ಅಂಕಣ

ಗ್ರಾಮೀಣ ಒಲಿಂಪಿಕ್ಸ್​ ಕಂಬಳ

ಕಂಬಳವೆಂಬ ವಿಶಿಷ್ಟ ಪ್ರಕಾರವೀಗ ಜಗತ್ತಿನ ಮುಂದೆ ತೆರೆದುಕೊಂಡಿದೆ. ಸಿಂಥೆಟಿಕ್ ಟ್ರ್ಯಾಕ್​ನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್​ಗಿಂತಲೂ ವೇಗವಾಗಿ ಕೆಸರುಗದ್ದೆಯಲ್ಲಿ ಕೋಣಗಳೊಂದಿಗೆ ಓಡುವ ಮಿಜಾರು ಶ್ರೀನಿವಾಸಗೌಡರ ಹೆಸರಿಗೆ ಸಿಕ್ಕಿದ ಜನಪ್ರಿಯತೆಯಲ್ಲಿ ಕಂಬಳ ತನ್ನ ವ್ಯಾಪ್ತಿಯನ್ನು ಜಗದಗಲ ವಿಸ್ತರಿಸಿಕೊಳ್ಳುತ್ತಿದೆ.

ಕೃಷಿ ಪ್ರಧಾನವಾದ ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿಯನ್ನೊಳಗೊಂಡ ತುಳುನಾಡಿನಲ್ಲಿ ನೂರಾರು ವರ್ಷಗಳಿಂದ ನಡೆಯುತ್ತಿರುವ ಕಂಬಳ ಜನಾಕರ್ಷಣೆಯ ಜಾನಪದೀಯ ಕ್ರೀಡೆ. ಸಂಸ್ಕೃತಿ, ಸಂಪ್ರದಾಯದೊಂದಿಗೆ ಧಾರ್ವಿುಕ ಚೌಕಟ್ಟಿನಲ್ಲಿ ಧರ್ವತೀತವಾಗಿ ನಡೆಯುವ ಆಚರಣೆ. ಯುವಜನರನ್ನು ಹುಚ್ಚೆಬ್ಬಿಸಿ ಮುದ ನೀಡುವ ಮನರಂಜನೆ.

ಕಂಬಳದ ಆರಂಭಕ್ಕೆ ಕಾರಣ ಬೇಸಾಯ. ಸರಿಸುಮಾರು 800 ವರ್ಷಗಳ ಹಿಂದೆ ಉಳುಮೆ ಮಾಡುವ ಸಂದರ್ಭ ಹುಟ್ಟಿಕೊಂಡ ವಿನೋದ, ಕೃಷಿ ಚಟುವಟಿಕೆಯ ಭಾಗವಾಗಿ ಮುಂದುವರಿದು ಈಗಿನ ಆಧುನಿಕ ಜೋಡುಕರೆ ಕಂಬಳವಾಗಿ ಮೈದಳೆದದ್ದು 1970ರಲ್ಲಿ. ಬಜಗೋಳಿಯ ಗುಣಪಾಲ ಜೈನ್ ಜೋಡುಕರೆ ಕಂಬಳದ ಕರ್ತೃ ಅದರ ನಂತರ ಹತ್ತಾರು ಜೋಡುಕರೆ ಕಂಬಳಗಳು ಹುಟ್ಟಿಕೊಂಡು ಕಾಲಾಂತರದಲ್ಲಿ ಸ್ಥಗಿತಗೊಂಡವು. ಪ್ರಸಕ್ತ ಕಂಬಳ ಸಮಿತಿ ಆಶ್ರಯದಲ್ಲಿ ಸುಮಾರು 20 ಕಂಬಳಗಳು ಪ್ರತಿವರ್ಷ ನಡೆಯುತ್ತಿವೆ. ದೈವಾರಾಧನೆ, ಯಕ್ಷಗಾನ, ನಾಗಾರಾಧನೆಯೊಂದಿಗೆ ಕಂಬಳವೂ ಧಾರ್ವಿುಕ ಪದ್ಧತಿಯಾಗಿ ವಿಶಿಷ್ಟ ರೀತಿಯಲ್ಲಿ ಸಾಗುತ್ತಿದೆ.

