ಸಂಸ್ಕೃತದಲ್ಲಿ ಅನೇಕ ಜ್ಞಾನ ಶಾಖೆಗಳು ಇವೆ. ನ್ಯಾಯಶಾಸ್ತ್ರ, ವೇದಾಂತಶಾಸ್ತ್ರ, ವ್ಯಾಕರಣಶಾಸ್ತ್ರ, ಮೀಮಾಂಸಾಶಾಸ್ತ್ರ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಆಯುರ್ವೆದ, ವಾಸ್ತು, ಖಗೋಲವಿಜ್ಞಾನ... ಹೀಗೆ. ಅದರ ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಪ್ರಾಚೀನ ಕಾಲದಲ್ಲಿ ಅಧ್ಯಯನವೆಂದರೆ ಸಂಸ್ಕೃತದ ಅಧ್ಯಯನ, ಅದರಲ್ಲೂ ವಿಶೇಷವಾಗಿ ಒಂದೊಂದು ಶಾಸ್ತ್ರದಲ್ಲಿ ತಲರ್ಸ³ಯಾದ ಪಾಂಡಿತ್ಯವನ್ನು ಪಡೆಯುತ್ತಿದ್ದರು. ಆಗ ಸಂಸ್ಕೃತ ಆಡುಭಾಷೆಯೇ ಆಗಿದ್ದರಿಂದ ಅದನ್ನು ಭಾಷೆಯಾಗಿ ಕಲಿಯುವ ಅನಿವಾರ್ಯತೆ ಇರಲಿಲ್ಲ, ಬದಲಿಗೆ ವಿವಿಧ ಶಾಸ್ತ್ರ, ಜ್ಞಾನಶಾಖೆಗಳನ್ನು ಅಧ್ಯಯನ ಮಾಡುತ್ತಿದ್ದರು. ರಾಜ ಮಹಾರಾಜರು ಇದಕ್ಕೆ ಪೋ›ತ್ಸಾಹ ಕೊಡುತ್ತಿದ್ದರು, ಜತೆಗೆ ಸ್ವತಃ ಅಧ್ಯಯನ ಮಾಡುತ್ತಿದ್ದರು.
ಬ್ರಿಟಿಷರ ಆಳ್ವಿಕೆಯಲ್ಲಿ ಆಂಗ್ಲಶಿಕ್ಷಣ ಪದ್ಧತಿಯ ನಡುವೆಯೂ ಸಂಸ್ಕೃತ ಶಿಕ್ಷಣ ಮುಂದುವರಿದಿತ್ತು. ಭಾರತದಲ್ಲಿ ಸಂಸ್ಕೃತದ ಪ್ರಭಾವ ಎಷ್ಟಿತ್ತೆಂದರೆ ಇಲ್ಲಿನ ಸಂಸ್ಕೃತ, ಸಂಸ್ಕೃತಿಯನ್ನು ಆಂಗ್ಲಮಯಗೊಳಿಸಲು ಬಂದ ಮ್ಯಾಕ್ಸ್ ಮುಲ್ಲರ್ ಕೂಡ ಸಂಸ್ಕೃತವನ್ನು ಕಲಿತ. ತನ್ನ ‘ವಾಟ್ ಇಂಡಿಯಾ ಕ್ಯಾನ್ ಟೀಚ್ ಅಸ್’ ಎಂಬ ಪುಸ್ತಕದಲ್ಲಿ ಪುನರ್ಜನ್ಮವೊಂದಿದ್ದರೆ ತಾನು ಭಾರತದಲ್ಲಿಯೇ ಹುಟ್ಟಬೇಕು ಎಂದು ಬರೆದ. ಬಂಗಾಳದ ನ್ಯಾಯಾಧೀಶನಾಗಿದ್ದ ವಿಲಿಯಂ ಜೋನ್ಸ್ ಸಂಸ್ಕೃತ ಕಲಿತು, ಕಾಳಿದಾಸನ ಅಭಿಜ್ಞಾನಶಾಕುಂತಲಂ ನಾಟಕವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾನೆ. 1784ರಲ್ಲಿ ಭಾರತೀಯ ವಿದ್ಯೆಗಳ ಸಂಶೋಧನೆಗಾಗಿ ಕಲ್ಕತ್ತಾದಲ್ಲಿ ದಿ ಏಷ್ಯಾಟಿಕ್ ಸೊಸೈಟಿ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾನೆ. ಆದರೆ ಅದೇ ಬಂಗಾಲದಲ್ಲಿ ವಿಲಿಯಮ್ ಬೆಂಟಿಂಕ್ ಅದೆಷ್ಟೋ ಸಂಸ್ಕೃತ ಪಾಠಶಾಲೆಗಳನ್ನು ಮುಚ್ಚಿದ. ಇದರಲ್ಲಿ ಮೆಕಾಲೆಯ ಕೊಡುಗೆಯನ್ನೂ ಕಡೆಗಣಿಸುವಂತಿಲ್ಲ. ಆದರೂ ಸಂಸ್ಕೃತ ಇಂದಿಗೂ ಸಮೃದ್ಧವಾಗಿ ಬೆಳೆದು ನಿಂತಿದೆ. ಇದಕ್ಕೆ ರಾಜ ಮಹಾರಾಜರ, ಮಠಗಳ ಕೊಡುಗೆ ಅಪಾರ.
