ಅಂಕಣ

ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಲಿದೆ ಸರ್ ಕ್ರೀಕ್ ಕಿರಿಕ್

ಆಪರೇಷನ್ ಸಿಂಧೂರದಲ್ಲಿ ಏಟು ತಿಂದ ಪಾಕಿಸ್ತಾನ ಇಂದು ಸರ್ ಕ್ರೀಕ್​ನಲ್ಲಿ ಭಾರತವನ್ನು ತಾನಾಗಿಯೇ ಕೆಣಕುತ್ತಿದೆಯೇ? ಈ ಪ್ರಶ್ನೆ ದೇಶ-ವಿದೇಶಗಳ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಕಳೆದ ಎರಡು-ಮೂರು ತಿಂಗಳುಗಳಿಂದಲೂ ಆ ಪ್ರದೇಶದಲ್ಲಿ ಪಾಕಿಸ್ತಾನ ಅಸಾಧಾರಣ ಎನ್ನಬಹುದಾದ ಮಟ್ಟಿಗೆ ಸೇನಾ ಜಮಾವಣೆ ಮಾಡುತ್ತಿರುವುದು, ಆಕ್ಷೇಪಿಸಿ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್, ‘ಪಾಕಿಸ್ತಾನ ದುಸ್ಸಾಹಸಕ್ಕೇನಾದರೂ ಇಳಿದರೆ ಆ ದೇಶದ ನಕ್ಷೆಯನ್ನೂ, ಇತಿಹಾಸವನ್ನೂ ಬದಲಿಸಲಾಗವುದು’ ಎಂಬ ಎಚ್ಚರಿಕೆ ನೀಡಿದ್ದು; ಅದಕ್ಕೆ ಸೊಪ್ಪುಹಾಕದ ಪಾಕಿಸ್ತಾನ ತನ್ನ ಬೆಟಾಲಿಯನ್​ನ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸುತ್ತಲೇ ಹೋಗುತ್ತಿರುವುದು ಜಾಗತಿಕವಾಗಿ ಆತಂಕಕ್ಕೆ ಕಾರಣವಾಗಿದೆ. ಅರಬ್ಬಿ ಸಮುದ್ರದ ಅತಿ ಪುಟ್ಟ ಭಾಗವಾದ ಸರ್ ಕ್ರೀಕ್ ಉಪಖಂಡದ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಹೊಸ ಕಾಳಗದ ಕಣವಾಗಬಹುದೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಸರ್ ಕ್ರೀಕ್ ಅರಬ್ಬಿ ಸಮುದ್ರ ತುಸು ಒಳನುಗ್ಗಿ ಸೃಷ್ಟಿಸಿರುವ ಒಂದು ಪುಟ್ಟ ಅಳಿವೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಗಡಿ ಕೊನೆಯಾಗುವುದು ಇಲ್ಲಿ. ಐತಿಹಾಸಿಕವಾಗಿ ಅದರ ಹೆಸರು ‘ಬಾನ್​ಗಂಗಾ’ ಎಂದು. ಆದರೆ ತಮ್ಮ ನೇರ ಆಡಳಿತವಿದ್ದ ಸಿಂಧ್ ಪ್ರಾಂತ್ಯ ಮತ್ತು ಕಛ್ ದೇಶೀಯ ಸಂಸ್ಥಾನಗಳ ನಡುವೆ ಗಡಿರೇಖೆಯೆನ್ನು ಗುರುತಿಸಿ ಎಳೆಯುವಾಗ ಬ್ರಿಟಿಷರು ಬಾನ್​ಗಂಗಾ ಹೆಸರನ್ನು ಬದಲಿಸಿ ‘ಸರ್ ಕ್ರೀಕ್’ ಎಂದು ಕರೆದರು. 1947ರಲ್ಲಿ ದೇಶವಿಭಜನೆಯಾಗಿ ಸಿಂಧ್ ಪ್ರಾಂತ್ಯ ಪಾಕಿಸ್ತಾನಕ್ಕೆ ಮತ್ತು ಕಛ್ ಸಂಸ್ಥಾನ ಗುಜರಾತ್​ನೊಂದಿಗೆ ಭಾರತದ ಭಾಗವಾದಾಗ ಆ ಗಡಿರೇಖೆ ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಾಯಿತು.

