‘ನನ್ನ ಹೆಸರು ಸುಮಾ (ಹೆಸರು ಬದಲಿಸಲಾಗಿದೆ). ನನ್ನ ಪತಿ ರಮೇಶ್ (ಹೆಸರು ಬದಲಿಸಲಾಗಿದೆ) ಇಲ್ಲೇ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಇದೇ ಬಡಾವಣೆಯಲ್ಲಿ ಬಾಡಿಗೆಮನೆಯಲ್ಲಿ ವಾಸಿಸುತ್ತಿದ್ದೇವೆ. ನಮಗೆ ಇಬ್ಬರು ಮಕ್ಕಳು. ಮೊದಲನೆಯವನು ಹನ್ನೆರೆಡು ವರ್ಷದ ಮಗ. ಎರಡನೆಯವಳೇ ಇವಳು. 8 ವರ್ಷವಾಗಿದೆ, ಈಕೆ ಸ್ಥಳೀಯ ಶಾಲೆಯಲ್ಲಿ ಎರಡನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಬೆಳಗ್ಗೆ 8 ಗಂಟೆಗೆ ಶಾಲೆಗೆ ಹೋಗಿ 12.30 ಸುಮಾರಿಗೆ ಮನೆಗೆ ವಾಪಸ್ಸಾಗುತ್ತಾಳೆ. ಶಾಲೆ ಹತ್ತಿರದಲ್ಲಿ ಇರುವುದರಿಂದ ಅವಳನ್ನು ಪ್ರತಿದಿನ ಶಾಲೆಗೆ ಬಿಡುವುದಲ್ಲದೆ ಅಲ್ಲಿಂದ ಮನೆಗೆ ವಾಪಸ್ ಕರೆದುಕೊಂಡು ಬರುತ್ತೇನೆ. ಮನೆಯಲ್ಲಿ ಅವಳಿಗೆ ಮಧ್ಯಾಹ್ನದ ಊಟ ಮಾಡಿಸಿ, ಮಲಗಿಸುತ್ತೇನೆ. ನಂತರ ನಾನು ಊಟ ಮಾಡಿ ಅವಳ ಪಕ್ಕದಲ್ಲಿಯೇ ಮಲಗಿಕೊಂಡು ಒಂದು ಗಂಟೆ ವಿರಮಿಸುತ್ತೇನೆ. ಸುಮಾರು ನಾಲ್ಕು ಗಂಟೆಗೆ ಅವಳು ಏಳುತ್ತಾಳೆ. ಆನಂತರ ಅವಳಿಗೆ ಹಾಲನ್ನು ಕೊಟ್ಟು ಆಟವಾಡಲು ಹೊರಗೆ ಕಳಿಸುತ್ತೇನೆ.
