ಅಂಕಣ

ಭಕ್ತನ ಶ್ರದ್ಧೆ ಭಗವಂತನನ್ನು ಕಲ್ಪತರುವನ್ನಾಗಿಸಿದ ದಿನ

Webdesk - Ravikanth
ಭಾರತೀಯರಾದ ನಮಗೆ ಯುಗಾದಿ ಅಥವಾ ಚೈತ್ರ ಶುದ್ಧ ಪಾಡ್ಯಮಿ ಹೊಸ ವರ್ಷವಾದರೂ ಪ್ರಪಂಚದ ಬಹಳಷ್ಟು ರಾಷ್ಟ್ರಗಳು (ವ್ಯವಹಾರದಲ್ಲಿ ಭಾರತೀಯರು ಕೂಡ) ಆಧುನಿಕ ಗ್ರೆಗೋರಿಯನ್ ಕ್ಯಾಲೆಂಡರನ್ನು ಅನುಸರಿಸುವುದರಿಂದ ಜನವರಿ 1ರಿಂದ ಹೊಸ ವರ್ಷ ಎನ್ನಲಡ್ಡಿಯಿಲ್ಲ. ಜಗತ್ತಿನ ಇತರೆಡೆಗಳಲ್ಲೂ ಕೆಲಕಾಲ ಭಾರತೀಯ ‘ಯುಗಾದಿ’ಯಿಂದಲೇ ವರ್ಷಾರಂಭ ಇರುತ್ತಿತ್ತು ಎನ್ನಲು ಆಧಾರಗಳಿವೆ. ಏಕೆಂದರೆ ಅನಾದಿಕಾಲದಿಂದ ‘ಜನವರಿ’ಯೇ ಮೊದಲ ಮಾಸವೇನೂ ಆಗಿರಲಿಲ್ಲ, ಮಾರ್ಚ್ 1 ಮತ್ತು ಮಾರ್ಚ್ 25 ಕೂಡ ‘ವರ್ಷಾರಂಭ’ವಿದ್ದ ದಿನಗಳಿದ್ದವು. ಅದರ ಛಾಯೆ ಇನ್ನೂ ಮಾಸಿಲ್ಲ. ಮಾರ್ಚ್ 1ನ್ನು ವರ್ಷಾರಂಭವೆಂದು ಪರಿಗಣಿಸಿದರೆ 7, 8, 9, 10ನೇ ಮಾಸಗಳು ಕ್ರಮವಾಗಿ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್​ಗಳಾಗುತ್ತವೆ. ಇವು ಸಂಸ್ಕೃತದ ಸಪ್ತ, ಅಷ್ಟ, ನವ, ದಶಗಳನ್ನು ಪ್ರತಿಧ್ವನಿಸುತ್ತದೆ. ಕ್ರೖೆಸ್ತರ ಪ್ರಭಾವಕ್ಕಿಂತ ಮುಂಚಿನ ರೋಮನ್ ಸಂಸ್ಕೃತಿ ಈ ಪದ್ಧತಿಯನ್ನು ಅನುಸರಿಸುತ್ತಿತ್ತು. ಯಾವುದೋ ಸಂದರ್ಭದಲ್ಲಿ ಪಾಶ್ಚಾತ್ಯ ಸಂಸ್ಕೃತಿ ‘ತನ್ನತನ’ವನ್ನು ದೃಢಪಡಿಸಹೊರಟು ತಮ್ಮ ‘ಸಕಲ ಆರಂಭಗಳ’ ದೇವತೆಯಾದ (ನಮ್ಮ ‘ಗಣಪತಿ’ಯ ಪ್ರತಿರೂಪ) ‘ಜಾನಸ್’ ನ ಹೆಸರಲ್ಲಿ ಜನವರಿಯನ್ನು ನಿರ್ವಿುಸಿ ಮುಂದೆ ಇದೇ ಸಂಪ್ರದಾಯವಾಯಿತು. ಜೂಲಿಯಸ್ ಸೀಸರ್ ಮತ್ತು ಅಗಸ್ಟಸ್ ಸೀಸರ್​ಗಳ ಹೆಸರುಗಳಲ್ಲಿ ಜುಲೈ, ಆಗಸ್ಟ್ ಗಳು ಕ್ರಮವಾಗಿ ನಿರ್ವಣವಾದಂತೆ. ಮಾನವ ವೈವಿಧ್ಯತೆಗಳ ಸಕಲ ಆಯಾಮಗಳನ್ನೂ ಸಮನ್ವಯಗೊಳಿಸಲೆಂದೇ ಅವತರಿಸಿದ ಯುಗಾವತಾರ ಶ್ರೀರಾಮಕೃಷ್ಣರ ಜೀವನದಲ್ಲಿ ಜನವರಿ 1 ಮತ್ತೊಂದು ಗರಿಯನ್ನು ಸಾಧಿಸಿದ ವಿವರ ರೋಮಾಂಚಕಾರಿಯಾಗಿದೆ.

