1976ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಸಮ್ಮೇಳನದಲ್ಲಿ ಸಿದ್ಧಲಿಂಗಯ್ಯ, ನಾನು, ಚೆನ್ನಣ್ಣ ವಾಲೀಕಾರ ಮುಂತಾದ ಆಗಿನ ಮರಿ ಕವಿಗಳು ಭಾಗವಹಿಸಿದ್ದೆವು. ನಾವು ಸಮ್ಮೇಳನದ ಆ ವಿಶಾಲ ವೇದಿಕೆ, ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನರು, ಆ ವೈಭವ ಮೊದಲ ಬಾರಿಗೆ ನೋಡುತ್ತಿದ್ದುದರಿಂದ ದಿಗಿಲುಗೊಂಡಿದ್ದೆವು, ಹೌಹಾರಿದ್ದೆವು. ನಾವು ಮೂವರೂ ರಾಜ್ಯದ ಒಂದೊಂದು ದಿಕ್ಕಿನವರು. ಚೆನ್ನಣ್ಣ ಕಲಬುರಗಿಯವರು, ಸಿದ್ಧಲಿಂಗಯ್ಯ ಬೆಂಗಳೂರಿನವರು, ನಾನು ಬೆಳಗಾವಿಯವ. ನಮ್ಮನ್ನು ಸಂಟಕರು ಒಂದೇ ಕೊಠಡಿಯಲ್ಲಿ ಹಾಕಿದ್ದರಿಂದ ಜನ್ಮಜನ್ಮಾಂತರದ ಗೆಳೆಯರಂತಾಗಿಬಿಟ್ಟೆವು. ಅಲ್ಲಿಯವರೆಗೆ ಬರೀ ಬರವಣಿಗೆಯ ಮೂಲಕ ಪರಿಚಿತರಾಗಿದ್ದ ನಾವು ಈಗ ತೀರ ಸಮೀಪ ಏಕವಚನದ ಸಲಿಗೆಗೆ ಇಳಿದೆವು.
ಕವಿ ಸಮ್ಮೇಳನದಲ್ಲಿ ಸಿದ್ಧಲಿಂಗಯ್ಯ "ಇಕ್ರಲಾ, ಒದೀರ್ಲಾ' ಕವಿತೆಯನ್ನು ಓದಿದರು. ಓದಿದರು ಅನ್ನುವುದಕ್ಕಿಂತ ದೊಡ್ಡ ಧ್ವನಿಯಲ್ಲಿ ಹಾಡಿದರು. ಅವರು ಓದಿದ ಅಥವಾ ಹಾಡಿದ ಆ ಪರಿಗೆ ಅಲ್ಲಿ ಸೇರಿದ್ದ ಸುಮಾರು 40 ಸಾವಿರ ಜನರು ಒಂದು ಕ್ಷಣ ದಿಗ್ಮೂಢರಾದಂತೆ ಕಂಡುಬಂದರು. ತನ್ನ ಈ ಕವಿತೆಯ ಮೂಲಕ ಸಿದ್ಧಲಿಂಗಯ್ಯ ಅಲ್ಲಿಯವರೆಗೆ ಮಡುಗಟ್ಟಿದ್ದ ಕನ್ನಡ ಸಾಹಿತ್ಯಕ್ಕೆ ದಲಿತ ಪ್ರಜ್ಞೆಯ ಮೂಲಕ ಶಾಕ್ ನೀಡಿದ್ದರು. "ನಿಮ್ಮ ಸಾಹಿತ್ಯದ ಚೌಕಟ್ಟಿನಲ್ಲಿ ಎಲ್ಲೋ ಒಂದು ಕಡೆ ನಾವೂ ಇದ್ದೇವೆ' ಎಂಬ ಸಂದೇಶವನ್ನು ನೀಡಲು ಅವರ ಈ ಕವಿತೆಯೇ ಸಾಕಾಗಿತ್ತು. ಶತಶತಮಾನಗಳ ಕಾಲ ತಮ್ಮಲ್ಲಿ ಮಡುಗಟ್ಟಿದ್ದ ಆಕ್ರೋಶವನ್ನೇ ಸಿದ್ಧಲಿಂಗಯ್ಯ ಕಾವ್ಯವನ್ನಾಗಿಸಿದ್ದರು. ಇದಾದ ನಂತರ ಅವರು ಕನ್ನಡ ದಲಿತ ಸಾಹಿತ್ಯದ ಪ್ರಮುಖ ಕವಿಯಾಗಿ ಪ್ರವರ್ಧಮಾನಕ್ಕೆ ಬಂದರು.
ಹಾಗೆ ನೋಡಿದರೆ ನನ್ನ ಮತ್ತು ಸಿದ್ಧಲಿಂಗಯ್ಯನವರ ಒಡನಾಟ 1972ರಿಂದಲೇ ಆರಂಭವಾಗಿತ್ತು. ಆಗ ಡಾ. ಬುದ್ಧಣ್ಣ ಹಿಂಗಮಿರೆಯವರು ಧಾರವಾಡದಲ್ಲಿ "ದಲಿತ' ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. "ದಲಿತ'ಕ್ಕೆ ನಾನು ಮರಾಠಿ ದಲಿತ ಕವಿಗಳ ಕವಿತೆಗಳನ್ನು, ಕಥೆಗಳನ್ನು ಅನುವಾದಿಸಿದ್ದೆ. ಆಗ ಸಿದ್ಧಲಿಂಗಯ್ಯನವರೂ "ದಲಿತ'ಕ್ಕೆ ಬರೆಯುತ್ತಿದ್ದರು. ಆಗ ನಾನು, ಸಿದ್ಧಲಿಂಗಯ್ಯ ಇನ್ನೂ ವಿದ್ಯಾರ್ಥಿಗಳು. ಆಗಿನಿಂದಲೇ ನಾವು ಗೆಳೆಯರು.
ನಾನು ಪತ್ರಿಕಾ ಕ್ಷೇತ್ರವನ್ನು ಸೇರಿ ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರ ಜಿಲ್ಲಾ ವರದಿಗಾರನಾಗಿ ಬೆಳಗಾವಿಗೆ ಬಂದೆ. ಆಗ ಸಿದ್ಧಲಿಂಗಯ್ಯ ತಮ್ಮ ಪಿಎಚ್ಡಿ ಮಹಾಪ್ರಬಂಧದ ಕ್ಷೇತ್ರ ಕಾರ್ಯ ಕಾರಣವಾಗಿ, ಅನೇಕ ಸಲ ಬೆಳಗಾವಿಗೆ ಬರುತ್ತಿದ್ದರು. ನನ್ನ ಇನ್ನೊಬ್ಬ ಗೆಳೆಯರಾದ ಎಂ.ಎನ್. ರಾಯಣ್ಣವರ ಸಿದ್ಧಲಿಂಗಯ್ಯನವರನ್ನು ತಮ್ಮ ಮೋಟಾರ್ಸೈಕಲ್ಲಿನ ಮೇಲೆ ಕೂಡ್ರಿಸಿಕೊಂಡು ಇಡೀ ಬೆಳಗಾವಿ ಜಿಲ್ಲೆಯನ್ನು ಅಡ್ಡಾಡಿಸಿದ್ದರು. ಆಗ ತಿಂಗಳಾನುಗಟ್ಟಲೆ ಬೆಳಗಾವಿ ಜಿಲ್ಲೆಯಲ್ಲಿ ಸಿದ್ಧಲಿಂಗಯ್ಯ ಸಂಚರಿಸಿದ್ದರು.
ಸರ್ಕಾರ ನೇಮಿಸಿದ ಅನೇಕ ಸಮಿತಿಗಳಲ್ಲಿ ನಾವಿಬ್ಬರೂ ಇದ್ದೆವು. ಇತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿದ್ದೆವು. ಕೇಂದ್ರ ಸಾಹಿತ್ಯ ಅಕಾಡೆಮಿಯ ಮೂವರು ಸದಸ್ಯರಲ್ಲಿ ನಾವಿಬ್ಬರು. (ಇನ್ನೊಬ್ಬರು ಕಾದಂಬರಿಕಾರ ಬಾಳಾಸಾಹೇಬ ಲೋಕಾಪುರ ಅವರು). ಸಾಹಿತ್ಯ ಅಕಾಡೆಮಿಯ ನಮ್ಮ ಮೂವರ ಒಗ್ಗಟ್ಟು ಭಾರತದ ಮಿಕ್ಕುಳಿದ 23 ಭಾಷೆಗಳ ಸದಸ್ಯರಿಗೆ ಒಂದು ವಿಸ್ಮಯದಂತೆ ಕಂಡಿದೆ.ಸಿದ್ಧಲಿಂಗಯ್ಯನವರಿಗೆ ಬೇಜಾನ್ ಸಂಖ್ಯೆಯ ಅಭಿಮಾನಿಗಳಿದ್ದಂತೆ ಅಷ್ಟೇ ಸಂಖ್ಯೆಯ ಟೀಕಾಕಾರರೂ ಇದ್ದಾರೆ. ಪ್ರಶಂಸೆ ಮತ್ತು ಟೀಕೆಯನ್ನು ಸಮಸಂಖ್ಯೆಯಲ್ಲಿ ಅನುಭವಿಸಿದ ಕವಿ ಅವರು.
ಚಿಕ್ಕೋಡಿಯ ಸಾಹಿತಿ ಡಾ. ಸುಬ್ರಾವ ಎಂಟೆತ್ತಿನವರ ಸಿದ್ಧಲಿಂಗಯ್ಯನವರ ಪರಮ ಅಭಿಮಾನಿ. ಅವರು ಇತ್ತೀಚೆಗೆ ಚಿಕ್ಕೋಡಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದರು. ತಾವು ವಾಸವಿರುವ ಮನೆಯ ರಸ್ತೆಗೆ ಅವರು "ಡಾ. ಸಿದ್ಧಲಿಂಗಯ್ಯ ಮಾರ್ಗ' ಎಂದು ಹೆಸರನ್ನಿಟ್ಟಿದ್ದಾರೆ. ಈ ವಿಷಯವನ್ನು ನಾನು ಸಿದ್ಧಲಿಂಗಯ್ಯನವರ ಗಮನಕ್ಕೆ ತಂದಾಗ ಅವರಿಗೆ ತುಂಬ ಅಚ್ಚರಿಯಾಯಿತು. ಅವರ ಹುಟ್ಟೂರು ಮಾಲೂರು ಎಲ್ಲಿ, ಸಂಬಂಧವೇ ಇಲ್ಲದ ಚಿಕ್ಕೋಡಿ ಎಲ್ಲಿ? "ಸುಬ್ರಾವ ಒಬ್ಬ ಕವಿಯನ್ನು ಗೌರವಿಸಿದ್ದಾರೆ' ಎಂದು ಸಿದ್ಧಲಿಂಗಯ್ಯ ವಿನಯವನ್ನು ಪ್ರದರ್ಶಿಸಿದರು.
| ಡಾ. ಸರಜೂ ಕಾಟ್ಕರ್ ಬೆಳಗಾವಿ