| ಸುಭಾಸ ಧೂಪದಹೊಂಡ ಕಾರವಾರ
ರಕ್ತಚಂದನದ ಬಣ್ಣ, ಬಟ್ಟಲು ಕಣ್ಣು, ಉಗ್ರ ಸಿಂಹಾಸನದ ಮೇಲೆ ಕುಳಿತರೂ ಶಾಂತ ಸ್ವರೂಪಿಯಾಗಿ ರಾರಾಜಿಸುವವಳು ತಾಯಿ ಮಾರಿಕಾಂಬೆ. ಬೆಳ್ಳಿ ಪೀಠದ ಮೇಲೆ ಕುಳಿತು ಬಂಗಾರದ ಕಿರೀಟ, ಖಡ್ಗ, ಗದೆ ಮುಂತಾದ ಆಯುಧ ಹಿಡಿದು ರಾಜ್ಯದ ಲಕ್ಷಾಂತರ ಭಕ್ತರನ್ನು ಪೊರೆವ, ಅವರ ಇಷ್ಟಾರ್ಥ ಪೂರೈಸುವ ಶಕ್ತಿದಾಯಿನಿ ಆರಾಧ್ಯ ದೇವಿ ಈಕೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬಾ ಜಾತ್ರೆ ಶುರುವಾಗಿದೆ. ದೇವಸ್ಥಾನದಿಂದ ಒಂದು ಕಿಮೀ ದೂರದಲ್ಲಿರುವ ಬಿಡ್ಕಿಬೈಲಿನ ಗದ್ದುಗೆಯ ಮೇಲೆ ಏಳಡಿ ಎತ್ತರದ ತಾಯಿಯ ಪ್ರತಿಷ್ಠಾಪನೆಯಾಗಿದೆ. ದೇವಿಯ ಕಲ್ಯಾಣೋತ್ಸವ, ರಥೋತ್ಸವ ನಡೆದಿದ್ದು, ಮಾ. 17ರಿಂದ 23ರ ಬೆಳಗಿನವರೆಗೆ ದೇವಿಯ ದರ್ಶನಕ್ಕೆ ಅವಕಾಶ ಇದೆ. ಒಂಬತ್ತು ದಿನಗಳ ಜಾತ್ರೆಗೆ ತಿಂಗಳ ಹಿಂದಿನಿಂದಲೇ ಧಾರ್ವಿುಕ ವಿಧಿಗಳು ಪ್ರಾರಂಭವಾಗುತ್ತವೆ. ಗರ್ಭಗುಡಿಯಲ್ಲಿರುವ ದೇವಿಯ ಕಟ್ಟಿಗೆಯ ಮೂರ್ತಿಗೆ ಬಣ್ಣ ಬಳಿದು ಅಲಂಕಾರ ಮಾಡಲಾಗುತ್ತದೆ. ಐದು ಬಾರಿ ಹೊರ ಬೀಡು, ಮರಕ್ಕೆ ಕಚ್ಚು ಹಾಕುವುದು, ಹೀಗೆ ನಾನಾ ವಿಧಿಗಳು ನೆರವೇರುತ್ತವೆ. ಸ್ಥಳೀಯ ವಿವಿಧ ಸಮುದಾಯಗಳ 10ಕ್ಕೂ ಅಧಿಕ ಕುಟುಂಬಗಳ ಸದಸ್ಯರು ದೇವಸ್ಥಾನ ಧರ್ಮದರ್ಶಿ ಮಂಡಳಿಯ ಜತೆ ನಿಂತು ಧಾರ್ವಿುಕ ಕಾರ್ಯ ನಡೆಸಿಕೊಡುತ್ತಾರೆ. ತೇರು ಕಟ್ಟುವುದು, ಅಂಗಳ ಸಾರಿಸುವುದು, ಹೊರ ಬೀಡಿನ ವ್ಯವಸ್ಥೆ, ದೇವಿಯ ಪೂಜೆ, ಅಲಂಕಾರ, ವಾದ್ಯ, ಚಾಮರ ಬೀಸುವುದು ಹೀಗೆ ಪ್ರತಿ ಕಾರ್ಯವನ್ನೂ ಒಂದೊಂದು ಕುಟುಂಬ ನಡೆಸಿಕೊಂಡು ಬಂದಿವೆ. ಮಾರ್ಚ್ನಲ್ಲಿ ನಡೆಯುವ ಜಾತ್ರೆ ನಂತರ ಹೊಸ ಸಂವತ್ಸರ ಆರಂಭದವರೆಗೆ ಪೂಜೆ ಇರುವುದಿಲ್ಲ. ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ಇಡಲಾಗುತ್ತದೆ. ಯುಗಾದಿಯ ನಂತರ ಮತ್ತೆ ದೈನಂದಿನ ಪೂಜೆ, ಸೇವೆಗಳು ಪ್ರಾರಂಭವಾಗುತ್ತವೆ.
ಜಾನಪದ ಕಥೆ: ಅನ್ಯ ಸಮುದಾಯದ ವ್ಯಕ್ತಿಯೊಬ್ಬ ತನ್ನ ಕುಲದ ಮೂಲ ಮುಚ್ಚಿಟ್ಟು ಬ್ರಾಹ್ಮಣ ಕನ್ಯೆಯನ್ನು ವಿವಾಹವಾಗುತ್ತಾನೆ. ಮಾಂಸದೂಟವನ್ನೂ ತ್ಯಜಿಸಿ, ಮಂತ್ರ, ಪೂಜೆಯಲ್ಲಿ ತೊಡಗುತ್ತಾನೆ. ಆದರೆ ಒಂದು ದಿನ ಬಾಡೂಟದ ವಾಸನೆಗೆ ಮಾರು ಹೋಗಿ ಸವಿಯುತ್ತಾನೆ. ಇದನ್ನು ತಿಳಿದ ಪತ್ನಿ ವ್ಯಗ್ರಳಾಗಿ ಗಂಡನ ತಲೆ ಕತ್ತರಿಸುತ್ತಾಳೆ ಎಂಬ ಜಾನಪದ ಕಥೆ ಜನರ ಬಾಯಲ್ಲಿ ರೂಢಿಯಲ್ಲಿದೆ. ಅದೇ ಕಾರಣಕ್ಕಾಗಿ ಜಾತ್ರೆಯಲ್ಲಿ ಹಿಂದೆ ಕೋಣನನ್ನು ಬಲಿ ಕೊಡಲಾಗುತ್ತಿತ್ತು ಎನ್ನಲಾಗುತ್ತದೆ. ಆದರೆ, ಐತಿಹಾಸಿಕ ದಾಖಲೆಗಳು ಬೇರೆ ಕಥೆ ಹೇಳುತ್ತವೆ.
ಐತಿಹಾಸಿಕ ಹಿನ್ನೆಲೆ: ಹಾವೇರಿ ಜಿಲ್ಲೆಯ ದೇವಾಲಯವೊಂದರಿಂದ ದೇವರ ಕಟ್ಟಿಗೆ ಮೂರ್ತಿ ಆಭರಣವನ್ನು ಕದ್ದು ತಂದ ಕಳ್ಳರು ಶಿರಸಿಯ ಕೋಟೆಕೆರೆಯಲ್ಲಿ ಮುಳುಗಿಸಿಟ್ಟಿದ್ದರು. ಭಕ್ತನೊಬ್ಬನ ಕನಸಿನಲ್ಲಿ ಇದು ಗೋಚರವಾದ ನಂತರ ಮಾರಿಯಮ್ಮ ಶಿರಸಿಯಲ್ಲಿ ನೆಲೆಯಾದಳು ಎನ್ನಲಾಗುತ್ತದೆ. 1689ರಲ್ಲಿ ಸೋದೆಯ ಅರಸ ಇಮ್ಮಡಿ ಸದಾಶಿವರಾಯ, ದೇವಿಯನ್ನು ಪ್ರತಿಷ್ಠಾಪಿಸಿದ ಎನ್ನುತ್ತದೆ ಇತಿಹಾಸ. ಒಂದೂವರೆ ಶತಮಾನ ಹಿಂದಿನ ಕಾವಿ ಕಲೆಯಿಂದ ಅಲಂಕೃತ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. 1955ರಿಂದ ದೇವಸ್ಥಾನದ ಆಡಳಿತವನ್ನು ಜಿಲ್ಲಾ ನ್ಯಾಯಾಧೀಶರಿಂದ ನೇಮಕವಾದ ಐದು ಸದಸ್ಯರ ಮಂಡಳಿ ನೋಡಿಕೊಳ್ಳುತ್ತದೆ. ಇದುವರೆಗೆ ವಿವಿಧ ಸಮುದಾಯಗಳ 12 ಅಧ್ಯಕ್ಷರು ಕಾರ್ಯನಿರ್ವಹಿಸಿದ್ದು, ಸದ್ಯ ರವೀಂದ್ರ ಗಣಪತಿ ನಾಯ್ಕ ಅಧ್ಯಕ್ಷತೆಯ ಸಮಿತಿ ಕಾರ್ಯನಿರ್ವಹಿಸುತ್ತಿದೆ.