ಅಂದು 1886 ನೇ ಇಸವಿ. ಶ್ರೀರಾಮಕೃಷ್ಣರು ಕ್ಯಾನ್ಸರ್ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ ದಿನಗಳು ಅವು. ಔಷಧೋಪಚಾರಗಳು ಸರಿಯಾಗಿ ನಡೆಯಲಿ ಎನ್ನುವ ಉದ್ದೇಶದಿಂದ ದಕ್ಷಿಣೇಶ್ವರದಿಂದ ಕಲ್ಕತ್ತೆಯ ಕಾಶೀಪುರ ಎಂಬಲ್ಲಿನ ತೋಟದ ಮನೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಕೆಲ ದಿನಗಳ ಹಿಂದೆ ತಾನೆ ಕಲ್ಕತ್ತದ ಪ್ರಸಿದ್ಧ ಹೋಮಿಯೋಪಥಿ ವೈದ್ಯರಾದ ರಾಜೇಂದ್ರಲಾಲ್ ದತ್ತ ಎಂಬವರು ಹೊಸದೊಂದು ಔಷಧಿಯನ್ನು ಕೊಟ್ಟಿದ್ದರು. ಇದರ ಪರಿಣಾಮವಾಗಿ ಕಾಯಿಲೆ ಎಷ್ಟೋ ಉಪಶಮನವಾದಂತಿತ್ತು. ಹೀಗೆ ದೇಹಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ಶ್ರೀರಾಮಕೃಷ್ಣರು ಉದ್ಯಾನದಲ್ಲಿ ಸ್ವಲ್ಪ ಅಡ್ಡಾಡಿಕೊಂಡು ಬರುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಆಗ ಅಪರಾಹ್ನ 3 ಗಂಟೆ ಸಮಯ. ಅಂದು ಜನವರಿ 1ನೇ ತಾರೀಖು. ಇಂಗ್ಲಿಷ್ ವರ್ಷದ ಮೊದಲನೇ ದಿನ; ಆದ್ದರಿಂದ ರಜಾ ದಿನ. ಹಲವಾರು ಗೃಹಸ್ಥರು ಶ್ರೀರಾಮಕೃಷ್ಣರ ದರ್ಶನಕ್ಕಾಗಿ ಕಾಶೀಪುರಕ್ಕೆ ಬಂದಿದ್ದರು. ಗಿರೀಶ ಚಂದ್ರನೂ ಬಂದಿದ್ದ; ಅಲ್ಲೇ ಮಾವಿನಮರದ ಬುಡದಲ್ಲಿ ಕುಳಿತುಕೊಂಡು ಭಕ್ತರೊಂದಿಗೆ ಮಾತನಾಡುತ್ತಿದ್ದ. ಆಗ ಅಲ್ಲಿಗೆ ಶ್ರೀರಾಮಕೃಷ್ಣರು ಬಂದರು. ಗಿರೀಶನನ್ನು ಕಂಡು ಇದ್ದಕ್ಕಿದ್ದಂತೆ ನುಡಿದರು- ‘ಗಿರೀಶ್, ನೀನು ನನ್ನ ವಿಷಯವಾಗಿ ಎಲ್ಲರೆದುರಿನಲ್ಲೂ ಏನೇನೋ (ಅವರು ಅವತಾರ ಪುರುಷರು ಎಂದು) ಸಾರುತ್ತಿದ್ದೀಯಲ್ಲ, ನೀನು ಅಂಥಾದ್ದೇನನ್ನು ಕಂಡೆ ನನ್ನಲ್ಲಿ?’ ಶ್ರೀರಾಮಕೃಷ್ಣರ ದೈವತ್ವದಲ್ಲಿ ಅಪಾರ ಶ್ರದ್ಧೆಯಿಟ್ಟಿದ್ದ ಗಿರೀಶ ಕೈ ಜೋಡಿಸಿ, ಭಾವಭರಿತನಾಗಿ ಉದ್ಗರಿಸಿದ: ‘ಯಾರ ಮಹಿಮೆಯನ್ನು ವರ್ಣಿಸುವಲ್ಲಿ ವ್ಯಾಸ-ವಾಲ್ಮೀಕಿಗಳೂ ಅಸಮರ್ಥರಾಗಿದ್ದರೋ ಅಂತಹ ಮಹಾಮಹಿಮನ ವಿಚಾರವಾಗಿ ನನ್ನಂಥವನು ಏನು ತಾನೇ ಹೇಳಬಲ್ಲ!’

ಹಿಂದೆ ವಾಲ್ಮೀಕಿ-ವ್ಯಾಸ ಮಹರ್ಷಿಗಳು ರಾಮಾಯಣ-ಮಹಾಭಾರತಗಳೆಂಬ ಅಮರಗ್ರಂಥಗಳಲ್ಲಿ ಭಗವಾನ್ ವಿಷ್ಣುವಿನ ಅವತಾರಗಳಾದ ರಾಮ ಮತ್ತು ಕೃಷ್ಣನ ಗುಣ-ಮಹಿಮೆಗಳನ್ನು ನಾನಾ ವಿಧವಾಗಿ ವರ್ಣಿಸಿ ದಣಿದರೂ ಆ ಗುಣಕಥನ ಮುಗಿಯಲಿಲ್ಲ. ಅಂತಹ ರಾಮ-ಕೃಷ್ಣರೇ ಈಗ ಶ್ರೀರಾಮಕೃಷ್ಣರಾಗಿ ಅವತಾರ ತಾಳಿರುವಾಗ ಅವರ ಮಹಿಮೆಯನ್ನು ತನ್ನಂಥ ಪಾಮರನೇನು ವರ್ಣಿಸಬಲ್ಲ?- ಎಂಬುದು ಅವನ ಮಾತಿನ ಅಭಿಪ್ರಾಯ. ಅದನ್ನು ಕೇಳಿದ ತಕ್ಷಣ ಶ್ರೀರಾಮಕೃಷ್ಣರಲ್ಲಿ ಭಾವವುಕ್ಕಿ ಬಂದು ಗಾಢ ಸಮಾಧಿಸ್ಥರಾಗಿಬಿಟ್ಟರು. ಗಿರೀಶ ಇದನ್ನು ಕಂಡು ಆನಂದಭರಿತನಾಗಿ ‘ಜೈ ರಾಮಕೃಷ್ಣ, ಜೈ ರಾಮಕೃಷ್ಣ!’ ಎಂದು ಘೊಷಿಸುತ್ತ ಅವರ ಪಾದಧೂಳಿಯನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ. ಆಗ ಶ್ರೀರಾಮಕೃಷ್ಣರು ಅರೆಸಹಜಾವಸ್ಥೆಗಿಳಿದು ‘ನಾನಿನ್ನೇನು ತಾನೆ ಹೇಳಲಿ! ನಿಮಗೆಲ್ಲರಿಗೂ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ’ ಎಂದುದ್ಗರಿಸಿದರು. ಭಕ್ತಾದಿಗಳೆಲ್ಲ ಆನಂದೋದ್ರೇಕದಿಂದ ‘ಜೈ ರಾಮಕೃಷ್ಣ, ಜೈ ರಾಮಕೃಷ್ಣ’ ಎಂದು ಉದ್ಗಾರ ಮಾಡುತ್ತ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಕೆಲವರು ಸ್ತೋತ್ರ-ಮಂತ್ರಗಳನ್ನು ಉಚ್ಚರಿಸುತ್ತ ಅವರ ಪಾದಧೂಳಿಯನ್ನು ತೆಗೆದುಕೊಂಡರು. ಶ್ರೀರಾಮಕೃಷ್ಣರು ಬಳಿಗೆ ಬಂದ ಪ್ರತಿಯೊಬ್ಬನ ಎದೆಯನ್ನೂ ಮುಟ್ಟಿ ‘ನಿನಗೆ ಆತ್ಮಜಾಗೃತಿಯುಂಟಾಗಲಿ’ ಎಂದು ಹರಸಿದರು. ಅವರ ಆ ದಿವ್ಯಸ್ಪರ್ಶದಿಂದಾಗಿ ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಅದ್ಭುತ ಆಧ್ಯಾತ್ಮಿಕಾನುಭವವಾಯಿತು! ಕೆಲವರು ಆ ಆನಂದಾನುಭವದ ಉತ್ಕಟತೆಯನ್ನು ತಾಳಲಾರದೆ ಕುಸಿದು ಬಿದ್ದರೆ, ಇನ್ನು ಕೆಲವರು ಹಾಡುತ್ತ ನರ್ತಿಸಲಾರಂಭಿಸಿದರು! ಹೀಗೆ ಭಕ್ತರೆಲ್ಲ ತಮ್ಮ ಮನೋರಥಗಳನ್ನು ಪೂರೈಸುವ ಕಲ್ಪತರುವಿನ ಕೃಪೆಗೆ ಪಾತ್ರರಾದರು. (ಇಂದಿಗೂ ಜನವರಿ 1ರಂದು ಕಲ್ಕತ್ತೆಯ ಕಾಶೀಪುರದ ದಿವ್ಯ ಉದ್ಯಾನದಲ್ಲಿ ಲಕ್ಷಗಟ್ಟಲೆ ಜನ ಸೇರಿ ಅತ್ಯುತ್ಸಾಹದಿಂದ ‘ಕಲ್ಪತರು ದಿನಾಚರಣೆ’ ನೆರವೇರಿಸುತ್ತಾರೆ.)

ಹೀಗೆ ಶ್ರೀರಾಮಕೃಷ್ಣರು ಕಲ್ಪತರುವಾದ ದಿನವಿದು. ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ‘ನವರತ್ನ’ಗಳಲ್ಲಿ ಒಬ್ಬನಾದ ಅಮರಸಿಂಹ ತನ್ನ ‘ಅಮರಕೋಶ’ದಲ್ಲಿ 5 ವೃಕ್ಷಗಳನ್ನು ‘ದೇವತರು’ ಎಂದು ಕರೆಯುತ್ತಾನೆ, ಅದರಲ್ಲಿ ಕಲ್ಪವೃಕ್ಷ ಅಥವಾ ಕಲ್ಪತರು ಒಂದು (ಪಂಚೈತೇ ದೇವತರವೋ ಮಂದಾರಃ ಪಾರಿಜಾತಕಃ | ಸಂತಾನಃ ಕಲ್ಪವೃಕ್ಷಶ್ಚ ಪುಂಸಿವಾ ಹರಿಚಂದನಮ್ || -ಅಮರಕೋಶ)

ಇಷ್ಟೆಲ್ಲಾ ಅದ್ಭುತ ನಡೆದಿದ್ದು ಗಿರೀಶನ ಸಾಟಿಯಿಲ್ಲದ ಶ್ರದ್ಧೆಯ ಬಲದಿಂದ. ‘ಶ್ರದ್ಧೆ’ ಎಂದರೆ ಪೂರ್ಣಪ್ರಮಾಣದ, ಸಂಶಯಕ್ಕೆಡೆಯಿಲ್ಲದ ನೂರಕ್ಕೆ ನೂರು ನಂಬಿಕೆ. ಹೃದಯದಲ್ಲಿ ಸರಳತೆ ಇಲ್ಲದ ಹೊರತು ಇದು ಸಿದ್ಧಿಸುವುದಿಲ್ಲ. ಮಕ್ಕಳಲ್ಲಿ ಸರಳತೆ ಸಹಜ. ಆದ್ದರಿಂದ ಶ್ರದ್ಧೆಯೂ ಸುಲಭಸಾಧ್ಯ, ಪ್ರಹ್ಲಾದ, ಧ್ರುವ ಇತ್ಯಾದಿಗಳು ಆ ಮಟ್ಟದ ಶ್ರದ್ಧಾವಂತರಾಗಿದ್ದರು ಎನ್ನಲು ಅವರು ಇನ್ನೂ ಬಾಲಕರಾಗಿದ್ದುದರಿಂದ ಎಂದರೆ ತಪ್ಪೇನೂ ಇಲ್ಲ. ಬಾಲಕನೇ ಆಗಿರಬೇಕೆಂದೇನೂ ಇಲ್ಲ. ಬಾಲಸಹಜ ಸರಳತೆ ಇದ್ದರೆ ಸಾಕು. ಶ್ರೀಕೃಷ್ಣ ಗೀತೆಯಲ್ಲಿ ಹಾಗೂ ಸ್ವಾಮಿ ವಿವೇಕಾನಂದರು ತಮ್ಮ ಚಿಂತನೆಗಳಲ್ಲೆಲ್ಲಾ ಈ ಶ್ರದ್ಧೆಯ ಬಗ್ಗೆ ಒತ್ತು ಕೊಟ್ಟಿದ್ದಾರೆೆ. ‘ಯೋ ಯತ್ ಶ್ರದ್ಧಃ ಸ ಯೇವ ಸಃ’ ಎನ್ನುತ್ತಾನೆ ಕೃಷ್ಣ. (‘ಯಾರ ಯಾರ ಶ್ರದ್ಧೆ ಎಷ್ಟೋ ಅವರವರ ಮಟ್ಟವೂ ಅಷ್ಟೇ’- ಎಂದು ಇದರ ಅರ್ಥ) ಶ್ರದ್ಧೆಯು ಪವಾಡಗಳನ್ನೇ ಸೃಷ್ಟಿಸಿಬಿಡಬಲ್ಲದು ಎನ್ನುವುದಕ್ಕೆ ಶ್ರೀರಾಮಕೃಷ್ಣರು ಕೊಡುತ್ತಿದ್ದ ಉದಾಹರಣೆ ಹನುಮಂತನದ್ದು. ರಾಮನಾಮದ ಮೇಲಿನ ಶ್ರದ್ಧೆಯಿಂದ ಹನುಮಂತ ಒಂದೇ ಸಲಕ್ಕೆ ಸಮುದ್ರವನ್ನೇ ಹಾರಿಬಿಟ್ಟ. ಆದರೆ ಸ್ವಯಂ ರಾಮನೇ ಸಮುದ್ರ ದಾಟಲು ಸೇತುವೆ ಕಟ್ಟಬೇಕಾಯ್ತು. ಪುರಂದರದಾಸರು ಭಗವಂತನನ್ನುದ್ದೇಶಿಸಿ ‘ನಿನ್ನ ಹಂಗೇ ಬೇಡ ನಿನ್ನ ನಾಮದ ಬಲದಲ್ಲಿ ಶ್ರದ್ಧೆ ಒಂದಿದ್ದರೆ ಸಾಕು’ ಎನ್ನುತ್ತಾರೆ.

ಬಂಗಾಳಿ ಸಾಹಿತ್ಯದಲ್ಲಿ ಗಿರೀಶ್ ಚಂದ್ರ ಘೊಷ್ ಎನ್ನುವುದು ಬಹುಶ್ರುತ ನಾಮ. ಸುಪ್ರಸಿದ್ಧ ಬಂಗಾಳಿ ಕವಿ ಬಂಕಿಮ ಚಂದ್ರ ಚಟರ್ಜಿಯ ಆತ್ಮೀಯ ಸ್ನೇಹಿತನಾಗಿದ್ದ ಈತ ಅದ್ಭುತ ನಾಟಕಕಾರ ಮತ್ತು ಕವಿ. ಬಂಗಾಳದಲ್ಲಿ ಒಂದು ರೀತಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದ್ದವನು ಈತ. ಸ್ವಯಂ ಶ್ರೀರಾಮಕೃಷ್ಣರೂ ಇವನ ನಾಟಕಗಳನ್ನು ನೋಡಿ ಭಾವಭರಿತರಾಗುತ್ತಿದ್ದರು; ನಾಟಕ ಮುಗಿದ ಮೇಲೆ ಹತ್ತಿರಕ್ಕೆ ಕರೆಸಿಕೊಂಡು ಭಾವದುಂಬಿ ಹರಸುತ್ತಿದ್ದರು. ಶ್ರೀರಾಮಕೃಷ್ಣರ ಶಿಷ್ಯವರ್ಗದಲ್ಲಿ ನರೇಂದ್ರನನ್ನು ಬಿಟ್ಟರೆ ಗಿರೀಶನಷ್ಟು ಕುಶಾಗ್ರಮತಿ ಮತ್ತು ವಿಶ್ಲೇಷಣಾ ಸಾಮರ್ಥ್ಯ, ರ್ತಾಕ ಚಿಂತನೆಗಳಲ್ಲಿ ಪಳಗಿದವರು ಯಾರೂ ಇರಲಿಲ್ಲ. ಆದರೆ ಅವನು ಯಾವ ಅರ್ಥದಲ್ಲೂ ಆಧ್ಯಾತ್ಮಿಕ ಸಾಧಕನಾಗಿರಲಿಲ್ಲ. ಅಷ್ಟೇಕೆ ಅವನ ಮಾತಿನಲ್ಲೇ ಹೇಳಬೇಕೆಂದರೆ- ಅವನು ಕುಡಿದಿರುವ ಹೆಂಡದ ಬಾಟಲಿಗಳನ್ನು ಒಂದರ ಮೇಲೆ ಒಂದನ್ನು ಇಟ್ಟರೆ ಗೌರಿಶಂಕರ ಶಿಖರಕ್ಕಿಂತ ಮೇಲೇರುತ್ತಿತ್ತು. ಸಾಲದೆಂಬಂತೆ ಅವನು ಮಾಡದ ಪಾಪವೇ ಇಲ್ಲ, ಆದರೆ ಶ್ರೀರಾಮಕೃಷ್ಣರಲ್ಲಿ ಅವನ ಶ್ರದ್ಧೆ ಊಹಿಸಲಸಾಧ್ಯವಾದದ್ದು. ಯಾವ ವೈದ್ಯಕೀಯ ಶಿಕ್ಷಣವೂ ಇಲ್ಲದ ಅವನು ಕೇವಲ ಶ್ರೀರಾಮಕೃಷ್ಣರ ನಾಮವನ್ನುಚ್ಚರಿಸಿ ಔಷಧ ಕೊಟ್ಟು ರೋಗಿಗಳನ್ನು ಗುಣಪಡಿಸುತ್ತಿದ್ದ. ಶ್ರೀರಾಮಕೃಷ್ಣರಲ್ಲಿ ಶರಣಾಗಿ ಅವರ ಪಾದಗಳನ್ನು ಬಿಗಿಯಾಗಿ ಹಿಡಿದುಕೊಂಡು ತನ್ನನ್ನು ಉದ್ಧರಿಸಬೇಕೆಂದು ಅವನು ಕೇಳಿಕೊಂಡ ಪರಿ ಅನನುಕರಣೀಯ. ಅವನ ಮೊರೆಗೆ ಕರಗಿದ ಶ್ರೀರಾಮಕೃಷ್ಣರು ಅವನ ಪಾಪಗಳನ್ನೆಲ್ಲಾ ತಾವು ಹೀರಿಕೊಂಡು ಮುಂದೆ ಪಾಪದ ಲವಲೇಶವೂ ಅವನಲ್ಲಿಲ್ಲದಂತೆ ನೋಡಿಕೊಂಡರಷ್ಟೇ ಅಲ್ಲ ಅವನ ಉದ್ಧಾರದ ಪೂರ್ಣ ಜವಾಬ್ದಾರಿಯನ್ನೂ ಹೊತ್ತರು. ಮತ್ತು ಅವನನ್ನೇ ಒಬ್ಬ ತೀರ್ಥರೂಪನನ್ನಾಗಿಸಿದರು. ಮುಂದೆ ಗಿರೀಶ ಗಂಗೆಯಲ್ಲಿ ಸ್ನಾನಕ್ಕಿಳಿದರೆ ಗಂಗೆಯೇ ಪವಿತ್ರಳಾಗುವುದನ್ನು ಕಣ್ಣಾರೆ ಕಾಣುತ್ತಿದ್ದ ಅವನು. ಕಾಶಿಯ ಸೇವಾಕಾರ್ಯಗಳಿಗೆ ಮನೆಮಾತಾಗಿರುವ ಶ್ರೀರಾಮಕೃಷ್ಣ ಅದ್ವೈತ ಆಶ್ರಮದಲ್ಲಿ ತಂಗಿದ್ದಾಗ ಅವನ ಪಾದಸ್ಪರ್ಶಮಾಡಿ ಪುನೀತರಾಗಲು ಆಶ್ರಮದ ಸಾಧುಗಳು ಸಾಲಿನಲ್ಲಿ ನಿಲ್ಲುತ್ತಿದ್ದರು. ಇಷ್ಟರಮಟ್ಟಿಗೆ ಅವನನ್ನು ಶ್ರೀರಾಮಕೃಷ್ಣರು convert ಮಾಡಿದ್ದರು. ಅವತಾರಪುರುಷನೊಬ್ಬ ಇಚ್ಛಿಸುವುದು ಇಂಥ conversionಗಳನ್ನು ಮಾತ್ರ.

ಶ್ರೀಕೃಷ್ಣ ಗೀತೆಯಲ್ಲಿ ‘ಅತ್ಯಂತ ದುರಾಚಾರಿಯಾಗಿದ್ದರೂ ಅನನ್ಯ ಭಕ್ತಿಯಿಂದ ನನ್ನನ್ನು ಆರಾಧಿಸಿದರೆ ಅವನನ್ನು ಸಾಧುವನ್ನಾಗಿಸುತ್ತೇನೆ. ಎಲ್ಲಾ ವ್ಯವಹಾರಗಳಲ್ಲೂ ಆದರ್ಶನನ್ನಾಗಿಸುತ್ತೇನೆ, ಧರ್ವತ್ಮನಾಗಿ ಶಾಶ್ವತ ಶಾಂತಿಗೆ ಭಾಜನನನ್ನಾಗಿಸುತ್ತೇನೆ. ಅರ್ಜುನ ತಿಳಿ! ನನ್ನ ಭಕ್ತ ಎಂದಿಗೂ ನಾಶವಾಗುವುದಿಲ್ಲ’ ಎಂದು ಹೇಳಿದ್ದಲ್ಲದೇ ‘ನನ್ನಲ್ಲೇ ಸಂಪೂರ್ಣ ಶರಣಾಗತನಾದಲ್ಲಿ ಅವನ ಪಾಪಗಳನ್ನೆಲ್ಲಾ ನಾನೇ ಸ್ವೀಕರಿಸಿ ಅವನಿಗೆ ಮೋಕ್ಷವನ್ನು ಕೊಡುತ್ತೇನೆ’ ಎಂದು ಹೇಳುತ್ತಾನೆ. ಗಿರೀಶ್ ಚಂದ್ರ ಘೊಷ್ ದುರಾಚಾರಿಯಾಗಿದ್ದುದೂ ಹೌದು! ಶ್ರೀರಾಮಕೃಷ್ಣರಲ್ಲಿ ತ್ರಿಕರಣಪೂರ್ವಕವಾಗಿ ಶರಣಾಗಿದ್ದುದೂ ಹೌದು! ಶ್ರೀರಾಮಕೃಷ್ಣರು ಪಾಪಕೂಪವಾಗಿದ್ದವನನ್ನು ಪಾವನಮೂರ್ತಿಯನ್ನಾಗಿಸಿ ಸಾಧುಗಳೂ ಪ್ರಣಾಮಗೈಯ್ಯುವಂತೆ ಮಾಡಿದರು, ತನ್ಮೂಲಕ ಗೀತೆ ಇತ್ಯಾದಿ ಶಾಸ್ತ್ರವಾಕ್ಯಗಳಿಗೆ ಜೀವದುಂಬಿ ನಮ್ಮ ಶ್ರದ್ಧೆಯನ್ನು ನೂರ್ಮಡಿಗೊಳಿಸಿದರು.