ಇಂದು ಎಂದಿನಂತೆ ಊಟ ಮಾಡಿ ಮಗಳ ಜೊತೆ ಮಲಗಿದ್ದೆ. ನನಗೆ ನಿದ್ದೆ ಹತ್ತಿತ್ತು. ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನನ್ನ ಮೊಬೈಲ್ ರಿಂಗಾಯಿತು. ಎದ್ದು ಮೊಬೈಲ್ ರಿಸೀವ್ ಮಾಡಿದೆ. ಊರಿನಿಂದ ತಂಗಿ ಕರೆ ಮಾಡಿದ್ದಳು. ಅವಳೊಂದಿಗೆ ಮಾತು ಮುಗಿಸಿ ಮೊಬೈಲ್ ಕೆಳಗಿಟ್ಟಾಗ ಪಕ್ಕದಲ್ಲಿದ್ದ ಮಗಳು ಕಾಣಲಿಲ್ಲ. ಆಕೆ ಶೌಚಗೃಹಕ್ಕೆ ಹೋಗಿರಬೇಕು ಎಂದು ಸುಮ್ಮನಾದೆ. ಆದರೆ 10 ನಿಮಿಷದ ನಂತರವೂ ಆಕೆ ಕಾಣದಾದಾಗ ಅವಳಿಗಾಗಿ ಮನೆಯಲ್ಲೇ ಹುಡುಕಾಡಿದೆ. ಅವಳು ಇರಲಿಲ್ಲ. ಹೊರಗೆ ಹೋದಳೇನೋ ಎಂದು ಮನೆಯಿಂದ ಹೊರಗೆ ಬಂದು ನೋಡಿದೆ. ಕಾಣಲಿಲ್ಲ. ಗಾಬರಿಯಾಗಿ ಆಕೆ ಆಟವಾಡಲು ತನ್ನ ಸ್ನೇಹಿತೆಯ ಮನೆಗೆ ಹೋಗಿರಬಹುದೇನೋ ಎಂದುಕೊಂಡು ಅಲ್ಲಿಗೆ ಹೋಗುತ್ತಿರುವಾಗ ಮಗಳು ಎದುರಿಗೇ ನಡೆದು ಬರುತ್ತಿದ್ದಳು. ಆಕೆ ಬಹಳ ನಿತ್ರಾಣಳಾದಂತೆ ನಡೆಯುತ್ತಿದ್ದಳು. ಓಡಿಹೋಗಿ ಅವಳನ್ನು ಎತ್ತಿಕೊಂಡೆ. ಆಕೆ ಬಿಕ್ಕಿಬಿಕ್ಕಿ ಅಳತೊಡಗಿದಳು. ಅವಳನ್ನು ಮನೆಯೊಳಗೆ ಕರೆದುಕೊಂಡು ಬಂದು ಏನಾಯಿತು ಎಂದು ಕೇಳಿದೆ.
ಅವಳು ಏನನ್ನೂ ಮಾತನಾಡಲಿಲ್ಲ. ಗಡಗಡ ನಡಗುತ್ತಿದ್ದಳು. ತನ್ನ ಮರ್ವಂಗವನ್ನು ತೋರಿಸಿ ಅಲ್ಲಿ ನೋಯುತ್ತಿದೆ ಎಂದಳು. ಅವಳನ್ನು ಬಾತ್ರೂಮಿಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಅವಳ ಮರ್ಮಾಂಗ ರಕ್ತಸಿಕ್ತವಾಗಿತ್ತು. ತೊಡೆಗಳ ಮೇಲೆ ತರಚಿದ ಗಾಯಗಳಾಗಿದ್ದವು. ಗಾಯಗಳು ಹೇಗಾದವು ಎಂದು ಕೇಳಿದಾಗ ಸ್ನೇಹಿತೆ ರೇಷ್ಮಾಳ ಮನೆಗೆ ಆಟವಾಡಲು ಹೋದೆ. ಆಗ ಅವಳ ಅಜ್ಜ ತನ್ನನ್ನು ಮನೆಯೊಳಗೆ ಕರೆದುಕೊಂಡು ಹೋಗಿ ತನ್ನ ಮೇಲೆ ಮಲಗಿಕೊಂಡ ಎಂದಳು. ಗಾಬರಿಯಾದ ನಾನು ಕೂಡಲೇ ಗಂಡನಿಗೆ ಫೋನ್ ಮಾಡಿ ಅವನ ಸಲಹೆ ಮೇರೆಗೆ ಇಲ್ಲಿಗೆ ಬಂದೆ. ರೇಷ್ಮಾಳ ಅಜ್ಜ ಮಹಮ್ಮದ್ ನಾಸಿರ್ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿರುವ ಕಾರಣ ಅವನನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ’.
