ಅಂಕಣ

ಶ್ರೀದತ್ತ ಭಾಗವತ ಅಂತರ್ಗತ ದತ್ತಾತ್ರೇಯ; ಇದೇ 18ರಂದು ದತ್ತ ಜಯಂತಿ

ತ್ರಿಮೂರ್ತಿಗಳ ಸ್ವರೂಪವಾಗಿರುವ ದತ್ತಾತ್ರೇಯರ ಕುರಿತು ಪ್ರಕಟವಾಗಿರುವ ಶ್ರೀದತ್ತ ಭಾಗವತ ಕೃತಿಯ ಕರ್ತೃ ‘ಹಂಶಕವಿ’ ಎಂಬ ಕಾವ್ಯನಾಮದಲ್ಲಿ ಪ್ರಸಿದ್ಧರಾಗಿರುವ ಹಣಮಂತಪ್ಪ ವಲ್ಲೇಪುರೆ ಅವರು ಗ್ರಂಥ ರಚನೆಯ ಹಿಂದಿನ ಪ್ರೇರಣೆ ಮತ್ತು ಸಾಕಾರ ವನ್ನು ಕುರಿತು ಬರೆದ ವಿಶೇಷ ಲೇಖನ ಇಲ್ಲಿದೆ.
|ಹಂಶಕವಿ

1991ರಲ್ಲಿ ದತ್ತ ಜಯಂತಿಯಂದು ನಾನು, ನನ್ನವ್ವ ಹಾಗೂ ನನ್ನ ಸಹೋದರಿ ಸಂಗೀತಾ ಗಾಣಗಾಪುರಕ್ಕೆ ಹೊರಟೆವು. ಗಾಣಗಾಪುರದಲ್ಲಿ ದತ್ತಾತ್ರೇಯನ ನಿರ್ಗಣ ಪಾದುಕೆಗಳಿವೆ. ಅಲ್ಲಿ ಗುರು ಚರಿತ್ರೆಯನ್ನು ಪಡೆದುಕೊಂಡು ಪಾರಾಯಣ ಮಾಡಿದೆ. ಶ್ರೀದತ್ತನಲ್ಲಿ ಗಾಢವಾದ ಭಕ್ತಿಯೂ ಮೂಡಿತು. ‘ದತ್ತ ದಿಗಂಬರ’ ಅಂಕಿತದಲ್ಲಿ ವಚನ ರಚನೆಗೈಯಲು ಪ್ರಾರಂಭಿಸಿದೆ. ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರಿದರೂ ನನ್ನ ದತ್ತಭಕ್ತಿ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಮುಂದೆ ವಿಶ್ವಗುರುಗಳ ಪ್ರೇರಣೆಯಿಂದಾಗಿ ಸೃಷ್ಟಿ ನಿಯಾಮಕನಾದ ದತ್ತಾತ್ರೇಯನ ಕುರಿತಾಗಿ ಅಧ್ಯಯನ ಕೈಕೊಂಡೆ. ಶ್ರೀದತ್ತ ಮಹಾತ್ಮೆ, ನವನಾಥ ಭಕ್ತಿಸಾರದೊಂದಿಗೆ ದತ್ತಾತ್ರೇಯನ ಕಲಿಯುಗದ ಪ್ರಮುಖ ಅವತಾರ ಕುರಿತು ಅಧ್ಯಯನ ಮಾಡಿದೆ. ಕೊನೆಗೆ ಗುರುಗಳ ಆದೇಶ ಹಾಗೂ ದತ್ತಭಕ್ತರ ಅಪೇಕ್ಷೆ ಮೇರೆಗೆ 364 ದಿನಗಳಲ್ಲಿ ‘ಶ್ರೀದತ್ತ ಭಾಗವತ’ ಅಂತರ್ಗತದ ಮಹಾಗ್ರಂಥ ರಚನೆ ಮಾಡಿದೆ.

