ಸ್ವಲ್ಪ ಸಮಯದ ಮೊದಲು ಟೆಸ್ಲಾ ಸಂಸ್ಥೆಯ ಇಲಾನ್ ಮಸ್ಕ್ ಫೇಸ್ಬುಕ್ ಬಗ್ಗೆ ಕಿಡಿಕಾರಿದ್ದು ಹೀಗೆ ಸುದ್ದಿಯಾಗಿತ್ತು. ಈಗ ರೆಡಿಟ್ ಸಂಸ್ಥೆಯ ಸಿಇಓ ಸ್ಟೀವ್ ಹಫ್ವುನ್ ಟಿಕ್ಟಾಕ್ ಬಗ್ಗೆ ನೀಡಿರುವ ಹೇಳಿಕೆ ಇಂತಹದೇ ಇನ್ನೊಂದು ವಿವಾದಕ್ಕೆ ಕಾರಣವಾಗಿದೆ. ಆ ಸ್ಪೈವೇರ್ ಅನ್ನು ನಿಮ್ಮ ಫೋನಿನಲ್ಲಿ ಹಾಕಿಕೊಳ್ಳಬೇಡಿ ಎನ್ನುವುದು ಟಿಕ್ಟಾಕ್ ಕುರಿತಾಗಿ ಆತ ಹೇಳಿರುವ ಮಾತು.
ಆತ ಹೇಳಿರುವ ಮಾತು ಎಷ್ಟು ನಿಜ ಎನ್ನುವುದು ಇನ್ನೂ ತೀರ್ವನವಾಗಬೇಕಿರುವ ವಿಷಯ. ಆದರೆ ಈ ಹೇಳಿಕೆಯಿಂದಾಗಿ ಸ್ಪೈವೇರ್ ಎಂದರೇನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿರುವುದು ಸಾಧ್ಯ. ಅಂತಹ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಈ ಬರಹದಲ್ಲಿದೆ. ಸ್ಪೈ ಎಂದತಕ್ಷಣ ನಮ್ಮ ಮನಸ್ಸಿಗೆ ಬರುವುದು ಶತ್ರುಪ್ರದೇಶದಲ್ಲಿ ಅಡಗಿಕೊಂಡಿದ್ದು ತನ್ನವರಿಗಾಗಿ ಕೆಲಸಮಾಡುವ ಧೈರ್ಯಶಾಲಿ ವ್ಯಕ್ತಿಯ ಕಲ್ಪನೆ. ಈ ಕಲ್ಪನೆಗೂ ಮೊಬೈಲ್ನ ಆಪ್ ಅಥವಾ ಕಂಪ್ಯೂಟರಿನ ತಂತ್ರಾಂಶಕ್ಕೂ ಎತ್ತಣಿಂದೆತ್ತ ಸಂಬಂಧ?
ಕಂಪ್ಯೂಟರ್ - ಮೊಬೈಲ್ ಮುಂತಾದ ಸಾಧನಗಳ ಬಳಕೆದಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡುವುದನ್ನೇ ಉದ್ದೇಶವಾಗಿಟ್ಟುಕೊಂಡ ತಂತ್ರಾಂಶಗಳನ್ನು ಮಾಲ್ವೇರ್ ಅಥವಾ ಕುತಂತ್ರಾಂಶಗಳೆಂದು ಕರೆಯುತ್ತಾರೆ. ಸ್ಪೈವೇರ್ ಕೂಡ ಇಂಥದ್ದೇ ಒಂದು ಕುತಂತ್ರಾಂಶ.