ಸಮಕಾಲೀನ ಸಂಸ್ಕೃತ ಶಿಕ್ಷಣ: ಆಧುನಿಕ ಶಿಕ್ಷಣದ ಅಬ್ಬರದ ನಡುವೆಯೂ ಸಂಸ್ಕೃತದ ಅಧ್ಯಯನ ಮುಂದುವರಿದಿದ್ದರೆ ಅದಕ್ಕೆ ಸಂಸ್ಕೃತದ ಸತ್ವವೇ ಕಾರಣ. ಇಂದು ದೇಶದಲ್ಲಿ 17 ಪ್ರಮುಖ ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಕೇಂದ್ರ ಸರ್ಕಾರ 3 ಸಂಸ್ಕೃತ ವಿವಿಗಳನ್ನು ಕೇಂದ್ರೀಯ ಸಂಸ್ಕೃತ ವಿವಿಗಳಾಗಿ ಮೇಲ್ದರ್ಜೆಗೇರಿಸಿದೆ. ಇದರಲ್ಲಿ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನವು 12 ರಾಜ್ಯಗಳಲ್ಲಿ ಶಾಖೆ ಹೊಂದಿದ್ದು, ಕರ್ನಾಟಕದ ಶೃಂಗೇರಿಯಲ್ಲಿ ರಾಜೀವಗಾಂಧಿ ಕ್ಯಾಂಪಸ್ನಲ್ಲಿ ಸಂಸ್ಕೃತದಲ್ಲಿ ಪದವಿಪೂರ್ವ ಹಂತದಿಂದ ಪಿ.ಎಚ್ಡಿ. ವರೆಗಿನ ಅಧ್ಯಯನಕ್ಕೆ ಅವಕಾಶವಿದೆ. ರಾಷ್ಟ್ರಾದ್ಯಂತ ಅನೇಕ ಸರ್ಕಾರಿ, ಖಾಸಗಿ ಸಂಸ್ಕೃತ ಕಾಲೇಜುಗಳಿವೆ. ರಾಜ್ಯದಲ್ಲಿಯೂ 2010ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವನ್ನು ಸರ್ಕಾರ ಸ್ಥಾಪಿಸಿದೆ. ಇದರ ಅಧೀನದಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಕಾರ್ಯ ನಿರ್ವಹಿಸುತ್ತಿದ್ದು, ಇದರ ಅಡಿಯಲ್ಲಿ 281 ಅನುದಾನಿತ ಮತ್ತು 350 ಅನುದಾನರಹಿತ ಸಂಸ್ಕೃತ ಪಾಠಶಾಲೆಗಳಿವೆ. ಇಲ್ಲಿ 23 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದ ಪದವಿಪೂರ್ವ ಹಂತದವರೆಗಿನ ಶಿಕ್ಷಣವನ್ನು ಪಡೆಯತ್ತಾರೆ. ರಾಜ್ಯದಲ್ಲಿ ಸುಮಾರು 32 ಸಂಸ್ಕೃತ ಕಾಲೇಜುಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿದ್ದು, ಇವುಗಳಲ್ಲಿ 3 ಸರ್ಕಾರಿ, 9 ಅನುದಾನಿತ ಕಾಲೇಜುಗಳು ಇವೆ. ಇಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಬಹುದು. ಇವುಗಳಲ್ಲಿ ಮೈಸೂರು ಮಹಾರಾಜರಿಂದ ಸ್ಥಾಪಿತವಾದ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜು ಮತ್ತು ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಕಾಲೇಜು ಇವುಗಳನ್ನು ವಿಶ್ವವಿದ್ಯಾಲಯದ ಘಟಕವಾಗಿ ವರ್ಗಾಯಿಸಲಾಗಿತ್ತು. ವಿಶ್ವವಿದ್ಯಾಲಯದಲ್ಲಿಯೂ ಐದು ವಿಭಾಗಗಳಲ್ಲಿ ನೂರಾರು ವಿದ್ಯಾರ್ಥಿಗಳು ಸಂಸ್ಕೃತದ ಸುಧೆಯನ್ನು ಹೀರುತ್ತಿದ್ದಾರೆ. ಸಂಸ್ಕೃತ ಸಂಜೆ ಕಾಲೇಜಿನಲ್ಲಿ ಸಂಸ್ಕೃತ ಬಿ.