ಅಂಕಣ

ಲಘು ಭೂಕಂಪವೂ, ಭಾರಿ ಭೂ-ಸಾಮರಿಕ ಕಂಪನವೂ | War

ಮೋಹನ್​ ಶೆಟ್ಟಿ
ಉತ್ತರ ಇರಾನ್​ನ ಮರಳುಗಾಡು ಪ್ರಾಂತ್ಯವಾದ ಸಮ್ನಾನ್​ನಲ್ಲಿ ಇದೇ ಅಕ್ಟೋಬರ್ 5ರಂದು ಭೂಕಂಪ ಸಂಭವಿಸಿತು. ಅದೇನೂ ಭಾರಿ ಕಂಪನವಲ್ಲ (war). ರಿಕ್ಟರ್ ಮಾಪಕದಲ್ಲಿ ದಾಖಲಾದ ಅದರ ತೀವ್ರತೆಯ ಪ್ರಮಾಣ 4.6 ಅಷ್ಟೇ. ಇಂತವಹವು ಜಗತ್ತಿನ ವಿವಿಧೆಡೆ ಸಾಮಾನ್ಯವಾಗಿ ಸಂಭವಿಸುತ್ತಲೇ ಇರುತ್ತವೆ. ಆದರೆ ಸಮ್ನಾನ್ ಪ್ರದೇಶದಲ್ಲಿ ಇಂತಹ ಕಂಪನಗಳು ಆದ ಉದಾಹರಣೆ ಇಲ್ಲ. ಹೀಗಾಗಿ ಈ ಕಂಪನ ಪ್ರಾಕೃತಿಕವೇ ಅಥವಾ ಮಾನವನ ಕೈವಾಡವೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಮಾನವನ ಕೈವಾಡವೇ ಎನ್ನುವುದಾದರೆ ಅದು ಭೂಮ್ಯಂತರ್ಗತ ಅಣ್ವಸ್ತ್ರ ಪರೀಕ್ಷೆಯೇ ಎನ್ನವುದೊಂದು ಆತಂಕಕಾರಿ ಪ್ರಶ್ನೆ.

ಹನ್ನೊಂದು ವರ್ಷಗಳ ಹಿಂದೆ

ಅಣ್ವಸ್ತ್ರ ಪರೀಕ್ಷೆ ಲಘು ಪ್ರಮಾಣದ ಭೂಕಂಪನವನ್ನು ಉಂಟುಮಾಡಿರುವುದಕ್ಕೆ ಉದಾಹರಣೆಗಳಿವೆ. 1970ರ ದಶಕದ ಅಂತ್ಯದಲ್ಲೊಮ್ಮೆ ಉತ್ತರ ಇರಾನ್​ನಲ್ಲಿ ಲಘು ಭೂಕಂಪ ಸಂಭವಿಸಿದಾಗ ಅದಕ್ಕೆ ಕಾರಣ ಆಗಿನ ಸೋವಿಯತ್ ಯೂನಿಯನ್ ತನ್ನ ದಕ್ಷಿಣದ ತುರ್ಕ್​ವೆುನಿಸ್ತಾನ್​ನ ಮರುಭೂಮಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಎಂಬ ಊಹಾಪೋಹ ದಟ್ಟವಾಗಿ ಎದ್ದಿತ್ತು. ಹನ್ನೊಂದು ವರ್ಷಗಳ ಹಿಂದೆ ಉತ್ತರ ಕೊರಿಯಾದ ಪೂರ್ವ ಕರಾವಳಿಯಲ್ಲಿ ಅಸಹಜ ಭೂಕಂಪ ಸಂಭವಿಸಿದ ಕೆಲವೇ ದಿನಗಳಲ್ಲಿ ಆ ದೇಶ ಅಣ್ವಸ್ತ್ರ ರಾಷ್ಟ್ರವಾದ ಸುದ್ದಿ ಬಯಲಾಯಿತು. ಆಗಲೂ ಆ ಕಮ್ಯುನಿಸ್ಟ್ ದೇಶದ ಅಣ್ವಸ್ತ್ರ ಪರೀಕ್ಷೆಯೇ ಭೂಕಂಪಕ್ಕೆ ಕಾರಣ ಎಂದು ಸುದ್ದಿಯಾಯಿತು.

