ಅಂಕಣ

ಚಿರ ಯೌವನದ ಆರು ಉನ್ನತ ರಹಸ್ಯಗಳು: ಹಲೋ ಡಾಕ್ಟರ್​ ಭಾಗ-1

Webdesk - Ravikanth
ಭಾಗವತದಲ್ಲಿ ರಾಜನಾದ ಯಯಾತಿಯು ತನ್ನ ಮಗನ ವಯಸ್ಸನ್ನು ತಾನು ತೆಗೆದುಕೊಂಡು ಚಿರ ಯೌವನವನ್ನು ಉಪಯೋಗಿಸಿದ, ಆನಂದಪಟ್ಟ ಕಥೆಯು ಚಿರಪರಿಚಿತ!

ಯಾರಿಗೆ ಯೌವನ ಬೇಡ? ನೀವು ಯಾರನ್ನಾದರೂ ಕೇಳಿದಾಗ ‘ಸಾಕಪ್ಪ ಜೀವನ, ಇನ್ನು ಹೋಗೋದು ಒಂದು ಬಾಕಿ ಇದೆ’ ಎಂಬುದು ಸಹಜ ಸಾಮಾನ್ಯ ಉತ್ತರ. ಆದರೆ, ಮನಸ್ಸು ಮಾತ್ರ ಯೌವನದ ಮೆಲುಕು ಹಾಕುವುದನ್ನು ಮರೆಯುವುದಿಲ್ಲ. ‘ನನಗೆ ಮುಪ್ಪು, ಇಳಿ ವಯಸ್ಸು ಇಷ್ಟ’ ಎನ್ನುವವರು ವಿರಳಾತಿ ವಿರಳ. ಅಂಥವರು ಸನ್ಯಾಸಿಗಳೋ (ನಿಜವಾದ ಅರ್ಥದಲ್ಲಿ!) ಅಥವಾ ಜೀವನ ತುಂಬ ಜಿಗುಪ್ಸೆ ಉಂಡವರೋ, ಅಥವಾ ನಿರ್ಲಿಪ್ತರು! ನಮ್ಮ-ನಿಮ್ಮಂತಹ ಸಾಮಾನ್ಯರು ಮಾತ್ರ ಯೌವನವನ್ನು ಆಲಂಗಿಸುವವರೇ! ಯೌವ್ವನವು ಹೊರಗಿನ ಆಕರ್ಷಣ ಲಕ್ಷಣಗಳಷ್ಟೇ ಅಲ್ಲ. ಆಂತರಿಕವಾಗಿ ಸಕಾರಾತ್ಮಕ, ಉತ್ಸಾಹಭರಿತ, ಸೀಮಿತ ಮದ, ಮತ್ಸರಗಳನ್ನು ಒತ್ತಿ ಹಾಕಿದಲ್ಲಿ ಹೆಚ್ಚು ಆಕರ್ಷಕ ಹಾಗೂ ಹೆಚ್ಚು ಸಮಯ ತಾಳುವಂತಹದ್ದು. ಇಲ್ಲಿ ನಮೂದಿಸಿದ ಎಲ್ಲ ರಹಸ್ಯಗಳೂ ವೈಜ್ಞಾನಿಕವಾಗಿ ಖಚಿತಪಟ್ಟವುಗಳು. ಯೌವನವು ನಮಗೆ ಬರುವುದಕ್ಕಿಂತ ನೂರಾರು ಪಟ್ಟು ಹೆಚ್ಚು ಅದನ್ನು ಶಾಶ್ವತವಾಗಿ ಅಥವಾ ಸ್ಥಿರವಾಗಿ ಕಾಯ್ದುಕೊಳ್ಳುವುದು ಮುಖ್ಯ!

’ಸ್ಮಾರ್ಟ್’ ಇರಲು ಕಪ್ಪು ಬಣ್ಣ (ಅಪವಾದ: ರೇಖಾ, ಬಿಪಾಶಾ ಬಸು), ಎತ್ತರ (ಅಪವಾದ: ತೆಂಡೂಲ್ಕರ್), ದುಬಾರಿ ಉಡುಪುಗಳು (ಟಿವಿಯ ಕೆಲವು ಆಂಕರ್​ಗಳು ಅಪವಾದ), ಶ್ರೀಮಂತಿಕೆ, ಐಷಾರಾಮಿ ಕಾರುಗಳು, ಕಿಲೋಗಟ್ಟಲೆ ಬಂಗಾರ, ವಜ್ರ ವೈಢೂರ್ಯಗಳು, ಜೀ ಹುಜೂರ್ ಎನ್ನುವ ಹೊಗಳುಭಟರು ಯಾರೂ ಬೇಕಿಲ್ಲ! ಇತ್ತೀಚೆಗೆ ನನ್ನ ವೈದ್ಯಕೀಯ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಗಂಡಸರು ’ಸ್ಮಾರ್ಟ್’ ಆಗುವ ಸಲಹೆಗಳನ್ನು ಕೇಳಲು ಬರುವುದುಂಟು. 60+ ಇದ್ದರೂ 40ರಂತೆ ಕಾಣುವವರು ನಮ್ಮ ಮಧ್ಯದಲ್ಲೇ ಇರುವರು! ಯಾವುದೇ ವಯಸ್ಸಿಗೂ (50+ ಕೂಡ) ನಿಮ್ಮ ಗಡಿಯಾರವನ್ನು ಹಿಂದೆ ತಿರುಗಿಸಬಹುದು.

1. ಆಹಾರ: ದೈನಂದಿನ ಕೆಲಸಗಳನ್ನು ಸಮರ್ಥವಾಗಿ ಮಾಡಲು ಪೊ›ಟೀನ್, ಪಿಷ್ಟ ಇವನ್ನು ಸಮತೋಲವಾಗಿ ತಿನ್ನಬೇಕು. ಶಾಖಾಹಾರಿಗಳಿಗೆ ಕಾಳುಗಳು (ತೊಗರಿ ಬೇಳೆ ಇತ್ಯಾದಿ), ಮಾಂಸಾಹಾರಿಗಳಿಗೆ ದಪ್ಪ ಮೀನುಗಳಾದ ಸಾರಡೀನಿ, ಸ್ಯಾಲಮನ್, ಟ್ಯೂನಾ, ಮ್ಯಾಕಾರೆಲ್ ಮುಂತಾದವು ಉತ್ತಮ. ಮೀನುಗಳಲ್ಲಿ ಒಮೆಗಾ-3 ಎಂಬ ವಿಶೇಷ ಕೊಬ್ಬು ಹೆಚ್ಚು ಇದ್ದು ಚರ್ಮವನ್ನು ಮೆತ್ತಗೆ, ಹೊಳಪುಯುಕ್ತ ಮಾಡುವುದಲ್ಲದೇ, ಹೃದಯಾಘಾತದ ಸಂಭವವನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಒಂದರಿಂದ ಎರಡು ಸಾರಿ ಮೀನು ಸೇವಿಸಬಹುದು. ಆದರೆ, ಅತಿ ಹೆಚ್ಚು ಎಣ್ಣೆ ಉಪಯೋಗಿಸಿ ಮೀನಿನ ಆಹಾರ ತಯಾರಿಸಕೂಡದು.

ಆಹಾರದಲ್ಲಿ ಪ್ರಥಮ ಸ್ಥಾನದಲ್ಲಿರುವುದು ನೀರು. ಅಧ್ಯಯನಗಳ ಪ್ರಕಾರ ಸಾಮಾನ್ಯವಾಗಿ ದಿನಕ್ಕೆ 2 ಲೀ. ನೀರು ಕುಡಿಯಬೇಕು. ನಾಲ್ಕು ಮತ್ತು ಹೆಚ್ಚು ಲೀ. ನೀರು ಕುಡಿದಲ್ಲಿ ಹಾನಿಯೇ ಹೆಚ್ಚು. ಅಶಕ್ತತೆ ಹೆಚ್ಚುತ್ತದೆ (ರಕ್ತವು ಹೆಚ್ಚು ನೀರುಮಯವಾಗಿ). ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ ಸ್ಥೂಲಕಾಯವನ್ನು ಇಳಿಸಬಹುದು. ಇತ್ತೀಚೆಗೆ ಒಂದು ಅಧ್ಯಯನದಲ್ಲಿ ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಹೆಚ್ಚು ನೀರು ಕುಡಿಯಲು ಹೇಳಿದಾಗ, ಒಂದು ವರ್ಷದ ನಂತರದಲ್ಲಿ ಬೊಜ್ಜು ಶೇ. 31 ಇಳಿಕೆಯಾಗಿತ್ತು! ಆದಾಗ್ಯೂ, ನೀರಿನ ಸೇವನೆ ನಿಮ್ಮ ವಾಸಸ್ಥಳದ ಹವಾಮಾನ, ನಿಮ್ಮ ಕೆಲಸ ಮುಂತಾದವುಗಳ ಮೇಲೆ ಅವಲಂಬಿಸಿದೆ. ಮುಂಜಾನೆ ಬಿಸಿ ನೀರು ಕುಡಿಯುವುದರಿಂದ ನೆಗಡಿಯಂತಹ ಅಲರ್ಜಿ ಕಡಿಮೆಯಾಗಿ ಪಚನ ಶಕ್ತಿಯೂ ಹೆಚ್ಚುತ್ತದೆ. ಆದಾಗ್ಯೂ ವೈಜ್ಞಾನಿಕ ತಳಹದಿಯಲ್ಲಿ ಬಿಸಿನೀರು ಸೇವನೆಗೆ ಅಲ್ಪ ಪ್ರಮಾಣದ ಆದ್ಯತೆ. ತಣ್ಣಗಿನ ನೀರು ಸೇವನೆಯಿಂದ ‘ಅರೆ ತಲೆಶೂಲೆ’ ಹೆಚ್ಚಬಹುದು. ಪಚನಶಕ್ತಿ ಕುಂದುವುದು. ದೀರ್ಘಾವಧಿ ವ್ಯಾಯಾಮದಿಂದ ಉಂಟಾಗುವ ಉಷ್ಣತೆಯನ್ನು ತಂಪು ನೀರು ತಗ್ಗಿಸುತ್ತದೆ. ಕಡಿಮೆ ನೀರು ಸೇವನೆಯು ಚರ್ಮದ ನೆರಿಗೆಗೆ ಮುಖ್ಯ ಕಾರಣ.

2.ಹಣ್ಣು ಮತ್ತು ತರಕಾರಿಗಳು: ಗೆಣಸು, ಗಜ್ಜರಿ, ಕಿತ್ತಳೆ ಹಣ್ಣು, ಟೊಮೆಟೊ, ಆಫ್ರಿಕಾಟ್ ಹಣ್ಣು, ಒಣಮೆಣಸು, ಮಸಾಲೆ ಪದಾರ್ಥ ಗಳಾದ ದಾಲಚಿನ್ನಿ, ಮರಾಠಾ ಮೊಗ್ಗು, ತೇಜಪತ್ತಾ, ಲವಂಗ, ಯಾಲಕ್ಕಿ ಮುಂತಾದವು ಚರ್ಮದ ಹೊಳಪನ್ನು ಹೆಚ್ಚಿಸುತ್ತವೆ. ದಿನನಿತ್ಯ ಸೇವನೆಯೇ ಗುಟ್ಟು. ದಾಳಿಂಬೆ, ದ್ರಾಕ್ಷಿ, ಸೇಬು, ಚೆರಿ ಹಣ್ಣುಗಳು ‘ವಯಸ್ಸು ವಿರೋಧಿ ಗಳು’. ಇವು ಆಂಟಿಆಕ್ಸಿಡಂಟ್ ಎಂಬ ಪದಾರ್ಥಗಳ ಮೂಲಕ ಸೋಂಕನ್ನು ತಡೆಗಟ್ಟಿ ಚರ್ಮವು ವಯಸ್ಸಿಗೊಳಗಾಗುವ ದಾರಿಗಳನ್ನು ನಿಧಾನಿಸುತ್ತವೆ. ಅಕ್ರೋಟ (ದಿನಾಲು 14), ಬದಾಮಿ (ದಿನಾಲು 30), ಒಂದು ಮುಷ್ಟಿ ಶೇಂಗಾ ಹೃದಯಾಘಾತದ ಸಂಭವವನ್ನು ಮುಂದೂಡುವುದಲ್ಲದೆ ಚರ್ಮವನ್ನು ಮೃದುವಾಗಿ, ಹೊಳಪಾಗಿ ಇಡುತ್ತವೆ. ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಹೆಚ್ಚು ಸುಂದರ ಎಂಬುದು ಇದುವರೆಗೆ ಯಾವ ಅಧ್ಯಯನದಿಂದಲೂ ದೃಢಪಟ್ಟಿಲ್ಲ. ಆದಾಗ್ಯೂ ಶಾಖಾಹಾರ ಸೇವನೆ ಹೃದಯಾಘಾತ, ಮಧುಮೇಹ ಪ್ರಮಾಣ ತಗ್ಗಿಸುವುದು.

(ಮುಂದುವರಿಯುವುದು)