ಅಂಕಣ

ಪಬ್​ಜಿ ಪಿಶಾಚಿ; ಹೋದೆಯಾ ಅಂದ್ರೆ ಬಂತು ಗವಾಕ್ಷಿಯಿಂದ!

Webdesk - Ravikanth

ಆನ್​ಲೈನ್ ಗೇಮ್ ಮಾಯಾಜಾಲದ ಒಳಹೊಕ್ಕರೆ ಹೊರಬರುವುದು ಸುಲಭವಲ್ಲ. ಸ್ವಲ್ಪ ಯಾಮಾರಿದರೂ ಬದುಕೇ ನಾಶ. ಇದಕ್ಕೆ ಇತ್ತೀಚಿನ ಉದಾಹರಣೆ ದಕ್ಷಿಣಕನ್ನಡ ಜಿಲ್ಲೆ ಉಳ್ಳಾಲದ 12 ವರ್ಷದ ಬಾಲಕನ ಸಾವು. ಇದು ಪ್ರತಿ ಕುಟುಂಬಕ್ಕೂ ಎಚ್ಚರಿಕೆ ಗಂಟೆ. ಭಾರತದಲ್ಲಿ ಪಬ್​ಜಿ ನಿಷೇಧವಾಗಿದ್ದರೂ ಬಳಕೆಯಲ್ಲಿದೆ. ಇದು ಹೇಗೆ ಸಾಧ್ಯ?

| ರಮೇಶ್​ಕುಮಾರ್ ಎಡಮೋಳೆ

‘‘ನೋಡು ನೋಡು, ಅಲ್ಲಿ ಬಂದ.. ಬಿಡ್ಬೇಡ ಅವನನ್ನು, ಹೊಡೆದ್ಹಾಕು.. ಗುಂಡಿಕ್ಕಿ ಕೊಲ್ಲು.. ಹಿಂದೆ ಒಬ್ಬ ಬರ್ತಿದ್ದಾನೆ.. ಕತ್ತಿ ತಗೋ, ಕೊಚ್ಚಿ ಹಾಕು..’’ ಇದು ಪಬ್​ಜಿ ಎಂಬ ಆನ್​ಲೈನ್ ಗೇಮ್ ಆಡುವ ಮಕ್ಕಳ ಕಿವಿಗೆ ಪದೇಪದೆ ಅಪ್ಪಳಿಸುವ ‘ಆದೇಶ’. ಈ ಗೇಮ್ ಮುಖ್ಯ ಥೀಮೇ ಹಿಂಸೆ. ‘ಪಬ್​ಜಿ’ಯ ವಿಸõತರೂಪ - ಪ್ಲೇಯರ್ ಅನ್​ನೋನ್ಸ್ ಬ್ಯಾಟಲ್​ಗ್ರೌಂಡ್ಸ್. ಹೆಸರೇ ಹೇಳುವಂತೆ ಅದು ಅಪರಿಚಿತ ಆಟಗಾರರ ಯುದ್ಧಭೂಮಿ. ಏ. 4ರಂದು ಉಲ್ಲಾಳದ ತಲಪಾಡಿಯಲ್ಲಿ ಇನ್ನೂ ಲೋಕಜ್ಞಾನಕ್ಕೆ ಕಣ್ತೆರೆಯದ ಬಾಲಕನೊಬ್ಬನ ಬದುಕು ಪಬ್​ಜಿಗೆ ಬಲಿಯಾಗಿದೆ. 12 ವರ್ಷದ ಆಕೀಫ್ ಎಂಬ ಬಾಲಕನಿಗೆ ಪಬ್​ಜಿ ಆಡುವ ಚಟ. ಈತನಿಗೆ 17 ವರ್ಷದ ಮತ್ತೊಬ್ಬ ಹುಡುಗ ಎದುರಾಳಿ. ಪ್ರತಿ ಬಾರಿಯೂ ಆಕೀಫ್ ಗೆಲ್ಲುತ್ತಿದ್ದ. ಇದನ್ನು ಸಹಿಸದ ಆತ ಸೋಲನ್ನೇ ಸೇಡಾಗಿಸಿ, ಆಕೀಫ್​ನನ್ನು ಬರ್ಬರವಾಗಿ ಕೊಂದು ಜೈಲು ಸೇರಿದ್ದಾನೆ. ಇದಾದ ಬಳಿಕ ರಾಜ್ಯದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಉಪ್ಪಿನಂಗಡಿಯ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಪಬ್​ಜಿ ಆಟದ ಸವಾಲಿನಲ್ಲಿ ತನ್ನ ತಲೆಕೂದಲನ್ನು ವಿಕಾರವಾಗಿ ಕತ್ತರಿಸಿಕೊಂಡು ಸುದ್ದಿಯಾಗಿದ್ದಾನೆ. ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಯುವಕನೊಬ್ಬ ಪಬ್​ಜಿ ಆಡಲು ಅವಕಾಶ ಕೊಡದ ತಂದೆಯನ್ನೇ ಕೊಂದಿದ್ದಾನೆ. ಸಂಬಂಧಿಕರ ಮೇಲೆ ದಾಳಿ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ, ಕೆಲ ಮಕ್ಕಳು ಪಬ್​ಜಿಯ ಹೊಸ ಹೊಸ ಗೇಮ್ ಫೀಚರ್ ಪಡೆಯಲು ಪಾಲಕರ ಖಾತೆಯಿಂದ ಲಕ್ಷ ಲಕ್ಷ ಹಣ ಕಳೆದಿದ್ದಾರೆ. ಕ್ರೌರ್ಯವನ್ನೇ ಕೇಂದ್ರೀಕರಿಸಿ ಸೃಷ್ಟಿಸಿರುವ ಪಬ್​ಜಿಯಂತಹ ಆನ್​ಲೈನ್ ಗೇಮ್ಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಜತೆಯಲ್ಲಿ ಆಡಿಬೆಳೆದವರನ್ನೇ ಕೊಲೆ ಮಾಡುವಂತೆ ಮನಸ್ಸನ್ನು ವಿಕಾರಗೊಳಿಸುವ ಪಬ್​ಜಿ ವಿಶ್ವದ ಅಪಾಯಕಾರಿ ಗೇಮ್