ಇಡೀ ಊರಿನ ಹಬ್ಬ: ಕಂಬಳವೆಂದರೆ ಜನಾಕರ್ಷಣೆಯ ಕೇಂದ್ರ. ಸಾಮಾನ್ಯವಾಗಿ ನವೆಂಬರ್​ನಿಂದ ಮಾರ್ಚ್​ವರೆಗೆ ಶನಿವಾರ ಮುಂಜಾನೆ ಆರಂಭಗೊಳ್ಳುವ ಕಂಬಳ ಅಹರ್ನಿಶಿ ನಡೆದು ಮುಕ್ತಾಯವಾಗುವುದು ಭಾನುವಾರ ಬೆಳಗ್ಗೆ. ಕರೆಯಲ್ಲಿ ಪೂಜೆ, ಸಾಂಪ್ರದಾಯಿಕ ಕೊಂಬು, ಚೆಂಡೆ, ಬ್ಯಾಂಡ್ ಸೆಟ್, ಸ್ವಯಂಸೇವಕರು, ಶಿಸ್ತು, ಸಂಯಮ, ಹೊಸದೊಂದು ಲೋಕಕ್ಕೆ ಕರೆದೊಯ್ಯುವ ಕಂಬಳ ಕಾಮೆಂಟರಿ ಇವೆಲ್ಲ ಕೂಟಕ್ಕೆ ಮೆರುಗು.

ಎಲ್ಲೇ ಕಂಬಳ ನಡೆದರೂ ಕರಾವಳಿಯ 20-30 ಸಾವಿರ ಮಂದಿ ನೆರೆಯುತ್ತಾರೆ. ಕೆಲವು ಕಂಬಳಗಳಲ್ಲಂತೂ ಲಕ್ಷಾಂತರ ಮಂದಿ ಸೇರಿ ಸಂಭ್ರಮಿಸುತ್ತಾರೆ. ವೀಕ್ಷಕರಿಗೆಂದೇ ಗ್ಯಾಲರಿ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತದೆ. ಇಂಥ ಕಂಬಳದಲ್ಲಿ ಛಾಯಾಗ್ರಾಹಕರು, ವಿದೇಶಿ ಪ್ರವಾಸಿಗರು, ಉದ್ಯಮಿಗಳು, ಚಲನಚಿತ್ರ ತಾರೆಯರು, ಜಾನಪದ ವಿದ್ವಾಂಸ-ಸಂಶೋಧಕರು ಅಚ್ಚರಿಯ ಅತಿಥಿಗಳು.

ಜೋಡುಕರೆ ಎಂದರೆ ಎರಡು ಸಮಾನಾಂತರ ಟ್ರ್ಯಾಕ್. ಅವುಗಳಲ್ಲಿ ಓಟಗಾರ (ಜಾಕಿ) ತನ್ನೆಲ್ಲ ಶಕ್ತಿ-ಯುಕ್ತಿ ಉಪಯೋಗಿಸಿ ಗುರಿ ತಲುಪಲು ಕೆಸರು ಗದ್ದೆಯಲ್ಲಿ ನೀರನ್ನು ಚಿಮ್ಮಿಸುತ್ತಾ ಕೋಣಗಳನ್ನು ಓಡಿಸುತ್ತಾನೆ. ಕಂಬಳ ಕರೆ ಸಾಮಾನ್ಯವಾಗಿ 130ರಿಂದ 145 ಮೀಟರ್​ನಷ್ಟು ಉದ್ದ ಇರುತ್ತದೆ. ಇದನ್ನು ಬೇಗನೆ ಕ್ರಮಿಸಿದ ಕೋಣಗಳಿಗೆ ಹಗ್ಗ/ನೇಗಿಲು ಸ್ಪರ್ಧೆಗಳಲ್ಲಿ ಬಹುಮಾನ ನಿಗದಿಯಾಗಿರುತ್ತದೆ.