ಪೊಲೀಸರು ಸಂತ್ರಸ್ತೆಯನ್ನು ಅವಳ ತಾಯಿಯೊಡನೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಬಾಲಕಿಯು ಸ್ತ್ರೀರೋಗ ತಜ್ಞರೊಬ್ಬರ ಮುಂದೆ ತನಗೇನಾಯಿತು ಎಂದು ವಿವರಿಸಿದಳು. ವೈದ್ಯೆ ಬಾಲಕಿಯನ್ನು ಆಕೆಯ ತಾಯಿ ಮತ್ತು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಎದುರು ಪರೀಕ್ಷಿಸಿದರು. ಪರೀಕ್ಷಿಸಿದ ನಂತರ ಬಾಲಕಿ ಮೇಲೆ ಅತ್ಯಾಚಾರವಾಗಿದೆ ಎನ್ನುವುದನ್ನು ಅವರು ದೃಢಪಡಿಸಿ ವರದಿ ನೀಡಿದರು. ಬಾಲಕಿಯ ಗುಪ್ತಾಂಗದಲ್ಲಿದ್ದ ವೀರ್ಯದ ಕುರುಹುಗಳನ್ನು ಲ್ಯಾಬೊರೇಟರಿಯಲ್ಲಿ ಪರೀಕ್ಷೆಗಾಗಿ ಶೇಖರಿಸಿಟ್ಟಿರುವುದಾಗಿ ತಿಳಿಸಿದ ಅವರು ಸದರಿ ಸ್ಯಾಂಪಲನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಸಂತ್ರಸ್ತೆಯನ್ನು ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಒಳರೋಗಿಯನ್ನಾಗಿ ಅಡ್ಮಿಟ್ ಮಾಡಿಕೊಂಡರು. ಠಾಣೆಗೆ ವಾಪಸಾದ ಪೊಲೀಸರು ಪೋಕ್ಸೋ ಕಾನೂನಿನ್ವಯ ಸಂತ್ರಸ್ತೆಯ ಮೇಲೆ ಅತ್ಯಾಚಾರವಾಗಿರುವ ಪ್ರಕರಣ ದಾಖಲಿಸಿದರು.
ಪೊಲೀಸರು ಮಹಮ್ಮದ್ ನಾಸಿರ್ನ ಮನೆಗೆ ಹೋದಾಗ ಆತ ಮನೆಯಲ್ಲಿಯೇ ಇದ್ದ. ‘ನನಗೆ 67 ವರ್ಷ ವಯಸ್ಸಾಗಿದ್ದು, ಫ್ಯಾಕ್ಟರಿಯೊಂದರಲ್ಲಿ ನೌಕರಿ ಮಾಡಿ ನಿವೃತ್ತಿ ಹೊಂದಿರುವೆ. ಎರಡು ಕೋಣೆಯ ಮನೆಯಲ್ಲಿ ಹೆಂಡತಿ, ಮಗ, ಸೊಸೆ ಮತ್ತು ಮೊಮ್ಮಕ್ಕಳ ಜತೆಗೆ ವಾಸವಾಗಿದ್ದೇನೆ. 57 ವರ್ಷ ವಯಸ್ಸಿನ ಪತ್ನಿಗೆ 10 ವರ್ಷಗಳ ಹಿಂದೆ ಲಕ್ವ ಹೊಡೆದಿದ್ದು, ಆಕೆಗೆ ಹಾಸಿಗೆಯಿಂದ ಮೇಲೇಳಲಾಗುವುದಿಲ್ಲ’ ಎಂದ ನಾಸಿರ್, ತಾನೇ ಅವಳನ್ನು ಸಂಭಾಳಿಸುತ್ತಿರುವುದಾಗಿ ತಿಳಿಸಿದ. ಮಗ ಮತ್ತು ಸೊಸೆ ಇಬ್ಬರೂ ನೌಕರಿ ಮಾಡುತ್ತಿದ್ದು, ಐದು ವರ್ಷದ ಮೊಮ್ಮಗಳು ರೇಷ್ಮಾ ನರ್ಸರಿ ಶಾಲೆಗೆ ಹೋಗುತ್ತಿದ್ದು ಅವಳ ತಂದೆ-ತಾಯಿ ಮನೆಗೆ ಬರುವವರೆಗೂ ತನ್ನ ಸುಪರ್ದಿಯಲ್ಲಿಯೇ ಇರುತ್ತಾಳೆಂದ. ರೇಷ್ಮಾಳ ಸ್ನೇಹಿತೆ ಮೇಲೆ ಅತ್ಯಾಚಾರ ನಡೆಸಿದ್ದ ಬಗ್ಗೆ ವಿಚಾರಿಸಿದಾಗ ತಪ್ಪನ್ನೊಪ್ಪಿಕೊಂಡ. ‘ಕಳೆದ ಹಲವಾರು ವರ್ಷಗಳಿಂದ ಲೈಂಗಿಕ ಸುಖ ದೊರೆಯದ ಕಾರಣ ಆ ದಿನ ಅಕಸ್ಮಾತ್ತಾಗಿ ಪಾಪದ ಕೆಲಸ ಮಾಡಿದೆ’ ಎಂದ ನಸೀರ್.
