ಅಂಕಣ

ಸಾಮಾಜಿಕ ಪಲ್ಲಟದ ಕಡೆಗೆ ಹೆಜ್ಜೆ; ಸುತ್ತೋಲೆಯ ಸುತ್ತ...

Webdesk - Ravikanth
ಭೂಮಿಗೆ ಬಿದ್ದ ಬೀಜ / ಎದೆಗೆ ಬಿದ್ದ ಅಕ್ಷರ / ಇಂದಲ್ಲ ನಾಳೆ ಫಲ ಕೊಡುವುದು: ದೇವನೂರ ಮಹಾದೇವ

ಆಗಸ್ಟ್ 10ರಂದು ಕರ್ನಾಟಕ ಸರ್ಕಾರದ ಸಚಿವಾಲಯ ಒಂದು ಸುತ್ತೋಲೆಯನ್ನು ಹೊರಡಿಸಿದೆ; ‘ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ಈ ಮೂಲಕ ನಿರ್ದೇಶಿಸಿದೆ. ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದು. ಈ ನಿರ್ದೇಶನವನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲ ಸಂಸ್ಥೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಿದೆ’. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಸೂಚನೆಯಿದು. ಮೇಲ್ನೋಟಕ್ಕೆ ಎಲ್ಲ ಆದೇಶಗಳಂತೆ ಇದೂ ಒಂದು ಆದೇಶವೆನಿಸಿದರೂ ಸಾಮಾಜಿಕ ಪಲ್ಲಟದ ದೃಷ್ಟಿಯಿಂದ ಇದು ಸರ್ಕಾರ ತೆಗೆದುಕೊಂಡಿರುವ ಒಂದು ಪ್ರಮುಖ ನಿಲವು. ಒಂದು ಸಣ್ಣಸಂಗತಿ ಮಹತ್ವದ ಬದಲಾವಣೆಗೆ ಕಾರಣವಾಗಿಬಿಡಬಹುದು.

ಇದಕ್ಕೆ ಮೊದಲು ಒಂದು ಸುದ್ದಿಯನ್ನು ಓದಿದ್ದೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನೀಲ್​ಕುಮಾರ್, ‘ನನ್ನನ್ನು ಅಭಿನಂದಿಸಲು ಬರುವವರು ಹಾರ, ತುರಾಯಿಗಳನ್ನು ತರುವುದು ಬೇಡ. ಕೊಡಲೇಬೇಕು ಎಂದಿದ್ದರೆ, ಒಂದು ಕನ್ನಡ ಪುಸ್ತಕವನ್ನು ಕೊಡಿ. ನೀವು ಕೊಟ್ಟ ಪುಸ್ತಕವನ್ನು ನಾನು ಕಾರ್ಕಳದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುತ್ತೇನೆ. ಇದರಿಂದ ನನ್ನ ಮತಕ್ಷೇತ್ರದ ವಿದ್ಯಾರ್ಥಿಗಳಿಗೆ ಮತ್ತು ಜ್ಞಾನದಾಹಿಗಳಿಗೆ ಪ್ರಯೋಜನವಾಗುತ್ತದೆ’ ಎಂದು ಮನವಿ ಮಾಡಿಕೊಂಡಿದ್ದರು. ಈ ಮನವಿಯ ಬಳಿಕ ಅವರಿಗೆ ಸುಮಾರು ಎರಡು ಸಾವಿರ ಪುಸ್ತಕಗಳು ಬಂದಿದ್ದವೆಂದು ವರದಿ ತಿಳಿಸುತ್ತದೆ. ಸರ್ಕಾರದ ಆದೇಶದ ಹಿಂದೆ ಇವರ ಮನವಿಯ ಪ್ರೇರಣೆ ಇದ್ದಿರಬಹುದು. ಪೊಲೀಸ್ ಅಧಿಕಾರಿಗಳ ಸಭೆಯೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಹೂಗುಚ್ಛ ಸ್ವೀಕರಿಸಲು ನಿರಾಕರಿಸಿ, ‘ಇದು ಅನಗತ್ಯ ವೆಚ್ಚ, ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹಾರ, ತುರಾಯಿ ಹೂಗುಚ್ಛ, ಶಾಲು, ಪೇಟಗಳನ್ನು ನೀಡುವ ಅಗತ್ಯವಿಲ್ಲ. ಇನ್ನುಮುಂದೆ ಈ ಸಂಪ್ರದಾಯ ಬೇಡ’ ಎಂದು ಹೇಳಿದ್ದೂ ವರದಿಯಾಗಿತ್ತು. ಈಗ ಇದು ವೈಯಕ್ತಿಕ ಅಭಿಪ್ರಾಯವಾಗದೆ ಎಲ್ಲರಿಗೂ ಅನ್ವಯವಾಗುವಂತೆ ಸರ್ಕಾರದ ನಿಲುವಾಗಿ ರೂಪುಗೊಂಡಿದೆ.

