ಅಂಕಣ

ಪುಸ್ತಕ ಸಂಭ್ರಮ ಭಾವಸಂಗಮ; ಕರೊನಾ ನಂತರದ ದಿನಗಳಲ್ಲಿ ಮತ್ತೆ ಆರಂಭವಾಗಿವೆ ಕೃತಿ ಬಿಡುಗಡೆಯ ಸಮಾರಂಭಗಳು..

Webdesk - Ravikanth

| ರವೀಂದ್ರ ಎಸ್. ದೇಶಮುಖ್

  • ನಿಮ್ಮ ಬೆಳಗಿನ ಲಘು ಉಪಾಹಾರ, ಕಾಫಿ ನಮ್ಮೊಂದಿಗೆ....
  • ಸಮಾರಂಭಕ್ಕೆ ಹತ್ತು ನಿಮಿಷ ಮುಂಚೆ ಬನ್ನಿ, ಲೇಖಕರೊಂದಿಗೆ ಚಹಾ ಆಸ್ವಾದಿಸಿ
  • ಲೇಖಕರ ಆಟೋಗ್ರಾಫ್​ನೊಂದಿಗೆ ಪುಸ್ತಕ ಪಡೆದುಕೊಳ್ಳಿ...

ಅಬ್ಬಾ! ಈ ಬಗೆಯ ಆಮಂತ್ರಣಗಳೇ ವಾರಾಂತ್ಯವನ್ನು ಅದೆಷ್ಟು ಚೇತೋಹಾರಿಗೊಳಿಸುತ್ತಿದ್ದವು. ವಾರದ ದಣಿವೆಲ್ಲ ಕಳೆದುಕೊಂಡು ಮನಸ್ಸನ್ನು ಉಲ್ಲಾಸಮಯಗೊಳಿಸುವ ಕಾರ್ಯಕ್ರಮಗಳು. ಶನಿವಾರ, ಭಾನುವಾರ ಪುಸ್ತಕ ಬಿಡುಗಡೆಯ ಸರಣಿ ಸಮಾರಂಭಗಳು! ಎಲ್ಲಿ ಹೋಗುವುದು, ಯಾವುದು ಬಿಡುವುದು ಎಂಬುದು ಗೊಂದಲ. ಏಕೆಂದರೆ, ಒಂದೆಡೆ ಮೆಚ್ಚಿನ ಲೇಖಕರಿದ್ದರೆ, ಮತ್ತೊಂದೆಡೆ ಇಷ್ಟಪಡುವ ಅತಿಥಿ, ಮಗದೊಂದು ಕಡೆ ಯಾರೋ ಆತ್ಮೀಯರು! ಕೆಲವರಂತೂ ವಾರಾಂತ್ಯದಲ್ಲಿ ಬೆಳಗಿನಿಂದ ಸಂಜೆಯವರೆಗೆ ಪುಸ್ತಕ ಬಿಡುಗಡೆಯ ಮೂರ್ನಾಲ್ಕು ಸಮಾರಂಭಗಳಿಗೆ ಹಾಜರಾಗಿ, ಹೊಸ ಹೊಸ ಅನುಭವ ದಕ್ಕಿಸಿಕೊಳ್ಳುತ್ತಾರೆ. ಅದನ್ನು ಸ್ನೇಹಿತರೊಂದಿಗಿನ ಹರಟೆಯಲ್ಲಿ, ಸಾಮಾಜಿಕ ಮಾಧ್ಯಮಗಳ ಸ್ಟೇಟಸ್​ಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಾರೆ.

ಪುಸ್ತಕ ಬಿಡುಗಡೆಯ ಸಮಾರಂಭವೆಂದರೆ ಅದೊಂದು ದೊಡ್ಡ ಭಾವಸಂಗಮ. ಅಲ್ಲಿ ಮಾತಿನ ಮಂಟಪವಿದೆ, ಸ್ನೇಹದ ಆಪ್ತತೆ ಇದೆ. ಅಷ್ಟೇ ಅಲ್ಲ, ಆತ್ಮೀಯರ ಕಲರವ, ಅತಿಥಿಗಳ ಆಕರ್ಷಣೆ, ಸಮಾನಮನಸ್ಕರ ಸಂಗಮ, ಫೇಸ್​ಬುಕ್ ಬಿಟ್ಟು ಫೇಸ್ ಟು ಫೇಸ್ ಮುಖಾಮುಖಿಯಾಗುವ ಅವಕಾಶ, ಹೊಸದೊಂದು ಕೃತಿಕುಸುಮ ಸಾಹಿತ್ಯ ಲೋಕಕ್ಕೆ ಪ್ರವೇಶಿಸುವ ಕುತೂಹಲ, ಗಡಿಬಿಡಿಯಲ್ಲಿ ಓಡಾಡುವ ಫೋಟೋಗ್ರಾಫರ್​ಗಳು, ಸೆಲ್ಪಿಗಳ ಭರಾಟೆ, ಮುಖಪುಟವನ್ನು ವಿಮಶಿಸುವ, ಒಳಗಿನ ಸಾಹಿತ್ಯ ಹೂರಣವನ್ನು ಸವಿಯಲು ಕಾತರರಾಗಿರುವ ಓದುಗ ವರ್ಗ, ಜತೆಗೆ ಹರಟೆಯನ್ನು ರಂಗೇರಿಸುವ ಬಿಸಿಬಿಸಿ ಚೌಚೌ ಭಾತ್, ಕಾಫಿ, ಚಹಾ!

