ಅಂಕಣ

ಉತ್ತರದ ಹುಡುಕಾಟದಲ್ಲಿ ದಕ್ಷಿಣ ಕೊರಿಯಾ!

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ಫಲವತ್ತತೆ ದರ 2.1 ಅಥವಾ ಅದಕ್ಕಿಂತ ಕಡಿಮೆ ಇರುವ ದೇಶಗಳ ಸಂಖ್ಯೆ 1950ರಲ್ಲಿ ನಾಲ್ಕು ಇದ್ದರೆ, 2023ರಲ್ಲಿ 130ಕ್ಕೆ ಏರಿದೆ. ಜನಸಂಖ್ಯೆ ತಗ್ಗುತ್ತಿರುವ ದೇಶಗಳ ಸಂಖ್ಯೆ 1950ರಲ್ಲಿ 6 ಇದ್ದರೆ 2023ರಲ್ಲಿ ಇಂಥ ದೇಶಗಳ ಸಂಖ್ಯೆ 53ಕ್ಕೆ ಏರಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ಮುನ್ನೋಟ ವರದಿಯು ಹೇಳುತ್ತದೆ. ಈ ವರದಿಯ ಅಂಶಗಳು ಹಲವು ದೇಶಗಳಲ್ಲಿ ಕಳವಳ ಮೂಡಿಸಿದೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಇಯೋಲ್ ಅವರು ಇದೇ ಮಂಗಳವಾರ ಏಕಾಏಕಿ ದೇಶದಲ್ಲಿ ಸೇನಾಡಳಿತ ಘೋಷಿಸಿಬಿಟ್ಟರು. ಉತ್ತರ ಕೊರಿಯಾದ ಕಮ್ಯುನಿಸ್ಟ್ ಶಕ್ತಿಗಳ ಬೆದರಿಕೆಯಿಂದ ಉದಾರವಾದಿ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಈ ಕ್ರಮ ಕೈಗೊಂಡಿದ್ದಾಗಿ ಅಧ್ಯಕ್ಷ ಇಯೋಲ್ ಹೇಳಿದ್ದನ್ನು ಜನರು ನಂಬಲಿಲ್ಲ. ಮರುದಿನವೇ ಸಂಸತ್​ನಲ್ಲಿ ಅವರ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿ ಸೇನಾಡಳಿತ ಆದೇಶವನ್ನು ಹಿಂಪಡೆಯಬೇಕಾಯಿತು. ಅಷ್ಟೇ ಅಲ್ಲ, ಅಧ್ಯಕ್ಷರ ಮಹಾಭಿಯೋಗಕ್ಕೂ ಅನೇಕ ಸಂಸದರಿಂದ ಒತ್ತಾಯ ಕೇಳಿಬಂತು. ಅಧ್ಯಕ್ಷರ ಪದಚ್ಯುತಿಗೆ ಆಗ್ರಹಿಸಿ ಜನರು ಬೀದಿಗಿಳಿದು ಪ್ರತಿಭಟಿಸಿದ್ದೂ ಆಯಿತು.

ಇದು ಅಲ್ಲಿನ ಒಂದು ಮಜಲಾದರೆ, ಇನ್ನೊಂದು ಸಮಸ್ಯೆ ಬಹಳ ಗಂಭೀರವಾಗಿದೆ. ಅದೆಂದರೆ- ಅಲ್ಲಿ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದೆ. ಅರ್ಥಾತ್, ಫಲವತ್ತತೆ ದರ (ಫರ್ಟಿಲಿಟಿ ರೇಟ್) ತೀವ್ರವಾಗಿ ತಗ್ಗಿದೆ. ಫಲವತ್ತತೆ ದರ ಎಂದರೆ, ಮಹಿಳೆಯೊಬ್ಬಳು ಸರಾಸರಿ ಎಷ್ಟು ಮಕ್ಕಳಿಗೆ ಜನ್ಮನೀಡುತ್ತಾಳೆ ಎಂಬುದರ ಪ್ರಮಾಣ. ದೇಶವೊಂದರ ಸರಾಸರಿ ಫಲವತ್ತತೆ 2.1 ಇದ್ದರೆ ಅದು ಆರೋಗ್ಯಕರ ಎಂಬುದು ಜಾಗತಿಕವಾಗಿ ಒಪ್ಪಿಕೊಂಡ ಮಾನದಂಡ. ಹಾಗಾದರೆ ಈ ಪ್ರಮಾಣಕ್ಕಿಂತ ಕೆಳಗಿಳಿದರೆ ಏನಾಗುತ್ತದೆ? ಒಂದೇ ವರ್ಷದಲ್ಲಿ ಅದರ ಪರಿಣಾಮ ಅಷ್ಟು ಗೊತ್ತಾಗಲಿಕ್ಕಿಲ್ಲ. ಆದರೆ ದೀರ್ಘಕಾಲ ಫಲವತ್ತತೆ ದರ ಕಡಿಮೆ ಇದ್ದರೆ ಆ ದೇಶದಲ್ಲಿ ಹಿರಿಯರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ.