ಪೂರ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಬ್ರಹ್ಮ, ವಿಷ್ಣು, ಮಹೇಶ್ವರರು ಅತ್ರಿ-ಅನುಸೂಯಾ ದಂಪತಿಗಳಿಗೆ ಮಗನಾಗಿ ಜನ್ಮ ತಾಳುವರು. ಆ ತ್ರೈಮೂರ್ತಿ ಅವತಾರವೇ ಶ್ರೀ ದತ್ತಾತ್ರೇಯ. ಅಂತಹ ಅತ್ರೀಸುತನ ಜನ್ಮಸ್ಥಳವು ಇಂದಿನ ನೇಪಾಳ ಪ್ರಾಂತದ ಭಕ್ತಪುರ. ದತ್ತಾತ್ರೇಯನು ಅಲ್ಲಿ ಬಹುಕಾಲದವರೆಗೆ ಮಾತಾ-ಪಿತರ ಸೇವೆಯನ್ನು ಮಾಡಿ ನಂತರ ತಪಸ್ಸಿಗಾಗಿ ಗಿರಿನಾರದತ್ತ ಸಾಗಲು ದಾರಿಯಲ್ಲಿ ಅವನು ಇಪ್ಪತ್ನಾಲ್ಕು ಗುರುಗಳಿಂದ ಹಲವಾರು ತತ್ತ್ವಗಳನ್ನು ತಿಳಿದುಕೊಳ್ಳುತ್ತಾನೆ. ಅಂತಹ ಅವನ ಇಪ್ಪತ್ನಾಲ್ಕು ಗುರುಗಳೆಂದರೆ. ಪೃಥ್ವಿ, ವಾಯು, ಆಕಾಶ, ಅಗ್ನಿ, ಜಲ, ಚಂದ್ರ, ಸೂರ್ಯ, ಪಾರಿವಾಳ, ಅಜಗರ (ಹೆಬ್ಬಾವು), ಸಮುದ್ರ, ಪತಂಗ, ಜೇನುನೋಣ, ಆನೆ, ಭೃಂಗ, ಜಿಂಕೆ, ಮೀನು, ಪಿಂಗಲಾ (ವೇಶ್ಯೆ), ಕುರರ ಪಕ್ಷಿ, ಬಾಲಕ, ಕುಮಾರಿ, ಬಾಣಕರ್ತೃ, ಸರ್ಪ, ಜೇಡರ ಹುಳು, ಕಣಜದ ಹುಳು ಮುಂತಾದವು.

ಹಾಗೆಯೇ ಮುಂದೆ ಸಾಗಿದ ದತ್ತಾತ್ರೇಯನು ಗುಜರಾತಿನ ಗಿರಿನಾರ ಪರ್ವತ ಶಿಖರದಲ್ಲಿ ಬಹುಕಾಲದವರೆಗೆ ಘೊರ ತಪಗೈಯುತ್ತಾನೆ. ನಂತರ ಮತ್ತೆ ಗಿರಿನಾರದಿಂದ ಜಂಬೂದ್ವೀಪದ ದಕ್ಷಿಣದತ್ತ ಸಾಗಿ ಲೋಕಕಲ್ಯಾಣಾರ್ಥವಾಗಿ ಸಹ್ಯಾದ್ರಿಗೆ ಬಂದು ಅಲ್ಲಿಯೇ ಇರುವ ಮಾಣಿಕ್ಯಗಿರಿಯ ಮೇಲೆ ಆಶ್ರಮವನ್ನು ನಿರ್ವಿುಸಿಕೊಂಡು ಕಾರ್ತವೀರ್ಯ, ಅಲರ್ಕ, ಯದುರಾಜ, ಆಯುರಾಜ, ಪ್ರಲ್ಹಾದ ದಲಾದನಮುನಿ ಮುಂತಾದವರಿಗೆ ಆತ್ಮತತ್ತ್ವದ ಬೋಧನೆ ಮಾಡಿ ಅವರನ್ನು ಲೋಕವಿಖ್ಯಾತರನ್ನಾಗಿಸುತ್ತಾನೆ. ಮುಂದೆ ಕಲಿಯುಗ ಬಂದೊದಗಲು ಎಲ್ಲೆಲ್ಲೂ ಅನೀತಿ, ಅನ್ಯಾಯ, ಅತ್ಯಾಚಾರ, ಕಾಮ, ಕ್ರೋಧ, ಮದ, ಮತ್ಸರಾದಿಗಳು ತಾಂಡವವಾಡಲು ಸತ್ಯದ ಉಳಿವಿಗಾಗಿ ಶ್ರೀಹರಿಯ ಆಜ್ಞೆಯ ಮೇರೆಗೆ ನವನಾರಾಯಣರಾದ ಕವಿ, ಹರಿ, ಅಂತರಿಕ್ಷ, ಪ್ರಬುದ್ಧಿ, ಪಿಪ್ಪಲಾಯನ, ಅವಿಹೋತ್ರಿ, ಚಮಶ, ದ್ರುಮಿಲ, ಕರಭಾಜನ ಇವರುಗಳೇ ಕ್ರಮವಾಗಿ ಮಚ್ಛೇಂದ್ರನಾಥ, ಗೋರಖನಾಥ, ಜಾಲಂಧರನಾಥ, ಕಾನಿಫ್​ನಾಥ, ಚರಪಟಿನಾಥ, ವಟಸಿದ್ದ ನಾಗನಾಥ, ರೇವಣನಾಥ, ಭೃತ್ಯಹರಿನಾಥ, ಗಹನಿನಾಥ ಒಂಬತ್ತು ಜನ ನಾಥರು ದತ್ತಾತ್ರೇಯನ ಶಿಷ್ಯ-ಪ್ರಶಿಷ್ಯರಾಗಿ ಲೋಕದಲ್ಲಿ ಗುರು-ಶಿಷ್ಯ ಸಂಪ್ರದಾಯವನ್ನು ಮತ್ತೆ ಪ್ರಜ್ವಲಿಸಿದರು. ಅದರ ಮೂಲಕ ದತ್ತಾತ್ರೇಯನಲ್ಲಿರುವ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ನೆಲದಗಲ, ಮುಗಿಲಗಲ, ಮಿಗೆಯಗಲ ಬ್ರಹ್ಮಾಂಡದಗಲಕ್ಕೂ ಹರವಿದರು.

