲ್ಲೇಖ ಇದೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ.
ಕಾರ್ತಿಕ ಮಾಸ ಹಾಗೂ ದೀಪಾವಳಿ ಸಂದರ್ಭದಲ್ಲಿ ಆಯುಧಪೂಜೆ, ವಾಹನಪೂಜೆ ಇತ್ಯಾದಿಗಳನ್ನು ಮಾಡುತ್ತೇವೆ. ಕೃಷಿಕ, ಬಡಗಿ, ಕಮ್ಮಾರ, ಅಕ್ಕಸಾಲಿಗ, ಹೀಗೆ ಆಯಾ ವೃತ್ತಿಪರರು ಬಳಸುವ ಆಯುಧಗಳನ್ನು ಶುಭ್ರವಾಗಿ ತೊಳೆದು ಜೋಡಿಸಿ, ಹೂಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಕೈಗಾರಿಕೆಗಳಲ್ಲಿ ಯಂತ್ರೋಪಕರಣ ಮುಂತಾದವುಗಳಿಗೂ ಪೂಜೆ ಮಾಡಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ವಿಶೇಷವಾಗಿ ರೈತರು ಕೃಷಿ ಉಪಕರಣಗಳಾದ ಗುದ್ದಲಿ, ಹಾರೆ, ನೇಗಿಲು, ನೊಗ ಇತ್ಯಾದಿಗಳನ್ನು ಜೋಡಿಸಿಟ್ಟು ಪೂಜೆ ಸಲ್ಲಿಸುತ್ತಾರೆ. ಗೋವುಗಳಿಗೂ ಪೂಜೆ ನೆರವೇರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ದೇವರು ಮಾತ್ರವಲ್ಲದೆ ಅವರ ಕೈಯಲ್ಲಿರುವ ಆಯುಧಗಳಿಗೂ ಅಷ್ಟೇ ಮಹತ್ವವಿದೆ. ನಮ್ಮ ದೇವ-ದೇವಿಯರ ಚಿತ್ರ, ಮೂರ್ತಿ ಅಥವಾ ಶಿಲ್ಪಕಲೆಗಳನ್ನು ನೋಡಿದಾಗ ಬಹುತೇಕ ದೇವರುಗಳ ಕೈಗಳಲ್ಲಿ ಆಯುಧವಿರುವುದನ್ನು ಕಾಣಬಹುದು. ಮಹೇಶ್ವರನ ಕೈಯಲ್ಲಿ ತ್ರಿಶೂಲ, ವಿಷ್ಣುವಿನ ಕೈಯಲ್ಲಿ ಸುದರ್ಶನ, ಶಂಖ, ಚಕ್ರ, ಗದಾ ಪದ್ಮ, ಶ್ರೀರಾಮನ ಬಳಿ ಬಿಲ್ಲು ಇರುತ್ತದೆ. ದೇವಿ ಮಹಾತ್ಮೆಯಲ್ಲಿ ತಿಳಿಸುವಂತೆ, ದೇವಿಗೆ ಎಲ್ಲ ದೇವಾನುದೇವತೆಗಳು ತಮ್ಮ ತಮ್ಮ ಆಯುಧಗಳನ್ನು ನೀಡುತ್ತಾರೆ. ಈ ಆಯುಧಗಳಿಂದಲೇ ಅಸುರ ಸಂಹಾರವಾಗುತ್ತದೆ. ಕೋದಂಡರಾಮ, ಆಂಜನೇಯನ ಗದೆ (ಗದಾಧರ)? ಹೀಗೆ ದೇವರುಗಳನ್ನು ಅವರ ಆಯುಧಗಳಿಂದಲೇ ಗುರುತಿಸಲಾಗುತ್ತದೆ.