ಪ್ರಸಕ್ತ ಸಮ್ನಾನ್ ಭೂಕಂಪ ಇರಾನ್ ಅಣ್ವಸ್ತ್ರ ರಾಷ್ಟ್ರವಾದ ಸೂಚನೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಾರ್ವಜನಿಕವಾಗಿ ಇನ್ನೂ ದೊರೆತಿಲ್ಲ. ಆ ಇಸ್ಲಾಮಿಕ್ ಮೂಲಭೂತವಾದಿ ದೇಶದ ಅಣ್ವಸ್ತ್ರ ಕಾರ್ಯಕ್ರಮ, ಅದರಿಂದಾಗಿ ಅದರ ಮೇಲೆ ವಿಶ್ವಸಂಸ್ಥೆ, ಅಮೆರಿಕ ಮತ್ತದರ ಸಹಯೋಗಿ ದೇಶಗಳು ವಿಧಿಸಿದ ಆರ್ಥಿಕ ಹಾಗೂ ತಾಂತ್ರಿಕ ದಿಗ್ಬಂಧನಗಳು ಕಳೆದ ಎರಡು ದಶಕಗಳಲ್ಲಿ ದೊಡ್ಡದಾಗಿ ಸುದ್ದಿಯಾಗುತ್ತಿರುವುದು ಗೊತ್ತಿರುವಂತಹದೇ. ತಾನು ಆ ಯೋಜನೆಯನ್ನು ನಿಲುಗಡೆಗೆ ತರುತ್ತಿರುವುದಾಗಿ ಇರಾನ್ ಒಂಬತ್ತು ವರ್ಷಗಳ ಹಿಂದೆ ಅಮೆರಿಕ ಮತ್ತು ಇತರ ನಾಲ್ಕು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದಕ್ಕೆ ಪ್ರತಿಯಾಗಿ ಆ ದೇಶದ ಮೇಲೆ ವಿಧಿಸಲಾಗಿದ್ದ ದಿಗ್ಬಂಧನಗಳನ್ನು ಸಡಿಲಿಸಲಾಗಿತ್ತು. ಆದರೆ ಇರಾನ್ ಒಪ್ಪಂದದ ಪ್ರಕಾರ ನಡೆದುಕೊಳ್ಳುತ್ತಿಲ್ಲವೆಂದು ಹೇಳಿ ಡೊನಾಲ್ಡ್ ಟ್ರಂಪ್ 2018ರಲ್ಲಿ ಅಮೆರಿಕವನ್ನು ಆ ಒಪ್ಪಂದದಿಂದ ಹೊರಗೊಯ್ದರು ಮತ್ತು ಇರಾನ್ ಮೇಲೆ ದಿಗ್ಬಂಧನಗಳನ್ನು ಮತ್ತೆ ಹೇರಿದರು.

ಇರಾನ್ ಅಣ್ವಸ್ತ್ರ ಪರೀಕ್ಷೆ ನಡೆಸುವ ಸಮಯ ಸನ್ನಿಹಿತವಾಗಿದೆ

ಟ್ರಂಪ್​ರ ನಡೆಗೆ ಕಾರಣವಾದದ್ದು ‘ಇರಾನ್​ನ ಅಣ್ವಸ್ತ್ರ ಕಾರ್ಯಕ್ರಮಗಳು ರಹಸ್ಯವಾಗಿ ಮುಂದುವರಿಯುತ್ತಲೇ ಇವೆ’ ಎಂದು ಇಸ್ರೇಲ್ ಸುಮಾರು ಒಂದುಲಕ್ಷ ಪುಟಗಳ ಬೇಹುಗಾರಿಕಾ ವರದಿಯನ್ನು ಶ್ವೇತಭವನಕ್ಕೆ ತಲುಪಿಸಿದ್ದು. ಈ ವಿಷಯವನ್ನು ಇರಾನ್​ನ ಮಾಜಿ ಅಧ್ಯಕ್ಷ ಮೆಹಮೂದ್ ಅಹ್ಮದಿನೆಜಾದ್ ಇದೇ ಅಕ್ಟೋಬರ್ 1ರಂದು ಸಿಎನ್​ಎನ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಹ್ಮದಿನೆಜಾದ್ ಸ್ವತಃ ಅಣುಭೌತವಿಜ್ಞಾನಿ ಮತ್ತು ಅವರ ಅಧ್ಯಕ್ಷಾವಧಿಯಲ್ಲೇ ಇರಾನ್​ನ ಅಣ್ವಸ್ತ್ರ ಕಾರ್ಯಯೋಜನೆಗಳು ವೇಗ ಪಡೆದುಕೊಂಡಿದ್ದವು. ಟ್ರಂಪ್​ರ ಕ್ರಮದ ನಂತರ ಇರಾನ್​ನ ಅಣ್ವಸ್ತ್ರ ಕಾರ್ಯಯೋಜನೆ ಇನ್ನಷ್ಟು ವೇಗ ಪಡೆದುಕೊಂಡದ್ದರ ಬಗ್ಗೆ ವರದಿಗಳು ಬರುತ್ತಲೇ ಇವೆ. ‘ಇರಾನ್ ಅಣ್ವಸ್ತ್ರ ಪರೀಕ್ಷೆ ನಡೆಸುವ ಸಮಯ ಸನ್ನಿಹಿತವಾಗಿದೆ’ ಎಂಬ ವರದಿಯೊಂದು 2019ರಲ್ಲಿ ದೊಡ್ಡದಾಗಿ ಸುದ್ದಿ ಮಾಡಿತ್ತು. ಅದರೊಂದಿಗೆ ಇರಾನಿ ಅಣುಭೌತವಿಜ್ಞಾನಿಗಳನ್ನು ಇಸ್ರೇಲ್​ನ ಮೊಸಾದ್ ಬೇಹುಗಾರಿಕಾ ಸಂಸ್ಥೆ ಹತ್ಯೆಗೈಯುವುದೂ ಸುದ್ದಿಯಾಗತೊಡಗಿತು.

ಹಾಗೆ ಹತ್ಯೆಯಾದವರಲ್ಲಿ ಇರಾನ್​ನ ಪ್ರಮುಖ ಅಣಭೌತವಿಜ್ಞಾನಿ ಮೊಹ್ಸಾನ್ ಫಖ್ರಿಜಾದಾ ಅವರದು ಪ್ರಮುಖ ಹೆಸರು. ಹಾಗೆಯೇ ರಾಜಧಾನಿ ತೆಹರಾನ್​ನ ದಕ್ಷಿಣಕ್ಕೆ ನಾನೂರು ಕಿಲೋಮೀಟರ್ ದೂರದ ನತಾಂಜ್​ನಲ್ಲಿರುವ ಇರಾನ್​ನ ಪ್ರಮುಖ ಅಣುವೈಜ್ಞಾನಿಕ ಕಾರ್ಯಾಗಾರದ ವಿದ್ಯುತ್ ಪೂರೈಕೆಯನ್ನು ಇಸ್ರೇಲ್ ಹಾಳುಗೆಡವಿದ್ದು 3 ವರ್ಷಗಳ ಹಿಂದೆ. ಅದರಿಂದಾಗಿ ಇರಾನ್​ನ ಅಣ್ವಸ್ತ್ರ ಯೋಜನೆ ಕನಿಷ್ಠ 9 ತಿಂಗಳು ಹಿಂದೆ ಸರಿಯಿತು ಎಂದು ಆಗ ಅನುಮಾನಿಸಲಾಗಿತ್ತು. ಆ ಆವಧಿ ಮುಗಿದು ಎರಡು ವರ್ಷಗಳೇ ಆಗಿಹೋದವು. ಅಂದರೆ ಈಗ ಇರಾನ್ ಅಣ್ವಸ್ತ್ರ ಗಳಿಸಿಕೊಂಡಿದೆಯೇ?ಈ ಪ್ರಶ್ನೆಗೆ ಉತ್ತರ ಅಧಿಕೃತವಾಗಿ ಇರಾನ್​ನಿಂದಲೂ ಬಂದಿಲ್ಲ. ಇಸ್ರೇಲ್ ಅಥವಾ ಅಮೆರಿಕ ಕೂಡ ಈ ಬಗ್ಗೆ ಏನೂ ಹೇಳುತ್ತಿಲ್ಲ. ಆದರೆ ಆ ಎರಡು ದೇಶಗಳ ನಾಯಕರಿಗೆ ಉತ್ತರ ಗೊತ್ತಾಗಿಹೋಗಿದೆ.

ತನ್ನ ಭಯೋತ್ಪಾದಕ ಕೈಗೊಂಬೆಗಳಾದ ಹೆಜ್ಬೊಲ್ಲಾದ ನೇತಾರ ಹಸನ್ ನಸ್ರಲ್ಲಾನನ್ನು ಕೊಂದದ್ದಕ್ಕೆ ಪ್ರತಿಯಾಗಿ ಇರಾನ್ ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ 200 ಕ್ಷಿಪಣಿಗಳ ದಾಳಿ ನಡೆಸಿತಷ್ಟೇ. ಅವುಗಳಲ್ಲಿ ಬಹುತೇಕ ಕ್ಷಿಪಣಿಗಳನ್ನು ಇಸ್ರೇಲ್ ಮತ್ತು ಅಮೆರಿಕ ಮಾರ್ಗಮಧ್ಯದಲ್ಲೇ ನಾಶಗೊಳಿಸಿದರೂ ಕೆಲವೊಂದು ಕ್ಷಿಪಣಿಗಳು ಗುರಿ ತಲುಪುವುದರಲ್ಲಿ ಯಶಸ್ವಿಯಾದವು. ಅದರಿಂದಾಗಿ ಇಸ್ರೇಲ್​ನಲ್ಲಿ ಸುಮಾರು 2,500 ಕಟ್ಟಡಗಳು ಕ್ಷತಿಗೊಂಡಿವೆ ಮತ್ತು ಹಾನಿಯ ಪ್ರಮಾಣ ಸುಮಾರು 53 ಮಿಲಿಯನ್ ಡಾಲರ್​ಗಳು. ಅಂದರೆ ಸುತ್ತಲಿನ ಅರಬ್ ದೇಶಗಳೊಂದಿಗೆ 1967 ಮತ್ತು 1973ರಲ್ಲಿ ನಡೆದ ಯುದ್ಧಗಳಿಂದಾದ ಹಾನಿಗಳನ್ನು ಹೊರತುಪಡಿಸಿದರೆ ಇದು ಇಸ್ರೇಲ್ ಅನುಭವಿಸಿದ ಅತಿ ದೊಡ್ಡ ಹಾನಿ. ಆದರೆ ಹಾನಿಗೊಳಗಾಗಿ ಎರಡು ವಾರಗಳಾದರೂ ಇಸ್ರೇಲ್ ಇನ್ನೂ ಪ್ರತಿಕ್ರಿಯಿಸಿಲ್ಲ! ಇದು ಇಸ್ರೇಲ್​ನ ಜಾಯಮಾನಕ್ಕೆ ಒಗ್ಗದ ನಡವಳಿಕೆ.