ಸ್ಪೈ ಎಂದರೆ ಗೂಢಚಾರ, ಗುಪ್ತಚಾರ ಅಥವಾ ಬೇಹುಗಾರ. ಗುಪ್ತವಾಗಿ ಕೆಲಸಮಾಡಿಕೊಂಡಿದ್ದು ತನಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳುವುದು ಈ ವ್ಯಕ್ತಿಯ ಕೆಲಸ. ಸ್ಪೈವೇರ್ ಕೂಡ ಹಾಗೆಯೇ. ಬಳಕೆದಾರರ ಗಮನಕ್ಕೆ ಬಾರದಂತೆ ಕೆಲಸಮಾಡುವುದು, ತನಗೆ ಬೇಕಾದ ಮಾಹಿತಿಯನ್ನು ಕಳ್ಳತನದಿಂದ ಪಡೆದುಕೊಳ್ಳುವುದು ಈ ಕುತಂತ್ರಾಂಶದ ಕೆಲಸ. ಇತರೆಲ್ಲ ಕುತಂತ್ರಾಂಶಗಳಂತೆ ಸ್ಪೈವೇರ್ ಕೂಡ ಉಪಯುಕ್ತ ತಂತ್ರಾಂಶದ ಸೋಗಿನಲ್ಲೋ, ನಕಲಿ ಜಾಲತಾಣಗಳ ಮೂಲಕವೋ ಬಳಕೆದಾರರ ಕಂಪ್ಯೂಟರ್ ಅಥವಾ ಮೊಬೈಲನ್ನು ಪ್ರವೇಶಿಸುತ್ತದೆ. ಆನಂತರ ಅವರ ಮಾಹಿತಿಯನ್ನು ಕದ್ದು ಒಂದು ನಿರ್ದಿಷ್ಟ ಸ್ಥಳಕ್ಕೆ ವರ್ಗಾಯಿಸುವ ಕೆಲಸ ಶುರುಮಾಡುತ್ತದೆ. ಬಳಕೆದಾರರು ಯಾವ ಜಾಲತಾಣಗಳಿಗೆ ಭೇಟಿನೀಡುತ್ತಿದ್ದಾರೆ, ಅಲ್ಲಿ ಏನು ಟೈಪ್ ಮಾಡುತ್ತಿದ್ದಾರೆ ಎನ್ನುವುದನ್ನೆಲ್ಲ ಇದು ಗಮನಿಸಿಕೊಳ್ಳುವುದು ಸಾಧ್ಯ.
ಹೀಗೆ ನಾವು ಟೈಪ್ ಮಾಡಿದ್ದನ್ನೆಲ್ಲ ದಾಖಲಿಸಿಕೊಂಡು ದುಷ್ಕರ್ವಿುಗಳಿಗೆ ರವಾನಿಸುವ ಸ್ಪೈವೇರ್ಗಳನ್ನು ‘ಕೀ ಲಾಗರ್’ಗಳೆಂದೂ ಕರೆಯುತ್ತಾರೆ. ಇದರ ಮೂಲಕ ನೀವು ಯಾವ ತಾಣಕ್ಕೆ ಭೇಟಿ ಕೊಟ್ಟಿದ್ದಿರಿ ಮತ್ತು ಅಲ್ಲಿ ಏನು ಟೈಪ್ ಮಾಡಿದ್ದಿರಿ ಎಂದು ತಿಳಿದುಕೊಳ್ಳುವ ದುಷ್ಕರ್ವಿುಗಳು ನಿಮ್ಮ ಇಮೇಲ್, ನೆಟ್ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ಖಾತೆಗಳ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
ವಿಶ್ವವ್ಯಾಪಿ ಜಾಲದಲ್ಲಿ ನಿಮ್ಮ ಚಟುವಟಿಕೆಯನ್ನು ಗಮನಿಸಿಕೊಂಡು ಅದಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನೇ ಪದೇಪದೇ ತೋರಿಸುವ ಸ್ಪೈವೇರ್ಗಳೂ ಇವೆ. ತಂತ್ರಾಂಶಗಳ ಆಯ್ಕೆಗಳನ್ನು ಬದಲಿಸುವುದು, ನಮ್ಮ ಆಯ್ಕೆಯ ಜಾಲತಾಣದ ಬದಲು ಬೇರೆ ಯಾವುದೋ ತಾಣವನ್ನು ತೆರೆಯುವುದು ಕೂಡ ಸ್ಪೈವೇರ್ಗಳ ಉದ್ದೇಶವಾಗಿರುವುದು ಸಾಧ್ಯ.
ನಿಮಗೆ ಗೊತ್ತಾಗದಂತೆ ಕೆಲಸಮಾಡುವುದೇ ಸ್ಪೈವೇರ್ನ್ ಉದ್ದೇಶ. ಹೀಗಾಗಿ ಅವುಗಳ ಇರುವಿಕೆಯನ್ನು ಪತ್ತೆಹಚ್ಚುವುದು ಕಷ್ಟವಾಗಬಹುದು. ಆದರೆ ನಿಮ್ಮ ಸಾಧನದ ಕಾರ್ಯಾಚರಣೆ ಇದ್ದಕ್ಕಿದ್ದಂತೆ ನಿಧಾನವಾದರೆ, ಜಾಹೀರಾತುಗಳನ್ನೋ ಬೇರಾವುದೇ ಮಾಹಿತಿಯನ್ನೋ ತೋರಿಸುವ ಕಿಟಕಿಗಳು ಸುಖಾಸುಮ್ಮನೆ ಕಾಣಿಸಿಕೊಳ್ಳಲು ಶುರುವಾದರೆ ಅದು ಸ್ಪೈವೇರ್ ಕೈವಾಡವೇ ಇರಬಹುದು.
ಅಪರಿಚಿತರಿಂದ ಬಂದ ಸಂದೇಶಗಳನ್ನು ತೆರೆಯದೆ, ಅಪರಿಚಿತ ಜಾಲತಾಣಗಳಿಂದ ಏನನ್ನೂ ಡೌನ್ಲೋಡ್ ಮಾಡದೆ, ವಿಶ್ವಾಸಾರ್ಹವೆನಿಸದ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡದೆ ಇರುವುದರಿಂದ ಸ್ಪೈವೇರ್ಗಳು ಬಾರದಂತೆ ನೋಡಿಕೊಳ್ಳಬಹುದು. ಜಾಹೀರಾತುಗಳಲ್ಲಿ ಇಂಟರ್ನೆಟ್ ಬ್ರೌಸಿಂಗ್ ವೇಗ ಹೆಚ್ಚಿಸುತ್ತೇವೆಂದೋ ಕುತಂತ್ರಾಂಶಗಳಿಂದ ರಕ್ಷಿಸುತ್ತೇವೆಂದೋ ಹೇಳಿಕೊಳ್ಳುವ ತಂತ್ರಾಂಶಗಳು ಸ್ವತಃ ಸ್ಪೈವೇರ್ಗಳಾಗಿರುವ ಸಾಧ್ಯತೆ ಇರುತ್ತದೆ.
ಮೊಬೈಲ್ ಆಪ್ಗಳಲ್ಲೂ ಅಷ್ಟೇ, ಅಪರಿಚಿತ ಆಪ್ಗಳ ಬಗ್ಗೆ ಎಚ್ಚರವಹಿಸುವುದು, ಅನಗತ್ಯ ಅನುಮತಿಗಳನ್ನು (ಪರ್ವಿುಶನ್) ಕೇಳುವ ಆಪ್ಗಳನ್ನು ಬಳಸದಿರುವುದು ಒಳ್ಳೆಯದು. ಹಾಗಿದ್ದೂ ಸ್ಪೈವೇರ್ ತೊಂದರೆ ಶುರುವಾದರೆ, ಬಹುತೇಕ ಇತರ ಕುತಂತ್ರಾಂಶಗಳಂತೆ, ಇವನ್ನು ಪತ್ತೆಹಚ್ಚಿ ತೆಗೆದುಹಾಕುವುದಕ್ಕೂ ಆಂಟಿವೈರಸ್ ನೆರವು ಪಡೆದುಕೊಳ್ಳುವುದು ಸಾಧ್ಯ.
ಅಂದಹಾಗೆ ಖಾಸಗಿ ಮಾಹಿತಿಯ ಕಳವು ಸ್ಪೈವೇರ್ ಮೂಲಕವೇ ಆಗಬೇಕು ಎಂದೇನೂ ಇಲ್ಲ. ನೀವು ಅಂತಹ ಮಾಹಿತಿಯನ್ನು ಬಳಸುವಾಗ ನೋಡಿದ ಯಾರು ಬೇಕಾದರೂ ಅದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬಹುದು. ’ಶೋಲ್ಡರ್ ಸರ್ಫಿಂಗ್’ ಎಂಬ ಹೆಸರಿನ ಈ ಅಪಾಯದಿಂದ ಪಾರಾಗುವುದು ಮಾತ್ರ ಸುಲಭ: ಎಟಿಎಂ ಬಳಸುವಾಗ, ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್-ಲ್ಯಾಪ್ಟಾಪ್ ಬಳಸುವಾಗ ನೀವು ದಾಖಲಿಸುವ ಖಾಸಗಿ ಮಾಹಿತಿ ಬೇರೆಯವರಿಗೆ ಕಾಣದಂತೆ ಎಚ್ಚರವಹಿಸಿ!