ಆಯುಧವು ದೇವತೆಗಳಿಗೆ ಭೂಷಣವಾಗಿದೆ. ಅಧರ್ಮ ಹೆಚ್ಚಾದಾಗ ಅಸುರ-ದುಷ್ಟಶಕ್ತಿಗಳನ್ನು ನಾಶ ಮಾಡಲು ಅದೇ ಆಯುಧಗಳು ಅಸ್ತ್ರವಾಗಿ ಬಳಕೆಯಾಗುತ್ತವೆ. ಮನುಷ್ಯರು ಎದುರಿಸಲಾಗದ ಅಸುರೀ ಶಕ್ತಿಗಳ ನಿಗ್ರಹಕ್ಕಾಗಿ ದೈವೀ ಶಕ್ತಿಗಳ ಪ್ರವೇಶವಾಗುತ್ತದೆ. ವನವಾಸದ ವೇಳೆ ‘ಕೋದಂಡ’ ಅಸ್ತ್ರವು ರಾಮನ ಬಳಿಯೇ ಇತ್ತು. ಸೀತಾಪಹರಣದ ನಂತರ ಸಮುದ್ರರಾಜನನ್ನು ಮಣಿಸಲು ಅದರ ಪ್ರಯೋಗದ ಎಚ್ಚರಿಕೆಯೇ ಸಾಕಾಯಿತು. ಮುಂದೆ ರಾವಣ ಹಾಗೂ ಆತನ ಸೈನ್ಯದೊಂದಿಗೆ ಯುದ್ಧಕಾಲದಲ್ಲಿ ಉಪಯೋಗವಾಯಿತು. ಅಲ್ಲಿಯವರೆಗೆ ಆಯುಧವಿದ್ದರೂ ಅದನ್ನು ಶಸ್ತ್ರಾಸ್ತ್ರವನ್ನಾಗಿಸಿ ಶ್ರೀರಾಮನು ಬಳಸಿಕೊಂಡಿರಲಿಲ್ಲ.
ಜನಸಾಮಾನ್ಯರ ಜೀವನದಲ್ಲಿ ಕತ್ತಿ, ಕೊಡಲಿ ಮುಂತಾದ ಸಾಮಾನ್ಯ ಆಯುಧಗಳು ಮನೆಕೆಲಸ, ಕೃಷಿಕೆಲಸ, ವೃತ್ತಿಕೆಲಸಕ್ಕೆ ಬಳಕೆಯಾಗುತ್ತಿದ್ದರೂ ಅವುಗಳು ಧರ್ಮರಕ್ಷಣೆಯ ಸಂದರ್ಭದಲ್ಲಿ ದೇವರ ಕೈಗೆ ಸೇರಿ, ಅಧರ್ಮದ ನಾಶಕ್ಕಾಗಿ ಶಸ್ತ್ರ-ಅಸ್ತ್ರವಾಗಿ ಬಳಕೆಯಾಗಿವೆ. ದೈವಿಶಕ್ತಿಗಳ ಕೈಯಲ್ಲಿ ಇರುವ ಆಯುಧಗಳು ಧರ್ಮವನ್ನು ಸಂರಕ್ಷಿಸಿ, ಭಕ್ತರು, ಬೇಡಿ ಬಂದವರಿಗೆ ಅಭಯ ನೀಡುತ್ತವೆ. ಉದಾಹರಣೆಗೆ ಶಿವನಲ್ಲಿರುವ ತ್ರಿಶೂಲ ಭಕ್ತರಿಗೆ ಅಭಯ ನೀಡಿದರೆ ಅಸುರರಿಗೆ ಭಯವನ್ನುಂಟು ಮಾಡುತ್ತವೆ. ಹಾಗಾಗಿ ಆಯುಧ, ಶಸ್ತ್ರ, ಅಸ್ತ್ರ ಈ ಮೂರರ ಬಗೆಗಿನ ವ್ಯತ್ಯಾಸವೇನು ಎಂದು ತಿಳಿದುಕೊಳ್ಳುವುದು ಬಹುಮುಖ್ಯ.
