ಅಂಕಣ

ಸ್ಟಾರ್ಟಪ್ ಸಕ್ಸಸ್; ಲೆಕ್ಕಾಚಾರ ಏನು?

Webdesk - Ravikanth
ಲಿಡೋ ಲರ್ನಿಂಗ್ ಎಂಬ ನವೋದ್ಯಮ ಬಾಗಿಲು ಮುಚ್ಚಿತು. 2019ರ ಏಪ್ರಿಲ್​ನಲ್ಲಿ ಆರಂಭವಾದ ಈ ಸ್ಟಾರ್ಟಪ್​ನ 1500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹೊಸ ವೃತ್ತಿ ಬದುಕು ಆರಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಸದ್ಯ ನವೋದ್ಯಮ ವಲಯದಲ್ಲಿ ಗುಯಿಂಗುಡುತ್ತಿರುವ ಸುದ್ದಿ. ಹಾಗಂತ ಈ ರೀತಿ ಮುಚ್ಚಿರುವುದು ಇದೊಂದೇ ಸ್ಟಾರ್ಟಪ್ ಅಲ್ಲ.

ನವೋದ್ಯಮ ಆರಂಭಿಸುವವರು, ಉದ್ಯೋಗಿಗಳು ಎಲ್ಲ ಯುವಜನರೇ ಎಂಬುದು ಕೂಡ ಗಮನಾರ್ಹ. ಅದೊಂದು ಸಾಹಸ ಪ್ರವೃತ್ತಿ. ನವೋದ್ಯಮ ಆರಂಭಿಸುವ ಧೈರ್ಯವನ್ನು ಎಲ್ಲರೂ ಮಾಡಲಾರರು ಎಂಬುದ ಕೂಡ ವಾಸ್ತವ. ದೇಶದಲ್ಲಿ ಪ್ರತಿವರ್ಷ ಹುಟ್ಟಿಕೊಳ್ಳುವ ನವೋದ್ಯಮಗಳ ಸಂಖ್ಯೆ ಸಾವಿರಾರು. ಆದರೆ, ಅವುಗಳ ಪೈಕಿ ಶೇಕಡ 10 ಮಾತ್ರವೇ ಯಶಸ್ಸು ಕಾಣುತ್ತವೆ. ಅದೂ ಐದು ವರ್ಷ ದಾಟಿದ ಬಳಿಕ!. ಶೇಕಡ 90 ನವೋದ್ಯಮಗಳು ಐದು ವರ್ಷಕ್ಕಿಂತ ಹೆಚ್ಚು ಬಾಳುವುದಿಲ್ಲ. ಇಂತಹ ನವೋದ್ಯಮಗಳ ಸಾಲಿಗೆ ಈ ಲಿಡೋ ಲರ್ನಿಂಗ್ ಕೂಡ ಸೇರಿಬಿಟ್ಟಿತು. ಲಿಂಕ್ಡ್ ಇನ್ ಪ್ಲಾಟ್​ಫಾರಂನಲ್ಲಿ ಲಿಡೋ ಲರ್ನಿಂಗ್ ಕಂಪನಿಯ ಉದ್ಯೋಗಿಗಳು, ಮಕ್ಕಳನ್ನು ಸೇರಿಸಿದ ಪಾಲಕರ ದುಃಖ ದುಮ್ಮಾನಗಳು ವ್ಯಕ್ತವಾಗಿವೆ. ಅದರಲ್ಲೊಬ್ಬರು ಬರೆದಿರುವುದು ಹೀಗಿದೆ - ‘ಎಡ್​ಟೆಕ್ ಇಂಡಸ್ಟ್ರಿಯಲ್ಲಿ ಮೊಟ್ಟ ಮೊದಲ ಸಲ ನನಗೆ ಕೆಟ್ಟ ಅನುಭವ ಆಯಿತು. ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಕಂಪನಿ ಉದ್ಯೋಗಿಗಳ ಸಭೆ ಕರೆದ ಆಡಳಿತ ಮಂಡಳಿ, ವಹಿವಾಟು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಅದೂ ವೇತನಕ್ಕೆ ಇನ್ನೆರಡು ದಿನ ಇರುವಾಗ, ಕಂಪನಿಗೆ ಹಣಕಾಸಿನ ಸಂಕಷ್ಟ ಎದುರಾಗಿದೆ. ಹೀಗಾಗಿ ಮುಚ್ಚುವುದು ಅನಿವಾರ್ಯ ಎಂದು ಹೇಳಿತು. ಈ ನವೋದ್ಯಮ ಇದುವರೆಗೆ 24 ದಶಲಕ್ಷ ಡಾಲರ್ ಹಣವನ್ನು ಹೂಡಿಕೆ ಮಾಡಿಸಿಕೊಂಡಿದೆ. ದುಡ್ಡು ಕಳೆದುಕೊಂಡವರ ಮತ್ತು ಉದ್ಯೋಗಿಗಳ ಭಾವನೆಗಳನ್ನು ಗೌರವಿಸಬೇಕು ಎಂಬುದು ಎಷ್ಟು ವಾಸ್ತವವೋ ಅದೇ ರೀತಿ ಯಾಕೆ ಹೀಗಾಯಿತು ? ಎಂಬುದನ್ನು ಅರಿಯಬೇಕಾದುದು ಕೂಡ ಅಷ್ಟೇ ಅಗತ್ಯ.