ಅದು ನೆಲವನ್ನು ದಾಟಿ ಸರ್ ಕ್ರೀಕ್​ನ ನೀರಿಗಿಳಿದು ಎರಡೂ ದೇಶಗಳ ನಡುವಿನ ಸಮುದ್ರ ಗಡಿಯಾಗಿ ಮುಂದುವರಿಯುತ್ತದೆ. ಸಮುದ್ರ ಗಡಿ ಹೇಗೆ ಸಾಗಬೇಕೆನ್ನವುದರ ಬಗ್ಗೆ ಪಾಕಿಸ್ತಾನದ್ದು ಮೊದಲಿನಿಂದಲೂ ತಕರಾರೇ. ಕ್ರೀಕ್​ನ ಉತ್ತರದ ದೊಡ್ಡ ಭಾಗ ತನಗೆ ಸೇರಬೇಕೆನ್ನುವುದು ಅದರ ವಾದ. ಅದಕ್ಕೆ ಭಾರತದ ಸಮ್ಮತಿ ಇಲ್ಲ. ಹೀಗಾಗಿ ಸರ್ ಕ್ರೀಕ್ ದಶಕಗಳಿಂದಲೂ ವಿವಾದಿತ ಪ್ರದೇಶವಾಗಿಯೇ ಇದೆ. ಅದರ ಮೇಲೆ ಪಾಕಿಸ್ತಾನದ ಕಾಕದೃಷ್ಟಿಗೆ ಪ್ರಮುಖ ಕಾರಣ ಅಲ್ಲಿ ಗಮನಾರ್ಹ ಪ್ರಮಾಣದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳಿವೆಯೆಂಬ ಸೂಚನೆಗಳು. ಈ ಸೂಚನೆಗಳಂತೂ ಮೂರ್ನಾಲ್ಕು ದಶಗಳಿಂದಲೂ ಹರಿದಾಡುತ್ತಲೇ ಇವೆ.

ಆದರೆ ಪ್ರಶ್ನೆಯೆಂದರೆ ಈಗ ಆ ಪ್ರದೇಶವನ್ನು ಸೇನಾ ಕಾರ್ಯಾಚರಣೆ ಮೂಲಕ ತನ್ನ ವಶಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಹೊರಟಿದೆಯೇ, ಅದೂ ಐದು ತಿಂಗಳುಗಳ ಹಿಂದಷ್ಟೇ ಆಪರೇಷನ್ ಸಿಂಧೂರದಲ್ಲಿ ಮಾರಣಾಂತಿಕ ಹೊಡೆತ ತಿಂದ ಮೇಲೂ?! ಹಾಗಿರುವುದೇ ಆದರೆ ಆ ಧೂರ್ತ ದೇಶಕ್ಕೆ ಧೈರ್ಯ ಬರುತ್ತಿರುವುದಾದರೂ ಎಲ್ಲಿಂದ? ಈ ಪ್ರಶ್ನೆಗಳು ಜಾಗತಿಕ ಮಾಧ್ಯಮಗಳಲ್ಲಿ, ವಿಶ್ಲೇಷಕ ವಲಯಗಳಲ್ಲಿ ಗಹನವಾಗಿ ಚರ್ಚೆಗೊಳಗಾಗುತ್ತಿವೆ. ಅವುಗಳಿಗೆ ಉತ್ತರ ಹುಡುಕುವ ಪ್ರಯತ್ನವನನ್ನು ನಾವಿಲ್ಲಿ ಮಾಡೋಣ.

