ಮಹಾರಾಷ್ಟ್ರದ ಬರಡೋಣದಲ್ಲಿ 1845 ನವೆಂಬರ್ 4ರಂದು ಬಲವಂತ ರಾವ್ ಫಡಕೆ ಮತ್ತು ಸರಸ್ವತಿ ಬಾಯಿ ದಂಪತಿಯ ಮಗನಾಗಿ ಜನಿಸಿದ ವಾಸುದೇವ ಫಡಕೆ 1857ನೇ ಇಸವಿಯ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಣೆ ಪಡೆದಿದ್ದ. ವಿದ್ಯಾಭ್ಯಾಸದ ನಂತರ ಸರ್ಕಾರಿ ನೌಕರಿ ಸೇರಿ ವಿವಾಹವಾದ ಫಡಕೆ ತನ್ನ ತಾಯಿ ದಿವಂಗತಳಾದಾಗ ಅಂತಿಮ ಕಾರ್ಯಕ್ಕೆ ರಜೆ ಕೊಡದ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಲು ನೌಕರಿ ಮತ್ತು ಸಂಸಾರವನ್ನೇ ತೊರೆದ. ವಿದೇಶೀ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡುವ ಜನಾಂದೋಲನ ಪ್ರಾರಂಭಿಸಿದ ಫಡಕೆ ವಿದ್ಯಾಭ್ಯಾಸಕ್ಕೆ ಜನರಿಗೆ ಅನುಕೂಲವಾಗಲೆಂದು ‘ಪುಣಾ ನೇಟಿವ್ ಇನ್ಸ್ಟಿಟ್ಯೂಷನ್’ ಎಂಬ ವಿದ್ಯಾಸಂಸ್ಥೆ ಪ್ರಾರಂಭಿಸಿದ. ಇದೇ ಇಂದಿನ ‘ಮಹಾರಾಷ್ಟ್ರ ಎಜ್ಯುಕೇಶನ್ ಸೊಸೈಟಿ’.
ಸ್ವತಃ ಫಡಕೆ ಕೈಯಲ್ಲಿ ತಮಟೆ ಹಿಡಿದುಕೊಂಡು ಪುಣೆಯ ರಸ್ತೆಗಳಲ್ಲಿ ಡಂಗುರ ಸಾರುತ್ತ ‘ಈ ದಿನ ಸಂಜೆ ನನ್ನ ಭಾಷಣವಿದೆ, ಊರಿನ ಮೈದಾನಕ್ಕೆ ಎಲ್ಲರೂ ಬನ್ನಿ. ಇಂಗ್ಲಿಷರನ್ನೋಡಿಸಿ ಸ್ವರಾಜ್ಯ ತರಲೇ ಬೇಕು. ಅದು ಹೇಗೆ ಎಂಬುದನ್ನು ನಾನು ತಿಳಿಸಲಿದ್ದೇನೆ’ ಎಂದು ತಿಳಿಯಪಡಿಸುತ್ತಿದ್ದ. ಜನರು ಈತನ ಸಾಹಸ ಕಂಡು ಬೆರಗಾದರು. ಬಳಿಕ, ‘ರಾಮೋಬಿ’ ಗುಡ್ಡಗಾಡು ಜನರನ್ನು ಸಂಘಟಿಸಿ ಅವರಿಗೆ ಯುದ್ಧಶಿಕ್ಷಣ ನೀಡಿ ಯುದ್ಧಕ್ಕೆ ಆಯುಧಗಳನ್ನೂ ನೀಡಿ 1879ರ ಹೊತ್ತಿಗೆ ಸುಸಜ್ಜಿತವಾದ ಸೈನ್ಯ ಕಟ್ಟಿದ.
1879ನೇ ಇಸವಿಯ ಶಿವರಾತ್ರಿಯಂದು ಮೊದಲನೇ ಹೋರಾಟ ಪ್ರಾರಂಭವಾಯಿತು. ಫಡಕೆಯನ್ನು ಬಂಧಿಸಲು ಮೇಜರ್ ಡೇನಿಯನ್ ಎಂಬ ವಿಶೇಷ ಅಧಿಕಾರಿಯನ್ನು ಸುಸಜ್ಜಿತ ಸೈನ್ಯದೊಂದಿಗೆ ನೇಮಿಸಲಾಯಿತು. 1879ರಲ್ಲಿ ಫಡಕೆಯನ್ನು ಹಿಡಿದುಕೊಟ್ಟವರಿಗೆ 4000 ರೂ. ಬಹುಮಾನದ ಮೊತ್ತವನ್ನು (2020ನೇ ಇಸವಿಯ 3 ಕೋಟಿಗೆ ಸಮ) ಸರ್ಕಾರ ಪ್ರಕಟಿಸಿತು. ಅದಕ್ಕೆ ಪ್ರತಿಯಾಗಿ ಫಡಕೆ ಬ್ರಿಟಿಷ್ ಗವರ್ನರ್ ಮತ್ತು ಕಲೆಕ್ಟರರ ತಲೆ ತಂದು ಕೊಟ್ಟವರಿಗೆ ಅದಕ್ಕೂ ಹೆಚ್ಚಿನ ಮೊತ್ತದ ಬಹುಮಾನ ಪ್ರಕಟಿಸಿದ.