ಎ. ಅಧ್ಯಯನಕ್ಕೆ ಅವಕಾಶವಿದೆ. 11 ಮಾನ್ಯತೆ ಪಡೆದ ಸಂಸ್ಕೃತ ಸಂಶೋಧನಾ ಕೇಂದ್ರಗಳಿವೆ. ಅಲ್ಲದೇ ಇಂದಿಗೂ ಅನೇಕ ಕಡೆ ಗುರುಕುಲ ಪದ್ಧತಿಯಲ್ಲಿ ನೂರಾರು ಜನ ಸಂಸ್ಕೃತವನ್ನು ಓದುತ್ತಿದ್ದಾರೆ. ಹೀಗೆ ಸರ್ಕಾರ, ಸಂಘ-ಸಂಸ್ಥೆಗಳು, ಮಠಮಾನ್ಯಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಸಂಸ್ಕೃತದ ಅಧ್ಯಯನ ಮುಂದುವರಿಯುತ್ತಿರುವುದು ಸಂತಸದ ವಿಷಯ.
ಅಧ್ಯಯನದ ಪ್ರಯೋಜನ ಉದ್ಯೋಗ. ಉದ್ಯೋಗಾವಕಾಶದ ಭರವಸೆ ಇದ್ದರೆ ಮಾತ್ರ ಸಂಸ್ಕೃತ ಕಲಿಯಲು ಜನರು ಆಸಕ್ತಿ ತೋರುತ್ತಾರೆ. ಓದು ಕೇವಲ ಜ್ಞಾನಕ್ಕಾಗಿಯಲ್ಲ, ಜೀವನವೂ ಸಾಗಬೇಕು. ಸಂಸ್ಕೃತಜ್ಞರಿಗೆ ಉದ್ಯೋಗ ಅವಕಾಶ ಕಡಿಮೆ. ಆದ್ದರಿಂದ ಅವರು ಸಂಸ್ಕೃತ ಓದಿದರೂ ಕಚೇರಿಯ ಮುಖ್ಯಸ್ಥನಾಗಿಯೋ, ಕಾರ್ಯದರ್ಶಿಯಾಗಿಯೋ ಕಾರ್ಯ ನಿರ್ವಹಿಸಲು ಸಿದ್ಧರಾಗಬೇಕು. ಇದಕ್ಕೆ ಬೇಕಾದ ಕೌಶಲತರಬೇತಿಯನ್ನು ಅವರಿಗೆ ನೀಡಬೇಕು. ರಾಜ್ಯ ಸರ್ಕಾರವು ವಿದ್ಯಾರ್ಥಿವೇತನವನ್ನು ನೀಡಿ ಆಕರ್ಷಿಸಬೇಕು. ಸಂಸ್ಕೃತ ಪಾಠಶಾಲೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಯೋಗಿತಾ (ಸ್ಪರ್ಧೆ), ರೂಪಕೋತ್ಸವ ಮೊದಲಾದ ಕಲಿಕೆಗೆ ಪೂರಕ ಚಟುವಟಿಕೆಗಳನ್ನು ಆಯೋಜಿಸಬೇಕು. ಜನರಲ್ಲಿ ಸಂಸ್ಕೃತದ ಅಧ್ಯಯನದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ರೀತಿಯಲ್ಲಿ ಸರ್ಕಾರದಿಂದ ಹೆಚ್ಚಿನ ಪೋ›ತ್ಸಾಹ ಸಿಗಬೇಕು.
ಕನ್ನಡ ಪೂರಕ ಭಾಷೆ: ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಪೂರಕ ಭಾಷೆಗಳು. ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ಪುಷ್ಟೀಕರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ. ಸಂಸ್ಕೃತ ಮತ್ತು ಕನ್ನಡ ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿವೆ.