ಅಂಕಣ

ಇತಿಹಾಸ ಪ್ರಸಿದ್ಧ ಶಾಕಾಪುರದಲ್ಲಿಂದು ಜೋಡಿ ರಥೋತ್ಸವ

ಜಾತ್ರೆ, ರಥೋತ್ಸವಗಳು ಭಕ್ತರ ಭಕ್ತಿ-ಶ್ರದ್ಧೆಯನ್ನು ಹೆಚ್ಚಿಸುವ ಸಾರ್ವಜನಿಕ ಉತ್ಸವಗಳು. ಅದರಲ್ಲೂ ಭಕ್ತಿನಾಡು ಎಂದು ಪ್ರಸಿದ್ಧವಾಗಿರುವ ಕಲ್ಯಾಣಕರ್ನಾಟಕ ಭಾಗದಲ್ಲಿ ಮಹಾಪುರುಷರ ರಥೋತ್ಸವಗಳು ಭಕ್ತರ ಮಹಾಮೇಳವಾಗಿರುತ್ತವೆ. ಆ ಹಿನ್ನೆಲೆಯಲ್ಲಿ ಶಾಕಾಪುರ ಹಿರೇಮಠದ ಜೋಡಿ ರಥೋತ್ಸವವು ಪ್ರಮುಖವಾಗಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಶಾಕಾಪುರವು ಮಹಾಮಹಿಮ ಸದ್ಗುರು ವಿಶ್ವಾರಾಧ್ಯರ ತಪೋಕ್ಷೇತ್ರ. ವಿಶ್ವಾರಾಧ್ಯರ ಧರ್ಮಪತ್ನಿ ಬಸವಾಂಬೆ ತಾಯಿಯ ಪವಿತ್ರ ಗದ್ದುಗೆ ಇರುವ ಪುಣ್ಯಕ್ಷೇತ್ರ. ಪ್ರತಿವರ್ಷ ಫಾಲ್ಗುಣಮಾಸದ ಕೃಷ್ಣಪಕ್ಷದ ನವಮಿಯಂದು ವಿಶ್ವಾರಾಧ್ಯರು ಮತ್ತು ಬಸವಾಂಬೆತಾಯಿಯ ಜೋಡಿ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ರಥೋತ್ಸವಗಳು ಎಲ್ಲೆಡೆ ಸಾಮಾನ್ಯ. ಆದರೆ ಜೋಡಿ ರಥೋತ್ಸವ ಶಾಕಾಪುರ ಜಾತ್ರೆಯ ವಿಶೇಷ.

69ನೇ ಜಾತ್ರಾಮಹೋತ್ಸವದ ಅಂಗವಾಗಿ ಒಂದು ವಾರ ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ. 10ರಿಂದ ಆರಂಭವಾಗಿರುವ ಸದ್ಗುರು ಶ್ರೀ ಯಲ್ಲಾಲಿಂಗ ಮಹಾರಾಜರ ಪುರಾಣ ಪ್ರವಚನವು 16ರವರೆಗೆ ನಡೆಯಲಿದೆ. 17ರಂದು ಬೆಳಗ್ಗೆ ಶ್ರೀ ವಿಶ್ವಾರಾಧ್ಯರ ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಲಿದ್ದು ನಂತರ ಪುರಾಣ ಮಂಗಲಗೊಳ್ಳಲಿದೆ.

17ರಂದು ಸಂಜೆ ವಿಶ್ವಾರಾಧ್ಯ ಬಸವಾಂಬೆ ತಾಯಿಯರ ಜೋಡು ರಥೋತ್ಸವವು ನಡೆಯಲಿದ್ದು, ನಂತರ ಬೃಹತ್ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಶಾಕಾಪುರ ಹಿರೇಮಠದಿಂದ ಕೊಡಮಾಡುವ ‘ವಿಶ್ವ ಬಸವಾಂಬೆ’ ಪ್ರಶಸ್ತಿ ಪ್ರದಾನ ನಡೆಯಲಿದೆ. 2020ನೇ ಸಾಲಿನ ಪ್ರಶಸ್ತಿಯನ್ನು ಅಕ್ಷರ ದಾಸೋಹ ಯೋಜನೆಯ ಮೂಲಕ ದಾಸೋಹ ಕ್ರಾಂತಿ ಮಾಡಿರುವ ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆ ನೀಡಲಾಗುತ್ತದೆ.