ಈ ಮೊದಲು ಸುನೀಲ್​ಕುಮಾರ್ ತಮ್ಮ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅವರು ಭಾಗವಹಿಸುವ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ತಮಗೆ ಹಾರ, ತುರಾಯಿಗಳನ್ನು ನೀಡಬಾರದು, ಬದಲಿಗೆ ಒಂದು ಕೆ.ಜಿ. ‘ಕಾರ್ಲಕಜೆ’ ಎಂಬ ಸ್ಥಳೀಯ ತಳಿಯ ಕೆಂಪು ಅಕ್ಕಿಯನ್ನು ನೀಡುವಂತೆ ಮನವಿ ಮಾಡಿಕೊಂಡು, ಅದರಂತೆ ಅಕ್ಕಿ ಸಂಗ್ರಹಿಸಿ ಅದನ್ನು ಅಗತ್ಯವಿದ್ದವರಿಗೆ ವಿತರಿಸುತ್ತಿದ್ದರೆಂದು ಕೇಳಿದ್ದೇನೆ. ಇತ್ತೀಚೆಗೆ ಕಾರ್ಕಳ ಮೂಲದ ಬಿಳಿಬೆಂಡೆ ಬೀಜವನ್ನು ಮುಂಗಾರು ಸಮಯದಲ್ಲಿ ತಮ್ಮ ಕ್ಷೇತ್ರದ ಜನರಿಗೆ ವಿತರಿಸಿ ಅದನ್ನು ಬೆಳೆಯಲು ಪ್ರೋತ್ಸಾಹ ನೀಡಿದ್ದರೆಂಬ ಮಾಹಿತಿಯೂ ಇದೆ. ನಮ್ಮ ಜನಪ್ರತಿನಿಧಿಗಳ ಬಗ್ಗೆ ನಾವೆಲ್ಲ ಅಪಸ್ವರದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಇಂತಹ ಸಂಗತಿಗಳು ರಚನಾತ್ಮಕ ಚಿಂತನೆಗಳಾಗಿ ಕಾಣಿಸುತ್ತವೆ. ಸುನೀಲ್​ಕುಮಾರ್ ಸಚಿವರಾದ ಮೇಲೆ ತಮ್ಮ ಜವಾಬ್ದಾರಿಗೆ ಬಂದಿರುವ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಗಳ ಬಗ್ಗೆ ಹೇಳುತ್ತ, ‘ಪವರ್​ಗೆ ಸಂಸ್ಕೃತಿ ಬೇಕಾಗಿದೆ, ಸಂಸ್ಕೃತಿಗೆ ಪವರ್ ತುಂಬಬೇಕಾಗಿದೆ’ ಎಂದು ಹೇಳಿದ್ದಾರೆ. ಇದು ಚಮತ್ಕಾರದ ಮಾತುಗಳಾಗದೆ ತಾತ್ವಿಕ ನೆಲೆಯ ಪರಿಕಲ್ಪನೆಯಾಗುವುದಾದರೆ ಅರ್ಥಪೂರ್ಣ ಬದಲಾವಣೆ ಸಾಧ್ಯ.