ದುಡಿಯುವರ ಸಂಖ್ಯೆ ಕಡಿಮೆಯಾಗುತ್ತದೆ. ಅಂದರೆ, ಅವಲಂಬಿತರ ಪ್ರಮಾಣ ಅಧಿಕವಾಗುತ್ತದೆ. ದೇಶದ ಉತ್ಪಾದಕತೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಕುಟುಂಬಗಳ ಆದಾಯ ಕೂಡ ಕುಸಿಯುತ್ತದೆ. ಇನ್ನೊಂದೆಡೆ, ಆ ದೇಶದ ಜನಸಂಖ್ಯೆ ಸಹ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ದಕ್ಷಿಣ ಕೊರಿಯಾದಲ್ಲಿ 1950ರಲ್ಲಿ ಫಲವತ್ತತೆ ದರ 6.06 ಇದ್ದರೆ 1983-84ರ ಹೊತ್ತಿಗೆ 1.83ಕ್ಕೆ ಇಳಿದಿತ್ತು. ಈಗ 2023ರಲ್ಲಿ 0.72ಕ್ಕೆ ಬಂದಿದ್ದು, ವಿಶ್ವದಲ್ಲೇ ಅತಿ ಕಡಿಮೆ ಪ್ರಮಾಣವಾಗಿದೆ. ಇದೇ ರೀತಿ ಮುಂದುವರಿದಲ್ಲಿ, ಈ ಶತಮಾನದ ಅಂತ್ಯದ ವೇಳೆಗೆ ಅಲ್ಲಿ ಕೇವಲ 1.7 ಕೋಟಿ ಜನರು ಇರುತ್ತಾರೆ ಎಂದು ಜನಸಂಖ್ಯಾ ತಜ್ಞರು ಅಂದಾಜಿಸಿದ್ದಾರೆ. ಹಾಲಿ ಅಲ್ಲಿನ ಜನಸಂಖ್ಯೆ 5.17 ಕೋಟಿ ಇದೆ.

ಜಾಗತಿಕ ತಲಾದಾಯಕ್ಕೆ ಹೋಲಿಸಿದರೆ 1962ರಲ್ಲಿ ದಕ್ಷಿಣ ಕೊರಿಯಾದ ತಲಾದಾಯ ಶೇ. 20ರಷ್ಟು ಮಾತ್ರ ಇತ್ತು. ಆಗ ಫಲವತ್ತತೆ ದರ 6 ಇತ್ತು. 1982ರ ಸಮಯಕ್ಕೆ ತಲಾದಾಯ ಇದಕ್ಕಿಂತ 12 ಪಟ್ಟು ಏರಿದರೆ, ಫಲವತ್ತತೆ ದರ 2.4ಕ್ಕೆ ಕುಸಿದಿತ್ತು. 1981ರಲ್ಲಿ ಫಲವತ್ತತೆ ದರ 2.1ಕ್ಕಿಂತ ಕೆಳಗಿಳಿಯಿತು. ಅದಾದ ನಂತರದಲ್ಲಿ ಕುಸಿತ ಕಾಣುತ್ತಲೇ ಇದೆ. ಏಕೆ ಹೀಗಾಯಿತು ಎಂದು ಹುಡುಕ ಹೊರಟರೆ, ಅಲ್ಲಿನ ಸಾಮಾಜಿಕ ಹೆಣಿಗೆ ಮತ್ತು ಜನರ ಮನೋಭಾವದಲ್ಲಾದ ಬದಲಾವಣೆಗಳು ಕಣ್ಣಿಗೆ ಬೀಳುತ್ತವೆ. ದಕ್ಷಿಣ ಕೊರಿಯಾದಲ್ಲಿ ಸ್ತ್ರೀಯರನ್ನು ದ್ವೇಷಿಸಲಾಗುತ್ತಿದೆ ಮತ್ತು ಅವರ ಬಗ್ಗೆ ಪೂರ್ವಾಗ್ರಹ ಹೊಂದಲಾಗಿದೆ ಎಂದು ಮಹಿಳೆಯರಿಂದ ಕೆಲ ಸಮಯದಿಂದ ಪ್ರತಿಭಟನೆಗಳು ನಡೆಯುತ್ತಿವೆ. ಅದು ಕ್ರಮೇಣ ಒಂದು ವಿಶಿಷ್ಟ ತಿರುವು ಪಡೆದಿದ್ದು, 4ಬಿ ಎಂದೇ ಹೆಸರಾಗಿದೆ.