ಮೊದಲಿಗೆ ಸರ್ ಕ್ರೀಕ್​ನಲ್ಲಿರುವ ತೈಲ ಮತ್ತು ಅನಿಲ ನಿಕ್ಷೇಪದ ಕುರಿತಾಗಿ ಒಂದು ಆಸಕ್ತಿಕರ ವಿಷಯ- ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರದ ಪಾಕಿಸ್ತಾನ-ಪ್ರೀತಿಗೆ ಹಲವು ಉದಾಹರಣೆಗಳಿವೆ. ಅವುಗಳಲ್ಲೊಂದು ಸರ್ ಕ್ರೀಕ್​ಗೆ ಸಂಬಂಧಿಸಿದ್ದು. ಅಲ್ಲಿರುವ ತೈಲ ಹಾಗೂ ಅನಿಲ ಭಂಡಾರವನ್ನು ಭಾರತ ಮತ್ತು ಪಾಕಿಸ್ತಾನಗಳೆರಡೂ ಜಂಟಿಯಾಗಿ ಹೊರತೆಗೆದು ಆರ್ಥಿಕ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಬಗ್ಗೆ 2006ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಆಲೋಚನೆ ಮಾಡಿತ್ತು! ಉಭಯ ದೇಶಗಳ ಗಡಿಯ ಉತ್ತರ ತುದಿಯ ಕಾಶ್ಮೀರದಲ್ಲಿ ಪಾಕಿಸ್ತಾನ ಭಯೋತ್ಪಾದನೆ ಮೂಲಕ ಭಾರತೀಯರ ರಕ್ತ ಚೆಲ್ಲುತ್ತಿದ್ದರೆ ಗಡಿಯ ದಕ್ಷಿಣ ತುದಿಯ ಸರ್ ಕ್ರೀಕ್​ನಲ್ಲಿ ಆ ದುರುಳ ದೇಶದೊಂದಿಗೆ ಆರ್ಥಿಕ ಸಹಕಾರದ ಜಂಟಿ ಯೋಜನೆಯ ವಿಚಾರ ಅದು ಹೇಗೆ ತಾನೆ ಯುಪಿಎ ಸರ್ಕಾರಕ್ಕೆ ಸರಿ ಎನಿಸಿತೋ ಅರ್ಥವಾಗುವುದಿಲ್ಲ. ಸದ್ಯ ಆ ವಿಚಾರ ಕಾರ್ಯರೂಪಕ್ಕಿಳಿಯಲಿಲ್ಲ. ಆಮೇಲೆ ಮುಂಬೈ ದಾಳಿಯಾದ ನಂತರ ಅಂತಹ ಜಂಟಿ ಸಹಕಾರ ಉಳಿದಿರಲು ಸಾಧ್ಯವಿಲ್ಲ. ಆಮೇಲೆ ನರೇಂದ್ರ ಮೋದಿ ಸರ್ಕಾರ ಬಂದಮೇಲಂತೂ ಪಾಕಿಸ್ತಾನಕ್ಕೂ ಆ ಆಸೆ ಉಳಿದಿರಲು ಸಾಧ್ಯವೇ ಇಲ್ಲ.

ಪ್ರಸಕ್ತ ಸನ್ನಿವೇಶಕ್ಕೆ ಮರಳುವುದಾದರೆ ಸರ್ ಕ್ರೀಕ್​ನಲ್ಲಿನ ತೈಲ ಮತ್ತು ಅನಿಲದ ಆಸೆಯ ಹೊರತಾಗಿ ಆ ಪ್ರದೇಶದ ಮೇಲೆ ಪಾಕಿಸ್ತಾನಕ್ಕೆ ಹೇಳಿಕೊಳ್ಳುವಂತಹ ಆಕರ್ಷಣೆಯೇನೂ ಇದ್ದಂತೆ ಕಾಣುವುದಿಲ್ಲ. ಇದೆಯೆಂದು ಬಹಳ ಹಿಂದೆಯೇ ಗೊತ್ತಾಗಿದ್ದ, ಆದರೆ ಹೇಗೆ ಬಳಸಿಕೊಳ್ಳಬಹುದೆಂದು ತಿಳಿಯದ ತೈಲ ಮತ್ತು ಅನಿಲದ ಆಸೆ ಈಗ ಹುಟ್ಟಿದ್ದಾದರೂ ಹೇಗೆ? ಇದಕ್ಕೆ ಉತ್ತರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ನೀತಿಗಳಲ್ಲಿದೆ. ಈ ಅಂಕಣದಲ್ಲೇ ಆಗಸ್ಟ್ ತಿಂಗಳಲ್ಲಿ ಬರೆದಿರುವಂತೆ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಾರಿ ತೈಲ ನಿಕ್ಷೇಪವಿದೆಯೆಂದೂ, ಅದನ್ನು ಅಮೆರಿಕಾ ಹೊರತೆಗೆದು ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡಲಿದೆಯೆಂದೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ ಮೊದಲವಾರದಲ್ಲಿ ಹೇಳಿದ್ದರು. ಅಷ್ಟೇ ಅಲ್ಲ, ಮುಂದೊಂದು ದಿನ ಭಾರತಕ್ಕೆ ಪಾಕಿಸ್ತಾನ ತೈಲವನ್ನು ರಫ್ತು ಮಾಡಬಹುದೆಂದೂ ಹೇಳಿದ್ದರು! ಆದರೆ ಬಲೂಚಿಸ್ತಾನದಲ್ಲಿ ಆ ಪ್ರಮಾಣದ ತೈಲ ನಿಕ್ಷೇಪ ಇರುವ ಬಗ್ಗೆ ಯಾವುದೇ ಸೂಚನೆ ಇಲ್ಲ. ಅಂಕಿಅಂಶಗಳ ಪ್ರಕಾರ ಪಾಕಿಸ್ತಾನದಲ್ಲಿ ಪತ್ತೆಯಾಗಿರುವ ತೈಲ ನಿಕ್ಷೇಪ ಕೇವಲ 352 ಮಿಲಿಯನ್ ಬ್ಯಾರೆಲ್​ಗಳಷ್ಟೇ.

ಅಷ್ಟು ಪ್ರಮಾಣದ ತೈಲವನ್ನು ರಷ್ಯಾದಿಂದ ಭಾರತ ಕಳೆದ ಆರೇಳು ತಿಂಗಳುಗಳಲ್ಲೇ ಆಮದು ಮಾಡಿಕೊಂಡಿದೆ! ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಗುರುತಿಸಲಾಗಿರುವ ಎಲ್ಲ ತೈಲ ನಿಕ್ಷೇಪಗಳು ಆ ದೇಶದ ಆಂತರಿಕ ಅಗತ್ಯವನ್ನು ಪೂರೈಸುವುದಕ್ಕೆ ಸಾಲುವುದಿಲ್ಲ. ಅದೂ ಸೀಮಿತ ಅವಧಿಗೆ ಮಾತ್ರ. ಇನ್ನು ಭಾರತಕ್ಕೆ ರಫ್ತು ಮಾಡುವುದೆಲ್ಲಿಂದ ಬಂತು? ಆದರೆ ಎರಡೂ ದೇಶಗಳ ಗಡಿಯಲ್ಲಿರುವ, ಮುಖ್ಯವಾಗಿ ಭಾರತದ ವಶದಲ್ಲಿರುವ ಸರ್ ಕ್ರೀಕ್​ನಲ್ಲಿ ಅಧಿಕ ಪ್ರಮಾಣದ ತೈಲ ಮತ್ತು ಅನಿಲವಿರುವುದು ತಿಳಿದ ವಿಷಯವೇ. ಅದನ್ನು ಹೇಗಾದರೂ ತನ್ನ ವಶಕ್ಕೆ ತೆಗೆದುಕೊಂಡರೆ ಭಾರತಕ್ಕಲ್ಲದಿದ್ದರೂ ಇತರ ದೇಶಗಳಿಗೆ ರಫ್ತುಮಾಡಿ ತನ್ನ ಆರ್ಥಿಕ ಸಂಕಟವನ್ನು ದೂರಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗಬಹುದು. ಪ್ರಶ್ನೆಯೆಂದರೆ ಆಪರೇಷನ್ ಸಿಂಧೂರದಲ್ಲಿ ಅನುಭವಿಸಿದ ಹೊಡೆತಗಳ ಹಿನ್ನೆಲೆಯಲ್ಲಿ ಭಾರತವನ್ನು ಕೆಣಕುವ ದುಸ್ಸಾಹಸಕ್ಕೆ ಪಾಕಿಸ್ತಾನ ಇಳಿಯಬಹುದೇ? ಹೌದು ಎನ್ನಬಹುದು ಆ ದೇಶಕ್ಕೆ ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷ ಟ್ರಂಪ್​ರ ಬೆಂಬಲದ ಪ್ರಮಾಣವನ್ನು ನೋಡಿದರೆ.