ಸಾಮಾನ್ಯವಾಗಿ ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನ ಬಂದ ಕೋಣಗಳ ಮಾಲೀಕರಿಗೆ 8 ಗ್ರಾಂ ಚಿನ್ನ ನೀಡುತ್ತಾರೆ. ಆರು ರೀತಿಯ ಸ್ಪರ್ಧೆ: ಕನೆ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ, ಅಡ್ಡ ಹಲಗೆ, ನೇಗಿಲು ಕಿರಿಯ, ನೇಗಿಲು ಹಿರಿಯ ಎಂದು ಕಂಬಳದಲ್ಲಿ ಒಟ್ಟು ಆರು ಸ್ಪರ್ಧೆಗಳಿವೆ. ಇದರಲ್ಲಿ ಕನೆ ಹಲಗೆ ಎಂದರೆ ಕೆಸರನ್ನು ಮೇಲೆ ಎತ್ತರದಲ್ಲಿ ಕಟ್ಟಿರುವ ನಿಶಾನೆಗೆ ಚಿಮ್ಮಿಸುವ ಸ್ಪರ್ಧೆ. ಉಳಿದ ಸ್ಪರ್ಧೆಗಳು ವೇಗದಲ್ಲಿ ಗುರಿ ಮುಟ್ಟುವಂಥವುಗಳು. ಆಯಾ ವಿಭಾಗಕ್ಕೆ ತಕ್ಕಂತೆ ಕೋಣಗಳಿಗೆ ತರಬೇತಿ ನೀಡಲಾಗುತ್ತದೆ.

ಧಾರ್ವಿುಕ ಕಂಬಳಗಳು: ಜೋಡುಕರೆ ಕಂಬಳಗಳು ಸಂಪ್ರದಾಯದೊಂದಿಗೆ ಸ್ಪರ್ಧೆಯ ರೂಪದಲ್ಲಿ ನಡೆಯುತ್ತವೆ. ಇದನ್ನು ಹೊರತುಪಡಿಸಿ ಹತ್ತಾರು ಸಾಂಪ್ರದಾಯಿಕ ಕಂಬಳಗಳು ಕರಾವಳಿಯಲ್ಲಿ ಈ ಅವಧಿಯಲ್ಲಿ ನಡೆಯುತ್ತವೆ. ಇವುಗಳು ಕಂಬಳ ಸಮಿತಿಯ ಅಧೀನದಲ್ಲಿ ನಡೆಯುವುದಿಲ್ಲ. ಕೆಲವು ಕುಟುಂಬಗಳು, ಗುತ್ತುಗಳು, ದೇವಸ್ಥಾನಗಳು ಪರಂಪರಾಗತವಾಗಿ ನಡೆಸುತ್ತಿವೆ. ಇವುಗಳ ಜತೆಗೆ ದೈವ ಕೋಲಗಳನ್ನೂ ಏರ್ಪಡಿಸಲಾಗುತ್ತದೆ. ಕೃಷಿ ಸಂಸ್ಕೃತಿಯೊಂದಿಗೆ ದೈವಾರಾಧನೆಯ ಅವಿನಾಭಾವ ಸಂಬಂಧವನ್ನೂ ಸಾಬೀತುಪಡಿಸುವ ಕೂಟಗಳಿವು.

ನಿಷೇಧ ಎದುರಿಸಿದ್ದ ಆಚರಣೆ: ಹಿಂದೆಲ್ಲ ಕಂಬಳದಲ್ಲಿ ಅಸ್ಪಶ್ಯತೆಯ ಅನಿಷ್ಠ ಆಚರಣೆಗಳಿದ್ದವು. ಕೋಣಗಳ ಮೇಲೆ ಹಿಂಸೆಯೂ ನಡೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಣೆಗಳು ಜಾರಿಗೆ ಬಂದಿದ್ದು, ಆಧುನಿಕ ಬದುಕಿಗೆ ಹೊಂದಿಕೊಂಡೇ ಕಂಬಳಗಳೂ ಸಾಗುತ್ತಿವೆ. ಪೆಟಾ ಮತ್ತಿತರ ಸಂಘಟನೆಗಳು ಸುಪ್ರೀಂ ಕೋರ್ಟಿಗೆ ಪ್ರಕರಣವನ್ನು ತೆಗೆದುಕೊಂಡು ಹೋಗಿ ನಿಷೇಧ ಎದುರಿಸಿದ ಬಳಿಕವಂತೂ ಕಂಬಳದ ನಿಯಂತ್ರಣ ಜವಾಬ್ದಾರಿ ಹೊಂದಿರುವ ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಹಿಂಸೆ ನಡೆಯದಂತೆ ನೋಡಿಕೊಳ್ಳುತ್ತಿದೆ. ಈಗಲೂ ಕಂಬಳ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದ್ದು, ಸಾಂವಿಧಾನಿಕ ಪೀಠದ ವಿಚಾರಣೆಯಲ್ಲಿದೆ.

ಸಿಂಥೆಟಿಕ್ ಟ್ರ್ಯಾಕ್ ಓಟಕ್ಕೆ ಹೋಲಿಕೆ!