ಇಸ್ರೇಲ್ ದೊಡ್ಡ ಅಪಾಯವನ್ನು ಮುಂಗಾಣುತ್ತಿದೆ

ಇರಾನ್​ನ ದಾಳಿಗೆ ಇಸ್ರೇಲ್ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಮತ್ತು ರಕ್ಷಣಾ ಸಚಿವ ಯಾವೋವ್ ಗ್ಯಾಲಂಟ್ ಒಂದಕ್ಕಿಂತ ಹೆಚ್ಚು ಬಾರಿ ಘೊಷಿಸಿದ್ದಾರೆ, ನಿಜ. ಜತೆಗೆ ಅವರು ತಮ್ಮ ಅತಿದೊಡ್ಡ ಹಾಗೂ ನಂಬಿಗಸ್ತ ದೇಶವಾದ ಅಮೆರಿಕದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ರಕ್ಷಣಾ ಕಾರ್ಯದರ್ಶಿಗಳ ಜತೆ ಮಾತುಕತೆಯನ್ನೂ ಆಡಿದ್ದಾರೆ ಎನ್ನುವುದು ನಿಜ. ಆದಾಗ್ಯೂ ಇರಾನ್ ಮೇಲೆ ಪ್ರತಿದಾಳಿ ಇನ್ನೂ ಆಗಿಲ್ಲವೆಂದರೆ ಇಸ್ರೇಲ್ ದೊಡ್ಡ ಅಪಾಯವನ್ನು ಮುಂಗಾಣುತ್ತಿದೆ ಮತ್ತು ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರ್ಥ. ಆ ಅಪಾಯ ಏನಿರಬಹುದು? ಎಂತಹ ಅಪಾಯಕ್ಕೂ ಹೆದರದೆ ಮುನ್ನುಗ್ಗುವ ಇಸ್ರೇಲ್​ನಂತಹ ದೇಶವೇ ಹಿಂಜರಿಯುತ್ತಿದೆ ಎಂದರೆ ಅದು ಹೆದರುತ್ತಿರುವುದು ಅಣ್ವಸ್ತ್ರ ದಾಳಿಗೆ ಇರಬಹುದೇ? ತನ್ನ ಪ್ರತಿದಾಳಿಗೆ ಉತ್ತರವಾಗಿ ಇರಾನ್ ತನ್ನ ಮೇಲೆ ಅಣ್ವಸ್ತ್ರ ದಾಳಿ ನಡೆಸಬಹುದು, ಅದನ್ನು ತಡೆಯುವ ತಯಾರಿ ಮಾಡಿಕೊಳ್ಳದೆ ತಾನು ಮುಂದುವರಿಯಬಾರದು ಎಂದು ಇಸ್ರೇಲ್ ರ್ತಸಿರುವ ಸಾಧ್ಯತೆ ಇದೆ.