ಕಳೆದ ಏಪ್ರಿಲ್ 26ರಂದು ಟ್ರಂಪ್​ರ ಕುಟುಂಬದ ಸದಸ್ಯರು ಮತ್ತು ಪಾಕಿಸ್ತಾನಿ ಸೇನಾಧಿಕಾರಿಗಳ ನಡುವೆ ಕ್ರಿಪ್ಟೋ ಕರೆನ್ಸಿ ವ್ಯವಹಾರದ ಕುರಿತಾಗಿ ಆದ ಒಪ್ಪಂದದ ನಂತರ ಅಮೆರಿಕಾದ ಆ ವ್ಯವಹಾರಸ್ಥ ಅಧ್ಯಕ್ಷರ ಆಸಕ್ತಿ ಪಾಕಿಸ್ತಾನದತ್ತ ತಿರುಗಿದ್ದು ಈಗ ರಹಸ್ಯವಾಗೇನೂ ಉಳಿದಿಲ್ಲ. ಟ್ರಂಪ್​ರ ಪ್ರಿಯಜನರನ್ನು ಪಾಕಿಸ್ತಾನಿ ವ್ಯವಸ್ಥೆಯೊಳಗೇ ಹುಡುಕುವುದಾದರೆ ಅವರು ಸಿಗುವುದು ಪಾಕಿಸ್ತಾನಿ ಸೇನೆಯಲ್ಲೇ. ಟ್ರಂಪ್ ಕುಟುಂಬದ ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಯುತ್ತಿರುವುದು ಪಾಕಿಸ್ತಾನಿ ಸೇನೆಯೊಂದಿಗೆ ಎನ್ನವುದು ಜ. ಆಸಿಮ್ ಮುನೀರ್ ಟ್ರಂಪ್​ರಿಗೆ ಅಚ್ಚುಮೆಚ್ಚಾಗಲು ಈ ದಿನದ ಕಾರಣ ಇದಕ್ಕೂ ಹಳೆಯದಾದ, ಘನವಾದ ಐತಿಹಾಸಿಕ ಕಾರಣವೊಂದಿದೆ. ನಾವೆಲ್ಲರೂ ಬಹಳ ವರ್ಷಗಳಿಂದ ಹೇಳುತ್ತಿದ್ದ ಇದನ್ನು ಮಾಜಿ ಸಿಐಎ ಅಧಿಕಾರಿ ಜಾನ್ ಕರಿಯಕು ಮೂರು ದಿನಗಳ ಹಿಂದೆ ಸುದ್ದಿ ಮಾಧ್ಯಮ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಹೇಳಿದ್ದಾರೆ.

ಅಲ್ ಖಯೀದಾ ಮತ್ತು ತಾಲಿಬಾನ್ ವಿರುದ್ಧ ಪಾಕಿಸ್ತಾನದಲ್ಲಿ ಅಮೆರಿಕಾ ನಡೆಸುತ್ತಿದ್ದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಕರಿಯಾಕು ಹದಿನೈದು ವರ್ಷಗಳ ಕಾಲ ಸೇವೆಸಲ್ಲಿಸಿದ್ದವರು. ಜ. ಪರ್ವೆಜ್ ಮುಷರ›ಫ್ ಅಮೆರಿಕಾಗೆ ಅತಿ ಪ್ರಿಯರಾದ ಬಗ್ಗೆ ಮಾತನಾಡುತ್ತ ಕರಿಯಾಕು ಹೇಳುವುದು ಲಾಗಾಯ್ತಿನಿಂದಲೂ ಪಾಕಿಸ್ತಾನಿ ರಾಜಕಾರಣಿಗಳಿಗಿಂತಲೂ ಸೇನಾಧಿಕಾರಿಗಳನ್ನು ಅಮೆರಿಕಾ ವಿಶ್ವಾಸದಿಂದ ನೋಡುತ್ತ ಬಂದಿದೆ ಎಂದು. ಚುನಾವಣಾ ರಾಜಕಾರಣದ ಗಾಳಿ ಬೀಸುವ ದಿಕ್ಕಿಗೆ ಅನುಗುಣವಾಗಿ ರಾಜಕಾರಣಿಗಳು ಬಣ್ಣ ಬದಲಾಯಿಸಬಹುದು, ಆದರೆ ಸೇನಾಧಿಕಾರಿಗಳಿಗೆ ಅಂತಹ ಯಾವ ಒತ್ತಡವೂ ಇರುವುದಿಲ್ಲ. ಹೀಗಾಗಿ ಅವರಿಗೆ ಹೇರಳ ಲಂಚ ನೀಡಿ ‘ಕೊಂಡುಕೊಂಡರೆ’ ಅವರು ಶಾಶ್ವತವಾಗಿ ಅಮೆರಿಕಾದ ಕಾಲಾಳುಗಳಾಗುತ್ತಾರೆ, ಅವರಿಂದ ಬೇಕಾದ ಕೆಲಸ ಮಾಡಿಸಿಕೊಳ್ಳಬಹುದು ಎಂದು ಕರಿಯಾಕು ಹೇಳುತ್ತಾರೆ. ಹಿಂದೆ ಅಯೂಬ್ ಖಾನ್, ಯಾಹ್ಯಾ ಖಾನ್, ಜಿಯಾ-ಉಲ್-ಹಕ್ ಮತ್ತು ಪರ್ವೆಜ್ ಮುಷರ›ಫ್​ರನ್ನು ಅಮೆರಿಕಾ ತನ್ನ ಉದ್ದೇಶಗಳಿಗಳಾಗಿ ಬಳಸಿಕೊಂಡದ್ದು ಸರ್ವವಿದಿತ. ಇಂದು ಟ್ರಂಪ್ ಮಾಡುತ್ತಿರುವುದೂ ಅದನ್ನೇ. ಅದು ಕಳೆದ ನಾಲ್ಕು ತಿಂಗಳಲ್ಲೇ ಒಂದಕ್ಕಿಂತ ಹೆಚ್ಚು ಬಾರಿ ವ್ಯಕ್ತವಾಗಿದೆ.

ಕಳೆದ ಜೂನ್​ನಲ್ಲಿ ಇಸ್ರೇಲ್-ಇರಾನ್ ಸಮರ ನಡೆಯುತ್ತಿದ್ದಾಗ, ಇರಾನ್ ಮೇಲೆ ಅಮೆರಿಕಾ ಬಂಕರ್ ಬಸ್ಟರ್ ಬಾಂಬ್​ಗಳನ್ನು ಎಸೆಯುತ್ತಿದ್ದಾಗ ಜ. ಆಸಿಮ್ ಮುನೀರ್​ರನ್ನು ಟ್ರಂಪ್ ಶ್ವೇತಭವನಕ್ಕೆ ಆಹ್ವಾನಿಸಿದ್ದರು ಮತ್ತು ಅವರಿಗೆ ಆತಿಥ್ಯ ನೀಡಿದ್ದರು. ಅಂತಹ ಆತಿಥ್ಯ ಪ್ರಧಾನಮಂತ್ರಿ ಶೆಹ್​ಬಾಜ್ ಶರೀಫ್ ಅವರಿಗೆ ದೊರೆಯಲಿಲ್ಲ. ನಂತರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ವಿಶ್ವಸಂಸ್ಥೆಯ ಎಂಭತ್ತನೇ ಅಧಿವೇಶನದಲ್ಲಿ ಭಾಗವಹಿಸಲು ಪ್ರಧಾನಿ ಶರೀಫ್ ನ್ಯೂಯಾರ್ಕ್​ಗೆ ಹೋದಾಗ ಅಲ್ಲಿ ತಮಗೇನೂ ಕೆಲಸವಿಲ್ಲದಿದ್ದರೂ ಜ. ಮುನೀರ್ ಜತೆಗೆ ಹೋದರು, ಶರೀಫ್ ವಾಷಿಂಗ್​ಟನ್​ಗೆ ಹೋದಾಗ ಮುನೀರ್ ಅಲ್ಲಿಗೂ ಹೋದರು, ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥರಿಬ್ಬರೂ ಟ್ರಂಪ್​ರ ಆಹ್ವಾನದ ಮೇರೆಗೆ ಶ್ವೇತಭವನಕ್ಕೂ ಹೋದರು. ಆಮೇಲೆ ಅಕ್ಟೋಬರ್ 13ರಂದು ಈಜಿಪ್ಟ್​ನ ಶಮ್ರ್-ಅಲ್-ಶೇಖ್​ನಲ್ಲಿ ಗಾರಜಾ ಶಾಂತಿ ಮಾತುಕತೆ ಜರುಗಿದಾಗ ಅಲ್ಲಿ ಪಾಕಿಸ್ತಾನದ ಪರವಾಗಿ ಹೋದವರು ಪ್ರಧಾನಿ ಶರೀಫ್ ಮಾತ್ರ. ಆದರೆ ತಮ್ಮ ಮಾತಿನ ಮಧ್ಯೆ ಟ್ರಂಪ್ ಜ. ಮೂನೀರ್​ರನ್ನು ‘ನೆನಪಿಸಿಕೊಂಡು’ ‘ಎಲ್ಲಿ ನನ್ನ ಫೇವರಿಟ್ ಫೀಲ್ಡ್ ಮಾರ್ಷಲ್?’ ಎಂದು ಕೇಳಿದರು! ಅಮೆರಿಕಾದ ಅಧ್ಯಕ್ಷರಿಗೆ ಪಾಕಿಸ್ತಾನದಲ್ಲಿ ಯಾರು ಫೇವರಿಟ್ ಎನ್ನುವುದು ಜಗಜ್ಜಾಹೀರಾಯಿತು.

ಪಾಕಿಸ್ತಾನದಲ್ಲಿ ತಮ್ಮ ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆ, ಬಲೂಚಿಸ್ತಾನದಲ್ಲಿ ಇಂದು ಅಮೆರಿಕಾಗೆ ಅತ್ಯಗತ್ಯವಾಗಿ ಬೇಕಾಗಿರುವ ಅಪರೂಪದ ಖನಿಜಗಳ ಗಣಿಗಾರಿಕೆಗೆ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ತಮ್ಮ ಯಾವ ಬೆದರಿಕೆಗೂ ಜಗ್ಗದೆ ಸ್ವತಂತ್ರ ಹಾದಿಯಲ್ಲಿ ನಡೆಯುತ್ತಿರುವ ಮೋದಿಯವರ ಭಾರತವನ್ನು ನಿರಂತರ ಒತ್ತಡದಲ್ಲಿರಿಸಿ ನಿಯಂತ್ರಿಸಲು ಟ್ರಂಪ್​ರಿಗೆ ರಾಜಕಾರಣಿ ಶರೀಫ್​ರಿಗಿಂತಲೂ ಸೇನಾಧಿಕಾರಿ ಮುನೀರ್ ಅನುಕೂಲಕರ. ಸರ್ ಕ್ರೀಕ್​ನಲ್ಲಿ ಮುನೀರ್​ರಿಂದ ಟ್ರಂಪ್ ಮಾಡಿಸುತ್ತಿರುವುದು ಅದನ್ನೇ. ತಮ್ಮ ತೆರಿಗೆ ಒತ್ತಡದ ಜತೆಗೆ ಪಾಕಿಸ್ತಾನದಿಂದ ಸೇನಾ ಒತ್ತಡವನ್ನೂ ಹೇರಿದರೆ ಮೋದಿಯವರ ಭಾರತ ಕುಸಿಯುತ್ತದೆ ಎಂದು ಟ್ರಂಪ್​ರ ನಂಬಿಕೆ, ಆಪರೇಷನ್ ಸಿಂಧೂರದಲ್ಲಿ ಕಳೆದುಹೋದ ತನ್ನ ಮಾನ ಮತ್ತೆ ಕೈಗೆ ಹತ್ತುತ್ತದೆ ಎನ್ನುವುದು ಮುನೀರ್​ರ ಆಸೆ.