ಉಸೇನ್ ಬೋಲ್ಟ್ ಸಿಂಥೆಟಿಕ್ ಟ್ರ್ಯಾಕ್​ನಲ್ಲಿ 100 ಮೀಟರ್ ದೂರವನ್ನು 9.58 ಸೆಕೆಂಡ್​ಗಳಲ್ಲಿ ಓಡಿದರೆ, ಅಷ್ಟೇ ದೂರವನ್ನು ಅಶ್ವತ್ಥಪುರದ ಶ್ರೀನಿವಾಸಗೌಡ ಕಂಬಳ ಗದ್ದೆಯಲ್ಲಿ 9.55 ಸೆಕೆಂಡ್​ಗಳಲ್ಲಿ ಕ್ರಮಿಸುತ್ತಾರೆ. ಇನ್ನೊಬ್ಬ ಓಟಗಾರ ಬಜಗೋಳಿ ನಿಶಾಂತ್ ಶೆಟ್ಟಿ 9.52 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿ ಇನ್ನೊಂದು ದಾಖಲೆ ನಿರ್ವಿುಸುತ್ತಾರೆ. ಇವರೆಲ್ಲ ಒಲಿಂಪಿಕ್ಸ್​ನಲ್ಲೂ

ಭಾರತಕ್ಕೆ ಪದಕ ತಂದು ಕೊಡಬಹುದು ಎಂಬ ಮಾತುಗಳೂ ಕೇಳಿಬಂದವು. ಕಂಬಳದಲ್ಲಿ ಇವರಷ್ಟೇ ಅಲ್ಲ, ಹತ್ತಾರು ವರ್ಷಗಳಿಂದ ಇಂಥ ಸಾಧನೆ ಮಾಡಿದ ನೂರಾರು ಮಂದಿ ಓಟಗಾರರಿದ್ದಾರೆ. ಈಗ ಆಧುನಿಕ ತಂತ್ರಜ್ಞಾನದ ಬಲದಿಂದ ಐಡೆಂಟಿಟಿ ಸಿಗುತ್ತಿದೆ, ಅಷ್ಟೇ. ಕಂಬಳ ಗದ್ದೆಯಲ್ಲಿ ಓಟಗಾರ ಕೋಣಗಳ ಹಿಂದೆ ಹಗ್ಗ ಅಥವಾ ನೇಗಿಲು ಹಿಡಿದುಕೊಂಡು ಹಿಮ್ಮಡಿಯಲ್ಲಿ ಓಡುತ್ತಾನೆ. ಆತನಿಗೆ ಕೋಣಗಳ ಓಟದ ಮತ್ತು ಹಗ್ಗದ ಬಲ ಸಿಗುತ್ತದೆ. ಹಾಗಾಗಿ ಈ ಓಟವನ್ನು ಟ್ರೃಾಕ್ ಓಟಕ್ಕೆ, ಉಸೇನ್ ಬೋಲ್ಟ್​ಗೆ ಹೋಲಿಸುವುದು ತರವಲ್ಲ ಎಂದು ಸ್ವತಃ ಕಂಬಳ ಓಟಗಾರರೇ ಹೇಳುತ್ತಾರೆ. ಆದರೆ ಉಸೇನ್ ಬೋಲ್ಟ್​ಗೆ ಕೇಂದ್ರ ಸಚಿವರು ಹೋಲಿಕೆ ಮಾಡಿದ್ದರಿಂದಲೇ ಕಂಬಳ ಈ ಪರಿ ಜನ ಪ್ರಿಯತೆ ಪಡೆಯಿತು ಎಂಬುದನ್ನೂ ನಾವು ಗಮನಿಸಬೇಕು!

ಕೋಣಗಳಿಗೂ ಎ.ಸಿ., ಸ್ವಿಮಿಂಗ್​ಪೂಲ್!

ಕಂಬಳದ ಕೋಣಗಳನ್ನು ಸಾಕುವುದೆಂದರೆ ಆನೆ ಸಾಕಿದಂತೆ. ಅವುಗಳ ಪೋಷಣೆಗೆ ವರ್ಷಕ್ಕೆ ಲಕ್ಷಾಂತರ ರೂ. ವ್ಯಯಿಸಬೇಕು. ಸುಸಜ್ಜಿತ ಹಟ್ಟಿ, ನೀರು ಸರಬರಾಜು ವ್ಯವಸ್ಥೆ, ಹಿಂಡಿ, ಹುರುಳಿ, ಬೆಲ್ಲ, ಖಾದ್ಯ ಪೂರೈಕೆ, ಎಳ್ಳೆಣ್ಣೆ ಹಚ್ಚಿ ಬಿಸಿನೀರಿನ ಸ್ನಾನ, ಮಸಾಜ್ ಬೇಕೇಬೇಕು.