ಕೋಣನ ಬಲಿಗೆ ತಡೆ: 1933ರಲ್ಲಿ ಶಿರಸಿ ಯಾತ್ರೆ ಕೈಗೊಂಡಿದ್ದ ಗಾಂಧೀಜಿ ಅವರನ್ನು ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡುವಂತೆ ಕೇಳಿಕೊಳ್ಳಲಾಯಿತು. ಆದರೆ, ಅಲ್ಲಿ ಜಾತ್ರೆಯ ಸಂದರ್ಭದಲ್ಲಿ ಮಾರಿ ಕೋಣನ ಬಲಿ ನಡೆಯುತ್ತದೆ ಎಂದು ಅರಿತ ಅವರು ಪ್ರಾಣಿ ಬಲಿ ನಿಲ್ಲಿಸಿದರೆ ಮಾತ್ರ ತಾವು ದೇವಾಲಯಕ್ಕೆ ಬುರುವುದಾಗಿ ಪಟ್ಟು ಹಿಡಿದರು. ಸಾಕಷ್ಟು ಚರ್ಚೆಯ ನಂತರ ಕೋಣನ ಬಲಿಯನ್ನು ನಿಲ್ಲಿಸಲಾಯಿತು. ಈಗಲೂ ದೇವಸ್ಥಾನದಿಂದಲೇ ಮಾರಿ ಕೋಣನನ್ನು ಸಾಕಿ ಪೂಜಿಸಲಾಗುತ್ತದೆ. ಆದರೆ, ಬಲಿ ಕೊಡುವ ಪದ್ಧತಿ ಇಲ್ಲ. ಇದು ಕೇವಲ ಬಲಿಯ ವಿಚಾರದಲ್ಲಿ ಮಾತ್ರವಲ್ಲ. ಜಾತಿಯ ಭೇದವಿಲ್ಲದೇ ಎಲ್ಲರಿಗೂ ದೇವಾಲಯಕ್ಕೆ ಪ್ರವೇಶ ನೀಡುವುದು ಸ್ವಾತಂತ್ರ್ಯ ಪೂರ್ವದಿಂದಲೇ ಇಲ್ಲಿ ರೂಢಿಗೆ ಬಂತು. ಕೆಲ ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಶಾಲೆ, ಗ್ರಂಥಾಲಯಗಳಿಗೆ ದೇವಸ್ಥಾನದಿಂದ ದೇಣಿಗೆ ನೀಡಿದ್ದಿದೆ. ಒಟ್ಟಿನಲ್ಲಿ ಧಾರ್ವಿುಕ ಪರಾಕಾಷ್ಠೆಯ ಜತೆ ಸಾಮಾಜಿಕ ಕಳಕಳಿಯ ಕಾರ್ಯಗಳಿಗೂ ಮಾರಿಕಾಂಬಾ ದೇವಾಲಯ ಹಾಗೂ ಸಮಿತಿ ಹೆಸರಾಗಿದೆ.