ಇದು ಡೇಂಜರ್ ಝೆೊನ್!: ಎಳೆಯ ಮನಸ್ಸು ತುಂಬಾ ಸೂಕ್ಷ್ಮ ಕುತೂಹಲ ಹೆಚ್ಚಿರುವ ಮಕ್ಕಳು ಬಹುಬೇಗ ಪಬ್​ಜಿಗೆ ದಾಸರಾಗಿಬಿಡುತ್ತಾರೆ. ಇದು ಖುಷಿಯ ಆಟವಲ್ಲ, ಹಿಂಸೆಯ ಆಟ. ಇದಕ್ಕೆ ಅಡಿಕ್ಟ್ ಆಗುವವರು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಳೆದುಕೊಳ್ಳುತ್ತಾರೆ. ಕೂತಲ್ಲೇ ಕೂತು ತಾಸುಗಟ್ಟಲೇ ಆಡುವುದರಿಂದ ದೈಹಿಕ ಕ್ಷಮತೆ ಕುಗ್ಗುತ್ತದೆ. ದೃಷ್ಟಿ ಸಾಮರ್ಥ್ಯ ಕುಂದುತ್ತದೆ. ಸೋಮಾರಿತನ ಆವರಿಸಿಕೊಳ್ಳುತ್ತದೆ. ನೆಗೆಟಿವ್ ಆಲೋಚನೆಗಳೇ ಸುಳಿಯುತ್ತವೆ. ಇತರರೊಂದಿಗೆ ಮಾತನಾಡುವುದಿಲ್ಲ. ಸಾಮಾಜಿಕ ಸಂಪರ್ಕದಿಂದ ದೂರವಾಗಿ ಒತ್ತಡಕ್ಕೆ ಸಿಲುಕಿ ನರಳುತ್ತಾರೆ. ಪಬ್​ಜಿ ಆಡುವ ಮಕ್ಕಳು ಓದಿನಲ್ಲಿ ಹಿಂದುಳಿಯುವ ಜತೆಗೆ ತನ್ನ ಕೈಯಲ್ಲಿ ಏನೂ ಆಗುವುದಿಲ್ಲ ಎಂಬ ಭಾವನೆ ಬೆಳೆಸಿಕೊಂಡು ಸುಖಾಸುಮ್ಮನೆ ಮನೆಯವರ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ಮಾನಸಿಕ ತೊಳಲಾಟ ಹೆಚ್ಚಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಾರೆ. ನಿದ್ರಾಹೀನತೆ ಮತ್ತು ಖಿನ್ನತೆಗೆ ದೂಡುವ ಪಬ್​ಜಿ, ಸಾವಿನ ಮನೆಯ ಕದ ತಟ್ಟುವಂತೆ ಪ್ರೇರೇಪಿಸುತ್ತದೆ!