ಅಂತೆಯೇ ‘ಗುರು ಬ್ರಹ್ಮಾ ಗುರು ವಿಷ್ಣು, ಗುರುರ್ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀಗುರವೇನಮಃ’ ಎನ್ನುವ ಮಂತ್ರವು ಇಂದಿಗೂ ಭೂಲೋಕದಲ್ಲಿ ರಾರಾಜಿಸುತ್ತಿದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀ ದತ್ತನ ನೆಲೆಗಳು ಭರತಖಂಡವಷ್ಟೇ ಅಲ್ಲದೆ ನೇಪಾಳ, ಇಂಡೋನೇಷ್ಯಾ, ಥಾಯ್ಲೆಂಡ್, ಬರ್ವ, ಶ್ರೀಲಂಕಾ, ಬಾಲಿದ್ವೀಪ ಮುಂತಾದ ಜಗತ್ತಿನ ಅನೇಕ ಕಡೆಗಳಲ್ಲಿ ಕಂಡುಬರುತ್ತವೆ. ದತ್ತಾತ್ರೇಯ ಹಾಗೂ ಅವನ ಪ್ರಮುಖ ಅವತಾರಗಳ ಸಹಿತವಾದ ಮಹಾಚರಿತ ‘ಶ್ರೀದತ್ತ ಭಾವಗತ’ ಮಹಾಗ್ರಂಥ. ಜಾತಿ-ಧರ್ಮ, ಕುಲ-ಗೋತ್ರವೆನ್ನದೆ ಪವಿತ್ರಾತ್ಮಗಳು ಯಾರಾದರೂ ಈ ಗ್ರಂಥವನ್ನು ಭಕ್ತಿಯಿಂದ ಶ್ರವಣಿಸಿ ಅಪ್ಪಿಕೊಳ್ಳಬಹುದು. ಮಾನವರಷ್ಟೇ ಅಲ್ಲದೆ ಸೃಷ್ಟಿಯಲ್ಲಿನ ಸಮಸ್ತ ಚರಾಚರ ಜೀವ ಜಂತುಗಳಿಗೂ ಈ ಅಮೃತ ಸದೃಶ್ಯರೂಪದ ಗ್ರಂಥಪಠಣದ ನಾದವನ್ನು ಕೇಳಿಸಿದ್ದಲ್ಲಿ ಆ ಜೀವ ಸಂಕುಲವು ಆನಂದ ಹೊಂದುವಲ್ಲಿ ಸಂದೇಹವಿಲ್ಲ. ಇಂತಹ ಪವಿತ್ರ ಗ್ರಂಥವು ಸಕಲರಿಗೆ ದೊರಕುವಂತಾಗಲಿ ಎಂಬ ಮಹದಾಸೆಯಿಂದ ವಿ.ಆರ್.ಎಲ್. ಸಮೂಹ

ಸಂಸ್ಥೆಯ ಸಂಸ್ಥಾಪಕರಾದ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ದಂಪತಿಗಳು 2 ಲಕ್ಷ ಪ್ರತಿಗಳನ್ನು ಪ್ರಕಟಿಸಿ ದ್ದಾರೆ. 1200 ಪುಟದ ಈ ಬೃಹತ್ ಗ್ರಂಥಕ್ಕೆ ಕೇವಲ 200 ರೂ. ಮುಖಬೆಲೆಯೊಂದಿಗೆ ನಾಡು- ಹೊರನಾಡಿನ ಕನ್ನಡ ಮನಸ್ಸುಗಳಿಗೆ ಹಾಗೂ ದತ್ತಭಕ್ತ ಜಿಜ್ಞಾಸುಗಳಿಗೆ ದೊರಕುವಂತೆ ಮಾಡಿದ್ದಾರೆ. ಈ ಮಹಾಗ್ರಂಥವು ಜಗತ್ತಿನ ಹಲವಾರು ಭಾಷೆಗಳಿಗೂ ತರ್ಜುಮೆಗೊಂಡು ಜಗತ್ತಿನ ಎಲ್ಲ ದತ್ತಭಕ್ತರಿಗೂ ದೊರೆಯಲಿ ಎಂದು ಹಾರೈಸುತ್ತೇನೆ.

ವೇದ ಬಲ್ಲವನಲ್ಲ ಶಾಸ್ತ್ರಗಳೂ ಅರಿತಿಲ್ಲ

ಪುರಾಣ ಪೋತಿಗಳೆಲ್ಲ ನನಗೇನು ತಿಳಿದಿಲ್ಲ

ನಿನ ಹೊರತು ನನಗಿಲ್ಲಿ ಬೇರೇನು ಕಾಣುತಿಲ್ಲ

ನೀನರುಹಿದಂತೆ ಬರೆದೆ ಎನ್ನ ದತ್ತ ದಿಗಂಬರಾ

ಇ-ಮೇಲ್ : hamshakavib@gmail.com