ಇರಾನ್ ಮೇಲೆ ಐದಾರು ಅಣ್ವಸ್ತ್ರ

ಇಸ್ರೇಲ್ ಸಹ ಅಣ್ವಸ್ತ್ರ ರಾಷ್ಟ್ರವೇ. ಆದರೆ ಅದಕ್ಕಿರುವ ತೊಂದರೆಯೆಂದರೆ ಅತಿ ಕಡಿಮೆ ನೆಲ. ಇಸ್ರೇಲ್​ನ ಭೂವಿಸ್ತೀರ್ಣ ಹೆಚ್ಚುಕಡಿಮೆ ನಮ್ಮ ಕರ್ನಾಟಕದ ಹತ್ತನೆಯ ಒಂದರಷ್ಟು ಎಂದರೆ ಅದೆಷ್ಟು ಪುಟ್ಟದೇಶ ಎಂದು ಅರ್ಥವಾಗಬಹುದು. ಇರಾನ್ ಕನಿಷ್ಠ ಎರಡು ಅಣ್ವಸ್ತ್ರಗಳನ್ನು ಪ್ರಯೋಗಿಸಿದರೆ ಇಸ್ರೇಲ್ ಪೂರ್ತಿಯಾಗಿ ಕುಸಿದುಹೋಗುತ್ತದೆ. ಅಕ್ಟೊಬರ್ 1ರಂದು ಇಸ್ರೇಲ್​ನ ಜಗತ್​ಪ್ರಸಿದ್ಧ ಐರನ್ ಡೋಮ್ ಡೇವಿಡ್ಸ್ ಸ್ಲಿಂಗ್, ಆರೋ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಿಕೊಂಡು ಹತ್ತಿಪ್ಪತ್ತು ಇರಾನಿ ಕ್ಷಿಪಣಿಗಳು ಗುರಿ ಮುಟ್ಟಿದವು ಎನ್ನುವುದನ್ನು ನೆನಪಿಸಿಕೊಳ್ಳಿ. ಇರಾನ್​ನ ಮುಂದಿನ ದಾಳಿಯಲ್ಲಿ ಒಂದೋ ಎರಡೋ ಬ್ಯಾಲಿಸ್ಟಿಕ್ ಮಿಸೈಲ್​ಗಳು ಅಣ್ವಸ್ತ್ರ ಹೊತ್ತು ಬಂದು ಗುರಿ ಮುಟ್ಟಿಬಿಟ್ಟರೆ ಹೇಗೆ? ಇಸ್ರೇಲ್​ಗೆ ಪ್ರತಿದಾಳಿಗಾಗಿ ಅವಕಾಶ ಸಿಕ್ಕಿದರೂ, ಇರಾನ್ ಮೇಲೆ ಐದಾರು ಅಣ್ವಸ್ತ್ರಗಳನ್ನು ಪ್ರಯೋಗಿಸದರೂ ನಮ್ಮ ಕರ್ನಾಟಕದ ಎಂಟು ಪಟ್ಟು ದೊಡ್ಡದಾಗಿರುವ ಇರಾನ್ ಬದುಕಿ ಉಳಿದುಕೊಳ್ಳುತ್ತದೆ. ಭೂ-ಸಾಮರಿಕ ವಾಸ್ತವ ಹೀಗಿರುವಾಗ ಇರಾನ್​ನ ಅಣ್ವಸ್ತ್ರ ತನ್ನತ್ತ ಬಾರದಂತೆ ನಿಖರ ಕ್ರಮ ಕೈಗೊಂಡು ನಂತರ ಆ ಮೂಲಭೂತವಾದಿ ದೇಶದ ಮೇಲೆ ದಾಳಿಯೆಸಗಲು ಇಸ್ರೇಲ್ ಯೋಜನೆ ರೂಪಿಸುತ್ತಿದೆ. ಆ ಯೋಜನೆ ಏನಿರಬಹುದು? ಇದಕ್ಕೆ ಉತ್ತರವು ಅಮೆರಿಕದ ನಡೆಯಲ್ಲಿ ನಿಚ್ಚಳವಾಗಿ ಗೋಚರವಾಗುತ್ತಿದೆ.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಸೈನಿಕರು ಈಗಾಗಲೇ ಇದ್ದಾರೆ. ಕತಾರ್​ನಲ್ಲಿ ಅಮೆರಿಕದ ಬೃಹತ್ ಸೇನಾನೆಲೆಯೇ ಇದೆ. ಇರಾಕ್, ಸೌದಿ ಅರೇಬಿಯಾಗಳಲ್ಲೂ ಅಮೆರಿಕ ತನ್ನ ಸೈನಿಕರನ್ನೂ, ಸಾಮರಿಕ ವ್ಯವಸ್ಥೆಗಳನ್ನೂ ಇರಿಸಿದೆ. ಅಷ್ಟೇಕೆ, ಇಸ್ರೇಲ್​ನಲ್ಲೇ, ಗಾಜಾಗೆ ಕೇವಲ ಮೂವತ್ತು ಕಿಲೋಮೀಟರ್​ಗಳಷ್ಟು ಹತ್ತಿರದಲ್ಲೇ ಅಮೆರಿಕದ ಪುಟ್ಟ ನೆಲೆಯೊಂದಿದೆ. ಅಲ್ಲಿರುವುದು ಕೇವಲ ನಿಗಾ ವಹಿಸುವ ಉಪಕರಣಗಳು ಮತ್ತು ತಂತ್ರಜ್ಞರು ಎಂದು ಹೇಳಲಾದರೂ ಅಲ್ಲಿ ಸೈನಿಕರು ಮತ್ತು ಸೇನಾಸಾಮಗ್ರಿಗಳು ಇಲ್ಲವೆಂದು ಹೇಳಲಾಗುವುದಿಲ್ಲ. ಅಲ್ಲದೆ, ಸೆಪ್ಟೆಂಬರ್ ಕೊನೆಯಲ್ಲಿ ಅಮೆರಿಕ ಸುಮಾರು ಮೂರು ಸಾವಿರ ಸೈನಿಕರನ್ನು