ಏರ್​ಕಂಡೀಷನ್ ವ್ಯವಸ್ಥೆ, ಸ್ವಿಮಿಂಗ್ ಪೂಲ್ ನಿರ್ವಿುಸಿದ ಶ್ರೀಮಂತರೂ ಇದ್ದಾರೆ. ಕೋಣಗಳಿಗೆ ತರಬೇತಿ, ಕಾಲಕಾಲಕ್ಕೆ ಪಶುವೈದ್ಯರಿಂದ ತಪಾಸಣೆ, ನಾಟಿವೈದ್ಯರಿಂದ ಔಷಧೋಪಚಾರ, ಪರಿಚಾರಕರಿಗೆ ವೇತನ, ಕಂಬಳದ ದಿನದಂದು ಕನಿಷ್ಠ 20 ಮಂದಿ ಸಹಾಯಕರ ವ್ಯವಸ್ಥೆ, ಸಾಗಾಟಕ್ಕೆ ವಾಹನ, ಕೋಣ ಓಡಿಸುವವನಿಗೆ ದುಬಾರಿ ವೇತನ... ಹೀಗೆ ಪ್ರತಿದಿನವೂ ಖರ್ಚು. ಹಿಂದೆಲ್ಲ ಉಳುಮೆಗೆ ಕೋಣಗಳನ್ನು ಬಳಸಲಾಗುತ್ತಿತ್ತು. ಈಗ ಗೌರವ-ಪ್ರತಿಷ್ಠೆಗೆ ಸೀಮಿತ. ಸ್ಪರ್ಧೆಯಲ್ಲಿ ಓಡಿಸಿ ಬಹುಮಾನ ಗೆಲ್ಲದಿದ್ದರೂ, ಕಂಬಳ ಕೋಣಗಳ ಯಜಮಾನ ಎಂಬ ಗೌರವವೇ ದೊಡ್ಡದು. ಇವೆಲ್ಲಕ್ಕೂ ಮಿಗಿಲಾಗಿ ಕೋಣಗಳ ಮೇಲಿನ ಪ್ರೀತಿಯನ್ನೂ ಗಮನಿಸಬೇಕು.

ಜನಪ್ರಿಯ ಕೋಣಗಳು ಮೃತಪಟ್ಟಾಗ ಯಜಮಾನರು, ಕಂಬಳ ಪ್ರಿಯರು ಕಣ್ಣೀರಿಡುತ್ತಾರೆ. ತಮ್ಮಕುಟುಂಬದ ಸದಸ್ಯರು, ತಮ್ಮದೇ ಮಕ್ಕಳು ಅಗಲಿದರೇನೋ ಎಂಬಂತೆ ಸಂಪ್ರದಾಯಬದ್ಧವಾಗಿ ಸಂಸ್ಕಾರಗಳನ್ನು ನೆರವೇರಿಸುತ್ತಾರೆ. ಇಲ್ಲಿರುವ ಪ್ರಾಣಿಪ್ರೀತಿಯನ್ನು, ಅವುಗಳ ಜತೆಗಿನ ಒಡನಾಟವನ್ನು ಕಂಡೇ ಮನಗಾಣಬೇಕು, ಅಕ್ಷರಗಳಲ್ಲಿ ವರ್ಣಿಸಲಾಗದು.