ಪುಸ್ತಕ ಬಿಡುಗಡೆಯ ಸಮಾರಂಭದ ನಿಮಿತ್ತ ಎಷ್ಟೆಲ್ಲ ಸಂಗತಿಗಳು ಮೇಳೈಸಿ, ಲೇಖಕರಿಗೂ, ಪ್ರಕಾಶಕರಿಗೂ, ಓದುಗವರ್ಗಕ್ಕೂ ಖುಷಿ ಕೊಡುತ್ತವೆ ನೋಡಿ. ಜೀವನದ ಎಲ್ಲ ಮಜಲುಗಳಲ್ಲಿ ಭಾರಿ ಬದಲಾವಣೆ ಸೃಷ್ಟಿಸಿದ ಕರೊನಾ ಸೋಂಕಿನ ಹಾವಳಿ ಈ ಕ್ಷೇತ್ರವನ್ನೂ ಬಿಡಲಿಲ್ಲ. ದೀರ್ಘಾವಧಿ ಲಾಕ್​ಡೌನ್​ನಿಂದ ಅದೆಷ್ಟೋ ಸಮಯ ಹೊಸ ಪುಸ್ತಕಗಳ ಬಿಡುಗಡೆಯೇ ನಿಂತುಹೋದವು. ಪ್ರಕಾಶಕರು ಒಳ್ಳೊಳ್ಳೆ ಪುಸ್ತಕಗಳನ್ನು ಸಿದ್ಧಪಡಿಸಿಕೊಂಡರೂ, ಇಂಥ ಸಂದಿಗ್ಧ ಸ್ಥಿತಿಯಲ್ಲಿ ಓದುಗರನ್ನು ತಲುಪಿಸಲು ಸಾಧ್ಯವಿಲ್ಲ ಎಂದುಕೊಂಡು ಪ್ರಸ್ತಾವಿತ ಯೋಜನೆಗಳನ್ನೆಲ್ಲ ಮುಂದೂಡಿದರು. ಆನ್​ಲೈನ್​ನಲ್ಲಿ ಮಕ್ಕಳು ಪಾಠವನ್ನೇ ಕಲಿಯುತ್ತಿದ್ದಾರೆ ಎಂದ ಮೇಲೆ ಆನ್​ಲೈನ್ ಮೂಲಕ ಪುಸ್ತಕ ಬಿಡುಗಡೆ ಮಾಡಬಹುದಲ್ಲ ಅಂತ ಯೋಚಿಸಿ, ಈ ಬಗೆಯ ಕಾರ್ಯಕ್ರಮಗಳೂ ಆರಂಭವಾದವು. ಆದರೆ, ಎದುರಿಗೆ ಪ್ರೇಕ್ಷಕರೇ ಇಲ್ಲದೆ, ಚಪ್ಪಾಳೆಯ ಸದ್ದಿಲ್ಲದೆ ನಡೆಯುವ ಈ ಸಮಾರಂಭಗಳು ಅತಿಥಿಗಳಿಗೂ, ಓದುಗರಿಗೂ ಭೌತಿಕ ಕಾರ್ಯಕ್ರಮದಂತೆ ಅನುಭವ ನೀಡಲಿಲ್ಲ. ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿತ್ತು ಎನ್ನಿ. ಆದರೆ, ಬಹುತೇಕರಿಗೆ ಏನನ್ನೋ ಕಳೆದುಕೊಂಡ ಭಾವ. ಛೇ, ಜನರ ಭೌತಿಕ ಉಪಸ್ಥಿತಿಯಲ್ಲಿ ಇಂಥ ಸಮಾರಂಭ ನಡೆದಿದ್ದರೆ ಸ್ನೇಹಿತರೆಲ್ಲ ಸಿಗುತ್ತಿದ್ದರು, ಆಪ್ತರ ಭೇಟಿಯಾಗುತ್ತಿತ್ತು ಎಂಬ ಚಡಪಡಿಕೆ. ಇನ್ನು, ಗ್ರಾಮೀಣ ಪ್ರದೇಶದ ಆಸಕ್ತರಿಗಂತೂ ಈ ಆನ್​ಲೈನ್ ಕಾರ್ಯಕ್ರಮಗಳ ಮಾಹಿತಿಯೂ ತಲುಪುತ್ತಿರಲಿಲ್ಲ. ತಲುಪಿದರೂ, ನೆಟ್​ವರ್ಕ್ ಸಮಸ್ಯೆ, ಇತರ ತಾಂತ್ರಿಕ ಕಾರಣದಿಂದ ಅವರು ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಕರೊನಾದ ಅಪಾಯ ಪೂರ್ಣಪ್ರಮಾಣದಲ್ಲಿ ತಗ್ಗಿಲ್ಲವಾದರೂ, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ಬಹುತೇಕ ಎಲ್ಲ ಕ್ಷೇತ್ರಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಈ ಪೈಕಿ ಪುಸ್ತಕೋದ್ಯಮವೂ ಹೊರತಲ್ಲ. ಲಾಕ್​ಡೌನ್ ಕಾಲಘಟ್ಟ ಪುಸ್ತಕೋದ್ಯಮಕ್ಕೆ ವರವೂ ಆಯಿತು, ಶಾಪವಾಗಿಯೂ ಪರಿಣಮಿಸಿತು. ಪುಸ್ತಕ ಮಳಿಗೆಗಳೆಲ್ಲ ಬಾಗಿಲು ಹಾಕಿದ್ದರಿಂದ ಅಂಗಡಿಗಳಿಗೆ ತೆರಳಿ ಪುಸ್ತಕ ಖರೀದಿಸುವಂತಿರಲಿಲ್ಲ. ಆದರೆ, ಇದೇ ಸವಾಲಿನ ಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸಿಕೊಂಡ ಪ್ರಕಾಶಕರ ಸಂಖ್ಯೆಯೇನೂ ಕಡಿಮೆಯಲ್ಲ. ಪುಸ್ತಕ ಮಾರಾಟಕ್ಕೆ ಪೋರ್ಟಲ್​ಗಳನ್ನು ಅಭಿವೃದ್ಧಿ ಪಡಿಸಿ, ಕೃತಿಗಳನ್ನು ಓದುಗರ ಮನೆಬಾಗಿಲಿಗೇ ತಲುಪಿಸುವ ಪ್ರಯತ್ನಕ್ಕೆ ಒಳ್ಳೆಯ ಸ್ಪಂದನೆಯೇ ದೊರೆಯಿತು. ಅಮೆಜಾನ್, ಫ್ಲಿಪ್​ಕಾರ್ಟ್​ಗಳಂಥ ಜಾಲತಾಣಗಳಿಂದ ಜನರು ದಿನಸಿ ಮಾತ್ರವಲ್ಲ ತಮಗೆ ಇಷ್ಟವಾಗುವ ಪುಸ್ತಕಗಳನ್ನೂ ಖರೀದಿಸತೊಡಗಿದರು. ಲಾಕ್​ಡೌನ್ ಅವಧಿಯಲ್ಲಿ ಸಾಕಷ್ಟು ಸಮಯ ಇದ್ದಿದ್ದರಿಂದ ಆಸಕ್ತರು ಗಂಭೀರ ಓದಿಗೆ ತೊಡಗಿಕೊಂಡರು. ಸಾಮಾಜಿಕ ಜಾಲತಾಣ ಗಳಲ್ಲಿಯೂ ಪುಸ್ತಕ ಪರಿಚಯ, ಕೃತಿ ವಿಶ್ಲೇಷಣೆಯಂಥ ಕಾರ್ಯಕ್ರಮಗಳು ಜನಪ್ರಿಯವಾದವು.