ಪಶ್ಚಿಮ ಏಷ್ಯಾದ ತನ್ನ ವಿವಿಧ ನೆಲೆಗಳಿಗೆ ಹೊಸದಾಗಿ ತಂದಿದೆ. ಜತೆಗೆ, ವಿಮಾನವಾಹಕ ನೌಕೆಗಳಾದ ಯುಎಸ್​ಎಸ್ ಅಬ್ರಹಾಂ ಲಿಂಕನ್ ಮತ್ತು ಯುಎಸ್​ಎಸ್ ಹ್ಯಾರಿ ಟ್ರೂಮನ್ ಸೇರಿ ಆರು ಅಮೆರಿಕನ್ ಯುದ್ಧನೌಕೆಗಳು ಪಶ್ಚಿಮ ಏಷ್ಯಾದ ಜಲಪ್ರದೇಶದಲ್ಲಿ ಈಗಾಗಲೇ ಇವೆ. ಅವುಗಳಲ್ಲಿ ಮರೀನ್, ಯುದ್ಧವಿಮಾನಗಳು, ಶಸ್ತ್ರಾಸ್ತ್ರಗಳು ಇವೆ. ಅಣ್ವಸ್ತ್ರಗಳೂ ಇವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆದರೆ ಇಸ್ರೇಲ್​ನ್ನು ರಕ್ಷಿಸಲು ಇವು ಮಾತ್ರ ಸಾಕಾಗಲಾರವು ಎಂದು ಅಮೆರಿಕ ತಿಳಿದಂತಿದೆ. ಇರಾನ್ ಅಪಾಯಕಾರಿ ಮಟ್ಟಕ್ಕೆ ಬೆಳೆದುನಿಂತಿದೆ, ಅದನ್ನು ನಿಗ್ರಹಿಸಲು ವಿಶೇಷ ತಯಾರಿಯೇ ಬೇಕು ಎಂದು ಶ್ವೇತಭವನರ್ತಸಿದೆ. ತನ್ನ ಅತ್ಯಾಧುನಿಕ ಕ್ಷಿಪಣಿ-ನಿರೋಧಕ ವ್ಯವಸ್ಥೆ ‘ಟರ್ವಿುನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್’ (ಟಿಹೆಚ್​ಎಎಡಿ, ಥಾಡ್) ಅನ್ನು ಇಸ್ರೇಲ್​ನಲ್ಲಿ ನಿಯೋಜಿಸುವುದಾಗಿ ಅಮೆರಿಕ ಇದೇ ಅಕ್ಟೋಬರ್ 12ರಂದು ಘೊಷಿಸಿದೆ. ನಮ್ಮಲ್ಲಿರುವ ರಷ್ಯನ್ ತಯಾರಿಕೆ ಎಸ್-400 ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಸಿಸ್ಟಂಗಿಂತಲೂ ಉತ್ತಮವಾದದ್ದು ಈ ಥಾಡ್ ಸಿಸ್ಟಂ. ಶಕ್ತಿಶಾಲಿ ಟ್ರಕ್ ಮೇಲೆ ಕೂರಿಸಲಾಗುವ ಈ ಸಿಸ್ಟಂನಲ್ಲಿ ಆರು ಲಾಂಚರ್​ಗಳಿರುತ್ತವೆ ಮತ್ತು ಪ್ರತಿ ಲಾಂಚರ್​ನಲ್ಲಿ ಎಂಟು ಮಿಸೈಲ್​ಗಳಿರುತ್ತವೆ. ಅಂದರೆ ಕೇವಲ ಒಂದು ಥಾಡ್ ಸಿಸ್ಟಂ 48 ಕ್ಷಿಪಣಿಗಳನ್ನು ಹಾರಿಸಿ ಶತ್ರುವಿನ ಅಷ್ಟೇ ಸಂಖ್ಯೆಯ ಬ್ಯಾಲಿಸ್ಟಿಕ್ ಮಿಸೈಲ್​ಗಳನ್ನು ಅಂತರಿಕ್ಷದಲ್ಲೇ ನಾಶಪಡಿಸಬಲ್ಲುದು. ಈ ಮಿಸೈಲ್​ಗಳ ವೇಗ ಗಂಟೆಗೆ 9,980 ಕಿಲೋಮೀಟರ್​ಗಳು! ಈ ಅಸಾಧಾರಣ ವೇಗವೇ ಇದರ ಘಾತಕ ಮಾರಕ ಶಕ್ತಿ. ಇಷ್ಟು ವೇಗದಿಂದ ಬಂದೆರಗುವ ಇದರ ಹೊಡೆತಕ್ಕೆ ಸಿಕ್ಕಿ ನಾಶವಾಗದ ಯಾವ ಬ್ಯಾಲಿಸ್ಟಿಕ್ ಮಿಸೈಲೂ ಇಲ್ಲ. ರೇಡಿಯೋ ಮತ್ತು ರೆಡಾರ್ ವ್ಯವಸ್ಥೆಗಳನ್ನೂ ಹೊಂದಿರುವ ಥಾಡ್ ಮಿಸೈಲ್​ಗಳು ಇರಾನ್​ನ ನೆಲದಿಂದ ಮೇಲೇಳುವ ಯಾವುದೇ ಬ್ಯಾಲಿಸ್ಟಿಕ್ ಮಿಸೈಲ್​ನ್ನು ಕ್ಷಣಾರ್ಧದಲ್ಲಿ ಗುರುತಿಸಿ ಅತ್ತ ಧಾವಿಸುತ್ತದೆ. ಇರಾನಿ ಮಿಸೈಲ್​ಗೆ ಅಂತ್ಯ ಶತಸಿದ್ಧ. ಅದರೊಂದಿಗೆ ಅದು ಹೊಂದಿರಬಹುದಾದ ಅಣ್ವಸ್ತ್ರಕ್ಕೂ ಅದೇ ಗತಿ.

ಚೀನಾ ಮತ್ತು ರಷ್ಯಾಗಳ ಸ್ವಹಿತಾಸಕ್ತಿಪ್ರಧಾನ ನೀತಿನಿಲುವುಗಳು

ಈ ಥಾಡ್ ಮಿಸೈಲ್​ಗಳನ್ನು ಅಮೆರಿಕ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹಂಚಿಕೊಳ್ಳಲೇಬೇಕಾದರೆ ಅದನ್ನು ನಿರ್ವಹಿಸುವವರು ಅಮೆರಿಕದ ಸೈನಿಕರು ಮತ್ತು ತಂತ್ರಜ್ಞರೇ ಆಗಿರುತ್ತಾರೆ. ಇಸ್ರೇಲ್​ಗೆ ಕಳುಹಿಸಲಾಗುತ್ತಿರುವ ಈ ಮಿಸೈಲ್​ಗಳ ನಿರ್ವಹಣೆಗೆಂದೇ ನೂರು ಅಮೆರಿಕನ್ ಸೈನಿಕರು/ತಂತ್ರಜ್ಞರು ಇಸ್ರೇಲ್​ನಲ್ಲಿ ಬಂದಿಳಿಯುತ್ತಾರೆ. ಮಿಸೈಲ್ ಡಿಫೆನ್ಸ್ ಸಿಸ್ಟಂನ್ನು ಅಮೆರಿಕ ಈಗ ಇಸ್ರೇಲ್​ನಲ್ಲಿ ನೆಲೆಗೊಳಿಸುತ್ತಿರುವ ಉದ್ದೇಶ ಇರಾನ್​ನಿಂದ ಬರಬಹುದಾದ ಅಣ್ವಸ್ತ್ರ ಹೊತ್ತ ಬ್ಯಾಲಿಸ್ಟಿಕ್ ಮಿಸೈಲ್​ಗಳನ್ನು ನಿಗ್ರಹಿಸುವುದಕ್ಕಾಗಿ. ಇಷ್ಟೆಲ್ಲ ತಯಾರಿಯ ಹಿಂದೆ ಪ್ರಸಕ್ತ ಅಥವಾ ನಿಕಟಭವಿಷ್ಯದ ಭೂ-ಸಾಮರಿಕ ವಾಸ್ತವಗಳಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇಸ್ರೇಲ್ ಎರಡು ಉದ್ದೇಶಗಳನ್ನಿರಿಸಿಕೊಂಡಿವೆ. ಒಂದು- ಇರಾನ್ ಅಣ್ವಸ್ತ್ರಗಳನ್ನು ಖುದ್ದಾಗಿ ಅಥವಾ ‘ಬೇರಾರೋ’ ಹಿತೈಷಿಗಳಿಂದ ಪಡೆದುಕೊಂಡಿರುವುದೇ ಆದರೆ ಅವುಗಳ ಸಂಖ್ಯೆ ದೊಡ್ಡದೇನೂ ಆಗಿರಲಾರದು. ಅವುಗಳನ್ನು ಇರಾನಿ ನೆಲದಲ್ಲಿ ಅಥವಾ ಅಂತರಿಕ್ಷದಲ್ಲಿ ನಾಶಮಾಡಿ ಅಥವಾ ಅವುಗಳನ್ನು ಬಳಸಲಾಗದಂತೆ ಆ ಮೂಲಭೂತವಾದಿ ದೇಶದ ಕೈಗಳನ್ನು ಕಟ್ಟಿಹಾಕಿ, ನಂತರ ಅದರ ಅಳಿದುಳಿದ ಸಾಮರಿಕ ರೆಕ್ಕೆಗಳನ್ನು ಕತ್ತರಿಸುವುದು ಅಮೆರಿಕ ಮತ್ತು ಇಸ್ರೇಲ್​ನ ಉದ್ದೇಶವಾಗಿರಬಹುದು. ಎರಡು- ಒಂದುವೇಳೆ ಇರಾನ್ ಕೈಗೆ ಅಣ್ವಸ್ತ್ರವಿನ್ನೂ ದಕ್ಕಿಲ್ಲವಾದರೆ ಅಮೆರಿಕದ ಈ ತಯಾರಿ ಬೇರಾವುದೇ ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ಇರಾನ್ ಪರವಾಗಿ ನಿಲ್ಲದಂತೆ ತಡೆಯುವುದೇ ಆಗಿದೆ.