ವಿವಾಹವಾಗುವುದಿಲ್ಲ, ಮಕ್ಕಳನ್ನು ಪಡೆಯುವುದಿಲ್ಲ, ಡೇಟಿಂಗ್ ಮಾಡುವುದಿಲ್ಲ ಮತ್ತು ಲೈಂಗಿಕತೆ ಇಲ್ಲ- ಇವೇ ಆ ನಾಲ್ಕು ಅಂಶಗಳು. ಈ ಪ್ರತಿಭಟನೆ ದಕ್ಷಿಣ ಕೊರಿಯಾದ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಅಮೆರಿಕದಲ್ಲಿ ಈಚೆಗೆ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಪ್ರಕಟವಾಗಿ, ಡೊನಾಲ್ಡ್ ಟ್ರಂಪ್ ಆಯ್ಕೆಯಾದಾಗ ಅಲ್ಲಿನ ಕೆಲ ಮಹಿಳೆಯರು ದಕ್ಷಿಣ ಕೊರಿಯಾದ ಈ 4ಬಿ ಅಭಿಯಾನದಿಂದ ಪ್ರೇರಣೆ ಪಡೆದು ಪ್ರತಿಭಟಿಸಿದ್ದರು; ಟ್ರಂಪ್ ಸ್ತ್ರೀಯದ ಬಗ್ಗೆ ಗೌರವಭಾವನೆ ಹೊಂದಿಲ್ಲ ಎಂಬುದು ಇವರ ಆಕ್ಷೇಪವಾಗಿತ್ತು. ಜನಸಂಖ್ಯೆ ಇಳಿಕೆಯ ಬಗ್ಗೆ ತಲೆಕೆಡಿಸಿಕೊಂಡ ಸರ್ಕಾರ ಹೆಚ್ಚು ಮಕ್ಕಳನ್ನು ಹೊಂದುವಂತೆ ಜನರನ್ನು ಪ್ರೇರೇಪಿಸಲು ಅನೇಕ ಕ್ರಮಗಳನ್ನು ಘೋಷಿಸಿದೆ. ಮಕ್ಕಳ ಆರೈಕೆಗೆ ವಿದೇಶಿ ಕೆಲಸಗಾರರ ನೇಮಕ, ಮೂವತ್ತರ ವಯಸ್ಸಿನೊಳಗೆ ಮೂವರು ಮಕ್ಕಳನ್ನು ಹೊಂದಿದಲ್ಲಿ ಅಂಥ ಪುರುಷರಿಗೆ ಕಡ್ಡಾಯ ಸೇನೆ ಸೇವೆಯಿಂದ ವಿನಾಯಿತಿ ಮುಂತಾದವು ಇದರಲ್ಲಿ ಸೇರಿವೆ.

