ರಾಷ್ಟ್ರಪುರುಷ ನೇತಾಜಿ ಸುಭಾಷ್ಚಂದ್ರ ಬೋಸರ ಜೀವನ ಎಂದೆಂದಿಗೂ ಪ್ರೇರಣೆ ನೀಡುವಂಥದ್ದು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ನೇತಾಜಿ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ರಾಷ್ಟ್ರನಿರ್ವಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬುದು ಸುಭಾಷರ ದಿಟ್ಟನಿಲುವಾಗಿತ್ತು. ಸುಮಾರು ಒಂದೂವರೆ ದಶಕಗಳ ಕಾಲ ಗಾಂಧೀಜಿ ವಿಚಾರಗಳ ಅನುಯಾಯಿಯಾಗಿದ್ದ ಸುಭಾಷರಿಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ತಾಕತ್ತಿಲ್ಲದ ಕಾಂಗ್ರೆಸ್ನ ದುರ್ಬಲ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನಶೂನ್ಯ ವರ್ತನೆಗಳು ಬೇಸರ ಮೂಡಿಸಿದವು.
ತಾವು ಕಷ್ಟಪಟ್ಟು ಗಳಿಸಿದ್ದ ಐಸಿಎಸ್ ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸರ ರಾಜಕೀಯ ಚಿಂತನೆಯ ವೈಶಾಲ್ಯ ಅಗಾಧವಾದದ್ದು. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದರು. ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸರ ನಿಲುವುಗಳೆಲ್ಲ ಕಾಂಗ್ರೆಸ್ನ ಮಂದಗಾಮಿ ಗುಂಪಿಗೆ ಅಸಹನೀಯವಾಗಿತ್ತು. ನೇತಾಜಿ ಹಾಗೂ ಗಾಂಧೀಜಿ ಇಬ್ಬರಿಗೂ ಇದ್ದ ಸಮಾನ ಗುರಿ, ಸ್ವಾತಂತ್ರ್ಯಪ್ರಾಪ್ತಿ. ಇಬ್ಬರಿಗೂ ಪರಸ್ಪರರನ್ನು ಕಂಡರೆ ಗೌರವ, ಆತ್ಮೀಯತೆ. ಆದರೆ ಸ್ವಾತಂತ್ರ್ಯಪ್ರಾಪ್ತಿಯ ಮಾರ್ಗದ ವಿಭಿನ್ನತೆಯ ಕಾರಣಕ್ಕೆ ಅನೇಕ ಬಾರಿ ಆಂತರಿಕ, ಕೆಲವು ಬಾರಿ ಬಹಿರಂಗವಾಗಿಯೇ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಸುಭಾಷರು ಸ್ವಾತಂತ್ರ್ಯಪ್ರಾಪ್ತಿಗೆ ಸಾಗುತ್ತಿರುವ ಮಾರ್ಗದಲ್ಲಿ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ ಗಾಂಧೀಜಿಯವರದ್ದು. ಆದರೆ, ಭಾರತ ವಿಭಜನೆ ಕುರಿತು ಮುಸ್ಲಿಂಲೀಗ್-ಬ್ರಿಟಿಷರ ತಂತ್ರಗಾರಿಕೆಯ ಕುರಿತು 1938ರಲ್ಲಿ ಮೊದಲಬಾರಿಗೆ ಸುಭಾಷರು ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಇದು ಕೇಳಿಸಲಿಲ್ಲ. ಪರಿಣಾಮವಾಗಿ ಒಂಭತ್ತು ವರ್ಷದಲ್ಲೇ ದೇಶ ಹೋಳಾಯಿತು! ತಮ್ಮದು ಗಾಂಧಿಪ್ರಣೀತ ಮಂದಮಾರ್ಗಕ್ಕಿಂತ ತೀರಾ ಭಿನ್ನ ಎಂಬುದು ಬೋಸ್ರಿಗೆ ಕ್ರಮೇಣ ಗೊತ್ತಾಯಿತು. ಮುಂದೆ, ಹತ್ತಾರು ಚಳವಳಿಗೆ ನೇತೃತ್ವ ವಹಿಸಿದರು. 1933ರ ಫೆಬ್ರವರಿ 23ರಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ಯುರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ, ಇಂಗ್ಲೆಂಡ್, ಆಸ್ಟ್ರಿಯಾ, ಇಟಲಿ, ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ ನಡೆಸಿದರು. ವಿದೇಶದಲ್ಲೇ ಆಜಾದ್ ಹಿಂದ್ ಫೌಜ್ (ಐಎನ್ಎ) ಕಟ್ಟಿ, ಸಶಸ್ತ್ರ ಕ್ರಾಂತಿ ಮೂಲಕ ಸ್ವಾತಂತ್ರ್ಯ ಪಡೆಯಲು ಮುಂದಾದರು. 1943ರಲ್ಲೇ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ಕಿತ್ತುಕೊಂಡು ಸ್ವತಂತ್ರ ದೇಶ ಎಂದು ಘೊಷಿಸಿದವರು ಸುಭಾಷ್. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಕ್ರಮವಾಗಿ ‘ಸ್ವರಾಜ್’ ಹಾಗೂ ‘ಶಹೀದ್’ ಎಂದು ಹೆಸರಿಟ್ಟು ಅಲ್ಲಿ ದಾಸ್ಯಮುಕ್ತ ಆಡಳಿತ ಆರಂಭಿಸಿದರು.