ಬಾಗಿಲು ಮುಚ್ಚುವ ನವೋದ್ಯಮಗಳು: ಚಾಯ್ ಪಾಯಿಂಟ್, ಓಲಾ, ಸ್ವಿಗ್ಗಿ, ನೈಕಾ ಮುಂತಾದ ಅನೇಕ ಸ್ಟಾರ್ಟಪ್​ಗಳು ಈಗಾಗಲೇ ತಮ್ಮ ವಹಿವಾಟಿನ ಮೂಲಕ ಜಗತ್ತಿನಲ್ಲಿ ಒಂದು ಛಾಪನ್ನು ಮೂಡಿಸಿವೆ. ಇವೆಲ್ಲವೂ ಜಗತ್ತಿನ ಟಾಪ್ 50 ಇನ್ನೋವೇಟಿವ್ ನವೋದ್ಯಮಗಳ ಪಟ್ಟಿಯಲ್ಲಿವೆ. ಇನ್ನೊಂದೆಡೆ, ಲಿಡೋ ಲರ್ನಿಂಗ್ ಮಾದರಿಯ ಸಾವಿರಾರು ನವೋದ್ಯಮಗಳು ಹುಟ್ಟಿಕೊಂಡ ಕೆಲವೇ ವರ್ಷಗಳಲ್ಲಿ ಮುಚ್ಚಿಕೊಂಡು ಹೋಗುತ್ತಿವೆ ಎಂಬುದೂ ವಾಸ್ತವ. ಐಬಿಎಂ ಇನ್​ಸ್ಟಿಟ್ಯೂಟ್ ಆಫ್ ಬಿಜಿನೆಸ್ ವ್ಯಾಲ್ಯೂಸ್ ಆಂಡ್ ಆಕ್ಸ್​ಫರ್ಡ್ ಎಕನಾಮಿಕ್ಸ್ ವರದಿಗಳ ಪ್ರಕಾರ, ಭಾರತದಲ್ಲಿ ಶೇಕಡ 90ರಷ್ಟು ನವೋದ್ಯಮಗಳು ಆರಂಭವಾದ 5 ವರ್ಷಗಳ ಒಳಗೆ ಬಾಗಿಲು ಮುಚ್ಚುತ್ತವೆ. ಇನ್ನೊಂದು ಅಧ್ಯಯನ ವರದಿ ಪ್ರಕಾರ, ಕೆಲವು ಸಣ್ಣ ಪ್ರಮಾಣದ ನವೋದ್ಯಮಗಳ ಪೈಕಿ ಶೇಕಡ 20 ಆರಂಭವಾದ ಒಂದೇ ವರ್ಷದಲ್ಲಿ ಬಾಗಿಲು ಮುಚ್ಚುತ್ತವೆ. ಇನ್ನೊಂದು ಶೇಕಡ 20 ನವೋದ್ಯಮಗಳು ಎರಡನೇ ವರ್ಷ ವ್ಯವಹಾರ ನಿಲ್ಲಿಸಿಬಿಡುತ್ತವೆ. ಶೇಕಡ 50 ನವೋದ್ಯಮಗಳು 5 ವರ್ಷಗಳಲ್ಲಿ, ಶೇಕಡ 70 ನವೋದ್ಯಮಗಳು ಹತ್ತು ವರ್ಷಗಳ ಒಳಗೆ ಬಾಗಿಲು ಮುಚ್ಚಿ ಬಿಡುತ್ತವೆ.

ಸೋಲಲು ಕಾರಣವೇನು?: ನವೋದ್ಯಮಗಳ ಬಾಗಿಲು ಮುಚ್ಚುವುದಕ್ಕೆ ಬಹುತೇಕ ಆರ್ಥಿಕ ಕಾರಣಗಳೇ ಮುಖ್ಯವಾಗಿರುತ್ತವೆ. ಆದರೆ, ಇತರೆ ಕೆಲವು ಕಾರಣಗಳು ಕೂಡ ಇರುತ್ತವೆ. ಅವುಗಳನ್ನು ನವೋದ್ಯಮಿಗಳು ಗುರುತಿಸಿರುವುದಿಲ್ಲ. ಇದನ್ನು ಗಮನಿಸಿಯೇ ಭಾರತದ ಅತ್ಯಂತ ಯಶಸ್ವಿ ಉದ್ಯಮಿ ಮುಕೇಶ್ ಅಂಬಾನಿಯವರು ಹೊಸ ಉದ್ಯಮಿಗಳು ಅವರ ಮಾರುಕಟ್ಟೆಯನ್ನು ದೇಶದಲ್ಲಷ್ಟೆ ಅಲ್ಲ, ಜಾಗತಿಕ ಮಟ್ಟಕ್ಕೂ ವಿಸ್ತರಿಸುವ ಕಡೆಗೆ ಗಮನಹರಿಸಬೇಕು ಎಂದು ಇತ್ತೀಚೆಗೆ ದೇಶದ ಯುವಜನರಿಗೆ ಸಲಹೆ ನೀಡಿದ್ದರು. ಇದಕ್ಕೆ ಪೂರಕವಾಗಿ ಹೇಳುವುದಾದರೆ, ನವೋದ್ಯಮಿಗಳು ಮಾಡಬಾರದ ಮೂರು ವಿಚಾರಗಳಿವೆ. ಅವುಗಳೆಂದರೆ - ಹಲವು ಚಿಂತನೆಗಳನ್ನು ಒಂದೇ ಸಲ ಜಾರಿಗೊಳಿಸುವುದಕ್ಕೆ ಪ್ರಯತ್ನಿಸುವುದು. ಎಲ್ಲವನ್ನೂ ಒಬ್ಬನೇ ಮಾಡುವುದಕ್ಕೆ ಪ್ರಯತ್ನಿಸುವುದು. ಸರಿಯಾದವರನ್ನು ಕೆಲಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗುವುದು.

ಹಲವು ಐಡಿಯಾ ಜಾರಿ ಯತ್ನ: ಬಹುತೇಕ ಹೊಸ ಉದ್ಯಮಿಗಳು ಒಂದು ವ್ಯಾಪಾರ ಚಿಂತನೆಯ ಕಡೆಗೆ ಗಮನ ಕೇಂದ್ರೀಕರಿಸಿರುವುದಿಲ್ಲ. ಹಲವಾರು ವ್ಯಾಪಾರ ಚಿಂತನೆಗಳನ್ನು ಒಟ್ಟಿಗೆ ಜಾರಿಗೊಳಿಸುವ ಪ್ರಯತ್ನಕ್ಕೆ ಅವರು ಮುಂದಾಗಿರುವ ಕಾರಣ, ಆರಂಭಿಕ ಯಶಸ್ಸು ಕೂಡ ಅವರಿಗೆ ದಕ್ಕುವುದಿಲ್ಲ. ಫೋಕಸ್ ಆಗಿ ಇಲ್ಲದೇ ಇರುವ ಕಾರಣ ಅವರು ವಿಫಲರಾಗಿರುತ್ತಾರೆ. ಯಾವುದೆ ಸ್ಟಾರ್ಟಪ್ ಆರಂಭಿಸಿದರೂ, ಅದರ ಮೇಲೆ ಗಮನ ಕೇಂದ್ರೀಕರಿ ಸಬೇಕಾದ್ದು ಅವಶ್ಯ. ಅಲ್ಲಿ ಸ್ಥಿರತೆ ಬೇಕು. ಅದಿಲ್ಲದೇ ಹೋದರೆ ಯಶಸ್ಸು ಸಾಧ್ಯವಿಲ್ಲ. ಉದಾಹರಣೆಗೆ ಸ್ವಿಗ್ಗಿ ಯಾಕೆ ಯಶಸ್ವಿಯಾಗಿದೆ ಎಂದರೆ ಅವರು ಫುಡ್ ಡೆಲಿವರಿ ಕಡೆಗೆ ಮಾತ್ರ ಫೋಕಸ್ ಮಾಡಿದರು. ಅದು ಯಶಸ್ವಿಯಾಗಿದೆ ಎಂಬುದನ್ನು ಖಾತರಿಗೊಳಿಸಿದ ಬಳಿಕವಷ್ಟೆ ದಿನಸಿ ತಲುಪಿಸುವ ಕೆಲಸಕ್ಕೆ ಕೈಹಾಕಿದರು.