ಖಾಸಗಿ ವಲಯದಲ್ಲಿ ಸಹ ಬೋನಸ್ ಇತ್ಯಾದಿ ಪ್ರೋತ್ಸಾಹ ನೀಡಲಾಗುತ್ತಿದೆ (ಒಂದು ಕಾಲದಲ್ಲಿ ಜನಸಂಖ್ಯೆ ಹೆಚ್ಚಾಯ್ತೆಂದು ಚೀನಾದಲ್ಲಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗಿತ್ತು. ಈಗ ಅಲ್ಲಿ ಸಹ ಜನಸಂಖ್ಯೆ ಬೆಳವಣಿಗೆ ದರ ತೀವ್ರವಾಗಿ ಕುಸಿದಿದ್ದು, ‘ಒಂದು ಮಗು’ ನೀತಿಯನ್ನು ಮಾರ್ಪಡಿಸಿ, ಹೆಚ್ಚು ಮಕ್ಕಳನ್ನು ಹೊಂದುವವರಿಗೆ ವಿವಿಧ ಬಗೆಯ ಪ್ರೋತ್ಸಾಹಕಗಳನ್ನು ನೀಡುತ್ತಿರುವುದು ಗಮನಾರ್ಹ). ಆದರೆ ಕೊರಿಯಾದಲ್ಲಿ ಇವ್ಯಾವುದೂ ಅಂಥ ಪರಿಣಾಮ ಬೀರಿಲ್ಲ. ದಕ್ಷಿಣ ಕೊರಿಯಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರಚನೆ ಬದಲಾಗಿದೆ. ಅಲ್ಲಿನ ಮಹಿಳೆಯರಲ್ಲಿ ಉದ್ಯೋಗದ ಬಯಕೆ ಹೆಚ್ಚಿದೆ. ಪಾಲಕತನದ ಜವಾಬ್ದಾರಿಯಿಂದ ಕೆಲಸಕ್ಕೆ ತೊಂದರೆ ಎಂಬುದು ಇವರ ಅಂಬೋಣ. ಇಷ್ಟೇ ಅಲ್ಲ, ಮಕ್ಕಳನ್ನು ಪಡೆಯಲು ಮದುವೆಯೇ ಆಗಬೇಕೆಂದಿಲ್ಲವಲ್ಲ ಎಂದು ವಾದಿಸುವವರ ಪ್ರಮಾಣವೂ ಹೆಚ್ಚುತ್ತಿದೆಯಂತೆ.

ಸದ್ಯ ಅಲ್ಲಿ ವಿವಾಹೇತರ ಸಂಬಂಧದಿಂದ ಮಗು ಪಡೆಯುವ ಪ್ರಮಾಣ ಶೇ.2.5ರಷ್ಟಿದೆ. ಜೊತೆಗೆ, ಮನೆಗೆಲಸದಲ್ಲಿ ಪುರುಷರೂ ತಮಗೆ ಸರಿಸಮಾನವಾಗಿ ಕೈಜೋಡಿಸಬೇಕು ಎಂಬ ವಾದ ಇವರದು. ಈ ಎಲ್ಲ ಕಾರಣಕ್ಕೆ ಮದುವೆಯ ಗೊಡವೆಯೇ ಬೇಡ ಎನ್ನುವವರು ಹೆಚ್ಚುತ್ತಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಮಕ್ಕಳನ್ನು ಹೊಂದದ ದಂಪತಿ ಪ್ರಮಾಣ 2005ರಲ್ಲಿ ಶೇ.14.2 ಇದ್ದರೆ, 2020ರಲ್ಲಿ ಶೇ.16.8ಕ್ಕೆ ಏರಿತ್ತು. ಮಕ್ಕಳನ್ನು ಹೊಂದಿದ ದಂಪತಿ ಪ್ರಮಾಣ 2005ರಲ್ಲಿ ಶೇ. 42 ಇದ್ದರೆ, 2020ರಲ್ಲಿ ಶೇ.29ಕ್ಕೆ ಕುಸಿದಿತ್ತು. ಪುರುಷರಲ್ಲಿ ಮದುವೆಯ ಸರಾಸರಿ ವಯಸ್ಸು 1999ರಲ್ಲಿ 29 ಇದ್ದರೆ ಮಹಿಳೆಯರಲ್ಲಿ 26 ಇತ್ತು. 2023ರಲ್ಲಿ ಪುರುಷರ ಸರಾಸರಿ ವಿವಾಹ ವಯಸ್ಸು 34ಕ್ಕೆ ಏರಿದ್ದರೆ, ಮಹಿಳೆಯರದು 31ಕ್ಕೆ ಏರಿಕೆ ಕಂಡಿದೆ.