ಸ್ವಾತಂತ್ರ್ಯ್ರಾಪ್ತಿಗಾಗಿ ಬ್ರಿಟಿಷ್ ವಿರೋಧಿ ಒಕ್ಕೂಟ ರಚಿಸಿ ಬೋಸ್ ಯುದ್ಧ ಮಾಡಲು ಕಾರ್ಯಪ್ರವೃತರಾದಾಗ ಆತಂಕಗೊಂಡ ಬ್ರಿಟಿಷ್ ಸರ್ಕಾರ ಬೋಸ್ರನ್ನು ಬಂಧಿಸಿ ಸೆರೆಮನೆಯಲ್ಲಿಟ್ಟಿತು. ಆದರೆ, ಪ್ರಬಲ ಜನಾಗ್ರಹದ ಪರಿಣಾಮವಾಗಿ ಅವರನ್ನು ಸೆರೆವಾಸದಿಂದ ಗೃಹಬಂಧನಕ್ಕೆ ಸ್ಥಳಾಂತರಿಸಲಾಯಿತು. 1941ರ ಜನವರಿ 16ರಂದು ಗೃಹಬಂಧನದಿಂದ ತಪ್ಪಿಸಿಕೊಂಡು ಪೇಶಾವರ, ಕಾಬೂಲಿನ ಮಾರ್ಗವಾಗಿ ಜರ್ಮನಿ ತಲುಪಿ ಅಲ್ಲಿಂದಲೇ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಿದರು. ಮಾತ್ರವಲ್ಲ, ಜರ್ಮನ್ನಿನ ಮುಖ್ಯಸ್ಥ ಹಿಟ್ಲರ್ನನ್ನು ಭೇಟಿ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಅವನ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. 3 ಸಾವಿರ ಸೈನಿಕರ ಬಲದ ಸೈನ್ಯವನ್ನು ಅಲ್ಲಿ ಪ್ರಾರಂಭಿಸಿದ ಸುಭಾಷರು ಇಟಲಿಯ ಬೆಂಬಲವನ್ನೂ ಪಡೆದುಕೊಂಡರು. ಮುಂದೆ ಜಪಾನಿನ ಪ್ರಧಾನಿ ಮತ್ತು ಮಹಾರಾಜನನ್ನು ಭೇಟಿಯಾಗಿ ಜಪಾನಿನ ಪೂರ್ಣಬೆಂಬಲದ ಆಶ್ವಾಸನೆ ಪಡೆದುಕೊಂಡರು. ಭಾರತ ರಾಷ್ಟ್ರೀಯ ಸೈನ್ಯ (ಐಎನ್ಎ)ದ ನೆಲೆಯನ್ನು ಜಪಾನಿನಿಂದ ಸಿಂಗಾಪುರಕ್ಕೆ ವರ್ಗಾಯಿಸಿ ಸೈನ್ಯವನ್ನು ಯುದ್ಧಕ್ಕಾಗಿ ಸಿದ್ಧಗೊಳಿಸಿದರು. ಮಹಿಳೆಯರ ಸೈನ್ಯದ ತುಕಡಿಯನ್ನು ಪ್ರಾರಂಭಿಸಿ ಅದಕ್ಕೆ ‘ಝಾನ್ಸಿ ರಾಣಿ ಲಕ್ಷ್ಮೀಬಾಯಿ’ ಎಂದು ಹೆಸರಿಟ್ಟರು. 1944ರ ಮಾರ್ಚ್ನಲ್ಲಿ ಐಎನ್ಎ ಸೈನಿಕರು ಬರ್ವ ದಾಟಿ ಭಾರತದ ಗಡಿ ಪ್ರವೇಶಿಸದರಲ್ಲದೆ ಬ್ರಿಟಿಷ್ ಸೈನಿಕರನ್ನು ಮಣಿಸಿ ಈಶಾನ್ಯ ಭಾರತದ ಹಲವು ಭೂಭಾಗಗಳನ್ನು ಗೆದ್ದು, ಆನಂದೋತ್ಸವ ಆಚರಿಸಿದರು. ಈ ನಡುವೆ ಎರಡನೇ ವಿಶ್ವಯುದ್ಧ ತಾರಕಕ್ಕೆ ಏರಿ ಅಮೆರಿಕ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ಸಿಡಿಸಿದ ಪರಿಣಾಮವಾಗಿ ಜಪಾನ್ ಶರಣಾಗತಿ ಘೊಷಿಸಿತು. ಬೇರೆ ರಾಷ್ಟ್ರಗಳ ಸರ್ಕಾರಗಳ ಬೆಂಬಲ ಪಡೆದು ಮತ್ತೆ ಹೋರಾಟ ಪ್ರಾರಂಭಿಸಬೇಕೆಂದು ನಿರ್ಧರಿಸಿದ ಬೋಸ್ 1945ರ ಆಗಸ್ಟ್ 17ರಂದು ತೈವಾನಿಗೆ ವಿಮಾನದಲ್ಲಿ ಪ್ರಯಾಣಿಸಿದರು. ಮುಂದೆ ಸುಭಾಷರಿಗೆ ಏನಾಯಿತು? ವಿಮಾನ ಅಪಘಾತ ಆದದ್ದು ನಿಜವೇ ಅಥವಾ ಕಟ್ಟುಕಥೆಯೇ? ಎಂಬೆಲ್ಲ ಸಂಗತಿಗಳು ನಿಗೂಢವಾಗಿಯೇ ಉಳಿದಿವೆ.
‘ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ’ವನ್ನು ರಚಿಸಲು ನೇತಾಜಿ ಬರ್ಲಿನ್ನಲ್ಲಿ ಇದ್ದಾಗಲೇ ಚಿಂತನೆ ನಡೆಸಿದ್ದರು. ಭಾರತದ ಗಡಿಗೆ ತಾಗಿದಂತಿದ್ದ ಬರ್ವ (ಈಗಿನ ಮ್ಯಾನ್ಮಾರ್) ದಲ್ಲಿ ಹಂಗಾಮಿ ಸರ್ಕಾರದ ಕೇಂದ್ರ ಇರಬೇಕೆಂದು ನೇತಾಜಿ ಬಯಸಿದ್ದರಾದರೂ, ಅದಕ್ಕೆ ಬರ್ವ ಸರ್ಕಾರದ ಅನುಮತಿ ಸಿಗಲಿಲ್ಲ. ಕೊನೆಗೂ, ಜಪಾನ್ ಸರ್ಕಾರದ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಅಂತಾರಾಷ್ಟ್ರೀಯ ಸಂಪರ್ಕದ ದೃಷ್ಟಿಯಿಂದ ಸಿಂಗಾಪುರವನ್ನು ಕೇಂದ್ರ ಮಾಡಿಕೊಂಡರು. ಸಿಂಗಾಪುರದಲ್ಲಿ 1943ರ ಅಕ್ಟೋಬರ್ 21ರಂದು ಜಪಾನ್, ಥಾಯ್ಲೆಂಡ್, ಬರ್ವ, ಬೋರ್ನಿಯೋ ಮುಂತಾದ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ‘ಸ್ವತಂತ್ರ ಭಾರತದ ಹಂಗಾಮಿ ಸರ್ಕಾರದ (ಆರ್ಜೀ ಹುಕುಮತ್ ಎ ಆಜಾದ್ ಹಿಂದ್) ಪ್ರಧಾನಿಯಾಗಿ ಬೋಸರು ಪ್ರಮಾಣ ವಚನ ಸ್ವೀಕರಿಸಿದರು. ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನೇತಾಜಿ ಇಂಡಿಯನ್ ನ್ಯಾಷನಲ್ ಆರ್ವಿು (ಐಎನ್ಎ)ಯ ದಂಡನಾಯಕರಾದರು. ಕೆಲವೇ ವಾರಗಳೊಳಗೆ ನೇತಾಜಿ ಸ್ಥಾಪಿಸಿದ ಸರ್ಕಾರಕ್ಕೆ ಬರ್ವ, ಜರ್ಮನಿ, ಇಟಲಿ, ಫಿಲಿಪೈನ್ಸ್ ಸೇರಿ ಹಲವು ದೇಶಗಳು ಮಾನ್ಯತೆ ನೀಡಿದವು. ಈ ಕ್ರಮಗಳು ಭಾರತದ ಕ್ರಾಂತಿಕಾರಿಗಳಲ್ಲಿ ಆತ್ಮವಿಶ್ವಾಸವನ್ನು ಹುಟ್ಟುಹಾಕಿದವು. ಮುಂದೆ, ಐಎನ್ಎ ಬಲವೃದ್ಧಿಗೆ ಇದು ಪೂರಕವಾಗಿ ಪರಿಣಮಿಸಿತು.
ಹೋರಾಟದ ಬದುಕು: ಬಾಲ್ಯದಿಂದಲೇ ಅಸಾಮಾನ್ಯ ಪ್ರತಿಭಾವಂತರಾಗಿದ್ದ ಬೋಸ್ ಕೆಲಕಾಲ ಅಧ್ಯಾತ್ಮ ಸಾಧನೆಗಾಗಿ ಹಿಮಾಲಯಕ್ಕೂ ಹೋಗಿದ್ದುಂಟು. ಹೆತ್ತವರ ಆಸೆಯಂತೆ ಐಸಿಎಸ್ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ತೆರಳಿ 8 ತಿಂಗಳ ಕಠಿಣ ಪರಿಶ್ರಮದಿಂದ 4ನೇ ರ್ಯಾಂಕಿನಲ್ಲಿ ಉತ್ತೀರ್ಣರಾದ ಮೇಧಾವಿ. ಆದರೂ, ಹೆಚ್ಚಿನ ಸಂಬಳ, ಸ್ಥಾನಮಾನದ ಸರ್ಕಾರಿ ನೌಕರಿಯನ್ನು ನಿರಾಕರಿಸಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಭಾರತಕ್ಕೆ ವಾಪಸ್ ಬಂದು ಗಾಂಧೀಜಿಯವರನ್ನು ಭೇಟಿ ಮಾಡಿ ಅವರೊಡನೆ ದೇಶದ ಸ್ಥಿತಿಗತಿ ಮತ್ತು ಸ್ವಾತಂತ್ರ್ಯ ಹೋರಾಟದದ ಬಗ್ಗೆ ಸಮಾಲೋಚನೆ ನಡೆಸಿದರು. ಅಸಹಕಾರ ಚಳವಳಿ, ಶಾಂತಿಯುತ ಹೋರಾಟಗಳಿಂದ ಸ್ವಾತಂತ್ರ್ಯ ಗಳಿಸುವುದು ದುಸ್ತರವೇ ಸರಿ ಎಂದು ತೀರ್ವನಿಸಿದ ಸುಭಾಷ್ ಮರಳಿ ಬಂಗಾಲಕ್ಕೆ ತೆರಳಿ ಅಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ ದಾಸ್ರವರ ಒಡನಾಟ ಬೆಳೆಸಿಕೊಂಡರು. 1921ರಲ್ಲಿ ಬ್ರಿಟನ್ನಿನ ಯುವರಾಜನ ಭಾರತ ಭೇಟಿಯ ಬಹಿಷ್ಕಾರದಲ್ಲಿ ಭಾಗವಹಿಸಿ ಚಿತ್ತರಂಜನ ದಾಸ್ ಅವರೊಂದಿಗೆ ತಾವೂ ಬಂಧಿತರಾಗಿ ಮೊದಲನೇ ಬಾರಿಗೆ ಸೆರೆಮನೆ ವಾಸವನ್ನು ಕಂಡ ಬೋಸ್, ತಮ್ಮ ಜೀವನದಲ್ಲಿ ಒಟ್ಟು 12 ವರ್ಷಗಳ ಸೆರೆಮನೆ ವಾಸ ಮತ್ತು ದೇಶಾಂತರ ಶಿಕ್ಷೆಗೆ ಒಳಗಾಗಿದ್ದರು.