ನೇಮಕದಲ್ಲಿ ಸಮಯ ವ್ಯರ್ಥ: ಅಧ್ಯಯನ ವರದಿ ಒಂದರ ಪ್ರಕಾರ, ನವೋದ್ಯಮಗಳ ಪೈಕಿ ಶೇಕಡ 23 ಕಂಪನಿಗಳು, ಸರಿಯಾದ ಕೌಶಲ ಹೊಂದಿದ ಮತ್ತು ಸೂಕ್ತ ಪ್ರತಿಭೆಗಳ ಕೊರತೆ ಕಾರಣ ಮುಚ್ಚಿಕೊಂಡು ಹೋಗುತ್ತಿವೆ. ಹೊಸ ಸ್ಟಾರ್ಟಪ್​ಗಳು ಪರ್ಫೆಕ್ಟ್ ಉದ್ಯೋಗಿಗಳ ನೇಮಕಕ್ಕೆ ಬಹಳ ಸಮಯ ವ್ಯರ್ಥ ಮಾಡುತ್ತವೆ. ಎಲ್ಲದಕ್ಕೂ ಮಿಗಿಲಾಗಿ ಹಣಕಾಸಿನ ಸವಾಲುಗಳ ಕಾರಣ ನವೋದ್ಯಮಗಳು ಪರಿಣತ ಮಾರುಕಟ್ಟೆ ವೃತ್ತಿಪರರನ್ನು ಉತ್ತಮ ಪ್ಯಾಕೇಜ್ ನೀಡಿ ನೇಮಕ ಮಾಡುವಲ್ಲಿ ವಿಫಲವಾಗುತ್ತವೆ. ಈ ಎರಡೂ ಸವಾಲು ಸರಿದೂಗಿಸಲು ಸೂಕ್ತ ನೇಮಕ ಮಾದರಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಉತ್ತಮ ಅಭ್ಯರ್ಥಿಯ ಆಯ್ಕೆಗೆ ಪರೀಕ್ಷೆಗಳನ್ನು ಒಡ್ಡಬೇಕು. ಹಣಕಾಸಿನ ಸಮಸ್ಯೆ ತಪ್ಪಿಸಲು ಫ್ರೀಲ್ಯಾನ್ಸ್ ಮತ್ತು ಅರೆಕಾಲಿಕ ಉದ್ಯೋಗಿಗಳ ನೇಮಕ ಹೆಚ್ಚು ಪರಿಣಾಮಕಾರಿ.

ಉತ್ತಮ ನಾಯಕತ್ವದ ಕೊರತೆ: ಒಂದು ವ್ಯಾಪಾರ/ಉದ್ಯಮ ಯಶಸ್ವಿಯಾಗಬೇಕಾದರೆ ಅದರ ಬಗ್ಗೆ ಒಂದು ಐಡಿಯಾ ಇರಬೇಕು ಮತ್ತು ಕಂಪನಿಯನ್ನು ಒಂದು ಬ್ರಾ್ಯಂಡ್ ಆಗಿ ಹಾಗೂ ಒಂದು ತಂಡವಾಗಿ ಮುನ್ನಡೆಸುವುದು ಹೇಗೆ ಎಂಬುದು ತಿಳಿದಿರಬೇಕಾದ್ದು ಮುಖ್ಯ. ಬಹುತೇಕ ಕಂಪನಿಗಳಲ್ಲಿ ಉತ್ತಮ ನಾಯಕತ್ವದ ಕೊರತೆ ಇದೆ. ಹಾರ್ವರ್ಡ್ ಬಿಜಿನೆಸ್ ರಿವ್ಯೂವ್ ಪ್ರಕಾರ, ಒಂದು ತಂಡವನ್ನು ಕಟ್ಟಿದರೆ ಅದು ದೊಡ್ಡ ಕಂಪನಿಯನ್ನೇ ಹುಟ್ಟುಹಾಕಬಲ್ಲದು. ಆದರೆ, ಇಲ್ಲಿ ನಾಯಕತ್ವವೇ ಯಶಸ್ಸಿಗೆ ಕೀಲಿಕೈ. ನಿಮ್ಮ ಬಳಿ ಉತ್ತಮ ವ್ಯಾಪಾರ/ಉದ್ಯಮದ ಚಿಂತನೆ ಇರಬಹುದು. ಆದರೆ, ತಂಡವನ್ನು ಮುನ್ನಡೆಸುವ ನಾಯಕತ್ವ ಇರಬೇಕು ಎಂದಿಲ್ಲ. ಹೀಗಿರುವಾಗ ಎಲ್ಲವನ್ನೂ ಒಬ್ಬನೇ ನಿರ್ವಹಿಸುತ್ತೇನೆ ಎಂದು ಹೇಳಲಾಗದು. ಆದ್ದರಿಂದ ಸ್ಟಾರ್ಟಪ್​ಗೆ ಒಬ್ಬ ಉತ್ತಮ ನಾಯಕನನ್ನು ನೇಮಕ ಮಾಡಿಕೊಳ್ಳಬೇಕು.