| ಭಾರತಿ ಎ. ಕೊಪ್ಪ
ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರವಾಗಿ ಕಾಣುವುದಿಲ್ಲ ಎಂಬ ಗಾಂಧೀಜಿಯವರ ನುಡಿಯಂತೆ, ಮಹಿಳೆಯರು ತಾವು ಮಾಡುವ ಪ್ರತಿ ಕೆಲಸವನ್ನೂ ತಮ್ಮ ಕರ್ತವ್ಯವೆಂದೇ ಭಾವಿಸುತ್ತಾರೆ. ಹಾಗಾಗಿ ಕುಟುಂಬ ನಿರ್ವಹಣೆಯಲ್ಲಿ ಬಹುಪಾಲು ಕೆಲಸವನ್ನು ಜವಾಬ್ದಾರಿಯುತವಾಗಿ ಯಾವುದೇ ಬೇಸರವಿಲ್ಲದೆ ನಿಭಾಯಿಸುತ್ತ ನೋವು ಮರೆತು ನಲಿವಿನಿಂದ ಮುನ್ನಡೆಯುತ್ತಾರೆ.
ಹಬ್ಬಗಳ ವಿಶೇಷ ದುಡಿಮೆ: ಕೃಷ್ಣ ಜನ್ಮಾಷ್ಟಮಿ, ಗಣೇಶನ ಹಬ್ಬ ಇಂತಹ ಹಬ್ಬಗಳಿಗೆ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಕೊಟ್ಟೆ ಕಡುಬು(ಮೂಡೆ) ಮಾಡುವುದು ಸಂಪ್ರದಾಯ. ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಮಹಿಳೆಯರು ಈ ಕಡುಬಿಗೆ ಬೇಕಾಗುವ ಎಲೆಯ ಕೊಟ್ಟೆಗಳನ್ನು ಮಾಡುವ ವಿಧಾನವನ್ನು ಕಲಿತೇ ಇರುವುದಿಲ್ಲ. ಇವುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿಯೇ ಹಬ್ಬದ ಸಂಪ್ರದಾಯ ಮಾಡಿಬಿಡುತ್ತಾರೆ. ಕೇದಗೆ ಎಲೆ, ಮುಂಡುಗ ಎಲೆ, ಬಾಳೆ ಎಲೆಯಿಂದ ಕೆಲವೆಡೆ ಮೂಡೆ ಮಾಡುತ್ತಾರೆ. ಕೆಲವೆಡೆ ಹಲಸಿನ ಎಲೆಯಿಂದ ಕೊಟ್ಟೆ ಮಾಡುತ್ತಾರೆ. ಇವುಗಳಲ್ಲಿ ಯಾವ ಎಲೆಯೇ ಆಗಿರಲಿ ಕೊಟ್ಟೆ ತಯಾರಿಸುವುದೊಂದು ವಿಶೇಷ ಕಲೆಯೇ ಆಗಿದೆ. ಈ ಕೊಟ್ಟೆಗಳನ್ನು ಮಾಡಲು ಕಲಿತ ಮಹಿಳೆಯರು ಹಬ್ಬದ ಸಂದರ್ಭದಲ್ಲಿ ಒಳ್ಳೆಯ ಹಣ ಸಂಪಾದನೆ ಮಾಡಬಹುದು. ಹೋಟೆಲ್ಗಳಲ್ಲೂ ಕೊಟ್ಟೆ ಕಡುಬು ಕೆಲವೆಡೆ ವಿಶೇಷ ತಿನಿಸು ಆಗಿದೆ. ಉತ್ತಮ ಶಿಕ್ಷಣ ಪಡೆದು ಸರ್ಕಾರಿ ನೌಕರಿ, ವಿಜ್ಞಾನ, ತಂತ್ರಜ್ಞಾನ ರಂಗದಲ್ಲಿ ದುಡಿಯುವ ಮಹಿಳೆಯರು ಮಾತ್ರ ಆರ್ಥಿಕವಾಗಿ ಸ್ವಾವಲಂಬನೆಯ ಜೀವನ ನಡೆಸುತ್ತಾರೆಂಬ ಅಭಿಪ್ರಾಯಗಳ ಹೊರತಾಗಿಯೂ, ಮನೆಯಲ್ಲೇ ತಮ್ಮ ಆಸಕ್ತಿಯ ಹವ್ಯಾಸ, ಕಲೆಗಳನ್ನು ಆರ್ಥಿಕ ಗಳಿಕೆಯ ಕ್ಷೇತ್ರಗಳನ್ನಾಗಿ ಬದಲಾಯಿಸಿಕೊಳ್ಳುವುದರಲ್ಲಿ ಹೆಂಗಳೆಯರ ಜಾಣ್ಮೆ ಅಡಗಿದೆ. ಶ್ರಮದಿಂದ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಆತ್ಮವಿಶ್ವಾಸವುಳ್ಳವರಿಗೆ ಅನೇಕ ಅವಕಾಶಗಳಿವೆ. ಮನೆಯಲ್ಲಿ ಬಿಡುವಿನ ಸಮಯವನ್ನು ಆರ್ಥಿಕವಾಗಿ ಸದೃಢಗೊಳಿಸುವತ್ತ ಬಳಸಿಕೊಂಡು ನಾರಿಯರು ಮುನ್ನಡೆಯಬೇಕಿದೆ.
ಮನೆಪಾಠವೆಂಬ ಆಪ್ತ ಕೆಲಸ: ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿರಲಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿರಲಿ ಮಗುವಿನ ಶೈಕ್ಷಣಿಕ ಮುನ್ನಡೆಗೆ ಮನೆಪಾಠ ಬೇಕೇ ಬೇಕೆಂಬ ಆಶಯ ಅನೇಕ ಪಾಲಕರದು. ಮಕ್ಕಳೊಂದಿಗೆ ಬೆರೆಯುವ, ಒಂದಿಷ್ಟು ತಾಳ್ಮೆಯಿಂದ ಪಾಠ ಹೇಳಿಕೊಡುವ ಇಚ್ಛಾಶಕ್ತಿಯುಳ್ಳ ಸುಶಿಕ್ಷಿತ ಮಹಿಳೆಯರು ಮನೆಪಾಠದಲ್ಲಿ ತೊಡಗುವುದು ಆರ್ಥಿಕವಾಗಿ ಕುಟುಂಬಕ್ಕೆ ಸಹಕಾರಿಯಾಗುತ್ತದೆ. ಗೃಹಿಣಿಯರಿಗೆ ಇದು ವಿರಾಮ ಕಾಲದ ಸದುಪಯೋಗವೂ ಹೌದು. ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಮನೆಯಲ್ಲಿ ದಿನವಿಡೀ ಒತ್ತಡದ ಕೆಲಸ ನಿರ್ವಹಿಸಿದ ಗೃಹಿಣಿಯರು ತಾಳ್ಮೆಯಿಂದ ಮನೆಪಾಠ ನಡೆಸಿ, ಅದರಿಂದ ಹಣ ಗಳಿಸುವುದು ಹಣಕಾಸಿನ ಅಗತ್ಯಕ್ಕೆ ಒಂದಿಷ್ಟು ಪೂರಕ ಗಳಿಕೆಯಾಗುತ್ತದೆ.
ಟೇಲರಿಂಗ್ ಮತ್ತು ಕಸೂತಿ: ಮಹಿಳೆಯರು ಮಾಡುವ ಅರೆಕಾಲಿಕ ಕೆಲಸಗಳಲ್ಲಿ ಟೇಲರಿಂಗ್ ಬಹಳ ಮುಖ್ಯವಾದುದು. ಪ್ರತಿ ಊರುಗಳಲ್ಲಿ ಟೇಲರ್ಗಳಿಗೆ ಉತ್ತಮ ಬೇಡಿಕೆ ಇದೆ. ಕುಟುಂಬದ ದೈನಂದಿನ ಕೆಲಸ ನಿರ್ವಹಿಸುತ್ತಾ ದುಡಿದು ಸಂಪಾದಿಸಲು ಬಯಸುವ ಮಹಿಳೆಯರಿಗೆ ಟೇಲರಿಂಗ್ ಸಹಾಯಕವಾಗಿದೆ. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಮ್ಮದೇಶದಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆ ಕೂಡ ಜಾರಿಗೆ ಬಂದಿದೆ. ಈಗ ಆಯ್ದ ರಾಜ್ಯಗಳಲ್ಲಿ ಮಾತ್ರ ಈ ಯೋಜನೆ ಜಾರಿಗೊಳಿಸಲಾಗಿದೆ. ಅವುಗಳಲ್ಲಿ ಕರ್ನಾಟಕವೂ ಒಂದು. ಉಚಿತ ಹೊಲಿಗೆ ಯಂತ್ರ ಯೋಜನೆ 2022ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರಾಜ್ಯಗಳ 50000 ಮಹಿಳೆಯರ ಅನುಕೂಲಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ. 20 ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಹೊಲಿಗೆ ಯಂತ್ರವನ್ನು ಪಡೆದು ಟೇಲರಿಂಗ್ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು.
ನಾನು ಒಂದು ಶಾಲೆಯ ಪೂರ್ವ ಪ್ರಾಥಮಿಕ ತರಗತಿಯ ಆಯಾ ಆಗಿ ದಿನಗೂಲಿ ನೌಕರಿ ಮಾಡುತ್ತಿದ್ದೇನೆ. ಕುಟುಂಬದ ನಿರ್ವಹಣೆಗೆ ಹೆಚ್ಚುವರಿ ದುಡಿಮೆಯ ಅಗತ್ಯ ಇದ್ದೇ ಇದೆ. ಮಲೆನಾಡಿನ ಗ್ರಾಮೀಣ ಮಹಿಳೆಯಾದ ನನಗೆ ಅಡಕೆ ಸುಲಿತದ ಸಮಯದಲ್ಲಿ ಹೆಚ್ಚುವರಿ ದುಡಿಮೆಗೆ ಅವಕಾಶವಾಗುತ್ತದೆ. ನವೆಂಬರ್ನಿಂದ ಸುಮಾರು ಮೂರು ತಿಂಗಳು ಅಡಕೆ ಸುಲಿತದ ಕೆಲಸ ದೊರೆಯುತ್ತದೆ. ಶಾಲಾ ಕೆಲಸದ ನಂತರ ರಾತ್ರಿ ಸುಮಾರು ಹತ್ತು ಗಂಟೆವರೆಗೆ ಅಡಕೆ ಬೆಳೆಗಾರರ ಮನೆಗಳಿಗೆ ತೆರಳಿ ಅಡಕೆ ಸುಲಿಯುತ್ತೇನೆ. ಕೊಯ್ಲು-ಸುಲಿತದ ಹಂಗಾಮು ಮುಗಿಯುವುದರೊಳಗೆ ಸರಿ ಸುಮಾರು 25 ಸಾವಿರ ರೂಪಾಯಿ ದುಡಿಮೆ ಮಾಡಬಹುದು. ಇದರಿಂದ ಕುಟುಂಬಕ್ಕೆ ಒಂದಿಷ್ಟು ಆರ್ಥಿಕವಾಗಿ ಸಹಕಾರಿಯಾಗುತ್ತದೆ. | ಶೋಭಾ ಮಂಜುನಾಥ ಸಣ್ಣಕೆರೆ, ಕೊಪ್ಪ, ಚಿಕ್ಕಮಗಳೂರು ಜಿಲ್ಲೆ
ಹತ್ತಿ ಬತ್ತಿ ಮಾಡುವುದು: ಪ್ರತಿನಿತ್ಯದ ದೇವರ ಪೂಜಾ ಸಮಯದಲ್ಲಿ ಬೆಳಗಿಸಲು, ಹಬ್ಬ ಹರಿದಿನಗಳಲ್ಲಿ, ಶುಭ ಕಾರ್ಯಗಳಲ್ಲಿ ಬೆಳಗಿಸಲು, ದೇವಾಲಯ-ಮಂದಿರಗಳಲ್ಲಿ ಬೆಳಗಿಸಲು ಭಾರತೀಯರು ಸಾಮಾನ್ಯವಾಗಿ ಹತ್ತಿ ಬತ್ತಿಗಳನ್ನು ಬಳಸುತ್ತಾರೆ. ಮನೆಯಲ್ಲೇ ಕುಳಿತು ಬಿಡುವಿನ ವೇಳೆಯಲ್ಲಿ ಹತ್ತಿ ಬತ್ತಿ ತಯಾರಿಸಿ ಮಾರಾಟ ಮಾಡಬಹುದು. ಕೆಲವು ವರ್ಷಗಳ ಹಿಂದೆ ಮಹಿಳೆಯರು ತಮ್ಮ ಕೈಗಳಿಂದ ಹತ್ತಿ ಬತ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈಗ ಬತ್ತಿ ತಯಾರಿಕೆಗೆ ಯಂತ್ರಗಳು ಲಭ್ಯವಿದೆ. ಹಸ್ತ ಚಾಲಿತ ಯಂತ್ರಗಳು, ಅರೆ-ಸ್ವಯಂ ಚಾಲಿತ ಯಂತ್ರಗಳು ಮತ್ತು ಡಿಜಿಟಲ್ ಯಂತ್ರಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮನೆಯಲ್ಲಿ ಇದನ್ನೊಂದು ಸಣ್ಣ ಉದ್ಯಮವಾಗಿ ಮಾಡಬಹುದು. ಆಧುನಿಕ ಯಂತ್ರಗಳ ಖರೀದಿಗೆ ಸರಿ ಸುಮಾರು 30ರಿಂದ 35 ಸಾವಿರ ಬಂಡವಾಳ ಹಾಕಬೇಕಾಗುತ್ತದೆ. ಮತ್ತು ಹತ್ತಿರದ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಪರವಾನಗಿ ಪಡೆಯಬೇಕಾಗುತ್ತದೆ. ತಯಾರಿಸಿದ ಹತ್ತಿಗಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು.
ಸ್ವಾವಲಂಬನೆಯ ಅಡಕೆ ಸುಲಿತದ ಕಾಯಕ: ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಯ ಅನೇಕ ಚಟುವಟಿಕೆಗಳು ಗ್ರಾಮೀಣ ಕಾರ್ವಿುಕರ, ದಿನಗೂಲಿ ನೌಕರರ ಜೀವನಾಧಾರವಾಗಿವೆ. ಮಲೆನಾಡು ಭಾಗದಲ್ಲಿ ಕೊರೆಯುವ ಚಳಿಯಲ್ಲೂ ಅಡಕೆ ಕೊಯ್ಲಿನ ಸಮಯವೆಂದರೆ ಗ್ರಾಮೀಣ ಕಾರ್ವಿುಕರಿಗೆ ಹೆಚ್ಚುವರಿ ದುಡಿಮೆಗೆ ಅವಕಾಶ ದೊರೆತಂತೆಯೇ ಸರಿ. ದಿನನಿತ್ಯದ ದುಡಿಮೆ, ಗೃಹ ನಿರ್ವಹಣೆ ಕೆಲಸ ಮುಗಿಸಿ ಸಂಜೆ ವೇಳೆಗೆ ಅಡಕೆ ಬೆಳೆಗಾರರ ಮನೆಗಳಿಗೆ ತೆರಳಿ ರಾತ್ರಿ ಹತ್ತು ಹನ್ನೊಂದು ಗಂಟೆ ತನಕವೂ ಅಡಕೆ ಸುಲಿಯುವ ಕೌಶಲಕ್ಕೊಂದು ಸಲಾಂ ಹೇಳಲೇಬೇಕು. ಓರಗೆಯ ಮಹಿಳೆಯರೆಲ್ಲ ಮಾತಿನ ಹರಟೆಯಲ್ಲಿ ತೊಡಗುತ್ತಾ, ಅಡಕೆ ಸುಲಿಯುವಾಗ ದಣಿವು ಸುಳಿಯುವುದೇ ಇಲ್ಲ. ನಿದ್ರೆ ಆವರಿಸುವುದೇ ಇಲ್ಲ. ಮಲೆನಾಡಿನ ಬಹುತೇಕ ಕಾರ್ವಿುಕ ಮಹಿಳೆಯರಿಗೆ ಈ ದುಡಿಮೆಯೇ ತಮ್ಮ ಕನಸಿನ ಗೃಹೋಪಯೋಗಿ ವಸ್ತು ಖರೀದಿಸಲು ಆಸರೆಯಾಗುತ್ತದೆ. ಕರಾವಳಿ ಭಾಗದ ಜಿಲ್ಲೆಗಳ ಅಡಕೆ ವರ್ಷಪೂರ್ತಿ ಸುಲಿದು ಸಂಗ್ರಹಿಸಬಹುದಾದದ್ದರಿಂದ ಅಲ್ಲಿ ವರ್ಷಪೂರ್ತಿ ಅಡಕೆ ಸುಲಿತವನ್ನು ಹೆಚ್ಚುವರಿ ದುಡಿಮೆಯ ಅವಕಾಶವಾಗಿ ಬಳಸಿಕೊಳ್ಳುವ ಕಾರ್ವಿುಕರಿದ್ದಾರೆ. ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಣಿಗಂ ಗ್ರಾಮವು ಅಡಕೆ ಗ್ರಾಮ ಎಂದೇ ಹೆಸರು ಪಡೆದಿದ್ದು, ಇಲ್ಲಿನ ಬಹುತೇಕ ಎಲ್ಲ ಮನೆಗಳೂ ಅಡಕೆಯೊಂದಿಗೆ ಬದುಕು ಸಾಗಿಸುತ್ತವೆ.