ನಮ್ಮವರಿಂದಲೇ ಕಡೆಗಣನೆ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷರ ಪಾತ್ರವನ್ನು ಸ್ವತಃ ಬ್ರಿಟಿಷರೇ ಒಪ್ಪಿದ್ದಾರೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಬ್ರಿಟನ್ನಲ್ಲಿ ಆಡಳಿತ ನಡೆಸುತ್ತಿದ್ದುದು ಲೇಬರ್ ಪಕ್ಷ ಹಾಗೂ ಪ್ರಧಾನಿಯಾಗಿದ್ದಿದ್ದು ಕ್ಲಿಮೆಂಟ್ ಆಟ್ಲಿ. ಅವತ್ತು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ವಿಧೇಯಕವನ್ನು ಆಟ್ಲಿ ಬ್ರಿಟನ್ ಸಂಸತ್ತಿನ ಮುಂದಿಟ್ಟರು. ಸ್ವಾತಂತ್ರ್ಯ ಪ್ರಾಪ್ತಿ ನಂತರ ಒಮ್ಮೆ ಆಟ್ಲಿ ಭಾರತಕ್ಕೆ ಬಂದರು. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದರು. ‘ಭಾರತಕ್ಕೆ ಸ್ವಾತಂತ್ರ್ಯ ಲಭಿಸಲು ಗಾಂಧೀಜಿಯವರ ಅಸಹಕಾರ ಚಳವಳಿ ಎಷ್ಟು ಪ್ರಭಾವ ಬೀರಿತು?’ ಎಂದು ಸಂದರ್ಶಕರು ಕೇಳಿದಾಗ- ‘ಅತ್ಯಂತ ಕನಿಷ್ಠ’ ಎಂದು ಉತ್ತರಿಸಿದ ಆಟ್ಲಿ, ‘ನೇತಾಜಿ ಸುಭಾಷ್ಚಂದ್ರ ಬೋಸರ ಐಎನ್ಎ, ಅವರ ಸಶಸ್ತ್ರ ಹೋರಾಟಗಳು ಪ್ರಮುಖ ಕಾರಣವಾದವು’ ಎಂದು ಹೇಳಿದ್ದರು. ಆದರೆ, ಭಾರತದ ತಥಾಕಥಿತ ಇತಿಹಾಸ ಹಾಗೂ ಕಾಂಗ್ರೆಸ್ ನಾಯಕರೇ ನೇತಾಜಿ ಹೋರಾಟವನ್ನು, ತ್ಯಾಗವನ್ನು ಕಡೆಗಣಿಸಿದ್ದು ದುರ್ದೈವದ ಸಂಗತಿ.
ಅದೇನಿದ್ದರೂ, ಈ ಸಂದರ್ಭದಲ್ಲಿ ರಾಷ್ಟ್ರದ ನೈಜ ಇತಿಹಾಸವನ್ನು ತಿಳಿಸುವ, ಹೆಮ್ಮೆಯ ಪ್ರತೀಕಗಳನ್ನು ಸ್ಮರಿಸುವ ಕಾರ್ಯಕ್ಕೆ ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ದೆಹಲಿಯ ಇಂಡಿಯಾಗೇಟ್ ಬಳಿಯಲ್ಲಿ ನೇತಾಜಿಯವರ ಬೃಹತ್ ಪ್ರತಿಮೆ ಇಂದು (ಜ.23) ಸ್ಥಾಪನೆಯಾಗುತ್ತಿದೆ. ದೇಶವನ್ನು ಒಗ್ಗೂಡಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರ ಗೌರವಾರ್ಥವಾಗಿ ಬೃಹತ್ ಏಕತಾ ಪ್ರತಿಮೆಯನ್ನು ಗುಜರಾತಿನ ನರ್ಮದಾ ನದಿತೀರದ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇದೇ ರೀತಿ ವನವಾಸಿಗಳ ನಾಯಕ ಬಿರಸಾ ಮುಂಡಾ, ಈಶಾನ್ಯದ ಅಸ್ಸಾಂ ರಾಜ್ಯದ ಲಚಿತ್ ಬರ್ಪಕಾನ್ ಸೇರಿ ಅಸಂಖ್ಯಾತ ವೀರರ ಕೊಡುಗೆ, ಬಲಿದಾನದ ನೈಜಮಾಹಿತಿ ದೇಶಕ್ಕೆ ಗೊತ್ತುಪಡಿಸುತ್ತಿರುವುದು ಸಮಾಧಾನದ ಸಂಗತಿ.
(ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು)