ಅಂಕಣ

ಇಸ್ರೋ ಎಸ್ಎಸ್ಎಲ್‌ವಿ - ಡಿ2 ಉಡಾವಣೆಗೆ ಕ್ಷಣಗಣನೆ; ಏನಿದರ ಶಕ್ತಿ? ಇಲ್ಲಿದೆ ಸಂಪೂರ್ಣ ವಿವರ

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬುಧವಾರದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಹೇಳಿಕೆಯಲ್ಲಿ ತಾನು ಶುಕ್ರವಾರದಂದು ಶ್ರೀಹರಿಕೋಟಾದಿಂದ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ (ಎಸ್ಎಸ್ಎಲ್‌ವಿ) ಎರಡನೇ ಪರೀಕ್ಷಾ ಉಡಾವಣೆ ನಡೆಸಲಿದ್ದೇವೆ ಎಂದು ತಿಳಿಸಿತ್ತು.

ಶುಕ್ರವಾರ ಬೆಳಗ್ಗೆ 9:18ರ ವೇಳೆಗೆ ಎಸ್ಎಸ್ಎಲ್‌ವಿ-ಡಿ2 ರಾಕೆಟ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಪ್ರಾಥಮಿಕ ಉಡಾವಣಾ ಕೇಂದ್ರದಿಂದ ಆಗಸಕ್ಕೆ ಚಿಮ್ಮಲಿದೆ. ತನ್ನ 15 ನಿಮಿಷಗಳ ಯಾತ್ರೆಯೊಳಗೆ ರಾಕೆಟ್ ಮೂರು ಉಪಗ್ರಹಗಳನ್ನು 450 ಕಿಲೋಮೀಟರ್‌ಗಳ ವೃತ್ತಾಕಾರದ ಕಕ್ಷೆಗೆ ಜೋಡಿಸಲು ಪ್ರಯತ್ನಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಎಸ್ಎಸ್ಎಲ್‌ವಿ ಇಸ್ರೋದ ಇಓಎಸ್-07, ಅಮೆರಿಕಾದ ಅಂತಾರಿಸ್ ಜಾನುಸ್-1 ಹಾಗೂ ಚೆನ್ನೈಯ ಸ್ಪೇಸ್ ಕಿಡ್ಸ್ ಸಂಸ್ಥೆಯ ಆಜಾ಼ದಿಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ಕೊಂಡೊಯ್ಯಲಿದೆ.

ಇಸ್ರೋ 156.3 ಕೆಜಿ ತೂಕವುಳ್ಳ ಇಓಎಸ್-07 ಉಪಗ್ರಹವನ್ನು ನಿರ್ಮಿಸಿದ್ದು, ಇದು ನೂತನ ಪ್ರಯೋಗಗಳಾದ ಎಂಎಂ-ವೇವ್ ಹ್ಯುಮಿಡಿಟಿ ಸೌಂಡರ್, ಸ್ಪೆಕ್ಟ್ರಮ್ ಮಾನಿಟರಿಂಗ್ ಪೇಲೋಡ್‌ಗಳನ್ನು ಒಳಗೊಂಡಿದೆ. ಅಂಟಾರಿಸ್ ಎಂಬ ಅಮೆರಿಕಾದ ಸಂಸ್ಥೆ 10.2 ಕೆಜಿ ತೂಕದ ಜಾನುಸ್-1 ಉಪಗ್ರಹವನ್ನು ನಿರ್ಮಿಸಿದೆ. ಇನ್ನು 8.7 ಕೆಜಿ ತೂಕದ ಆಜ಼ಾದಿಸ್ಯಾಟ್-2 ಉಪಗ್ರಹವನ್ನು ಭಾರತದಾದ್ಯಂತ ಇರುವ 750 ವಿದ್ಯಾರ್ಥಿನಿಯರು ಚೆನ್ನೈಯ ಸ್ಪೇಸ್ ಕಿಡ್ಸ್ ಸಂಸ್ಥೆಯ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಿದ್ದಾರೆ.

ಎಸ್ಎಸ್ಎಲ್‌ವಿ 500ಕೆಜಿ ತನಕ ತೂಕದ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಬೇಡಿಕೆಯ ಅನುಸಾರ ಉಡಾವಣೆ ನಡೆಸಿ ಕೊಂಡೊಯ್ಯಲಿದೆ. ಈ ರಾಕೆಟ್ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶಕ್ಕೆ ಪ್ರವೇಶ ಒದಗಿಸಲಿದ್ದು, ಕನಿಷ್ಠ ಅವಧಿಯಲ್ಲಿ (ಅಂದಾಜು 72 ಗಂಟೆ) ಇದನ್ನು ಸಂಪೂರ್ಣವಾಗಿ ಜೋಡಿಸಿ, ಉಡಾವಣೆಗೆ ಸಿದ್ಧಗೊಳಿಸಬಹುದಾಗಿದೆ. ಇದು ಹಲವು ಉಪಗ್ರಹಗಳನ್ನು ಜೊತೆಯಾಗಿ ಕೊಂಡೊಯ್ಯಬಲ್ಲದಾಗಿದ್ದು, ಕನಿಷ್ಠ ಉಡಾವಣಾ ಮೂಲ ಸೌಕರ್ಯಗಳ ಅವಶ್ಯಕತೆ ಹೊಂದಿದೆ. ಎಸ್ಎಸ್ಎಲ್‌ವಿ ಮೂರು ಘನ ಇಂಧನ ಹಂತಗಳನ್ನು ಮತ್ತು ಒಂದು ವೆಲೋಸಿಟಿ ಟರ್ಮಿನಲ್ ಮಾಡ್ಯುಲ್ ಗಳನ್ನು ಹೊಂದಿದೆ. ಎಸ್ಎಸ್ಎಲ್‌ವಿ 34 ಮೀಟರ್ ಎತ್ತರ ಮತ್ತು 2 ಮೀಟರ್ ವ್ಯಾಸ ಹೊಂದಿದ್ದು, 120 ಟನ್ ಮೇಲೆಕ್ಕೇರುವ ದ್ರವ್ಯರಾಶಿಯನ್ನು ಹೊಂದಿದೆ.

ಎಸ್ಎಸ್ಎಲ್‌ವಿ-ಡಿ1 ವೈಫಲ್ಯ ಹೊಂದಿದ ಕುರಿತು ವಿಶ್ಲೇಷಣೆ ನಡೆಸಿದ ಇಸ್ರೋ, ಆ ಉಡಾವಣೆ ವಿಫಲಗೊಳ್ಳಲು ಪ್ರಮುಖ ಕಾರಣವೆಂದರೆ ರಾಕೆಟ್‌ನ ಮೇಲಿನ ಭಾಗ ಉಪಗ್ರಹವನ್ನು ಹೆಚ್ಚು ಅಂಡಾಕಾರದ ಮತ್ತು ಅಸ್ಥಿರ ಕಕ್ಷೆಗೆ ತಳ್ಳಿತು. ಇದಕ್ಕೆ ಕಾರಣ ಅಗತ್ಯವಿದ್ದಷ್ಟು ವೇಗದ ಕೊರತೆ ಎಂದು ಇಸ್ರೋ ಕಂಡುಕೊಂಡಿತು.

ಆಗಸ್ಟ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್‌ವಿ-ಡಿ1 ರಾಕೆಟ್ ಉಡಾವಣೆಯ ವೇಳೆ ಕೊಂಡೊಯ್ದ ಉಪಗ್ರಹಗಳು ವೇಗದ ಕೊರತೆಯ ಪರಿಣಾಮದಿಂದ ಅತ್ಯಂತ ದೀರ್ಘ ಕಕ್ಷೆಗೆ ಜೋಡಿಸಲ್ಪಟ್ಟವು. ಬಳಿಕ ಅವು ಕ್ಷಿಪ್ರವಾಗಿ ಅಸ್ಥಿರಗೊಂಡವು. ರಾಕೆಟ್‌ನ ಮೊದಲ ಮೂರು ಹಂತಗಳು ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೂ, ಈ ಸಮಸ್ಯೆ ಉಂಟಾಯಿತು.