ಕೇವಲ ಗಿರೀಶನ ಶ್ರದ್ಧೆಯಿಂದ ಅವನ ಜೊತೆಯಲ್ಲಿದ್ದ ಹಲವಾರು ಜನ ಅಂದು ಹತ್ತಾರು ಜನ್ಮಗಳ ತೀವ್ರ ತಪಸ್ಸಿನಿಂದ ಮಾತ್ರವೇ ಲಭ್ಯವಾಗಬಹುದಾದ ‘ಭಾವ ಸಮಾಧಿ’ ಯನ್ನು ಅನುಭವಿಸಿದರು.

ಶ್ರೀರಾಮಕೃಷ್ಣರು ಕಲ್ಪತರುವಾಗಿ ಅಂದು ‘ಆಧ್ಯಾತ್ಮಿಕ ಉತ್ಥಾನ’ವನ್ನು ಮಾತ್ರ ಅನುಗ್ರಹಿಸಿದರು ಅಂತೇನಿಲ್ಲ, ಅಂದು ನವಯುವಕ ಉಪೇಂದ್ರ ಶ್ರೀರಾಮಕೃಷ್ಣರನ್ನು ಬೇಡಿದ್ದು ತನ್ನನ್ನು ಶ್ರೀಮಂತನನ್ನಾಗಿಸಿ ಎಂದು. ಮುಂದಿನ ದಿನಗಳಲ್ಲಿ ಮಹಾ ಶ್ರೀಮಂತನಾಗಿದ್ದಷ್ಟೇ ಅಲ್ಲ ಸ್ವಾಮಿ ವಿವೇಕಾನಂದರ ‘ರಾಷ್ಟ್ರ ನಿರ್ಮಾಣ ಯೋಜನೆ’ಗಳಿಗೆ ಸಾಕಷ್ಟು ಹಣಸಹಾಯವನ್ನೂ ಗೈದ.

ಹೀಗೆ ಶ್ರೀರಾಮಕೃಷ್ಣರು ಭಕ್ತರನ್ನು ವಿಶೇಷವಾಗಿ ಉದ್ಧರಿಸಿದ ದಿನವಿದು, ಇಂದಿನ ಪ್ರಾರ್ಥನೆಯನ್ನು ಈಡೇರಿಸಿಯೇ ತೀರುವರೆಂಬ ಭರವಸೆ ಭಕ್ತ ಜನರದ್ದು! ಆದ್ದರಿಂದ ನಾವೂ ಸಹ ಕೇಳಿಕೊಳ್ಳೋಣ. ಆದರೆ ಏನನ್ನು? ಸನಾತನ ಸಂಸ್ಕೃತಿಗೆ ಅನುಗುಣವಾದದ್ದನ್ನೇ ಕೇಳಿಕೊಳ್ಳೋಣ. ಅದೇ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’. ಸಮಸ್ತ ಲೋಕಗಳೂ ಚಿರಕಾಲ ಸುಖವಾಗಿರಲಿ ಎಂದು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)