ಹಾರ ತುರಾಯಿಯ ಬದಲು ಪುಸ್ತಕ ಕೊಡುವ ಕ್ರಮ ಒಂದು ವಸ್ತುವಿಗೆ ಬದಲು ಮತ್ತೊಂದು ವಸ್ತುವನ್ನು ನೀಡುವ ಪರಿಕ್ರಮ ಮಾತ್ರವಲ್ಲ. ಪುಸ್ತಕವೆಂದರೆ ಎಲ್ಲ ಬಗೆಯ ಜ್ಞಾನ; ಪುಸ್ತಕವೆಂದರೆ ಮಾಹಿತಿ ಸಂಗ್ರಹ; ಪುಸ್ತಕವೆಂದರೆ ಜೀವನಾನುಭವದ ತಿಳಿವಳಿಕೆಯ ಸಾರ; ಪುಸ್ತಕವೆಂದರೆ ಮನೋಲ್ಲಾಸ; ಪುಸ್ತಕವೆಂದರೆ ಶ್ರೇಷ್ಠ ಮನಸ್ಸುಗಳ ಜೊತೆಗಿನ ಒಡನಾಟ. ಹೀಗಾಗಿ ನಾಗರಿಕ ಜಗತ್ತಿನಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದು. ನಮ್ಮ ಅಭಿವೃದ್ಧಿಯ ಪರಿಕಲ್ಪನೆ ಯನ್ನು ಅಳೆಯುವ ಮಾನದಂಡಗಳಲ್ಲಿ ಜಿಡಿಪಿ ಮುಖ್ಯವಾದುದು. ದೇಶದ ಆರ್ಥಿಕ ಸ್ಥಿತಿಯನ್ನು ಇದು ಸೂಚಿಸುತ್ತದೆ. ಪ್ರಗತಿಯನ್ನು ಆರ್ಥಿಕ ಅಳತೆಗೋಲಿನಿಂದ ಅಳೆಯುವುದು ಆಧುನಿಕ ಜಗತ್ತಿನ ಪರಿಕಲ್ಪನೆ. ನಾವು ಕೆಲವು ಗೆಳೆಯರು ಭೂತಾನ್​ಗೆ ಹೋಗಿದ್ದಾಗ ಅಲ್ಲಿಯ ಜಿಡಿಪಿಯ ಪರಿಕಲ್ಪನೆಯನ್ನು ಕಂಡು ಆಶ್ಚರ್ಯವಾಯಿತು. ಭೂತಾನ್ ಹಿಮಾಲಯದ ತಪ್ಪಲಲ್ಲಿರುವ ನಮ್ಮ ನೆರೆನಾಡು. ಅದರ ಒಟ್ಟು ಜನಸಂಖ್ಯೆ ಕೇವಲ ಏಳು ಲಕ್ಷ. ನಮ್ಮ ಬೆಂಗಳೂರಿನ ಜನಸಂಖ್ಯೆಯೇ ಒಂದುನೂರ ಇಪ್ಪತೆôದು ಲಕ್ಷ ದಾಟಿದೆ ಎಂಬುದನ್ನು ನೆನಪಿಸಿಕೊಳ್ಳಿ. ಭೂತಾನ್​ನ ಜನಜೀವನ ಹಾಗೂ ಸಂಸ್ಕೃತಿಯಲ್ಲಿ ಬೌದ್ಧಧರ್ಮದ ಪ್ರಭಾವ ಹಾಸುಹೊಕ್ಕಾಗಿದೆ. ಇಂತಹ ಪುಟ್ಟ ರಾಷ್ಟ್ರ ಭೂತಾನ್ ಜಿಡಿಪಿಯ ಪರಿಕಲ್ಪನೆಯನ್ನು ಜಗತ್ತಿನ ಉಳಿದೆಲ್ಲ ರಾಷ್ಟ್ರಗಳಿಗಿಂತ ಭಿನ್ನವಾಗಿ ನಿರ್ವಚಿಸುತ್ತದೆ. ‘ಒಂದು ದೇಶದ ಅಭಿವೃದ್ಧಿಯನ್ನು ಆ ದೇಶದ ನಿರ್ಜೀವ ಭೌತಿಕ ವಸ್ತುಗಳ ಉತ್ಪಾದನೆ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಅಳತೆ ಮಾಡಬಾರದು. ಬದಲಾಗಿ ಅಲ್ಲಿ ಜೀವಂತವಾಗಿರುವ ಜನರ ಸಮಾನತೆಯ ಪರಿಕಲ್ಪನೆ ಹಾಗೂ ಸಂತೋಷದ ಮನೋಭಾವವನ್ನು ಅಳತೆಗೋಲು ಮಾಡಿಕೊಂಡು ನಿರ್ಧರಿಸಬೇಕು’. ಇದು ಆಧುನಿಕ ಜಗತ್ತಿನ ಪ್ರಗತಿಯ ಪರಿಕಲ್ಪನೆಯನ್ನೇ ಪ್ರಶ್ನಿಸುವಂತಿದೆ. ಅರ್ಥಶಾಸ್ತ್ರಜ್ಞರಿಗೆ ಸವಾಲಾಗಿರುವ ಜಿಡಿಪಿಯ ಈ ಪರಿಕಲ್ಪನೆಯ ಹಿನ್ನೆಲೆಯಲ್ಲಿ ನಾವು ಪವರ್​ಗೆ ಸಂಸ್ಕೃತಿಯ ಅಗತ್ಯವಿದೆ ಎಂಬುದನ್ನು ವ್ಯಾಖ್ಯಾನಿಸಬೇಕಾಗಿದೆ.

