ಅಂಕಣ

ತ್ಯಾಗ, ಬಲಿದಾನದ ಸಂಕೇತದ ಹಬ್ಬ: ಇಂದು ಬಕ್ರೀದ್

Webdesk - Ravikanth
ತ್ಯಾಗ ಎಂದರೆ ಪ್ರಾಣಾರ್ಪಣೆ ಎಂಬುದು ಹೆಚ್ಚಿನವರ ಭಾವನೆಯಾಗಿದೆ. ಅದು ಸರಿಯಲ್ಲ. ತತ್ತ್ವಾದರ್ಶಗಳ ಹೆಸರಲ್ಲಿ ಸಾಯಲು ಸಿದ್ಧರಿರುವವರಿಗೆ ಆ ಪ್ರಕಾರ ಬದುಕಲಾಗುವುದಿಲ್ಲ. ತತ್ತ್ವಾದರ್ಶಗಳಿಗೆ ಬದ್ಧರಾಗಿ ದೇಹೇಚ್ಛೆಯ ವಿರುದ್ಧ ಹೋರಾಡುವುದೇ ನೈಜತ್ಯಾಗ.

ತ್ಯಾಗ, ಬಲಿದಾನದ ಹಬ್ಬ ಈದುಲ್ ಅಝ್ಹಾ ಆಗತವಾಗಿದೆ. ಬಕ್ರೀದ್ ಅಥವಾ ಈದುಲ್ ಅಝ್ಹಾ ಹಬ್ಬವು ಪ್ರವಾದಿ ಇಬ್ರಾಹೀಮ್ ಅವರ ಪತ್ನಿ ಹಾಜಿರಾ ಹಾಗೂ ಪುತ್ರ ಇಸ್ಮಾಈಲ್ ಅವರ ತ್ಯಾಗ, ಬಲಿದಾನದ ಸ್ಮರಣೆಯ ಹಬ್ಬವಾಗಿದೆ. ವಿಶ್ವದೆಲ್ಲೆಡೆಯಿಂದ ಲಕ್ಷಾಂತರ ಜನರು ಹಜ್ ಕರ್ಮ ನಿರ್ವಹಿಸಲು ಮಕ್ಕಾದತ್ತ ಪ್ರಯಾಣ ಬೆಳೆಸುತ್ತಾರೆ. ಇದು ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲಿ ಒಂದು. ಆರ್ಥಿಕವಾಗಿ ಸಾಮರ್ಥ್ಯವಿರುವವರು ಜೀವನದಲ್ಲಿ ಒಂದು ಬಾರಿಯಾದರೂ ಹಜ್ ನಿರ್ವಹಿಸಲೇಬೇಕು. ಆದರೆ ಬಡವರಿಗೆ ಇದು ಕಡ್ಡಾಯವಲ್ಲ. ಇಸ್ಲಾಮಿನಲ್ಲಿ ಹಜ್​ಗೆ ಯಾಕೆ ಕಡ್ಡಾಯವೆನಿಸುವಷ್ಟು ಪ್ರಾಮುಖ್ಯ ನೀಡಲಾಗಿದೆ ಎಂದು ನೋಡುವಾಗ ಇಬ್ರಾಹೀಮರ ಬದುಕಿನತ್ತ ನೋಟ ಹರಿಸಬೇಕಾಗುತ್ತದೆ.

ಪ್ರವಾದಿ ಇಬ್ರಾಹೀಮರು ಬಾಲ್ಯ ಮತ್ತು ಯೌವನದಲ್ಲಿ ಬಹಳ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿತ್ತು. ದೇವನು ನೀಡಿದ ಹಲವಾರು ಸತ್ವಪರೀಕ್ಷೆಗಳನ್ನು ಎದುರಿಸಿ ಜಯಶಾಲಿಯಾಗಿ ದೇವ ಸಂಪ್ರೀತಿಗೆ ಪಾತ್ರರಾದರು. ಹಾಗಾದರೆ ಅಂತಹ ಸತ್ವಪರೀಕ್ಷೆಗಳು ಏನಿರಬಹುದೆಂಬ ಕುತೂಹಲ ಮೂಡುವುದು ಸಹಜ. ಒಂದು ದಿನ ಮಕ್ಕಾದ ಮರುಭೂಮಿಯ ನಿರ್ಜನ ಪ್ರದೇಶವೊಂದರಲ್ಲಿ ಪತ್ನಿ ಹಾಜಿರಾ ಹಾಗೂ ಪುತ್ರ ಇಸ್ಮಾಈಲ್​ರನ್ನು ತೊರೆದು ಬರುವಂತೆ ದೇವನು ಕನಸಿನಲ್ಲಿ ಆದೇಶಿಸಿದನು. ಅದರಂತೆ ಅವರು ಪತ್ನಿ ಮತ್ತು ಹಸುಳೆಯನ್ನು ಮಕ್ಕಾದ ಮರುಭೂಮಿಯ ನಿರ್ಜನ ಪ್ರದೇಶದಲ್ಲಿ ತೊರೆದು ಬಂದರು. ಅವರು ಹಿಂದಿರುಗಿ ಹೋಗುವಾಗ, ಪತ್ನಿ ಕಪು್ಪವರ್ಣೀಯ ಗುಲಾಮ ಮಹಿಳೆ ಹಾಜಿರಾ ‘ತಾವು ನಮ್ಮನ್ನೇಕೆ ಇಲ್ಲಿ ತೊರೆದು ಹೋಗುತ್ತೀರಿ’ ಎಂದು ಕೇಳುತ್ತಾರೆ. ಆಗ ಇಬ್ರಾಹೀಮರು ‘ದೇವಾಜ್ಞೆಯ ಪ್ರಕಾರ ನಾನು ನಿಮ್ಮನ್ನು ಬಿಟ್ಟು ಹೊರಡುತ್ತಿದ್ದೇನೆ’ ಎನ್ನುತ್ತಾರೆ. ‘ಹಾಗಾದರೆ ಸರಿ. ದೇವನ ಆದೇಶವಲ್ಲವೇ’ ಎಂದು ಹೇಳಿ ಹಾಜಿರಾ ಕಳುಹಿಸುತ್ತಾರೆ. ದೇವನ ಮೇಲೆ ಅವರಿಗೆ ಅಚಂಚಲವಾದ ಭರವಸೆಯಿತ್ತು. ಇಬ್ರಾಹೀಮರು ಹೊರಟರು. ಇದು ಇಬ್ರಾಹೀಮ್ ಹಾಜಿರಾ ಈರ್ವರಿಗೂ ಸತ್ವಪರೀಕ್ಷೆಯಾಗಿತ್ತು. ಸಂತಾನರಹಿತರಾಗಿದ್ದಾಗ ದೇವಾನುಗ್ರಹದಂತೆ ವೃದ್ಧಾಪ್ಯದಲ್ಲಿ ದೊರೆತ ಮಗುವನ್ನು ದೇವನಾದೇಶಕ್ಕೆ ತಲೆಬಾಗಿ ಬಿಟ್ಟು ಬರುವ ಪರಿಸ್ಥಿತಿ. ನಿರ್ಜನವಾದ ಆ ಮರುಭೂಮಿಯಲ್ಲಿ ಹಸುಳೆಯೊಂದಿಗೆ ಹಾಜಿರಾ ದೃಢಚಿತ್ತರಾಗಿ ಕಳೆಯುತ್ತಾರೆ. ಅಲ್ಲಿ ಯಾವ ನರಪಿಳ್ಳೆಯೂ ಇರಲಿಲ್ಲ. ಯಾವುದಾದರೂ ಪ್ರಾಣಿ ಆಕ್ರಮಣ ಮಾಡುವ ಸಾಧ್ಯತೆಯಿತ್ತು. ತಂದಿದ್ದ ಆಹಾರ, ಖರ್ಜೂರಗಳು ಮುಗಿಯುತ್ತಾ ಬಂದವು. ಚರ್ಮದ ಚೀಲದಲ್ಲಿ ತಂದಿದ್ದ ನೀರು ಕೂಡಾ ಮುಗಿಯಿತು. ಮಗು ಅಳಲಾರಂಭಿಸಿತು. ಅಸಹನೀಯವಾದ ದಾಹ-ಹಸಿವಿನಿಂದ ಮಗು ಅತ್ತು ಚಡಪಡಿಸುತ್ತಿತ್ತು. ಹಾಜಿರಾ ಪ್ರಾರ್ಥಿಸಿದರು. ಸುತ್ತಮುತ್ತ ನೀರಿಗಾಗಿ ಹುಡುಕಾಡಿದರು. ಎತ್ತ ಕಡೆ ನೋಡಿದರೂ ನೀರು, ಆಹಾರ ಸಿಗುವ ಸಾಧ್ಯತೆಯಿರಲಿಲ್ಲ. ಸಫಾ ಮತ್ತು ಮರ್ವಾ ಬೆಟ್ಟದ ನಡುವೆ ಓಡುತ್ತಾ ನೀರನ್ನು ಹುಡುಕಾಡಿದರು. ಗಂಟಲ ಪಸೆ ಆರಿತು. ಹಸುಳೆಯ ದಾಹ ತಣಿಸಲು ಹನಿ ನೀರನ್ನು ಅರಸುತ್ತಾ ಹೀಗೇ ಏಳು ಬಾರಿ ಈ ಬೆಟ್ಟಗಳ ನಡುವೆ ಓಡುತ್ತಾರೆ. ಹೀಗೆ ಓಡಿ ಸುಸ್ತಾಗಿ ಮರಳಿ ಬರುವಾಗ ಆ ದೃಶ್ಯ ಕಂಡು ಅವರು ಬೆರಗಾಗುತ್ತಾರೆ. ದೇವನನ್ನು ಸ್ಮರಿಸಿ ಸ್ತುತಿಸುತ್ತಾರೆ. ಅವರು ದೇವನ ಮೇಲೆ ಇಟ್ಟಿದ್ದ ಭರವಸೆಯು ಈಡೇರಿತ್ತು. ಹೌದು ಇಸ್ಮಾಈಲ್ ಎಂಬ ಆ ಹಸುಳೆಯು ಅಳುತ್ತಾ ಕಾಲು ಬಡಿದ ಸ್ಥಳದಲ್ಲಿ ನೀರು ಚಿಮ್ಮಿ ಹರಿಯುತ್ತಿದೆ. ಆ ನೀರನ್ನು ಬೊಗಸೆಯಲ್ಲಿ ತೆಗೆದು ಮಗುವಿಗೆ ಕುಡಿಸಿ ತನ್ನ ದಾಹವನ್ನೂ ತಣಿಸುತ್ತಾರೆ. ನೀರು ಚಿಮ್ಮುತ್ತಾ ಹರಿಯುತ್ತಲೇ ಇತ್ತು. ಆಗ ತನಗರಿವಿಲ್ಲದೆ ಝುಮ್ ಝುಮ್ ಎನ್ನುತ್ತಾರೆ. ಝುಮ್ ಝುಮ್ ಎಂದರೆ ‘ನಿಲ್ಲು ನಿಲ್ಲು’ ಎಂದರ್ಥ. ಹೀಗೆ ಅವರು ದೇವನ ಸತ್ವಪರೀಕ್ಷೆಯಲ್ಲಿ ವಿಜಯಿಯಾಗುತ್ತಾರೆ. ಹಾಜಿರಾ ಎಂಬ ಆ ಕಪು್ಪವರ್ಣೀಯ ಗುಲಾಮ ಮಹಿಳೆಗೆ ಇಸ್ಲಾಮಿನಲ್ಲಿ ಮಹತ್ತರವಾದ ಸ್ಥಾನ ಕಲ್ಪಿಸಲಾಗಿದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಮಾಡಿದ ಆ ಮಹಾತ್ಯಾಗದ ಸ್ಮರಣೆಯನ್ನು ಹಜ್ ಯಾತ್ರಾರ್ಥಿಗಳು ಇಂದಿಗೂ ನಿರ್ವಹಿಸುತ್ತಾರೆ. ದೇವನ ಮೇಲೆ ಇಟ್ಟ ಭರವಸೆಗಾಗಿ ಅದರ ಸ್ಮರಣೆಯನ್ನು ಲೋಕಾಂತ್ಯದವರೆಗೂ ದೇವನು ನೆಲೆ ನಿಲ್ಲಿಸುತ್ತಾನೆ. ಹಜ್ ಯಾತ್ರಾರ್ಥಿಗಳು ಹಾಜಿರಾರ ಆ ನಿಷ್ಕಳಂಕತೆಯ ಓಟದ ನೆನಪಿಗಾಗಿ ಸಫಾ ಮತ್ತು ಮರ್ವಾ ಬೆಟ್ಟದ ನಡುವೆ ಏಳು ಬಾರಿ ಓಡುತ್ತಾರೆ. ಹಜ್ ಕರ್ಮದಲ್ಲಿ ಇದು ಕಡ್ಡಾಯವಾಗಿದೆ. ಈ ಓಟಕ್ಕೆ ‘ಸಅಯ್’ ಎನ್ನಲಾಗುತ್ತದೆ. ದೇವನ ಮೇಲೆ ಇರಿಸಿದ ಅಚಂಚಲವಾದ ಭರವಸೆಯು ಅವರನ್ನು ಈ ಹಂತಕ್ಕೆ ತಲುಪಿಸಿತ್ತು. ಪ್ರಾರ್ಥನೆ ಮತ್ತು ಪ್ರಯತ್ನಕ್ಕೆ ಪ್ರತಿಫಲ ದೊರೆಯುತ್ತದೆ ಎಂಬುದರ ನಿದರ್ಶನವಾಗಿದೆ. ‘ಝುಮ್ ಝುಮ್ ಎಂಬ ಆ ನೀರಿನ ಒರತೆ ಇಂದಿಗೂ ಪವಾಡ ಸದೃಶವಾಗಿದೆ. ಅದನ್ನು ಇಂದಿಗೂ ಕಾಣಬಹುದು. ಲಕ್ಷಾಂತರ ಹಾಜಿಗಳು ಆ ಪವಿತ್ರ ಜಲದಲ್ಲಿ ತಮ್ಮ ದಾಹವನ್ನು ತಣಿಸುತ್ತಾರೆ. ಅದು ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳ ಮುಖಾಂತರ ವಿಶ್ವದಾದ್ಯಂತ ತಲುಪುತ್ತಿದೆ.

ಬದುಕಿನಲ್ಲಿ ಹಲವಾರು ಸತ್ವಪರೀಕ್ಷೆಯನ್ನು ಜಯಿಸಿದ ಪ್ರವಾದಿ ಇಬ್ರಾಹೀಮರಿಗೆ ಮತ್ತೊಂದು ಪರೀಕ್ಷೆ ಎದುರಾಗುತ್ತದೆ. ತನಗೆ ಆಸರೆಯಾಗಬೇಕಾಗಿದ್ದ ಪುತ್ರ ಇಸ್ಮಾಈಲ್​ರನ್ನು ಬಲಿಯರ್ಪಿಸಬೇಕೆಂಬ ಕನಸೊಂದು ಅವರಿಗೆ ಬೀಳುತ್ತದೆ. ಇದರಿಂದ ಧರ್ಮಸಂಕಟಕ್ಕೆ ಬಿದ್ದ ಇಬ್ರಾಹೀಮರು ಸಾಮಾನ್ಯವಾಗಿ ಬಿದ್ದ ಕನಸೆಂದು ಬಗೆದು ಸುಮ್ಮನಿರಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಇದು ಸಾಮಾನ್ಯ ಕನಸಲ್ಲ; ದೇವನಿಂದಲೇ ಒದಗಿ ಬಂದ ಕನಸು ಎಂಬುದನ್ನು ಮನಗಂಡರು. ಒಂದೆಡೆ ಪುತ್ರವಾತ್ಸಲ್ಯ; ಮತ್ತೊಂದೆಡೆ ದೇವನಾದೇಶದ ಪಾಲನೆ ಗೊಂದಲಕ್ಕೆ ಬೀಳದೆ ದೃಢನಿರ್ಧಾರ ಮಾಡಿದರು. ಪುತ್ರವಾತ್ಸಲ್ಯವನ್ನು ಬದಿಗೊತ್ತಿದರು. ಮಗನೊಂದಿಗೆ ತಾನು ಕಂಡ ಕನಸನ್ನು ವಿವರಿಸಿದರು. ಆಗ ಪುತ್ರ ಇಸ್ಮಾಈಲ್ ‘ಬೇಡಪ್ಪಾ ನೀವು ಸುಮ್ಮನಿರಿ’ ಎಂದು ಹೇಳಲಿಲ್ಲ. ಬದಲಾಗಿ ‘ದೇವನ ಆದೇಶವಲ್ಲವೇ ಪಾಲನೆಗೆ ನಾನು ಸಿದ್ಧ. ತಮ್ಮ ಕನಸನ್ನು ಸಾಕ್ಷಾತ್ಕಾರಗೊಳಿಸಿರಿ’ ಎನ್ನುತ್ತಾರೆ. ಅಪ್ಪನಿಗೆ ತಕ್ಕ ಮಗನಾಗಿ ಹೊಳೆಯುತ್ತಾರೆ. ಮಗನ ಉತ್ತರವು ಪ್ರವಾದಿ ಇಬ್ರಾಹೀಮರ ಮೇಲೆ ಇನ್ನಷ್ಟು ಪ್ರಭಾವ ಬೀರುತ್ತದೆ. ತಮ್ಮ ಕನಸಿನ ಸಾಕ್ಷಾತ್ಕಾರಕ್ಕಾಗಿ ಸಿದ್ಧರಾಗುತ್ತಾರೆ. ಮಗನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅಧೋಮುಖವಾಗಿ ಮಲಗಿಸುತ್ತಾರೆ. ಬಲಿಗೆ ಸಿದ್ಧರಾದ ಇಸ್ಮಾಈಲರು ಕೊರಳನ್ನು ತೋರಿಸುತ್ತಾರೆ. ಹರಿತವಾದ ಕತ್ತಿಯನ್ನು ತೆಗೆದು ಕೊಯ್ಯಲಾರಂಭಿಸುತ್ತಾರೆ. ಆದರೆ ಕೊರಳು ಮಾತ್ರ ಸೀಳಾಗುವುದಿಲ್ಲ. ಆಗ ಅಶರೀರವಾಣಿಯೊಂದು ಮೊಳಗುತ್ತದೆ, ‘ಓ ಇಬ್ರಾಹೀಮ್ ನೀವು ಕನಸನ್ನು ಸಾಕ್ಷಾತ್ಕಾರಗೊಳಿಸಿ ತೋರಿಸಿದಿರಿ. ಆ ತ್ಯಾಗದ ಸಂಕೇತವಾಗಿ ಒಂದು ಟಗರನ್ನು ಬಲಿ ನೀಡಿರಿ’ ಎಂದು ದೇವನು ಆದೇಶಿಸುತ್ತಾನೆ. ಅಲ್ಲಿ ಟಗರೊಂದು ಪ್ರತ್ಯಕ್ಷವಾಗುತ್ತದೆ. ಅದನ್ನು ಬಲಿಯರ್ಪಿಸುವ ಮೂಲಕ ಆ ಕನಸು ಸಾಕಾರವಾಗುತ್ತದೆ. ಅಲ್ಲಿ ನಿಜವಾಗಿ ಬೇಕಾದದ್ದು ಇಸ್ಮಾಈಲರ ರಕ್ತ ಅಥವಾ ಮಾಂಸವಾಗಿರಲಿಲ್ಲ. ಅವರ ದೇವನಿಷ್ಠೆಯಾಗಿತ್ತು. ಇಬ್ರಾಹೀಮರ ಅರ್ಪಣಾ ಮನೋಭಾವ ಅಲ್ಲಿ ಮೇಳೈಸಿತ್ತು. ಪುತ್ರ ಇಸ್ಮಾಈಲರ ಅನುಸರಣೆಯೂ ಅಲ್ಲಿ ಪ್ರಜ್ವಲಿಸಿತ್ತು. ಈ ತ್ಯಾಗ, ಬಲಿದಾನದ ಸಂಕೇತವಾಗಿ ವಿಶ್ವದ ಮುಸ್ಲಿಮರೆಲ್ಲರೂ ಬಕ್ರೀದ್​ನಂದು ಸಾಮೂಹಿಕವಾಗಿ ಪ್ರಾಣಿಬಲಿ ನೀಡುತ್ತಾರೆ. ಈ ಬಲಿ ನೀಡಿದ ಜಾನುವಾರಿನ ರಕ್ತವಾಗಲೀ, ಮಾಂಸವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆತನ ದೇವನಿಷ್ಠೆ ಮತ್ತು ದೇವಭಕ್ತಿ ಮಾತ್ರ ದೇವನನ್ನು ತಲುಪುತ್ತದೆ ಎಂದು ಪವಿತ್ರ ಕುರ್​ಆನ್ ಸ್ಪಷ್ಟಪಡಿಸುತ್ತದೆ. ನಮ್ಮ ಬದುಕಿನ ಎಲ್ಲಾ ಘಟ್ಟದಲ್ಲಿಯೂ ಮಾದರಿಯಾಗಿ ತ್ಯಾಗಕ್ಕೆ ಸಿದ್ಧರಾಗಬೇಕೆಂಬ ಸಂದೇಶವನ್ನು ಈದುಲ್ ಅಝ್ಹಾ ನೀಡುತ್ತದೆ.

ನಿಜವಾಗಿ ಇಲ್ಲಿ ತ್ಯಾಗ ಎಂದರೇನು ಎಂಬುದರ ಬಗ್ಗೆ ನಾವು ಚಿಂತಿಸಬೇಕು. ತ್ಯಾಗ ಎಂದರೆ ಪ್ರಾಣಾರ್ಪಣೆ ಎಂಬುದು ಹೆಚ್ಚಿನವರ ಭಾವನೆಯಾಗಿದೆ. ಅದು ಸರಿಯಲ್ಲ. ತತ್ತಾ್ವದರ್ಶಗಳ ಹೆಸರಲ್ಲಿ ಸಾಯಲು ಸಿದ್ಧರಿರುವವರಿಗೆ ಆ ಪ್ರಕಾರ ಬದುಕಲಾಗುವುದಿಲ್ಲ. ತತ್ತಾ್ವದರ್ಶಗಳಿಗೆ ಬದ್ಧರಾಗಿ ದೇಹೇಚ್ಛೆಯ ವಿರುದ್ಧ ಹೋರಾಡುವುದೇ ನೈಜ ತ್ಯಾಗವಾಗಿದೆ. ಇಬ್ರಾಹೀಮರ ತ್ಯಾಗ ಅಂತಹದ್ದಾಗಿದೆ. ಜೀವನದ ಮುಸ್ಸಂಜೆಯಲ್ಲಿ ವರದಾನವಾಗಿ ದೊರೆತ ಮುದ್ದು ಮಗನನ್ನು ಬಲಿಯರ್ಪಿಸಬೇಕೆಂದು ದೇವನ ಆಜ್ಞೆ ಬಂದಾಗ ಕಿಂಚಿತ್ತೂ ಅಳುಕದೆ ಸಿದ್ಧರಾದರು. ಈ ಮೂಲಕ ನೈಜತ್ಯಾಗವೇನೆಂಬುದನ್ನು ಅವರು ವಿಶ್ವಕ್ಕೆ ಅರುಹಿದರು. ಪ್ರವಾದಿ ಇಬ್ರಾಹೀಮ್ ಅವರ ಪತ್ನಿ ಹಾಜಿರಾ ಮತ್ತು ಪುತ್ರ ಇಸ್ಮಾಈಲರ ತ್ಯಾಗದ ಪ್ರತೀಕವೇ ಈದುಲ್ ಅಝ್ಹಾ(ಬಕ್ರೀದ್) ಆಗಿದೆ.

(ಲೇಖಕರು ಪತ್ರಕರ್ತರು)