ಫಲಿತಾಂಶಕ್ಕೆ ಲೇಸರ್ ಟೆಕ್ನಾಲಜಿ

ಕಂಬಳದಲ್ಲಿ ಓಟವನ್ನು ಲೇಸರ್ ಬೀಮ್ ಟೆಕ್ನಾಲಜಿ ಮೂಲಕ ನಿರ್ಣಯಿಸಲಾಗುತ್ತದೆ. ಕೋಣಗಳ ಓಟದ ವೇಗವನ್ನು ದಾಖಲಿಸುವ ಸ್ವಯಂಚಾಲಿತ ಸಮಯ ದಾಖಲೆ ವ್ಯವಸ್ಥೆಯೂ ಇದೆ. ಸೆಕೆಂಡ್ ಮಾತ್ರವಲ್ಲ, ಮಿಲಿ ಸೆಕೆಂಡ್​ಗಳ ಅಂತರವನ್ನೂ ಗುರುತಿಸುವ ತಂತ್ರಜ್ಞಾನ ಬಳಸುವುದರಿಂದ ಫಲಿತಾಂಶದಲ್ಲಿ ಸಂಶಯ ಉಳಿಯುವುದಿಲ್ಲ. ಈ ಎಲ್ಲ ಪ್ರಕ್ರಿಯೆಗಳೂ ಬೃಹತ್ ಪರದೆಯಲ್ಲಿ ಲೈವ್ ಆಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಲಭಿಸುತ್ತದೆ.

ಸಾಮರಸ್ಯದ ಸಂಕೇತ

ಕೆಲವು ಪ್ರಬಲ ಜಾತಿಗಳ ಮೇಲಾಟಕ್ಕೆ ಕಂಬಳ ವೇದಿಕೆ ಎಂಬ ಆರೋಪಗಳಿಗೆ ಈಗ ಬಲವಿಲ್ಲ. ಸಾಮಾಜಿಕ ಸಾಮರಸ್ಯ, ಜಾತ್ಯತೀತ ಪರಿಕಲ್ಪನೆ, ಕೃಷಿ-ಪರಿಸರ ರಕ್ಷಣೆಯ ಔಚಿತ್ಯ ಸಾರುವ ಕಂಬಳ ಕ್ರೀಡೆಯು ಹಳ್ಳಿ ಹಳ್ಳಿಗಳಲ್ಲಿ ಯುವಪೀಳಿಗೆಯವರಿಗೆ ಸದಾ ಪ್ರೇರಣೆ ನೀಡುತ್ತಿದೆ. ಹಿಂದು ಧರ್ಮೀಯರು ಮಾತ್ರವಲ್ಲ, ಮುಸ್ಲಿಂ, ಕ್ರೖೆಸ್ತ ಧರ್ಮದವರೂ ಕೋಣಗಳನ್ನು ಓಡಿಸುತ್ತಾರೆ, ಕೋಣದ ಮಾಲೀಕರಾಗಿದ್ದಾರೆ. ವೀಕ್ಷಣೆಗೂ ಸಹಸ್ರ ಸಂಖ್ಯೆಗಳಲ್ಲಿ ಆಗಮಿಸುತ್ತಾರೆ.

ಓಟಗಾರ ಈಗ ಸ್ಟಾರ್

ಕೋಣಗಳಂತೆ ಕಂಬಳ ಓಟಗಾರರು ಹಿಂದಿನಿಂದಲೂ ಜನರ ಕೇಂದ್ರ ಬಿಂದುವಾಗಿದ್ದರು. ಈಗೀಗ ಚಿಗರೆಯಂತೆ ವೇಗವಾಗಿ ಗುರಿ ತಲುಪುವವರು ತಾರೆಯರಂತೆ ಮಿಂಚುತ್ತಿದ್ದಾರೆ. ಇವರಿಗೆ ಕೋಣಗಳ ಮಾಲೀಕರು ಲಕ್ಷಗಟ್ಟಲೆ ವೇತನ ನೀಡಬೇಕು. ಪದಕ ಗೆಲ್ಲುವ ಅರ್ಹತೆಯ ಮೇಲೆ ಕಂಬಳ ಸೀಸನ್​ನಲ್ಲಿ 5 ಲಕ್ಷ ರೂ.ವರೆಗೆ ಪ್ಯಾಕೇಜ್ ಪಡೆದು ಒಪ್ಪಂದ ಮಾಡಿಕೊಳ್ಳುವವರೂ ಇದ್ದಾರೆ. ಹಾಗೆಂದು ಓಟಗಾರರ ಜೀವನ ಸುಲಭವಲ್ಲ. ಜಿಮ್ಲ್ಲಿ ದೇಹ ದಂಡಿಸಿದವರಂತೆ ಕಾಣುವ ಇವರು ಸಾಮಾನ್ಯ ವ್ಯಾಯಾಮ, ಕಂಬಳ ಅಭ್ಯಾಸ, ಆಹಾರ ಕ್ರಮದಿಂದಲೇ ಆಕರ್ಷಕ ಮೈಕಟ್ಟು ಉಳಿಸಿಕೊಳ್ಳುತ್ತಾರೆ.

ಪ್ರಸಕ್ತ ಓಟಗಾರರು

ಪಣಪೀಲು ರಾಜವರ್ಮ ಮುದ್ಯ, ನಾರಾವಿ ಯುವರಾಜ ಜೈನ್, ಕೆವುಡೇಲು ಅಣ್ಣಿ ದೇವಾಡಿಗ, ಮಂದಾರ್ತಿ ಗೋಪಾಲ ನಾಕ, ಇರ್ವತ್ತೂರು ಆನಂದ, ಪಣಪೀಲು ಪ್ರವೀಣ ಕೋಟ್ಯಾನ್, ಹಕ್ಕೇರಿ ಸುರೇಶ ಶೆಟ್ಟಿ, ಅಶ್ವತ್ಥಪುರ ಶ್ರೀನಿವಾಸ ಗೌಡ, ಬಜಗೋಳಿ ನಿಶಾಂತ ಶೆಟ್ಟಿ, ಕನ್ನಡಿಕಟ್ಟೆ ಮಹಮ್ಮದ್, ಬಾರಾಡಿ ನಟೇಶ, ಬಂಗಾಡಿ ಜಮಾಲ್, ಹಮೀದ್ ಮತ್ತಿತರರು.

ಕಂಬಳ ತರಬೇತಿ

ಪೊ›.ಗುಣಪಾಲ ಕಡಂಬ ನೇತೃತ್ವದ ಕಾರ್ಕಳದಲ್ಲಿನ ಕಂಬಳ ಅಕಾಡೆಮಿ ಹಲವು ಓಟಗಾರರನ್ನು ಈ ಕ್ಷೇತ್ರಕ್ಕೆ ನೀಡಿದೆ. ತರಬೇತಿಗಾಗಿ ಕೆಲವು ವರ್ಷಗಳಿಗೊಮ್ಮೆ ಮಿಯ್ಯಾರಿನಲ್ಲಿ ಶಿಬಿರ ಏರ್ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಂಬಳ ಸಮಿತಿ ವತಿಯಿಂದಲೇ ತರಬೇತಿ ಏರ್ಪಡಿಸಲು ಯೋಜನೆ ರೂಪಿಸಲಾಗಿದ್ದು, ಪಿಲಿಕುಳದಲ್ಲಿ ಕಂಬಳ ಭವನ ನಿರ್ವಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಹಿಂದಿನ ಪ್ರಸಿದ್ಧ ಓಟಗಾರರು

ಅಲ್ಲಿಪಾದೆ ವಲೇರಿಯನ್, ಕಂಗಿನಹಿತ್ಲು ವಿಜಯಕುಮಾರ, ಮಾಣಿ ಸಂಜೀವ, ರೆಂಜಾಳ ಕಾರ್ಯ ಸಂಜೀವ, ಕಕ್ಕೆಪದವು ಜಯಶೆಟ್ಟಿ, ಹೊಕ್ಕಾಡಿಗೋಳಿ ಕುಟ್ಟಿ ಶೆಟ್ಟಿ, ಸುರ್ಯ ಶರತ್​ಕುಮಾರ, ಕಲ್ಲಡ್ಕ ವಾಸುದೇವ ಪ್ರಭು, ಗುರುವಾಯನಕೆರೆ ರಮ್ಲಾನ್, ಗುಂಡೀರು ಅಬ್ಬು ಬ್ಯಾರಿ, ಆಳದಂಗಡಿ ಸದಾನಂದ, ನಡುಮುಗೇರು ಮಹೇಶ, ಕರುಣಾಕರ ಶೆಟ್ಟಿ, ನಕ್ರೆ ಜಯಕರ ಮಡಿವಾಳ, ಪಲಿಮಾರ್ ದೇವೇಂದ್ರ ಕೋಟ್ಯಾನ್, ಪೇಜಾವರ ಭಾಸ್ಕರ, ವೀರಕಂಭ ಜಯಂತ, ಪಣಪೀಲು ಸಾಧು ಶೆಟ್ಟಿ, ಈದು ಅಜಿತ್-ಅಶೋಕ್ ಜೈನ್ ಸಹೋದರರು, ಅಲ್ಲಿಪಾದೆ ಆದಿರಾಜ ಜೈನ್, ಕರ್ಪೆ ಜನಾರ್ಧನ ನಾಯಕ್.

| ಡಾ. ಎಸ್.ಎಸ್. ಅಮೃತ ಮಲ್ಲ