ಆಯುಧವು ನಿತ್ಯಧಾರಣಾ ಯೋಗ್ಯ (ಉಪಯೋಗ) ವಾದರೂ ಅದನ್ನು ನಾಶ, ಹನನ ಕಾರ್ಯಕ್ಕೆ ಬಳಸುವಂತಿಲ್ಲ. ಯಾವಾಗ ಅಧರ್ಮ ಹೆಚ್ಚಾಗಿ ಧರ್ಮ ಅಳಿವಿನಂಚಿಗೆ ಬರುತ್ತದೋ ಆಗ ದೇವಾನು ದೇವತೆಗಳು ಆಯುಧವನ್ನು ಶಸ್ತ್ರಾಸ್ತ್ರವನ್ನಾಗಿಸಿಕೊಂಡು ಅಧರ್ಮವನ್ನು ಅಳಿಸುತ್ತಾರೆ. ಅಸ್ತ್ರ ಮತ್ತು ಶಸ್ತ್ರ ಎರಡೂ ಆಯುಧಗಳೇ. ಆದರೆ ಕೆಲವೊಂದು ವ್ಯತ್ಯಾಸಗಳಿಗಳಿವೆ. ಶಸ್ತ್ರವೆಂದರೆ ದೈಹಿಕ ಶಕ್ತಿಯಿಂದ ಪ್ರಯೋಗಿಸುವ ಆಯುಧ, ಅಸ್ತ್ರವೆಂದರೆ ಮಂತ್ರಶಕ್ತಿಯಿಂದ ಪ್ರಯೋಗಿಸುವ ಆಯುಧ. ಪುರಾಣಗಳಲ್ಲಿ ಅಸ್ತ್ರವೆಂಬುದು ಒಬ್ಬ ನಿರ್ದಿಷ್ಟ ದೇವತೆಯು ನಿರ್ದೇಶಕನಾಗಿದ್ದ ಅಲೌಕಿಕ ಆಯುಧವಾಗಿತ್ತು. ಒಂದು ಅಸ್ತ್ರವನ್ನು ಕರೆಯಲು ಅಥವಾ ಬಳಸಲು ನಿರ್ದಿಷ್ಟ ಮಂತ್ರದ ಜ್ಞಾನ ಅಗತ್ಯವಾಗಿತ್ತು. ಆಹ್ವಾನಿಸಲ್ಪಟ್ಟ ದೇವತೆಗಳು ಆಗ ಆಯುಧಗಳನ್ನು ಪ್ರವೇಶಿಸುತ್ತಿದ್ದರು. ಉದಾ: ವೈಷ್ಣವಾಸ್ತ್ರ, ಬ್ರಹ್ಮಾಸ್ತ್ರ, ನಾರಾಯಣಾಸ್ತ್ರ ಮತ್ತು ಪಾಶುಪತಾಸ್ತ್ರಗಳು.
ಮಹಾಭಾರತದಲ್ಲಿ ಭೀಷ್ಮರನ್ನು ಎದುರಿಸಲು ಅರ್ಜುನನು ನಿರಾಕರಿಸುವ ಸಂದರ್ಭದಲ್ಲಿ ಕ್ರೋಧಿತನಾದ ಶ್ರೀಕೃಷ್ಣನು ನಿರಾಯುಧನಾಗಿದ್ದರೂ ರಥದ ಚಕ್ರವನ್ನು ಮೇಲೆತ್ತಿ ಅದಕ್ಕೆ ಸುದರ್ಶನ ಚಕ್ರದ ಶಕ್ತಿಯನ್ನು ಅನುಸಂಧಾನ ಮಾಡುತ್ತಾನೆ. ಅಂದರೆ ಮಂತ್ರಮುಖೇನ ಆಹ್ವಾನಿಸುತ್ತಾನೆ. ಇಲ್ಲಿ ಮೇಲೆತ್ತಿದ ರಥದ ಚಕ್ರವು ಶಸ್ತ್ರವಾಗಿಯೂ ಅದರಲ್ಲಿ ತುಂಬಿದ ಸುದರ್ಶನ ಚಕ್ರದ ಶಕ್ತಿಯನ್ನು ಅಸ್ತ್ರವಾಗಿಯೂ ಕಾಣಬಹುದು. ಶಸ್ತ್ರ ಎಂದರೆ ಬಾಣ, ಕತ್ತಿ, ಮುಂತಾದವು ಯಾವುದೇ ಮಂತ್ರಶಕ್ತಿ ಇಲ್ಲದೆ ಬಳಸುವ ಆಯುಧಗಳಾಗಿವೆ. ಭೌತಶಾಸ್ತ್ರದ ನಿಯಮ ಪಾಲಿಸುವುದನ್ನು ಬಿಟ್ಟು ಅವುಗಳಿಗೆ ಬೇರಾವುದೇ ಶಕ್ತಿಗಳಿಲ್ಲ. ಅಸ್ತ್ರಗಳು ಕೆಲವು ದೇವರುಗಳನ್ನು ಪ್ರಾರ್ಥಿಸುವ ಮೂಲಕ ಪಡೆಯುವ ದೈವಿಕ ಬಾಣಗಳಾಗಿವೆ. ಅವು ಬಿಲ್ಲುಗಾರನ ಬತ್ತಳಿಕೆಯಲ್ಲಿ ಭೌತಿಕವಾಗಿ ಲಭ್ಯವಿಲ್ಲದಿರಬಹುದು. ಆದರೆ ಸಂಬಂಧಿತ ಮಂತ್ರಗಳನ್ನು ಪಠಿಸುವುದರಿಂದ ಅವುಗಳನ್ನು ಪಡೆದು ಪ್ರಯೋಗಿಸಬಹುದು.
ತ್ರೇತಾ, ದ್ವಾಪರ ಯುಗದಲ್ಲಿ ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುತ್ತಿದ್ದರು ಎಂಬ ಕುತೂಹಲ ನನಗೂ ಬಾಲ್ಯದಲ್ಲಿ ಇತ್ತು. ರಮಾನಂದ ಸಾಗರ ಅವರ ರಾಮಾಯಣ ಮತ್ತು ಮಹಾಭಾರತದ ಧಾರಾವಾಹಿಗಳ ದೃಶ್ಯಗಳನ್ನು ನೋಡಿದ ಮೇಲೆ ಸಂಶಯ ಪರಿಹಾರವಾಯಿತು. ಬಾಣಗಳು ಸ್ವಯಂ ಶಕ್ತಿಯುತವಾದವುಗಳಾಗಿರುವುದಿಲ್ಲ; ಅವು ಸಾಮಾನ್ಯ ಬಾಣವೇ ಆಗಿರುತ್ತವೆ. ಗುರೂಪದೇಶ ಮತ್ತು ದೇವತೆಗಳಿಂದ ಪ್ರಾಪ್ತವಾದ ಮಂತ್ರೋಚ್ಚಾರದಿಂದ ಬಾಣಗಳಿಗೆ ವಿಶೇಷಶಕ್ತಿ ಪ್ರಾಪ್ತಿಯಾಗುತ್ತದೆ. ಒಂದು ಅಸ್ತ್ರವನ್ನು ಬಿಡುವ ಮೊದಲು ಅದಕ್ಕೆ ಅನುಸಾರವಾದ ಚುಟುಕಾದ ಮಂತ್ರವನ್ನು ಹೇಳುತ್ತಾರೆ; ಮಂತ್ರದ ಮೂಲಕ ಶಕ್ತಿಯನ್ನು ತುಂಬುತ್ತಾರೆ. ಆಗ್ನೇಯಾಸ್ತ್ರ ಅಂದರೆ ಬೆಂಕಿ, ವರುಣಾಸ್ತ್ರ ಎಂದರೆ ನೀರು, ಹೀಗೆ ಒಬ್ಬ ಅಗ್ನಿ ಅಸ್ತ್ರ ಬಿಟ್ಟರೆ ಅತ್ತ ಕಡೆಯವ ವರುಣಾಸ್ತ್ರದಿಂದ ಪ್ರತಿರೋಧ ಒಡ್ಡುತ್ತಾನೆ.
ಧಾರಾವಾಹಿಯಲ್ಲಿ ಕಂಡಂತೆ ರಾಮಾಯಣ, ಮಹಾಭಾರತದ ಕಾಲದಲ್ಲಿ ನಮಗೆ ಕುತೂಹಲ ಮೂಡಿಸುವ ಮತ್ತೊಂದು ಸಂಗತಿಯೆಂದರೆ ಯುದ್ಧದಲ್ಲಿ ನೇರವಾಗಿ ವ್ಯಕ್ತಿಯ ಬದಲಾಗಿ ಆಕಾಶಕ್ಕೆ ಗುರಿಯಿಟ್ಟು ಬಾಣ ಪ್ರಯೋಗಿಸಲಾಗುತ್ತದೆ. ಬಳಿಕ ಆ ಬಾಣ ತನಗೆ ಮಂತ್ರಿಸಿದ ಅಸ್ತ್ರದೊಂದಿಗೆ ಗುರಿಯೆಡೆಗೆ ಸಾಗುತ್ತದೆ. ಆ ಬಾಣವನ್ನು ನೋಡಿ ಅದು ಯಾವ ಶಕ್ತಿಯೆಂದು ಗುರುತಿಸಿ ಅದಕ್ಕೆ ಪ್ರತಿರೋಧ ಒಡ್ಡುವಂಥ ಪ್ರತ್ಯಸ್ತ್ರವನ್ನು ಬಿಡಲಾಗುತ್ತದೆ. ಇದನ್ನು ಈಗಿನ ಮಿಸೈಲ್ ತಂತ್ರಜ್ಞಾನಕ್ಕೆ ಹೋಲಿಕೆ ಮಾಡಬಹುದು. ಒಂದು ದೇಶ ಮಿಸೈಲ್ ಬಿಟ್ಟರೆ ಅದಕ್ಕೆ ಪ್ರತಿಯಾಗಿ ಆಂಟಿ ಮಿಸೈಲ್ ವ್ಯವಸ್ಥೆಯನ್ನು ಹೊಂದಿ ಅದು ತಮ್ಮ ಗಡಿ ಪ್ರದೇಶಕ್ಕೆ ಬರುವ ಮುಂಚೆಯೇ ಹೊಡೆಯುವುದನ್ನು ಸಾಧಿಸಿದ್ದಾರೆ.
‘ಇಷ್ಟು ತೀವ್ರವಾಗಿ, ತೀಕ್ಷ್ಣವಾಗಿ ಹಾಗೂ ಕರಾರುವಾಕ್ಕಾಗಿ ಪ್ರತಿಕ್ರಿಯಿಸುವುದಕ್ಕೆ ಸಮಯ ಎಲ್ಲಿದೆ, ಅದು ಹೇಗೆ ಸಾಧ್ಯವಾಗುತ್ತದೆ?’ ಎಂದು ಒಬ್ಬ ವಿದ್ವಾಂಸರಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು- ‘ಕ್ರಿಕೆಟ್ ಮ್ಯಾಚ್ನಲ್ಲಿ ಬೌಲರ್ ನೂರರಿಂದ ನೂರೈವತ್ತು ಕಿಲೋಮೀಟರ್ ವೇಗದಲ್ಲಿ ಚೆಂಡು ಎಸೆಯುತ್ತಾನೆ. ಆ ಚೆಂಡು ಯಾರ್ಕರ್ ಆಗಿರಬಹುದು, ಇನ್ಸ್ವಿಂಗ್ ಕೂಡ ಆಗಿರಬಹುದು. ಅದು ಇಂತಹದ್ದೇ ಎಸೆತ ಎಂದು ಗಮನಿಸಿ, ಪರೀಕ್ಷಿಸಿ ಅದಕ್ಕೆ ತಕ್ಕುದಾದ ಪ್ರತಿರೋಧ ಅಥವಾ ಬ್ಯಾಟಿಂಗ್ ಮಾಡುತ್ತಾನೆ. ಸೆಕೆಂಡ್ನ ಕೆಲವೇ ಭಾಗದಷ್ಟು ಸಮಯದಲ್ಲಿ ಚೆಂಡನ್ನು ಎದುರಿಸಿ ಅದರ ಮೇಲೆ ಹಿಡಿತ ಸಾಧಿಸಬೇಕು. ಅಂತೆಯೇ ಯುದ್ಧದಲ್ಲಿ ಕೂಡ ಬಾಣಗಳನ್ನು ಗುರುತಿಸಿ ಪ್ರತಿರೋಧ ಒಡ್ಡಬೇಕಾಗುತ್ತದೆ’. ಸತತ ಅಭ್ಯಾಸ, ಪರಿಣತಿ, ಅನುಭವ ಚೈತನ್ಯ, ಚಾಣಾಕ್ಷತೆಯಿಂದ ಮಾತ್ರ ಈ ರೀತಿಯ ಪ್ರತಿರೋಧ ಒಡ್ಡಲು ಸಾಧ್ಯವಾಗುವುದು.
ಹಿಂದೆ ಯುದ್ಧಗಳಲ್ಲಿ ಹೆಚ್ಚಿನ ಪಾತ್ರವಹಿಸುತ್ತಿದ್ದದ್ದು ಬಿಲ್ಲು-ಬಾಣಗಳು. ತಾಳೆ ವೃಕ್ಷದ ಬಿಲ್ಲುಗಳನ್ನು ಕಾಮುಕ ಎಂದು ಕರೆಯುತ್ತಿದ್ದರು. ಬಾಣಗಳನ್ನು ಕಬ್ಬಿಣದಿಂದ ಮಾಡುತ್ತಿದ್ದರು. ಬಿಳಿಯಂಬು, ಕೋಲಂಬು, ಸಂಗುಲಂಬು ಮೊದಲಾದ ಪ್ರಭೇದಗಳಿದ್ದವು. ಪಂಪ ತನ್ನ ಕಾವ್ಯದಲ್ಲಿ ಪಾರೆಯಂಬು, ಕಲ್ಲಂಬು, ಕೆತ್ತಂಬು ಮುಂತಾದವುಗಳನ್ನು ಹೆಸರಿಸಿದ್ದಾನೆ. ರನ್ನ ಕವಲಂಬು ಎಂಬ ಬಾಣದ ಬಗ್ಗೆ ಹೇಳುತ್ತಾನೆ. ಖಡ್ಗ ಅಥವಾ ಕತ್ತಿಗೆ ಕರವಾಳ್, ತೋಳವಾಳ್ ಎಂಬ ಹೆಸರುಗಳು ಇದ್ದವು.
ಧರ್ಮಸ್ಥಳದಲ್ಲಿರುವ ಮಂಜೂಷ ವಸ್ತುಸಂಗ್ರಹಾಲಯದಲ್ಲಿ ಗಮನಿಸಿದರೆ ಎಷ್ಟೊಂದು ವೈವಿಧ್ಯಮಯ ಆಯುಧಗಳು ಇದ್ದವು ಎಂದು ಅರಿವಿಗೆ ಬರುತ್ತದೆ. ಹಿಂದೆ ಯುದ್ಧಗಳು ಆಗಾಗ ನಡೆಯುತ್ತಿದ್ದವು. ಸ್ವಾಭಾವಿಕವಾಗಿ ರಾಜ್ಯಕ್ಕೆ ಅಥವಾ ಮನೆಗೆ ಶತ್ರುಗಳು ಅಥವಾ ಕೃಷಿನಾಶಕ್ಕಾಗಿ ಪ್ರಾಣಿಗಳು ಬಂದಲ್ಲಿ ಆಯುಧಗಳು ಅವಶ್ಯವಾಗಿದ್ದವು. ಆಯುಧ ದೀರ್ಘಕಾಲ ಬಾಳಿಕೆ ಬರಬೇಕು, ಹರಿತ ಇರಬೇಕು. ಯುದ್ಧ ಮಾಡುವ ಸಂದರ್ಭದಲ್ಲಿ ಅದಕ್ಕೆ ಆಘಾತವಾಗಿ ಅದು ತುಂಡಾಗಬಾರದು. ಅದರ ತುದಿ ತೀವ್ರತೆಯನ್ನು ಹೊಂದಿರಬೇಕು. ಹೀಗೆ ಲೋಹ ತಜ್ಞರು (ಮೆಟಲರ್ಜಿ ತಜ್ಞರು) ವಿಶೇಷ ಸಂಶೋಧನೆ ಮಾಡಿರುತ್ತಾರೆ.