ಬೀಗ ತೆರೆದ ಮೇಲೆ...

ಲಾಕ್​ಡೌನ್ ಮುಗಿದ ಬಳಿಕ ಒಂದೊಂದೇ ಕ್ಷೇತ್ರಗಳು ಸಾಮಾನ್ಯ ಸ್ಥಿತಿಗೆ ಮರಳಿದವು. ಆದರೆ, ಪುಸ್ತಕ ಸಂಸ್ಕೃತಿ ಮರುಚೈತನ್ಯ ಪಡೆಯಲು ಒಂದಿಷ್ಟು ಸಮಯ ಬೇಕಾಯಿತು. ಸಮಾಧಾನದ ಸಂಗತಿ ಎಂದರೆ ಕರೊನಾ ಸಂಬಂಧಿತ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಲೇ ಮತ್ತೆ ಪುಸ್ತಕ ಬಿಡುಗಡೆಯ ಸಮಾರಂಭಗಳು ಆಯೋಜನೆಯಾಗುತ್ತಿವೆ. ರಾಜಧಾನಿ ಬೆಂಗಳೂರು ಮಾತ್ರವಲ್ಲ, ಸಾಂಸ್ಕೃತಿಕ ನಗರಿ ಮೈಸೂರು, ಧಾರವಾಡ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಸೇರಿ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಕಳೆದ ಒಂದೂವರೆ ತಿಂಗಳಿಂದ ಪುಸ್ತಕ ಬಿಡುಗಡೆಯ ಸಂಭ್ರಮ ಮರುಕಳಿಸಿದೆ. ಖ್ಯಾತ ಸಾಹಿತಿಗಳ, ಉದಯೋನ್ಮುಖ ಬರಹಗಾರರ ಪುಸ್ತಕಗಳು ಮಾರುಕಟ್ಟೆಗೆ ಬರುತ್ತಿವೆ. ಅದು ಕೂಡ, ಸಮಾರಂಭಗಳ ಮುಖೇನ. ಹೀಗೆ ಮಾಡುವುದರಿಂದ ಯಾವೆಲ್ಲ ಪುಸ್ತಕ ಬಿಡುಗಡೆಯಾಗಿವೆ ಎಂಬ ಸಮಗ್ರ ಮಾಹಿತಿ, ಅದರ ಓದಿನ ಪ್ರಯೋಜನ, ಖರೀದಿಯ ಬಗೆ, ಆಸಕ್ತರಿಗೆ ತಲುಪಿಸುವ ವಿಧಾನ ಸೇರಿ ಹಲವು ಸಂಗತಿಗಳು ಸ್ಪಷ್ಟವಾಗಿ ಗೊತ್ತಾಗುತ್ತವೆ. ಮಾರ್ಚ್​ನಲ್ಲಿ ಆರ್ಥಿಕ ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಬಹುತೇಕ ಪ್ರಕಾಶಕರು ಅಕ್ಟೋಬರ್​ನಿಂದ ಜನವರಿ ಕೊನೆಯವರೆಗೆ ಹೊಸ ಶೀರ್ಷಿಕೆಗಳಲ್ಲಿ ಪುಸ್ತಕಗಳನ್ನು ತರಲು ಉತ್ಸುಕರಾಗಿದ್ದಾರೆ. ಈ ನಿಟ್ಟಿನಲ್ಲಿ ಪೂರಕ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಆನ್​ಲೈನ್ ಸಮಾರಂಭಗಳನ್ನು ಜನರು ಒಪ್ಪಿಕೊಂಡಿದ್ದಾರೆ ನಿಜ. ಆದರೆ, ಪುಸ್ತಕ ಬಿಡುಗಡೆ ಸಮಾರಂಭದ ಸಂಭ್ರಮವೇ ಅನನ್ಯ. ಅದರಿಂದ ಪುಸ್ತಕ ಮಾರಾಟಕ್ಕೆ ಅನುವಾಗುತ್ತದೆ ಎಂಬ ಸಂಗತಿ ಜತೆಗೆ ನಮ್ಮ ಓದುವ ಸಂಸ್ಕೃತಿಗೆ ಜೀವ ಬರುತ್ತದೆ. ಒಳ್ಳೆಯ ಕೃತಿಗಳ ಮೌಲ್ಯ ಏನು ಎಂಬುದು ಜನರಿಗೆ ಅರಿವಾಗುತ್ತದೆ. ಲೇಖಕರು, ಪ್ರಕಾಶಕರು ಹಾಕಿದ ಶ್ರಮ ಸಾರ್ಥಕತೆ ಕಾಣುವ ಕ್ಷಣವದು. ಬಿಡುಗಡೆ ಸಮಾರಂಭದಲ್ಲಿ ದೊರೆತ ಸ್ಪಂದನೆಯ ಆಧಾರದ ಮೇಲೆ ಪುಸ್ತಕ ಮತ್ತಷ್ಟು ಜನರಿಗೆ ತಲುಪಲು ಅನುವಾಗುತ್ತದೆ.| ಮುರಳಿ ವಸಂತ ಪ್ರಕಾಶನಆನ್​ಲೈನ್ ವೇದಿಕೆಗಳ ಮೂಲಕ ಓದುಗರ ಸಂಖ್ಯೆ ಹೆಚ್ಚಿದೆ ಎಂಬುದರಲ್ಲಿ ಅನುಮಾನವಿಲ್ಲ. ಕರೊನಾ ಕಾಲ ಪ್ರಕಾಶಕರಿಗೂ ಸಾಕಷ್ಟು ಹೊಸ ಸಂಗತಿ ಕಲಿಸಿಕೊಟ್ಟಿದೆ. ಆದರೆ, ಸಮಾರಂಭದ ನಿಮಿತ್ತ ಸಮಾನಮನಸ್ಕರು ಒಟ್ಟಿಗೆ ಸೇರುತ್ತೇವೆ. ಪುಸ್ತಕ ಬಿಡುಗಡೆಯ ಸಮಾರಂಭಗಳಲ್ಲಿ ದೊರೆಯುವ ಚಿಂತನೆಗಳು, ಪ್ರೇರಣೆಗಳ ಪರಿಣಾಮ ಅದೆಷ್ಟೋ ಜನರ ಬದುಕಿನ ಹಾದಿಯೂ ಸಕಾರಾತ್ಮಕವಾಗಿ ಬದಲಾಗಿದ್ದಿದೆ. ಓದನ್ನು ದ್ವೇಷಿಸುವವರು ಪುಸ್ತಕಪ್ರೇಮಿಗಳಾಗಿ ಬದಲಾದ ನಿದರ್ಶನಗಳಿವೆ. ಕರೊನಾ ಹೊತ್ತಲ್ಲಿ ಈ ಚಟುವಟಿಕೆಗಳೆಲ್ಲ ಸ್ತಬ್ಧವಾಗಿದ್ದರಿಂದ ವಾಣಿಜ್ಯಾತ್ಮಕವಾಗಿ ಅಷ್ಟೇ ಅಲ್ಲ ಸಾಂಸ್ಕೃತಿಕವಾಗಿಯೂ ದೊಡ್ಡ ಹಾನಿಯಾಗಿದೆ. ಈಗ ಜನರು ಭಯ ತೊರೆದು. ಎಚ್ಚರಿಕೆ ವಹಿಸಿ ಮುಂಚಿನಂತೆ ಇಂಥ ಸಮಾರಂಭಗಳಿಗೆ ಹಾಜರಾಗಬೇಕು.| ಪರಶಿವಪ್ಪ ಸ್ನೇಹ ಬುಕ್ ಹೌಸ್ಓದಿನ ಸಂಭ್ರಮ ಹೇಗೆ ವಿಶಿಷ್ಟವೋ, ಹಾಗೆಯೇ ಪುಸ್ತಕ ಬಿಡುಗಡೆ ಸಮಾರಂಭಗಳ ಸಡಗರವೂ ಅನನ್ಯ. ಅಲ್ಲಿ ಮಾತು, ವಿಚಾರಗಳ ವಿನಿಮಯ, ಹೊಸಮುಖಗಳ, ಆತ್ಮೀಯರ ಭೇಟಿ ಎಲ್ಲವೂ ಸಾಧ್ಯವಾಗುತ್ತದೆ. ಆನ್​ಲೈನ್​ನಲ್ಲಿ ಭಾಷಣ ಮಾಡುವುದೆಂದರೆ ಭಾರಿ ಪ್ರಯಾಸ. ಎದುರಿನವರ ಪ್ರತಿಕ್ರಿಯೆ ತಿಳಿಯುವುದಿಲ್ಲ. ನಾವು ಹೇಳಿದ್ದನ್ನು ಅವರು ಹೇಗೆ ಗ್ರಹಿಸುತ್ತಾರೋ ಗೊತ್ತಾಗುವುದಿಲ್ಲ. ಸಮಾರಂಭಗಳಲ್ಲಿ ಆ ಸಮಸ್ಯೆ ಇಲ್ಲ. ಜತೆಗೆ, ಕಾರ್ಯಕ್ರಮ ಮುಗಿದ ಮೇಲೆ ಹಳೆಯ ವಿದ್ಯಾರ್ಥಿಯೋ, ಗೆಳತಿಯೋ ಭೇಟಿಯಾಗಿ, ಮುಖ ಅರಳಿಸಿದಾಗ ಸಿಗುವ ಸಮಾಧಾನವೇ ಬೇರೆ.| ಭುವನೇಶ್ವರಿ ಹೆಗಡೆ ಖ್ಯಾತ ಹಾಸ್ಯ ಸಾಹಿತಿ

ಸಮಾರಂಭಗಳ ಪ್ರಯೋಜನಗಳು

  • ಲೇಖಕರು, ಪ್ರಕಾಶಕರು, ಓದುಗರ ನಡುವೆ ನಿಕಟ ಸಂವಹನ.
  • ಬಿಡುಗಡೆ ಸ್ಥಳದಲ್ಲಿ ನೂರಾರು ಪ್ರತಿಗಳ ಮಾರಾಟ.
  • ಲೇಖಕರು-ಓದುಗರ ನಡುವಿನ ಅಂತರ ದೂರ.
  • ಪ್ರಕಾಶಕರಿಗೆ ಉತ್ತೇಜನ, ಪುಸ್ತಕೋದ್ಯಮಕ್ಕೆ ಬಲ.
  • ಹೊಸ ಬರಹಗಾರರಿಗೂ ಪ್ರೋತ್ಸಾಹ.
  • ಗಣ್ಯರ ಸಮ್ಮುಖದಲ್ಲಿ ಕೃತಿ ಬಿಡುಗಡೆ ಆಗುವುದರಿಂದ ಲೇಖಕ, ಪ್ರಕಾಶಕರಿಗೆ ಧನ್ಯತೆ.
  • ಹೊಸ ಓದುಗರನ್ನು ಸೃಷ್ಟಿಸಲು ಅನುಕೂಲ.
  • ಹೊಸ ಚಿಂತನೆ, ಹೊಸ ಹೊಳಹು, ಸಕಾರಾತ್ಮಕ ಚಿಂತನೆಗಳ ಸಂಗಮ.
  • ಕಾರ್ಯಕ್ರಮ ಮತ್ತು ಅದರ ಪರಿಣಾಮ ದೀರ್ಘಾವಧಿಯವರೆಗೆ ನೆನಪಿನಲ್ಲಿ ಇರುತ್ತದೆ.
  • ಹೊಸ ಪರಿಚಯ, ಸ್ನೇಹ, ಬಾಂಧವ್ಯ ಗಟ್ಟಿ.
  • ಜನರು ಒಟ್ಟಿಗೆ ಸೇರುವುದರಿಂದ ಭಾವನೆಗಳ ವಿನಿಮಯ.
  • ವಾಣಿಜ್ಯ ದೃಷ್ಟಿಯಿಂದ ಹಾಲ್​ಗಳಿಗೆ ಲಾಭ. ಉಡುಗೊರೆ, ಪುಷ್ಪ, ದರ್ಶಿನಿ ಸೇರಿ ಹಲವು ವ್ಯಾಪಾರಿಗಳಿಗೆ ಅನುಕೂಲ.