ಹಿರೇಮಠದ ಇತಿಹಾಸ: ಕಲಬುರಗಿ ಜಿಲ್ಲೆಯ ಗವ್ಹಾರ ಹಿರೇಮಠದಲ್ಲಿ ಜನಿಸಿದ್ದ ಸದ್ಗುರು ವಿಶ್ವಾರಾಧ್ಯರು ಕಾಶಿಯಲ್ಲಿ 12 ವರ್ಷಗಳ ಕಾಲ ಇದ್ದು ಸಕಲ ವಿದ್ಯಾ ಪಾರಂಗತರಾಗಿ ಹಿಂದಿರುಗಿದ ನಂತರ ಕೌಟುಂಬಿಕ ನಿರ್ದೇಶನದಂತೆ ಜೋಗೂರ ಹಿರೇಮಠದ ಸಾಧ್ವಿರೋಮಣಿ ಬಸವಾಂಬೆ ತಾಯಿಯನ್ನು ವಿವಾಹವಾದರು. ಅಧ್ಯಾತ್ಮದಲ್ಲಿ ಉತ್ಕಟ ಆಸಕ್ತಿ ಇದ್ದ ವಿಶ್ವಾರಾಧ್ಯರು ಬಾಹ್ಯಪ್ರಪಂಚದ ದೃಷ್ಟಿಯಲ್ಲಿ ವಿವಾಹಿತರಾಗಿದ್ದರೂ ಅವರ ಗುರಿ ಕೇವಲ ಅಧ್ಯಾತ್ಮಸಾಧನೆಯಾಗಿತ್ತು. ಅದಕ್ಕೆ ಸಾಕ್ಷಿಯಾದ ಪುಣ್ಯಭೂಮಿಯೇ ಶಾಕಾಪುರ.

ವಿಶ್ವಾರಾಧ್ಯ-ಬಸವಾಂಬೆ ದಂಪತಿ ವಿವಾಹದ ನಂತರ ಶಾಕಾಪುರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಘೊರ ಅರಣ್ಯದಲ್ಲಿ ಕೃಷಿಕಾಯಕದಿಂದ ದಾಸೋಹವನ್ನು ಮಾಡುತ್ತ ಅಧ್ಯಾತ್ಮಸಾಧನೆಯಲ್ಲಿ ತೊಡಗಿದರು. ದಿನಗಳೆದಂತೆ ಪಕ್ವಗೊಂಡ ವಿಶ್ವಾರಾಧ್ಯರು ಶಾಕಾಪುರದ ಪಶ್ಚಿಮಗಿರಿಯ ಮುತ್ತುಗದ ಮರದಡಿಯಲ್ಲಿ 11 ತಿಂಗಳ ಕಾಲ ಉಗ್ರ ತಪಸ್ಸನ್ನಾಚರಿಸಿದರು.

ವಿಷಜಂತುಗಳ, ಕಾಡುಮೃಗಗಳ ಭಯವಿಲ್ಲದೆ ತಪಸ್ಸು ಮಾಡುತ್ತಿದ್ದ ವಿಶ್ವಾರಾಧ್ಯರಿಗೆ ಬಸವಾಂಬೆತಾಯಿಯು ನಿಷ್ಕಾಮಭಾವದಿಂದ ಸೇವೆ ಮಾಡುತ್ತಾರೆ. ಅವರ ತಪಸ್ಸಿಗೆ ಮೆಚ್ಚಿ ಸಾಕ್ಷಾತ್ ಪಾರ್ವತಿಯು ಪ್ರತ್ಯಕ್ಷಳಾಗಿ ವಿಶ್ವಾರಾಧ್ಯರನ್ನು ಶಕ್ತಿಸಂಪನ್ನರಾಗಿ ಮಾಡಿದಳು. ಮುಂದೆ ವಿಶ್ವಾರಾಧ್ಯರು ವಿವಿಧ ಲೀಲೆಗಳನ್ನು ತೋರುತ್ತ ಸದ್ಭಕ್ತರ ಕೋರಿಕೆಯಂತೆ ಯಾದಗಿರಿ ತಾಲೂಕಿನ ಅಬ್ಬೆತುಮಕೂರಿಗೆ ಬಂದು ನೆಲೆಸಿ ಅಲ್ಲಿಯೇ ಲಿಂಗೈಕ್ಯರಾದರು. ವಿಶ್ವಾರಾಧ್ಯರಿಂದ ದೀಕ್ಷೆ ಪಡೆದಿದ್ದ ಸೋದರಸಂಬಂಧಿ ಶ್ರೀ ಸಿದ್ಧರಾಮ ಶಿವಯೋಗಿಗಳು ಶ್ರೀಗಳ ಸೇವೆ ಮಾಡಿ ಅವರು ಸಂಚಾರ ಕೈಗೊಂಡ ನಂತರ ನಿರಂತರ ಸತ್ಸಂಗಾದಿಗಳನ್ನು ನಡೆಸುತ್ತ ಶಾಕಾಪುರ ಕ್ಷೇತ್ರವನ್ನು ಶಕ್ತಿಪೀಠವನ್ನಾಗಿ ಬೆಳೆಸಿದ್ದಾರೆ.

ತಪೋವನ ನಿರ್ವಿುಸಿದ ಶ್ರೀಗಳು: ಸದ್ಗುರು ವಿಶ್ವಾರಾಧ್ಯರ ಪ್ರೇರಣೆಯಿಂದ 16ನೇ ವಯಸ್ಸಿನಲ್ಲೇ ತಪೋಕ್ಷೇತ್ರ ಶಾಕಾಪುರಕ್ಕೆ ಆಗಮಿಸಿದ ಪ್ರಸ್ತುತ ಶ್ರೀ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಅಕ್ಷರಶಃ ಕೃಷಿ ತಪಸ್ಸು ಮಾಡಿದ್ದಾರೆ. ಎಲ್ಲಿ ಕಾಲಿಟ್ಟರೂ ಕಲ್ಲು-ಮುಳ್ಳು, ವಿಷಜಂತುಗಳು, ಹಾಡಹಗಲೇ ಕಾಡುಪ್ರಾಣಿಗಳು ಓಡಾಡುತ್ತಿದ್ದ ಸ್ಥಳದಲ್ಲಿ ಸ್ವತಃ ಕಲ್ಲುಬಂಡೆಯನ್ನು ಒಡೆದು, ಮುಳ್ಳುಕಂಟಿಗಳನ್ನು ಕಡಿದು, ಹೂ-ಹಣ್ಣುಗಳ ಗಿಡಗಳನ್ನು ನೆಟ್ಟು, ಸ್ವತಃ ಹೆಗಲ ಮೇಲೆ ನೀರನ್ನು ಹೊತ್ತು ಗಿಡಗಳನ್ನು ಪೋಷಿಸಿದ್ದಾರೆ. ಬಟ್ಟ ಬಯಲುಸೀಮೆಯಲ್ಲಿ ಹಸಿರು ತೋಟವನ್ನು ಬೆಳೆಸುವ ಮೂಲಕ ಶಾಕಾಪುರವನ್ನು ತಪೋವನವನ್ನಾಗಿ ಮಾರ್ಪಡಿಸಿದ್ದಾರೆ.

ಕೇವಲ ಪೂಜೆ, ಧಾರ್ವಿುಕ ಆಚರಣೆಗಳಿಗೆ ಸೀಮಿತವಾಗದೆ, ಕೃಷಿ, ಶಿಕ್ಷಣ, ಸಾಮಾಜಿಕ ಕ್ರಾಂತಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀ ಸಿದ್ಧರಾಮ ಶಿವಾಚಾರ್ಯರು ಶ್ರೀಮಠದ ಪರಿಸರದಲ್ಲಿ ಬೃಹತ್ ಶಿಕ್ಷಣ ಕೇಂದ್ರ ಸ್ಥಾಪಿಸಿ ಇನ್ನೂರಕ್ಕೂ ಹೆಚ್ಚಿನ ಅಲೆಮಾರಿಗಳ ಮಕ್ಕಳಿಗೆ ಉಚಿತ ಊಟ, ವಸತಿಯೊಂದಿಗೆ ಶಿಕ್ಷಣ ನೀಡುತ್ತಿದ್ದಾರೆ. ಕಾಶೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜಗತ್ತಿನ ವಿವಿಧ ದೇಶಗಳಿಗೆ ಹೋಗಿ ಧರ್ಮಪ್ರಚಾರವನ್ನು ಮಾಡಿರುವ ಶ್ರೀಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ವಿಶೇಷವಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ‘ಕೃಷಿ ಋಷಿ’, ಜರ್ಮನಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಶಿವಾಚಾರ್ಯ ರತ್ನ, ಸದ್ಧರ್ಮ ರತ್ನ ಇತ್ಯಾದಿ ಪ್ರಶಸ್ತಿಗಳು ಲಭಿಸಿವೆ. ಅವರ ನೇತೃತ್ವದಲ್ಲಿ ವಾರಾಣಸಿ ನಗರದಲ್ಲಿ ನಡೆದ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವವು ಐತಿಹಾಸಿಕ ದಾಖಲೆಯಾಗಿದೆ.