ಯುದ್ಧ ಸನ್ನಿಹಿತವಾದಾಗ ಶಸ್ತ್ರಾಭ್ಯಾಸ ಮಾಡುವುದು ವೀರರ ಲಕ್ಷಣವಲ್ಲ. ಹಿಂದಿನ ಕಾಲದಲ್ಲಿ ಆಯುಧಗಳನ್ನು ಮಂತ್ರೋಚ್ಚಾರಣೆಯಿಂದ ಮಂತ್ರಿಸಿ ಬಿಡುವಂಥ ಸಂದರ್ಭದಲ್ಲಿ ಆಯಾಯ ಮಂತ್ರಗಳನ್ನು ತಮ್ಮ ವಶದಲ್ಲಿಟ್ಟುಕೊಳ್ಳಬೇಕಾಗಿತ್ತು. ಅದಕ್ಕೆ ನಿರಂತರ ಅಭ್ಯಾಸದ ಅಗತ್ಯವಿತ್ತು. ಇಲ್ಲವಾದಲ್ಲಿ ರಣರಂಗದಲ್ಲಿ ಮಂತ್ರವು ಮರೆತು ಯುದ್ಧದಲ್ಲಿ ಪರಾಜಯ ಸ್ವೀಕರಿಸಬೇಕಿತ್ತು. ಈಗಿನ ವೈದ್ಯರು ಸಾವಿರಾರು ಔಷಧಗಳನ್ನು ನೆನಪಿಟ್ಟುಕೊಂಡು ಹಾಗೆ ಕ್ಷಣಮಾತ್ರದಲ್ಲಿ ರೋಗಿಯನ್ನು ಪರೀಕ್ಷಿಸಿ ಔಷಧ ಬರೆದುಕೊಡುವ ಹಾಗೆ, ಯೋಧರೂ ಆಯುಧಗಳ ಬಳಕೆಯ ಅಭ್ಯಾಸ ನಡೆಸುತ್ತಿದ್ದರು. ಈಗಿನ ಕಾಲಘಟ್ಟದಲ್ಲಿ ರಾಷ್ಟ್ರರಕ್ಷಣೆಗೆ ಆಯುಧಗಳು ಅನಿವಾರ್ಯ. ನೆಲ, ಜಲ, ವಾಯು ಈ ಮೂರು ವಿಭಾಗದಲ್ಲೂ ನಮ್ಮ ಭೌಗೋಳಿಕ ಪ್ರದೇಶವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಭಾರತ ಕೂಡ ವಿದೇಶಿ ಶಸ್ತ್ರಗಳನ್ನು ತರಿಸಿಕೊಳ್ಳುವುದು ಮಾತ್ರವಲ್ಲದೆ ಸ್ವದೇಶಿ ಅಸ್ತ್ರಗಳ ನಿರ್ವಣಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಸ್ವದೇಶಿ ನಿರ್ವಣಕ್ಕೆ ಆದ್ಯತೆ ಹೆಚ್ಚಾದಷ್ಟು ನಾವು ಶಕ್ತಿಯುತರಾಗುತ್ತ ಹೋಗುತ್ತೇವೆ. ಆಯುಧಗಳ ನಿರ್ಮಾಣ ಮಾತ್ರವಲ್ಲದೆ ಆಯುಧವನ್ನು ಯಶಸ್ವಿ ಶಸ್ತ್ರವನ್ನಾಗಿ ಬಳಸಿಕೊಳ್ಳುವುದು ಹೇಗೆ ಮತ್ತು ಆ ಶಸ್ತ್ರಕ್ಕೆ ಯಾವ ಶಕ್ತಿ ತುಂಬಿದರೆ ಅದು ಅಸ್ತ್ರವಾಗಿ ರೂಪುಗೊಳ್ಳಬಹುದು ಎಂಬ ಜ್ಞಾನ ಮುಖ್ಯ. ಅದೇನೇ ಇರಲಿ, ಆಯುಧಗಳು ಸದ್ಬಳಕೆಯಾಗಲಿ. ಶಸ್ತ್ರ ಅಸ್ತ್ರಗಳಾಗಿ ವಿನಾಶಕ್ಕೆ ಕಾರಣವಾಗದಿರಲಿ.
(ಲೇಖಕರು ಧರ್ಮಸ್ಥಳದ ಧರ್ಮಾಧಿಕಾರಿಗಳು)