ಇಸ್ರೋ ಈ ವೈಫಲ್ಯದ ಕುರಿತು ನೀಡಿದ ಪೂರ್ಣ ವರದಿಯಲ್ಲಿ ನಿಖರ ಮಾಹಿತಿಯನ್ನು ಒದಗಿಸಿದ್ದು, ಎಸ್ಎಸ್ಎಲ್‌ವಿ-ಡಿ1 ಉಡಾವಣೆಯ ಸಂದರ್ಭದಲ್ಲಿ, ಎರಡನೇ ಹಂತ ಬೇರ್ಪಡುತ್ತಿದ್ದಾಗ ಹೆಚ್ಚು ತೀವ್ರವಾದ ಮತ್ತು ದೀರ್ಘವಾದ ಕಂಪನ ಉಂಟಾಯಿತು ಎಂದಿದೆ. ಇಷ್ಟು ತೀವ್ರ ಮತ್ತು ದೀರ್ಘವಾದ ಕಂಪನಗಳು ರಾಕೆಟ್‌ನ ಭೂಮಿಯ ಮೇಲಿನ ಪರೀಕ್ಷೆಗಳಲ್ಲಿ ತಲೆದೋರಿರಲಿಲ್ಲ. ಈ ಕಂಪನಗಳನ್ನು ಉಡಾವಣಾ ವಾಹನದ ಒಳಗಿದ್ದ ಆರು ಆಕ್ಸಿಲರೋಮೀಟರ್‌ಗಳು ದಾಖಲಿಸಿಕೊಂಡಿದ್ದವು. ಈ ಮಾಹಿತಿಗಳನ್ನು ರಾಕೆಟ್ ಉಡಾವಣೆಯ ವೇಳೆ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳಲು ಬಳಸಲಾಗಿದೆ.

ಇಂತಹ ಸಮಸ್ಯೆ ಮತ್ತೊಮ್ಮೆ ತಲೆದೋರದಂತೆ ತಡೆಯಲು ಈ ವರದಿ ಎರಡನೆಯ ಪ್ರಯೋಗ ಪರೀಕ್ಷೆಯಲ್ಲಿ ಎರಡನೆಯ ಹಂತ ಕಳಚಿಕೊಳ್ಳುವಾಗ ಕಂಪನಗಳನ್ನು ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಸಬೇಕೆಂದು ಶಿಫಾರಸು ಮಾಡಿದೆ. ಅದರೊಡನೆ, ಇಂತಹ ತಾತ್ಕಾಲಿಕ ಘಟನೆಗಳು ಸಂಭವಿಸಿದರೆ, ಅದನ್ನು ಸರಿದೂಗಿಸಲು ಸಿಸ್ಟಮ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ. ಒಂದು ವೇಳೆ ಹೆಚ್ಚಿನ ಸೆನ್ಸರ್‌ಗಳು ಹಾಳಾಗಿದ್ದರೆ, ಮಾಹಿತಿಗಳನ್ನು ದೀರ್ಘಕಾಲದ ತನಕ ಗಮನಿಸಿ, ಬಳಿಕವೇ ರಕ್ಷಣಾ ಮೋಡ್‌ಗೆ ತೆರಳುವಂತೆ ಮಾಡಲಾಗಿದೆ.

ಒಂದು ವೇಳೆ ಸೆನ್ಸರ್‌ಗಳು ವಿಫಲಗೊಂಡರೆ, ರಾಕೆಟ್ ಅನ್ನು ನಾವಿಕ್ (ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್) ಮೂಲಕ ನಿಯಂತ್ರಿಸಲು ಸಾಧ್ಯವಾಗುತ್ತದೆ.