ಉತ್ತಮ ಪುಸ್ತಕಗಳ ಓದು ನಮ್ಮ ಮನಸ್ಸು ಜಡವಾಗದಂತೆ ಸೂಕ್ಷ್ಮವಾಗಿಟ್ಟುಕೊಳ್ಳುವ ಸಾಧನ; ಸಮಾಜವನ್ನು ಚಲನಶೀಲ ವಾಗಿಡುವ ಶಕ್ತಿ; ಅಬ್ಬರ, ಆರ್ಭಟಗಳ ನಡುವೆ ಅಂತಃಕರಣದ ದನಿ ಕಳೆದುಹೋಗದಂತೆ ಕಾಪಾಡುವ ಚೈತನ್ಯ; ಮಾನವೀಯತೆ ಬತ್ತಿಹೋಗದಂತೆ ಕಾಪಾಡುವ ಜೀವಸೆಲೆ. ಸಮಸಮಾಜದ ಕನಸು ಕಾಣುವ, ಜನಪರ ಕಾಳಜಿಯ ಜಗತ್ತಿನ ಎಲ್ಲ ಜನನಾಯಕರೂ ಪುಸ್ತಕ ವ್ಯಾಮೋಹಿಗಳೇ! ನಮ್ಮವರೇ ಆದ ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ, ವಾಜಪೇಯಿ ಇಂತಹ ಅನೇಕರನ್ನು ಉಲ್ಲೇಖಿಸಬಹುದು. ಇವರೆಲ್ಲ ನಿರಂತರ ಓದು, ಬರಹಗಳಿಂದ ತಮ್ಮ ವ್ಯಕ್ತಿತ್ವದ ಸೂಕ್ಷ್ಮತೆಯನ್ನು ಜತನದಿಂದ ಕಾಪಾಡಿಕೊಂಡವರು. ಒಂದು ಒಳ್ಳೆಯ ಪುಸ್ತಕದ ಓದು ನಮ್ಮ ಬದುಕಿನ ಗತಿಯನ್ನೇ ಬದಲಾಯಿಸಿಬಿಡಬಹುದು.