ಬ್ಯಾನ್ ಆಗಿದ್ರೂ ಸಿಗುತ್ತೆ: ಪಬ್​ಜಿಯ ಮೂಲ ದಕ್ಷಿಣ ಕೊರಿಯಾ. ಇದಕ್ಕೆ ಹಣ ಹೂಡಿರುವುದು ಚೀನಾ. ಪಬ್​ಜಿಯನ್ನು ಹಿಂಸೆಯ ಪ್ರಚೋದಕ  ಎಂದು ಪರಿಗಣಿಸಿ ಅನೇಕ ರಾಷ್ಟ್ರಗಳು ಬ್ಯಾನ್ ಮಾಡಿವೆ. ದೇಶದ ಭದ್ರತಾ ದೃಷ್ಟಿಯಿಂದ 2020ರ ಸೆ. 2ರಂದೇ ಭಾರತದಲ್ಲಿ ಕೇಂದ್ರ ಸರ್ಕಾರ ಪಬ್​ಜಿಯನ್ನು ನಿಷೇಧಿಸಿದೆ. ಅಂದಿನಿಂದ ಮರುಬಿಡುಗಡೆ ಬಗ್ಗೆ ಸರ್ಕಾರವಾಗಲಿ, ಪಬ್​ಜಿ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ. ಈಗಲೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೆಕ್ಷನ್ 69ಎ ಅಡಿ ಪಬ್​ಜಿ ನಿಷೇಧವಾಗಿದೆ. ಆದಾಗ್ಯೂ ಕೆಲವು ತಾಂತ್ರಿಕ ದೋಷಗಳಿಂದಾಗಿ ಭಾರತದಲ್ಲಿ ಪಬ್​ಜಿ ಚಾಲ್ತಿಯಲ್ಲಿದೆ! ಪಬ್​ಜಿ ನಿಷೇಧಿತ ಸ್ಥಳವನ್ನೇ ಬದಲಾಯಿಸುವ ವರ್ಚುವಲ್ ಪ್ರೖೆವೇಟ್ ನೆಟ್​ವರ್ಕ್ (ವಿಪಿಎನ್) ಮೂಲಕ ಕೆಲವರು ಪಬ್​ಜಿ ಆಡುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತದೆ?: ಆನ್​ಲೈನ್ ಗೇಮಿಂಗ್ ಚಟವನ್ನು ಮಾನಸಿಕ ಅಸ್ವಸ್ಥತೆ ಎಂದು 2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ. ಇಂತಹ ಗೇಮ್ಳು ಅನೇಕರಲ್ಲಿ ಖಿನ್ನತೆ ಮೂಡಿಸುತ್ತವೆ. ಪಬ್​ಜಿ ವ್ಯಸನಿಗಳು ಕಡಿಮೆ ಸಾಮಾಜಿಕ ಸಂವಹನದಿಂದಾಗಿ ಒತ್ತಡಕ್ಕೆ ಒಳಗಾಗಬಹುದು ಇಲ್ಲವೇ ಸಾರ್ವಜನಿಕವಾಗಿ ಆತಂಕದ ಸಮಸ್ಯೆಗಳನ್ನ ಎದುರಿಸ ಬಹುದು ಎಂದು ಹೇಳಿದೆ.

ಪಬ್​ಜಿ ವ್ಯಸನಿಗಳಲ್ಲಿ ಮೊದಲು ಕೋಪ, ಉದ್ರೇಕ ಹೆಚ್ಚಾಗುತ್ತದೆ. ಕಲಿಕೆಯಲ್ಲಿನ ಏಕಾಗ್ರತೆ ಕಡಿಮೆಯಾಗುತ್ತದೆ. ಪಬ್​ಜಿಗೆ ದಾಸನಾಗಿ ಹಿಂಸೆಗೆ ತಿರುಗಿದವರಲ್ಲಿ ಮೂರು ರೀತಿಯ ವರ್ತನೆ ಇರುತ್ತದೆ. ಸಿಟ್ಟು ಬಂದ ವ್ಯಕ್ತಿಯು ಎದುರಿಗಿದ್ದ ಶತ್ರುವಿನ ಬಗ್ಗೆ ತಿಳಿಯದೆ ಆತ್ಮಹತ್ಯೆಗೆ ಶರಣಾಗಬಹುದು ಅಥವಾ ಎದುರಾಳಿ ಯಾರೆಂದು ಗೊತ್ತಿದ್ದರೆ ನೇರವಾಗಿ ದಾಳಿ ಮಾಡಬಹುದು. ಯಾವುದೂ ಸಾಧ್ಯವಾಗದಿದ್ದಾಗ ಮಾದಕ ವಸ್ತು ವ್ಯಸನಿಯಾಗಬಹುದು. ಹೀಗಾಗಿ ಪಾಲಕರು ತಮ್ಮ ಮಕ್ಕಳ ಮೇಲೆ ನಿತ್ಯ ನಿಗಾ ವಹಿಸಬೇಕು. ಜೋರು ಮಾಡದೆ ಪ್ರೀತಿಯಿಂದ ನಾಜೂಕಾಗಿ ಮಾತನಾಡಿ ಸರಿ-ತಪ್ಪು ತಿಳಿಸುವ ಮೂಲಕ ಈ ವ್ಯಸನದಿಂದ ಹೊರತರಬಹುದು.| ಡಾ. ಅ. ಶ್ರೀಧರ್ ಮನೋವಿಜ್ಞಾನಿ