1879 ಮೇ 13ರಂದು ಮಧ್ಯರಾತ್ರಿ ಪುಣೆಯಲ್ಲಿನ ಬ್ರಿಟಿಷರ ಎರಡು ಕಚೇರಿಗಳನ್ನು ಧ್ವಂಸ ಮಾಡಲಾಯಿತು. ಇದರ ನಂತರ ಫಡಕೆ ಹೆಸರು ಬ್ರಿಟಿಷ್ ಸಾಮ್ರಾಜ್ಯದಲ್ಲೆಲ್ಲ ಹರಡಿತು. ಬ್ರಿಟಿಷ್ ಪಾರ್ಲಿಮೆಂಟಿನಲ್ಲೂ ಫಡಕೆ ಚಟುವಟಿಕೆಗಳ ಬಗ್ಗೆ ಚರ್ಚೆಯಾಯಿತು. ಮುಂದೆ ಡೇನಿಯಲ್ ನೇತೃತ್ವದಲ್ಲಿ ನಡೆದ ಯುದ್ಧದಲ್ಲಿ ಫಡಕೆ ಬಲಗೈಯಂತಿದ್ದ ದೌಲತ್ ರಾವ್ ನಾಯಕ್ ಎನ್ನುವ ರಾಮೋಜಿ ಮುಖಂಡ ವೀರಮರಣವಪ್ಪಿದ.
ಬಹುಮಾನದ ಆಸೆಯಿಂದ ಕೆಲ ದೇಶದ್ರೋಹಿಗಳು ಫಡಕೆಯನ್ನು ಗುರುತಿಸಿ, ಮಾಹಿತಿಯನ್ನು ಸರ್ಕಾರಕ್ಕೆ ನೀಡಿದರು. ಜ್ವರದಿಂದ ಬಳಲಿ ದೇವಸ್ಥಾನದಲ್ಲಿ ಮಲಗಿದ್ದ ಫಡಕೆಯನ್ನು ಮೋಸದಿಂದ ಬ್ರಿಟಿಷ್ ಅಧಿಕಾರಿಗಳು ಬಂಧಿಸಿದಾಗ, ‘ಮಲಗಿದ್ದವರನ್ನು ಬಂಧಿಸುವುದು ಹೇಡಿತನ’ ಎಂದು ಹೇಳಿ ತನ್ನೊಡನೆ ದ್ವಂದ್ವಯುದ್ಧ ಮಾಡಿ ಗೆಲ್ಲಲು ವಾಸುದೇವ ಸವಾಲು ಹಾಕಿದರೂ ಅದಕ್ಕೊಪ್ಪದೆ ಫಡಕೆಯನ್ನು ಬಂಧಿಸಲಾಯಿತು. ಪುಣೆಗೆ ಕರೆತಂದು ಕಾರಾಗೃಹದಲ್ಲಿಟ್ಟು ಅನೇಕ ಆರೋಪಗಳನ್ನು ಹೊರಿಸಿ 1879 ಅಕ್ಟೋಬರ್ 22ರಂದು ವಿಚಾರಣೆ ಆರಂಭಿಸಿದರು. ಪ್ರಸಿದ್ಧ ವಕೀಲ ಗಣೇಶ ವಾಸುದೇವ ಜೋಶಿ ಫಡಕೆ ಪರವಾಗಿ ವಕಾಲತ್ತು ವಹಿಸಿದರು. ಫಡಕೆ ವಿರುದ್ಧ ಭಾರತೀಯರೇ ಹಲವರು ಸಾಕ್ಷ್ಯ ನುಡಿದರು. ಕೊನೆಗೆ ದೂರದ ಲಂಡನ್ನಿನಲ್ಲಿ 25 ವರ್ಷದ ಜೀವಾವಧಿ ಶಿಕ್ಷೆಯಾಯಿತು.
ಏಡನ್ ಮತ್ತು ಅಲ್ಲಿನ ಜೈಲು ಅದೊಂದು ಭೂಲೋಕದ ಪ್ರತ್ಯಕ್ಷ ನರಕ. ಅಂಡಮಾನಿನ ಸೆಲ್ಯುಲರ್ ಜೈಲಿನಂತೆ. ಚಿತ್ರಹಿಂಸೆಯ ಕಠಿಣ ಕಾರಾಗೃಹವಾಸ. ರಾಜದ್ರೋಹದ ಆರೋಪಕ್ಕೆ ಗುರಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸಲು ಲಂಡನ್ನಿನ ಕಾರಾಗೃಹಕ್ಕೆ ಬಂದ ಮೊದಲನೇ ಕೈದಿ ಫಡಕೆ. 8 ತಿಂಗಳ ಅಸಹನೀಯವಾದ ಸೆರೆಮನೆ ವಾಸದ ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಮಾಡಿ 1880 ಅಕ್ಟೋಬರ್ 12ರಂದು ಯಶಸ್ವಿಯಾದ ಫಡಕೆಯನ್ನು ಅರಬ್ ಜನ ಹಣದಾಸೆಗೆ ಬೆನ್ನತ್ತಿ ಹಿಡಿದು ಬ್ರಿಟಿಷರಿಗೆ ಒಪ್ಪಿಸಿದರು. ಜೈಲುವಾಸ ಇನ್ನೂ ಹೆಚ್ಚು ಅಸಹನೀಯವಾಯಿತು. ಇನ್ನೊಮ್ಮೆ ತಪ್ಪಿಸಿಕೊಳ್ಳದಿರಲೆಂದು ಕೈಕಾಲಿಗೆ ದಪ್ಪವಾದ ಬೇಡಿ ಹಾಕಿ ಕೂಡಿಹಾಕಿದರು. 3 ವರ್ಷದ ಜೈಲುಶಿಕ್ಷೆಯಿಂದ ರಕ್ತಕ್ಷಯಕ್ಕೆ ಗುರಿಯಾದ ಫಡಕೆ 1883 ಫೆ.17ರಂದು ಜೈಲಿನಲ್ಲಿಯೇ ಕೊನೆಯುಸಿರಳೆದ.
(ಲೇಖಕರು ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ಅಧ್ಯಕ್ಷರು)