1957ರ ಚುನಾವಣೆಯಲ್ಲಿ ನಮ್ಮ ಶಾಂತವೇರಿ ಗೋಪಾಲಗೌಡರು ಸೋತಾಗ ಅವರಿಗೊಂದು ಪತ್ರ ಬಂದಿತ್ತು: ‘ನಿಮ್ಮಂತಹ ಸ್ವಚ್ಛ ಹೃದಯದ, ವಿಶಾಲ ಮನಸ್ಸಿನ, ಅಷ್ಟೇ ಅಚ್ಚಕನ್ನಡದಲ್ಲಿ ಮನೋಹರವಾಗಿ ವೈಚಾರಿಕ ಭಾಷಣ ಮಾಡುವ ಇನ್ನೊಬ್ಬರನ್ನು ನಾನು ಕಂಡಿಲ್ಲ, ಕೇಳಿಲ್ಲ. ನೀವು ಮತ್ತೊಮ್ಮೆ ಶಾಸಕರಾಗಿ ಬರಬೇಕೆಂಬುದು ನನ್ನ ಬಯಕೆ’. ಇದನ್ನು ಬರೆದವರು ಅವರ ಪಕ್ಷದ ಅಭಿಮಾನಿಯಲ್ಲ ಅಥವಾ ಅವರ ಹಿಂಬಾಲಕರಲ್ಲ. ನಮ್ಮ ಕಾಲದ ಚಿಂತನಶೀಲ ಕವಿ ಪು.ತಿ.ನರಸಿಂಹಾಚಾರ್ ಅವರು. ಕನ್ನಡ ಸಾಹಿತ್ಯದ ಓದಿನಿಂದ ಸಂಪನ್ನವಾದ ಹಾಗೂ ತಮ್ಮ ಆಲೋಚನೆಗಳನ್ನು ಮಂಡಿಸಲು ತಕ್ಕ ಭಾಷೆಯನ್ನು ರೂಪಿಸಿಕೊಂಡು ತಮ್ಮ ವಾದಗಳಿಗೆ ಮೊನಚು ತರಲು ಅಲ್ಲಲ್ಲಿ ಕನ್ನಡ ಸಾಹಿತ್ಯದ ಭಾಗಗಳನ್ನೂ ಉಲ್ಲೇಖಿಸುತ್ತಿದ್ದ ಗೋಪಾಲಗೌಡರ ವಾದವೈಖರಿ ಪುತಿನ ಅವರಿಂದ ಇಂತಹ ಮೆಚ್ಚುಗೆ ಗಳಿಸಿದ್ದು ಅಚ್ಚರಿಯೇನಲ್ಲ. ಇಂತಹ ಪತ್ರವನ್ನು ನಾವೀಗ ಯಾವ ರಾಜಕಾರಣಿಗೆ ಬರೆಯಲು ಸಾಧ್ಯ? ನಮ್ಮ ಶಾಸನಸಭೆಯಲ್ಲಿ ಬಳಕೆಯಾಗುವ ಭಾಷೆಯ ಮಟ್ಟ ಯಾವ ಹಂತ ತಲುಪಿದೆ? ಕೆಲವು ದಿನಗಳ ಹಿಂದೆ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಸೇರಿ ‘ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವಲ್ಲಿ ಒಂದು ಆತ್ಮಾವಲೋಕನ’ ಎಂಬ ಚಿಂತನಗೋಷ್ಠಿಯನ್ನು ಏರ್ಪಡಿಸಿದ್ದರು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದ ಆ ಸಭೆಯಲ್ಲಿ ಎಲ್ಲರ ಒಕ್ಕೊರಲಿನ ಒಂದು ಅಭಿಪ್ರಾಯ: ಯಾವುದೇ ವಿಷಯದ ಅಧ್ಯಯನದ ಸಿದ್ಧತೆಯಿಲ್ಲದೆ ಶಾಸಕಾಂಗ ಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ಅರ್ಥಪೂರ್ಣ ಸಂವಾದದ ಬದಲು ಸಭೆ ಗದ್ದಲ, ಕೂಗಾಟಗಳ ವೇದಿಕೆಯಾಗುತ್ತಿದೆಯೆಂಬುದು. ಸಿದ್ಧತೆಯೆಂದರೆ ವಿಷಯದ ಗ್ರಂಥಗಳ ಅಧ್ಯಯನ ತಾನೇ!

ನೈಪಾಲ್ ಭಾರತದ ಬಗ್ಗೆ ‘ಇಂಡಿಯನ್ ಟ್ರಯಾಲಜಿ’ ಎಂದು ಕರೆಯುವ ಮೂರು ಕೃತಿಗಳನ್ನು ಬರೆದಿದ್ದಾರೆ. ಈ ಟ್ರಯಾಲಜಿಯ ಎರಡನೆಯ ಕೃತಿ ‘ದ ವೂಂಡೆಡ್ ಸಿವಿಲಿಜೇಷನ್’. ಇದು ಮೊದಲನೆಯ ‘ಅನ್ ಏರಿಯಾ ಆಫ್ ಡಾರ್ಕ್​ನೆಸ್’ಗಿಂತ ಭಿನ್ನ ನಿಲುವನ್ನು ಹೊಂದಿರುವಂಥದು. ಒಂದು ಕಾಲಕ್ಕೆ ಶಕ್ತಿಯುತವಾಗಿದ್ದ ಭಾರತ ಅನೇಕ ಶತಮಾನಗಳಿಂದ ಅನ್ಯರ ದಾಳಿಗೆ ಸಿಕ್ಕಿ ಶಕ್ತಿಹೀನವಾಗಿದೆ; ಆಧುನಿಕ ಸವಾಲುಗಳನ್ನು ಎದುರಿಸಲು ಅಸಮರ್ಥವಾಗಿದೆ. ಗಾಯಗೊಂಡ ನಾಗರಿಕತೆ ಎದುರಿಸುವ ಸವಾಲಿದು. ಅದರಿಂದ ಹೊರಬರುವ ಬೌದ್ಧಿಕ ಸಾಮರ್ಥ್ಯವನ್ನು ಅದು ಪಡೆದುಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸುತ್ತಾರೆ. ಭಾರತದ ಸಮಸ್ಯೆಯನ್ನು ರಾಜಕೀಯ ಹಾಗೂ ಆರ್ಥಿಕ ಆಯಾಮಗಳಿಗಿಂತ ಭಿನ್ನವಾಗಿ ಸಾಂಸ್ಕೃತಿಕ ನೆಲೆಯಿಂದ ನೋಡುವ ಪ್ರಯತ್ನವಿದು. ಟ್ರಯಾಲಜಿಯ ಮೂರನೆಯ ಕೃತಿ ‘ಎ ಮಿಲಿಯನ್ ಮ್ಯೂಟಿನೀಜ್’ನಲ್ಲಿ ಈ ಬದಲಾವಣೆಯ ಎಳೆಗಳನ್ನು ಅವರು ಗುರ್ತಿಸುತ್ತಾರೆ. ಅರಿವಿನ ಅಸಂಖ್ಯ ಬಂಡಾಯಗಳು ನವಭಾರತ ನಿರ್ವಣದ ಸಾಧ್ಯತೆಗಳನ್ನು ಸೂಚಿಸುತ್ತವೆಯೆಂದು ನೈಪಾಲ್ ಹೇಳುತ್ತಾರೆ. ಅಂದರೆ ಅರಿವಿನ ಜಾಗೃತಿ ಪ್ರಗತಿಪರ ಬದಲಾವಣೆಯ ಸಾಧ್ಯತೆ.

ಈ ‘ಅರಿವಿನ ಬಂಡಾಯ’ಕ್ಕೆ ಹಾದಿ ನಮ್ಮ ಅರಿವನ್ನು ವಿಸ್ತರಿಸುವ ಪುಸ್ತಕಗಳು. ಅನೇಕ ಬಗೆಯ ಆಕ್ರಮಣಗಳಿಂದ ತತ್ತರಿಸುತ್ತಿರುವ ಹೊತ್ತಿನಲ್ಲಿ, ಪಶ್ಚಿಮಮುಖಿಯಾಗದೇ ಸ್ವತಂತ್ರ ಬೌದ್ಧಿಕ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಈ ಬಗೆಯ ‘ಪುಸ್ತಕ ಚಳವಳಿ’ ಅತ್ಯಗತ್ಯ. ನಗರಗಳಲ್ಲಿ ಉಸಿರಾಡಲಾಗದ ಉಬ್ಬಸ; ಹಳ್ಳಿಗಳಲ್ಲಿ ನಡೆಯಲು ತ್ರಾಣವಿಲ್ಲದ ಬಡತನದ ಸಂಕಟ; ಇದ್ಯಾವುದರ ಅರಿವಿಲ್ಲದೆ ಅಧಿಕಾರಕ್ಕೆ ಹಂಬಲಿಸಿ ನಮ್ಮ ಜನಪ್ರತಿನಿಧಿಗಳು ನಡೆಸುವ ಕಿತ್ತಾಟ- ಇವುಗಳಿಂದ ಪಾರಾಗಲು ಇರುವ ಏಕೈಕ ಹಾದಿ ‘ಅರಿವಿನ ಬಂಡಾಯ’. ಇದು ಉತ್ತಮ ಪುಸ್ತಕಗಳ ಓದಿನಿಂದ ಸಾಧ್ಯವಾಗುವಂಥದು. ಸರ್ಕಾರ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ ಪ್ರಗತಿಯ ಪಥದಲ್ಲಿ ಹೆಜ್ಜೆ ಹಾಕಲಿ ಎಂದು ಆಶಿಸೋಣ.

ಮರೆಯಬಾರದ ಮಾತು: ಈ ಆದೇಶದಿಂದ ಹೂವನ್ನು ಬೆಳೆಯುವ ಕೃಷಿಕರು, ಮಾರಾಟಮಾಡಿ ಬದುಕು ಕಟ್ಟಿಕೊಂಡಿರುವ ಹೂವಾಡಿಗರು, ಬುಟ್ಟಿಗಳನ್ನು ಹೆಣೆಯುವ ಹಾಗೂ ಇದಕ್ಕೆ ಸಂಬಂಧಿಸಿದ ಕುಶಲಕರ್ವಿುಗಳು ಇವರು ಎದುರಿಸುವ ಸಮಸ್ಯೆಗಳ ಬಗ್ಗೆಯೂ ಸರ್ಕಾರಕ್ಕೆ ಅರಿವಿರಲಿ; ಪರಿಹಾರದ ಮಾಗೋಪಾಯಗಳನ್ನು ಚಿಂತಿಸಲಿ.

(ಲೇಖಕರು ಖ್ಯಾತ ವಿಮರ್ಶಕರು)