ಹಾಗಂತ ಇದು ದಕ್ಷಿಣ ಕೊರಿಯಾದ ಸಮಸ್ಯೆ ಮಾತ್ರವಲ್ಲ, ಜಾಗತಿಕವಾಗಿ ಅನೇಕ ದೇಶಗಳು ಇಂಥ ಇಕ್ಕಟ್ಟು-ಬಿಕ್ಕಟ್ಟು ಎದುರಿಸುತ್ತಿವೆ. ಆದರೆ ಕೊರಿಯಾದಲ್ಲಿ ತೀವ್ರವಾಗಿದೆ. ಫಲವತ್ತತೆ ದರ 2.1 ಅಥವಾ ಅದಕ್ಕಿಂತ ಕಡಿಮೆ ಇರುವ ದೇಶಗಳ ಸಂಖ್ಯೆ 1950ರಲ್ಲಿ ನಾಲ್ಕು ಇದ್ದರೆ, 2023ರಲ್ಲಿ 130ಕ್ಕೆ ಏರಿದೆ. ಜನಸಂಖ್ಯೆ ತಗ್ಗುತ್ತಿರುವ ದೇಶಗಳ ಸಂಖ್ಯೆ 1950ರಲ್ಲಿ 6 ಇದ್ದರೆ 2023ರಲ್ಲಿ ಇಂಥ ದೇಶಗಳ ಸಂಖ್ಯೆ 53ಕ್ಕೆ ಏರಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ಮುನ್ನೋಟ ವರದಿಯು ಹೇಳುತ್ತದೆ. ದಕ್ಷಿಣ ಕೊರಿಯಾದಲ್ಲಿ ಹಾಗೆ; ಭಾರತದಲ್ಲಿ ಹೇಗೆ? ಇದು ಆಸಕ್ತಿದಾಯಕ ಸಂಗತಿ. ಭಾರತ ಸದ್ಯ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿ ನಂಬರ್ 1 ಇರಬಹುದು. ಆದರೆ ಇಲ್ಲಿಯೂ ಫಲವತ್ತತೆ ದರ ಕುಸಿಯುತ್ತಿದೆ. ಅಂಕಿಅಂಶ ನೋಡುವುದಾದರೆ- ಹಿಂದುಗಳಲ್ಲಿ 1.6 ಇದ್ದರೆ, ಮುಸ್ಲಿಮರಲ್ಲಿ 1.8 ಇದೆ.

ಕ್ರಿಶ್ಚಿಯನ್ 1.7, ಸಿಖ್ 1.4, ಬೌದ್ಧ 1.2, ಜೈನ 1.5, ಎಸ್​ಸಿ 2.1, ಎಸ್​ಟಿ 1.7, ಒಬಿಸಿ 1.7 ಇದೆ. ಅಂದರೆ, ಅಪವಾದ ಹೊರತುಪಡಿಸಿ ಯಾವ ಸಮುದಾಯದಲ್ಲೂ 2.1 ಇಲ್ಲ. ಭಾರತ ಹಾಲಿ ಯುವದೇಶ ಎಂದು ಕರೆಸಿಕೊಳ್ಳುತ್ತಿದೆ ನಿಜ. ಏಕೆಂದರೆ ಯುವಜನರ ಪ್ರಮಾಣ ಸುಮಾರು ಶೇ.27 ಇದೆ. 60 ದಾಟಿದವರ ಪ್ರಮಾಣ ಶೇ. 10ರಷ್ಟಿದೆ. ಆದರೆ ಜನಸಂಖ್ಯೆ ಬೆಳವಣಿಗೆ ಇದೇ ಕಡಿಮೆ ದರದಲ್ಲಿ ಮುಂದುವರಿದರೆ ಈ ಸನ್ನಿವೇಶ ತಿರುವುಮುರುವಾಗಬಹುದು. 2026ರ ಹೊತ್ತಿಗೆ 60 ವಯಸ್ಸಿನವರ ಪ್ರಮಾಣ ಶೇ.15ಕ್ಕೆ ಏರಬಹುದು ಎಂದು ಸಮಾಜಶಾಸ್ತ್ರಜ್ಞರು ಹೇಳುತ್ತಾರೆ. 2050ರ ಹೊತ್ತಿಗೆ ಭಾರತದ ಫಲವತ್ತತೆ ದರ 1.29ಕ್ಕೆ ತಲುಪಬಹುದು ಎಂದೂ ಕೆಲ ವರದಿಗಳು ಎಚ್ಚರಿಸಿವೆ. 1950ರಲ್ಲಿ 5.7 ಇದ್ದ ಭಾರತದ ಫಲವತ್ತತೆ ದರ 2023ರ ವೇಳೆಗೆ 2.0ಕ್ಕೆ ಬಂದು ತಲುಪಿದೆ. ಕೆಲ ಸಮುದಾಯಗಳಲ್ಲಿ ಮಕ್ಕಳನ್ನು ಹೊಂದುವ ಸ್ವರೂಪದಲ್ಲಿ ಅಗಾಧ ಬದಲಾವಣೆ ಆಗಿದೆ. ಹೆಣ್ಣಾಗಲಿ ಗಂಡಾಗಲಿ ಒಂದೇ ಮಗು ಸಾಕು ಎಂಬ ಮನಸ್ಥಿತಿ ಕಂಡುಬರುತ್ತಿದೆ.

ಒಂದೇ ಮಗು ಇದ್ರೆ ರಿಸ್ಕ್ ಅಲ್ವ? ಎಂದು ಯಾರಾದರೂ ಕೇಳಿದರೆ, ‘ಒಮ್ಮೆ ಹಣೆಬರಹ ಬರೆದ ದೇವರು ಅದನ್ನು ಬದಲಿಸೋದಿಲ್ಲ. ಏನಾಗಬೇಕೋ ಆಗಿಯೇ ಆಗುತ್ತದೆ’ ಎಂಬ ಸಮಜಾಯಿಷಿ ನೀಡುತ್ತಾರೆ. ಕೆಲವೇ ವರ್ಷಗಳಲ್ಲಿ ಎಷ್ಟು ಬದಲಾವಣೆ! ಆರ್ಥಿಕ, ಸಾಮಾಜಿಕ ಸನ್ನಿವೇಶ, ಮಕ್ಕಳನ್ನು ಸುಖದಲ್ಲಿ ಬೆಳೆಸಬೇಕೆಂಬ ಮನೋಭಾವ, ಜೀವನಶೈಲಿ... ಹೀಗೆ ಹಲವು ಕಾರಣ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರು ಈಚೆಗೆ ನೀಡಿದ ಹೇಳಿಕೆಯೊಂದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆ ದರ ಕುಸಿಯುತ್ತಿದೆ. ಯಾವುದೇ ಸಮಾಜದಲ್ಲಿ ಫಲವತ್ತತೆ ದರವು 2.1ಕ್ಕಿಂತ ಕಡಿಮೆ ಇದ್ದಲ್ಲಿ ಆ ಸಮಾಜ ಕ್ರಮೇಣ ತಾನಾಗಿ ನಶಿಸಿಹೋಗುತ್ತದೆ. ಯಾರೂ ಅದನ್ನು ನಾಶಮಾಡಬೇಕಿಲ್ಲ. ಹೀಗಾಗಿ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿ ಕುಟುಂಬ ಕನಿಷ್ಠ ಮೂರು ಮಕ್ಕಳನ್ನು ಹೊಂದುವ ಬಗ್ಗೆ ಆಲೋಚಿಸಬೇಕು’ ಎಂಬುದು ಅವರು ನೀಡಿದ ಸಲಹೆ. ಭಾಗವತ್ ಇಂಥ ಸಲಹೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಇತರ ಆರೆಸ್ಸೆಸ್ ನಾಯಕರು ಸಹ ಇಂಥ ಕಿವಿಮಾತು ಹೇಳಿದ್ದಿದೆ. ಆದರೆ ಈ ಸಲ ಭಾಗವತ್ ಅವರು ವೈಜ್ಞಾನಿಕ ಆಂಶಗಳನ್ನು ಆಧರಿಸಿ ಮಾತಾಡಿದ್ದು ವಿಶೇಷ.