‘ಈ ಮಧ್ಯಾಹ್ನ ನನ್ನ ಮೊಮ್ಮಗಳು ರೇಷ್ಮಾ ಜೊತೆ ಸಂತ್ರಸ್ತೆ ಆಟವಾಡಲು ಬಂದಿದ್ದಳು. ನನ್ನನ್ನು ನೋಡಿದ ಕೂಡಲೇ ತಾತಾ ಹೇಗಿದ್ದೀ ಎಂದು ಕೇಳುತ್ತ ಅಪ್ಪಿಕೊಂಡು ಮುತ್ತೊಂದನ್ನು ಕೊಟ್ಟಳು. ಆಗ ಇದ್ದಕ್ಕಿದ್ದಂತೆ ಲೈಂಗಿಕಪ್ರಜ್ಞೆ ಕೆರಳಿತು. ಆಗ ಮೊಮ್ಮಗಳಿಗೆ ಅಂಗಡಿಯಿಂದ ಚಾಕೋಲೇಟ್ ತರಲು ಕಳುಹಿಸಿದೆ. ಆಕೆ ಹೋದ ನಂತರ ಕೋಣೆಗೆ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿ ಆಕೆ ಮೇಲೆ ಅತ್ಯಾಚಾರ ನಡೆಸಿದೆ. ರೇಷ್ಮಾ ಮನೆಗೆ ಬರುವಷ್ಟರಲ್ಲಿ ನನ್ನ ವಾಂಛೆ ತೀರಿತ್ತು. ನಾನು ಘನಘೊರ ಪಾಪ ಮಾಡಿದ್ದೇನೆ, ನನ್ನನ್ನು ಬಂಧಿಸಿ, ಶಿಕ್ಷೆ ಕೊಡಿ’ ಎಂದ. ಅವನ ಪತ್ನಿಯನ್ನು ವಿಚಾರಿಸಿದಾಗ ಆಕೆ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಔಷಧವನ್ನು ಸೇವಿಸಿದ್ದ ಆಕೆ ಮಂಪರಿಗೆ ಜಾರಿದ್ದಳು. ರೇಷ್ಮಾಳನ್ನು ವಿಚಾರಿಸಿದಾಗ ಆಕೆ ನಡೆದ ಘಟನೆಗಳನ್ನು ತನಗೆ ತೋಚಿದ ರೀತಿಯಲ್ಲಿ ವಿವರಿಸಿದಳು.
ನಸೀರ್ನ ಬೆಡ್ಶೀಟ್ ಮೇಲೆ ರಕ್ತ ಹಾಗೂ ವೀರ್ಯದ ಕಲೆಗಳಿದ್ದ ಕಾರಣ ಅದನ್ನು ವಶಪಡಿಸಿಕೊಳ್ಳಲಾಯಿತು. ಆನಂತರ ಅವನ ಒಳಉಡುಪನ್ನೂ ವಶಪಡಿಸಿಕೊಂಡು ಅವನನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಸೀರ್ ಲೈಂಗಿಕವಾಗಿ ಚುರುಕಾಗಿದ್ದಾನೆ ಎಂದು ವೈದ್ಯರು ವರದಿ ನೀಡಿದರು. ಅವರು ಅವನ ರಕ್ತದ ಮಾದರಿ ಪಡೆದು ಲ್ಯಾಬೊರೇಟರಿಗೆ ಕಳಿಸಿದರು. ನಸೀರ್ನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಅವನು ವಿಚಾರಣಾಧೀನ ಕೈದಿಯಾಗಿ ಕಾರಾಗೃಹಕ್ಕೆ ಹೋದ.
ಲ್ಯಾಬೊರೇಟರಿ ಪರೀಕ್ಷೆಯಲ್ಲಿ ಸಂತ್ರಸ್ತೆ ದೇಹದಲ್ಲಿ ಸಿಕ್ಕ ವಿರ್ಯಾಣುಗಳು ಹಾಗೂ ನಸೀರ್ನ ರಕ್ತದ ಡಿಎನ್ಎ ಮ್ಯಾಚ್ ಆದವು. ಇದಲ್ಲದೆ ಸಂತ್ರಸ್ತೆಯ ಬಟ್ಟೆಗಳು ಹಾಗೂ ನಸೀರ್ನ ಉಡುಪು ಮತ್ತು ಬೆಡ್ಶೀಟ್ಗಳ ಮೇಲಿದ್ದ ವೀರ್ಯಾಣುಗಳೂ ಹೋಲಿಕೆಯಾದವು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಪೋಕ್ಸೋ ನ್ಯಾಯಾಲಯದಲ್ಲಿ ಅವನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. ನ್ಯಾಯಾಲಯದಲ್ಲಿ ಸಂತ್ರಸ್ತೆ, ಆಕೆಯ ತಾಯಿ, ರೇಷ್ಮಾ ಹಾಗೂ ಇತರ ಸಾಕ್ಷಿಗಳಲ್ಲದೆ ವೈದ್ಯಕೀಯ ದಾಖಲೆಗಳನ್ನೂ ಹಾಜರುಪಡಿಸಲಾಯಿತು. ವಿಚಾರಣೆ ಆರಂಭದಲ್ಲಿ ತಾನು ಅತ್ಯಾಚಾರವನ್ನೇ ಮಾಡಿಲ್ಲ ಎಂದು ಆರೋಪಿ ಹೇಳಿದರೂ ವಿಚಾರಣೆ ಮುಗಿಯುವ ವೇಳೆಗೆ ತಾನು ತಪ್ಪು ಮಾಡಿದೆ ಎಂದು ನ್ಯಾಯಾಧೀಶರಿಗೆ ತಿಳಿಸಿದ. ಪತ್ನಿಯ ಅನಾರೋಗ್ಯದ ನಿಮಿತ್ತ ತಾನು ಹಲವು ಹತ್ತು ವರ್ಷಗಳಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲದಿದ್ದ ಕಾರಣ ಉದ್ದೇಶಪೂರ್ವಕವಾಗಿ ಅತ್ಯಾಚಾರ ಮಾಡಿಲ್ಲ. ತನ್ನ ವಯಸ್ಸನ್ನು ಪರಿಗಣಿಸಿ ಕಡಿಮೆ ಅವಧಿಯ ಶಿಕ್ಷೆ ನೀಡಲು ಕೋರಿದ. ಎಲ್ಲ ಸಾಕ್ಷ್ಯಗಳು ಆರೋಪಿಯ ವಿರುದ್ಧವಿದ್ದ ಕಾರಣ ಹಾಗೂ ಆರೋಪಿ ಪುಟ್ಟ ಬಾಲಕಿ ಮೇಲೆ ರಾಕ್ಷಸೀ ಕೃತ್ಯ ಎಸಗಿದ್ದ ಕಾರಣ ನ್ಯಾಯಾಧೀಶೆ ಪ್ರಿಯಾ ಬಂಕರ್ ಆರೋಪಿಗೆ ಪೋಕ್ಸೋ ಕಾಯಿದೆ ಅನ್ವಯ 20 ವರ್ಷದ ಕಠಿಣ ಕಾರಾಗೃಹವಾಸದ ಶಿಕ್ಷೆ ವಿಧಿಸಿದರು. ತನ್ನ ಶಿಕ್ಷೆ ಏನೆಂದು ಕೇಳಿದ ಆರೋಪಿ ತಾನು ಜೈಲಿನಿಂದ ವಾಪಸ್ ಜೀವಂತವಾಗಿ ಬರುತ್ತೇನೆಯೋ ಇಲ್ಲವೋ, ತನಗೆ ಗೊತ್ತಿಲ್ಲ, ತಾನು ಒಂದು ಕ್ಷಣ ಮೈಮರೆತು ದೊಡ್ಡ ಪಾಪಮಾಡಿದ್ದಾಗಿ ತಿಳಿಸಿ, ರೋಗಗ್ರಸ್ತ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳಲು ಮಗ-ಸೊಸೆಗೆ ಆದೇಶಿಸಲು ಕೋರುತ್ತ ಜೈಲಿಗೆ ಹೋಗುವ ವ್ಯಾನ್ ಹತ್ತಿದ.
‘ಪ್ರತಿಯೊಂದು ದುರಾಲೋಚನೆಯೂ ನಿಜ ಜೀವನದಲ್ಲಿ ಮೂರ್ತವೆತ್ತುವ ಮುಂಚೆಯೇ ತನ್ನ ಕರಿನೆರಳನ್ನು ಹಾಸಿಯೇ ಇರುತ್ತದೆ’ ಎನ್ನುತ್ತಾನೆ ಆಲ್ಬೇನಿಯಾದ ಹೆಸರಾಂತ ಲೇಖಕ ಇಸ್ಮಾಯಿಲ್ ಕದಾರೆ. ಪೋಕ್ಸೋದ ಶೇ.10 ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರ ಕುಟುಂಬದವರೇ ಆಗಿದ್ದು, ಶೇ.45 ಪ್ರಕರಣಗಳಲ್ಲಿ ನೆರೆಹೊರೆಯವರು ಅಥವಾ ಸಂಬಂಧಿಗಳೇ ಆಗಿರುತ್ತಾರೆ ಎಂದು ಒಂದು ವರದಿ ತಿಳಿಸುತ್ತದೆ. ಹೀಗಾಗಿ ರೇಷ್ಮಾಳ ಮನೆಗೆ ಆಟವಾಡಲು ತನ್ನ ಮಗಳು ಪ್ರತಿದಿನ ಹೋಗುತ್ತಿದ್ದಾಗ ಒಂದೆರಡು ಬಾರಿ ತಾನೂ ಅಲ್ಲಿಗೆ ಹೋಗಿ ಎಲ್ಲವೂ ಸರಿಯಾಗಿದೆಯೇ ಎನ್ನುವುದನ್ನು ತಾಯಿ ಗಮನಿಸಬೇಕಿತ್ತು. ತಮ್ಮ ಮಕ್ಕಳು ಒಂಟಿಯಾಗಿ ಯಾರೊಡನೆ ಕಾಲಕಳೆಯುತ್ತಿದ್ದಾರೆ ಎನ್ನುವುದರ ಬಗ್ಗೆ ತಾಯಂದಿರು ಸದಾಕಾಲ ಎಚ್ಚರದಿಂದಿರದಿದ್ದರೆ ಮಕ್ಕಳಿಗೆ ಆಪತ್ತು ಖಂಡಿತ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)