ಈ ಲೆಕ್ಕಾಚಾರಗಳಲ್ಲಿ ಇಂದು ಪಾಕಿಸ್ತಾನಕ್ಕೆ ಟ್ರಂಪ್​ರ ಬೆಂಬಲ ಅದೆಷ್ಟರ ಮಟ್ಟಿಗಿದೆಯೆಂದರೆ, ಪಾಕಿಸ್ತಾನದ ಮೇಲೆ ದಾಳಿ ಮಾಡಕೂಡದೆಂದು ತಾವು ಭಾರತಕ್ಕೆ ಹೇಳಿರುವುದಾಗಿ ಟ್ರಂಪ್ ಘೊಷಿಸುತ್ತಾರೆ. ಆ ಘೊಷಣೆಯ ಪರಿಣಾಮ ಅಸಾಧಾರಣ. ಆಪರೇಷನ್ ಸಿಂಧೂರ ಸಮಯದಲ್ಲಿ ಹೆಸರೇ ಇಲ್ಲದಂತೆ ಮಾಯವಾಗಿದ್ದ ಪಾಕಿಸ್ತಾನ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ನವೀದ್ ಆಶ್ರಫ್ ಇಂದು ಸರ್ ಕ್ರೀಕ್​ಗೆ ಭೇಟಿ ನೀಡುತ್ತಾರೆ, ಭಾರತಕ್ಕೆ ಬೆದರಿಕೆ ಒಡ್ಡುವ ಮಾತುಗಳನ್ನಾಡುತ್ತಾರೆ, ತಮ್ಮ ನೌಕಾಸೇನೆ ಹಿಂದೂ ಮಹಾಸಾಗರದಲ್ಲಿ ಶಾಂತಿ ಕಾಪಾಡುತ್ತದೆ ಎಂದು ಘೊಷಿಸುತ್ತಾರೆ. ಅವರ ನೌಕಾಸೇನೆ ಆಪರೇಷನ್ ಸಿಂಧೂರದ ಸಮಯದಲ್ಲಿ ಹೆದರಿ ಕರಾಚಿ ಬಂದರಿನಿಂದಲೂ ಹೊರಬರಲಾಗದೇ ಅಡಗಿ ಕುಳಿತಿತ್ತು ಎನ್ನವುದನ್ನು ಅವರು ಮರೆಯುತ್ತಾರೆ! ದೊಡ್ಡಣ್ಣನ ಬೆಂಬಲವೆಂದರೆ ಸಾಮಾನ್ಯವೇ? ಆದರೆ ನಮಗೆ ಎಲ್ಲವೂ ನೆನಪಿದೆ.

ಟ್ರಂಪ್ ಬೆಂಬಲದಿಂದ ಸರ್ ಕ್ರೀಕ್​ನಲ್ಲಿ ತನ್ನ ಹಿತಾಸಕ್ತಿಗೆ ಅನುಕೂಲವಾಗುವಂತೆ ಭಾರತವನ್ನು ಬಗ್ಗಿಸಬಹುದು ಎಂಬ ಪಾಕಿಸ್ತಾನದ ತಿರುಕನ ಕನಸು ಅದಕ್ಕೇ ದುಃಸ್ವಪ್ನವಾಗಲಿದೆ, ನಿರ್ಣಾಯಕ ಗಳಿಗೆಯಲ್ಲಿ ಭಾರತಕ್ಕೆ ಹಾನಿಯೆಸಗಿ ಪಾಕಿಸ್ತಾನದ ದುರಾಸೆಗೆ ಬೆಂಬಲವಾಗಿ ನಿಲ್ಲುವುದು ಅಮೆರಿಕಾದ ಜಾಗತಿಕ ಸಾಮರಿಕ ಹಿತಾಸಕ್ತಿಗೇ ಹಾನಿಕರವಾಗುತ್ತದೆ ಎಂದು ಅಮೆರಿಕಾದ ರಕ್ಷಣಾ ವಿಶೇಷಜ್ಞರೇ ಟ್ರಂಪ್ ಆಡಳಿತಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಎಲ್ಲ ವಾಸ್ತವಗಳ ಹಿನ್ನೆಲೆಯಲ್ಲಿ ಇಂದು ಪಾಕಿಸ್ತಾನದ ಸರ್ ಕ್ರೀಕ್ ಕಿರಿಕ್ ನಾಳೆ ಅದಕ್ಕೇ ದೊಡ್ಡ ಹೊಡೆತವಾಗಲಿದೆ, ಅದರ ದುರಾಸೆಗೆ ಸರ್ ಕ್ರೀಕ್​ನಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗುತ್ತದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)