ಭಾರತದ ಜನಸಂಖ್ಯೆ 2030ರ ವೇಳೆಗೆ 150 ಕೋಟಿ ದಾಟಲಿದೆ. 2050ರ ಹೊತ್ತಿಗೆ 166 ಕೋಟಿಗೇರಲಿದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆ ಹೆಚ್ಚಿದಷ್ಟು ಸರ್ಕಾರಗಳಿಗೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸುವುದು ಸಹ ಕಷ್ಟವಾಗುತ್ತದೆ. ಹೀಗಾಗಿ ಪರಿಸ್ಥಿತಿ ಮೋಹನ ಭಾಗವತರು ಹೇಳಿದಷ್ಟು ಆತಂಕಕಾರಿಯಾಗಿಲ್ಲ ಎಂಬುದು ಕೆಲವರ ವಾದ. ಅದೂ ಅಲ್ಲದೆ, ಎಷ್ಟು ಮಕ್ಕಳನ್ನು ಹೊಂದಬೇಕು ಎಂಬುದು ಕುಟುಂಬದ ವೈಯಕ್ತಿಕ ಆಯ್ಕೆಯ ವಿಚಾರ. ಸರ್ಕಾರಗಳು ಈ ವಿಷಯದಲ್ಲಿ ನಿರ್ಧಾರ ಹೇರಲು ಬರುವುದಿಲ್ಲ ಎಂದು ಇವರು ಪ್ರತಿಪಾದಿಸುತ್ತಾರೆ. ಸರ್ಕಾರಗಳು ಜನಸಂಖ್ಯಾ ನಿಯಂತ್ರಣದ ನೀತಿಯನ್ನೇ ಹೊಂದಿರುವುದರತ್ತ ಇವರು ಬೊಟ್ಟುಮಾಡುತ್ತಾರೆ. ‘ಹೆಣ್ಣುಮಕ್ಕಳು ಮತ್ತೆ ಹೆರುವ ಯಂತ್ರಗಳಾಗಬೇಕಾ?’ ಎಂಬುದು ಇನ್ನು ಕೆಲವರ ಪ್ರಶ್ನೆ.

ಆದರೆ ವಿಷಯ ಅಷ್ಟು ಸರಳವಾಗಿಲ್ಲ. ಜನಸಂಖ್ಯೆ ಹಿಂದೆ ಬಹಳ ವೇಗವಾಗಿ ಹೆಚ್ಚಿದ್ದರಿಂದ ಈಗ ದೊಡ್ಡದಾಗಿ ಕಾಣಿಸುತ್ತಿದೆ. ಈಗ ಬಹುತೇಕ ಎಲ್ಲ ಸಮುದಾಯಗಳಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದೆ. ಹಳ್ಳಿಗಳಲ್ಲಿ ಮಕ್ಕಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿರುವುದು ಇದಕ್ಕೆ ಒಂದು ನಿದರ್ಶನ. ಆದ್ದರಿಂದ ಆರೆಸ್ಸೆಸ್ ಮುಖ್ಯಸ್ಥರ ಮಾತನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ. ಇಲ್ಲವಾದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಇನ್ನು ಕೆಲವರು ವಾದಿಸುತ್ತಾರೆ. ಜನಸಂಖ್ಯೆ ವರವೂ ಆಗಬಹುದು; ಶಾಪವೂ ಆಗಬಹುದು. ಆಯಾ ದೇಶ ಅದನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತ.

ಇಲ್ಲಿ ಇನ್ನೊಂದು ಸಂಗತಿಯತ್ತಲೂ ಗಮನಿಸಬೇಕಿದೆ. ಅನೇಕ ಸಮುದಾಯಗಳಲ್ಲಿ ಗಂಡುಮಕ್ಕಳಿಗೆ ವಿವಾಹಕ್ಕೆ ಹುಡುಗಿಯರು ಸಿಗುತ್ತಿಲ್ಲ. ಕೃಷಿ ಕುಟುಂಬದ ಯುವಕರಿಗೆ ಮಾತ್ರ ಈ ಸಮಸ್ಯೆ ಸೀಮಿತವಾಗಿಲ್ಲ. ಬೇರೆ ಬೇರೆ ಸ್ತರಕ್ಕೂ ವಿಸ್ತರಿಸಿದೆ. ಇದಕ್ಕೆ ಕಾರಣಗಳು ಏನೇ ಇದ್ದರೂ ಇದರಿಂದ ಆಗುತ್ತಿರುವ ಕೌಟುಂಬಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಕಡೆಗಣಿಸುವಂತಿಲ್ಲ.

ಕೊನೇ ಮಾತು: ಹಿಂದೆ- ‘ಮಕ್ಕಳಿರಲವ್ವ ಮನೆತುಂಬ’. ನಂತರ- ‘ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ.’ ಈಗ- ‘ನಾವಿಬ್ಬರು ನಮಗೊಂದು’. ಮುಂದೆ?!