ಆದರೂ, ಚೀನಾ ಮತ್ತು ರಷ್ಯಾಗಳ ಸ್ವಹಿತಾಸಕ್ತಿಪ್ರಧಾನ ನೀತಿನಿಲುವುಗಳನ್ನು ನೋಡಿದರೆ ಅವು ಇರಾನ್ ಪರವಾಗಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಇರಾನ್ ಪರವಾಗಿ, ಇಸ್ರೇಲ್ ವಿರುದ್ಧವಾಗಿ ರಷ್ಯಾದ ವಿದೇಶಮಂತ್ರಿ ಸೆರ್ಗೆಯಿ ಲ್ಯಾವೊ›ವ್ ಕಳೆದವಾರ ವಿಯೆಂತಿಯೇನ್​ನಲ್ಲಿ ಏನೇ ಹೇಳಿದರೂ ಮೂಲಭೂತವಾದಿ ಇರಾನ್ ಪರವಾಗಿ ನಿಂತು ಅಮೆರಿಕವನ್ನು ನೇರವಾಗಿ ಎದುರಿಸಲು ರಷ್ಯಾ ಸಿದ್ಧವಿಲ್ಲ. ಇನ್ನು ಚೀನಾದ ಬಗ್ಗೆ ಏನೂ ಹೇಳುವುದು ಬೇಡ. ಒಟ್ಟಾರೆ, ಅಮೆರಿಕ ಮತ್ತು ಇಸ್ರೇಲ್​ಗಳು ಹೊಂದಿರಬಹುದಾದ ಮೇಲೆ ಹೇಳಿದ ಎರಡೂ ಉದ್ದೇಶಗಳ ಅಂತಿಮ ಗುರಿ ಒಂದೇ- ಇರಾನ್​ನ ಮೂಲಭೂತವಾದಿ ಸರ್ಕಾರವನ್ನು ಕಿತ್ತೊಗೆದು ಜನಪ್ರತಿನಿಧಿ ಸರ್ಕಾರವನ್ನು ಅಥವಾ ಅವಕಾಶವಿದ್ದರೆ ಹಿಂದಿನ ರಾಜಪ್ರಭುತ್ವವನ್ನು ಮತ್ತೆ ತೆಹರಾನ್​ನಲ್ಲಿ ಸ್ಥಾಪಿಸುವುದು. ಇದಕ್ಕೆ ಅರಬ್ ರಾಷ್ಟ್ರಗಳ ಮೌನಸಮ್ಮತಿ ಇದೆ. ಈ ಉದ್ದೇಶಸಾಧನೆಯಾದರೆ ಪಶ್ಚಿಮ ಏಷ್ಯಾ ಶಾಂತಿಯತ್ತ ಸಾಗುತ್ತದೆ. ಈ ಆಶಯದೊಂದಿಗೆ ಅವಳಿಯಾಗಿ ಬರುವ ಇನ್ನೊಂದು ಆಶಯವೆಂದರೆ ಇರಾನ್​ನಲ್ಲಿ ಅಮೆರಿಕ ಮಾಡಹೊರಟಿರುವುದು ಆ ವಿಶಾಲ ದೇಶ ಇನ್ನೊಂದು ಇರಾಕ್ ಅಥವಾ ಲಿಬಿಯಾ ಆಗದಿರಲಿ ಎನ್ನುವುದು.